Tuesday, January 31, 2012

ಘರ್ಷಣೆ


ಇಲ್ಲಿ ನೂರಾರು ತತ್ವ-ಆದರ್ಶಗಳಿವೆ;
ಸತ್ತ ಆದರ್ಶಗಳಿವೆ;
ಸಾಯುತ್ತಿರುವ ಆದರ್ಶಗಳಿವೆ;
ಸತ್ತ ಭಾಷೆಗಳಿವೆ;
ಸಾಯುತ್ತಿರುವ ಭಾಷೆಗಳಿವೆ;
ಸತ್ತವರಿದ್ದಾರೆ;
ಸಾಯುವವರಿದ್ದಾರೆ;
ಬದುಕ ಬಯಸುವವರ ಹುಡುಕಬೇಕಿದೆ;
ಪ್ರೀತಿಸುವವರಿದ್ದಾರೆ ಸತ್ತವರನ್ನು;
ಪ್ರೀತಿಸುವವರಿದ್ದಾರೆ ಸಾಯುತ್ತಿರುವವರನ್ನು;
ಬದುಕುವವರ ಪ್ರೀತಿಸುವವರು ಬೇಕಾಗಿದೆ;
ಹಾತೊರೆಯುವ ಮನಗಳು;
ಹಂಬಲಿಸುವ ಮನಗಳು;
ಸ್ಪಂದಿಸದ ಮನಗಳು;
ಎರಡೂ ಎಂದೂ ಸೇರದ ದಿಕ್ಕುಗಳಾಗಿವೆ;
ಅವರ ಕಂಡರೆ ಇವರಿಗಾಗದು
ಇವರ ಕಂಡರೆ ಅವರಿಗಾಗದು;
ಇಬ್ಬರ ನಡುವೆಯೊ ಘರ್ಷಣೆ ನಡೆಯುತ್ತಲೇ ಇರುತ್ತೆ ವಿಶ್ರಾಂತಿಯಿಲ್ಲದೆ;
ಅವರ ಕಾಲು ಇವರೆಳೆಯುತ್ತಾರೆ;
ಅವರ ಕಾಲು ಇವರೆಳೆಯುತ್ತಾರೆ;
ಇವನು ಬಿದ್ದರೆ ಅವನು ನಗುತ್ತಾನೆ;
ಅವನು ಬಿದ್ದರೆ ಇವನು ನಗುತ್ತಾನೆ;
ಯಾವುದಕ್ಕೂ ಕೊನೆಯೆಂಬುದಿಲ್ಲ;
ಇಬ್ಬರಿಗೂ ಕೆಲಸವಿಲ್ಲ;
ಸಮಯ ಕಳೆಯಲು ಬೇಕು ವಿಷಯ;
ವಿಷಯ ಮಂಥನ ಮಾತ್ರ ಯಾರಿಗೂ ಬೇಡ;
ಸ್ವಲ್ಪ ಸಿಹಿ;
ಸ್ವಲ್ಪ ಕಹಿ;
ಇಬ್ಬರೂ ಸೋಲುತ್ತಾರೆ;
ತತ್ವ-ಆದರ್ಶ ಸೊರಗುತ್ತೆ;
ಸಮಸ್ಯೆಗಳು ನಳನಳಿಸುತ್ತೆ;
ಪರಿಸ್ಥಿತಿ ಗಹಗಹಿಸಿ ನಗುತ್ತೆ;
ಕತ್ತಲು ಕವಿಯುತ್ತೆ;
ಹೊಸ ಬೆಳಕು ಹೊಮ್ಮುತ್ತದೆ;
ಅದೇ ಗೋಳು;
ಅದೇ ದೊಂಬರಾಟ;
ಪಾತ್ರಗಳು ಬದಲಾಗುತ್ತೆ;
ಘರ್ಷಣೆ ಮಾತ್ರ ನಿರಂತರ

Saturday, January 21, 2012

ನಾಗರೀಕ ಪ್ರಜ್ಞೆ




ದಿನವೂ ನಿಲ್ಲುತ್ತೇನೆ ರಸ್ತೆಯ ಬದಿ
ಟ್ರಾಫಿಕ್ ಸಿಗ್ನಲ್ ನಲ್ಲಿ;
ಅಲ್ಲಿ ನಡೆಯುವ ವಿದ್ಯಮಾನಗಳನ್ನು
ಗಮನಿಸುತ್ತೇನೆ;
ಮನದಲ್ಲಿ ನೂರು ಯೋಚನೆಗಳು
ಮನೆಮಾಡುತ್ತವೆ;
ಅನೇಕ ಪ್ರಶ್ನೆಗಳು ಮನದಲ್ಲಿ
ಶಾಂತಿಯ ಕದಡುತ್ತದೆ;
ಆದರೆ ನಾನು ಮಾತ್ರ ಮೊಕ ಪ್ರೇಕ್ಷಕ;
ರಸ್ತೆ ನಿಯಮ ಉಲ್ಲಂಘಿಸುವವರು;
ಎಲ್ಲೆಂದರಲ್ಲೇ ಉಗಿಯುವವರು;
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರು;
ಬಹಿರ್ದೆಸೆಗೆ ಹೋಗುವವರು;
ಕಸವನ್ನು ರಸ್ತೆಯಲ್ಲೇ ಚಲ್ಲುವವರು;
ಎಲ್ಲವೂ ಅಯೋಮಯವಿಲ್ಲಿ;
ಶುಚಿಯ ಬಗ್ಗೆ ಎಲ್ಲರಿಗೂ ಗೊತ್ತು
ಶುಚಿಯ ಬಗ್ಗೆ ನೀವು ಅವರನ್ನೇ ಕೇಳಿ,
ಗಂಟೆಗಟ್ಟಲೆ ಮಾತನಾಡುವರು
ಆದರೆ ಅದನ್ನು ಪಾಲಿಸುವ ವಿಷಯದಲ್ಲಿ
ಎಲ್ಲರೂ ನಿಸ್ಸೀಮರೇ ಉಲ್ಲಂಘಿಸುವುದರಲ್ಲಿ;
ನಮಗೆ ನಾಗರೀಕ ಪ್ರಜ್ಞೆ ಬರುವುದಾದರೂ ಯಾವಾಗ?
ನೂರು ಬುದ್ಧರು;
ನೂರು ಗಾಂಧಿಗಳು;
ಹುಟ್ಟಿಬಂದರೂ ನಮ್ಮ ನಡುವಳಿಕೆ ತಿದ್ದಲು ಸಾಧ್ಯವೇ?
ಆ ದಿನ ಬರುವುದೇ?
ಆ ದಿನ ಕನಸಾಗದಿರಲಿ, ಕನಸಾಗದಿರಲಿ.

Wednesday, January 18, 2012

ಸತ್ಯದ ದಾರಿ


ಹತ್ತು- ಹಲವಾರು ಸತ್ಯದ ದಾರಿಗಳಿವೆ;
ಈ ಸತ್ಯ ಎಲ್ಲರಿಗೂ ಗೊತ್ತು;
ಬಹಳಷ್ಟು ಅನ್ವೇಷಕರು ಹುಡುಕಿದ್ದಾರೆ
ಇನ್ನೂ ಹುಡುಕುತ್ತಿದ್ದಾರೆ, ಸತ್ಯದ ದಾರಿಗಳನ್ನ;
ನಾನು ಸತ್ಯ;
ನೀನು ಸತ್ಯ;
ರಾಮ ಸತ್ಯ;
ರಹೀಮ ಸತ್ಯ;
ಕ್ರಿಸ್ತ ಸತ್ಯ;
ಬಸವಣ್ಣ,ಬುದ್ಧ,ಮಹಾವೀರನೂ ಸತ್ಯ;
ವಿಜ್ಯಾನ,ಅಧ್ಯಾತ್ಮ ,ಹತ್ತು ಹಲವು ಸತ್ಯಗಳು
ಅವರವರಿಗೆ ಗೋಚರಿಸಿದ್ದು,ಪ್ರೇರಣೆಯಾಗಿದ್ದು ಸತ್ಯವೇ
ಅಲ್ಲಗೆಳದವರು ಯಾರು?
ನನ್ನಲ್ಲಿ ನಿನ್ನನ್ನು ಕಾಣದವ;
ರಾಮನಲ್ಲಿ ರಹೀಮನ ಕಾಣದವ;
ರಹೀಮನಲ್ಲಿ ರಾಮ,ಕ್ರಿಸ್ತ,ಬುದ್ಧ,ಬಸವನ ಕಾಣದವ;
ಅಂತಹವನ ಆಲೋಚನೆಗಳು ಹೇಗೆ ಸತ್ಯವಾದಾವು?
ಎಲ್ಲಾ ತತ್ವಗಳಲ್ಲಿ,ಧರ್ಮಗಳಲ್ಲಿ ಮಾನವೀಯತೆ ಮರೆಯಾದರೆ ಅದು ಸತ್ಯ ಹೇಗಾದೀತು?
ಎಲ್ಲಾ ಸತ್ಯಗಳು ಸುಕ್ಕುಗಟ್ಟಿದ ದಾರದಂತೆ;
ಒಳ ಸುಳಿಗಳ ದಾರಿಯಂತೆ;
ಎಲ್ಲೋ ಒಂದು ಕಡೆ ಎಲ್ಲವೂ ಸೇರಲೇಬೇಕು;
ಅದನ್ನು ಹುಡುಕುವವನೇ ನಿಜವಾದ ಅನ್ವೇಷಕ;
ಆ ದಾರಿಯೇ ಎಲ್ಲರಿಗೂ ಬೇಕಾಗಿದೆ;
ಅದೇ ನಿಜವಾದ ಸತ್ಯದ ದಾರಿ.

Sunday, January 15, 2012

ಮುಖವಾಡ


ದಿನವೂ ಹೊರಡುತ್ತೇವೆ ಮನೆಯ ತೊರೆದು, ಬಗೆ ಬಗೆಯ ಮುಖವಾಡಗಳ ಕಿಸೆಯಲ್ಲಿ ಹೊತ್ತು
ಅನೇಕ ಕನಸುಗಳ ಹೊತ್ತು,ಕನಸು ಕಾಣದೆ ಇರಲಾರೆವಲ್ಲ ಅದಕ್ಕೆ;
ಇಂದಾದರೂ ಕೈಗೂಡುವುದೆಂಬ ಹಂಬಲವಿದೆ ಬಾಳಿಗೆ, ಸಿಗಲೇಬೇಕೆಂಬ ಕೆಟ್ಟ ಹಠವೂ ಇದೆ ಅದಕ್ಕೆ;
ಬಾಳು ಸಾಗಲೇಬೇಕು ಭರವಸೆಯಿಂದ ನಾಳೆಯ ಕಡೆಗೆ; ಮುಖವಾಡಗಳು,ಪೊಳ್ಳು ಆದರ್ಶಗಳು ನಮಗಾಗಿಯೇ ಬಹಳಷ್ಟಿದೆ ಬದುಕಿಗೆ;

ಹತ್ತು ಮುಖಗಳು;
ಹತ್ತು ಮುಖವಾಡಗಳು;
ನೂರು ದಾರಿಗಳು;
ಎಲ್ಲವನ್ನೂ ಅರಿಯಬೇಕು,ನಮ್ಮ ದಾರಿಯನ್ನು ನಾವೇ ಆರಿಸಿಕೊಳ್ಳಬೇಕು;

ತಪ್ಪು-ಒಪ್ಪುಗಳು;
ಸತ್ಯ-ಅಸತ್ಯಗಳು;
ನೂರು ದಾರಿದೀಪಗಳು;
ಎಲ್ಲವೂ ತಿಳಿದಿದೆ, ಅದರೂ ತಪ್ಪುಹೆಜ್ಜೆಯಿಡುತ್ತೇವೆ ನಮ್ಮ ಗುರಿ ಮುಟ್ಟಲು;

ನಗಬೇಕು ಎದುರುಬಂದವರಿಗೆ
ಮನದೊಳಗೆ ಅಸಹ್ಯ ಕೋಪ-ದ್ವೇಷವಿದ್ದರೂ
ನಮ್ಮ ಬೇಳೆ ಬೇಯಬೇಕಲ್ಲ, ನಮಗೆ ನಾವೇ ಮುಖವಾಡಗಳನ್ನ ತೊಡಿಸಿಕೊಂಡು
ದಿನವೂ ಒಂದೊಂದು ಮುಖವಾಡ, ನಿಜವಾದ ಮುಖವಾವುದೆಂದು ನಮಗೇ ಮರೆತಿದೆ,ನಿಜ ಮುಖ ನಮಗೇ ಬೇಕಿಲ್ಲ!;

ಎಲ್ಲವೂ ನಮಗಾಗಿ
ಎಲ್ಲವೂ ಪೈಪೋಟಿಗಾಗಿ
ಎಲ್ಲರಿಗೂ ನಾವೇ ಶ್ರೇಷ್ಠವೆಂದು ತೋರಿಸುವುದಕ್ಕಾಗಿ
ನಮ್ಮ ಅಧಃಪತನ ನಮ್ಮಿಂದಲೇ ಎಂಬುದ ನಾವು ಮರೆತಿದ್ದೇವೆ, ಆದರೂ ಹೊಡೆದಾಡುತ್ತೇವೆ ಸಾಯಲು;

ಎಲ್ಲವನ್ನು ಕಂಡು ನಗುಬರುವುದು
ಕನ್ನಡಿಯ ಮುಂದೆ ನಮ್ಮದೇ ಮುಖವಾಡ ಕಳಚುವುದು
ಹೆದರಿಕೆ ಇದೆ, ನಮ್ಮತನವನ್ನು ನಾವು ಮಾರಾಟ ಮಾಡಿಬಿಟ್ಟಿದ್ದೇವೆಂದು
ಅದರೂ ಪೊಳ್ಳು ಆದರ್ಶಗಳನ್ನು ಬಿಡುವುದಿಲ್ಲ, ಅದರಲ್ಲೇ ನಮ್ಮ ಸುಖವಿದೆ ಎಂಬ ಪರದೆ ಕಳಚಿದರೂ ನಾವು ಬಿಡುವುದಿಲ್ಲ.
ಮುಖವಾಡವಿಲ್ಲದೆ ನಾವು ಬದುಕಲು ಸಾಧ್ಯವೇ?

Saturday, January 14, 2012

ಸಂಕ್ರಾಂತಿ


ಸೂರ್ಯನೋ ಹೊಸ ಪಥದತ್ತ ತೆರಳುತ್ತಾನೆ
ಅವನ ದಾರಿಯನ್ನು ನೋಡಿ ನಾವು ಹರ್ಷಿಸುತ್ತೇವೆ
ಹಬ್ಬ ಆಚರಿಸುತ್ತೇವೆ ಮಕರ ಸಂಕ್ರಾಂತಿಯೆಂದು

ಎಳ್ಳು ಬೆಲ್ಲ ಹಂಚಿ ಆನಂದಿಸುತ್ತೇವೆ
ಪ್ರೀತಿ-ವಿಶ್ವಾಸ ಹೆಚ್ಚಾಗಲಿಯೆಂದು ಆಶಿಸುತ್ತೇವೆ

ಹಬ್ಬಗಳು ಅರ್ಥ ಕಳೆದುಕೊಂಡರೂ
ಆಧುನಿಕತೆ ಆದರ್ಶವನ್ನು ಮರೆಮಾಚಿದರೂ
ಸಂಸ್ಕೃತಿ-ಪರಂಪರೆ ಮಾಸುತ್ತಿದ್ದರೂ
ಒಮ್ಮೆಯಾದರೂ ನಮ್ಮತನವ ನೆನೆಯುವ ದಿನವಾಗಲಿಯೆಂದು ಆಶಿಸುತ್ತೇವೆ

ಆಧುನಿಕತೆಯಲ್ಲಿ
ತಾಂತ್ರಿಕತೆಯಲ್ಲಿ
ನಗರದ ಆರ್ಭಟದಲ್ಲಿ
ನಮ್ಮ ತನವ ಮರೆತ ನಮಗೆ
ಹಬ್ಬಗಳು ಅರಿವನ್ನು ಮೊಡಿಸಲಿ
ಹಳ್ಳಿಯ ಜೀವನ ಎಂದೆಂದೂ ಹಸುರಾಗಿ ಆದರ್ಶವಾಗಿ ಕಾಣಲಿ
ಹಬ್ಬಗಳು ಸಾಮಾಜಿಕ ಸಾಮಾರಸ್ಯ ಮನಮನಗಳಲ್ಲಿ ಬಿತ್ತಲಿ
ಆಚರಣೆಗಳು ಅರ್ಥಪೂರ್ಣವಾಗಿರಲಿ ಎಂದು ಆಶಿಸುತ್ತೇವೆ.

Sunday, January 1, 2012

ಹೊಸವರುಷ-2012


ಹೊಸ ವರುಷವು ಬಂತೊಂದು
ಎಲ್ಲೆಡೆಯಲ್ಲೂ ಸಂತಸ ತುಂಬಿದೆಯಿಂದು

ವರುಷ ವರುಷವೂ ಸಂತಸ ಉಕ್ಕುತ್ತಿದೆ ಕೇಳಿ
ಗುಂಡು ಪಾರ್ಟಿ.ಕೂಗಾಟ,ಕಿರುಚಾಟ ಹೊಸತನವೇನಿದೆ ಹೇಳಿ?

ಹೊಟ್ಟೆ ತುಂಬಿದವರಿಗೆ ಖರ್ಚುಮಾಡಲು ನೂರು ದಾರಿಗಳಿವೆ ಇಲ್ಲಿ
ಹಸಿದವರಿಗೆ ಒಂದೇ ಒಂದು ದಾರಿಯೊ ಕಾಣಿಸದು ಸಂಪಾದನೆಗೆ ಇಲ್ಲಿ

ಹೊಸತೋ ಹಳತೋ ಹಸಿದವರಿಗೆ ಎಲ್ಲವೂ ಒಂದೇ
ಸಮಾನತೆಯ ಸರ್ವೋದಯ ಆಗುವುದೇ ಇಂದು?

ಶತ-ಶತಮಾನಗಳು ಕಳೆದರೂ
ನೂರಾರು ಬದಲಾವಣೆಗಳು ಕಂಡರೂ

ಚೈತನ್ಯವೆಂದೂ ಮಾಯವಾಗಿಲ್ಲ ಈ ಜಗದಲ್ಲಿ
ಇರದುದೆಡೆಗೆ ನಡೆವ ಛಲ ಮನುಜ ಬಿಟ್ಟಿಲ್ಲ ಇಲ್ಲಿ

ಏನೇ ಇರಲಿ
ಹೊಸವರುಷ ಬರಲಿ
ಎಲ್ಲರಿಗೂ ಹರುಷ ತರಲಿ

Wednesday, December 28, 2011

ಬದಲಾವಣೆಗೆ ಪಕ್ಕಾಗು


ಮನದ ನೋವೇ ಗರಿಗೆದರಬೇಡ
ಮನದ ನೆಮ್ಮದಿಯ ಹಾಳುಗೆಡವಬೇಡ
ಮನಕ್ಕೆ ನೋವಾಗಿದೆ ನಿಜ, ಬೇಡ, ಬೇಡ
ಮತ್ತೆ ಮತ್ತೆ ನೆನಪಿಸಿ ಎದೆಗುಂದಿಸಬೇಡ||

ಮನದಲ್ಲಿ ನೋವಿದೆ
ನೋವಿಗೆ ಪರಿಹಾರವಿದೆ
ತುಸು ಕಾಯಬೇಕಿದೆ
ತಾಳ್ಮೆಯ ಅಗತ್ಯವಿದೆ||

ಮನವೇ ಬಲವಾಗು
ನೋವುಗಳ ಪ್ರೀತಿಸಿ ತಲೆಬಾಗು
ನವೋದಯದ ಸ್ಪರ್ಧೆಗೆ ಛಲವಾಗು
ಬದಲಾವಣೆಗೆ ಪಕ್ಕಾಗು||

ಕಾರ್ಖಾನೆಯ ಕೆಲಸ


ದಿನವೂ ಹನ್ನೆರಡು ನಿಮಿಷಗಳ ನಡುಗೆ
ಮನೆಯಿಂದ ಕಾರ್ಖಾನೆಗೆ ಹೊರಡುವ ಗಳಿಗೆ
ಕತ್ತಲು,ಮಳೆ,ಗಾಳಿ ಲೆಕ್ಕವಿಲ್ಲದ ಹೆಜ್ಜೆಗುರುತುಗಳು
ಸಂತೋಷ,ದುಃಖ,ನೋವು,ನಲಿವುಗಳ ಮಾಸದ ನೆನಹುಗಳು\\

ದಿನಕ್ಕೆ ಎಂಟು ಗಂಟೆ ನಮಗಿದೆ ದುಡಿತ
ಸಮಸ್ಯೆಗಳ ಗಂಟು ಬಿಡಿಸುವ ಗಣಿತ
ಲೆಕ್ಕಾಚಾರ,ಪರಿಹಾರ ತಲೆಕೆಳಗಾಗುವುದು ಗಣಕ
ಬಿಡದೇ ತ್ರಿವಿಕ್ರಮನಂತೆ ಪ್ರಯತ್ನಿಸುವುದೇ ನಮ್ಮ ಕಾಯಕ\\

ಸಮಯ ಹೋಗುವುದೇ ತಿಳಿಯುವುದಿಲ್ಲ
ನಗುನಗುತ್ತಾ ಎಲ್ಲಕ್ಕೂ ಸಿದ್ಧರಿದ್ದೇವೆ ಸೈನಿಕರಂತೆ
ಎಲ್ಲರ ಸಮಸ್ಯೆಗಳಿಗೂ ಹುಡುಕುವೆವು ಪರಿಹಾರ
ನಮ್ಮ ಸಮಸ್ಯೆಗಳು ನೂರಾರು ಯಾರೂ ನೀಡರು ಸಹಕಾರ\\

ಜಾಡುಹೊಡಿ,ಎಣ್ಣೆಹಾಕು,ಯಂತ್ರಗಳ ಸಪ್ಪಳ
ಕತ್ತೆಯ ದುಡಿತ, ಯಂತ್ರಗಳೇ ನಮ್ಮ ಜೀವಾಳ
ಓಡಬೇಕು,ಓಡುತ್ತಲ್ಲೇ ಇರಬೇಕು ನಿಲ್ಲದ ಕುದುರೆ
ನಿಂತರೆ ಎಲ್ಲರ ಬೈಗಳೂ,ಕೈಗಳೂ ನಮ್ಮ ಕಡೆಗೆ\\

ಉತ್ಪಾದನೆಯೇ ಪ್ರಗತಿ,ಸಮಯದ ಕೊರತೆಯಿದೆ
ಹಬ್ಬ-ಹರಿದಿನಗಳು ನಡೆಯುವುದು ನಾವಿಲ್ಲದೆ
’ಜನ ಮೊದಲು ಹೃದಯ ಮುಟ್ಟು’ಘೋಷಣೆ
ಬೂಟಾಟಿಕೆಯ ಬೆಣ್ಣೆಮಾತುಗಳ ಶೋಷಣೆ\\

Tuesday, December 27, 2011

ಇಂದು ನನ್ನ ಜನುಮ ದಿನ


ಇಂದು ನನ್ನ ಜನುಮ ದಿನ
ತಾಯ ಮಡಿಲ ತುಂಬಿದ ದಿನ

ಡಿಸೆಂಬರ್ ಚಳಿಯು ನಡುಗಿಸುವ ದಿನ;
ಆಕಾಶದಲ್ಲಿ ನಕ್ಷತ್ರಗಳು ಹೊಳೆಯಲಿಲ್ಲ;
ಕೋಗಿಲೆಗಳು ಹಾಡಲಿಲ್ಲ;
ನವಿಲುಗಳು ಸಂತೋಷದಿ ಕುಣಿಯಲಿಲ್ಲ;
ತಂಗಾಳಿ ಬೀಸಲಿಲ್ಲ;
ನದಿಗಳು ಉಕ್ಕಿ ಹರಿಯಲಿಲ್ಲ;
ಸಧ್ಯ ಅದೃಷ್ಟವೆಂಬಂತೆ ಭೂಮಿ ನಡುಗಲಿಲ್ಲ;

ಸನ್ಯಾಸಿ ನಾನಲ್ಲ;
ರಾಜಕುಮಾರ ನಾನಾಗಿರಲಿಲ್ಲ;
ದೇವಧೂತನಂತೂ ಅಲ್ಲವೇ ಅಲ್ಲ;
ಸಮಾಜ ಸುಧಾರಕನಂತೂ ಅಲ್ಲ;
ಸಾಮಾನ್ಯರಲ್ಲಿ ಅತಿಸಾಮಾನ್ಯ ನಾನು;
ಅಮ್ಮ ನೋವಿನಿಂದ ನರಳುತ್ತಿದ್ದಳು
ಏನೂ ಅರಿಯದೆ ಭೂಮಿಗೆ ಬಂದದ್ದಕ್ಕೆ ನಾನು ಅಳುತ್ತಿದ್ದೆ;

Monday, December 26, 2011

ಅಳುದಾದರೆ ಅತ್ತು ಬಿಡು


ಅಳುದಾದರೆ ಅತ್ತು ಬಿಡು
ಮನದಲ್ಲಿ ನೋವುಗಳ ಬಚ್ಚಿಡಬೇಡ

ಮನಸ್ಸು ಆಕಾಶದಂತೆ
ಕರಿಮೋಡ ಭಾರವಾದ ನೋವುಗಳಂತೆ
ಆಕಾಶವ ಕರಿಮೋಡ ಬಳಸಿದರೆ
ಆಕಾಶವೂ ಅಳುವುದು ಮಳೆಯ ಸುರಿಸಿ

ಮನಸ್ಸು ಆಕಾಶದಂತೆ
ತಿಳಿಯಾಗಿಡು ಮನದ ಭಾರವ ಹೊರಚೆಲ್ಲಿ
ಜಾಗಕೊಡು ಮುಂದೆ ಬರುವ ನೋವುಗಳಿಗೆ
ಮನವ ತಿಳಿಯಾಗಿಟ್ಟು ಸಹಕರಿಸಿ

ಮನಸ್ಸು ಆಕಾಶದಂತೆ
ಆಕಾಶಕ್ಕೆ ಹಾರಬೇಕು ಮನದ ರೆಕ್ಕೆ ಬಿಚ್ಚಿ
ಮನವು ತೇಲಬೇಕು ನೋವುಗಳ ಬದಿಗಿಟ್ಟು
ಮನವು ಭಾರವಾದರೆ ಹಾರುವುದಾದರೂ ಹೇಗೆ? ಯೋಚಿಸು

ಅಳುವುದಾದರೆ ಅತ್ತು ಬಿಡು
ಮಳೆಯೊಡನೆ ಯಾರಿಗೂ ಅನುಮಾನ ಬರುವುದಿಲ್ಲ
ನಿನ್ನ ನೋವು,ಮೋಡ ಎರಡು ಒಂದಾಗಿ ಕಡಲ ಸೇರಲಿ
ಮತ್ತೆ ಮೋಡ,ನೋವು ಕಟ್ಟಬೇಕಲ್ಲ

Sunday, December 25, 2011

ಶುಭಾಷಯ


ಗೆಳೆಯ ನಿನಗೆ ಶುಭಾಷಯ
ಏನೆಂದು ಹರಸಲಿ?ಏನೆಂದು ಕೇಳಿಕೊಳ್ಳಲಿ?
ಗೆಳೆಯಾ ಗೆಳೆಯನಾಗೆಂದು ಕೇಳಿಕೊಳ್ಳಲೇ?
ಸಕಲ ಸೌಭಾಗ್ಯಗಳು ನಿನಗೆ ಸಿಗಲೆಂದು ಪ್ರಾರ್ಥಿಸಲೇ?

ಒಬ್ಬರಿಗೊಬ್ಬರು ಸಿಗುವುದು ಅಪರೂಪ ನಿಜ,
ಆದರೆ ನಿನ್ನ ನೆನಪು ಹೊಸ ಹುಮ್ಮಸ್ಸು ನೀಡುವುದು ಗೆಳೆಯ.

ಮರೆವುದು ಲೋಕ ಸಹಜ ನಿಜ,
ಆದರೆ ನಿನಗಾಗಿ ನನ್ನ ಮನಸು ಮಿಡಿಯುತ್ತದೆ ಗೆಳೆಯ.

ಆಸ್ತಿ,ಅಂತಸ್ತು,ಪ್ರತಿಷ್ಟೆ,ಅಧಿಕಾರ ಎಲ್ಲವೂ ಇದೆ ನಿಜ,
ಆದರೆ ಸ್ನೇಹಕ್ಕೆ ಇವಾವುದೂ ಬೇಡ ಗೆಳೆಯ.

ನಮ್ಮ ಚಿನ್ನದಂತಹ ದಿನಗಳು ಕಳೆದುಹೋಗಿವೆ ನಿಜ,
ಆದರೆ ನಮ್ಮ ನೆನಪುಗಳು ಇನ್ನೂ ಸತ್ತಿಲ್ಲ ಗೆಳೆಯ.

ಗೆಳೆತನ,ಸ್ನೇಹದ ಬಗ್ಗೆ ಹೇಳಿಕೊಳ್ಳುತ್ತೇವೆ ನಿಜ,
ಆದರೆ ಅದೇ ಗೆಳೆಯತನವನ್ನು ನಿಭಾಯಿಸಲು ಕಷ್ಟ ಗೆಳೆಯ.

ನಮ್ಮ ಗೆಳೆತನ ಅಮರವಾಗಲಿ
ನಿನಗೆ ಶುಭವಾಗಲಿ
ಎಂದಷ್ಟೇ ಆಶಿಸುತ್ತೇನೆ ಗೆಳೆಯ.

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...