Wednesday, December 30, 2015

ಸಂತಸ ನಿನ್ನಲಿ ಬರವೆ?

ಓ ನೋವೆ, ಓ ನೋವೇ
ಮರಳಿ ಏಕೆ ಬರುವೆ
ಮನವ ಚುಚ್ಚಿ ಏಕೆ ನಗುವೆ

ನೀ ಬಾ ಎಂದು ಕರೆದವರಾರು?
ಕರೆಯದೆ ಬರುವೆ
ಕಾಣದ ನೋವ ಏಕೆ ತರುವೆ?

ಶಾಂತವಾಗಿ ತುಳುಕುತ್ತಿತ್ತು ಮನದ ಕಡಲು
ಎಲ್ಲಿದಂಲೋ ಬಂತೊಂದು ಸುನಾಮಿ
ಎಲ್ಲವೂ ಅಲ್ಲೋಲಕಲ್ಲೋಲ

ಬರದೇ ಬರುವೆ
ನೋವ ಏಕೆ ತರುವೆ?
ಸಂತಸ ನಿನ್ನಲಿ ಬರವೆ?

Tuesday, December 29, 2015

ಏನ ಬೇಡಲಿ ಹೇಳು

ಏನ ಬೇಡಲಿ ನಿನಗೆ ಈ ಶುಭದಿನದಂದು
ಆ ದೇವನ ಬಳಿ ಹೇಳು ಗೆಳೆಯ 
ಅದು ಬೇಕು,ಇದು ಬೇಕು ಎನ್ನುವವರೇ ಹೆಚ್ಚು
ತುಂಬಿದ ಹೃದಯ ನಿನ್ನದು 
ಕಡಲಿಗೆ ನೀರಿನ ಬಾಯಾರಿಕೆಯೆನ್ನಲು ಸೋಜಿಗ 
ಅಷ್ಟೈಶ್ವರ್ಯ ನಿನ್ನದಾಗಲೆಂದು ಬೇಡಲೇ?
ಲೋಕದೊಳಡಗಿರುವ ಸಕಲ ಸುಖ ಸಂತೋಷ ನಿನ್ನದಾಗಲೆಂದು ಬೇಡಲೇ?
ಅರಸುತಿಹ ನೂರು ವೈಭೋಗಗಳು ನಿನ್ನದಾಗಲೆಂದು ಬೇಡಲೇ?
ಶಯನದೊಳು  ಬಿಡದೆ ಕಾಡುವ ಅತಿಶಯದ ಕನಸುಗಳು ನನಸಾಗಲೆಂದು ಬೇಡಲೇ?
ಬಡತನದಲಿ ಬೇಯುವವರ ಹಸಿವು ನೀಗಿಸುವ ಧಣಿ ನೀನಾಗಲೆಂದು ಬೇಡಲೇ?
ನೋವಿನಲೇ ಜೀವನ ದೂಡುವವರ ಆಶಾಕಿರಣ ನೀನಾಗಲೆಂದು ಬೇಡಲೇ?
ಬಯಸಿಹ ಹೃದಯಕ್ಕೆ ಸಾಂತ್ವನ ನೀಡುವ ಮಮತೆಯ ಕರುಣಾಳು ನೀನಾಗಲೆಂದು ಬೇಡಲೇ?
ಕಣ್ಣೀರಲ್ಲೇ ಕೈತೊಳೆಯುವವರ ಕೈ ಹಿಡಿದು ನಡೆಸುವ ಕರುಣೆಯ ಕಡಲಾಗೆಂದು ಬೇಡಲೇ?
ಏನ ಬೇಡಲಿ ಹೇಳು ಗೆಳೆಯ ಆ ದೇವನ ಬಳಿ.

ಅಶಾಕಿರಣ ನೀನೇ......

ಅಗೋ ನೋಡಲ್ಲಿ ಮಿಂಚೊಂದು ಮೂಡಿದೆ 
ಹೊಸ ಆಶಾಕಿರಣದ ಚೈತನ್ಯ ಹೊಮ್ಮಿದೆ
ದುಡಿವ ದೇಹ,ಸುಖವಿಲ್ಲದ ಮನ ದುಡಿಮೆ ಅನವರತ
ಸದಾ ತದೇಕ ಚಿತ್ತ ಮಾತೃಭೂಮಿಯ ಸೇವಾನಿರತ
ಕಣ್ಣೀರ ಒರೆಸುವರಿಲ್ಲ
ಕನಸ ಕಾಣುವ ಸೌಭಾಗ್ಯವಿಲ್ಲ
ದಣಿದ ದೇಹಕ್ಕೆ ತಂಪಾದ ನಿದ್ದೆಯಿಲ್ಲ
ನೀನೇ ದಿಕ್ಕು,ನೀನೇ ದೆಸೆ
ನಿನ್ನ ಪ್ರಾಣದ ಬೆಲೆ ತಿಳಿದವರಾರೂ ಇಲ್ಲಿಲ್ಲ
ನೀನಲ್ಲದೆ ನಮಗಾರೂ ಇಲ್ಲ
ನಿನ್ನ ಉಸಿರೇ ನಮ್ಮ ಪ್ರಾಣವಾಯು
ನಮ್ಮೆಲ್ಲರ ಚೈತನ್ಯದ ಅಶಾಕಿರಣ ನೀನೇ......

ಚಪ್ಪಲಿಗಳೆಷ್ಟೋ?

ಹಲವು ವರ್ಷಗಳ ಹಾದಿ , ಸವೆದ ಚಪ್ಪಲಿಗಳೆಷ್ಟೋ?
ಇದು ಕೊನೆ,ಇದು ಆರಂಭ ಮುಗಿಯದ ಹಾದಿ
ನೋವು,ನಲಿವು ತೀರದ ಬಯಕೆಯ ಹೆದ್ದಾರಿ
ಬೇಸರಿಕೆ ಇಲ್ಲದ ಹೊಸ ಬೆಳಕಿನ ಹುಡುಕಾಟ ಪ್ರತಿದಿನ
ಅನುಭವಿಸುವ ಪಾರಮಾರ್ಥಿಕ ಸತ್ಯದ ದಾರಿಯ ಹುಡುಕಾಟ ನಿರಂತರ
ಹೊಸ ಹೊಳಹು ಚಿಂತನೆಗೆ ಹಚ್ಚುವ ಕ್ರಿಯಾಶೀಲತೆಯ ಮನಸ್ಸಿನ ತವಕ
ನಡೆವ ಹಾದಿಯಲ್ಲಿ ಮುಳ್ಳು ಕಲ್ಲುಗಳಿರಬೇಕು
ನೋವಿಲ್ಲದ ಸುಖ,ನಲಿವು ನಮಗೆ  ಏಕೆ ಬೇಕು?
ಜೀವನ ಪಾಠ ಕಲಿಯಲಾಗದ ವಿದ್ಯೆ ಏಕೆ ಬೇಕು?
ಗೆಳೆಯರಿಲ್ಲದ ಜೀವನ ಬೇಡವೆ ಬೇಡ
ಸಾಗಬೇಕಾದ ಹಾದಿ ಮತ್ತಷ್ಟು,ಸವೆಯಬೇಕಾದ ಚಪ್ಪಲಿಗಳೆಷ್ಟೋ?

Saturday, November 28, 2015

ಹಕ್ಕಿಯಾಗ ಬಯಸಿದೆ ಮನಸು

ಹಕ್ಕಿಯಾಗ ಬಯಸಿದೆ ಮನಸು
ಕಂಡೆ ನಭದಲ್ಲಿ ಹಾರುವ ಸುಖದ ಕನಸು//

ಹಸಿರು ಮರದ ಸಿರಿಯ ಬೆರಗು
ಹಾರುತ್ತ ಹಾರುತ್ತ ಕೊಂಬೆ,ರೆಂಬೆಗಳ
ಹಣ್ಣು ಹಂಪಲುಗಳ ತಿನ್ನುವ ಸೊಬಗು
ಹಕ್ಕಿಯಾಗ ಬಯಸಿದೆ ಮನಸು//

ಕಾಡು ಮೇಡುಗಳ ಅಲೆದು
ಪರ್ವತ,ಪಾತಾಳಗಳ ಬಳಸಿ
ಜಗದ ತಾಯಿಯ ಸೌಂದರ್ಯದ ಸೊಬಗ ಸವಿದು
ಹಕ್ಕಿಯಾಗ ಬಯಸಿದೆ ಮನಸು//

ಎಷ್ಟು ಸ್ವತಂತ್ರ ಹಕ್ಕಿಯ ಜೀವನ
ಭವ ಬಂಧನಗಳಿಲ್ಲದ ಸೋಪಾನ
ಅದರ ಸುಖ ನನಗೂ ಬೇಕು
ಹಕ್ಕಿಯಾಗ ಬಯಸಿದೆ ಮನಸು//

Thursday, November 12, 2015

ಸೌಂದರ್ಯ

ಯಾರು ತುಂಬಿದರು ನಿನ್ನಲ್ಲಿ ಸೌಂದರ್ಯ?
ಎಷ್ಟುದಿನ ಇರುವುದೋ ಈ ಚೆಲುವು?
ಕಾಲನ ಆಂತರ್ಯ ಬಲ್ಲವರು ಯಾರು?
ಇಂದು ರೂಪವಂತ,ನಾಳೆ ಕುರೂಪಿ?
ಇಂದು ರೂಪಕ್ಕೆ ಮರುಳಾದವರು
ನಾಳೆ ಏನಾಗುತ್ತಾರೆ? ಅಂಜುವರೋ? ಮರುಗುವರೋ?
ಒಂದಂತು ಸತ್ಯ,ಬಾಹ್ಯ ಸೌಂದರ್ಯ ಶಾಶ್ವತವಲ್ಲ
ಆದರೂ ರೂಪದ ಭ್ರಮೆ ನಮ್ಮನ್ನು ಏಕೆ ಆವರಿಸುವುದು?
ಯಾವುದು ಸತ್ಯ,ಸುಂದರ ,ಶಿವನೋ ಅವು ಕಣ್ಣಿಗೆ ಕಾಣದು,
ಒಳಗಣ್ಣ ತೆರೆಯಬೇಕು ಸೌಂದರ್ಯವ ಆಸ್ವಾಧಿಸಲು ,
ಭ್ರಮೆಯ ಲೋಕ ಗೋಚರಿಸದು ಕಣ್ಣಿಗೆ
ಸಾಧನೆಯ ಬಲ ಬೇಕು ಅರಿಯಲು
ತಾಳ್ಮೆಬೇಕು ಸಾಧಿಸಲು ಓ ಸತ್ಯವೇ ಬಾ,
ಓ ಸೌಂದರ್ಯವೇ ಬಾ,ಓ ಶಿವನೇ ಬಾ 
ಮನದ ತಿಮಿರವ ನುಂಗಿ ಬೆಳಕ ತಾ//

ದೀಪಾವಳಿ

ರಾತ್ರಿಯಾಗಸದಲ್ಲಿ ತಾರೆಗಳ ಎಣಿಸುತ್ತಿದ್ದೇನೆ
ನಾಳೆಗಳ ಭವಿಷ್ಯವ ತಿಳಿಯಲು
ಹಿತ,ಅಹಿತ,ಲಾಭ,ನಷ್ಟಗಳು ಎಣಿಸುತ್ತಿದ್ದೇನೆ
ಒಂದೊಂದೇ ತಾರೆಯ ಮಿಂಚುವ ವೇಗದಿ
ಏನು ಹೇಳುವುದದು?ಕಾಲಹರಣವಲ್ಲದೆ ಮತ್ತೇನು?
ಆದರೂ ಏನೋ ಹಿತವಿದೆ ಅದರಲ್ಲಿ!
ದೀಪಾವಳಿಯ ಬೆಳಕಿನ ಮಿಂಚು ಆಗಸದಲ್ಲಿ
ಏನೋ ಹೊಸತನ ದಾಳಿಯಿಟ್ಟಂತಿದೆ
ಹೊಗೆ,ಶಬ್ದ ಮಾಲಿನ್ಯ ಎಲ್ಲದರ ಹೊರತಾಗಿಯೂ
ಮಕ್ಕಳಲ್ಲಿ,ಹಿರಿಯರಲ್ಲಿ ಏನೋ ಚ್ಯೆತನ್ಯ ತುಂಬಿದೆ
ನಾಳೆಗಳ ಎಣಿಸಿ ಬಳಲಿದವನು ನಾನು
ಹಬ್ಬ,ಆಚರಣೆ ಸಂಭ್ರಮ ಪಟ್ಟವರು ಅವರು
ಮಿನುಗುವ ನಕ್ಷತ್ರಗಳ ನೋಡುತ್ತಾ ಕಳೆದು ಹೋದೆ
ಹಳೆಯದು ಜಾರಿ ಹೊಸದೊಂದು ದಿನ ಕಣ್ಣುಬಿಟ್ಟಿತು//

Wednesday, November 11, 2015

ತಲ್ಲಣಗಳ ಕದನ


ಮುಖ ನೋಡಿ ಮನುಷ್ಯರ ಅಳೆವವನಲ್ಲ ನಾನು
ಆದರೂ ಅರಿಯಬಲ್ಲೆ ಮನದೊಳಗಿನ ಕದನ
ಗೆಳೆಯ ಹೊರಹಾಕು ಮನದೊಳಗಿನ ತಲ್ಲಣಗಳ
ಹಾಗೆ ಮನದೊಳಗೆ ಬಚ್ಚಿಟ್ಟರೆ ಹಾಳು ನೆಮ್ಮದಿ
ಕಣ್ಣೀರ ಸುರಿಸಬೇಡ ಮನದ ಶಾಂತಿ ಹಾಳಾದರೆ
ನಲ್ವತ್ತು ವಸಂತಗಳ ಅನುಭವಿಸಿದ ರಸಿಕ ನೀನು
ಆದರೂ ಮನದೊಳಗೆ ತಲ್ಲಣವೇಕೆ ನೀ ಬಲ್ಲೆಯಾ?
ಅನುಭವಗಳ ಗುಲಾಮನಾದೆಯಾ ನೀನು?
ಏನೇ ಆದರೂ ಹೋರಾಡಬಲ್ಲೆ , ಯೋಧ ನೀನು
ಯುದ್ಧದಲ್ಲಿ ಅರಿಗಳೊಡನೆ ಹೋರಾಡುವುದು ಸುಲಭ
ಮನದ ಮಿತ್ರನೋ ? ವ್ಯೆರಿಯೋ? ಹೋರಾಡು!
ರುಧಿರ ಹರಿಯದೆ ನೀನು ಶವವಾಗುವೆ ಇಲ್ಲಿ
ಜವನ ಕೈವಶ ನೀನು ಹೋರಾಟವಿಲ್ಲದೆ
ಸೌಂದರ್ಯವಶನಾದವನಿಗೆ ಹಸಿವೆಯೆಲ್ಲಿ?
ನಿನ್ನ ಮನದ ಆಟ ಬಲ್ಲೆ ಹೇಳು ನಿರಾಳನಾಗು

Tuesday, November 10, 2015

ಅರಿವಿನ ಹಣತೆ

ದೀಪ ಹೊತ್ತಿಸೋಣ ಗೆಳೆಯ
ಬಾ ದೀಪಾವಳಿಯ ಈ ದಿನ 
ದೀಪ ಹೊತ್ತಿಸೋಣ ,ದೀಪ ಹೊತ್ತಿಸೋಣ
ಮನ ಮನದ ನಡುವೆ ಹೊತ್ತಿರುವ
ಅಪನಂಬಿಕೆಯ ದ್ವೇಷದ ಜ್ವಾಲೆಯ ಆರಿಸೋಣ
ನೋಡಲ್ಲಿ ಆಕಾಶದಲ್ಲಿ ಬಣ್ಣ ಬಣ್ಣಗಳು
ಮಿಂಚುತಿದೆ ಸಂತೋಷದ ಆಕಾಶದ ಬುಟ್ಟಿ
ಹೊಂಚುಹಾಕಿ ಕುಳಿತಿದೆ ವಿಷಬೀಜ ಬಿತ್ತುವ,
ಅವಕಾಶವಾದಿ ದೊಡ್ಡ ದಂಡುಕೂಟ
ಶಾಂತಿ ಕದಡುವ ಹುನ್ನಾರ ನಡೆಸುವವರು
ವ್ಯೆಷಮ್ಯ ಬಿತ್ತುವ ತವಕದವರು
ಮನ ಮನದ ನಡುವೆ ವಿಷದ ಬೀಜ ಬಿತ್ತುವ ಅಕ್ಷರ ಭಯೋತ್ಪಾದಕರಿಹರು ಇಲ್ಲಿ ಬಹಳ
ಮನದ ಹಣತೆಯ ಆರಿಸಲು ಸಂಚು ರೂಪಿಸಿ
ಮೌಢ್ಯದ ಬೆಂಕಿ ಹೊತ್ತಿಸ ಹೊರಟ ದಂಡಿಹುದಿಲ್ಲಿ
ಅರಿವಿನ ಹಣತೆಯ ಉಡುಗೊರೆ ನೀಡೋಣ
ಅರಿವಿನ ಬೆಳಕ ಹೊತ್ತಿಸೋಣ ಗೆಳೆಯ
ಹೊಸ ಮನ್ವಂತರದ ದಿಶೆಗೆ ಮುನ್ನುಡಿ ಬರೆಯೋಣ
ದೀಪಾವಳಿಯ ಈ ದಿನ ಮನಸ್ಸಿನಲ್ಲಿ
ಅರಿವಿನ ಹಣತೆಯ ಹಚ್ಚೋಣ
ಬಾ ಗೆಳೆಯ ಬಾ ದೀಪ ಹಚ್ಚೋಣ//

Sunday, November 8, 2015

ನೀನಿರುವುದ ಅರಿತಿರಲಿಲ್ಲ

ಎಲ್ಲೋ ಅವಿತಂತೆ ಮಾಡಿ ಕಣ್ಣ ಮುಚ್ಚೆ ಕಾಡೆಗೂಡೆ ಮಾಡಿ ಎಲ್ಲಿರುವೆ ಹುಡುಕು ಎಂಬಂತೆ ಕಣ್ಣು ಕಟ್ಟಿ ಬಿಟ್ಟಿರುವೆ ನೀನು,ಕಟ್ಟಿರುವ ಕಣ್ಣು ಬಿಚ್ಚಿದ್ದರೂ
ಕಣ್ಣ ಮುಂದೆಯೇ ನೀನಿರುವುದ ಅರಿತಿರಲಿಲ್ಲ
ನೀ ಎಲ್ಲೋ ಅಲ್ಲ ನಮ್ಮ ಮುಂದೆಯೇ ಇರುವುದ ಅರಿತಿರಲಿಲ್ಲ
ನಿನ್ನ ಕಾಣಲೆಂದು ಎಲ್ಲಿಂದಲೋ ಬರುವವರ
ನಿಷ್ಥೆಯಲ್ಲಿ ನೀನಿರುವುದ ಅರಿತಿರಲಿಲ್ಲ
ನಿನ್ನ ಕಾಣಲೆಂದು ದೇಹವ ದಂಡಿಸಿ
ಸುರಿಸುವ ಬೆವರಹನಿಯಲ್ಲಿ ನೀನಿರುವುದ ಅರಿತಿರಲಿಲ್ಲ
ಆಚಾರ ,ವಿಚಾರಗಳ ತಿಳಿಯದೆ ಸಂಪೂರ್ಣ ಶರಣಾದವರ ಶರಣಾಗತಿಯಲ್ಲಿ ನೀನಿರುವುದ ಅರಿತಿರಲಿಲ್ಲ
ವಿದ್ಯೆ,ಬುದ್ಧಿ,ಸಂಪತ್ತುಗಳ ಹೊಂದಿದ್ದರೂ ಎಲ್ಲವ ಹೊರತಾಗಿಯೂ  ಭಕ್ತಿ,ವಿವೇಕದಲ್ಲಿ ನೀನಿರುವ ಅರಿವಿರಲಿಲ್ಲ
ಸಾಧಕರ ಸಾಧನೆಯ ದಾರಿಯಲ್ಲಿ ನೀನಿರುವುದ ಅರಿತಿರಲಿಲ್ಲ
ಹೆಜ್ಜೆಯಿಡುವ ಪ್ರತಿ ಹೆಜ್ಜೆಯಲ್ಲಿ ನೀನಿರುವುದ ಅರಿತಿರಲಿಲ್ಲ
ಜೀವನದ ಪ್ರತಿ ಕ್ಷಣದಲ್ಲೂ ನೀ ಅವಿರುವುದ ಅರಿತಿರಲಿಲ್ಲ
ಪ್ರಕೃತಿಯ ಹಸಿರು ಹಾಸಿನಲ್ಲಿ, ಅಲ್ಲೆ ಬೆಟ್ಟದ ಮಡಿಲಲ್ಲಿ ಬಿದ್ದಿರುವ ಕಲ್ಲಿನಲ್ಲಿ ನೀ ಅವಿತಿರುವುದ ಅರಿತಿರಲಿಲ್ಲ
ನಿನ್ನದೇ ಮೂರ್ತಿಯ ಕಂಡು ಭಾವನೆಗಳ ಮನದಲ್ಲಿ ತುಂಬಿಕೊಂಡು ಕಣ್ಣಲ್ಲಿ ಸುರಿಸುವ ಕಣ್ಣೀರಿನಲ್ಲಿ ನೀ ಅವಿತಿರುವುದ ಅರಿತಿರಲಿಲ್ಲ

ಮನದ ಭಾರ

ಮನದ ಮಾತುಗಳ ಹೇಳಿಕೊಳ್ಳೋಣವೆಂದರೆ
ಏನಿದು ಗೆಳೆಯ ನೂರೆಂಟು ಅಡ್ಡಿ ಆತಂಕಗಳು
ಮನಸ್ಸು ಹಗುರವಾಗಿಸೋಣವೆಂದರೆ
ಮನದ ಭಾರ ಹೆಚ್ಚಿತ್ತಿದೆಯೆ ಹೊರತು ಇಳಿಯುತ್ತಿಲ್ಲ
ನೋವಿನ ನಡುವೆ ಹೊರಳಾಡುವುದೇ ಸುಖವೆನಿಸಿದೆ
ಸಂತೋಷವೇನೆಂದು ಮರೆತು ಹೋಗಿದೆ
ಜೀವನಚಕ್ರ ಸಲೀಸಾಗಿ ಹೊರಳದೆ
ತ್ರಾಸದಾಯಕವಾಗಿದೆ ಮೆಲ್ಲಮೆಲ್ಲನೆ
ಏನೋ ಆತಂಕ ! ಏನೋ ಬೇಸರ!ಏನೋ ಹೇವರಿಕೆ!
ಮರಳಿಬಾರದ ದಿನಗಳ ನೆನಹುಗಳು ಅಣಕಿಸುತ್ತಿದೆ
ಅಟ್ಟಹಾಸದಿಂದ ನಗುವ ಕಾಲ
ಅಹಂಮಿನ ಕಾಲು ಮುರಿದಿದೆ ನೋವ ಮರೆಸುತ್ತಾ
ಇದೇ ಜೀವನವೆಂಬ ಸಮಾಧಾನದ ತೆವಲು ನಗೆ
ಬೀರುತ್ತಾ ಎಲ್ಲವನ್ನೂ ಅನುಭವಿಸುತ್ತಾ ತೆವಳಿದೆ//

ಹರಿದ ನಾಲಗೆ

ನೋಡಿದೆಯಾ,ಕೇಳಿದೆಯಾ ಗೆಳೆಯ
ಎತ್ತರದ ಸ್ಥಾನದಲ್ಲಿರುವವರ ಮಾತುಗಳ
ಎಂಥ ಸ್ಥಿತಿ ಬಂತು ನಮ್ಮ ನಾಡಿಗೆ
ಇಷ್ಟೊಂದು ಬರವೇ ಬೌಧ್ದಿಕತೆಗೆ?
ನಾಡಿನ ಸ್ಥಾನಮಾನ, ಗೌರವವೆಲ್ಲಾ
ಮಣ್ಣುಪಾಲಾಗಿಸುತ್ತಿದ್ದಾರೆ ಈ ಮೂಢರು
ನಾಲಗೆಯ ಹರಿಬಿಡುವರು ಎಲ್ಲೆಯಿಲ್ಲದೆ
ಹಣ,ಅಧಿಕಾರ,ಸ್ಥಾನಮಾನದ ಅಹಂಮಿನಿಂದ
ಎಷ್ಟುದಿನ ನಡೆವುದು ಇವರ ಆಟ?
ನಾಗರೀಕತೆ ಬೆಳೆದಂತೆ ಎತ್ತಣದತ್ತ ನಮ್ಮ ಪಯಣ?
ಯಾವುದರ ಅಟ್ಟಹಾಸವಿದು ಬಲ್ಲೆಯೇನು?
ಯಾರು ಈ ನಾಟಕದ ಸೂತ್ರಧಾರ?
ಎಲ್ಲಬಲ್ಲವ ನೀನು ಸುಮ್ಮನೇ ನೋಡುತಿಹೆ
ತಿಳಿದೂ ತಿಳಿಯದವನಂತೆ, ಏನಿದರ ಗುಟ್ಟು?

ನಮ್ಮ ನಾಡು

ಇದು ನಮ್ಮ ನಾಡು
ಇದು ನಮ್ಮ ನಾಡು
ಇದೇ ಕನ್ನಡ ನಾಡು
ಕನ್ನಡಿಗರ ನಾಡು
ಶಿಲ್ಪಕಲೆಗಳ ನಾಡು
ಶ್ರೀಗಂಧದ ಬೀಡು
ಕಬ್ಬಿಗರ ಬೀಡು
ಕಾವ್ಯರಸಿಕರ ಬೀಡು
ಶಾಂತಿಪ್ರಿಯರ ಬೀಡು
ದಾಸ,ಶರಣ,ಗಾನ ಗಂಧರ್ವರ ಬೀಡು
ಇದು ನಮ್ಮ ನಾಡು
ಕನ್ನಡಿಗರ ಬೀಡು//

Saturday, October 31, 2015

ಕೃಷ್ಣಾ ಕೃಷ್ಣಾ,ಕೃಷ್ಣಾ,ಕೃಷ್ಣಾ

ಕೃಷ್ಣಾ,ಕೃಷ್ಣಾ
ಏನ ಹೇಳಲಿ ಕೃಷ್ಣಾ
ಬೇಡಲಾರೆ ನಿನ್ನ ಕೃಷ್ಣಾ
ಬಿಡಲಾರೆ ನಿನ್ನ ಕೃಷ್ಣಾ
ಮರೆಯಲಾರೆ ನಿನ್ನ ಕೃಷ್ಣಾ
ತೊರೆಯಲಾರೆ ನಿನ್ನ ಕೃಷ್ಣಾ
ಇರಲಾರೆ ನಿನ್ನ ಬಿಟ್ಟು ಕೃಷ್ಣಾ
ಮೋಹ,ವ್ಯಾಮೋಹಗಳಲಿ ಕಟ್ಟಬೇಡ ಕೃಷ್ಣಾ
ಎಲ್ಲವೂ ನಿನ್ನದೇ,ನಿಮಿತ್ತ ನಾ ಬಲ್ಲೆ ಕೃಷ್ಣಾ
ಸಕಲ ನಾಟಕ ಸೂತ್ರದಾರ ನೀ ಕೃಷ್ಣಾ
ಮನದಲಿ ಸದಾ ನಿನ್ನ ನಾಮಸ್ಮರಣ ನೆಲೆವಂತೆ
ಮಾಡು ಕೃಷ್ಣಾ
ಮುಕ್ತಿಯನಲ್ಲದೆ ಬೇರೇನೂ ಬೇಡೆನು ಕೃಷ್ಣಾ
ಶರಣಾಗಿಹೆನು ನಿನಗೆ ಕೃಷ್ಣಾ
ರಕ್ಷಿಸೆನ್ನನು ಕೃಷ್ಣಾ
ಕೃಷ್ಣಾ,ಕೃಷ್ಣಾ,ಕೃಷ್ಣಾ//

Thursday, October 29, 2015

ಕನ್ನಡಿ

ಕನ್ನಡಿಯ ನೋಡು ಬಾ ಗೆಳೆಯ,
ಆಧ್ಯಾತ್ಮದ ಸಕಲ ತತ್ವಗಳೂ ಕಂಡು 
ಕಾಣದ ಹಾಗೆ ನೆಲೆಗೊಂಡಿದೆ,ಮನಸ್ಸಿನ ಪ್ರತಿಬಿಂಬವೇ ಅದು
ಪ್ರತಿದಿನ ಒಮ್ಮೆಯಾದರೂ ಅದರೊಡನೆ
ಮೌನವಾಗಿ ಮಾತನಾಡು,ನಿನ್ನೊಳಗಿನ ಭಾವಗಳೆಲ್ಲಾ
ನಿನ್ನ ವ್ಯಕ್ತಿತ್ವದೊಡನೆ ಹೇಗೆ ಬೆರೆತಿವೆ ನೋಡಲ್ಲಿ
ಅವುಗಳ ಸಮಸ್ಯೆಗಳ ಮನವಿಟ್ಟು ಆಲಿಸು
ನಿನ್ನ ನೀ ಸರಿಪಡಿಸಿಕೊಳ್ಳಲು ಇದೇ ಸರಿಯಾದ ಮಾರ್ಗ
ಆಲಿಸು ನಿನ್ನ ಮನದ ಆಲಾಪನೆಯ,ಧ್ವನಿಗೂಡಿಸು ಅದರೊಟ್ಟಿಗೆ
ಮನದ ಕ್ಲೇಶಗಳೆಲ್ಲಾ ದಿಕ್ಕುಪಾಲಾಗಿ ಓಡುವುವು
ಆತ್ಮ ಧೀ ಶಕ್ತಿ ನಿನ್ನಲ್ಲಿ ಅವತರಿಸುವುದು,
ಸಾಧನೆಯ ಶಿಖರ ಅದೋ ನೋಡಲ್ಲಿ 
ಜಾರಿ ನಿನ್ನ ಕಣ್ಣಮುಂದೆಯೇ  ಪ್ರತ್ಯಕ್ಷವಾಗಿದೆ ಒಳಗಣ್ಣ ತೆರೆ ,ತೇಜಸ್ಸನ್ನು ಅಪ್ಪು
ನಿನ್ನವ್ಯಕ್ತಿತ್ವವ ನೀನೇ ರೂಪಿಸಿಕೋ ಗೆಳೆಯ//

Sunday, October 25, 2015

ಏನು ಗಳಿಸಿದೆ ಇಷ್ಟು ವರುಷಗಳಲಿ?

ಏನು ಗಳಿಸಿದೆ ಇಷ್ಟು ವರುಷಗಳಲಿ?
ವಿದ್ಯೆ,ಕೆಲಸ,ಹಣ,ಹೆಂಡತಿ,ಮಕ್ಕಳು
ಸಂಪತ್ತು,ಗೆಳೆತನ ಏನಿಲ್ಲ? ಹೇಳು ಗೆಳೆಯ!
ಆಸೆ ಪಡುತ್ತಲೇ ಬೇಕು ಬೇಕೆಂದಿದ್ದೆಲ್ಲಾ
ಪಡೆಯುತ್ತಲೇ ಹೋದೆ ಒಂದು ಒಂದಾದನಂತರ
ಮೊದಲು ಪಡೆದದ್ದು ಈಗ ಕಸವಾಗಿದೆ
ನಂತರ ಪಡೆದದ್ದರ ಗತಿಯೇನು? ನೀನೇ ಹೇಳು
ಎಲ್ಲವೂ ಕೈಗೆಟುಕುತ್ತಲೇ ಇದೆ,ಹಾತೊರೆದಿದೆ ಮನ
ನೆಮ್ಮದಿಯ ಹುಡುಕುತ್ತಲೇ ಇದ್ದೇನೆ ವಸ್ತುಗಳಲಿ
ಅದು ಬೇಕು!ಇದು ಬೇಕು! ಬೇಕು ಬೇಕುಗಳ ಭಿಕ್ಷುಕ
ಯಾವ ಸಂಪತ್ತಿನಲಿ,ಯಾವ ವಸ್ತುಗಳಲಿ
ಆ ತೃಪ್ತಿ ಅಡಗಿದೆಯೋ ಹುಡುಕಾಟದಲ್ಲಿ ಅನ್ವೇಷಕ
ಎಲ್ಲೋ ಲೋಕದ ವಸ್ತುಗಳಲಿ,ಸಂಪತ್ತುಗಳು ಹುಡುಕಬೇಡ
ತೃಪ್ತಿ,ಶಾಂತಿ,ನೆಮ್ಮದಿ ಮನದಲ್ಲೇ ಅಡಗಿದೆ ಆಗು ನೀ ಸಂಶೋಧಕ //

Saturday, October 24, 2015

ಕಾಪಾಡು ಗೆಳೆಯಾ...

ಪಾಠ ಕಲಿತೆ ಗೆಳೆಯ ಎಂಥ ಪಾಠ ಅಂತೀಯ
ಉಪಕಾರ ಮಾಡಲೋಸುಗ
ಸಮಸ್ಯೆಯ ಹೆಬ್ಬಾವಿಗೆ ಸಿಲುಕಿದ ಹಾಗೆ
ಅಬ್ಬಾ ಎಂಥ ಪಟ್ಟು ಹೆಬ್ಬಾವಿನದು
ನಮ್ಮ ತೆವಲಿಗೆ ಬೀಳುವ ನಾವು
ಸ್ವಾರ್ಥಸಾಧನೆಗೆ ನಿಂತರೆ ಏನು ಕಥೆ?
ಏನು ಬಯಸಲಿಲ್ಲ?ಸಹಾಯವಾಗಲಿ
ಎಂಬ ಉದ್ದೇಶವಲ್ಲದೆ ಬೇರೆ ವ್ಯಾಮೋಹವಿಲ್ಲ
ನಿಸ್ವಾರ್ಥ ನಿಲುವಿಗೇ ಹೆಬ್ಬಾವಿಗೆ ಸಿಲುಕಿ
ಬಿಡಿಸಿಕೊಳ್ಳುವ ಪರಿ ತ್ರಾಸದಾಯಕ
ಅಬ್ಬಬ್ಬಾ ಸಿಲುಕಿ ಹೈರಾಣಾದೆ
ಸಾಕಪ್ಪಾ ಸಾಕು ಈ ದೊಂಬರಾಟ
ಕೊನೆ ತೋರಿಸಯ್ಯಾ ಬಳಲಿದೆ ಈ ಮನ
ಮತ್ತೊಮ್ಮೆ ಸಿಲುಕಲಾರೆನಯ್ಯಾ ಕಾಪಾಡು ಗೆಳೆಯಾ...

ಆವ ಭಯದಲ್ಲೋ? ಆವ ನೆಪದಲ್ಲೋ? //

ಬದಲಾಗಿದೆ ಇಲ್ಲಿ ಎಲ್ಲವೂ, ಒಂದೂ ಬಿಡದೆ
ನಾನು,ನಾವು,ನೀವು,ಅವರು,ಅವಳು,
ಏಕವಚನ,ಬಹುವಚನ,ಲಿಂಗ,ಪುಲ್ಲಿಂಗ,ಸ್ತ್ರೀಲಿಂಗ
ಹೇಳ ಹೆಸರಿಲ್ಲದೆ ಗುರುತು ಸಿಗದಹಾಗೆ
ಬದಲಾಗಿದೆ ಇಲ್ಲಿ ಎಲ್ಲವೂ ಕಾರಣವಿಲ್ಲದೆ
ಎಲ್ಲವೂ ಬದಲಾಗಿದೆ,ಹೊಸ ತುಡಿತದ ಹಾದಿಯಲ್ಲಿ//

ತಥಾಕಥಿತ ಕಥೆಗಳೆಲ್ಲವೂ ಬದಲಾಗಿದೆ
ಹಳೆಯ ರೂಪಗಳೆಲ್ಲಾ ಗೂಡು ಸೇರಿವೆ ಆತಂಕದ ಕರಿಛಾಯೆಯ ತಿಮಿರಕ್ಕೆ ಹೆದರಿ,ಬೆದರಿ ಮೂಲೆಸೇರಿವೆ
ಹೊಸಹೊಸ ವಿರೂಪಗಳೇ ಮೇಳೈಸಿವೆ ಗರಿಗೆದರಿ
ನಾದ,ಸ್ವರ,ಲಯಗಳೆಲ್ಲಾ ಕತ್ತಲು ಮನೆಸೇರಿವೆ
ಆವ ಭಯದಲ್ಲೋ? ಆವ ನೆಪದಲ್ಲೋ? //

ಎಲ್ಲ ಬಲ್ಲವ ನೀನು

ಎಲ್ಲ ಬಲ್ಲವ ನೀನು,ಕಲ್ಪವೃಕ್ಷವು ನೀನು
ಏನ ಬಿನ್ನಹವ ನಿನ್ನ ಮುಂದಿಡಲಿ ದೇವ?
ಎಲ್ಲರೂ ನಿಂತಿಹರು ತಮ್ಮ ಬಿನ್ನಹದ ಪಟ್ಟಿಹಿಡಿದು
ಮೂಕವಿಸ್ಮಿತನಾಗಿಹೆನು ಅವರ ಬಿನ್ನಹಗಳ ಆಲಿಸಿ,
ಮಂದಹಾಸದಿ ನೀನು ಎಲ್ಲರ ಬಿನ್ನಹಗಳ ಆಲಿಸಿ
ಅವರವರ ಬಿನ್ನಹದಂತೆ ವರವ ಕರುಣಿಸುವೆ
ಏನು ಮಾಡಲಿ ದೇವ?,ಮೂಕನಾಗಿಹೆನು ನಿನ್ನ ಮುಂದೆ,
ಕಣ್ಣಲ್ಲಿ,ಹೃದಯದಲ್ಲಿ,ಮನದಲ್ಲಿ,ಉಸಿರಿನಲಿ
ನಿನ್ನ ರೂಪವನೆ  ತುಂಬಿಕೊಂಡಿಹೆನು
ನಿನ್ನ ನಾಮಾಮೃತವೆ ಮನದಲ್ಲಿ ನೆಲೆಸಲಿ
,ನಾ ನಿನ್ನ ಶಿಶುವೆಂದು ಕರುಣೆಯೊಂದಿರೆ ಸಾಕು,
ಎಂಬ ಬಿನ್ನಹವಲ್ಲದೆ ಮತ್ತೇನು ಇಲ್ಲ ದೇವ
ಕೈಹಿಡಿದು ನಡೆಸಲು ನೀನಿರಲು ದೇವ
ಏನ ಬೇಡಿಕೆಯ ನಿನ್ನ ಮುಂದಿಡಲಿ ದೇವ?//

Tuesday, October 20, 2015

ಕನ್ನಡಿಯ ನೋಡು ಗೆಳೆಯ! ನೀನಾಗುವೇ ಅನಿಕೇತನ

ಕನ್ನಡಿಯ ನೋಡು ಗೆಳೆಯ,ನೋಡು
ಬ್ರಹ್ಮಾಂಡವೇ ಅಡಗಿದೆ ಅದರಲ್ಲೇ ಪ್ರಳಯ
ಬೆಚ್ಚಬೇಡ ಅದರ ಹರವು ಕಂಡು
ಲೋಕ ನಾಚುವುದು ಅದನು ಕಂಡು
ನಮ್ಮ ಮುಖವಾಡಗಳೆಲ್ಲಾ ಕಳಚುವುದು
ಬಟ್ಟೆ ಧರಿಸಿದ್ದರೂ ಅದರ ಮುಂದೆ ನಾವು ಬೆತ್ತಲೆ
ಅದರ ಮುಂದೆ ನಮಗೆ ನಾವೇ ಗೆಳೆಯರು
ಪರದೆ ಕಳಚಿದೊಡೆ ನಮಗೆ ನಾವೇ ಶತೃಗಳು
ಜಿಪುಣರಾಗುವುದು ಬೇಡ ಅದರ ಮುಂದೆ
ಮುಕ್ತ ಮನಸ್ಸಿನಿಂದ ಎಲ್ಲವನ್ನೂ ತೆರೆಯೋಣ
ಹೊಸ ಗಾಳಿ,ಹೊಸ ನೋಟ,ನಮ್ಮೊಳಗಿನ ವಿಸ್ತಾರ
ಎಲ್ಲವೂ ಕಾಣುವುದು ಕನ್ನಡಿಯ ಮುಂದೆ
ತೆರೆದು ಕೋ ನಿನ್ನ ಆಂತರ್ಯದ ಮುಂದೆ
ನಾಚಿಕೆಯ ಸುಡು ನೀನಾಗುವೇ ಅನಿಕೇತನ//

ಹಠಯೋಗಿ

ಮನದಲೆಲ್ಲಾ ಸೂತಕದ ಛಾಯೆ
ತಲೆಬೇನೆ,ಆತಂಕದ ಕರಿಛಾಯೆ
ಬೇಡಬೇಡವೆಂದರೂ ಸುಳಿಯುವ ಮಾಯೆ
ಆಸೆ,ಕಪಟ ನಾಟಕವಾಡಿ ಗಹಗಹಿಸಿದೆ
ನೀ ಬಿಟ್ಟರೂ ನಾ ಬಿಡನೆಂಬ ಹಠಯೋಗಿ
ಆಹುತಿಯೋ,ಬಲಿಪಶುವೇ ಬೇಕೆಂಬ ಹಠ
ಸಿದ್ಧ ವಾಗೆ ನಿಂತಿದೆ ಈಗಲೇ ಬೇಕೆಂದು
ತಲೆಯೊಡ್ಡಲೋ,ಸಿಡಿದೇಳಲೋ
ದ್ವಂದ್ವ ಕದನ ಮನದಲ್ಲಿ ಸಂಚು ಹೂಡಿದೆ
ಯಾವುದು ಸರಿ?ಯಾವುದು ತಪ್ಪು?
ವಿವೇಕ ನರಳುತ್ತದೆ ಅಂಧಕಾರದಲ್ಲಿ 
ಆತಂಕ ಮನದಲ್ಲಿ ಸೋತುಬಿಟ್ಟರೆ?
ಗುರುವೇ ನಿನ್ನ ಕರುಣೆಯ ಬಲನೀಡು
ಎಲ್ಲಾ ದ್ವಂದ್ವಗಳ ಕಟ್ಟಿ ತಿಮಿರವ ಗೆಲ್ಲುವೆ

ನಿಜರೂಪ...

ಗೆಳೆಯ ನಿನ್ನ ಮುಖವ ಕನ್ನಡಿಯಲ್ಲಿ ನೋಡಿಕೊಂಡಿರುವೆಯಾ?
ಖಚಿತಪಡಿಸಿಕೋ ನಿನ್ನ ನಿಜ ರೂಪವ
ನಕ್ಕು ಬಿಡಬೇಡ ನಿನಗಿರುವುದೊಂದೇ ರೂಪವೆಂದು
ಕಂಡ ರಾವಣನಿಗೊಂದೇ ರೂಪ
ಬಯಲಾಯಿತಲ್ಲ ರಾಮಯಣದ ರಾಮ-ರಾವಣರ ಯುದ್ಧದಲ್ಲಿ
ರಾವಣನೊಗೊಬ್ಬನಿಗೇ ತಿಳಿದಿತ್ತು ಅವನ ಹತ್ತು ತಲೆಗಳ ನಿಜಮುಖ
ಸಂದಿಗ್ಧ ಪರಿಸ್ಥಿತಿ ಯಲ್ಲಷ್ಟೇ ನಮ್ಮ ನಿಜರೂಪ ಬೇರೆಯವರಿಗೆ ತಿಳಿಯುವುದು
ನಮ್ಮ ನಿಜರೂಪ ಕನ್ನಡಿಯ ಮುಂದೆ ನಮಗಷ್ಟೇ ತಿಳಿವುದು
ಪರೀಕ್ಷಿಸಿಕೋ ನಿನ್ನ ನೀ..
ತಿಳಿದು ಕೋ ನಿನ್ನ ನಿಜರೂಪವ....

Sunday, October 18, 2015

ಮನದ ಒಳಕುದಿ

ಮನದ ಹುತ್ತದಲ್ಲಿ ನೂರಾರು ಹಾವುಗಳ ಸಂತೆ
ಒಂದಕ್ಕೊಂದು ಬೆಸೆದುಕೊಂಡಿವೆ ಬುಸುಗುಡುತ್ತಾ
ಒಳಕುದಿ ಹೆಚ್ಚಾಗಿ ನೆಲೆನಿಂತ ಜಾಗದಲ್ಲಿ ಇರಲಾಗದೆ
ಮೇಲು ಮುಖಮಾಡಲು ಇರುವುದೊಂದೇ ಕಿಟಕಿ
ಹೊರಬರಬೇಕಾದವರು ನೂರು,ಸಾವಿರ,ಲಕ್ಷದಷ್ಟು
ನಾ ಮೊದಲು,ತಾ ಮೊದಲು ಪೈಪೋಟಿಗೆ ಬಿದ್ದಿವೆ
"ಶಕ್ತಿ ಇದ್ದವ ಉಳಿವ " ಬೆಳಕಿಂಡಿಗೆ ಮುಖಹಾಕೆ
ಏನೋ ಉತ್ಸಾಹ ಬದುಕಿದೆಯಾ ಬಡಜೀವವೇ ಎಂದು
ಕ್ಷಣಿಕ ಸುಖ ಅದು,ಕೆಳಗೆ ಕಾಲೆಳೆವರು ಬಹಳ ಮಂದಿ
ಹೇಗೆ ಹತ್ತುವೆಯೋ ಹಾಗೆ ಕ್ಷಣದಲ್ಲೇ ಪಾತಾಳ ನಗ್ನಸತ್ಯ
ಈ ರಂಗ ನಾಟಕ ಇಂದು ನಿನ್ನೆಯದಲ್ಲ
ಶತಮಾನಗಳ ಚರಿತ್ರೆ
ನಡೆಯುತ್ತಲೇ ಇದೆ
ಒಬ್ಬೊಬ್ಬರ ಮನದಲ್ಲಿ ನಿರಂತರ.

ನನ್ನ ದಾರಿ ನನಗೆ

ಯಾವುದೋ ಚಿಂತನೆಗಳು ಬಿಡದೆ ಕಾಡಿವೆ ಮನವ
ಪ್ರೀತಿಸಲೊಪ್ಪದ ಚೆಲುವೆಯ ಮನವ ಒಪ್ಪಿಸುವಂತೆ
ಬೇಡ,ಬೇಡವೆಂದರೂ ಮತ್ತೆ ಮತ್ತೆ ಅದೇ ವರಸೆ
ಸಾಕು ಸಾಕಾಗಿದೆ ಇವುಗಳ ಸಹವಾಸ//

ನನ್ನದೇ ಚಿಂತೆಗಳು ನೂರಿವೆ
ಚೋಧ್ಯ ಮಾಡಿ ಕಾಯುತ್ತಿವೆ ಪರಿಹಾರಕ್ಕಾಗಿ ಕತ್ತಲಲ್ಲಿ
ಇಷ್ಟು ಸಾಕಲ್ಲವೇ! ಮತ್ತೆ ನೀವೇಕೆ ಹಿಂಸಿಸುವಿರಿ
ನಿಮ್ಮತ್ತ ಗಮನಕೊಡಲು ಸಮಯವಿಲ್ಲ//

ನಾಳೆ ಬಾ ಎನ್ನಲೇ?,ಇಲ್ಲ ಬರಬೇಡಿರೆನ್ನಲೇ?
ಕರೆದಾಗ ಬನ್ನಿರೆಂದು ಮೌನವಹಿಸಲೇ? ಧರ್ಮಸಂಕಟ
ಹೊಸಹೊಸ ಸಮಸ್ಯೆಗಳು ಮಾರುಕಟ್ಟೆಗೆ ಬಂದಿಳಿವ ಮೊಬೈಲುಗಳಂತೆ
ಎಲ್ಲವನ್ನೂ ನಾ ನೋಡಲಾರೆ,ನನ್ನ ದಾರಿ ನನಗೆ ಬಿಟ್ಟುಬಿಡು//

ಬಂದೇ ಬರುವೆ ನಾ ಬಲ್ಲೆ!

ನನ್ನ ಎದೆಗೂಡು ಖಾಲಿಯಾಗಿದೆಯೆಂದು
ಹೇಳಿದರಾರು? ನಿನಗೆ ಓ ನನ್ನ ಚೆಲುವೆ!
ಜೊತೆಗಿದ್ದರೂ ಎಂದೂ ಕಾಣದಿದ್ದ ಈ ಚೆಲುವು,ಒಲವು
ಇಂದೇಕೆ ಕಣ್ಣ ಮುಂದೆಯೇ ಬಂದು ಎದೆಯ ಬಡಿದಿದೆ//

ನೀ ರಜೆಗೆ ದೂರ ಹೋದೆಯೆಂದೇ?

ಎಷ್ಟು ಜನರು  ಬಂದರೂ,ಹೋದರೂ
ಹಾಕಿದ ಕದ ಕದಲದೆ ನಿಂತಿತ್ತು ಗರುಡಗಂಬದ ಹಾಗೆ
ಕೋಲ್ಮಿಂಚಂತೆ ಬಂದುಹೋದ ನೀನು
ಶತಮಾನದ ಕದವ ತೆರೆದು ಹೋದೆ//

ಇಷ್ಟು ದಿನ  ಕೃಪೆದೋರಲಿಲ್ಲವೇಕೆ?

ಹೊರಟು ಹೋದೆ!,ಮತ್ತೆ ಎಂದು ಆಗಮನ?
ಜೀವನದ ಏಕತಾನತೆಯ ಸುಳಿಗೆ ಸಿಕ್ಕ ನಾನು
ಮರೆತ ಜೀವನ ಪ್ರೀತಿಯ ಮತ್ತೆ ನೆನಪಿಸಿ ಹೋದೆ
ಕಾಯುತಿರುವೆ ಹೃದಯವ ತೆರೆದು ಮತ್ತೆ ಬರುವೆಯೆಂದು//

ರಜೆ ಮುಗಿದ ತಕ್ಷಣ ಬಂದೇ ಬರುವೆ ನಾ ಬಲ್ಲೆ!

Monday, October 12, 2015

ನಾನೇ ಕೊನೆ, ನಾನೇ ಮೊದಲು.

ಕೇಳು ಕೇಳು ನನ್ನ ಮಾತು
ನಾನು ನಿನ್ನೊಳಗಿನ ದನಿ
ನನ್ನ ಮಾತು ಜೇನು
ನಡೆಯುವ ಹಾದಿ ಕಲ್ಲು ಮುಳ್ಳು
ನಾನು ಸತ್ಯ,ನಾನೇ ನಿತ್ಯ
ಎಲ್ಲರೊಳಗೂ ನಾನಿರುವೆ
ಇದ್ದರೂ ಇಲ್ಲದ ಹಾಗಿರುವೆ
ನನ್ನ ಮಾತು ಯಾರಿಗೂ ಬೇಡ
ಎಲ್ಲ ದಾರಿಗಳು ಕೊನೆಯಾದಾಗ
ನಾನೇ ಮುನ್ನಡೆಸುವವ,
ನಾನೇ ಕೊನೆ,
ನಾನೇ ಮೊದಲು.

Tuesday, October 6, 2015

ನನ್ನ ಒಡನಾಡಿ

ಬಾಯಿಲ್ಲ ಮಾತಿಗೇನೂ ಕಮ್ಮಿಯಿಲ್ಲ
ಸಾವಿರ ಮಾತು ಸಾಲದು ಬಣ್ಣಿಸಲು:
ಕಣ್ಣಿಲ್ಲ ಆದರೆ ಕುರುಡಲ್ಲ
ಕನಸ ಬಿತ್ತುತ್ತಿದೆ ನೂರು ಮನದಲ್ಲಿ:
ಕಿವಿಯಿಲ್ಲ ಆದರೆ ಕಿವುಡಲ್ಲ
ನನ್ನ ಮನದ ನೋವೆಲ್ಲಾ ಬಲ್ಲ ಜಾಣೆ :
ಕೈಗಳಿಲ್ಲ ಆದರೆ ವಿಕಲಚೇತನಳಲ್ಲ
ಹೃದಯದ ಕಣ್ಣೀರು ಒರೆಸಿದಳು ಕರುಣೆ:
ಕಾಲುಗಳಿಲ್ಲ ಆದರೆ ಕುಂಟಿಯಲ್ಲ
ನಾ ಏಕಾಂಗಿಯಾಗಿ ನಡೆವಾಗ ಜೊತೆಯಾಗಿ ಹೆಜ್ಜೆಹಾಕುವ ಚದುರೆ:
ಹೂವಷ್ಟೇ ಮೃದು
ಪರಿಮಳ ಮೈಲಿಗಳಾಚೆ
ಮನವ ಮುದಗೊಳಿಸುವ ಗೆಳತಿ
ನನ್ನ ಒಡನಾಡಿ:

Saturday, October 3, 2015

ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು

ಅಣು ಅಣುವಿನಲಿ,ಕಣಕಣದಲಿ
ಬಿಂದುವಿನಲಿ,ಸಿಂಧುವಿನಲಿ
ತೆರೆಯಲು,ಮರೆಯಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು//

ಸೂಜಿಯ ಮೊನೆಯಲಿ,
ಅನಂತ ಆಗಸದಲಿ,
ಪರ್ವತದ ತುತ್ತ ತುದಿಯಲಿ,
ಪಾತಾಳದ ಆಳದಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು//

ಒಳಿತಿನಲಿ,ಕೆಡುಕಿನಲಿ
ನೋವಿನಲಿ,ನಲಿವಿನಲಿ
ಅಮಿತತೆಯಲಿ,ಅನಂತತೆಯಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು//

Saturday, September 26, 2015

ವೀರರು ಧೀರತೆಯ ಯೋಧರು

ಅವರೆ ಅವರೆ ವೀರರು
ಧೀರತೆಯ ಯೋಧರು
ಭಾರತ ಮಾತೆಯ ರಕ್ಷಣೆಗಾಗಿ
ಜೀವನವನೆ ಮುಡಿಪಾಗಿಟ್ಟವರು//
ನೀವೇ ಮಾರ್ಗದರ್ಶಕರು
ನೀವೇ ದೇಶ ರಕ್ಷಕರು
ನೀವೇ ಶತೃನಾಶಕರು//
ಯಾವಾಗಲೂ ಸಾಹಸಿಯೇ ಆಗಿರು
ವೀರತೆಯೇ ನೀನಾಗಿರು
ಭಾರತ ಸಂಸ್ಕೃತಿಯೇ ನೀನಾಗಿರು//
ಹೆಜ್ಜೆ ಹೆಜ್ಜೆ ಸಾಗಲಿ
ಮನಸ್ಸು ಮನಸ್ಸು ಸೇರಲಿ
ಭಾರತ ಮಾತೆಯ ಗೌರವ
ಕಾಪಿಡಲು ಸರ್ವದಾ ಶ್ರಮವಿರಲಿ//

ಕವಿತೆ

ನಾನೊಂದು ಕವಿತೆ
ಅರ್ಥವಾಗದ ಕವಿತೆ
ಯಾರೂ ಓದದ ಕವಿತೆ
ಭಾವನೆಗಳೊಡನೆ ತೊಳಲಾಡುವ ಕವಿತೆ
ಇಂದು ಇದ್ದು, ನಾಳೆ ಇಲ್ಲವಾಗುವ ಕವಿತೆ
ಮನದ ಮೂಲೆಯಲ್ಲೋ ಕುಳಿತೆ
ಮನದ ಕತ್ತಲಲ್ಲಿ ಅವಿತೆ
ನಾ ಕವಿತೆ,ನಾ ಕವಿತೆ
ಅರ್ಥವಾಗದ ಕವಿತೆ

Wednesday, September 23, 2015

ಸತ್ಯ ..

ಹೇಳಬಯಸುವೆನೊ೦ದು ಸತ್ಯ
ಎದೆಯ ಗುಡಿಯೊಳಗೆ ರಿ೦ಗಣಿಸುವ
ಆ ಮುರಳಿಯ ನಾದವ ಆಲಿಸಿಹೆಯಾ?
ಅದೇ ನಿಜವಾದ ಸತ್ಯದ ನುಡಿಯು
ನಿನ್ನೊಳಗುಡಿಯ ಗ೦ಟೆಯ ಸದೇ್ದ ಅದು
ಎಲ್ಲರೊಳು ರಿ೦ಗಣಿಸುವುದದು
ಕೆಲವೇ ಕೆಲವರಿಗೆ ಕೇಳುವ,
ಕೇಳಿಸಿಕೊಳ್ಳುವ ಮುರಳಿಯ ನಾದವದು..

Friday, September 18, 2015

ನೋವೇ ನೀ ಬಂದೆ ಏಕೆ?

ನೋವೇ ನೀ ಬಂದೆ ಏಕೆ?
ನನ್ನೆದೆಯ ಬಗೆದು ನಿಂದೆ ಏಕೆ?
ಯಾವ ತಪ್ಪಿಗೆ ಈ ನೋವು ನೀ ಹೇಳು
ನನ್ನದಲ್ಲದ ತಪ್ಪಿಗೆ ನೀ ಬಂದೆ ಏಕೆ?
ಯಾವ ಜನ್ಮದ ಯಾತನೆಯೋ ನಾನರಿಯೆ
ಮನವ ಅರಿಯದ ಮನಸುಗಳು ಸಂಚು
ತಲುಪಿದೆ ನೆಮ್ಮದಿ ಕೊನೆಯ ಅಂಚು
ಮೌನವೂ ನರಳುತಿದೆ 
ಮನವೂ ನರಳುತಿದೆ//

ವಿನಾಯಕ ಸಿದ್ಧಿವಿನಾಯಕ ಪಾಹಿಮಾಂ

ವಿನಾಯಕ
ಸಿದ್ಧಿವಿನಾಯಕ ಪಾಹಿಮಾಂ//
ಗಣಪತಿ
ಗಜಾನನ ಪಾಹಿಮಾಂ//
ಆದಿಪೂಜಿತ
ವಿದ್ಯಾಪ್ರದಾಯಕ ಪಾಹಿಮಾಂ//
ಜೇಷ್ಟರಾಜ
ಗಣರಾಜ ಪಾಹಿಮಾಂ//
ಮೋಧಕ ಪ್ರಿಯ
ಮೂಷಕವಾಹನ ಪಾಹಿಮಾಂ//
ವಿಘ್ನಹಾರಕ
ಸಿದ್ಧಿಪ್ರದಾಯಕ ಪಾಹಿಮಾಂ//
ವಂದೇ ಗೌರೀತನಯಂ
ಪಾಹಿಮಾಂ ಹರಸುತ ಪಾಹಿಮಾಂ//

Friday, June 26, 2015

ಅಪೇಕ್ಷೆ

ನಿರೀಕ್ಷೆಗಳು ಹುಸಿಯಾಗಿದೆ
ಅಪೇಕ್ಷೆಗಳು ನೂರಾಗಿವೆ
ದಾರಿ ಕಾಣದ ಬಯಕೆಗಳು
ದಿಕ್ಕುಪಾಲಾಗಿ ಓಡಿವೆ
ಹಿಡಿತವಿಲ್ಲದೆ ಬದುಕು ಮೂರಾಬಟ್ಟೆಯಾಗಿದೆ
ತಾಳ್ಮೆ,ಸಹನೆಯ ಮೌಲ್ಯ ಗೋಚರಿಸಿದೆ.

ಹೇಳಲೇನು?

ಹೊರಡುವ ಮೊದಲು ಹೇಳಲೇನು?
ಮನವು ಖಾಲಿ, ಹೇಳಲೇನು?
ಕಾಲ ಕಳೆದೆ, ನರಳಿದೆ ನೆನಪಲ್ಲಿ
ಜೊತೆ ಸಾಗದೆ ನಲುಗಿದೆ ಹೇಳಲೇನು ಮತ್ತೆ?
ಹೊಸ ದಿನ, ಹೊಸ ಜನ,ಹೊಸ ಮನ
ಯಾವುದಕ್ಕೆ ಸೋತೆನೋ
ಎಲ್ಲವೂ ಮರೆತಿದೆ, ಗಾಯ ಮಾಸಿದೆ!
ಮತ್ತೇನು?ನನ್ನದೂ ಚರಿತ್ರೆಯೇ ಆಗಿದೆ
ಯಾರು ಓದಲಾರರು,
ಯಾರು ಅದರಿಂದ ಏನೂ ಕಲಿಯರಾರರು  ಹೇಳಲೇನು? ಹೇಳಲೇನು? ಮತ್ತೆ......

Thursday, May 28, 2015

ಆವ ಭಾಗ್ಯವಿದ್ದೊಡೇನು?

ಆವ ಭಾಗ್ಯವಿದ್ದೊಡೇನು?
ಮನದಲ್ಲಿ ನೀನಿಲ್ಲದ ಮೇಲೆ
ಮನದಲ್ಲಿ ಚೈತನ್ಯವಿಲ್ಲದ ಮೇಲೆ
ಏನು ಬಂದರೇನು ಎಲ್ಲವೂ ವ್ಯರ್ಥವೇ!
ನನ್ನ ಅರ್ಥವಿಲ್ಲದ ಬದುಕಿಗೆ
ನೀನು ಬೆಳಕಾಗ ಬೇಕು
ನೀ ಬರುವ ಹಾದಿಯಲ್ಲಿ
ಬರಿದಾದ ಈ ಹೃದಯವ 
ತೆರೆದು ಸ್ವಾಗತಿಸುತಿರುವೆ
ಶರಣಾಗಿ ಕನಿಕರಿಸೆಂದು ಬೇಡುತಿಹೆನು

Tuesday, May 26, 2015

ಸಾಕೆನಗೆ

ಮಂತ್ರಗಳ ನಾನರಿಯೆ,
ತಂತ್ರಗಳ ನಾನರಿಯೆ, 
ನಿನ್ನ ಕರುಣೆಯೊಂದೇ ಸಾಕೆನಗೆ||

ಮಂತ್ರ ಬೇಡ,
ತಂತ್ರ ಬೇಡ,
ನಿನ್ನ ಪ್ರೀತಿಯೊಂದೇ ಸಾಕೆನಗೆ||

ಶಕ್ತಿ ಬೇಡ,
ಯುಕ್ತಿ ಬೇಡ,
ನಿನ್ನ ಕೃಪಾಕಟಾಕ್ಷವೊಂದಿರೆ ಸಾಕೆನಗೆ||

ಅಷ್ಟೈಶ್ವರ್ಯಗಳು ಬೇಡ,
ಸುಖ-ಸಂತೋಷಗಳು ಬೇಡ
ನಿನ್ನ ಕೊಂಡಾಡುವ ಮನವೊಂದಿರೆ ಸಾಕೆನಗೆ||

Sunday, May 10, 2015

ಅಮ್ಮ

ಕರುಣೆಯ ಕಡಲು ಎನ್ನಲೆ
ವಾತ್ಸಲ್ಯದ ಗಣಿ ಎನ್ನಲೆ
ನೋವನುಂಡರೂ 
ಜೀವ ತೇಯ್ದರೂ
ಪ್ರೀತಿಯ ಒರತೆಯವಳು
ದೇವರೆನ್ನಲೆ?
ಸ್ತ್ರೀ ಎನ್ನಲೇ?
ಹೆಣ್ಣೆನ್ನಲೆ?
ಜೀವನಪ್ರೀತಿ ಎನ್ನಲೇ?
ಅಮ್ಮ,ಅಮ್ಮ ಎಂದರಷ್ಟೆ ಸಾಲದೆ?

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...