ಧನ್ಯ ನೀ ಕವಿಯೇ! ಅಮರ ನೀ ಕವಿಯೇ! ಕನ್ನಡ ನಿತ್ಯೋತ್ಸವ ಕವಿಯೇ!

ತೆರಳಿದೆ ಏಕೆ ಕವಿಯೇ?
ನಿತ್ಯೋತ್ಸವ ಪೂಜೆಗೈದ ಭವಿಯೇ
ಉತ್ಸವ ಮುಗಿದ ನಂತರ
ತವರು ಮನೆಗೆ ನಡೆವಂತೆ
ಹೊರಟೆ ಏಕೆ ಕವಿಯೇ?

ಇಲ್ಲಸಲ್ಲದ ನೆವವ ಹೇಳಿ
ಹೊರಟೆ ಏಕೆ ಮನವೇ?
ಇನ್ನೆಂದು ಹೇಳಲಿ ನಿನ್ನ
ಮತ್ತೆಂದು ಕೇಳಲಿ ನಿನ್ನ
ಮತ್ತೆ ಬಾರದಿರೆಂದು ಹೇಳಲಾರೆ ಕವಿಯೇ!

ಆದಿಯನರಿಯದ ಕತ್ತಲ ಪಯಣಕೆ
ರಹದಾರಿ ತೋರಿದವರಾರು?
ಸ್ವರ್ಣಾಕ್ಷರದಿ ಕೀರ್ತಿಯ ಕೆತ್ತಿಸಿ
ಕೆಲಸವಾಯ್ತೆಂದು ಹೊರಡಿಸಿದವರಾರು?
ನಿನ್ನ ಮರೆಯಲಾರೆ ಎನ್ನ ಮಧುರ ಕವಿಯೇ!

ನಾದವಿರದ ಬದುಕೆಂದು ನಿಸ್ಸಾರವಾಯಿತೇ ಇಂದು
ಕಾವೇರಿ ಜಲ, ಕರುನಾಡಿನ ಕರುಣೆ ಸಾಕಾಯಿತೇ?
ಹಿಂಗಿ ಹೋಯಿತೇ ಭುವನೇಶ್ವರಿಯ ಅಕ್ಷರ ಚಿಲುಮೆ
ಹೊತ್ತಿ ಉರಿದ ಕನ್ನಡದ ಹಿರಿಜೀವ ಇಂದು ನಂದಿತೋ
ನಡೆಯಿತಿಂದು ಹುಡುಕುತಲಿ ನಿಜದ ತಾಣ ಅರಿತು

ನಿಮ್ಮ ಅನುರಾಗವೇ ಬೆಳಗಿದೆ ಎನ್ನೆದೆಯ
ಕನ್ನಡದ ನಿತ್ಯೋತ್ಸವದ ಅಮೃತ ಭಾವದಲಿ
ಯಾವ ಪುಣ್ಯವೋ ಕಾಣೆ ನಲಿದೆವು ನಿಮ್ಮ ಕಾವ್ಯ ಒಲುಮೆಯಲಿ
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಮ್ಮನ್ನು ಬಿಟ್ಟು ಹೊರಟಿರಿ ಮಧುರ ನೆನಹುಗಳ ಹೊತ್ತು

ನಾಡ ದೇವಿಯ ಮಡಿಲಲ್ಲಿ ಕಂಡೆ ನಿಮ್ಮ
ಎದೆಗೆ ಮುತ್ತಿಕ್ಕಿ ಬರಮಾಡಿಕೊಂಡಳು ಹರಿಷದಿ
ಕನ್ನಡ ನಿತ್ಯೋತ್ಸವ ಮುಗಿಯಿತೇ ಕಂದ
ತಡಮಾಡಿದೆ ಏಕೆ ನಿನ್ನ ಕಾವ್ಯಸುಧೆಗೆ ಕಾದಿಹೆನು ಬಾ
ಭವಿತವ್ಯದೊಸಗೆಯಲಿ ಸಾಲಾಗಿರಿಸಿರುವೆನು ಕನ್ನಡದ ದೀಪಗಳನು

ಇಂದು ತಾಯ ಮುಡಿಗೇರಿತು ಮತ್ತೊಂದು ಕನ್ನಡದ ಹೂವು
ನಿಜಸ್ವರ್ಗವನೇ ಏರಿತು ಪ್ರಜ್ವಲಿಸಿ ಕನ್ನಡದ ಜ್ಯೋತಿಯನು
ಏಕೆ ಕರೆದೊಯ್ದೆ ತಾಯೇ,ಬಲುಮೋಹ ನಿನಗೆ ಕನ್ನಡ ಕಾವ್ಯ ಕಡೆದವರ
ಕಾಡುತಿದೆ ಮನ, ಜೀವರಹಿತವಾಗಿದೆ ಕನ್ನಡ ಭಾವವಿರಹ ತಿಮಿರದಿ
ಧನ್ಯ ನೀ ಕವಿಯೇ!ಅಮರ ನೀ ಕವಿಯೇ! ಕನ್ನಡ ನಿತ್ಯೋತ್ಸವ ಕವಿಯೇ!

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...