ಶಬರಿಯ ಧನ್ಯತೆ

ಕಂಡಳು ಶಬರಿ ದೂರದಲಿ ಯಾರೋ ಬರುವುದ
ಮನದಲೇನೋ ಹರುಷ ರಾಮನಿರಬಹುದೆಂಬ ತವಕ
ತಂಗಾಳಿಯೂ ಹಿತವೆನಿಸುತಿಹುದು ಸುಗಂಧವ ಸೂಸಿ
ಮೈ ಮನಗಳೆಲ್ಲಾ ಪುಳಕಿತಗೊಂಡಿದೆ ರಾಮನ ಕಾಣ್ವನೆಂದು
ಎನ್ನ ಪೂಜೆಗೊಳ್ವನೆಂದು ಹರುಷದಿ ಮತ್ತೆಮತ್ತೆ ದಾರಿಯನೇ ನೋಡ್ವಳು।।

ಆ ಆಕೃತಿಯು ಹತ್ತಿರ ಹತ್ತಿರ ಇತ್ತಲೇ ಬರುತಿಹುದು
ಕಣ್ಣು ಆನಂದದ ಕಣ್ಣೀರಿನಲಿ ಮಂಜಾಗುತ್ತಿದೆ
ಹೃದಯ ಭಾರವಾಗುತಿದೆ ಭಾವನೆಗಳ ಭಾರದಿಂದ
ಆನಂದದ ಗಾಳಿ ಬೀಸುತಿದೆ ಕೈಗೊಳ್ವ ಕ್ಷಣದ ಭಾವದಿಂದ
ಬಾ ಬಾರೋ ದೇವನೇ! ಕಾಯುತಿಹೆನು ನಿನ್ನ ಬರುವಿಗೆ||

ಆ ಆಕೃತಿಯು ಕಣ್ಣ ಮುಂದೆಯೇ ಬಂದು ನಿಂತಿಹುದು
ಮನವರಳಿ "ಆರು ನೀನು ದೇವಾ ಪುರುಷನೇ , ನೀನು ನನ್ನ ರಾಮನೇ"
"ಅಹುದಹುದು ತಾಯೇ ,ನನ್ನ ರಾಮನೆಂಬರು"
ಕಂಡ ಕನಸ ದೈವ ಕಣ್ಣ ಮುಂದೆಯೇ ನಿಂದಿರಲು
ಕಣ್ಣ ನೀರು ಹರಿಯೇ ರಾಮನ ಪಾದಗಳ ತೊಳೆಯಿತು।।

ಕಾಲನೊರಸಿ ಕೈಯಾಪಿಡಿದು ಹಸೆಯ ಮೇಲೆ ಕುಳ್ಳರಿಸಿದಳು
ಆರಿಸಿ ತಂಡ ಹೂಗಳನೆ ಹರುಷದಿ ರಾಮಗರ್ಪಿಸಿ ಧನ್ಯಳಾದಳು
"ಬಹುದೂರದಿಂದ ಬಂದಿಹೆನು, ತುಂಬಾ ಹಸಿದಿದೆ ತಾಯೇ"
"ಇಕೋ ಬಂದೆ " ಕಿತ್ತ ಹಣ್ಣುಗಳ ರಾಮನ ಮುಂದೆ ಬುಟ್ಟಿಯ ಹಿಡಿದಳು
"ಇಕೋ ತಂದೆ" ಸಿಹಿಹಣ್ಣೆಂದೇ ಪರಿಕಿಸಿ ನಿನಗಾಗಿಯೆ ತಂದಿಹೆನು ರಾಮ ||

ತುಂಬಾ ರುಚಿ ಮತ್ತೊಂದು ಮಗದೊಂದು ರಾಮ ಎಂಜಲ ಹಣ್ಗಳ ಹರುಷದಿ ತಿಂದನು
ಭಕುತಿ -ಪ್ರೀತಿಯ ಮುಂದೆ ಬೇರೇನಿಹುದು ಭಕುತಿಯ ಪರಾಕಾಷ್ಠೆ ಸಾರ್ಥಕತೆಯ ಭಾವವು
ವರುಷಗಳ ಕಾಯ್ದಿಟ್ಟ ಪ್ರೀತಿ-ಭಕುತಿಯ ಪೂಜೆಯಲ್ಲಿ ರಾಮ ಶಬರಿ ಮಿಂದರು
ಕಣ್ಣ ಮುಂದೆಯೇ ನಿಶ್ಚಲ ನಿರ್ಮಲ ಪ್ರೀತಿ ಭಕುತಿಯ ಲಕ್ಷ್ಮಣ ಕಂಡು ಬೆರಗಾದನು
ಕಂಡ ಕಂಗಳೇ ಧನ್ಯ, ಕೇಳ್ದ ಕಿವಿಗಳೇ ಧನ್ಯ, ಜೀವನವಾಯ್ತು ಪರಮಪಾವನ ಮಾನ್ಯ||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...