Monday, May 4, 2020

ನೀರಿನ ಹನಿ

ನಾನೊಂದು ನೀರಿನ ಹನಿಯು, ಚೈತನ್ಯದ ಜೀವದ ಸೆಲೆಯು
ಸಾಗರದೊಳು ನಲಿದಾಡುತಿರುವ ಋಣಿಯು,ಮಮತೆಯ ಖನಿಯು
ಅಲೆ ಅಲೆಗಳಲಾಡುವ ಪ್ರಕೃತಿಯ ಮಗುವು ಜೀವದ ರವರವವು
ಬಿಂಗದಿರನ ಜೊತೆಗೂಡುವೆನು,ಮೆಲ್ಲಮೆಲ್ಲನೆ ಆಗಸಕ್ಕೇರುವೆನು
ನನ್ನಂತೆಯೇ ಆಗಸಕ್ಕೇರುವವರ ಜೊತೆಗೂಡಿ ಮೋಡವಾಗುವೆನು
ಹಾರುತ ಹಾರುತ ಮಾರುತನ ಜೊತೆಗೆ ದೇಶ ಪರ್ಯಟನೆ ಮಾಡುವೆನು
ಎಲ್ಲೋ ಹುಟ್ಟಿ , ಎಲ್ಲೋ ಬೆಳೆದು ನಿಲ್ಲದೆ ಸಾಗಿದೆ ಪಯಣವು
ಸೊಬಗಿನ ಮಲೆಕಾನನದೊಲವಿಗೆ ಹಿತದಿ ಮನಸೋಲುವೆನು
ಮಲೆಯ ಹಸುರಿನ ಬನದೊಳು ಬಿಂಕದಿ ಮಳೆಯಾಗಿ ಕೆಳಗಿಳಿಯುವೆನು
ಬೆಟ್ಟ,ಗುಡ್ಡ,ಕಂದರ,ಕಣಿವೆಗಳಲಿ ಝರಿಝರಿಯಾಗಿ ಹರಿಯುವೆನು
ಧುಮ್ಮಿಕ್ಕುವ ಜೋಗದ ಜಲಪಾತದಿ ರಭಸದಿಂದ ಧುಮುಕುವೆನು
ಝರಿಯಾಗಿ, ತೊರೆಯಾಗಿ, ಜೀವನದಿಯ ಒಡಲ ಸೇರುವೆನು
ಹರಿಯುವೆನು ನಾನು ಹರಿಯುವೆನು ಚೈತನ್ಯದ ಚಿಲುಮೆಯಾಗುವೆನು
ನಿಲ್ಲದ ಪಯಣವು ನನ್ನೀ ಜೀವನವು ಬತ್ತದೆ ಹರಿಯುವ ನನ್ನೀ ನಲವು
ಭೂಮಿ ತಾಯಿಯ ಪಾದವ ತೊಳೆಯುತ ಕಡಲ ಸೇರಲು ಹರಿಯುವೆ
ಕಡಲ ಸೇರುವ ಗುರಿಯು ನನ್ನದು ತಾಯಿಯ ಮಮತೆಯ ಕಾಣುವ ಪರಿಯು
ತಾಯ ಕಾಣುವ ಹಂಬಲದಿ ನಡೆವೆನು ಕಾಣುವೆನೇ ನನ್ನ ತಾಯ ಒಲವನು
ಭಯ, ಆತಂಕದಿ ತರಾತುರಿಯಲಿ ಹೋರಾಡುವೆನು ಗುರಿಯನು ತಲುಪುವೆನು
ಹಕ್ಕಿಯ ಕಲರವ ಗಾಳಿಯ ಮೆಲುನಾದ ಮನದಿ ಮುದವನೇ ನೀಡುವುದು
ಇರಲಾರೆ ಇಲ್ಲೇ , ನಿಲ್ಲಲಾರೆ ಇಲ್ಲೇ, ಮುದದಿ ನಡೆವೆನು ಸುಖದಿಂದೇ
ಮತ್ತೆ ಮತ್ತೆ ಹಂಬಲಿಸುವೆ ಸವಿಯಲು ಈ ಪಯಣಾನುಭವದ ರಸದ ಹೊನಲ
ದೂರದಲ್ಲೆಲ್ಲೋ ಬಿಡದೆ ಸೆಳೆಯುತಿಹುದು ಅಮೃತಗಾನವೊಂದು
ಕರೆಯುತಿಹುದು ಕರುಳ ಕರೆಯೊಂದು ಸೇರು ಬಾ ಒಡಲೊಳೆಂದು
ಸೇರು ಬಾ ನನ್ನೀ ಕಡಲೊಳೆಂದು, ಸೇರು ಬಾ ನನ್ನೀ ಒಡಲೊಳಿಂದು।।

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...