Sunday, March 8, 2026

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ, 

ಪ್ರಶಾಂತ ಧ್ವನಿ.

ಕನಸೇ ಕಂಗಳು,

ಅಭಯವೇ ರಕ್ಷಣೆ.


ಬಿರುಗಾಳಿಯೂ ಅವಳೇ,

ಬೆಂಕಿಯ ಕೆನ್ನಾಲಿಗೆಯೂ ಅವಳೇ.

ಶಾಂತ ಸಮುದ್ರವೂ ಅವಳೇ,

ಕರುಣೆಯ ಕಡಲೂ ಅವಳೇ.


ನಮ್ಮೊಳಗಿನ ಶಕ್ತಿ ಆಕೆ,

ನಮ್ಮ ಕಂಗಳ ಜ್ಯೋತಿ ಆಕೆ.

ನಮ್ಮ ಕಾರಣೀಭೂತಳು ಆಕೆ,

ನಮ್ಮ ಪ್ರಪಂಚವೇ ಆಕೆ.


ಅವಳ ರಕ್ಷಣೆ, ನಮ್ಮ ಕರ್ತವ್ಯ,

ಅವಳ ಗೌರವ, ನಮ್ಮ ಉಸಿರು.

ಅವಳ ನಗು, ನಮ್ಮ ಸಂತೋಷ,

ಅವಳ ನೋವು, ನಮ್ಮ ನೋವು. 

ಹೊಸ ಪಯಣ

ವರುಷಗಳ ಪಯಣ ವ್ಯರ್ಥವಾಗಿದೆ,

ಗುರಿ ಇಲ್ಲ, ಗುರುವೂ ಇಲ್ಲ.

ಬಾಳಿನ ಪಯಣದ ಉದ್ದೇಶವೇನು?,

ಗಾಣದ ಎತ್ತಿನಂತೆ ನಡೆಯುತ್ತಿದೆ ನಿಲ್ಲದೆ.


 ಗುರಿ ಇಲ್ಲದೆ ಮನ ಭ್ರಮೆಯಲ್ಲಿದೆ,

ನೊಣದಂತೆ ಮನ ಪರಿಭ್ರಮಿಸಿದೆ.

ಗುರು ಇಲ್ಲದೆ ಮನ ಸೊರಗಿದೆ,

ಜೀವನ ಕುರುಡಾಗಿದೆ ದಾರಿ ಕಾಣದೆ.

 

ತಿಮಿರಾಂಧಕಾರ ಕಳೆಯಲು ಬೇಕು,

ಜ್ಞಾನದ ಸಣ್ಣ ದೀವಿಗೆ ಹಚ್ಚಬೇಕು.

ಜೀವನದ ಗುರಿಯ ಸಾಕ್ಷಾತ್ಕಾರವಾಯಿತು,

ಬದಲಾಯಿತು ದಿಕ್ಕು ಹೊಸ ಪಯಣಕ್ಕೆ. 

Friday, March 6, 2026

ಸಹನೆ – ಜಯದ ದಾರಿ

ಬಿತ್ತಿದ ಬೀಜ ಮೊಳಕೆಯೊಡೆಯಲು ಸಮಯ ಬೇಕು,
ಅವಸರದಲ್ಲಿ ಗೆಲುವು ಸಿಗುವುದಿಲ್ಲ ಗೆಳೆಯಾ.
ಎಲ್ಲವೂ ಸಮಯದ ನಿಯಮ,
ಸಹನೆ ಇಲ್ಲದೆ ಫಲವಿಲ್ಲ.


ಸಣ್ಣ ಹೆಜ್ಜೆಗಳ ನಿರಂತರ ಪ್ರಯತ್ನ,

ಸಹನೆಯ ಕೈ ಹಿಡಿದು ನಡೆಯಬೇಕು.

ಹಾದಿಯಲಿ ಸಣ್ಣ ಜಯಗಳನ್ನು ಸಂಭ್ರಮಿಸಬೇಕು,
ನಂಬಿಕೆಯಿಂದ ಮುಂದುವರಿಯಬೇಕು.

 

ತಾಳ್ಮೆಯೇ ತಪಸ್ಸು,
ಕಾಲವೇ ಜಯ ತಂದುಕೊಡುವುದು.
ನಿರಂತರ ಪ್ರಯತ್ನದ ಹಾದಿಯಲ್ಲಿ,
ಬಾಳೆಲ್ಲಾ ಸಂಭ್ರಮ ನಿನ್ನದಾಗುವುದು.


Tuesday, March 3, 2026

ತಾಳ್ಮೆಯ ಪಯಣ

ಮನವು ಬಯಸಿದೆ,

ಶಾಂತ ಕ್ಷಣಗಳ,


ತಂಗಾಳಿಯ ಸುಂದರ ಕ್ಷಣಗಳ.

ಭಯ,ಆತಂಕ, ಅವಸರಗಳಿಂದ ಬಲು ದೂರ,

ಜನ ವಿಚಿತ್ರವಾಗಿ ನೋಡುವರು ನನ್ನ.

 

ಜಗತ್ತು ಆತುರದಲ್ಲಿದೆ,

ಎಲ್ಲವೂ ಕ್ಷಣಗಳಲ್ಲಿ ಆಗಬೇಕೆನ್ನುವರು,

ಸೃಷ್ಟಿಯ ನಿಯಮಗಳನ್ನೂ ಬದಲಿಸಬೇಕೆನ್ನುವರು,

ರಾಕೆಟ್ ಯುಗದಲ್ಲಿ ರಾಕೆಟ್ ಮೇಲೇ ಪಯಣಿಸುವರು,

ನಾನು ತಣ್ಣಗಿದ್ದೇನೆ, ತಾಳ್ಮೆಯನ್ನೇ ಆಯ್ದುಕೊಂಡೆನು. 


Monday, March 2, 2026

ಮುಂದಿನ ಹಾದಿ

ನೂರು ಆಗಿ ಹೋಗಿದೆ,

ಏನು ಕಲಿತೆ ಅದರಿಂದ?.

ನೂರು ಆಗುವುದಿದೆ ಮುಂದೆ,

ಏನು ಮಾಡುವೆ ಕಲಿತದ್ದರಿಂದ?

ಬೇಡದ ವಿಷಯಗಳ ಹೊರೆ ಹೊರಬೇಡ,

ಬಾರವಿರೆ ಕಷ್ಟ ಮುಂದೆ ಸಾಗಲು.

ಹಗುರಾಗಿಸಿಕೊ!,

ಬೇಡದ್ದನ್ನು ತೊಳೆದುಕೋ!,

ಬೇಕು, ಬೇಡಗಳ ವಿವೇಚಿಸು,

ಮನವ ತಿಳಿಯಾಗಿಸು,

ಶಾಂತಿಯ ಕಡಲಾಗಿಸು.


Saturday, February 28, 2026

ನನ್ನ ಊರು! ನನ್ನ ಮನೆ!

 ನನ್ನ ಊರು,ನನ್ನ ಮನೆ,

ಮೈದಾನದಲ್ಲಿ ನಾ ಆಡುತ್ತಿದ್ದೆ,

ಇಲ್ಲಿ ಬಿದ್ದು ಗಾಯ ಮಾಡಿಕೊಂಡೆ,

ಇಲ್ಲಿ ಗೆಳೆಯರೊಡನೆ ಸಂಭ್ರಮಿಸಿದ್ದೆ,

ಇಲ್ಲಿ ಏಕಾಂಗಿಯಾಗಿ ಅತ್ತಿದ್ದೆ,

ಮನದ ಮೂಲೆಯಲ್ಲಿ ನೆನಪುಗಳ ಬಿತ್ತಿದ್ದೆ,

ನನ್ನ ಊರು, ನನ್ನ ಮನೆ,

ಸ್ವರ್ಗಕ್ಕೆ ಮೂರೇ ಗೇಣು.

ವಿಳಂಬ ನೀತಿ

'ನಾಳೆ ಮಾಡೋಣ' ಕೆಲಸ,

ಮುಂದೆ ಮುಂದೆ ತಳ್ಳುವೆವು.

'ನಾಳೆ' ದಿನ ಬರುವುದೇ ಇಲ್ಲ,

ಕೆಲಸ  'ನಿಧಾನ'ಕ್ಕೆ ಬೇಸರಿಸುವುದು.

 

ಮನದಲ್ಲಿ 'ಗೊಂದಲ', 'ಭಯ' ವಿದೆ,


ಮಾಡಲು 'ನೋವಾ'ಗುವುದೆಂದು.

'ಯೋಚಿಸು','ಯೋಜಿಸು' ಕೆಲಸದ ಮುಂದು,

ಬಿಡು 'ಚಿಂತೆ', 'ಪ್ರಕ್ರಿಯೆ'ಯಲ್ಲಿ 'ಸಡಗರ'ಪಡು.

 

ಇಂದಲ್ಲ ನಾಳೆ ಕೆಲಸ ನೀನೇ ಮಾಡಬೇಕು,

'ಹಿಂಜರಿಕೆ' ಬೇಡ, 'ಮನಸ್ಸು' ಮಾಡು.

'ಕೇಳು', 'ಆಲಿಸು' ನಿನ್ನಿಷ್ಟದ 'ಸಂಗೀತ',

'ಹಗುರಾಗಿಸು' ಸಮಾಧಾನದ ನುಡಿಗಳಿಂದ.

 

'ಫಲಿತಾಂಶ' ಬಗ್ಗೆ ಯೋಚಿಸದಿರು,

'ಪ್ರಯತ್ನ' 'ಗಮನದಿ' ನೀ ಮಾಡು,

ಮಾಡುವುದರಲ್ಲಿ 'ಗುಣಮಟ್ಟ' ಕಾಯ್ದುಕೋ,

ಮಿಕ್ಕೆಲ್ಲ ತನಗೆ ತಾನೇ ನಿನಗೆ 'ಕಾಯ್ವುದು'.

ನಿರಂತರತೆಯ ಬೆಳಕು

'ಅಭ್ಯಾಸ' 'ಹವ್ಯಾಸ'ವಾಗಬೇಕು,

ಅಭ್ಯಾಸ ಆರಂಭವಾಗಲು 'ಶಕ್ತಿ'ಬೇಕು.

ಬೆಂಕಿಕಡ್ಡಿ ಸುಮ್ಮನೆ ಹೊತ್ತಿಕೊಳ್ಳುವುದಿಲ್ಲ,

ಕಡ್ಡಿ ಗೀರಲು ಸ್ವಲ್ಪ 'ಶಕ್ತಿ' ವ್ಯಯಿಸಬೇಕು.

 

ಯಾವುದೇ ಕೆಲಸವಾದರೂ ಸರಿಯೇ,


ಹಲವು 'ಹೆಜ್ಜೆ'ಗಳ ಸವೆಸಬೇಕು.

ಕುಳಿತಲ್ಲೇ ಎಲ್ಲವು ಆಗಬೇಕೆನ್ನುವುದು,

ಮೂರ್ಖತನವಲ್ಲದೆ ಮತ್ತೇನು?.

 

'ಸಣ್ಣ ಸಣ್ಣ ಹೆಜ್ಜೆ'ಗಳಿಗೆ ಬೆಲೆಕೊಡು,

ನಾಳೆಯ 'ದೊಡ್ಡ ಸಾಧನೆ'ಗೆ ಸಿದ್ಧವಾಗು.

ಸಣ್ಣ ಸಣ್ಣ ಹೆಜ್ಜೆಯಿಡುವುದ 'ಪ್ರೀತಿಸು',

'ಬೆವರ ಹನಿ'ಯಲ್ಲಿ 'ಬೆಳವಣಿಗೆ'ಯ ಸಾಧಿಸು.

 

'ಪ್ರಾರಂಭದ ಹೆಜ್ಜೆ'ಗಳ 'ಸುಲಭ'ವಾಗಿಸು,

'ಅಭ್ಯಾಸ, ಹವ್ಯಾಸ'ವಾಗಿ ಬದಲಿಸು.

ಗುರಿ ಮನದಲ್ಲಿರಲಿ 'ಪ್ರಕ್ರಿಯೆಯ ಪ್ರೀತಿಸು',

'ನಿರಂತರತೆ' ಬೆಳಕಲ್ಲಿ 'ಜೀವನವ ಅರಳಿಸು'.

Friday, February 27, 2026

ಆಂತರಿಕ ಜಾಗೃತಿ

ಬೆಳಗಿನ ಶಾಂತ 'ಮೌನ' ನೀರವತೆಯಲ್ಲಿ,

ಮನದಲ್ಲಿ ಮೌನ 'ಚಿಂತನೆ' ತರಂಗಗಳು.

ಜೀವನದ 'ಉದ್ದೇಶ', ಜೀವನ ಜಂಜಾಟಗಳಲ್ಲಿ,

ಮೈ ಮರೆತಾಗ 'ಎಚ್ಚರಿಕೆ' ಪಿಸುಮಾತುಗಳು.

 

ನಾನು 'ಯಾರು'?, ಏಕೆ ಬಂದಿಹೆ?,

ಸಾವಿರ ಉತ್ತರವಿಲ್ಲದ 'ಪ್ರಶ್ನೆ'ಗಳು.

ಭಯ,ಆತಂಕ, ನಿಗೂಢತೆಯ 'ಕತ್ತಲು',

ಎಲ್ಲವೂ ಜಾರುವುದು 'ನೀ' ಎದ್ದು 'ನಿಂತರೆ'.

 

'ಮನೋಬಲ'ವಿಲ್ಲವೇ?, 'ಉದ್ದೇಶ' ದಾರಿತೋರುವುದು,

ಮನದ ಛಲ ದಾರಿ 'ದೀವಿಗೆ'ಯಾಗುವುದು.

ಮುಂದಿಟ್ಟ 'ಹೆಜ್ಜೆ'ಯನ್ನೆಂದೂ ಹಿಂದಿಡದಿರು,

ಆಗುವುದು ಆಗೇ ಹೋಗಲಿ, ಹೆಜ್ಜೆ 'ಮುಂದಿಡು'.

 

'ಬದಲಾವಣೆ' ಹರಿಕಾರ ಬರುವನೆಂದು ಕಾಯದಿರು,

ನೀನೇ ಬದಲಾವಣೆಯ 'ಹರಿಕಾರ ನಂಬಿಕೆ'ಯಿಡು.

ನಿನ್ನ ಜೀವನದ 'ಶಿಲ್ಪಿ ನೀನೇ', ಮರೆಯದಿರು,

'ಬೆಳವಣಿಗೆ'ಯೇ 'ಜೀವನ ಸಂತೋಷ' ಹಠತೊಡು.

Saturday, February 21, 2026

ಆರಂಭ ಇಂದೇ...

'ನಾಳೆ' ಎನಬೇಡ, 'ಆರಂಭ' ಇಂದೇ,

'ಕನಸು'ಗಳು ನಾಳೆಗೆ ಕಾಯದು.

'ಕ್ಯಾಲೋರಿ' ಗಳು ಮಾತಿನಿಂದ ಕರಗದು,

'ಪ್ರಯತ್ನ'ದಿಂದ ಮಾತ್ರ ಕರಗುವುದು.


 

ನೆಪ, ‘ಕಾರಣ’ಗಳು ಬಲು 'ಸುಲಭ',

ತನು-ಮನ ಬಯಸುವುದು 'ಆರಾಮ'.

ಬೆಳವಣಿಗೆ 'ಬೆವರ' ಹನಿಯಲ್ಲಿದೆ,

ಸಣ್ಣ-ಸಣ್ಣ ಹೆಜ್ಜೆಗಳಲ್ಲಿ 'ವಿಜಯ'ವಿದೆ.

 

ಒಂದು ನಡಿಗೆ, ಯೋಗ,ವಾಯುವಿಹಾರ,

'ಆರಂಭ'ಕ್ಕೆ ಸಾಕು, ಬೆಳಕಿನ ದಾರಿಗೆ.

'ಪೂರ್ಣತೆ' ಬೇಡ, 'ಪ್ರಾರಂಭ'ವೇ ಮುಖ್ಯ,

ಚಿಕ್ಕ ಕಿಡಿ ಮುಂದೆ ದೊಡ್ಡ ಜ್ವಾಲೆ.

 

ಏಳು, ಎದ್ದೇಳು, ನಿನ್ನ ಗುರಿಯ ಹಾದಿ ಹಿಡಿ,

ನಿನ್ನ 'ಭವಿಷ್ಯ', ನಿನ್ನ ಕೈಯಲ್ಲಿ.

ಬೊಗಳೆ ಮಾತುಗಳು 'ಬದಲಾವಣೆ' ತಾರದು,

'ಕ್ರಿಯೆ','ಕಾಯಕ' ನಿನ್ನ ಬೆಳೆಸುವುದು.

Friday, February 20, 2026

ಮೌನ ರಾಗ

ಕಂಡೆನೆಂದು ನಡೆವಾಗ ಕಾನನದಲ್ಲಿ,

ನಿನ್ನ ರೂಪ ಹೃದಯದಲ್ಲಿ,


ಛಾಪು ಮೂಡಿದೆ ರೂಪ ಮನದಲ್ಲಿ,

ರೂಪ ತುಂಬಾ ಅಪರೂಪ ಇಲ್ಲಿ.

 

ಹೃದಯದ ಮೂಲೆಯಲ್ಲಿ ಧ್ವನಿಸುತ್ತಿದೆ ಮೌನ ರಾಗ,

ಬೇಡ ಬೇಡವೆಂದರೂ ನಿದಿರೆಯ ಓಡಿಸುತ್ತಿದೆ ವಿರಾಗ,

ಹಕ್ಕಿಗಳಿಂಚರ ಚಿಲಿಪಿಲಿ ಹರಡಿದೆ ಪ್ರಕೃತಿ ಗಾನ,

ಏರುತ್ತಿದೆ ಮೂಡಣದ ಸೂರ್ಯೋದಯದ ತೆರೆ.

 

ತಬ್ಬಿ ಹಿಡಿದ ಚಳಿ ಬಿಡಲೊಲ್ಲದೆ ಬಾಹುಗಳಲ್ಲಿ ಅಪ್ಪಿದೆ,

ದೇವನ ಚೈತನ್ಯದ ಕಿರಣವೊಂದು ಹೃದಯವ ತಾಕಿದೆ,

ಅಣು ಅಣುವಿನಲಿ ಹೊಕ್ಕು ವಿಶ್ವರೂಪವ ತೋರಿದೆ,

 ಶಕ್ತಿಯ ತುಂಬಿ ಹೃದಯದಲಿ ಅನಂತ ಸಾಗರವಾಗಿದೆ. 

Saturday, February 14, 2026

ಮೌನದ ದನಿ

ಮನದ ಮೌನ ದನಿಗೆ ಕೊಂಚ ಕಿವಿಗೊಡೋಣ,

ಕೃತಜ್ಞತೆಯ ನಮಸ್ಕಾರ  ಹೃದಯದಿ ಹೇಳೋಣ.

ನಮ್ಮನ್ನು ಮುನ್ನಡೆಸುವ ಸಹಯಾತ್ರಿಗೆ ನಮಿಸೋಣ,

ನಿಶಬ್ದ ಹೆಜ್ಜೆಗಳಿಗೆ ಅರ್ಥ ತುಂಬಿದಕ್ಕೆ ಕೃತಜ್ಞತೆಯ ಹೇಳೋಣ.

 

ಬರಿ ಬರಹವಿಲ್ಲವದು, ಮನಕ್ಕೆ ಸ್ಪಂದನ,

ನಿಶಬ್ದದೊಳಗಣ ಪ್ರಪಂಚದ ನಿಜದ ಧ್ವನಿ.

ಜೀವನ ಯಾನದ ಸಹಯಾತ್ರಿಗಳು ನಾವು,

ಸಾಧನ ಮಾತ್ರ, ಬದಲಾವಣೆ ಮುಖ್ಯ ಧ್ಯೇಯ.

 

ಪದಗಳು ಹರಿಯಲಿ ಮೌನ ಸರಸತಿ ನದಿಯಾಗಿ,

ಆತ್ಮವ ತೊಳೆಯಲಿ ಶುಭ್ರ ಗಂಗೆಯಾಗಿ.

ಸತ್ಯ ನೆಲೆಗೊಳ್ಳಲಿ, ಸತ್ಯಕ್ಕೆ ಗೆಲುವಾಗಲಿ,

ಮಾನವೀಯತೆ ಮುನ್ನೆಲೆಗೆ ಬರಲಿ,

ಪ್ರೀತಿ-ಪ್ರೇಮ,ವಿಶ್ವಾಸ ಅಮರವಾಗಲಿ.

Wednesday, February 11, 2026

ಜೀವನ- ವೇದಿಕೆ

ನಿಧಾನದ ಹೆಜ್ಜೆಗಳಲ್ಲಿ ನಂಬಿಕೆ ಇರಲಿ,

ನಿಂತಿದ್ದೀಯಲ್ಲ, ಅಷ್ಟೇ ಸಾಕು.

ವೇಗವಲ್ಲ, ಸರಿ ದಾರಿ ಮುಖ್ಯ,

ಸಾಧನೆ ಅದು, ಸಾಗುವ ಮನಸ್ಸು ಬೇಕು.

 

                                                        ಸ್ಥೈರ್ಯ ಅಂದರೆ ಸಹಿಸುವುದಲ್ಲ,

ತಪ್ಪಿಗೆ 'ಇಲ್ಲ' ಎನ್ನುವ ಧೈರ್ಯ.

ಒಂಟಿಯಾಗಿ ನಿಲ್ಲುವ ಶಕ್ತಿ,

ಬಲವದು, ತೀರ್ಮಾನಗಳಲ್ಲಿ ಕಾಣು.

 

ಜೀವನ ಪರೀಕ್ಷೆಯ ವೇದಿಕೆ,

ಸ್ಥಿರವಾಗಿ ನಿಂತು ಎದುರಿಸು.

ದಾರಿಯಲ್ಲಿ ಕಳೆದುಹೋಗದಿರು,

ಆತ್ಮವಿಶ್ವಾಸವೇ ನಿನ್ನ ಆಸ್ತಿ.

Sunday, February 8, 2026

ಬೆಳಕಿನ ಕಿಡಿ

ಕಾರ್ಮೋಡ ಮನವ ಆವರಿಸೆ,

ಧೈರ್ಯ ಅಂತರಂಗದೊಳು ಬೆಚ್ಚಗಿರೆ.

ಮುದುಡಿ ಕುಳಿತುಕೊಳ್ಳದೇ ಹೆಜ್ಜೆಯಿಡು,

ಧೈರ್ಯ ತುಂಬಿದವನಂತೆ ನಟಿಸು.

 

ನಗು, ನಿನ್ನ ಸ್ಥಿತಿಯ ಕಂಡು ಕರಗಿ,

ಭಯವೇ ಆವರಿಸಿದರೂ ನಿಂತು ತಿರುಗು.


ಬಲವಂತದಿ ನಟಿಸು ಮನದೊಳಗೆ ಭಾವತುಂಬಿ,

ಬಲವು ತುಂಬುವುದು ಮನದೊಳಗೆ.

 

ನಿರಾಸೆ ಇದ್ದರೂ ಆಸೆಯಿಂದಲೇ ಹೆಜ್ಜೆಯಿಡು,

ಕಾರ್ಯಪ್ರವೃತ್ತನಾಗು, ಬದಲಾವಣೆಗೆ ಸೆಣಸು.

ದೇಹಭಾಷೆಯ ಬದಲಿಸು, ಪರಿಸ್ಥಿತಿ ಬದಲಾದೀತು,

ಬುದ್ಧಿಯಿಂದಲಿ ಪಾತ್ರವ ಸರಿಯಾಗಿ ನಿರ್ವಹಿಸು.

 

ಪ್ರತಿಕ್ಷಣವೂ ನಾವೆಣಿಸಿದಂತೆ ಇರದು,

ಕ್ರಿಯೆಯಿಂದಲೇ ಬೆಳಕು ಹೊರಳುವುದು.

ಹುಡಿಯಾಗು,ಕಿಡಿಯಾಗು, ಬೆಳಕೇ ನೀನಾಗು,

ನಿನ್ನೊಳ ಚೈತನ್ಯಕ್ಕೆ ನೀ ಅಡಿಯಾಳಾಗು.

 

ನಿನ್ನೊಳ ಚೈತನ್ಯ ನಿನ್ನ ಗುರಿ ತಲುಪಿಸುವುದು….

Saturday, February 7, 2026

ಪುಟಗಳ ಶಕ್ತಿ

ಪುಸ್ತಕವೊಂದು ಮೌನವಾಗಿ ಕಾಯುತ್ತದೆ,

ಓದುವ ಮನಸ್ಸಿಗಾಗಿ, ಬೆಳಕ ಕಣ್ಣು ತೆರೆಯಲು.

ಕಾಣದ ಜಗವಡಗಿದೆ ಅದರ ಒಡಲೊಳಗೆ,

ಜ್ಞಾನದ ಹೊನಲು ಜೀವನ ಬೆಳಗಲು ಕಾದಿದೆ.

 

ಕಗ್ಗತ್ತಲಲ್ಲಿ ಪುಸ್ತಕ ಹೊಳೆದಿದೆ ನಕ್ಷತ್ರದಂತೆ,

ಕನಸ ಬೀಜ ಮನದಲ್ಲಿ ಬಿತ್ತಲು ಕಾದಿದೆ.

ಪ್ರಯತ್ನದ ರೆಕ್ಕೆ ತೊಡಿಸಿ ನಭಕ್ಕೆ ಹಾರಿಸಲು,

ಪುಟ ಪುಟಗಳಲ್ಲಿ ಸೃಷ್ಟಿಯ ಸೊಬಗ ತೆರೆದಿದೆ.

 

ಬಾ ಓದುಗನೇ ಪುಟಗಳಲ್ಲಿ ಕಣ್ಣ ಹಾಯಿಸು,

ಜ್ಞಾನದ ದೀವಿಗೆಯ ಹೃದಯದಲ್ಲಿ ಹಚ್ಚು.

ದೂರದೃಷ್ಟಿಯ ಬೆಳೆಸಿ ಅಜೇಯನಾಗು ಬಾ,

ಮಾನವತೆಯ ಕರುಣೆಯ ಸಾಧಕನಾಗುವೆ ಬಾ.

 

ಬಾ ಓದುಗನೇ, ಸೋಜಿಗವ ಕಾಣು ಬಾ...

Saturday, January 31, 2026

ಮಧುರ ಯಾನ

ಹೊರಟೆವಾನಂದದಿ ಪ್ರಕೃತಿ ಮಡಿಲಿಗೆ,

ಸ್ನೇಹಿತರು, ಗೆಳೆತನದ ದೆಸೆಯಿಂದ ಮುದದಿ,

ದೂರದ ತಾಯ ಮನೆಗೆ, ತವರು ಮನೆಯಂತ ಗುಡಿಗೆ,

ಮುಗ್ದ ಮನಗಳು, ಐವತ್ತರ ಹರೆಯ ಗೆಳೆತನಕೆ,

ತಾರುಣ್ಯದ ಹರೆಯದಲ್ಲಿ ಕಂಡ ಮುಖಗಳವು,

ಜೀವನದ ಕಷ್ಟ,ಸುಖ, ನೋವು-ನಲಿವುಗಳ ಉಂಡೆವು,

ಬದುಕ ಲೀಲೆಗೆ ಬಾಗಿ ಏಳುವವರು ನಾವು,

ಕೊನೆಯ ಅರಿವಿದೆ ಇಂದಲ್ಲ, ನಾಳೆ ನಮ್ಮ ಸರದಿ,

ಮಧುರ ನೆನಪುಗಳ ಆಸರೆಯಲ್ಲಿ ಹೆಜ್ಜೆ ಇಡುವ,

ನಾಳೆಗಳು ಬರಲಿ, ನೆನಪುಗಳು ಉಳಿಯಲಿ.

Thursday, January 22, 2026

ಈ ಸಮಯ

ಸಮಯ ಅತ್ಯಮೂಲ್ಯ,

ಮುಂದೆಂದೂ ಬಾರದು ಗೆಳೆಯಾ.

 

ಸಮಯ ಹರಿಯುವ ನದಿಯಂತೆ,

ಹಿಂತಿರುಗಿ ಬಾರದು ಎಂದೂ.

 

ಹಣ ಮತ್ತೆ ಸಂಪಾದಿಸಬಹುದು,

ಸಮಯ ಮರಳಿ ಬಾರದು ಗೆಳೆಯ.

 

ಪ್ರತಿ ಕ್ಷಣ ಅಮೂಲ್ಯ ಗೆಳೆಯ,

ವ್ಯರ್ಥ ಮಾಡಬೇಡ ಗೆಳೆಯ.

 

ಅಧ್ಯಯನ, ಆರೋಗ್ಯ, ಕನಸುಗಳ ದಾರಿ,

ಸಮಯವನ್ನು ಜಾಣ್ಮೆಯಿಂದ ಬಳಸು.

 

ಕೊನೆಯ ಹೊತ್ತಿನಲ್ಲಿ ನೆನಪಿಸಿಕೋ,

ಮಾಡಿದ ಅರ್ಥಪೂರ್ಣ ಕಾರ್ಯವ.

 

ಮರುಗದಿರು ಕೊನೆಯಲ್ಲಿ,

ವ್ಯರ್ಥಮಾಡಿದೆ ಎಂದು.

ಗುರು

ಜೀವನದ ಪ್ರತಿ ಹೆಜ್ಜೆಯಲಿ ಪಾಠವಿದೆ,

ಜೀವನದ ಪ್ರತಿ ಮುಖದಲಿ ಸಂದೇಶವಿದೆ.

ಗೆಲುವು ಕಂಡವರು ಸ್ಫೂರ್ತಿಯ ದೀಪ,

ನ್ಯೂನತೆ ಹೊಂದಿರುವವರು ಎಚ್ಚರಿಕೆ.

 

ಸಂತೋಷ ಹಂಚಿದವರು ಹರ್ಷದ ದಾರಿ,

ದುಃಖ ಅನುಭವಿಸಿದವರು ಕೃತಜ್ಞತೆಯ ಪಾಠ.

ದಯೆಯ ಹೃದಯದವರು ಕರುಣೆಯ ಗೀತೆ,

ಕೊಂಕು  ಮಾತುಗಳನಾಡುವವರು ಸಹನೆಯ ಪಾಠ.

 

ಜೀವನವೇ ಒಂದು ದೊಡ್ಡ ಪಾಠಶಾಲೆ,

ಪ್ರತಿ ಜೀವಿಯೂ ಗುರುವು ಇಲ್ಲಿ.

ಕಲಿಯುವ ಒಳಮನಸ್ಸು ಕಣ್ತೆರೆದರೆ,

ಪ್ರತಿ ಕ್ಷಣವೂ ಮನ್ನೋಲ್ಲಾಸ, ಜೀವನ ಪಾಠ.

Thursday, January 15, 2026

ಮೂಲ ಪ್ರಶ್ನೆ

ಮನಸೇ, ನಿಲ್ಲು ಕ್ಷಣ,

ಪ್ರಶ್ನೆ ಕೇಳಿಕೋ ನಿನ್ನೊಳಗೆ

ಏನು ಮುಖ್ಯ? ಏಕೆ ಮುಖ್ಯ?

ಅದೇ ದಾರಿ ಬೆಳಕಾಗುವುದು.

 

ಅನಗತ್ಯದ ಗೊಂದಲ ತೊರೆ,

ಸತ್ಯದ ಅರ್ಥ ಹಿಡಿದುಕೋ,

ಸಾಧನೆಯ ಹೂವು ಅರಳಲಿ,

ಆತ್ಮಜ್ಞಾನದ ದೀಪ ಬೆಳಗಲಿ.

 

ಅಧ್ಯಯನದ ಸಾಗರದಲ್ಲಿ,

ಅಲೆಗಳೆಷ್ಟು ಎದ್ದರೂ,

ಮೂಲ ಹರಿಗೋಲ ಹಿಡಿ ಸಾಕು,

ಗುರಿಯ ನೀ ತಪ್ಪದೆ ಸೇರುವೆ.

 

ಗುರಿ ನಿಗದಿ ಮಾಡುವಾಗ,

ಕಾರಣ ಕೇಳು ಹೃದಯವ,

ಬಲವಾದ ಕಾರಣವಿರೆ,

ಪ್ರಯತ್ನದ ಫಲ ನಿನ್ನದೇ.

 

ಜೀವನದ ಪ್ರತಿಯೊಂದು ಹೆಜ್ಜೆ,

ಪ್ರಶ್ನೆಯೇ ಮಾರ್ಗದರ್ಶಿ,

ಏನು ಮುಖ್ಯ? ಏಕೆ ಮುಖ್ಯ?

ಅದೇ ನಿನ್ನ ನಿಜದ ದಾರಿದೀಪ.

Wednesday, January 14, 2026

ಗುರಿಯ ದಾರಿ

ಚಿಕ್ಕ ಚಿಂತನೆಯ ಬೀಜ ಬಿತ್ತು

ಅವಕಾಶಗಳ ಅರಣ್ಯ ಬೆಳೆವುದು.  

ಬರೆದ ಗುರಿ ಬೆಳಕಾಗುವುದು, 

ಕತ್ತಲಲ್ಲಿ ದಾರಿ ದೀಪವಾಗುವುದು.  

 

ಆಸೆಯ ನಕ್ಷತ್ರದಂತೆ ಗುರಿ ಹೊಳೆವುದು,  

ಬಯಕೆಯ ಹೆಜ್ಜೆಗಳಿಗೆ ದಾರಿ ತೋರಿವುದು.  

ಹಂಬಲದ ಕಾರಣ ಹೃದಯ ಉಳಿಸುವುದು,  

ಯಾವಕಾಲವಾದರೂ ಮನದಲ್ಲೇ ಉಳಿವುದು.  

 

ಯೋಜನೆ ನದಿಯಂತೆ ಹರಿಯಲಿ, 

ಮನಸ್ಸು ಬಾಗಿ ಆನಂದಿಸಲಿ. 

ಇಂದೇ ಆರಂಭಿಸಿದ ಕೆಲಸ, 

ನಾಳೆಯ ನನಸು ಹುಣ್ಣಿಮೆಯಂತೆ. 

 

ಕನಸುಗಾರ, ಅನ್ವೇಷಿ, 

ಭವಿಷ್ಯ ಗುರಿಗಳಲ್ಲಿ ನೆಲೆಸಿದೆ. 

ಬರೆ, ರೂಪಿಸು, ಜೀವ ತುಂಬು, 

ಹೂವಿನಂತೆ ಅರಳಿ, ಗುರಿ ತಲುಪು. 

Monday, January 12, 2026

ಕೃತಜ್ಞತೆ

ಕೃತಜ್ಞತೆ ಹೃದಯದ ಬೆಳಕು,

ಅಸಮಾಧಾನ ಕರಗಿಸುವ ಬಿಸಿ.

ದೂರುಗಳ ನೆರಳಲ್ಲಿ ನಿಂತರೂ,

ಧನ್ಯತೆಯ ನಗು ದಾರಿ ತೋರುವ ದೀವಿಗೆ.

 

ಜ್ಞಾನ, ಸ್ನೇಹ, ಆರೋಗ್ಯ, ಅವಕಾಶ

ಜೀವನದ ಅಮೂಲ್ಯ ಉಡುಗೊರೆ.

ಸಣ್ಣ ಸಂತೋಷದ ಕಿರಣ,

ಮನದೊಳಗೆ ಕಾಣದ ಅಗ್ನಿಪರ್ವತ.

 

ಸವಾಲಾದರೆ ಅದು ಪಾಠ,

ಕಷ್ಟ ಬಂದರೆ ಅದು ಶಕ್ತಿ.

ಕೃತಜ್ಞತೆಯ ಮನಸೇ ಹೇಳು:

“ಬದುಕೇ ಸೌಂದರ್ಯ, ನಾನು ಸಂಪೂರ್ಣ.”

Thursday, January 8, 2026

ಖಚಿತತೆ

ಖಚಿತವಾಗಿ ಏನು ತಿಳಿದಿದ್ದೀಯೆ?

ಸೂರ್ಯೋದಯವೇ? ನಿನ್ನ ಉಸಿರೇ?

ಮನಸ್ಸಿನ ಕನಸುಗಳೇ?, ನೋವುಗಳೇ?,

ಎಲ್ಲವೂ ಊಹೆಗಳ ನೆರಳಲ್ಲಿ ನಿಂತಿವೆ.

 

ನಂಬಿಕೆಗಳುಮನಸ್ಸಿನ ಕಟ್ಟಡ,

ಕೆಲವು ಬಲವಾದವು,

ಕೆಲವು ಮರಳಿನ ಮನೆ,

ಅವುಗಳೇ ನಮ್ಮ ದಾರಿ.

 

ಪ್ರಕೃತಿ ತತ್ವ ಹೇಳುತ್ತದೆ:

ಸರಳವಾದುದು ಸಾಮಾನ್ಯ ಸತ್ಯ.

ಅತಿಯಾದ ಊಹೆಗಳು

ನಮ್ಮ ಹೆಜ್ಜೆಗಳ ತಪ್ಪಿಸುವುವು.

 

ಗೆಳೆಯಾ!, ನಂಬಿಕೆಗಳ ಪ್ರಶ್ನಿಸಿಕೋ!,

ಪರಿಶೀಲಿಸು, ಸಹಾಯಕ್ಕಿಲ್ಲದವ ಬಿಡು,

ಶಕ್ತಿದಾಯಕವುಗಳನ್ನು ಉಳಿಸಿಕೋ!,

ಅವುಗಳೇ ಬೆಳವಣಿಗೆಯ ಬೀಜ.

 

ಖಚಿತತೆಮೃಗಜಾಲ,

ಪ್ರಶ್ನಿಸುವ ಮನಸ್ಸಿರಲಿ,

ಸರಳ ನಂಬಿಕೆಯೇ ಬೆಳಕು,

ಜೀವನ ದಾರಿದೀಪವದು.

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ,  ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...