Saturday, May 30, 2020

ನವರಸ ನಾಟಕ

ಅರ್ಥ ಮಾಡಿಕೋ ಎಂದು ಈ ಕವಿತೆಯ ಬರೆಯಲಿಲ್ಲ;
ಓದಿ ಸಂತೋಷ ಪಡು ಎಂದೂ ಈ ಕವಿತೆಯ ಬರೆಯಲಿಲ್ಲ;
ನಾ ಬರೆವಾಗ ಮನದ ಕಡಲೊಳಗೆ ನಡೆವುದು ಸಂಘರ್ಷ,
ಕದನ,ಏರಿಳಿತ, ಕೋಲಾಹಲ,ಬೆಚ್ಚಿಬೀಳಿಸುವ ಘಟನೆಗಳು;
ನನ್ನೊಳಗೆ ನಡೆಯುವ ಘರ್ಷಣೆಯ ಪರಿಣಾಮ ಈ ಕವನ ;
ಓದುವಾಗ ಗಮನಿಸು ನಿನ್ನ ಮನದೊಳು ನಡೆವುದೇನೆಂದು?
ಉತ್ಸವವೋ? ಪ್ರಣಯವೋ? ಪ್ರಳಯವೋ? ಶವದ ಮೆರವಣಿಗೆಯೂ?
ಶೋಕವೋ? ಶೃಂಗಾರವೋ? ಭೀಭಿತ್ಸವೋ? ಆಶ್ಚರ್ಯವೋ?;
ನವರಸಗಳ ನಾಟಕದ ಅಂಕವಾಗುವುದು ನಿನ್ನ ಮನ
ಅನುಭವಿಸು, ಅನುರಣಿಸು ನಿನ್ನೊಳು ನಡೆವ ಕದನವ;
ಏನು ಭಾವಗಳ ಹುಚ್ಚು ಮಳೆಯೋ? ಹೊಳೆಯೋ?
ದುಃಖ,ಪರಿತ್ಯಕ್ತ, ಶೂನ್ಯ ಭಾವನೆಗಳ ಸೋಜಿಗವೋ?
ಆಲೋಚನೆಗಳ ಹುಚ್ಚು ಹುಚ್ಚು ಸಂತೆ ಮನದೊಳಗೆ
ಮನೆಮಾಡುವುದೋ? ನೀನಲ್ಲದೆ ಬೇರಾರೂ ತಿಳಿಯರು!
ತೆರೆಯನೆಳೆ ಕಣ್ಣುಮುಚ್ಚಿ ನಡೆವ ಕದನಕೆ, ಧ್ಯಾನಿಸು
ಅಡಿಯಿಡು ಮೊಳೆತ ಆಲೋಚನೆಯ ಸಾಕ್ಷಾತ್ಕರಿಸಿಕೊಳ್ಳಲು
ನಕ್ಕು ಬಿಡು, ನಕ್ಕು ಬಿಡು ಆ ಕವಿಯ ಮೂರ್ಖತನಕೆ ।।

ಪ್ರಕೃತಿ ಹಂಬಲ

ಮತ್ತೆ ಅದೇ ತವಕ, ಕಾತರ ಅಸೆ ಕಂಗಳಿಂದ
ಮೊದಲು ನೋಡಿಬಿಡಬೇಕೆಂಬ ತೀವ್ರ ಹಂಬಲ
ಕಿಟಕಿಯ ಬಳಿ ಓದಿ ಬಂದೆ ಕಾತರದ ಕಂಗಳೊಂದಿಗೆ;
ಮನದಲ್ಲೇನೋ ಕಳವಳ ದೂರ ದೂರ ದಿಟ್ಟಿಸುತ್ತಿದೇನೆ
ಕಾಣಿಸಲಿಲ್ಲ ಮನದಲ್ಲಿ ನೆಲೆಸಿಹ ಆ ಸುಂದರ ಬಿಂಬ
ಮಂಜಿನ ತೆರೆ ನಿಧಾನವಾಗಿ ಸೆಳೆಯುತ್ತಿದೆ ಪ್ರಕೃತಿ
ನಗುವ ದೇವಶಿಲ್ಪದ ದರುಶನವಿಲ್ಲವಾಯಿತೆನೆಗಿಂದು
ಮುರುಟಿದೆ ಬೇಗುದಿಯಲಿ ಮನ ನರಳಿದೆ, ಪರಿತಪಿಸಿದೆ
ಆ ಧ್ಯಾನ ಮೂರ್ತಿಯ ಗೋಚರತೆ ಇಂದೆನೆಗೆ ಕನಸಾಗಿದೆ
ಹಬ್ಬುತ್ತಲಿರುವ ತಿಮಿರದ ಆವೇಗಕೆ ಸಂಜೆಯ ದೀಪ ಅರಿತು
ಮನದೊಳಾವರಣದಲಿ ದುಃಖ ಉಮ್ಮಳಿಸಿತು ಕಾಣದೆ ದೇವಶಿಲೆಯ
ದರುಶನ ಭಾಗ್ಯವಿಲ್ಲವಾಯಿತೆನೆಗಿಂದು , ನಾಳೆ ಏನೋ? ತಿಳಿದವರಾರು?

Sunday, May 24, 2020

ಯಾವ ರಾಗ?

ಯಾವ ಕರೆಗೋ?
ಯಾವ ಕಡೆಗೋ?
ಹೊರಳುವುದು ಮನ
ಕೇಳಿ ಕಾಣದರಿಯದ ಗಾನಕೆ ।।

ಕರಗುವುದು ಮನ
ಕೆರಳುವುದು ಮನ
ನಿದ್ದೆಯಲ್ಲೂ ಕಾಡುವುದು
ಕಂಡು ಕೇಳರಿಯದ ರಾಗಕೆ ।।

ಮನವ ಶೋಧಿಸುವುದು
ದಿಕ್ಕುಗಾಣದೆ ಓಡಿಹುದು
ಯುದ್ಧದ ಸೆರೆಯಾಳಾಗಲೇ
ಇಲ್ಲ, ಇನಿದನಿಗೆ ಶರಣಾಗಲೇ? ।।

ಯಾವ ಕರೆ? ಯಾವ ಕಡೆ?
ಯಾವ ಗಾನ? ಯಾವ ರಾಗ?
ಮನಸೋತಿಹೆ ಆ ಅನಂತ ನಾದಕೆ
ತಲೆದೂಗುತಿಹೆ ಮೌನ ರಾಗಕೆ ।।

ಅರ್ಥವಾಗುತ್ತಿಲ್ಲ!

ಏಕಾಗಿ ಈ ಮಳೆ?
ಅರ್ಥವಾಗುತ್ತಿಲ್ಲ;
ಯಾರ ವ್ಯಥೆಯ ಕಣ್ಣೀರೋ?
ಅರ್ಥವಾಗುತ್ತಿಲ್ಲ;
ಯಾರ ವಿರಹದ ಕಥೆಯೋ?
ಅರ್ಥವಾಗುತ್ತಿಲ್ಲ;
ಯಾರ ಮಧುರ ಮಿಲನದ ಒಲವೋ?
ಅರ್ಥವಾಗುತ್ತಿಲ್ಲ;
ಯಾರ ಕರುಳ ಮಮತೆಯ ಕರೆಯೋ?
ಅರ್ಥವಾಗುತ್ತಿಲ್ಲ;

ಅತಿಥಿ !

ಬಾ, ಓ ಅಪರಿಚಿತ ಅತಿಥಿ !
ಭಯಬೇಡ ಅಪಾಯವಿಲ್ಲಿಲ್ಲ
ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು
ಹಾಡು ಬಾ ವಸಂತ ಗೀತೆ ।।

ಚಳಿಗಾಳಿ ಹೆದರಿ ಓಡಿಹೋಗಿದೆ
ಸುಮಗಳರಳಿ ಸುವಾಸನೆ ಬೀರಿದೆ
ಬಾ ಅತಿಥಿಯೇ! ನೀನಿಲ್ಲಿಯೆ ನೆಲೆಸು
ಹಾಡು ಬಾ ಭಾವ ಗೀತೆ ।।

Monday, May 18, 2020

ಅಡ್ಡಗೋಡೆ

ಮನವು ತುಂಬಿಹುದು ನೂರು ಬೇಡ ಚಿಂತೆಗಳಿಂದ
ಪ್ರತಿನಡೆಯಲ್ಲೂ ಆತಂಕ,ಅಡೆತಡೆಗಳು;
ಬೇಸರ, ನೋವು ಸೊರಗಿ ನೊಂದು ಬೆಂದಿದೆ ಈ ಮನವು;
ಭರವಸೆ,ಆಶಾವಾದಗಳೆಲ್ಲ ಬರೀ ನೀರಸವೆನಿಸಿದೆ
ನಡೆಯದು ಈ ಜೀವನ ಬರೀ ಜೊಳ್ಳು ಮಾತಿನಲ್ಲಿ
ಮನದ ಅಡೆತಡೆಗಳೇ ನೂರಿರುವಾಗ, ಮೀರುವುದಾದರೂ ಹೇಗೆ?
ಅಡ್ಡಗೋಡೆಯಿಲ್ಲ ಸಾಧನೆಯ ಹಾದಿಗೆ;
ಮೀರು ಮನದ ಪರಿಧಿಯ,ಹಾರು ಸಾಧನೆಯ ಶಿಖರದೆಡೆಗೆ! ||

ಮುನ್ನೋಟ

ಒಮ್ಮೆ ದೀರ್ಘವಾಗಿ ಆಲೋಚಿಸು
ಮನವು ಶುದ್ಧವಾಗಿರಲಿ; ಪ್ರಾಮಾಣಿಕವಾಗಿರಲಿ’
ಮಿಥ್ಯೆ, ನಾಟಕ ಬೇಡವೇ ಬೇಡ;
ತೆರೆದ ಪುಸ್ತಕವಾಗು ಶುದ್ದ ಸ್ಪಟಿಕದಂತೆ;
ಹೇಳುವಂತವನಾಗು ಮುಕ್ತವಾಗಿ, ನಿರ್ಭಿತಿಯಿಂದ;
ಎಲ್ಲ ವಿಧದಲ್ಲಿಯೂ ನಿನ್ನೀಜೀವನ ಪರಿಪೂರ್ಣವೇ?
ನೀ ಕಂಡ ಕನಸುಗಳೆಲ್ಲಾ ನನಸಾಗಿವೆಯೇ?
ಹೃನ್ಮನಗಳ ತೆರೆದು ನೀ ಜೀವನ ಸವಿಯುತ್ತಿರುವೆಯಾ?
ಹೇಗೆ ಕಾಣುವುದು ನಿನ್ನೀಜೀವನ ತೋರೆನಗೆ ಗೆಳೆಯ ||

Sunday, May 10, 2020

ಬೆಳಗಿನ ಬೆರಗು

ಎಂತಹ ಬೆಳಗಿದು ಮನವನೇ ಬೆರಗುಗೊಳಿಸುತಿಹುದು
ದಿನವೂ ನೋಡುವ ಬೆಳಗಿದೇನಾ ಸಂದೇಹವಿದೆ ಕೇಳಿಲ್ಲಿ:
ಹಿಗ್ಗುವ ಕತ್ತಲ ಪರದೆಯ ತೆರೆಯನು ಸರಿಸುತ ಹಬ್ಬಿದೆ
ಕಿತ್ತಳೆ ಬಣ್ಣ ಆಗಸದೆಲ್ಲಡೆ ಚಲ್ಲುತ ಬಂದಿತು ನೋಡಲ್ಲಿ:

ಅರರೆ! ನೋಡಲ್ಲಿ ಬೆಳ್ಮೋಡಗಳ ಸಾಲು ಸಾಲು
ಪಯಣಗೈಯುತಿವೆ ದೂರದೂರಿಗೆ ಕಾಣದೆ ನೊಂದು:
ಹಿಂದೆಯೇ ಕೃಷ್ಣಮೋಡಗಳು ಸಾಗಿಬರುತ್ತಿವೆ
ಪ್ರೇಮಿಯನರಸಿ ಬರುವಂತೆ ವಿರಹದಿ ನೊಂದು ಬೆಂದು:

ಅರರೆ! ನೋಡಲ್ಲಿ ಬೆಳ್ಳಕ್ಕಿಗಳ ಸಾಲು ಸಾಲು
ಸಂತೋಷದ ಆಮೋದ ಉನ್ಮಾದದಲಿ ನಲಿಯುತಿವೆ:
ಆಗಸದಲಿ ನಡೆಯುತಿದೆ ಬೆಳಗಿನ ರಂಗಿನಾಟ
ಭೂರಮೆ ಹೂವರಳಿಸಿ,ತರುಲತೆಗಳು ಸುಗಂಧ ಸೂಸಿವೆ:

Monday, May 4, 2020

ನೀರಿನ ಹನಿ

ನಾನೊಂದು ನೀರಿನ ಹನಿಯು, ಚೈತನ್ಯದ ಜೀವದ ಸೆಲೆಯು
ಸಾಗರದೊಳು ನಲಿದಾಡುತಿರುವ ಋಣಿಯು,ಮಮತೆಯ ಖನಿಯು
ಅಲೆ ಅಲೆಗಳಲಾಡುವ ಪ್ರಕೃತಿಯ ಮಗುವು ಜೀವದ ರವರವವು
ಬಿಂಗದಿರನ ಜೊತೆಗೂಡುವೆನು,ಮೆಲ್ಲಮೆಲ್ಲನೆ ಆಗಸಕ್ಕೇರುವೆನು
ನನ್ನಂತೆಯೇ ಆಗಸಕ್ಕೇರುವವರ ಜೊತೆಗೂಡಿ ಮೋಡವಾಗುವೆನು
ಹಾರುತ ಹಾರುತ ಮಾರುತನ ಜೊತೆಗೆ ದೇಶ ಪರ್ಯಟನೆ ಮಾಡುವೆನು
ಎಲ್ಲೋ ಹುಟ್ಟಿ , ಎಲ್ಲೋ ಬೆಳೆದು ನಿಲ್ಲದೆ ಸಾಗಿದೆ ಪಯಣವು
ಸೊಬಗಿನ ಮಲೆಕಾನನದೊಲವಿಗೆ ಹಿತದಿ ಮನಸೋಲುವೆನು
ಮಲೆಯ ಹಸುರಿನ ಬನದೊಳು ಬಿಂಕದಿ ಮಳೆಯಾಗಿ ಕೆಳಗಿಳಿಯುವೆನು
ಬೆಟ್ಟ,ಗುಡ್ಡ,ಕಂದರ,ಕಣಿವೆಗಳಲಿ ಝರಿಝರಿಯಾಗಿ ಹರಿಯುವೆನು
ಧುಮ್ಮಿಕ್ಕುವ ಜೋಗದ ಜಲಪಾತದಿ ರಭಸದಿಂದ ಧುಮುಕುವೆನು
ಝರಿಯಾಗಿ, ತೊರೆಯಾಗಿ, ಜೀವನದಿಯ ಒಡಲ ಸೇರುವೆನು
ಹರಿಯುವೆನು ನಾನು ಹರಿಯುವೆನು ಚೈತನ್ಯದ ಚಿಲುಮೆಯಾಗುವೆನು
ನಿಲ್ಲದ ಪಯಣವು ನನ್ನೀ ಜೀವನವು ಬತ್ತದೆ ಹರಿಯುವ ನನ್ನೀ ನಲವು
ಭೂಮಿ ತಾಯಿಯ ಪಾದವ ತೊಳೆಯುತ ಕಡಲ ಸೇರಲು ಹರಿಯುವೆ
ಕಡಲ ಸೇರುವ ಗುರಿಯು ನನ್ನದು ತಾಯಿಯ ಮಮತೆಯ ಕಾಣುವ ಪರಿಯು
ತಾಯ ಕಾಣುವ ಹಂಬಲದಿ ನಡೆವೆನು ಕಾಣುವೆನೇ ನನ್ನ ತಾಯ ಒಲವನು
ಭಯ, ಆತಂಕದಿ ತರಾತುರಿಯಲಿ ಹೋರಾಡುವೆನು ಗುರಿಯನು ತಲುಪುವೆನು
ಹಕ್ಕಿಯ ಕಲರವ ಗಾಳಿಯ ಮೆಲುನಾದ ಮನದಿ ಮುದವನೇ ನೀಡುವುದು
ಇರಲಾರೆ ಇಲ್ಲೇ , ನಿಲ್ಲಲಾರೆ ಇಲ್ಲೇ, ಮುದದಿ ನಡೆವೆನು ಸುಖದಿಂದೇ
ಮತ್ತೆ ಮತ್ತೆ ಹಂಬಲಿಸುವೆ ಸವಿಯಲು ಈ ಪಯಣಾನುಭವದ ರಸದ ಹೊನಲ
ದೂರದಲ್ಲೆಲ್ಲೋ ಬಿಡದೆ ಸೆಳೆಯುತಿಹುದು ಅಮೃತಗಾನವೊಂದು
ಕರೆಯುತಿಹುದು ಕರುಳ ಕರೆಯೊಂದು ಸೇರು ಬಾ ಒಡಲೊಳೆಂದು
ಸೇರು ಬಾ ನನ್ನೀ ಕಡಲೊಳೆಂದು, ಸೇರು ಬಾ ನನ್ನೀ ಒಡಲೊಳಿಂದು।।

Sunday, May 3, 2020

ಧನ್ಯ ನೀ ಕವಿಯೇ! ಅಮರ ನೀ ಕವಿಯೇ! ಕನ್ನಡ ನಿತ್ಯೋತ್ಸವ ಕವಿಯೇ!

ತೆರಳಿದೆ ಏಕೆ ಕವಿಯೇ?
ನಿತ್ಯೋತ್ಸವ ಪೂಜೆಗೈದ ಭವಿಯೇ
ಉತ್ಸವ ಮುಗಿದ ನಂತರ
ತವರು ಮನೆಗೆ ನಡೆವಂತೆ
ಹೊರಟೆ ಏಕೆ ಕವಿಯೇ?

ಇಲ್ಲಸಲ್ಲದ ನೆವವ ಹೇಳಿ
ಹೊರಟೆ ಏಕೆ ಮನವೇ?
ಇನ್ನೆಂದು ಹೇಳಲಿ ನಿನ್ನ
ಮತ್ತೆಂದು ಕೇಳಲಿ ನಿನ್ನ
ಮತ್ತೆ ಬಾರದಿರೆಂದು ಹೇಳಲಾರೆ ಕವಿಯೇ!

ಆದಿಯನರಿಯದ ಕತ್ತಲ ಪಯಣಕೆ
ರಹದಾರಿ ತೋರಿದವರಾರು?
ಸ್ವರ್ಣಾಕ್ಷರದಿ ಕೀರ್ತಿಯ ಕೆತ್ತಿಸಿ
ಕೆಲಸವಾಯ್ತೆಂದು ಹೊರಡಿಸಿದವರಾರು?
ನಿನ್ನ ಮರೆಯಲಾರೆ ಎನ್ನ ಮಧುರ ಕವಿಯೇ!

ನಾದವಿರದ ಬದುಕೆಂದು ನಿಸ್ಸಾರವಾಯಿತೇ ಇಂದು
ಕಾವೇರಿ ಜಲ, ಕರುನಾಡಿನ ಕರುಣೆ ಸಾಕಾಯಿತೇ?
ಹಿಂಗಿ ಹೋಯಿತೇ ಭುವನೇಶ್ವರಿಯ ಅಕ್ಷರ ಚಿಲುಮೆ
ಹೊತ್ತಿ ಉರಿದ ಕನ್ನಡದ ಹಿರಿಜೀವ ಇಂದು ನಂದಿತೋ
ನಡೆಯಿತಿಂದು ಹುಡುಕುತಲಿ ನಿಜದ ತಾಣ ಅರಿತು

ನಿಮ್ಮ ಅನುರಾಗವೇ ಬೆಳಗಿದೆ ಎನ್ನೆದೆಯ
ಕನ್ನಡದ ನಿತ್ಯೋತ್ಸವದ ಅಮೃತ ಭಾವದಲಿ
ಯಾವ ಪುಣ್ಯವೋ ಕಾಣೆ ನಲಿದೆವು ನಿಮ್ಮ ಕಾವ್ಯ ಒಲುಮೆಯಲಿ
ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ
ನಮ್ಮನ್ನು ಬಿಟ್ಟು ಹೊರಟಿರಿ ಮಧುರ ನೆನಹುಗಳ ಹೊತ್ತು

ನಾಡ ದೇವಿಯ ಮಡಿಲಲ್ಲಿ ಕಂಡೆ ನಿಮ್ಮ
ಎದೆಗೆ ಮುತ್ತಿಕ್ಕಿ ಬರಮಾಡಿಕೊಂಡಳು ಹರಿಷದಿ
ಕನ್ನಡ ನಿತ್ಯೋತ್ಸವ ಮುಗಿಯಿತೇ ಕಂದ
ತಡಮಾಡಿದೆ ಏಕೆ ನಿನ್ನ ಕಾವ್ಯಸುಧೆಗೆ ಕಾದಿಹೆನು ಬಾ
ಭವಿತವ್ಯದೊಸಗೆಯಲಿ ಸಾಲಾಗಿರಿಸಿರುವೆನು ಕನ್ನಡದ ದೀಪಗಳನು

ಇಂದು ತಾಯ ಮುಡಿಗೇರಿತು ಮತ್ತೊಂದು ಕನ್ನಡದ ಹೂವು
ನಿಜಸ್ವರ್ಗವನೇ ಏರಿತು ಪ್ರಜ್ವಲಿಸಿ ಕನ್ನಡದ ಜ್ಯೋತಿಯನು
ಏಕೆ ಕರೆದೊಯ್ದೆ ತಾಯೇ,ಬಲುಮೋಹ ನಿನಗೆ ಕನ್ನಡ ಕಾವ್ಯ ಕಡೆದವರ
ಕಾಡುತಿದೆ ಮನ, ಜೀವರಹಿತವಾಗಿದೆ ಕನ್ನಡ ಭಾವವಿರಹ ತಿಮಿರದಿ
ಧನ್ಯ ನೀ ಕವಿಯೇ!ಅಮರ ನೀ ಕವಿಯೇ! ಕನ್ನಡ ನಿತ್ಯೋತ್ಸವ ಕವಿಯೇ!

ಆಯ್ಕೆಯ ನೆರಳು

  ಆಯ್ಕೆಯೇ ಬದುಕಿನಲಿ ತರುವುದು ವ್ಯತ್ಯಾಸ , ಜೀವನದ ಹಾದಿಯಾಗುವುದು ಅದೊಂದು ರೂಪಕ . ಗೊಂದಲ , ಕವಲು ದಾರಿಯಲ್ಲಿರುವುದು ಆಯ್ಕೆ , ನಾವು ಏನೋ !, ಆಯ್ಕೆ...