Sunday, September 29, 2013

ದೇವರ ದುಡ್ಡು

ಕುಕ್ಕೆ ಸುಭ್ರಮಣ್ಯ;
ಶಿರಡಿ
ತಿರುಪತಿ
ಅನಂತ ಪದ್ಮನಾಭ ದೇವಸ್ಥಾನದ
ಬಂಗಾರ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಯೋಚನೆ
ಎಷ್ಟಾದರೂ ದೇವರ ದುಡ್ಡು ,ಸರ್ಕಾರದ ದುಡ್ಡು;

ಇಲ್ಲಿ ಜನಶೇವೆಯೇ ಜನಾರ್ಧನನ ಸೇವೆ
ಜನರ ಸೇವೆ ಮಾಡುವ ಅಗತ್ಯವೇ ಇಲ್ಲ;
ಏಕೆಂದರೆ ದೇವರೇ ಇಲ್ಲವೆಂದುಕೊಂಡಿದ್ದಾರೆ ಸರ್ಕಾರದವರು
ಜನಸೇವೆ ಮಾಡಿದರೂ ಅಷ್ಟೆ, ಬಿಟ್ಟರೂ ಅಷ್ಟೆ
ಎಷ್ಟಾದರೂ ಸರ್ಕಾರಿ ಕೆಲಸ, ದೇವರ ಕೆಲಸ.

ಸಿದ್ಧತೆ

ಎಲ್ಲಕ್ಕೂ ಸಿದ್ಧನಿದ್ದೇನೆ
ಮನಃಪೂರ್ವಕವಾಗಿ ಅನುಭವಿಸಲು
ನನ್ನ ತಪ್ಪುಗಳಿಗೆ
ನನ್ನದಲ್ಲದ ತಪ್ಪುಗಳಿಗೆ
ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ;

ಮನದ ಭಾವಗಳ ಹೊರಹಾಕಿದ್ದಕ್ಕೆ
ಸತ್ಯದ ನುಡಿಗಳ ಹೇಳಿದ್ದಕ್ಕೆ
ಅಸತ್ಯವನ್ನು ಸತ್ಯವಲ್ಲವೆಂದು ಹೇಳಿದ್ದಕ್ಕೆ
ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದಕ್ಕೆ
ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ;

ಏರಿಕೆ

ನಿದ್ದೆಯಿಂದ ಎದ್ದೆ
ಮತ್ತೊಂದು ಹೊಸದಿನವೆಂದು;
ದಿನಪತ್ರಿಕೆಯ ಸುದ್ದಿ
ದಿಗಿಲು ಬರಿಸುವಂತೆ ಇತ್ತು;
ಬಂಗಾರದ ಬೆಲೆ ಅಂತರಿಕ್ಷದ
ಹಾದಿ ಹಿಡಿದಿತ್ತು;
ಡೀಸಲ್,ಪೆಟ್ರೋಲ್,ಗ್ಯಾಸ್
ದಿನ ಬಳಕೆಯ ಬೆಲೆಗಳ ಸಾಲು ಸಾಲು....
ನಾವೇನೂ ಕಡಿಮೆಯಿಲ್ಲವೆನ್ನುತ್ತಿತ್ತು;
ರುಪಾಯಿ ಹ್ಯಾಪ್ ಮೋರೆ ಹಾಕಿತ್ತು
ಗಗನಕ್ಕೇರುವ ಬದಲು
ಪಾತಾಳಕ್ಕಿಳಿಯುತ್ತಿತ್ತು ಡಾಲರ್ ಎದುರು;
ನಮ್ಮ ಆಳುವವರಿಗೆ ಬೆಲೆ ಏರಿಕೆಗೆ
ಮತ್ತೊಂದು ಕಾರಣ ಸಿಕ್ಕಿತ್ತು;

Sunday, September 22, 2013

ಹೆಜ್ಜೆ

ಹಿಂತಿರುಗಿ ನೋಡಿದೆ ಮತ್ತೆ ಮತ್ತೆ
ನಡೆದು ಬಂದ ದಾರಿ;
ಪಡೆದ ನೋವು;
ನಗು ನಗುತಾ ಅನುಭವಿಸಿದೆ
ಚುಚ್ಚುಮಾತುಗಳ ಬೆಲೆಕೊಡದೆ ಹೆಜ್ಜೆ ಹೆಜ್ಜೆಗೆ.....

ಈಗಲೂ ಅದೇ ನೋವು
ಪಾತ್ರಗಳು ಮಾತ್ರ ಬದಲಾಗಿದೆಯಷ್ಟೆ
ಅದೇ ಹೆಜ್ಜೆಗಳು;
ಅದೇ ಹೆಜ್ಜೆ ಗುರುತುಗಳು;
ಮಾಸದ ನೆನಪುಗಳು ಹೆಜ್ಜೆ ಹೆಜ್ಜೆಗೆ.....

Friday, August 30, 2013

ಎಚ್ಚರ ಅಥವಾ ನಿದ್ರೆ

ಪ್ರತಿದಿನವೂ ಯೋಚಿಸುತ್ತೇನೆ
ಒಂದಷ್ಟು ಆಳ ಹಾಗು ಸುಂದರವಾದುದನ್ನು ನಿದ್ರೆಗೆ ಜಾರುವ ಮುನ್ನ;
ಮುಖದಲ್ಲಿ ಮಂದಹಾಸ ಹಾಗು
ಮನದಲ್ಲಿ ಶಕ್ತಿ ತುಂಬುವುದು ಮತ್ತೊಂದು ದಿನ ಸವೆಯಲು;
ಏಕೆ ಈ ದಿನ ತೆವಳುತ್ತಿದೆಯೋ
ಸಿಹಿಯಾಗಿರದಿದ್ದ ಮೇಲೆ......

ಪ್ರೇರಣೆ: Awake or Asleep by Neha.

ಬದುಕಿನ ಧ್ಯಾನ....

ನಾವು ಏಕೆ ಪ್ರಾರಂಭಿಸುತ್ತೇವೆ
ಕೊನೆಗೊಳಿಸುವ ಯೋಜನೆಯೇ ಇಲ್ಲದ ಮೇಲೆ;
ನಾವು ಏಕೆ ಪ್ರೀತಿಸುತ್ತೇವೆ
ನೋವಾಗುವುದು ನಮಗೆ ಬೇಕಿಲ್ಲದ ಮೇಲೆ;
ನಾವು ಏಕೆ ಬದುಕುತ್ತೇವೆ
ಕೊನೆಗೊಂದು ದಿನ ಸಾಯಲೇಬೇಕೆಲ್ಲ;
ನಾವು ಎಕೆ ನಗುತ್ತೇವೆ;
ಮನದೊಳಗೆ ನೋವಿನ ಜ್ವಾಲೆ ಸುಡುತ್ತಿರುವಾಗ;
ನಾವು ಏಕೆ ಮುಖ ಸಿಂಡರಿಸುತ್ತೇವೆ
..........

ಪ್ರೇರಣೆ: Pondering life,Why by Helen Grandison.

Monday, August 5, 2013

ಹೆಣ್ಣು-ಕಣ್ಣು

ಏಕೆ ಅಳುವೆ?
ಏಕೆ ಆಳುವೆ?
ಓ ನನ್ನ ಒಲವೇ!

ನಾನು ಹೆಣ್ಣು
ನಾನು ಹೆಣ್ಣು
ಸಂಸಾರದ ಕಣ್ಣು

ನಾನು ನೋವು
ನಾನು ನೋವು
ಭೂತಾಯಿಯ ಮಗಳು

ಅರ್ಥವಾಗಲಿಲ್ಲ ಮಾತು
ಅರ್ಥವಾಗಲಿಲ್ಲ ಮಾತು
ರಹಸ್ಯ ಮನದ ಮಾತು

ಕಾರಣವಿಲ್ಲದೆ ಈ ಕಣ್ಣೀರು
ಕಾರಣವಿಲ್ಲದೆ ಈ ಕಣ್ಣೀರು
ಸುಖದಲಿ ಬಾಳು

ಬೇಕಿಲ್ಲ ಅಳುವಿಗೆ ಕಾರಣ
ಬೇಕಿಲ್ಲ ಅಳುವಿಗೆ ಕಾರಣ
ಬದುಕಿನ ಹೂರಣ

ಅಪರಾಧ

ಮನದ ನೋವ ಹೇಳಬೇಡ ಗೆಳೆಯ ಹೇಳಬೇಡ
ಹಲವರಿಗೆ ನೋವಾಗುವುದು ಅಪರಾಧವದು ಗೆಳೆಯ
ಅಪರಾಧಿಯಾಗಬೇಡ ಗೆಳೆಯ||

ನಿನ್ನ ಮನದ ಭಾವಗಳೇನೇ ಇರಲಿ
ನಿನ್ನಲ್ಲೇ ಸಾಯಲಿಬಿಡು
ನಿನ್ನ ಮನದ ನೋವಿಗೆ ಬೆಲೆಯಿಲ್ಲ ಬಿಡು
ನಿನ್ನ ಮನದ ನೋವಿಗಿಂತ
ಹಲವರ ನೋವಿಗೆ ಬೆಲೆಕೊಡು ಗೆಳೆಯ||

ನಿನ್ನ ಮನದ ನೋವುಗಳಿಗೆ ನೂರು ಕಾರಣವಿರಲಿ
ನಿನ್ನಯ ಕಾರಣಗಳು ನಮಗೆ ಬೇಡ
ಮನದ ಭಾವಗಳ ಹತ್ತಿಕ್ಕಲಾರದವ ನೀನು
ನಿನ್ನ ಭಾವಗಳ ನೆಲೆಯ ಮೇಲೆ
ಹಲವರು ಕುಣಿದಾಡಲಿ ಬಿಡು ಗೆಳೆಯ||

ನೋವಾಗಿದೆ ಎಂದು ಹೇಳಬೇಡ ಗೆಳೆಯ
ನೋವ ಹೇಳಿಕೊಳ್ಳುವ ಹಕ್ಕು ನಿನಗಿಲ್ಲ ಬಿಡು
ನಿನ್ನ ಪ್ರಶ್ನಿಸುವ ಹಕ್ಕು ಹಲವರಿಗಿದೆ ಗೆಳೆಯ
ವಾಕ್ಸ್ವಾತಂತ್ರ್ಯ,ಅಭಿವ್ಯಕ್ತಿ ಸ್ವಾತಂತ್ರ್ಯ ಹಾಸ್ಯಾಸ್ಪದ ಗೆಳೆಯ||

ಪ್ರೀತಿ-ವಿಶ್ವಾಸ ನೆಲೆಕಳೆದು ಕೊಂಡಿದೆ
ಮಾತು, ಮನದ ನೋವುಗಳೆಲ್ಲಾ ಗಾಳಿಯಲಿ ತೂರಲಿ ಗೆಳೆಯ
ಠೀಕೆ-ಟಿಪ್ಪಣಿಗಳಿಗೆ ಮರುಗಬೇಡ ಗೆಳೆಯ
ಕಣ್ಣೀರ ಹನಿಗಳಿಗೆ ನೋವು ಕಡಿಮೆಮಾಡುವ ಶಕ್ತಿಯಿದೆ
ನೋವುಂಡವರ ಹೃದಯವ ತೊಳೆಯಲು ಸಿದ್ಧನಾಗು ಗೆಳೆಯ||

ಮೌನಿಯಾಗು,ಮೂಕನಾಗು
ಚೈತನ್ಯವಿಲ್ಲದ ಜೀವಶವವಾಗು
ಮನದ ನೋವು ಹೇಳಿಕೊಳ್ಳುವುದು ಅಪರಾಧ ಗೆಳೆಯ
ಅಪರಾಧಿಯಾಗಬೇಡ ಗೆಳೆಯ
ಮನದ ನೋವ ಹೇಳಬೇಡ ಗೆಳೆಯ
ಹೇಳಬೇಡ ಗೆಳೆಯ||

Friday, July 19, 2013

ಕೊಳಕು ಮಾತು

ಒಮ್ಮೆ ಬೀದಿಯಲ್ಲಿ ನಡೆವಾಗ,
ಅದೇ ಬಿಳಿಗೌನು ದರಿಸಿದ ಅವನು ಎದುರಾದ;
ಇದೇನು ಮೊದಲ ಭೇಟಿಯಲ್ಲ ನಮ್ಮದು;
ನಮ್ಮಿಬ್ಬರ ಮಾತುಕತೆಗೆ ಬಣ್ಣ ಬಳಿಯುವ ಅಗತ್ಯವಿಲ್ಲ
ಏಕೆಂದರೆ ಎರೆಚಿದ ಬಣ್ಣವೇ ಮಾಸುತ್ತಿದೆ,ಹೊಸತರ ಅಗತ್ಯವಿಲ್ಲ
ಅವನೋ ಸಭ್ಯತೆಯ ಸಾಕಾರ ಮೂರ್ತಿ-ಮುಖವಾಡ;
ನಾನೋ ವ್ಯಭಿಚಾರದ ನಿರ್ಮಲ ಪರಿಮಳ;
ಸಭ್ಯರಿಗೆ ನಮ್ಮ ಮಾತುಗಳು ಕೊಳಕೆನಿಸಬಹುದು
ಕೊಳಕು ಎಲ್ಲಿಲ್ಲ ಹೇಳಿ? ಎನ್ನುವುದೇ ನನ್ನ ಪ್ರಶ್ನೆ ಅವರಿಗೆ;
ನೇರಾನೇರ ಬಿಡುಗತ್ತಿಯ ನುಡಿಗಳು ನಮ್ಮವು
ಆಶ್ಚರ್ಯ, ನೋವಾಗಬಹುದು ಕೇಳುಗರಿಗೆ;
ಕಾಮ ಪಿಶಾಚಿ ಅವನು;
ಬಟ್ಟೆ ಬದಲಿಸಿದಂತೆ ಹೆಣ್ಣುಗಳ ಬದಲಿಸಿದವನು ಅವನು;
ಅವನು ನನ್ನೆದೆಯ ಮೊಲೆಗಳ ಮೇಲೆ ಕಣ್ಣಾಡಿಸಿ ನಕ್ಕು ಹೇಳಿದ
"ನಿನ್ನ ಮೊಲೆಗಳು ಅಂದ ಕಳೆದುಕೊಂಡಿವೆ,ಸೊರಗಿವೆ,ನಿಂತು ನಿಮಿರಲಾರದೆ ಜೋತಿವೆ,
ಆಸರೆ ಬಯಸಿವೆ, ಅವು ಯಾರಿಗೆ ಸುಖ ಕೊಟ್ಟಾವು?;
ಇನ್ನೆಷ್ಟು ದಿನ ರತಿಯ ಮುಖವಾಡ?
ಪೊಗರಿಳಿದ ಮೇಲೆ ಮೂಲೆ ಸೇರಲೇಬೇಕು
ಕೊಳಕು ನೆಲೆಗಳ ಬಿಟ್ಟು ಬಾ
ನನ್ನೊಡನೆ ಬಾ
ದೇವಾಲಯದಲ್ಲಿ ನೆಲೆಗೊಂಡು ನನ್ನೊಡನೆ ಶಾಂತಿಯ ಅರಸು ಬಾ..

ನಾನು ನಕ್ಕೆ ಅವನ ಮಾತುಗಳ ಕೇಳಿ
ನಾನಂದೆ "ಕೆಲಸವಾದ ಮೇಲೆ ಎಲ್ಲವೂ / ಎಲ್ಲರೂ ಸೊರಗಲೇಬೇಕು;
ಅದೇ ಜೀವನ ನಿಯಮ;
ನಿನ್ನದೂ ಅಷ್ಟೆ, ನೀನೇನೂ ಮನ್ಮಥನಲ್ಲ;
ಬೇರೆಯವರ ಅಂಕು-ಡೊಂಕುಗಳ ಮೇಲೇ ನಿನಗೆ ಕಣ್ಣು;
ಲೋಕದ ಜನರಿಗೆ ನಿನ್ನ ಡೊಂಕುಗಳ ಕಾಣುವ ಕಾಲ ಸನ್ನಿಹಿತವಾಗುತ್ತಿದೆ ಎಚ್ಚರ;
ಸಭ್ಯನಂತೆ ಮುಖವಾಡ ಹಾಕಿ ಎಷ್ಟು ದಿನ ನಿನಗೆ ನೀನೇ ಮೋಸ ಮಾಡಿಕೊಳ್ಳುವೆ?
ಕೊಳಕಿನ ನೆಲೆಯಲ್ಲಿ ಸ್ವತಂತ್ರವಾಗಿ ಉಸಿರಾಡಬಹುದು,ನಿರ್ಮಲವಾಗಿ ನರಳಬಹುದು
ಜೀವ ಹೋಗುವವರೆಗೂ.....
ನಾಟಕರಂಗದ ಮೇಲೆ ಬೇರೆಯವರು ಆಡಿಸಿದಂತೆ ಆಡಲು ನನ್ನಿಂದ ಸಾಧ್ಯವಿಲ್ಲ;
ನಿನ್ನ ಸ್ವಾರ್ಥದಲ್ಲಿ ನನ್ನ ಶಾಂತಿ ಅಡಗಿಲ್ಲ;
ಕ್ರೂರಮೃಗ ನೀನು, ನಿನ್ನಿಂದ ಮತ್ತೆ ಚಿತ್ರಹಿಂಸೆಗೆ ಒಳಗಾಗುವ ಆಸೆ ಮತ್ತೊಮ್ಮೆ ನನಗಿಲ್ಲ;
ನಿನ್ನ ರೀತಿ ಶಾಂತಿ ಅರಸುವುದು ಮೂರ್ಖತನ
ಸಭ್ಯತೆಯ ಮುಖವಾಡ ನನಗೆ ಬೇಕಿಲ್ಲ
ಮತ್ತೆ ಬಲಿಪಶುವಾಗಲಾರೆ ನಾ...
ಅವನ ಕಪಾಲಕ್ಕೆ ಹೊಡೆಯಬೇಕೆನಿಸಿತು ಆದರೆ ಮಾಡಲಿಲ್ಲ
ಜೋರಾಗಿ ನಕ್ಕೆ
ಅವನು ನಗಲಿಲ್ಲ
ತುಂತುರು ಮಳೆಯ ಹನಿಗೆ ದೇಹ ಒಡ್ಡುತ್ತಾ
ಹಿತ ಅನುಭವಿಸುತ್ತಾ ಮುನ್ನಡೆದೆ.

ನಿನ್ನ ಚೆಲುವ ಕಂಗಳಿಗೆ

ಎಂಥ ಚೆಲುವು
ಎಂಥ ಚೆಲುವು
ಓ ಹೆಣ್ಣೆ ನಿನ್ನ ಕಂಗಳು
ಮನವ ಸೆಳೆಯುವ ಬೆಳದಿಂಗಳು||

ಆವಲೋಕಕೋ ಸೆಳೆವುದು
ಮೋಡಿಮಾಡಿ ಎಳೆವುದು
ನೆಟ್ಟದೃಷ್ಟಿ ತೆಗೆಯದಂತೆ ಮಾಡುವುದು
ಎಂಥ ಚೆಲುವು ನಿನ್ನ ಕಂಗಳು||

ಆವ ಹೆಸರೋ ಈ ಸೌಂದರ್ಯಕೆ
ಕಾಮಾಕ್ಷಿ ಎನ್ನಲೋ?
ಮೀನಾಕ್ಷಿ ಎನ್ನಲೋ?
ಬೊಗಸೆ ಕಂಗಳೆನ್ನಲೋ?
ಸಾಟಿ ಯಾವುದು ನಿನ್ನ ಚೆಲುವ ಕಂಗಳಿಗೆ?||

ನಿನ್ನ ಕಂಗಳ ಸೌಂದರ್ಯದ ಸೊಬಗಿಗೆ ಏನೆನ್ನಲ್ಲಿ
ಹೆಣ್ಣೆನ್ನಲೋ?
ಭೂರಮೆಯನ್ನಲೋ?
ದೇವಲೋಕದ ಕನ್ನಿಕೆ ಎನ್ನಲೋ?||

ಕಂಗಳಲ್ಲೇ ಮಾತು
ಕಂಗಳಲ್ಲೇ ನೂರು ಸಂದೇಶ
ಭಾವ,ಚೈತನ್ಯ,ಪ್ರೀತಿ-ವಾತ್ಸಲ್ಯದ ಜಲಪಾತ
ಕಂಗಳೆನ್ನಲೋ?
ಸರಸತಿಯೆನ್ನಲೋ?
ಕವಿತೆಯೆನ್ನಲೋ?||

Friday, July 12, 2013

ಅವಳ ಮಾತು ಅರಳು ಹುರಿದಂತೆ

ಅವಳ ಮಾತು ಅರಳು ಹುರಿದಂತೆ
ಏನ ಹೇಳಲಿ ದೊರೆಯೇ?
ಅವಳ ಮಾತಿನಂತೆ ನಡೆಯುವುದು ಹೇಗೆಂದು
ದಿನವೂ ಯೋಚಿಸಿ ಬಳಲಿಹೆನು ಬೆಂಡಾಗಿ
ಹೊಸ ದಾರಿ ಸಿಗದೆ ಅವಳ ಮುನಿಸಿಗೆ ಆಹಾರವಾಗಿಹೆನು||

ನೂರು ಬಾರಿ ಹೇಳಿದೆನು ಬದಲಾಗುವೆನು ನಾನೆಂದು
ಒಮ್ಮೆ ಕೂಡ ಬದಲಾಗದೆ ಹಾಗೇ ಕಾಲ ತಳ್ಳಿದೆನು
ಮುನಿದಾಗ ಅವಳ ಮಾತು ನೆನಪಿಗೆ ಬರುವುದೆನಗೆ
ನಾನು ಬದಲಾಗಬೇಕೆಂದು, ದಾರಿ ಕಾಣದೆ ಮೌನ ಮುನಿಯಾಗುವೆನು||

ಎಷ್ಟು ಸಲ ಹೀಗೆ ನಡೆದಿಹುದೋ ಲೆಕ್ಕವಿಲ್ಲ
ಸಧ್ಯಕ್ಕೆ ಇದಕ್ಕೆ ಪೂರ್ಣವಿರಾಮ ಹಾಕುವ ಕಾಲ ಬಂದಿಲ್ಲ
ಹೀಗೆ ನಡೆಯುತಿಹುದು ನಮ್ಮಯ ಬಾಳ ಪಯಣ
ಅವಳ ಮಾತು ಅರಳು ಹುರಿದಂತೆ,
                ನನ್ನದೋ ಹೂಂ ಗುಟ್ಟುವ ಋಷಿಯಂತೆ||

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...