Saturday, December 17, 2011

ನಕ್ಕು ಬಿಡು


ನಗುತ್ತೇನೆ ಬಹಳಷ್ಟು ಬಾರಿ,
ನಗುವುದಕ್ಕೆ ಕಾರಣಬೇಕೆ?
ಹೌದು! ಕಾರಣಬೇಕು ನಗುವುದಕ್ಕೆ!
ಕಾರಣ ಸಣ್ಣದಿದ್ದರೂ ಸರಿ,
ಸ್ವಾಭಾವಿಕವಾದರೂ ಸರಿ,
ಅಸ್ವಾಭಾವಿಕವಾದರೂ ಸರಿ,
ಬೇರೆಯವರ ತಪ್ಪು ನಮಗೆ ನಗು ಬರಿಸುವುದು,
ಇಂತಹ ನಗು ಬೇರೆಯವರ ಅಪಹಾಸ್ಯ ಎಂಬ ವಿವೇಕ ಇಲ್ಲವಾಗಿದೆ.


ನಗಬೇಕಾದಾಗ ನಕ್ಕುಬಿಡು
ನಮ್ಮಮೊರ್ಖತನಕ್ಕೆ,
ನಮ್ಮ ಮೌಡ್ಯಕ್ಕೆ,
ನಮ್ಮ ದುರಾಸೆಗೆ,
ನಾಳೆ ನಮಗಾಗಿ ಇರುವುದೋ? ಇಲ್ಲವೋ?
ನಗುವುದಕ್ಕೆ ನಮಗೆಲ್ಲಾ ಬಿಡುವು ಬೇಕಿದೆ
ನಮ್ಮ ಆರೋಗ್ಯಕ್ಕೆ ನಗುವು ಬೇಕಿದೆ
"ನಕ್ಕರೆ ಅದೇ ಸ್ವರ್ಗ" ಎಂಬ ಮಾತು ಮರೆತಿದೆ.

Wednesday, December 14, 2011

ನಗುವುದಕ್ಕೆ ಕಾರಣ



ಕಡಿಮೆ ಜನರಿದ್ದಾರೆ,ತಮ್ಮ ನಗುವಿಗೆ ಕಾರಣ ಕೊಡುವವರು
ಅದೂ ಕ್ಷಣ ಮಾತ್ರವೂ ಅಥವಾ ಸ್ವಲ್ಪ ಸಮಯವೂ ಇರಬಹುದು.
ನಕ್ಕರೆ ಅದು ಸಿಹಿಯಾಗಿಯೊ ಮತ್ತು ಪ್ರಾಮಾಣಿಕವಾಗಿರಬೇಕು,
ಅಥವಾ ಬೇರೆಯವರು ಕ್ಷಣ ಮಾತ್ರ ನಗಲೂ ಇರಬಹುದು.

ನನ್ನ ಕಂಗಳಿಗೆ ಕಣ್ಣೀರು ಸುರಿಸುವ ಹವ್ಯಾಸ,
ಆದರೂ ಹಲವು ಸಂದರ್ಭಗಳಲ್ಲಿ ಅದು ಕೇಳಿಸಿಕೊಳ್ಳುತ್ತದೆ,
ಹೃದಯದಿಂದ ಒಂದು ಸುಮಧುರ ನಗುವಿಗೆ ಕಣ್ಣಲ್ಲಿ ಸುರಿವುದು ಕಣ್ಣೀರು.
ಕಣ್ಣೀರು ಹರಿದರೂ ಯಾರೂ ಇಲ್ಲ ನನ್ನ ಸ್ವಾಂತನ ಮಾಡಲು,
ಏಕೆಂದರೆ ತುಟಿಯಲ್ಲಿನ ಒಂದು ನಗುವು ಕೊಡುವುದು ಉಲ್ಲಾಸ ಪ್ರಿಯಾ.

ಪ್ರೇರಣೆ: " A Reason to Smile" by Rekha Nair

Monday, December 12, 2011

ಆದರ್ಶದ ಸಂಕೋಲೆ



ಅಳುತ್ತಲ್ಲೇ ನಿಂತಿದ್ದೆ,
ಅವನು ಹೋಗುವುದ ನೋಡುತ್ತಾ.
ಕಣ್ಣಲ್ಲಿ ನೀರು;
ಹೃದಯದಲ್ಲಿ ರಕ್ತ ಕಣ್ಣೀರು;
ಅಣ್ಣ-ಅತ್ತಿಗೆಯ ಹಿಂದೆ ಹೆಜ್ಜೆ ಹಾಕುತ್ತಾ
ಆದರ್ಶದ ಬೆನ್ನೇರಿ ನೆಡೆಯುತ್ತಿದ್ದ;
ಅರಮನೆಯ ಮಹಾಜನತೆ ಅವರ ಹಿಂದೆ,
ದುಃಖದ ಕಡಲು ಹರಿವಂತೆ;
ನನ್ನ ಮನದಲ್ಲೂ ಅವನಿಗಾಗಿ ಹರಿಯುತ್ತಿತ್ತು
ಕಣ್ಣೀರು ಕಡಲಾಗಿ ಯಾರಿಗೂ ಕಾಣದೇ;
ಬೇಡ,ಬೇಡ ಒಂಟಿಯಾಗಿ ಹೋಗಬೇಡ,
ನನ್ನ ಕೂಗು, ಆರ್ತನಾದ ಅವನಿಗೆ ಕೇಳಿಸಲೇಯಿಲ್ಲ;
”ಅಣ್ಣ" ನೆಂಬ ಆದರ್ಶಕ್ಕೆ ಕೊರಳ ಅರ್ಪಿಸಿದ್ದ;
ನನ್ನ ಪ್ರೀತಿ,ಪ್ರೇಮ,ಕಾಮ,ಭೋಗಗಳು ಅವನಿಗೆ ಬೇಕಿರಲಿಲ್ಲ;
ಹೊರಡುವ ಮುನ್ನದಿನದ ರಾತ್ರಿ,
ಕಾಡಿ,ಬೇಡಿ ಹೃದಯದಲ್ಲಿ ತುಂಬಿಕೊಂಡರೂ
ಅದು ಅವನಿಗೆ ಬಲವಂತದ ಮಾಘಸ್ನಾನ;
ಏನೇ ಆದರೂ ಅವನು ತನ್ನ ನಿರ್ಧಾರದಿಂದ ಹಿಂಜರಿಯಲಿಲ್ಲ;
ಅವನ ಅಣ್ಣನ ಪ್ರೀತಿ ಗಟ್ಟಿಯಾಗಿತ್ತು;
ಆದರೆ ನನ್ನ-ಅವನ ಪ್ರೀತಿ ಬಿರುಕುಬಿಟ್ಟಿತ್ತು;
ಅವನೋ ನಾರುಮಡಿಯನುಟ್ಟು ಅಣ್ಣನ ಹಿಂದೆ ಹೋದ;
ನಾನೂ ಅಷ್ಟೆ ನಾರುಮಡಿಯನುಟ್ಟು ಇಲ್ಲೇ ಉಳಿದೆ,
ಅತ್ತೆಯ ಸೇವೆಗೈಯುತ್ತಾ;
ಅರಮನೆಯೇ ಕಾಡಾಗಿತ್ತು ನನಗೆ ಅವನಿಲ್ಲದೇ;
ಮವದಲ್ಲಿ ಅವನ್ ಮೇಲೆ ದ್ವೇಷ ಬೀಡು ಬಿಡುತ್ತಿತ್ತು;
ನನಗೆ ಅವನಿಲ್ಲ;
ಅವನಿಗೆ ನಾನಿಲ್ಲ;
ಇದ್ದೂ ಇಲ್ಲದಂತಾಗುವ ಸರದಿ ನಮ್ಮಿಬ್ಬರದೂ;
ಆದರ್ಶಕ್ಕೆ ನಾವಿಬ್ಬರೂ ಬಲಿಪಶುಗಳಾದೆವು;
ಆದರ್ಶದ ಹೊನ್ನಶೂಲಕ್ಕೆ ನಮ್ಮ ದಾಂಪತ್ಯ ಚೂರು ಚೂರಾಗಿತ್ತು.

Wednesday, December 7, 2011

ಹೇಳದೇ ಓಡಿಹೋದದ್ದೇಕೆ?



ಕಳ್ಳನಂತೆ ಓಡಿಹೋದ
ಬಿಟ್ಟು ಓಡಿಹೋದ ಕಟ್ಟಿಕೊಂಡ ನನ್ನನು
ಒಂದು ಮಾತು ಹೇಳಲಾಗದೆ ಹೋದದ್ದೇಕೆ?
ನಾನು ಅವನಿಗೆ ತಕ್ಕವಳಲ್ಲವೇ?
ಲೋಕದಲ್ಲಿ ನನ್ನಂತಹವರು ಅನುಭವಿಸೋ ಕಷ್ಟಗಳು...
ಗಂಡಬಿಟ್ಟವಳೆಂದು ಹೀಗೆಳೆಯುವ ಪರಿ
ಸಾಕು ಸಾಕು ಉತ್ತರ ಕೊಡದೇ ಹೋದೆ
ನಾನು ನಿನ್ನ ಕ್ಷಮಿಸಲ್ಲ.

ರಾಜಕುಮಾರ ಅವನು
ಅವನ ಮನದನ್ನೆ ನಾನು
ಅಗಾಧ ರಾಜ್ಯ,ಕೋಶ,ಅಷ್ಟೈಶ್ವರ್ಯಗಳು
ಬಂಧು-ಬಳಗ,ಎರಡು ಮುದ್ದಾದ ಮಕ್ಕಳು
ಕೊರತೆ ಎಂಬುದು ಇರಲಿಲ್ಲ ಅವನಿಗೆ
ಸಾವು ಕಂಡ
ನೋವು ಕಂಡ
ಎದುರಿಸದೇ ನಲುಗಿದ
ಆ ರಾತ್ರಿ ಪಕ್ಕದಲ್ಲೇ ಮಲಗಿದ್ದೆ ನಾನು
ನೂರು ಕನಸುಗಳ ಕಂದಿದ್ದೆ ನವ ತರುಣಿಯಾಗಿ
ಕನಸು ನುಚ್ಚುನೂರಾಗುವುದೆಂದು ಎಣಿಸಿರಲಿಲ್ಲ
ಮೊದಲೇ ಗೊತ್ತಿದ್ದರೆ ನನ್ನ ಸೆರಗಿಗೆ ನಿನ್ನ ಕಟ್ಟಿಕೊಂಡುಬಿಡುತ್ತಿದ್ದೆ
ಹೇಳದೇ ಓಡಿಹೋದದ್ದೇಕೆ?
ಹೇಳು ಇನ್ನಾದರೂ....

ಶ್ರೀಮಂತಿಕೆ,ಸಕಲ ವೈಭೋಗಗಳೆಲ್ಲವೂ ಈ ಅರಮನೆಯಲ್ಲಿದೆ
ನನ್ನ ಜೊತೆ ಇರಬೇಕಾದ ನೀನೇ ಇಲ್ಲವಲ್ಲ!
ಸಕಲೈಶ್ವರ್ಯಗಳು ಕಸದಂತೆ ತೊರುತ್ತಿದೆ ನನಗೆ ನೀನಿಲ್ಲದೆ
ಯೌವ್ವನವಿದೆ ಈ ದೇಹಕ್ಕೆ
ಬಯಕೆಗಳಿವೆ ಯೌವ್ವನಕ್ಕೆ
ತೀರಿಸೋ ಅರಸನೇ ನೀನೇ ಇಲ್ಲ
ಯುದ್ಧದಲ್ಲಿ ಓಡಿಹೋಗೋ ರಣಹೇಡಿಯಂತೆ
ಸಂಸಾರದ ಸುಖ-ದುಃಖಗಳಿಗೆ ಎದೆಗೊಡದೆ ಓಡಿಹೋದೆಯಲ್ಲ
ನಾನು ನಿನ್ನ ಜೊತೆಯಿದ್ದೆ ಎಂಬುದನ್ನು ಏಕೆ ಮರೆತೆ?

ಅರಮನೆಯ ವೈಭೋಗಗಳಲ್ಲಿ ನನ್ನ ಬಿಟ್ಟುಹೋದೆ ಎಂಬ ಸಮಾಧಾನವೇ ನಿನಗೆ
ಅರಮನೆಯ ವೈಭೋಗಗಳಲ್ಲಿಯೊ ಏಕಾಂಗಿಯಾಗಿ ನಲುಗಿರುವೆ
ನಿನ್ನ ದೌರ್ಜನ್ಯಕ್ಕೆ ಸಾಕ್ಷಿಯಾಗಿ ನಿಂತಿರುವೆ
ಶತ-ಶತಮಾನಗಳೂ ಕಳೆದರೂ ದೌರ್ಜನ್ಯ,ಶೋಷಣೆ ತಪ್ಪಿಲ್ಲ
ಹೆಂಡತಿಯನ್ನು ಕಾಡಿಗೆ ಕಳುಹಿಸಿದರೂ....
ಹೆಂಡತಿಯನ್ನು ಅರಮನೆಯಲ್ಲಿ ಬಿಟ್ಟು ಓಡಿಹೋದರೂ.....
ಶೋಷಣೆ ಶೋಷಣೆಯೇ..........................................

Tuesday, December 6, 2011

ಬಳಸದ ದಾರಿ



ರಸ್ತೆ ಇಬ್ಬಾಗವಾಗಿತ್ತು ಹಣ್ಣೆಲೆಯ ಕಾಡಿನಲ್ಲಿ,
ಕ್ಷಮಿಸಿ ನಾನು ಎರಡೂ ರಸ್ತೆಗಳನ್ನು ಬಳಸಲಿಲ್ಲ
ಏಕಾಂಗಿ ಸಂಚಾರಿಯಾಗಿ,ನಿಂತೆ
ಮತ್ತು ರಸ್ತೆಯನ್ನು ಕಣ್ಣಳತೆಯವರೆಗೂ ನೋಟ ಬೀರಿದೆ;
ರಸ್ತೆಯ ಅಂಕು ಡೊಂಕು ಕಾಣುವವರೆಗೂ;
ಆಮೇಲೆ ಬೇರೆ ರಸ್ತೆಯ ಕಡೆಗೆ ಹೊರಳಿದೆ
ಆ ರಸ್ತೆಯ ಆಯ್ಕೆಯ ನಿರ್ಧಾರ ಸಮಂಜಸವಾಗಿತ್ತು
ರಸ್ತೆಯಲ್ಲಿ ಹುಲ್ಲು ತುಂಬಿತ್ತು ಮತ್ತು ತುಳಿತಕ್ಕೆ ಒಳಗಾಗ ಬೇಕಿತ್ತು
ಆ ರಸ್ತೆಯಲ್ಲಿ ಜನ ಓಡಾಡಿದ್ದೇ ಆದರೆ
ಅದು ಬೇರೆ ರಸ್ತೆಗಳಷ್ಟೇ ತುಳಿತಕ್ಕೆ ಒಳಗಾಗಬೇಕಿತ್ತು.
ಮತ್ತು ಎರಡೂ ರಸ್ತೆಗಳು ಬೆಳಗಿನ ಬೆಳಕಿಗೆ ಸಮಾನವಾಗಿ ತೆರೆದುಕೊಳ್ಳುತ್ತಿತ್ತು
ಬಿದ್ದ ಎಲೆಗಳು ಕಪ್ಪಾಗಿಲ್ಲ , ಅದರ ಮೇಲೆ ಯಾರೂ ನಡೆದಿಲ್ಲ.
ಮತ್ತೆ ಗೊತ್ತಿದ್ದರೂ ರಸ್ತೆಗಳು ಮತ್ತೊಂದು ರಸ್ತೆಗೆ ತೆರೆದುಕೊಳ್ಳುತ್ತದೆ,
ನನಗೆ ಅನುಮಾನ ಕಾಡಿತು ಮತ್ತೆ ನಾನು ವಾಪಸ್ಸಾಗುವೆನೇ?.
ನಾನು ಹೇಳುತ್ತಿದ್ದೇನೆ ನಿಟ್ಟುಸಿರನ್ನು ಬಿಟ್ಟು
ಶತ-ಶತಮಾನಗಳಿಂದ ನಡೆದು ಬಂದಿದ್ದನ್ನು;
ಕಾಡಿನಲ್ಲಿ ರಸ್ತೆಗಳು ಇಬ್ಬಾಗವಾಗಿದ್ದವು, ಮತ್ತು ನಾನು...
ನಾನು ಕಡಿಮೆ ಬಳಸಿದ ದಾರಿಯನ್ನು ಹಿಡಿದೆ.
ಮತ್ತು ಅದು ಎತ್ತಿ ಹಿಡಿದಿತ್ತು ಬೇರೆಯವರಿಗೂ ನನಗೂ ಇರುವ ವ್ಯತ್ಯಾಸವನ್ನು.

ಪ್ರೇರಣೆ: " Road not Taken" by Robert Frost

Wednesday, November 30, 2011

ಜೀವನ ಒಂದು ಉಡುಗೊರೆ




ಇಂದು ನಿಷ್ಠುರ ಮಾತು ಹೇಳುವ ಮುನ್ನ-
ಯೋಚಿಸು ಮಾತನಾಡಲು ಅಶಕ್ತರಾದವರ ಬಗ್ಗೆ.

ಊಟದ ರುಚಿಯ ಬಗ್ಗೆ ದೂರುವ ಮುನ್ನ-
ಯೋಚಿಸು ಒಂದೊತ್ತಿನ ಊಟಕ್ಕೂ ಇಲ್ಲದವರ.

ಹೆಂಡತಿ ಅಥವಾ ಗಂಡನ ದೂರುವ ಮುನ್ನ-
ಯೋಚಿಸು ಜೊತೆ ಬೇಕೆಂದು ದೇವರಲ್ಲಿ ಮೊರೆಯಿಡುವವರ.

ಇಂದು ಜೀವನದ ಬಗ್ಗೆ ದೂರುವ ಮುನ್ನ-
ಯೋಚಿಸು ಅಕಾಲಿಕವಾಗಿ ನಮ್ಮನ್ನು ಅಗಲಿದವರ.

ಗಾಡಿಯಲ್ಲಿ ದೂರ ಹೋಗಬೇಕೆಂದು ಗೊಣಗುವ ಮುನ್ನ-
ಯೋಚಿಸು ಮತ್ತೆ ಮತ್ತೆ ಬರಿಗಾಲಲ್ಲಿ ನಡೆಯುವವರ.

ಮತ್ತೆ ನಿನಗೆ ದಣಿವಾದಾಗ ಹಾಗು ನಿನ್ನ ಕೆಲಸದ ಬಗ್ಗೆ ದೂರಿದಾಗ-
ಯೋಚಿಸು ಕೆಲಸವಿಲ್ಲದವರ,ವಿಕಲಚೇತನರ ಮತ್ತು ನಿನ್ನ ಜಾಗದಲ್ಲಿರಬೇಕಾದವರ.

ನಿಮ್ಮ ಮನಸ್ಸಿಗೆ ನೋವಾಗಿ ಭಾವನೆಗಳು ನಿಮ್ಮನ್ನು ಕಂಗೆಡಿಸಿದರೆ
ನಿಮ್ಮ ಮುಖದಲ್ಲಿ ನಗು ಹೊಮ್ಮಲಿ ಮತ್ತು ಯೋಚಿಸು
ನೀವಿನ್ನೂ ಜೀವಂತ ಮತ್ತು ಜಂಗಮ.

ಪ್ರೇರಣೆ: ಅರ್ಧ ಮನುಷ್ಯ-ಅರ್ಧ ಬೆಲೆಯ ಅಂಗಡಿ- ’ಪೆಂಗ್ ಶುಲಿನ್’ ನ ನೈಜ ಸತ್ಯಕಥೆ

Tuesday, November 22, 2011

ಕಾಯುವ ಸುಖ


ದಾರಿ ಕಾಯುತ್ತಾ ಕುಳಿತ್ತಿದ್ದೇನೆ
ದಾರಿಯ ಮಧ್ಯದಲ್ಲಿ ನಿನಗಾಗಿ
ನೀನು ಬರುವೆಯೆಂದು-ಬೇಗ ಬಾರೆಂದು
ಸುತ್ತಲೂ ತಿಳಿನೀಲಿಯಾಕಾಶ
ಮನದಲ್ಲಿ ನೂರು ಯೋಚನೆಗಳು,ಯಾಚನೆಗಳು;
ಈ ಕ್ಷಣದಲ್ಲಿ ನೀನು ನನ್ನ ಮುಂದಿದ್ದರೆ ಎಂಬ ಆಲೋಚನೆ;
ಎಲ್ಲವೂ ಮನದಲ್ಲಿ ಪುಳಕ ನೀನು ಬರುವೆಯೆಂದು
ತಂಗಾಳಿಯ ಸೌರಭ,ಸಂಜೆಯ ಸೂರ್ಯಕಿರಣಗಳು
ಕಾತರತೆಯ ಜೊತೆಗೆ ವಿರಹವನ್ನೂ ಹೆಚ್ಚಿಸಿದೆ
ಕಾತರತೆಯ ವಿರಹದಲ್ಲಿ ಬೇಯುತ್ತಾ ನಿನಗಾಗಿ ಕಾಯುತ್ತಿದ್ದೇನೆ
ಕಾತರತೆಯಲ್ಲಿಯೇ ನನ್ನ ಸುಖವನ್ನು ಕಾಣುತ್ತಿದ್ದೇನೆ
ಜೀವನ ಮೊದಲಿಗಿಂತಲೂ ಆಸಕ್ತಿದಾಯವಾಗಿದೆ-ಕಾತರತೆಯಿಂದ;
ಕಾಯುವ ಮನಸ್ಥಿತಿಯಲ್ಲಿರುವ ಸುಖ ಕಾಯುವವನಿಗೇ ಗೊತ್ತು;

Monday, November 21, 2011

ಬೌದ್ದಿಕ ದಾಸ್ಯದಿಂದ ಸ್ವಾತಂತ್ರದೆಡೆಗೆ........



ಒಂದು ಸಾಮ್ರಾಜ್ಯ ಸ್ಥಾಪನೆಗೆ
ಕಾರಣರು ಮೊರು ಜನ
ಧರ್ಮಗುರು;
ಜನ/ಮೊಲ ನಿವಾಸಿಗಳು/ಎಲ್ಲಿಂದಲೋ ಬಂದವರು/ಭಕ್ಷಕರು;
ಆಡಳಿತಗಾರರು/ರಾಜಕಾರಣಿಗಳು/so called ರಕ್ಷಕರು;
ತಮ್ಮ ಮೊಗಿನ ನೇರಕ್ಕೆ ಎಲ್ಲವನ್ನೂ ಬದಲಾಯಿಸುವರು;
ಅನನ್ಯತೆಯ,ವೈವಿಧತೆಯ ಹೊಸಕುವರು;
ಅದ್ಯಾವುದೋ ಧರ್ಮಗ್ರಂಥ;
ಕೊರಳಲ್ಲಿ ಧರ್ಮಚಿನ್ಹೆ-ತೂಗುಗತ್ತಿ;
ಶುಭ್ರ ಬಿಳಿವಸ್ತ್ರ ಮುಚ್ಚಿದ ದೇಹ;
ಬಟ್ಟೆಯ ಹಿಂದೆ ಕೆರಳಿದ ಕಪ್ಪು ಹೃದಯ;
ಕಾಯುತ್ತಿದೆ ಹೊಸಕಲು;
ರುಧಿರ ಪ್ರಿಯ-ದಾಹ ಹೆಚ್ಚಾಗಿದೆ;
ಸ್ವಂತಿಕೆಯ ಲೇವಡಿ,ಅಪಹಾಸ್ಯ;
ಹೊತ್ತಿಸುವುದು ನಮ್ಮಲ್ಲಿಯೇ ಕೀಳರಿಮೆ;
ನಮ್ಮನ್ನು ನಾವು ಸಾಯಿಸಿಕೊಳ್ಳುವ ಪ್ರಕ್ರಿಯೆಗೆ ತಳ್ಳುವರು;
ನಮ್ಮತನದ ಮೇಲೆ ನಾವೇ ದೌರ್ಜನ್ಯಮಾಡಿಕೊಳ್ಳುವೆವು;
ನಮ್ಮ ಭಾಷೆ;
ನಮ್ಮ ಸಂಸ್ಕೃತಿ;
ನಮ್ಮ ಧರ್ಮ;
ನಮ್ಮ ಆಚರಣೆ;
ನಮ್ಮ ನಂಬಿಕೆ;
ಎಲ್ಲವೂ ಕಸವಾಗುವುದು;
ಒಂದು ಜನರ ಸಂಸ್ಕೃತಿಯ ನಾವೇ ಹೊಸಕುವೆವು
ಯಾರದೋ ಮಾತುಕೇಳಿ;
ನಮ್ಮದಲ್ಲದ ಭಾಷೆ;
ನಮ್ಮದಲ್ಲದ ಸಂಸ್ಕೃತಿ;
ನಮ್ಮದಲ್ಲದ ಧರ್ಮ;
ನಮ್ಮದಲ್ಲದ ಆಚರಣೆ,ನಂಬಿಕೆಗಳಿಗೆ
ನಮ್ಮನ್ನು ನಾವು ಮಾರಿಕೊಳ್ಳುವೆವು
ನಾವೇ ಪರಕೀಯರಿಗೆ ಕೊರಳಪಟ್ಟಿಕೊಡುವೆವು
ನಮ್ಮನು ನಾವೇ ಗುಲಾಮಗಿರಿಗೆ ಒಪ್ಪಿಸಿಕೊಳ್ಳುವೆವು
ನಮ್ಮ ತಾಯಿ ನಮ್ಮ ಈ ಹೀನಾಯ ಸ್ಥಿತಿ ನೋಡಿ ದುಃಖಿಸುವಳು
ನಾವು ಮಾತ್ರ ಅಭಿವೃದ್ಧಿಹೊಂದಿದೆವೆಂದು ನಲಿಯುವೆವು
ನಮ್ಮದಲ್ಲದ ನಾಡಿನಲ್ಲಿ
ನಮ್ಮ ಹಿರಿಕರ ಆತ್ಮಗಳು
ದುಃಖಿಸುತ್ತಿವೆ ನಮ್ಮ ಪರಿಸ್ಥಿತಿಯ ಕಂಡು
ನಾವು ಮಾತ್ರ ನಗುತ್ತಿದ್ದೇವೆ ನಮ್ಮದೆಲ್ಲವನ್ನೂ ಕಳೆದುಕೊಂಡು||

"ಗೂಗಿ ವಾ ಥಿ ಆಂಗೋ" ನನ್ನು ನೆನೆಯುತ್ತಾ .....

Monday, November 7, 2011

"ನಾನು ನಿನ್ನನ್ನು ಪ್ರೀತಿಸುತ್ತೇನೆ..."


ನಿನಗಾಗ ೫ ವರ್ಷ, ನಾನು ನಿನಗೆ ಹೇಳಿದೆ " ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಹೇಳಿದೆ "ಹಾಗೆಂದರೇನು?"

ನಿನಗಾಗ ೧೫ ವರ್ಷ, ನಾನು ನಿನಗೆ ಹೇಳಿದೆ" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಿನ್ನ ಕೆನ್ನೆ ಕೆಂಪೇರಿತು. ನೀನು ನಗುತ್ತಾ ,ಕೆಳಗೆ ನೆಲವನ್ನು ನೋಡುತ್ತಿದೆ ಕಾಲಲ್ಲಿ ಕೆರೆಯುತ್ತಾ...."

ನಿನಗಾಗ ೨೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನಿನ್ನ ತಲೆಯನ್ನ ನನ್ನ ಹೆಗಲ ಮೇಲಿಟ್ಟೆ ಮತ್ತು ನನ್ನ ಕೈಯನ್ನು ಹಿಡಿದೆ.. ನಿನ್ನಲ್ಲಿ ಭಯ ಆವರಿಸಿತ್ತು ನಾನು ಮರೆಯಾಗುವೆನೇನೋ ಎಂದು.

ನಿನಗಾಗ ೨೫ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಬೆಳಗಿನ ತಿಂಡಿ ತಯಾರುಮಾಡಿ ನನಗೆ ಬಡಿಸುತ್ತಾ ನನ್ನ ಹಣೆಗೆ ಮುತ್ತಿಡುತ್ತಾ ಹೇಳಿದೆ" ನೀವು ಬೇಗ ಏಳಿ,ತಡವಾಗುತ್ತಿದೆ..."

ನಿನಗಾಗ ೩೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಹೇಳಿದೆ" ನೀವು ನಿಜವಾಗಿಲೂ ನನ್ನ ಪ್ರೀತಿಸುತ್ತಿದ್ದರೆ, ದಯವಿಟ್ಟು ಆಫೀಸಿನಿಂದ ಮನೆಗೆ ಬೇಗ ಬನ್ನಿ..."

ನಿನಗಾಗ ೪೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಮನೆಯ ಊಟದ ಟೇಬಲನ್ನು ಸ್ವಚ್ಛಗೊಳಿಸುತ್ತಿದ್ದೆ ಮತ್ತು ಹೇಳಿದೆ " ಆಯಿತು ನನ್ನವರೇ!, ಈಗ ಸಮಯವಾಗಿದೆ ಮಕ್ಕಳಿಗೆ ಓದಿನಲ್ಲಿ ಸಹಾಯ ಮಾಡಲು.."

ನಿನಗಾಗ ೫೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನಿಟ್ಟ್ ಮಾಡುತ್ತಿದ್ದೆ ಹಾಗು ನನ್ನನು ನೋಡಿ ನಕ್ಕೆ....

ನಿನಗಾಗ ೬೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನನ್ನನ್ನು ನೋಡಿ ನಕ್ಕೆ...

ನಿನಗಾಗ ೭೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಾವು ಕುಳಿತ್ತಿದ್ದೆವು ಕುರ್ಚಿಯ ಮೇಲೆ ನಮ್ಮ ಕನ್ನಡಕಗಳನ್ನು ಧರಿಸಿ. ನಾನು ನೀನು ಬರೆದ ೫೦ ವರ್ಷ ಹಿಂದೆ ಬರೆದ ಪ್ರೇಮ ಪತ್ರವನ್ನು ಓದುತ್ತಿದ್ದೆ, ನಮ್ಮಿಬ್ಬರ ಕೈಗಳು ಜೊತೆಯಾಗಿದ್ದವು...

ನಿನಗಾಗ ೮೦ ವರ್ಷ, ನೀನು ನನಗೆ ಹೇಳಿದೆ"" ನೀನು ನಿನ್ನನ್ನು ಪ್ರೀತಿಸುತ್ತೇನೆ ಎಂದು..."
ನಾನೇನೂ ಹೇಳಲಾಗಲಿಲ್ಲ ಆದರೆ ಅಳುತ್ತಿದ್ದೆ.

ಸೂಚನೆ: Face book ನಲ್ಲಿ ಬಂದಿದ್ದನ್ನು ಕನ್ನಡೀಕರಿಸಿದ್ದೇನೆ.

ಬಾ ನನ್ನ ಕವಿತಾ

ಬಾ ನನ್ನ ಕವಿತಾ
ಎಲ್ಲೂ ಹೋಗದೇ ನನ್ನಲ್ಲೇ ನೆಲೆಗೊಳ್ಳು ನಲಿಯುತಾ
ಬಾ ನನ್ನ ಕವಿತಾ||

ಇಲ್ಲೇ ಇದ್ದವಳು,ಇಲ್ಲೇ ಇರುವವಳು
ಕಣ್ಣು ತೆರೆದರೆ ಮಾಯವಾಗುವವಳು
ನನ್ನ ಪೆದ್ದುತನಕ್ಕೆ ನಸು ನಗುವವಳು
ಬಿಡದೇ ಸತಾಯಿಸುವ ಕಳ್ಳ ಸವಿತಾ||

ಮರೆತು ಹೋದಂತೆ ನಟಿಸಿ
ಯಾವುದನ್ನೂ ಮರೆಯದೆ ಎಲ್ಲವನ್ನೂ ಎಣಿಸಿ
ಯಾವುದಕ್ಕೂ ಜಗ್ಗದೆ ಮನದ ಶಕ್ತಿಯ ಗುಣಿಸಿ
ಸದಾ ಚೈತನ್ಯವ ಕೊಡುವ ಸವಿತಾ||

ಮನವು ನೋವಿಗೆ ಕುಗ್ಗಿದಾಗ
ಯಶಸ್ಸಿಗೆ ತಲೆ ತಿರುಗಿದಾಗ
ನಮ್ಮ ತಪ್ಪುಗಳು ಚಿಂತೆಯ ತಂದಾಗ
ಮನವ ಕುಗ್ಗಿಸದೇ,ಶಕ್ತಿಯ ತುಂಬುವ ಸವಿತಾ||

ಬಾ ನನ್ನ ಕವಿತಾ
ಏರು ಪೇರಿನ ಗಾಯನಾ
ಕೊನೆ ಮೊದಲಿಲ್ಲದ ಜೀವನಾ||

Sunday, November 6, 2011

’ಹೆಂಡತಿಯೇ ಪರಮಾಪ್ತ ಗೆಳೆಯ’

ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳು
ಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||

ಮಾತು ಮಾತುಗಳು ಮಧುರಗೊಂಡಿವೆ
ನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||

ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬಿವೆ
ಹಳೆಯ ಅನುಭವ ಜೀವನಕ್ಕೆ ಶಕ್ತಿ,ದಾರಿದೀಪವಾಗಿದೆ||

ಕೊಂಡಿಗಳು ಹಲವು ಕಳಚಿಕೊಂಡಿವೆ
ಗೆಳೆತನಕ್ಕೆ ನಂಜು,ಅಪಾರ್ಥದ ಪರದೆ ಸತ್ಯವ ಮರೆಮಾಚಿದೆ||

ಜೀವನದ ಗಾಡಿ ನಿಲ್ಲದೇ ಸಾಗುತಿದೆ
ಏನೇ ಬರಲಿ ನಮ್ಮ ಸಂಸಾರದ ಗಾಡಿ ನೆಮ್ಮದಿ,ಶಾಂತಿ ಕದಡದೇ ಸಾಗಿದೆ||

ಯಾರೋ ಹೇಳಿದ ಮಾತು ನೆನೆಪಾಗುತ್ತಿದೆ
’ಹೆಂಡತಿಯೇ ಪರಮಾಪ್ತ ಗೆಳೆಯ’ಎಂಬ ಮಾತು ನಿಜವೆನಿಸುತ್ತಿದೆ||

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...