ಇನ್ನೂರು ವರುಷಗಳ ಹಿಂದೆ ಇದ್ದೊಬ್ಬ ವೀರಾಗ್ರಣಿ
ಅನುಪಮೋಪಮ ಜನಸೇವಕ ಚಿತ್ರದುರ್ಗದ ವೀರ ಮದಕರಿನಾಯಕ ।
ಚಿತ್ರದುರ್ಗವೆಂದೊಡೆ ಕಣ್ಣಸೆಳವುದು ಅನುಪಮ ಕೋಟೆ
ಏಳು ಸುತ್ತಿನ ಕೋಟೆ ಪರಾಕ್ರಮ ಪ್ರತಾಪಗಳ ಪ್ರತೀಕ ||01||
ಕಾಮಕೇತಿ ವಂಶದ ವೀರನಾಯಕರ ಪರಾಕ್ರಮದ ನೆಲೆವೀಡು
ಅಭೇದ್ಯ ಏಳುಸುತ್ತಿನಕೋಟೆಯ ಒಂದೊಂದೂ ಕಲ್ಲಿನಲ್ಲೂ ವೀರಗಾಥೆ ।
ರಂಗಯ್ಯನ ಬಾಗಿಲು ,ಸಂತೆ ಬಾಗಿಲು ಎಂಬಿವು ಕೋಟೆಯ ಮಹಾದ್ವಾರವು
ಕಡಿದಾದ ಬೆಟ್ಟಗುಡ್ಡಗಳ ಮಧ್ಯೆ ಇಹುದು ಲಾಲ್ ಬತ್ತೇರಿಯ ಬಾಗಿಲು ||02||
ನಾಯಕರ ಆರಾಧ್ಯದೈವ ಉತ್ಸವಾಂಬ ದೇವಾಲಯವಿಹುದು
ಕಣ್ಣುಸಾಲದು ಉಯ್ಯಾಲೆಕಂಬ ದೇವಾಲಯ ಗೋಪುರವ ವೀಕ್ಷಿಸಲು|
ಊಹಿಸಲಸದಳವು ಅದರ ಪ್ರಾಚೀನ ವೈಭವವ
ನೂರಾರು ದೇವಾಲಯಗಳೊಳಗೊಂಡ ಅನುಪಮ ರಸವಟ್ಟಿಗೆಯದು ||03||
ಮನವ ಸೆಳೆವ ಬಸವನ ಬುರುಜು, ಗಾರೆಯ ಬಾಗಿಲು
ಒಳಹೊಕ್ಕಷ್ಟೂ ತೆರೆದುಕೊಳ್ಳುತ್ತಿದೆ ಐತಿಹಾಸಿಕ ಕೋಟೆಯ ಅದ್ಭುತವು।
ಕಾಮನ ಬಾಗಿಲ ಬಳಿಯಿಹುದು ಕಾಮನ ಬಾವಿ ನೀರಿನಾಗರ
ಹೆಬ್ಬಂಡೆಗಳ ನೋಡಿದವರ ಎದೆ ಝಲ್ಲೆನಿಸುವುದು ರೋಮಾಂಚಕವು ||04||
ಅಚ್ಚುಕಟ್ಟಾಗಿ ಜೋಡಿಸಿರುವ ಹೆಬ್ಬಂಡೆಗಳವರ ಸಾಹಸವೂ
ನೂರು ಕದನಗಳ ಕಂಡಿವೆ ಈಗಲೂ ನಿಂತಿವೆ ಅಂಜದೆ ಅಳುಕದೆ|
ಬೆರಗಾಗುವೆವು ಅಂದಿನವರ ತಂತ್ರಜ್ಞಾನ,ವಾಸ್ತುಶಿಲ್ಪಕೆ
ಉಕ್ಕಿನ ಗೋಡೆಯದು ಸಾಕ್ಷಿಯಾಗಿ ನಿಂತಿದೆ ನಮ್ಮವರ ಹಿರಿಮೆಯಂತೆ ||05||
ಹುಲಿಮುಖದ್ವಾರ, ನಾಲ್ಕು ಬೃಹದಾಕಾರದ ಬೀಸುವ ಕಲ್ಲುಗಳು
ಶಸ್ತ್ರಾಗಾರ,ಗುಪ್ತವಾಗಿಹ ಬನಶಂಕರಿ ನೋಟಕೆ ಕುತೂಹಲ ಮಿಡಿಯುವುದು|
ಎಣ್ಣೆಯಕೊಳ, ಬೊಂಬೆಯ ಚಾವಡಿ,ಗರಡಿ ಮನೆ
ನಮ್ಮಯ ಸೊಗಸಿನ ನಗರವು ಆತ್ಮೀಯ ಹೃದಯವ ತೆರೆಯುವುದು ||06||
ಮುಂದೆ ಸಾಗುತಲಿರೆ ಕೋಟೆಯ ಹೃದಯಭಾಗವು
ಏಕನಾಥೇಶ್ವರಿ ದೇವಸ್ಥಾನ,ದೀಪಸ್ಥಂಭ ನೋಡಲೆರಡು ಕಣ್ಣು ಸಾಲವು|
ಈ ದೀಪಸ್ಥಂಭಕೆ ಪ್ರಾಣಕೊಟ್ಟ ಕಂಬದಮ್ಮನ ಚಿತ್ರವಿಹುದು
ಜೀವತ್ಯಾಗ ದ್ಯೋತಕವೆಂಬಂತೆ ಅವಳ ಹಿರಿಮೆಯ ಸಾರುತಿಹುದು ||07||
ಹಿಡಿಂಬೇಶ್ವರ ದೇವಾಲಯ, ಗಾಳಿಮಂಟಪ ಸಾಗಿದರೆ
ಮುರುಘರಾಜೇಂದ್ರ ಮಠವು, ಸಂಪಿಗೆ ಸಿದ್ಧೇಶ್ವರ ಆಯಲವು|
ಹಿರಿದಾದ ಸಂಪಿಗೆಯ ಮರ, ಸುತ್ತಲಿನ ಸಭಾಂಗಣ
ಪಾಳೇಗಾರರ ಪಟ್ಟಾಭಿಷೇಕ ಸ್ಥಾನ, ಗವಿಗಳಲ್ಲಿ ರಸಸಿದ್ಧರ ತಾಣ ||08||
ಗಿರಿದುರ್ಗದ ಹರವಿನಲ್ಲಿಹುದು ಗೋಪಾಲಕೃಷ್ಣದೇವರ ಗುಡಿಯು
ದೇವರ ಹೊಂಡ ,ತುಪ್ಪದ ಕೊಳ ಚಿನ್ಮೂಲಾದ್ರಿಯ ಬೆಟ್ಟದ ಮಡಿಲಲ್ಲಿ|
ಲಾಲ್ ಬತ್ತೇರಿ, ಝoಡಾ ಬತ್ತೇರಿ, ಕಹಳೆ ಬತ್ತೇರಿ ಕೋಟೆಯ
ಧುರ್ಗಮ ರಚನೆಯ ಅರಿವಾಗುವುದು ಅಭೇದ್ಯವೆನಿಸದಿರದು ||09||
ಅಭೇದ್ಯವಾದರೂ ಕಾಲನ ಮುನಿಸಿಗೆ ಭಗ್ನವಾಗಿದೆ ಎಲ್ಲವೂ
ಅಕ್ಕ-ತಂಗಿಯರ ಹೊಂಡ ಇತಿಹಾಸದ ವೈಭವವ ಚಿತ್ರಿಸಿಹುದು|
ಕೋಟೆಯೆಂದೊಡೆ ಕಳ್ಳದಾರಿಯಿರಲೇಬೇಕು ಅದುವೇ
ಸುಪ್ರಸಿದ್ಧವಾದ "ಒನಕೆ ಓಬ್ಬವ್ವನ ಕಿಂಡಿ" ಎಂದು ಜನಜನಿತವು ||10||
ಮತ್ತಿ ತಿಮ್ಮಣ್ಣನಾಯಕ ,ಬಿಚ್ಚುಗತ್ತಿ ಭರಮಪ್ಪ ನಾಯಕ ,
ವೀರ ಮಧಕರಿ ನಾಯಕ ಚಿತ್ರದುರ್ಗದ ಕೋಟೆ ಕಂಡ ವೀರಾಗ್ರಣಿಗಳು।
ಮರಾಠರ ಕಾಟ ,ಹೈದರಾಲಿಯ ಕಾಟ ಗಳ ಎದೆಗುಂಧದೇ
ಅಳುಕದೆ ಹಿಮ್ಮೆಟ್ಟಿಸಿ ಧರೆಗುರುಳದೇ ಅಚಲವಾಗಿಹುದಿಕೋಟೆ ||11||
ಒಮ್ಮೆ ಕೋಟೆಯ ಗೆಲ್ಲುವೆನೆಂದು ಬಂದಿಳಿದನು ಹೈದರಾಲಿ
ಜಿದ್ದಿಗೆ ಬಿದ್ದವನಂತೆ ಕೋಟೆಯ ಹೊರಗೆ ಹೂಡಿದ ಠಿಕಾಣಿ।
ದಿನಗಳು ಉರುಳಿದವು, ತಿಂಗಳುಗಳುರುಳಿದವು ನಾಯಕರ
ಪರಾಕ್ರಮಕೆ ಎಣೆಯಿಲ್ಲ, ಹೈದರಾಲಿ ಸೋಲೊಪ್ಪಲು ತಯಾರಿಲ್ಲ ||12||
ಕೋಟೆಯ ಮುತ್ತಿದರು ಸಾವಿರ ಸಾವಿರ ಸೈನಿಕರು
ಕಳ್ಳಗಿಂಡಿಯ ಹುಡುಕಹೊರಟರು ಗುಪ್ತಚಾರರು।
ಕೊನೆಗೊಂದು ಕಳ್ಳಗಿಂಡಿಯ ಕಂಡರೂ, ಸಂತೋಷಗೊಂಡರು
ಇಕ್ಕಟ್ಟಾದ,ಕಿರಿದಾದ ಜಾಗದಲ್ಲಿ ಹೈದರನ ಸೈನಿಕರು ಹೊಕ್ಕರು ||13||
ಕಾವಲುಗಾರನ ಹೆಂಡತಿ ಓಬ್ಬವ್ವ ಊಟಕೆ ಬಂದಿಹ ಗಂಡನಿಗೆ
ನೀರುತರಲು ಹೊಂಡದ ಬಳಿ ಬಂದಿರಲು ಕಳ್ಳಗಿಂಡಿಯ ಬಳಿ ದನಿ ಕೇಳಿದಳು।
ಶತ್ರು ಸೈನಿಕರು ಕಳ್ಳಗಿಂಡಿಯಿಂದ ಒಳಬರುತ್ತಿರುವರು ಕೋಟೆಗೆ
ಅಪಾಯವು ಬಂದೊದಗಿದೆಯೆಂದು ಒಳಗೋಡಿ ಒನಕೆಯ ಹಿಡಿದು ಕಿಂಡಿಯ ಬಳಿ ನಿಂದಳು ||14||
ದುರ್ಗೆಯ ನೆನೆಯುತ್ತಾ ವೀರಗಚ್ಚೆಯಲಿ ರಣಚಂಡಿಯಂತೆ ಕಾಯುತ್ತಾ
ಶತ್ರು ಒಳಬರಲೆಂದು ಒನಕೆಯ ಹಿಡಿದು ಬಳಿಗೆ ಕಾದಳು।
ಒಬ್ಬೊಬ್ಬನೇ ತೆವಳುತ್ತಾ ಬರುವ ಸೈನಿಕರ ತಲೆಗಳ ತೆಂಗಿನಕಾಯಿ
ಗಳ ಒಡೆದಂತೆ ತಲೆಗಳ ತರಿದಳು, ಹೆಣಗಳ ರಾಶಿಯನೆ ಮಾಡಿದಳು ||15||
ಹೊತ್ತಾದರೂ ಬಾರದ ಹೆಂಡತಿಯ ಹುಡುಕುತ್ತಾ ಕಳ್ಳಗಿಂಡಿಯ ಬಳಿ
ಬಂದು ಹೆಣಗಳ ರಾಶಿಯ ನಡುವೆ ನಿಂತಿಹ ರಣಚಂಡಿಯ ನೋಡಿದನು।
ಕೋಟೆಯ ರಕ್ಷಿಪ ದುರ್ಗೆಗೆ ನಮಿಸುತ್ತಾ ಸೈನಿಕರರಿಗೆ ಅಪಾಯದ ಸೂಚನೆ
ನೀಡಿದನು, ಸಾಗರದಂತೆ ಸೈನಿಕರು ಹರಿದು ಬಂದು ಶತ್ರು ಸೈನ್ಯವ ಸದೆಬಡಿದರು ||16||
ಚಿತ್ರದುರ್ಗದ ಕೋಟೆ ಕೊನೆಗೂ ಶತ್ರುಗಳಿಗೆ ಅಭೇದ್ಯವಾಗೇ ಉಳಿಯಿತು
ಓಬ್ಬವ್ವನ ಸಮಯಪ್ರಜ್ಞೆ ಯಿಂದ ಕೋಟೆಯು ಅಜೇಯವಾಯಿತು।
ಹೈದರನ ಕೋಟೆ ಕೈವಶ ಮಾಡಿಕೊಳ್ಳುವ ಕನಸು ಕನಸಾಗೇ
ಉಳಿಯಿತು, ಕೋಟೆಯ ರಕ್ಷಿಸಿದ ಓಬ್ಬವ್ವ ಇತಿಹಾಸದಲ್ಲಿ ಅಮರಳಾದಳು ||17||
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
No comments:
Post a Comment