|| ಕುರುವಂಶಕ್ಕಾಗಿ ಸತ್ಯವತಿಯ ಚಿಂತೆ ||

ಹಸ್ತಿನಾಪುರಾಧೀಶ ವಿಚಿತ್ರವೀರ್ಯನು ದೇಹಾಲಸ್ಯದಿಂ
ಇಹಲೋಕವಂ ಗೈದನು ಶೂನ್ಯವಾಗಿಹ ಸಿಂಹಾಸನವು।
ರಾಜಾಸ್ಥಾನ, ಅರಮನೆಯಲ್ಲಿ ಮೌನವು ಮನೆಮಾಡಿತು
ಯಾರು ಮುಂದೆ ಕುರುಸಿಂಹಾಸನಾಧೀಶರಾಗುವರೆಂದು ||1||

ಚಿಂತೆ ಅವರಿಸಿಹುದು ಸತ್ಯವತಿಯ ಮನದಲ್ಲಿ
ಒಡನೆಯೇ ಭೀಷ್ಮನ ಕರೆಸೆಂದಳು ದಾಸಿಗೆ।
ಭೀಷ್ಮ ಮಾತೆಯ ಬಳಿಬಂದು ನಮಿಸುತ್ತಾ
ತಾಯಿ ಕರೆದೇಕಿಂದು ವಿಷಮ ಸ್ಥಿತಿಯಲ್ಲಿ ನಿನ್ನಆದೇಶವೇನು ||2||

ಗುಣವಂತ,ಅತಿರಥ ಪರಾಕ್ರಮಿ, ವಿವೇಕ,ವಿದ್ವಾಂಸ
ಕುರುವಂಶ ಕುಲೋತ್ತುಂಗ,ಅಜಾತಶತ್ರುವಾಗಿಹ ಭೀಷ್ಮ
ಸಕಲ ಗೌರವಾದರ ಪಾತ್ರಧಾರಿ , ನಿಷ್ಠೆ, ದೃಢತೆಗೆ ಮತ್ತೊಂದು
ಹೆಸರಾಗಿಹ ಗಾಂಗೇಯನೇ ಮಾತುಕೇಳೆಂದಳು ಸತ್ಯವತಿ ||3||

ಕುರುವಂಶದ ಉತ್ಥಾನ ಮುಂದೇನೆಂಬುದೇ ಯಕ್ಷಪ್ರಶ್ನೆಯಾಗಿದೆ
ಬೇಡಿಕೊಂಬೆನು ಹಸ್ತಿನಾವತಿಯ ಸಿಂಹಾಸನವೆರೆಂದಳು ।
ಮಾತೆ ಎನ್ನ ಪರಿಕಿಸಲೇ ಈ ಮಾತನ್ನು ಹೇಳುತಿರುವಿರೇನ್
ಸಿಂಹಾಸನ ತ್ಯಾಗ, ಆಜನ್ಮ ಬ್ರಹ್ಮಚರ್ಯದ ಶಪಥವ ಮರತಿರೇನು ||4||

ಮಾತಿಗೆ ತಪ್ಪಲಾರೆ, ಮುಂದಿರುವ ದಾರಿಯಾದರೂ ಏನು
ಈ ಸಂಕಷ್ಟ ಪರಿಸ್ಥಿತಿಯಿಂದೊಮ್ಮೆ ಹೊರ ಬರುವ ಮಾರ್ಗವದಾವುದು ।
ಕೇಳು ತಾಯೇ ನನ್ನ ಹೊರತಾಗಿ ಕುರುವಂಶದುತ್ಥಾನ
ಸಾಧ್ಯ ಕ್ಷತ್ರಿಯರಲ್ಲಿ ನಿಯೋಗವೆಂಬಾಚಾರ ಪದ್ಧತಿಯುಂಟು ||5||

ಕುಲನಾಶದಿಂ ಹೊರಬರಲು ಸಂಸಾರ ಕ್ಲೇಷವಿಲ್ಲದ ಬ್ರಹ್ಮಾರಿವು
ಪೊಂದಿದಾ ಋಷಿಗಳಿಂ ಸುತರ ಪಡೆವುದು ಶಾಸ್ತ್ರ ಸಮ್ಮತವು|
ಪೂರ್ವದಲ್ಲಿಯೇ ಹಲವು ಸೋದಾಹರಣೆಗಳ ಮುಂದಿಟ್ಟನಾ
ಭೀಷ್ಮನು ತಾಯೇ ಯೋಚಿಸಿದೊಂದೇ ಮಾರ್ಗವಿರುವುದೆಂದನು ||6||

ಭೀಷ್ಮ ಸೂಚಿಸಿದುಪಾಯವು ಯೋಗ್ಯವೆನಿಸಿತಾ
ಸತ್ಯವತಿಗೆ ಬ್ರಹ್ಮಾರಿವಿರುವ ಮಹಾಋಷಿಯ ಹುಡುಕಾಟದಲ್ಲಿ|
ನಮ್ಮ ಸಂಕಷ್ಟದಲ್ಲೂಪಕರಿಸುವರಾರಿಹರೆಂದು ಮನದಲ್ಲೇ
ಯೋಚಿಸುತಿರಲು ವೇದವ್ಯಾಸನ ನೆನಪಾಯಿತು ಸತ್ಯವಂತೆಗೆ ||7||

ಕೇಳು ಭೀಷ್ಮನೇ ಪೂರ್ವದಲ್ಲಿ ನಡೆದ ಯಾರಿಗೂ ತಿಳಿಯದ
ಈ ಘಟನೆ ನಿನಗೇಳುತಿಹೆನು ಕೇಳುವಂತವನಾಗು|
ಹಿಂದೆ ನನ್ನ ಪೂರ್ವಕಾಯಕದಲ್ಲಿ ತೊಡಗಿರುವಾಗೆ ಪರಾಶರರೊಮ್ಮೆ
ನದಿ ದಾಟಿಸುವ ಹೊತ್ತಿನಲಿ ನನ್ನ ಮೋಹಕೊಳಗಾದರು ||8||

ನಮ್ಮಿರ್ವರ ಪ್ರೇಮದ್ಯೋತಕವೆಂಬಂತೆ ವ್ಯಾಸರು ಜನಿಸಿದರ್
ಬ್ರಹ್ಮಜ್ಞಾನವೀಯುವೆನೆಂದು ಪರಾಶರರು ಆಶೀರ್ವದಿಸಿದರು ।
ನನ್ನ ಮಗನೇ ಅಗಿಹ ವೇದವ್ಯಾಸನು ವಚನವಿತ್ತಿಹನು
ನಾನ್ ಕರೆದಾಗ ಬರುವೆನೆಂದು ಅವನ ಸಹಾಯಬೇಡುವೆನೆಂದಳು ||9||

ಭೀಷ್ಮನಿಗಿದು ಸಮಂಜಸವೆನಿಸಿತು, ತಾಯೇ
ಅಂಬಿಕೆ, ಅಂಬಾಲಿಕೆಯರ ಮನಸ ಸಿದ್ಧಗೊಳಿಸೆಂದನು|
ಮನದಲ್ಲೇ ವ್ಯಾಸನ ನೆನೆದಳ್ ಬಾ ಮಗನೇ
ನಿನ್ನಿಂದುಪಕಾರವಾಗಲೇಬೇಕು ಕುರುವಂಶವುದ್ಧರಿಸು ಬಾಯೆಂದಳು ||10||

ತಾಯೇ! ನನ್ನ ನೆನೆದೇಕಿಂದು ಮುಂದೆ ನಿಂತಿಹೆನ್
ಏನಪ್ಪಣೆಯಾಗಲಿ ಹೇಳುವಂತವಳಾಗೆಂದನು ವ್ಯಾಸನು|
ಕುರುವಂಶದಲ್ಲೊದಗಿದ ಸಂಕಷ್ಟಪರಿಸ್ಥಿತಿಯ ವರದಿ
ಯೊಪ್ಪಿಸಿದಳ್ ರಾಣಿಯರಲಿ ಕುಲೋದ್ಭವ ಸುತರಂ ಕರುಣಿಸೆಂದಳು ||11||

ತಾಯೇ! ಇಲ್ಲವೆನ್ನಲಾರೆ ನಿನ್ನ ಬಿನ್ನಹಕೆ
ರಾಣಿಯರ ಸಜ್ಜುಗೊಳಿಸು ,ನಿಯೋಗಕೆ ಸಿದ್ಧಗೊಳಿಸು।
ನನ್ನ ತಪೋತೇಜಸ್ಸಿನ ಪ್ರಖರತೆಗೆ ಹೆದರುವರವರು
ತಿಳಿಯಹೇಳೊಪ್ಪಿಸು ಸಿದ್ಧರಾಗಿರುವಂತೆ ತಿಳಿಸೆಂದನು ||12||

ಅಂಬಿಕೆಯ ಮನವೊಪ್ಪಿಸಲ್ ಸತ್ಯವತಿ ಮುಂದಾದಳ್
ವ್ಯಾಸರವೊಪ್ಪಿಸುವುದಕ್ಕಿಂತಲೂ ಅಂಬಿಕೆಯನೊಪ್ಪಿಸಲು ದಣಿದಳವಳು।
ಕಡೆಗೂ ಒಪ್ಪಿಅಂಬಿಕೆ ವ್ಯಾಸರವಿರುಪವಮ್ ಕಂಡು ಬೆದರಿ
ಕಣ್ಣು ಮುಚ್ಚಿದಳ್ ಫಲವಾಗಿ ಕುರುಡುಮಗುವಿಗೆ ತಾಯಾದಳು ||13||

ನಡೆದುದೆಲ್ಲವ ತಾಯಿ ಸತ್ಯವತಿಗೆ ನುಡಿದರ್
ಮಗು ದೃಢಕಾಯ ,ಬಲವಂತನಾದರೂ ಕುರುಡನಾಗಿರುವೆನೆಂದರು।
ಬೆಚ್ಚಿದ ಸತ್ಯವತಿ ಅಂಬಾಲಿಕೆಯೊಡಗೂಡುವಂತೆ
ವ್ಯಾಸರಲಿ ಬಿನ್ನಹವಿತ್ತು ಕೈಗೂಡುವಂತೆ ಮನವಿಯನ್ನಿತ್ತಳು ||14||

ಅಂಬಾಲಿಕೆಯ ಮನವೊಲಿಸಿ ಧೈರ್ಯತುಂಬಿದಳು
ವ್ಯಾಸರೇಕಾಂತ ಸ್ಥಲಕೆ ಕಳುಹಿಸಲ್ಪಟ್ಟಳವಳು ।
ತಾನು ಬಂದಿಹೆನೆಂದು ಬಿನ್ನವಿಸಿದಳವಳು
ವ್ಯಾಸರ ವಿರೂಪವೊಮ್ಮೆ ನೋಡಿ ಬೆದರಿಬೆವೆತಳವಳು ||15||

ಅಂಬಾಲಿಕೆಯ ಸಂಗವನ್ನು ವಿವರಿಸುತ್ತಾ
ಮಗುವಿನಾರೋಗ್ಯವಿಹೀನನಾಗಿರುವನೆಂದರು ।
ತಾಯಿ ಸತ್ಯವತಿ ಚಿಂತಾಕ್ರಾಂತಳಾದಳು ಮಗದೊಮ್ಮೆ
ಅವರ ಮನವನ್ನೊಪ್ಪಿಸುವೆ ಒಂದಾವಕಾಶ ನೀಡಬೇಕೆಂದಳು ||16||

ತಾಯ ಮನವಿಗೆ ಆಯಿತೆಂದರು ಇದೇ ಕೊನೆಯವಕಾಶ
ಈರ್ವರಲಿ ಯಾರಾದರೂ ಆಗಲಿ ಕಳುಹಿಸೆಂದರು ವ್ಯಾಸರು।
ಭಯ ವಿಚಲಿತರಾದ ಅಂಬಿಕೆ ಅಂಬಾಲಿಕೆ ದುಗುಡದಿ
ದಾಸಿಯ ಮನವೊಲಿಸಿ ವ್ಯಾಸರ ಬಳಿಗೆ ಕಳುಹಿದರವಳ ||17||

ದಾಸಿ ದೃಢಚಿತ್ತದಿ ದೈವೇಚ್ಛೆ ಯಂತಾಗಲೆಂದು
ವ್ಯಾಸರ ಬಳಿ ಬಂದು ತಾನು ಬಂದಿಹೆನೆಂದು ಬಿನೈಸಿದಳು।
ಅವಳ ಮಾತಕೇಳಿ ವ್ಯಾಸರು ತಿರುಗಿ ಅವಳ ವೀಕ್ಷಿಸಿದರು
ದೃಢಚಿತ್ತದಿ ದಾಸಿಯು ಅವರ ನೋಡಿ ವಿಚಲಿತಳಾಗಲಿಲ್ಲ ||18||

ನಡೆದುದೆಲ್ಲವ ಸವಿಸ್ತಾರವಾಗಿ ಸತ್ಯವತಿಗೆ ಹೇಳಿದರು
ದೃಢ ಆರೋಗ್ಯವಂತನಾದ ಸುತನು ಜನಿಸುವನೆಂದರು।
ಬಂದ ಕೆಲಸವಾಯ್ತು ತಾಯೇ ಇನ್ನು ಬೀಳ್ಕೊಡು ಹೊರಡುವೆ
ತಾಯ ಚರಣಗಳಿಗೆರಗಿ ನಮಿಸುತ್ತಾ ಹೊರಡಲನುವಾದರು ||19||

ಈ ಸಂಕಷ್ಟವ ಪರಿಹರಿಸಿದ ಸುತನಿಗೆ ಅಭಿನಂದಿಸಿದರು
ಮುಂದಿನ ಹೊಸಚಿಗುರಿನ ಗುಣವನಾಗೆ ಅರಿತಾಗಿದೆ
ಧರೆಗಿಳಿದು ಬರುವುದ ಕಾಯುವುದೊಂದೇ ದಾರಿಯುಳಿದಿದೆ
ಅಂಬಿಕೆ ಅಂಬಾಲಿಕೆ ದಾಸಿ ಸುತರ ಆಹ್ವಾನಿಸಲನುವಾದರು ||20||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...