ಹೇಮಂತ

ಹೇಮಂತದ ಚಳಿ ಮೈಯೆಲ್ಲಾ ಗಡಗಡ
ಆಗಸದಲ್ಲಿ ಮಂಜಿನ ತೇರನೇರಿ
ವಿರಹ ಹೃದಯಗಳ ಮೇಲೆ ದಂಡೆತ್ತಿ ಬರುತಿಹನು ಚಂದ್ರ
ಎದುರಿಸುವರಾರು? ಮೋಹಿಸುವವರಾರು?
ಚಳಿಗೆ ಬೆದರಿ ಮೂಲೆ ಸೇರಿದರೆಲ್ಲರೂ
ಒಂದು ಕಡೆ ಚಳಿಯ ಧಾಳಿ,
ಮತ್ತೊಂದೆಡೆ ವಿರಹಾಗ್ನಿ!
ತನು-ಮನದ ಮೇಲೆ ಧಾಳಿ!
ಮೂಲೆ ಸೇರಿ ಬೆಚ್ಚಗೆ ಮಲಗಿದವರೇ ಹೆಚ್ಚು!
ಗಾಳಿಯ ಜೊತೆ ಸೆಣಸಿ ಬೆವರಿಳಿಸುವವರಾರು?
ಬರುತ್ತದೆ!, ಹೋಗುತ್ತದೆ! ಕಾಲಚಕ್ರ ನಿಲ್ಲದೆ...

ಬೆಳಗು ಬಾ

ನನ್ನೊಳಗಿನ ಅರಿವಿನ ಬೆಳಕು ಹೊಮ್ಮಲಿ
ಈ ಜಗದೆಲ್ಲೆಡೆ ಹಬ್ಬಲಿ
ನೋವು,ಸಂಕಟ,ತುಮುಲಗಳೆಲ್ಲವ ತೊಳೆಯಲಿ
ಓ ಬೆಳಕೇ, ಈ ಹೃದಯಕೆ ಬಾ||

ಕಡಲ ನೀರು ಆವಿಯಾಗಿ ನಭವ ಸೇರಿದಂತೆ
ಮೋಡವಾಗಿ ಆಗಸದಲ್ಲಿ ತೇಲಿದಂತೆ
ಓ ಙ್ಞಾನವೇ ಬೆಳಕಾಗಿ ಬಾ
ಓ ಬೆಳಕೇ ಕವನವಾಗು ಬಾ||

ಎಲ್ಲೋ ಹುಟ್ಟಿ,ಎಲ್ಲೋ ಸಾಗುವ ನದಿಯಂತೆ
ಹೆಣ್ಣಾಗಿ ಹುಟ್ಟಿ ಮನೆ ಬೆಳಗುವ ದೀಪದಂತೆ
ಓ ಹೆಣ್ಣೇ ಬೆಳಕಾಗಿ ಬಾ
ಓ ಹೆಣ್ಣೇ ಮನೆಯ ಬೆಳಗು ಬಾ||

ಗುಲ್ ಮೊಹರ್

ಮನೆಯ ಪಕ್ಕದ ರಸ್ತೆ
ನೆಟ್ಟೆ ಪುಟ್ಟ ಗುಲ್ ಮೊಹರ್ ಸಸ್ಯ;
ನೀರ್ಹಾಕಿದೆ, ಆರೈಕೆ ಮಾಡಿದೆ
ಅದು ಬೆಳೆಯುತ್ತಿತ್ತು ನನ್ನ ಕನಸಿನಂತೆ||

ಪುಟ್ಟ ಸಸಿಯ ಎಲೆಗಳು ಬಾಡುತ್ತಿತ್ತು
ಕಂಡ ಮನಸು ಮರುಗಿತು;
ಹೊಸ ಚಿಗುರ ಕಂಡಾಗ
ಮನಸು ಸಂತೋಷದಲಿ ತೇಲಿತು||

ಬೆಳೆದು ದೊಡ್ಡದಾಗುತಿತ್ತು
ಮನದಲ್ಲಿ ಅಳುಕೂ ದಿನೇ ದಿನೇ ಹೆಚ್ಚಾಗುತ್ತಿತ್ತು;
ದಾರಿಹೋಕ ದನ, ಕುರಿ, ಮೇಕೆಗಳು ತೊಂದುಬಿಟ್ಟಾವೆಂದು
ದಾರಿಹೋಕ ನಿರ್ಲಜ್ಜ ಜನ ಹೊಸಕ್ಹಾಕುವರೆಂದು||

ಎಲ್ಲೇ ಇದ್ದರೂ ಅದರದೇ ಚಿಂತೆ
ದಿನೆ ದಿನೇ ಕಾಳಜಿ ಮಾತ್ರ ಹೆಚ್ಚಾಗುತ್ತಲ್ಲೇ ಇತ್ತು:
ಎತ್ತರೆತ್ತರಕೆ ಬೆಳವುದ ಕಂಡೆ
ಬೆಳೆದು ಹೆಮ್ಮರವಾಗಿ ನೆರಳುಕೊಟ್ಟಾಗ ಹಿರಿಹಿರಿ ಹಿಗ್ಗಿದೆ||

ವಸಂತದಲ್ಲಂತೂ ಅದರ ನೋಟವೇ ಚಂದ
ಮೈಯೆಲ್ಲಾ ಹಸಿರು,ಕೆಂಪು,ಬಿಳಿಯ ಬಣ್ಣದ
ಹೂವು, ಕಂಪಸೂಸಿ ಹಕ್ಕಿಗಳ ಆಕಷರ್ಿಸಿಸಿ
ದೇವತೆಯಂತೆ ಕಂಗಳಿಗೆ ಕಂಗೊಳಿಸುತ್ತಿತ್ತು||

ಅದ ಕಂಡಾಗಲೆಲ್ಲಾ
ಮನಸು ನಲಿಯುತ್ತೆ;
ಹೃದಯ ಕಾಣದ ಹಾಡ ಹಾಡುತ್ತೆ
ಮತ್ತೆ ಮತ್ತೆ ಅದ ನೋಡುತ್ತಾ ಆಗಸದಲಿ ತೇಲುತ್ತೆ||

ಪ್ರಕೃತಿಗೆ ನಾನು ನಿನ್ನ ಕೊಟ್ಟೆ
ನೀನು ನನಗೆಲ್ಲವನ್ನೂ ಹಿಂತಿರುಗಿಸಿದೆ;
ಒಳಿತಮಾಡಿ ಒಳಿತ ಬೇಡಿದರೆ
ಒಳಿತೇ ನಮ್ಮ ಕಾಯ್ವದು||

ಪ್ರೇರಣೆ: "ದಿ ಟ್ರೀ" ಕೇಕಿ ಎನ್ ದಾರುವಾಲ

ದಿವ್ಯಜ್ಯೋತಿ

ಪುಟ್ಟ ಪ್ರೀತಿಯ ದೇವತೆ ಮಲಗಿಹುದು
ಕಾಲನೊಳಗೆ ಹುದುಗಿಹುದು
ನಿದಿರೆಯ ನೆಪವ್ವೊಡ್ಡಿ
ತಲೆಯ ಮೇಲೆ ಕೈ ನೇವರಿಸೆ
ಹೃದಯ ದೀವಿಗೆಯ ಬೆಳಕು
ಮುಖದಲ್ಲಿ ಶಾಂತತೆಯ ಹರವು
ತುಟಿಯಲ್ಲಿ ಬೆಲೆಕಟ್ಟಲಾಗದ ಮಂದಹಾಸ
ನೋಡು ನೋಡು ಮತ್ತೆ ಸಿಗದೀ ದಿವ್ಯತೆ
ತುಂಬಿಕೋ ಹೃದಯ ತುಂಬಾ
ಮತ್ತೊಮ್ಮೆ ಸಿಗದೀ ಅಮೃತಗಳಿಗೆ
ಯಾವ ಜನುಮದ ಸುಕೃತವೋ!
ಕ್ಷಣಕಾಲ ಕಂಡೆ ದಿವ್ಯಜ್ಯೋತಿ
ಕಣ್ಣು ಮಬ್ಬುಗಟ್ಟಿದೆ ಕ್ಷಣದಲ್ಲೇ
ರಾತ್ರಿಯ ನೀರವತೆಯ ಸೆಳೆತಕ್ಕೆ ಸಿಕ್ಕು
ನಿದಿರೆಗೆ ಜಾರಿದೆ ಅಚ್ಚರಿಯಲ್ಲೇ....
ಮತ್ತೆ ಬರದೀ ಸುಸಮಯ
ಜಾರಿಹೋಗಿದೆ ಕಣ್ಣಮುಂದೆ.....
ಕಣ್ಣುಗಳೇ ಧನ್ಯ
ಹೃದಯವೇ ಧನ್ಯ
ಮತ್ತೊಮ್ಮೆ ಬಾ ದೈವವೇ.....

ತಾಯ ಮಡಿಲ ತಂಪು

ಕಣ್ಣರಳಿವೆ ಈ ಹಸಿರ ಸೊಬಗ ಸವಿಯಲು
ಎಷ್ಟು ನೋಡಿದರೂ ಹಸಿವೆ ನೀಗದು|
ಬೆಟ್ಟ,ಕಣಿವೆ ತುಂಬಿಕೊಂಡು ನಲಿದಿದೆ
ಮತ್ತೆ,ಮತ್ತೆ ನೋಡಬಯಸಿದೆ ಹೃದಯ ಅರಳಿಸಿ||

ಹರಿವ ನೀರ ಸಪ್ಪಳ
ಮನದಲ್ಲೇನೋ ಹುಚ್ಚು ಸಡಗರ|
ಕರೆವ ಹಕ್ಕಿಗಳ ಇಂಚರ
ತಾಯ ಕರುಳ ಸಪ್ತಸ್ವರ||

ಕಂಡಷ್ಟೂ ಕಣ್ಣರಳಿಸಿ ತವಕ
ಕೇಳುವಷ್ಟೂ ಕಿವಿ ತೆರೆದು ಭಾವುಕ|
ತಾಯ ಮಡಿಲ ತಂಪು-ಒನಪು
ಅನುಭವಿಸುವ ನಾ ಪುಟ್ಟ ಬಾಲಕ||

ಮರಳಿ ನೋಡುವೆ.....
ಮರಳಿ ಬರುವೆ.....
ನಿನ್ನ ಮಡಿಲ ತಂಪಿಗೆ
ಹೃದಯ ತೆರೆದು ನೋಡಿದೆ
ತವಕಿಸಿದೆ ನಿನ್ನ ನೋಟಕೆ.......||

ಪರಿತಾಪ

ಕಾಯುತಿಹೆನು ಬಹಳ ವರ್ಷಗಳಿಂದೆ
ತಾಳ್ಮೆಗೆಡದೆ ತಗ್ಗಿ-ಬಗ್ಗಿ ನಡೆಯುತಿಹೆನು|
ಈ ಪರಿತಾಪಕೆ ಕೊನೆ ಎಂದೋ ತಿಳಿಯದಾಗಿದೆ
ಇಂದೋ-ನಾಳೆಯೋ ನನ್ನದು ದಕ್ಕುವುದೆಂದು||

ಬಂದದೆಲ್ಲಾ ಸ್ವೀಕರಿಸಿರುವೆ ಸರಿ-ಸಮನಾಗಿ
ಸಿಹಿಯೋ-ಕಹಿಯೋ ಬಯಕೆಯಿಂದಲೇ|
ಅನುಭವಕೆ ಮಣೆಹಾಕಿ ಅಮೃತವುಂಡಿದ್ದೇನೆ
ಅರಿವ ಬೆಳಕಲ್ಲೇ ಧನಾತ್ಮಕವಾಗಿಯೇ ಚಿಂತಿಸಿದ್ದೇನೆ||

ಕಾಲ ಮುಂದೆ ಓಡುತ್ತಿದೆಯಾದರೂ
ಮನದ ಹೆಬ್ಬಯಕೆಯ ರಾಮನ ಬರುವಿಕೆಯಿಲ್ಲ|
ಕಾಯುತಿಹೆನು,ಕಾಯುತಿಹೆನು ರಾಮ-ರಾಮ
ಕಣ್ಣತುಂಬಿಕೊಳ್ಳಲು ಹೃದಯ ಬರಿದು ಮಾಡಿಹೆನು||

ರಾಮ ನೀ ಬರುವಿಯೆಂದು ಕಾಯುತಿಹೆನು ಆಶಾವಾದದಿಂದಲೇ......

ನೀನ್ಯಾರೆ ಹಕ್ಕಿ?

ಮರದ ಮೇಲೊಂದು ಹಕ್ಕಿ
ರಾತ್ರಿ ಮಾತ್ರ ಮುಖ ತೋರುವ ಹಕ್ಕಿ
ಕಂಡರೆ ಅಪಶಕುನವೆನ್ನುವ ಹಕ್ಕಿ
ರಾತ್ರಿಗಳ್ಳರಿಗೂ ಕಾಡುವ ಹಕ್ಕಿ
ಹಕ್ಕಿ,ಹಕ್ಕಿ ನೀನ್ಯಾರೆ ಹಕ್ಕಿ?

ದೊಡ್ಡ,ದೊಡ್ಡ ಕಂಗಳ ಹಕ್ಕಿ
ಅಗಲದ ಮುಖದ ಹಕ್ಕಿ
ಕತ್ತನ್ನು ತಿರುಗಿಸುವ ಹಕ್ಕಿ
ನಿನ್ನ ಕಂಡರೆ ಭಯವ್ಯಾಕೆ ಹಕ್ಕಿ
ಹಕ್ಕಿ,ಹಕ್ಕಿ ನೀನ್ಯಾರೆ ಹಕ್ಕಿ ?

ಓ ಗುರುವೇ

ಲೋಕದ ಬಯಕೆಗಳೆಲ್ಲಾ ತಾನೇ ಆಗಿ
ಲೋಕವೇ ತಾನಾಗಿ
ಎಲ್ಲವೂ ತನಗೇ ಮೀಸಲೆಂಬಂತೆ
ಮಿಸುಕುವ ಇವರ ಪರಿಯ ನೋಡ|

ಸ್ವಾರ್ಥತನದಲ್ಲಿ ಬಾಚಿಕೊಂಬರು
ಬಿಡದೆ ಒಂದಿನಿತು ಪರರಿಗೆ
ಇವರ ಬಾಳ್ವೆ ಯಾರಿಗೆ ಒಲವೋ ನಾ ಕಾಣೆ
ಎಲ್ಲವ ನಿನಗಪರ್ಿಸಿರುವೆನು ಓ ಗುರುವೇ|

ಎನಿತು ಸುಂದರ,ಎನಿತು ಮಧುರ

ಎನಿತು ಸುಂದರ,ಎನಿತು ಮಧುರ
ಈ ನನ್ನ ದೇಶವೂ|
ಪ್ರಪಂಚದ ಎಲ್ಲ ದೇಶಗಳಿಗಿಂತಲೂ
ನಮ್ಮ ದೇಶವು ಭಿನ್ನವೂ||

ಉತ್ತರದ ಹಿಮಾಲಯವು
ಈ ದೇಶದ ಕಿರೀಟವೂ|
ಹಾರುತಿರಲಿ ನಮ್ಮಯ ಹಿರಿಮೆಯ
ಗುರುವಿನ ಅರಿವಿನ ಧ್ವಜವೂ||

ಗಂಗೆ,ಯಮುನೆಯರ ಕಲರವ
ನಿಲ್ಲದೆ ತಂಪನ್ನೆರೆಯಲಿ ವರ್ಷವೂ|
ಶಾಂತಿ,ನೆಮ್ಮದಿ,ಧರ್ಮದ,ಭ್ರಾತೃತ್ವದ ಜಯಘೋಷ
ಮಾದರಿಯಾಗಲಿ ಈ ಜಗಕ್ಕೆಲ್ಲಾ||

ನಡೆಯುತಿರಲಿ ಹೋಮ-ಹವನ
ಬಲಿದಾನಗಳು ನಿತ್ಯವೂ|
ಸಾಹಿತ್ಯ,ಕಲೆ,ವಿಜ್ಞಾನಗಳ ಸಮ್ಮೇಳನ
ನಿಲ್ಲದೆ ಅನವರತ ನಿತ್ಯೋತ್ಸವ||

ಕರುಣೆಯ ಕಡಲು

ವಂದಿಸುವೆ ತಾಯೇ ನಿನಗೆ
ನಮಿಸುವೆ ತಾಯೇ ಅನವರತ
ಕರುಣೆಯ ಕಡಲು;
ವಾತ್ಸಲ್ಯದ ಮಡಿಲು;
ಶಾಂತಿಯ ಮಮತೆಯ ಹೊನಲು//

ಆ ದೇವನ ಹೃದಯದ ತುಣುಕು ನೀನು
ಆ ಚಂದ್ರನ ಬೆಳಕಿನ ಬೆಳದಿಂಗಳು ನೀನು
ಕಣ್ಣ ರೆಪ್ಪೆಯು ನೀನು;
ರಕ್ಷಿಪ ರಣಚಂಡಿಯು ನೀನು;
ತೊದಲು ನುಡಿಯ ಗುರುವೂ ನೀನು//

ನೀನೇ ಅರಿವು
ನೀನೇ ಬದುಕಿನ ದಾರಿಯು
ನೀನೇ ನನ್ನ ಉಸಿರು
ಹೃದಯದಲ್ಲಿ ತುಂಬು ನೀ ಶಕ್ತಿ
ಮನದಲ್ಲಿ ಆವರಿಸಲಿ ನಿನ್ನ ಭಕ್ತಿ//

ಶ್ರೀಮಂತ

ಹಣವಿದ್ದವರೆಲ್ಲಾ ಶ್ರೀಮಂತರಲ್ಲ
ಓಳ್ಳೆಯ ಆಲೋಚನೆ;
ಓಳ್ಳೆಯ ವಿಚಾರಗಳು;
ಓಳ್ಳೆಯ ನಡುವಳಿಕೆಗಳು;
ಓಳ್ಳೆಯ ಗೆಳೆಯರಿರುವರೆಲ್ಲಾ
ನಿಜವಾಗಿಯೂ ಈ ಪ್ರಪಂಚದಲ್ಲಿ ಶ್ರೀಮಂತರು//

ಬಿಸಿಲು ಕುದುರೆ

ನಡೆದಷ್ಟೂ ದೂರ ಹೋಗುತಿಹುದು
ಎಂದು ಸೇರುವೆನೋ ಗುರಿಯನು?
ದೂರ ದೂರ ಸರಿಯುತಿಹುದು ಕನಸು
ಎಂದು ನೋಡುವೆನೋ ನಿನ್ನನು//

ಭ್ರಮೆಯ ಬೆನ್ನ ಹತ್ತಿಹೆನೇನೋ?
ನಿದ್ದೆ ಜಾರಿಹುದು, ಕಣ್ಣೀರು ಕಣ್ಣಿಂದ
ಎಡರು ತೊಡರು ನಡೆಯುತಿಹೆನು
ಎಂದು ಬೀಳುವೆನೋ! ಕಾಯುತಿಹುದು ನೆಲವು//

ಬಿಸಿಲು ಕುದುರೆ ಏರಿಹನೇನೋ?
ಅಪಹಾಸ್ಯ-ನಿಂದೆಗೆ ಎದೆಯ್ಯೊಡ್ಡಿರುವೆ
ಪಟ್ಟ ನೋವಿಗೆಲ್ಲಾ ಮುಲಾಮಿದೆಯೇ?
ಹರಿದ ಕಣ್ಣೀರಿಗೆ ಬೆಲೆಯುಂಟೆ?
ಮುಂದೆ ಸಾಗುತಿಹೆನು ಎಲ್ಲವ ಹೊತ್ತು
ಹೊತ್ತು ತೀರುತಿದೆ ಇತಿಹಾಸದೆಡೆಗೆ.... //

ದಾರಿ ಕಾಯುತ್ತಾ....

ದೂರ ಹೋಗಬಹುದೇ?
ಮನವ ಮುರಿದು
ಮನದೊಳು ನೂರು ಕದನ ನಡೆಯುತಿರಲು
ನೆಮ್ಮದಿಯ ನಿದ್ದೆ ಸಾಧ್ಯವೇ?//

ತುಟಿಯಲ್ಲಿ ಮಾತಿಲ್ಲ, ನಗುವಿಲ್ಲ
ಏನ ಹೇಳಲಿ ತೊದಲುವುದ ಬಿಟ್ಟು
ಹೃದಯ ನರಳುತಿರಲು ನೋವಲಿ
ಯಾರ ಬೇಡಲಿ ನಿನ್ನ ತಡೆಯಿರೆಂದು//

ಬೆಳಕ ಕತ್ತಲು ನುಂಗಿದಂತೆ
ನಿನ್ನ ನೆನಪು ನನ್ನ ನೆಮ್ಮದಿಯ ನುಂಗಿತು
ಹೃದಯದಲ್ಲೊಂದು ಭರವಸೆಯಿತ್ತು
ನಾಳೆ ಬೆಳಗಾಗುವುದೆಂದು
ನೀ ಬರುವ ದಾರಿ ಕಾಯುತ್ತಾ.... //

ಭರವಸೆ

ಎಲ್ಲಿ ಹೋದೆಯೋ ಓ ಚೆನ್ನದ ಹಾಡುಗಾರ
ಚಿನ್ನದ ಕಂಠದ ಮಾಟಗಾರ
ಸೊರಗಿಹುದು ಈ ಹೃದಯ ತಂಪೆಳಲ ನೀಡು ಬಾ//

ಎಲ್ಲಿ ಹೋದೆಯೋ ಮನದಲ್ಲಿ ಮೂಡಿದೆ ಭಯ ಆವೇಗ
ಕಡೆಗಣಿಸಿದೆ ನೀನಿಲ್ಲದೆ
ಹಾತೊರೆಯುತಿದೆ ಮನ ಭರವಸೆ ಮೂಡಿಸು ಬಾ//

ನಿನ್ನ ನಂಬಿಹೆನು ,ನೀನೊಬ್ಬನೇ ಅಂತಿಮ ಭರವಸೆ
ಯಾರು ಬಾರದಿದ್ದರೇನು?
ನೀ ಬರುವೆಯೆಂಬ ಹೆಬ್ಬಯಕೆಯಿದೆ ಕರುಣೆ ತೋರಿಸು ಬಾ//

ಅವನ ಪಯಣ

ಪ್ರತಿದಿನ ಅವನ ಪಯಣ ಇದೇ ದಿಕ್ಕಿನಲ್ಲಿ
ನಾನು ಮಾತ್ರ ಇಂದಿನ ಪ್ರೇಕ್ಷಕ;
ಅವನ ಪಯಣ ಇಂದು ನಿನ್ನೆಯದಲ್ಲ,
ಅದು ಶತಶತಮಾನಗಳದ್ದು,
ನನ್ನದು ಮಾತ್ರ ಕೆಲವೇ ದಶಕಗಳದ್ದು
ಪ್ರತಿದಿನ ನೂರು ಸಂದೇಶಗಳ ಹೊತ್ತು ತರುವ
ನನಗೆ ಮಾತ್ರ ಅದರ ಅರಿವಿಲ್ಲ
ಕೇವಲ ಮೂಕಪ್ರೇಕ್ಷಕ
ಕಣ್ಣಿದ್ದು ಕುರುಡ
ಒಳಗಣ್ಣ ತೆರೆಸಬೇಕು ಅವ
ಅವನದೂ ಯಾತ್ರಿಕ ಜೀವನವೇ
ನನ್ನದೂ ಅವನಂತೆ ಬೇರೆಯೇನೂ ಅಲ್ಲ
ಆದರೂ ಅವನಿಗೂ, ನನಗೂ ಅಪಾರ ವ್ಯತ್ಯಾಸ
ಅವನದೋ ನಿಲರ್ಿಪ್ತಭಾವ,
ನನ್ನದೋ ಆತಂಕಭಾವ,ಧ್ಯೆನ್ಯಭಾವ....

ನೋಟ ಬದಲಿಸು

ಬದಲಿಸು ಕಣ್ಣ ನೋಟ.
ಕಾಣು ಚೈತನ್ಯವಿಹುದು ಜಗದೆಲ್ಲಡೆ;
ಹವ್ಯಾಸವಾಗಲಿ ಪ್ರತಿ ಕೆಲಸ,
ಇಂದೇ ಮಾಡು ಮನದಲ್ಲಿಯ ಕಾಯಕ;
ಆ ದೇವನ ಕರುಣೆಯ ನೆನೆ,
ಸಿಕ್ಕಿದೆಲ್ಲಕ್ಕೂ ಖುಷಿ ಇರಲಿ;
ಈ ಜಗವೇ ತೆರೆದ ಶಾಲೆ,
ಇರಲಿ ಕಲಿಕೆ ನಿರಂತರ;
ಸ್ವಾಭಿಮಾನವಿರಲಿ,
ಗುರಿಯ ಸಾಧನೆಗೆ ಅದುವೇ ಪ್ರಥಮ ಹೆಜ್ಜೆ;
ಋಣಾತ್ಮಕತೆ ಎಲ್ಲೆಡೆಯೂ ಇದೆ,
ತಿಳಿದು ದೂರವಿರು;
ಈ ಜಗವ ಪ್ರೀತಿಸು,
ಮಾಡುವುದೆಲ್ಲವ ಇಷ್ಟಪಡು;
ಪ್ರತಿದಿನ ಕಣ್ಣುತೆರೆ ಆಶಾವಾದದಲಿ,
ಬೆಳಕಿದೆ, ಕತ್ತಲಿದೆ, ಆಯ್ಕೆ ನಿನ್ನದೇ.....
ಸಾಧನೆಯ ಹೆದ್ದಾರಿ ಮುಂದಿದೆ..
ನಿನಗಾಗಿ ಕಾದಿದೆ.....

ನಿತ್ಯ ಹರಣ

ಮನದಲ್ಲಿ ನೂರು ಕದನ ನಡೆದಿದೆ
ಯಾರು ಗೆಲ್ಲುವರೋ ನಾ ಕಾಣೆ
ಸಾವು,ನೋವು ಎಲ್ಲವೂ ನನ್ನೊಳಗೆ
ಸೋತರೂ! ಗೆದ್ದರೂ!
ಲಾಭ-ನಷ್ಟ ನನ್ನದೇ.....
ವರುಷಗಳಿಂದ ನಡೆಯುತಿದೆ ಈ ಕದನ
ಬಿಡುವಿಲ್ಲ, ನಿಂತಿಲ್ಲ
ಕೊನೆಯೆಂಬುದು ಕನಸೆಂಬಂತೆ
ನಿತ್ಯ ಹರಣ; ನಿತ್ಯ ಮರಣ
ಕೊನೆಯಿಲ್ಲವೀ ಕದನಕೆ
ನಿಲ್ಲದು ಈ ಕದನ
ಮನದೊಳಗೆ ನಿತ್ಯ ನಿರಂತರ;

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...