Thursday, December 30, 2010

|| ನಮಗಿಲ್ಲದ ಸಮಯ||

ಬಹಳ ಸಮಯವಿದೆ
ಬದುಕ ಬಂಡಿ ನಡೆಯಲು
ಹುಟ್ಟು-ಸಾವಿನ ನಡುವೆ ಬಾಳಿನ ಪುಟಕ್ಕೆ
ತೆರೆಬೀಳುವ ಮುನ್ನ
ಬಾಳಿನಲಿ ಮುನ್ನಡೆಯಲು ಬಹಳ ಸಮಯವಿದೆ\\

ನಿದ್ದೆಗಿದೆ ಸಮಯ
ಕನಸಿಗಿದೆ ಸಮಯ
ಪಕ್ಕದ ಮನೆಯ ಗಂಡ-ಹೆಂಡಿರ
ಕೋಳಿ ಜಗಳ ನೋಡೋದಕ್ಕಿದೆ ಸಮಯ
ಬಾಡಿಗೆ ಮನೆಯ ಮುದಿ ಯಜಮಾನಿಯ
ತೆಗಳುವುದಕ್ಕಿದೆ ಸಮಯ
ಗಂಟೆಗಟ್ಟಲೆ ಕ್ರಿಕೇಟ್ ನೋಡೋದಕ್ಕಿದೆ ಸಮಯ
ಬೀದಿಯಲಿ ಸ್ನೇಹಿತನ ಜೊತೆ ರಾಜಕೀಯ
ಮಾತಾಡೋದಕ್ಕಿದೆ ಸಮಯ
ವರ್ಷಗಟ್ಟಲೆ ಸಾಗುವ ದಾರಾವಾಹಿಯ
ನೋಡೋದಕ್ಕಿದೆ ಸಮಯ
ಬಂಧು-ಬಳಗದ ಜೊತೆ ಸಿನಿಮಾ
ನೋಡೋದಕ್ಕಿದೆ ಸಮಯ
ಕಾಲೇಜಿಗೆ ಚಕ್ಕರ್ ಹೊಡೆದು
ಪಾರ್ಕಿನಲ್ಲಿ ಕೂತು ಲವ್ ಮಾಡೋದಕ್ಕಿದೆ ಸಮಯ
ನಮ್ಮ ನಾವು ಆತ್ಮವಂಚನೆ ಮಾಡಿಕ್ಕೊಳೊದಿಕ್ಕಿದೆ ಸಮಯ
ಬದುಕಿನ ಬಾಳ ಪುಟ ಮುಗಿಯುತಿರಲು
ಸಾವಿಗೆ ಶರಣಾಗೋದಕ್ಕೆ ಎಲ್ಲರಿಗಿದೆ ಸಮಯ

ಕನಸು ನನಸಾಗಿಸೋದಿಕ್ಕಿಲ್ಲ ಸಮಯ
ಪರೀಕ್ಷೆಗೆ ಓದೋದಕ್ಕಿಲ್ಲ ಸಮಯ
ಮನಸು-ಮನಸು ಅರಿಯೋದಕ್ಕಿಲ್ಲ ಸಮಯ
ನಮ್ಮ-ನಾವು ತಿಳಿಯೋದಕ್ಕಿಲ್ಲ ಸಮಯ
ದೇವನಲ್ಲಿ ಮನವಿಟ್ಟು ಪ್ರಾರ್ಥಿಸೋದಕ್ಕಿಲ್ಲ ಸಮಯ
ಆತ್ಮೋಧಾರ ಮಾಡಿಕೊಳ್ಳಲು ಇಲ್ಲ ಸಮಯ
ಮಾಡುವ ಸಮಯಕ್ಕೆ ಕೆಲಸ ಮಾಡೋದಕ್ಕಿಲ್ಲ ಸಮಯ
ನಮ್ಮನ್ನು ನಾವು ಸಂತೋಷಪಡಿಸಿಕೊಳ್ಳೋದಿಕ್ಕಿಲ್ಲ ಸಮಯ\\

Saturday, December 25, 2010

|| ರಾಧೆಯ ವಿರಹ ||

ಹೇಳೆ ಗೆಳತಿ ಶ್ಯಾಮನ ಕಂಡೆಯೇನೆ?
ನಿನ್ನೆಯಿಂದ ಕಾಣುತ್ತಿಲ್ಲ;
ನನ್ನ ನೋಡಲು ಬಂದಿಲ್ಲ;
ಎಲ್ಲಿ ಹೋದನೆಂದು ನಿನಗೆ ಗೊತ್ತೇ ಹೇಳು ಸಖಿ\\

ಯಮುನೆಯ ದಡದಲ್ಲಿ ಕುಳಿತಿದ್ದೆ
ಅವನು ಬರುವನೆಂದು;
ಬಂದು ಕೆಣಕುವನೆಂದು;
ಕಾದು ಕಾದು ಬೇಸರಿಸಿದೆ ಅವ ಬರಲಿಲ್ಲ ಕೇಳು ಸಖಿ\\

ಅವನಿಗಾಗಿ ಬೆಣ್ಣೆ ತೆಗೆದಿರಿಸಿದ್ದೆ
ಬಂದು ಕಾಡಿಸುವನೆಂದು;
ಬೆಣ್ಣೆ ಕದ್ದು ಹೋಗುವನೆಂದು;
ಬೆಣ್ಣೆ ಕರಗಿ ಕರಗಿ ಹೋಯಿತು;ನನ್ನ ಭಾವ ಕರಗಿ ಹೋಗುತಿದೆ ಸಖಿ\\

ಅವನಿಗಾಗಿ ಕಾಯುತ್ತಿರುವೆ ಗೆಳತಿ
ಎಲ್ಲಿ ಹೋದನೋ ತಿಳಿಯದಾಗಿದೆ;
ತಿಳಿಯುವ ಕುತೂಹಲ ದೊಡ್ಡದಾಗಿದೆ;
ಬಾ ಗೆಳತಿ ಶ್ಯಾಮನ ತೋರು;ಈ ವಿರಹವ ಪರಿಹರಿಸು ಸಖಿ\\

|| ದಾರಿ ದೀಪವಾಗು ಬದುಕಿಗೆ ||

ನಿನ್ನ ನೋಡದ ಕಣ್ಣು ಏಕೆ ಕೃಷ್ಣಾ
ಬಾ ಬಾಳಿಗೆ ಚೈತನ್ಯವಾಗು ಕೃಷ್ಣಾ\\

ನನ್ನ ಕಣ್ಣಿನ ಬೆಳಕು ನೀನು;
ನನ್ನ ಜೀವನದ ಗುರಿಯು ನೀನು;
ನಿನ್ನ ನೋಡದೆ ನೊಂದಿಹೆನು ಕೊರಗಿ ಕೊರಗಿ
ಚೈತನ್ಯವಿಲ್ಲದೆ ಕಳೆಗುಂದಿದೆ ಬಾಳು ಕೊರಗಿ\\

ನಿದ್ದೆ ಬಾರದು,ಅನ್ನ ಸೇರದು;
ಮನ ಬಯಸಿದೆ ಕೃಷ್ಣ...ಕೃಷ್ಣಾ ಎಂದು;
ಯಾರಿಲ್ಲ ಇಲ್ಲಿ ನನ್ನ ಸಂತೈಸುವವರು
ಒರೆಸುವವರೂ ಇಲ್ಲ ಇಲ್ಲಿ ನನ್ನ ಬೆವರು\\

ಒಳಗಿರುವ ಆತ್ಮಶಕ್ತಿಯೇ ನೀನು;
ಹೊರಬಂದು ನನ್ನ ಸಂತೈಸು ನೀನು;
ದಾರಿ ತೋರು ಈ ಬದುಕಿಗೆ
ದಾರಿ ದೀಪವಾಗು ಬಾ ನನ್ನ ಬದುಕ ಹಾದಿಗೆ\\

Wednesday, December 22, 2010

||ಅಕ್ಷರದ-ಏಣಿ||

ನಡೆ ಮುಂದೆ, ನಡೆಮುಂದೆ
ಅಕ್ಷರದೋಟದ ಜ್ನಾನದ ಮುಂದೆ
ಬಡತನ, ಅಜ್ನಾನ ಎಲ್ಲವೂ ಹಿಂದೆ
ನಾವು ಎಳೆಯರು ಸಾಗುವ ಮುಂದೆ
ಜ್ನಾನ ದಾಹ ನಮಗೆಲ್ಲರಿಗೊಂದೆ
ಸಾಧನದೆತ್ತರ, ಅಕ್ಷರದೇಣಿಯ ಹತ್ತುವ ಇಂದೇ
ದಿನಕರ ಜೀವಿಗೆ ಕಿರಣ
ಅಕ್ಷರದೀವಿಗೆ ಬಾಳಿಗೆ ಹೂರಣ
ಮನದ ದುಗುಡವ ತೀರುವ ಹರಣ
ಹೆಜ್ಜೆ-ಹೆಜ್ಜೆ ಹಾಕುವ ಶಾಲೆಗೆ
ಸಾಧನೆ ಗುರಿಯ ಹಿಡಿಯುವ ಬಾಳಿಗೆ
ಮನದ ಕತ್ತಲೋಡಿಸುವ
ಬಾ ಹೊತ್ತಿಸುವ ಬಾಳಿನ ದೀವಿಗೆ

|| ಕಂಬನಿಯ ಜೀವನ||

ಪರರ ಕಂಬನಿಯೊಳ್ ಬೆದಕುವರು ತಮ್ಮಯ ಸುಖವ
ಇಂತಿರ್ಪ ಜನಂಗಳ ಏನೆಂದು ಕರೆಯುವುದು
ಹೇಳೆಲೋ ನೀ ಬೊಮ್ಮ
ದಿನಂಪ್ರತಿ ಕಣ್ಣ ಕಂಬನಿಯಲಿ
ಕೈ ತೊಳೆಯುವವರ ಕಂಡರೆ ನಿನಗೇಕೋ ಅಸಡ್ಡೆ?
ಕಂಬನಿ ಸುರಿಸಲೆಂದೇ ಈ ಜಗಕೆ ತಂದು ಬಿಟ್ಟೆಯಾ?
ಇದೆಯಾ ನಿನಗೆ ಸಮಾಧಾನ?
ನೀ ಹೇಳೆಲೋ ಬೊಮ್ಮ
ಕಣ್ಣ ಕಂಬನಿಯಾದರೇನು?
ಮಧುಪಾನವಾದರೇನು?
ಎರಡೂ ತಂತಿ ಹರಿದ ತಂಬೂರಿಯೇ!
ಮೇಲು- ಕೀಳು ತಾರತಮ್ಯವೇ ನಿನ್ನ ನೀತಿ
ಪ್ರಾಣಚಂಚು ಕಳಚಿದ ಮೇಲೆ
ಮಸಣದಲ್ಲೆಲ್ಲರೂ ಸಮಾನರೇ!
ಏಕೆ ಹೀಗೆ ನೀ ಹೇಳೆಲೋ ಬೋಮ್ಮ

Tuesday, December 21, 2010

||ಹೂವು||

ಮುಂಜಾನೆ ಸಂಧ್ಯಾ ಸಮಯದೊಳ್
ತರುವಿನ ಶಿಶುವೊಂದು ಕಣ್ಣಬಿಟ್ಟು
ಲೋಕವನ್ನು ನೋಡಲು ಬಿರಿಯ ಬಯಸಿತು
ಹಿಮಮಣಿಯೊಂದು ಮುತ್ತಿಕ್ಕಿ
ತಂಪೆರೆಯುತ್ತಿತ್ತು ಮುದದಿಂದಲಿ
ದಿಗುತಟದಲಿ ಕಣ್ಣ ತೆರೆದ ಹಗಲಿನಕ್ಷಿಯ
ಕೆಂಪುವರ್ಣವು ತರುವಿನ ಶಿಶುವಿಗೆ ಸುಪ್ರಭಾತ ಹಾಡಿತ್ತು
ನಗುತ ನಗುತ ಅರಳಿತು ಕುಸುಮವು
ಹಿಮಮಣಿಯ ತುಟಿಯು ಸೋಂಕಿ ಪರಿಮಳವ ಪಸರಿತು
ಸೃಷ್ಟಿಸಿದ ಬ್ರಹ್ಮನೇ ಕುಸುಮ ಸೌಂದರ್ಯಕೆ
ಮನಸೋತು ಮರಿದುಂಬಿಯಾಗಿ ಮಧುವ
ಹೀರಲು ಬಯಸಿ ಹಾರಿಬಂದನು

||ಸು-ರತ||

ಹೇಳು ಗೆಳೆಯ! ಯಾರಿಹರು ಈ ಜಗದಲ್ಲಿ
ತಮ್ಮಾತ್ಮ ಸೌಂದರ್ಯವ ಎರಕ ಹೊಯ್ಯದವರು?
ಲೋಕದಲ್ಲಿ ಪುರುಷ-ಸ್ತ್ರೀ ಸುರತಿಯಿಂದಲಿ
ಭಾಹ್ಯ ಸೌಂದರ್ಯದ ಛಾಯೆ ಬಿಟ್ಟು ಹೋಗುವರು
ದಿನಕರ-ಭೂಮಿಯ ಸುರತಿಯಿಂದಲೆ
ಜನಿಸಿದವರು ಭೂಮಿಯ ಸಕಲ ಜೀವಗಳು
ಸಂನ್ಯಾಸಿಗಳೆಂದರೆ ಪ್ರಶ್ನಾರ್ಥಕವೇ?
ಭಾವ-ಮನಸ್ಸು-ಜ್ನಾನಗಳ ನಡುವೆ ಸುರತದಿಂದಲೇ
ಜನಿಸಿದವು ಎಲ್ಲಾ ದರ್ಶನಗಳು, ತತ್ವಗಳು ಜಗದಲಿ
ಲೌಕಿಕರೋ, ಜ್ನಾನಿಗಳೋ, ಚಾರ್ವಾಕರೋ
ಯಾರನೂ ಬಿಟ್ಟಿಲ್ಲ ಈ ಸು-ರತ
ಎರಕ ಹೊಯ್ಯುವ ಕಾಯಕ ನಿಂತಿಲ್ಲ ಈ ತನಕ
ಸು-ರತವಿಲ್ಲದ ಜೀವನ ಎಲ್ಲಿದೆ ಈ ಜಗದಲಿ?
ಕಾಲದ ಸು-ರತವೇ ಭೂತ-ಭವಿಷ್ಯತ್-ಪರಿವರ್ತನೆ

Saturday, December 18, 2010

||ನಾಳೆ ಬರೆಯೋಣ||

ಯೋಚಿಸಿದೆ ಇಂದು ಬರೆಯೋಣವೆಂದು
ಆಫೀಸಾಗಲಿ ಸಂಜೆ ನೋಡೋಣವೆನಿಸಿತು
ಮುಸ್ಸಂಜೆಯಲಿ ಏಕಾಂಗಿ
ಚಿತ್ತ ಎತ್ತಲೋ ಹೊರಟಿದೆ
ರಾಜಕೀಯದ ಕಾಲೆಳೆತ
ಮನಸು ಜಾರಿ ಬಿತ್ತು
ರಾತ್ರಿಯಾಗಲಿ ಬರೆಯೋಣವೆಂದು
ರಾತ್ರಿಯ ಚಂದ್ರಮನ ತಂಪುಕಿರಣ
ಏಕಾಂಗಿ ಬೇರೆ ಜೊತೆಗೆ ನಾಳೆಯ ಚಿಂತೆ
ಬೇಗ ಮಲಗೋಣ ನಾಳೆ ಬರೆಯೋಣವೆಂದು

ನಾಳೆ ಕಳೆಯಿತು
ನಾಳಿದ್ದು ಕಳೆಯಿತು
ಪಕ್ಕದ ಮನೆಯ ಹುಡುಗಿ ಆಗಲೇ ಋತುಮತಿ
ದಿನ-ರಾತ್ರಿ ಕಳೆದದ್ದು ಅದೆಷ್ಟೋ
ಆದರೂ ಅನಿಸಿತು ನಾಳೆ ಬರೆಯೋಣವೆಂದು
ಸಂಬಳ ಖಾಲಿಯಾಗಿತ್ತು
ತಿಂಗಳು ತಿಂಗಳು ಕಳೆದು
ಈಗ ನನ್ನವಳು ಗರ್ಭಿಣಿ
ಮನಕೆ ಚಿಂತೆ- ಅನಿಸಿತು ನಾಳೆ ಬರೆಯೋಣವೆಂದು

Monday, December 13, 2010

||ನನ್ನ ಕೋಗಿಲೆ ಹಾಡುತ್ತಿಲ್ಲ||

ನನ್ನ ಕೋಗಿಲೆ ಹಾಡುತ್ತಿಲ್ಲ
ಏಕೆ ನೀವು ಬಲ್ಲಿರಾ?


ಮುಂಜಾವಿನ ರಸ ಗಳಿಗೆಯಲಿ
ರಾಗರವಿಗೆ ಸುಪ್ರಭಾತ ಹಾಡ ಹೇಳಿ
ಕವಿಯದರ ಮಧುರತೆಯಲಿ ತೇಲಿ
ದಿನದ ಕಾಯಕಕ್ಕೆ ಅದುವೆ ಲಾಲಿ

ಮಧುರತೆಗೆ ಮನಸೋತು
ಕಾಲವು ಮುಂದೆಹೋತು
ನೆನಹು ಭಾವ ನಲ್ಮೆ ಹೂತು
ಭಾವ ಬೆಸುಗೆ ಮನದಲಿ ಮೂಡಿತು

ಇಂದು ಹಾಡ ಇಂಪು ಕೇಳಿಸದು
ಕವಿಯ ಮನಸು ಬೆದರಿಹುದು
ಯಾರ ಕೇಳಲಿ? ಎಲ್ಲಿ ಹುಡುಕಲಿ?
ಹೃದಯ ಭಾರ ಭಾವಬಿಂದು
ಮನುಸು ಅದನು ಕೇಳದು

||ಗುರು||

ಲೋಕದೊಳು ಬಹುಮಂದಿ
ಜೀವನದಲಿ ಬೆಂದು
ಹದವಾಗಿ ಬೆಳೆದು
ಮಿತವಾಗಿ ಮಣಿದು
ಶ್ರೀವಾಣಿ ಸಂಗದಲಿ ಬಲುಬಂಧಿ

ನಿತ್ಯವೂ ಸಾಧನೆಯ ತಪವು
ಚೈತನ್ಯದ ಒಲವು
ಬರಲೆಮಗೆ ಎದುರಿಸುವ ಬಲವು
ಸಾಧಿಸುವ ಛಲವು
ದಾರಿತೋರು ಜಗದೊಳಗೆ ಪರಮ ಗುರುವೇ

ಬಾಳಿನಲಿ ಜ್ಜಾನ ಜ್ಯೋತಿಯ ಹಚ್ಚಿ
ಯೋಗ ಜ್ಜಾನದ ರೆಕ್ಕೆಯ ಬಿಚ್ಚಿ
ಕನಿಕರಿಸು ಕಾರುಣ್ಯವಾ ಚುಚ್ಚಿ
ಕ್ರಾಂತಿಯ ಕಹಳೆಯ ಊದು ಬಾ ಸಚ್ಚಿ-
ದಾನಂದ ಸ್ವರೂಪನೇ ಎಚ್ಚ-
ರಿಸು ಬಾ ಪರಮ ಗುರುವೇ

ಹುಟ್ಟಿದಾ ಜೀವ
ಎತ್ತ ಹೋಗದು ಇಲ್ಲಿ
ಬೆಳೆಬೆಳೆದು ಏರುವುದು ದಿಗಂತಕ್ಕೆ
ನಿಮ್ಮ ಯೋಗದಾ ಫಲವ
ಜೀವದಾ ಮೇಲಿಟ್ಟು ಹರಸಿ
ಜೀವನವ ಉದ್ಧರಿಸೋ ಪರಮಗುರುವೇ

Thursday, December 9, 2010

||ಸಂಜೆಯ ಕಣ್ಣೀರು||

ನಾನೊಂದು ಸಂಜೆ ಬೇಸರವ ಕಳೆಯಲು
ಸಮುದ್ರದ ದಂಡೆಗೆ ಹೋರಟುನಿಂತೆ
ಮುಗಿಲಾಚೆ ಮೋಡಗಳು ಬಾ...ಬಾ.. ಎಂದು ಕರೆಯುತ್ತಿತ್ತು


ಮರಳ ಮೇಲೆ ನಡೆವಾಗ ಚಿತ್ತ
ಮತ್ತೇನನ್ನೋ ಯೋಚಿಸಿ ಬೇಸರಿಸುತ್ತಿತ್ತು

ಬಿಸಿಯಾ ಬೇಗೆಗೆ ನೊಂದೊಂದು ಹಕ್ಕಿ
ಏಕಾಂಗಿಯಾಗಿ ಇನಿಯನ ಅರಸುತ್ತಿತ್ತು

ದಿನದಾಟ ಮುಗಿಯಿತೆಂದು
ಹಕ್ಕಿಗಳ ಹಿಂಡೊಂದು ಗೂಡು ಸೇರುವ ತವಕದಲ್ಲಿತ್ತು
ತಾಯಿ ಹಕ್ಕಿಯೊಂದು ಮಗುವ ಜೊತೆಗೂಡಿ
ತಂದೆಯ ನಿರೀಕ್ಷೆಯಲ್ಲಿತ್ತು

ಹಿರಿಯ ಹಕ್ಕಿಯೊಂದು ಕಿರಿಯ ಹಕ್ಕಿಗೆ ನೋವಿನ
ಕಥೆಯ ಹೇಳುತ್ತಿತ್ತು
ಕಿರಿಯ ಹಕ್ಕಿ ಪ್ರೀತಿಯ ಗರಿಯ ಬಿಚ್ಚಿ
ಮುದದಿ ಮನವ ಹದವಗೊಳಿಸುತ್ತಿತ್ತು
ಕರಿಮೋಡ ಕಣ್ಣೀರಾಗಿ ಬಾನಿನಿಂದ ಜಾರುತ್ತಿತ್ತು

||ಸತ್ಯ-ಮಿಥ್ಯ||

ಸೂರ್ಯಾಸ್ತದ ರಕ್ತವರ್ಣ
ನಾಳೆಗೆ ಮುನ್ನುಡಿ
ಕಹಿನೆನಪುಗಳ ಕರಾಳವರ್ಣ
ಕಳೆದದಿನಗಳ ಹಿನ್ನುಡಿ
ನಾಳೆಯು ಬರಲಿ.....
ಸಂತಸ ತರಲಿ.....


ಸಾಗರದಲೆಗಳ ಮಾರ್ಧನಿಯ ಲಹರಿ
ನಾಳೆಯ ಜೀವನಕೆ ಮುನ್ನುಡಿಯ ಶಾಯರಿ
ಹೋದವರು ಕೆಲವರು ಮರಳಿಬಾರರು
ಮಿಥ್ಯ ಜೀವನದ ಭಾಗೀದಾರರು
ಹಿರಿಯರ ಜೀವನ ಸಂಧ್ಯೆಯ ತಿಳಿಹಾಸ
ಎಳೆಯರ ನಾಳೆಗಳ ಮಂದಹಾಸ

Wednesday, December 8, 2010

||ಸುನಾಮಿ||


೨೫ರ ಸಂಜೆ ಎಲ್ಲವೂ ಎಂದಿನಂತೆ
ಬೆಳಿಗ್ಗೆಯಿಂದ ಸಂಜೆಯವರಿಗೂ ಸಾಗಿತ್ತು
ನಿರಂತರ ಆಮೀಷಗಳ ಮತಾಂತರ
"ಮೆ ಆಲ್ ಬಿ ಒನ್" ಧೀರ್ಘಗೊಂಡ
ಅಸಹ್ಯವಾದ ಸಂಖ್ಯಾಬಲದ ಆಸೆಯಿಂದ
ಬಿಳಿ-ಕಂದು-ತಿಳಿನೀಲಿ ಗೌನುಗಳು
ಕನ್ಯಾಸೆರೆಯ ಕಳೆದುಕೊಂಡ ಕನ್ಯೆಯರು
ಹೊಟ್ಟೆಗೆ ಹಸಿವಿನ ಕಾವಿಟ್ಟ ಬಡಜನತೆಗೆ
ಕೊರಳಿಗೆ ಶಿಲುಬೆಯ ನೇಣುಬೀಗೆ
ಮತ್ತೆ ಗುಲಾಮಗಿರಿಯ ಛಾಯೆ......
ಬಡಿದೊಡಿಸಲು ಕಾಯುತ್ತಿತ್ತೇ ಕಾಲ
ಹರಿದ ಪ್ರಾರ್ಥನೆಯ ಗುನುಗು ನಿಂತಿರಲಿಲ್ಲ
ಧರೆ ನಿನ್ನೊಡಲು ಸಮುದ್ರದ ನೀರಿದ್ದರೂ
ತಣಿಯಲ್ಲಿಲ್ಲವೇ ಏಕೆ ಕ್ರೋಧಗೊಂಡೆ?
ಏಕೆ ಗುಡುಗಿದೆ? ಏಕೆ ನಡುಗಿದೆ?
ನಿನ್ನ ಕ್ರೋಧದ ಜಲಾಗ್ನಿಯೇ............"ಸುನಾಮಿ"
ಬಡವ-ಬಲ್ಲಿದ-ಹಿಂದೂ-ಮುಸ್ಲಿಂ-ಕ್ರಿಚ್ಚಿಯನ್ ರೆನ್ನದೆ
ನವ ತಾಂತ್ರಿಕತೆಗೆ ಸವಾಲೆಸದು
ವಿಜ್ಜಾನದ ಜಿಜ್ಜಾಸೆಯ ನುಂಗಿದೆಯಲ್ಲ
ಲಕ್ಷಾಂತರ ಜನರ ಬಲಿತೆಗೆದುಕೊಂಡೆಯಲ್ಲ
ನಿನ್ನ ನಡತೆ ಸಹ್ಯವೇ?ಮತ್ತೇ ನಿರಾಳವಾಗಿ...
ಚೇತನದ ಆಗರವಾಗಿ.....
ಅಲೆಅಲೆಯಲ್ಲಿ ಬದುಕಿನ ಏರಿಳಿತಗಳ ಬಿಂಬಿಸುತ್ತಿರುವೆಯಾ?
ಮತ್ತೆ ಎಲ್ಲವೂ ಎಂದಿನಂತೆ......... ನಿರಂತರ ಆಮೀಷಗಳು
ಬದುಕು-ಸಾವುಗಳು ಹೋರಾಟದ ನಡುವೆಯೂ
ತಮ್ಮ ಮತವ ಸೇರಿದರೆ ಸವಲತ್ತುಗಳ...ಆಮೀಷ....
.........ಮತಾಂತರ.....ನಿರಂತರ....



(ಕವಿತೆ ಬರೆದ ಹಿನ್ನೆಲೆ: ಹಲವು
ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ. ಈ ಕವಿತೆ ಬರೆದು ತುಂಬಾ ವರ್ಷಗಳಾದರೂ ಅಂದು ನಡೆದ ಅಲ್ಲಿನ ಜನರ ಸಂಕಷ್ಟಗಳಿಗೆ ಬಹಳಷ್ಟು ಮಂದಿ ಸ್ಪಂದಿಸುತ್ತಿದ್ದರೂ ಕೆಲವು ಮತೀಯ ಗುಂಪು ಜನರ ಸಂಕಷ್ಟದ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬಯಸಿ ಜನರಿಗೆ ಆಮೀಷಗಳನ್ನು ಒಡ್ಡಿ ತಮ್ಮ ಮತಕ್ಕೆ ಸೆಳೆಯಲೆತ್ನಿಸಿದ ಸಂಗತಿಗಳನ್ನು ಓದಿ,ನೋಡಿ ,ನೊಂದು ಈ ಕವಿತೆಯನ್ನು ಬರೆದೆ.)

Monday, December 6, 2010

ಮೌನಕ್ಕೆ ಶರಣು

ಏಕೆ ಮೌನಕ್ಕೆ ಶರಣಾಗಿರುವೆ ರಾಧೇ?
ಬೃಂದಾವನವೆಲ್ಲಾ ಶೋಕದಲ್ಲಿ ನರಳಿದೆ
ನಿನ್ನ ಮೌನ ಕಂಡು\\

ಚೈತನ್ಯದ ಚೆಲುವು ನೀನು
ಪುಷ್ಫಗಳ ಸುಗಂಧವು ನೀನು
ತಂಗಾಳಿಯ ತಂಪು ನೀನು
ಇಂದೇಕೆ ಚೈತನ್ಯ ಮರೆಯಾಗಿದೆ ಹೇಳು ನೀನು\\

ನಮ್ಮೆಲ್ಲರ ಸಖಿಯು ನೀನು
ಬೃಂದಾವನದ ಚೆಲುವು ನೀನು
ಶ್ಯಾಮನ ಪ್ರಾಣವು ನೀನು
ಇಂದೇಕೆ ಮೌನಕ್ಕೆ ಮನಸೋತೆ ಹೇಳು ನೀನು\\

ಹೇಳು ಮನದ ನೋವನು
ನಿನ್ನ ನೋವು ನಮ್ಮದೇ ಹೇಳು ನೀನು
ಶ್ಯಾಮನಿಲ್ಲ ಬೃಂದಾವದಲ್ಲಿ ತಿಳಿದೆವು ನಾವು
ಬಂದ ಭಾಗ್ಯವು ಕೆಲಸ ಮುಗಿಸಿ ಹೊರಟು ಹೋಯಿತು\\

ಸಮಾಧಾನವಿರಲಿ ಗೆಳತಿ
ಮಧುರ ನೆನಪುಗಳ ಅವ ಬಿಟ್ಟು ಹೋದನಲ್ಲಾ
ಹೇಳದೇ ಬಂದ ಮಧುರ ನೋವು ಹೇಳದೇ ಹೋಯಿತಷ್ಟೆ
ಶ್ಯಾಮ ನಮ್ಮೊಡನಿದ್ದನೆಂಬುದೇ ನಮಗೆಲ್ಲಾ ಹರುಷವಷ್ಟೇ ಗೆಳತಿ\\

ಜೀವನದ ಪಾಠ ಕಲಿಸಿದ ಗುರು ಅವನು
ನಮ್ಮ ತಪ್ಪು-ಒಪ್ಪುಗಳನ್ನೆಲ್ಲಾ ತಿದ್ದಿ ತೀಡಿದ ಗೆಳೆಯ ಅವನು
ಆತ್ಮದ ಕಣ್ಣು ತೆರೆಸಿದ ಸ್ವಾಮಿ ಅವನು
ಜೀವನದಲ್ಲಿ ಇದ್ದರೂ ಇಲ್ಲದಂತೆ ಇರುವುದ ಕಲಿಸಿ ಮೋಹವ ತೊಳೆದ ಮನ ಮೋಹನ ಅವನು\\

Friday, December 3, 2010

||ಆಹ್ವಾನ||

ಧರ್ಮ-ಅರ್ಥ-ಕಾಮ- ಪ್ರೇಮ ಒಲವುಗಳ
ನವಜೀವನದ ಸುಂದರ ಭವಿತವ್ಯಕ್ಕೆ
ನಾವು ಹೆಜ್ಜೆಯನ್ನಿಡುವ ಈ ಶುಭ ಸಂದರ್ಭದಲ್ಲಿ
ಹಿರಿಯ-ಕಿರಿಯ ಸಮಾನ ವಯಸ್ಸಿನ
ತಮ್ಮೆಲ್ಲರ ಸಮ್ಮುಖದಲ್ಲಿ ಭಾವುಕರಾಗಿ ಪ್ರಾರ್ಥಿಸುವೆವು.........


ನಮ್ಮಲ್ಲಿ ಚಿರಂತನ ಹುಮ್ಮಸ್ಸು,
ಕಷ್ಟ-ದುಃಖವನ್ನೆದಿರಿಸುವ ಆತ್ಮಸ್ಥೈರ್ಯ,
ಸತ್ಯವನ್ನರಸುವ ತಾಳ್ಮೆ, ವಿವೇಕ,
ಅಮೃತತ್ವದೆಡೆಗೆ ಒಯ್ಯುವ ಬೆಳೆಕಿನ ಜ್ಜಾನ,
ಶಾಂತಿ ನೆಮ್ಮದಿ ಆಯುರಾರೋಗ್ಯ
ಸಕಲೈಶ್ವರ್ಯಗಳ ಸಹ ಜೀವನದಲ್ಲಿ ಸಾಧಿಸುವ ಛಲ,
ಜೀವನ ವಿಕಾಸ ಬದುಕು ಬಂಗಾರಗೊಳಿಸಿಕೊಳ್ಳುವ ಏಕಾಗ್ರತೆ-ಶಕ್ತಿ ಪ್ರಾಪ್ತವಾಗಲಿಯೆಂದು ಹೃದಯಪೂರ್ವಕವಾಗಿ ಹರಸ ಬನ್ನಿರೆಂದು ಆತ್ಮೀಯವಾಗಿ ಆಹ್ವಾನಿಸುವ...........

|| ಗೀಜಗ||

ಜಗವೇ ನೀನೆಷ್ಟು ಸುಂದರ
ನಿನ್ನ ಸೃಷ್ಟಿಯ ಪ್ರತಿ
ಜೀವಿಯೂ ಇಲ್ಲಿ ಕಲೆಗಾರ
ಮೂರ್ಜಗವು ಮೆಚ್ಚೋ ವಾಸ್ತು ಈ ಗೀಜಗ

ಸುಂದರ ಪ್ರಕೃತಿಯಾಗ
ಎಂಥ ಚಲೋ ಮನೆ ಕಟ್ಟಿಯಲ್ಲೋ
ಪ್ರೀತಿಯ ಜೀವನದ ಗೆಳತಿಯ
ದಾರಿ ಕಾಯುತಾ ಕುಳಿತಿಯೇನೋ?

ಎಲ್ಲೆಲ್ಲೂ ಹೋತದ ಗಡ್ಡದ
ಲಾಡನ್ನಿನದೇ ಭೀತಿ
ಎಚ್ಚರಿಕೆಯಿಂದಿರೋ ನೀ
ನಿನ್ನ ಬಂಗಲೆಗೂ ಬಾಂಬಿಟಾನೋ!

ಬಿಡಿಗಾಸು ಇಲ್ಲದ ನನಗೆ
ನಿನ್ನ ವಾಸ್ತುವಿನ ಮನೆಯ
ಕಟ್ಟಿ ಕೊಡುವೆಯೇನೋ
ಮೂರ್ಜಗವು ಮೆಚ್ಚೋ ವಾಸ್ತು ಈ ಗೀಜಗ

ದಾರಿದೀಪ

  ಆಳವಿಲ್ಲದ ಭಾವ , ಮುಗಿಲೆತ್ತರದ ಭಾವ , ನಗುವೊಮ್ಮೆ , ಅಳುವೊಮ್ಮೆ , ಬಳಲುವೆನು , ಬದಲಾಗುವೆನು , ಪ್ರೀತಿಸುವೆನು , ದೂರ ತಳ್ಳುವೆನು , ಸವಿಯುವೆನು , ದ...