ತಣಿಸು ಬಾ

ಕಣ್ಣ ಮುಚ್ಚಿದರೂ ಅವನದೇ ಚಿಂತೆ
ಕಣ್ಣತೆರೆದೆನೆಂದರೆ ಅವನಿಲ್ಲದ ನೆವ
ನಿದಿರೆಯ ಆಹ್ವಾನಿಸಿ ಅವನ ಕನಸ ಕಾಣ್ವಹಂಬಲ
ನಿದಿರೆಯನ್ನೂ ದೋಚಿದ ಕಳ್ಳನವನು
ನಿದಿರೆಯಲ್ಲೂ ಅವನ ಸೇರುವ ಹಂಬಲ ವ್ಯರ್ಥ
ಸೊರಗಿದೆ ಈ ತನುವು ಬಳಲಿದೆ ಈ ಮನ
ಚೈತನ್ಯವಾಗಿ ನೀ ಬಳಿ ಬರುವೆಯೆಂದು ಕಾದಿಹೆ
ನಿನ್ನ ತೋರುವ ದಿನವದಾವುದೋ ನಾ ಕಾಣೆ?
ಹಂಬಲದಿಂದೊಂದು ದಿನ ನಿನ್ನ ನೋಡುವ ಭರವಸೆ
ನಿದಿರೆ ನೀ ಬಾರದೆ ನಾ ಹೇಗೆ ಕಾಣಲಿ ಅವನ ಕನಸ ?
ಒಮ್ಮೆ ಬಂದು ಹೋಗು ಬಾ ಈ ವಿರಹವ ತಣಿಸು ಬಾ ।।

ಹೋಗಬೇಡ ಗೆಳೆಯಾ

ಹೊರಟುಹೋದೆಯಾ ಮಾಧವ ಬಳಿಬಂದು ಹೋದುದೇಕೆ?
ಮನದಲಿ ಹಂಬಲ ತುಂಬಿದೆ ವಿರಹದಿ ಬಳಲಿಹೆನು
ಕೋಪದಿಂದೊಂದು ಮಾತಿಗೆ ಮುನಿಸಿಕೊಂಡೆಯಾ
ಬಳಲಿ ಬಳಲಿ ಬೆಂಡಾದವಳಿಗೆ ಉಪವಾಸ ವ್ರತವೇ?
ಬಲುದಿನದನಂತರ ಬಳಿಬಂದೀ ಶುಕ್ಲಪಕ್ಷದ ಚಂದಿರನಂತೆ
ತಾಪದಿ ಒರಟು ಪ್ರೀತಿಯಮಾತಿಗೆ ನೀ ನೊಂದೆಯಾ?
ಹೋಗಬೇಡ! ಹೋಗಬೇಡಾ! ಇನಿಯಾ ತಾಳೆನು ಈ ವಿರಹ
ಹೃದಯ ಸೋತಿದೆ ತನುವು ನಲುಗಿದೆ ನಿನ್ನ ನೋಡದೇ
ಹೋಗಬೇಡ ಗೆಳೆಯಾ ನನ್ನ ತೊರೆದು ಹೋಗಬೇಡ ಇನಿಯಾ...

ಎತ್ತ ಹೊರಟೆ?

ಎತ್ತ ಹೊರಟೆಯೇಕೆ ಚಲುವಾಂಗಿಯೇ?
ರಂಗು-ರಂಗಿನ ಸೀರೆಯುಟ್ಟಿಹೆ ಶೃಂಗಾರಾದಿ
ಅದರದೊಳು ನಗುವ ತಾರೆಹೊಕ್ಕು ಹೊಳೆಯುತಿದೆ
ಮನದಲೇನೋ ಹರುಷ ಹೃದಯದೊಳು ಇನಿಯ
ತವಕ ಹೆಚ್ಚಿದೆ ಯಾವಾಗ ಇನಿಯನ ಕಂಡೆಯೇನೋ
ಎಂಬೀಹಂಬಲ ಮೈಖದಲ್ಲಿ ಹುಣ್ಣಿಮೆಯ ಮಂದಹಾಸ
ಮಿಂಚಿನಂತೆ ಮಾಯವಾಗುವ ಬಂಗಾರ ಜಿಂಕೆಯಂತೆ
ಆತುರದಿ ಹೊರಟು ನಿಂತಿಹೆ ಮುಗುದೇ ಸಮಾಧಾನ
ಜೋಪಾನ ತಾಳ್ಮೆಯಿರಲಿ ನಿನ್ನ ಸುಖ ಬಳಿಬರಲಿ
ಭಯ ಬೇಡ ಬೆಡಗಿ ಹೋಗು ಇನಿಯನ ಸನಿಹಕೆ ||

ತಾಯೇ ಏಕಿಂತ ಮುನಿಸು?

ಪ್ರತಿಯೊಂದು ಕರೆಯಲ್ಲೂ ಅದೇನೋ ಮುನಿಸು
ತಾಯೇ ಏಕಿಂತ ಮುನಿಸು ನಿನ್ನ ಮಕ್ಕಳ ಮೇಲೆ
ತಾಯಾಗುಣವಲ್ಲವೀ ಮುನಿಸು ಕಳವಳವಾಗಿದೆ
ತೊಟ್ಟು ಬಿಟ್ಟ ಬಾಣಗಳು ನಾವು ಬತ್ತಳಿಕೆಯಲ್ಲಿಲ್ಲ
ಜಗವನುದ್ಧರಿಸುವುದೋ? ಮುನಿಸತಣಿಸುವುದೋ?
ಮನವು ನೊಂದಿದೆ ನಿನ್ನ ಈ ಪರಿಯ ಕಂಡು
ಏಕೆ ತಾಯೇ ಮುನಿಸು? ನಾವು ಮಕ್ಕಳಲ್ಲವೇ?
ಪ್ರೀತಿಯ ವಾತ್ಸಲ್ಯದ ಅಮೃತವ ನೀಡುವುದಬಿಟ್ಟು
ದ್ವೇಷ ಅಸೂಯೆಯ ವಿಷವನ್ನೇಕೆವುಣ್ಣಿಸುತಿಹೆ ತಾಯೇ?
ನಿನ್ನ ಇಚ್ಛೆಯಂತಾಗಲಿ ನಾ ಸಿದ್ಧನಿಹೆನು ತಾಯೇ ।।

ನಿನ್ನ ಲೀಲೆ

ಅಚ್ಚರಿಯು ತಾಯೇ ನಿನ್ನ ಲೀಲೆ
ನಿನ್ನ ಕಾರುಣ್ಯವೊಂದಿರೆ ಬೇರೆ ಬೇಡವೆನಗೆ
ಏನ ಬಣ್ಣಿಸಲಿ ನಿನ್ನ ಮಮತೆ ವಾತ್ಸಲ್ಯ
ಕೊಡುವೀ ತುಂಬಿಕೊಳ್ಳುವಷ್ಟು
ತುಂಬಿಕೊಂಡಷ್ಟೂ ದಾಹ ಹೆಚ್ಚಿದೆ
ಕ್ಷಯವಾಗದ ಸಂಪತ್ತು ಅಕ್ಷರದೊಳಿಟ್ಟು
ಹರಸು ನಿನ್ನ ಸುತರನು ಅನಾವರತ ತಾಯೆ ಸರಸತಿಯೇ ।।

ಕೈಚಳಕ

ಎನಿತು ಸುಂದರವೀ ಶಿಲೆಯು
ತದೇಕ ಚಿತ್ತದಲ್ಲಿ ಕಣ್ಣ ಮುಚ್ಚದೆ
ನೋಡು-ನೋಡು ರಸಿಕನೆಂದಾಹ್ವಾನಿಸುತಿದೆ
ಶಿಲ್ಪಕಾರನ ಚಮತ್ಕಾರವೆನ್ನಲೋ!
ಮನದೊಳಗಿನ ಕಾಣದ ಶೃಂಗಾರವೆನ್ನಲೋ!
ಮನಸ್ಸೇ ಸೋತು ಗೊಂದಲಕ್ಕೆ ಸಿಕ್ಕಂತಿದೆ
ಅಚ್ಚರಿಯೋ! ಆಘಾತವೋ! ಮೂಕವಿಸ್ಮಯವೋ!
ಕಾಲನಿಂತಿದೆ ಮನದಲ್ಲಿ ಅದ್ಬುತ ಕೈಚಳಕವ ಕಂಡು

ಪಿಸುಮಾತು

ಪಿಸುಮಾತು ಕಿವಿಯಲುಸುರುವ ನೆಪದ ತವಕ
ಪ್ರಿಯೇ! ನಿನ್ನಯ ಗಲ್ಲವನ್ನೊಮ್ಮೆ ತಿರುಗಿಸು
ನಿನ್ನ ಗಲ್ಲವು ನನ್ನ ಗಲ್ಲವ ಸೋಕಿಸೆ ಮೈಮರೆತೆ
ಮಾತು ಮರೆತೇಹೋಯಿತು ಮೃಧು ಮಧುರ
ಅದರವು ಸೆಳೆಯಿತೆನ್ನನು ಮನವು ನಿನ್ನ
ಸೆಳೆಯಿತು ಪಿಸುಮಾತಿನ ನೆಪದಲಿ ರಸನಿಮಿಷ
ವದುವೇ ಮನವು ನಿನ್ನ ಸ್ಪರ್ಶಸುಖವ ಅನುಭವಿಸಿತು \\

ದುಡಿತ

ಹದಿನಾರು ವರುಷ ದುಡಿತವೋ ದುಡಿತ
ಅರಿವಾಗಲಿಲ್ಲ, ನಾವು ಯಾರಿಗಾಗಿ ದುಡಿಯುತ್ತಿದ್ದವೆಂದು;
ಬಾಸ್ ಗಳೆಲ್ಲಾ ನಮ್ಮ ಶ್ರಮದ ಏಣಿ ಏರಿ ದೊಡ್ಡವರಾಗಿಬಿಟ್ಟಿದ್ದರು
ಅರಿವಾಗಲಿಲ್ಲ, ಅವರು ಕಿವುಡ ಹಾಗು ಕುರುಡರೆಂದು\\

ಕನಸು

ತರ್ಕಿಸ ಬಯಸಿದೆ ಮನ
ನನ್ನೆಲ್ಲಾ ಕನಸುಗಳ

ಪ್ರೀತಿಸ ಬಯಸಿದೆ ಮನ
ನನ್ನೆಲ್ಲಾ ಕನಸುಗಳ

ಆತ್ಮವು ಬಡಿದೆಬ್ಬಿಸಿದೆ ಸಾಕಾರಗೊಳಿಸಲು
ನನ್ನೆಲ್ಲಾ ಕನಸುಗಳ

ಪ್ರೇರಣೆ: ಶ್ರೀ ಚಿನ್ಮಯ್

ಕನಸು

ಬೇಗ ಜಾರು ನಿದ್ದೆಗೆ,
ತವಕದಿ ಆಹ್ವಾನಿಸು ಕನಸಿಗೆ;
ಕನಸಿಲ್ಲದ ಜೀವನ, ರೆಕ್ಕೆ ಮುರಿದ ಹಕ್ಕಿಯಂತೆ
ಜೀವನ ನಿಂತ ನೀರು, ಕೊಳೆತು ನಾರುವುದು ದಿಟವಂತೆ\\

ಬೇಗ ಜಾರು ನಿದ್ದೆಗೆ,
ತವಕದಿ ಆಹ್ವಾನಿಸು ಕನಸಿಗೆ;
ಜಾರಿಹೋದ ಕನಸು, ಕೈಗೆ ಸಿಕ್ಕಿ ಬಾಯಿಗೆ ಸಿಗದಂತೆ
ಮಂಜುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡ ಜೀವದಂತೆ\\

ಪ್ರೇರಣೆ: “Dreams” by Langstone Hughes

ನನ್ನೊಳ ಗುಣಗಳು

ನನ್ನೊಳ ಮೃಗೀಯ ಗುಣ
ಹೊರಹೊಮ್ಮಿಸಿತು
ಹೋರಾಟ ಹಾಗು ದಾಳಿ ಮಾಡುವ ಭಂಡ ಧೈರ್ಯವ\\

ನನ್ನೊಳ ಮಾನವೀಯ ಗುಣ
ತೋರಿತು ಈ ಜಗಕೆ
ಧಿಕ್ಕರಿಸುವ ಹಾಗು ಕೀಳರಿಮೆಯ ಅಸಹಾಯಕ ಸಂಕಟವ\\

ನನ್ನೊಳ ದೈವೀಗುಣ
ತೋರಿತು ಈ ಜಗಕೆ
ಸ್ವೀಕರಿಸುವ ಹಾಗು ಪ್ರೀತಿಸುವ ಧನಾತ್ಮಕತೆಯ\\

ನನ್ನೊಳ ಅನಂತ ಶಕ್ತಿ
ತೋರಿತು ಈ ಜಗಕೆ
ಬದಲಾವಣೆ,ಪರಿವರ್ತನೆ ಹಾಗು ಹೊಸ ಮನ್ವಂತರವ \\

ಪ್ರೇರಣೆ: ಶ್ರೀ ಚಿನ್ಮಯ್

ಇಬ್ಬಗೆಯ ದಾರಿ

ಒಳ್ಳೆಯದೋ! ಕೆಟ್ಟದೋ! ಯಾವುದು ನಮ್ಮ ದಾರಿ?
ಒಳ್ಳೆಯದಕ್ಕೆ ಮಾತ್ರ ನಮ್ಮ ಮನಸ್ಸು ತೆರೆವುದು ಬೇಗನೆ
ನಮ್ಮಯ ಗುರಿ ಇಬ್ಬಗೆಯ ದಾರಿಯದು;
ಪ್ರಕೃತಿ ನಮ್ಮ ಮುಂದೆ ತೋರುವ ವಿರೋಧಾಭಾಸಗಳೋ !
ಇಲ್ಲ ಸವಾಲುಗಳೋ !
ಭಗವಂತನ ಹತ್ತಿರ ಕರೆದೊಯ್ಯುವ ಸಾಧನವಂತೂ ನಿಜ
ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವೆವು
ಸಾವೊಂದೇ ದಾರಿ ಅಮರತ್ವದೆಡೆಗೆ।।

ಪ್ರೇರಣೆ: ಶ್ರೀ ಅರವಿಂದ

ಮಲ್ಲಿಗೆ

ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ
ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ
ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ
ಯಾರು ಕಾರಣರು ಇದಕ್ಕೆಲ್ಲಾ?

ಹುಣ್ಣಿಮೆಯ ರಾತ್ರಿಯಲ್ಲಿ
ಸೌಂದರ್ಯವೇ ತಾನಾಗಿ ನಗುತಿಹುದು
ಮಲ್ಲಿಗೆಯ ಪರಿಮಳ ಗಾಳಿಯಲ್ಲಿ
ತೇಲಿ ಬಂದು ವಿರಹ ಉದಯಿಸಿಹುದು

ಯಾರ ಹೃದಯ ವೇದನೆಗೆ
ನೆಮ್ಮದಿಯ ದಾರಿಯಾಗಿ ಬಂದಿಹುದೋ
ಯಾರ ವಿರಹ ವೇದನೆಗೆ
ತಂಪೆರೆಯಲು ಸ್ವರ್ಗದಿಂದಿಳಿದಿಹುದೋ?

ಏಕೆ ನಗುತಿಹೆ ಮಲ್ಲಿಗೆ ಹೂವೇ ?
ಏಕೆ ಸುಗಂಧವ ಪಸರಿಸಿ ನಿಂತಿರುವೇ ?
ಯಾರ ಸ್ಪರ್ಶದ ಸುಖವೋ ನೀನು
ಶಾಂತಿ ನೆಮ್ಮದಿಯ ಅರಸಿಯೇ ನೀನು ।।

ಮುರಳಿ ಮನೋಹರ

ನೀನೇ ಸುಂದರ, ಅತಿ ಸುಂದರ, ಮನೋಹರ
ಸಾಟಿಯಾರಿಹರು ನಿನ್ನಯ ಈ ಸುಂದರ ತೋಟದಲ್ಲಿ
ರಾತ್ರಿ-ಹಗಲು ಯಾವ ಕಾಲದಲ್ಲಾದರೂ ಸರಿಯೇ!
ನನ್ನೊಳ ಹೃದಯಾಂತರಾಳದಲ್ಲಿ ನೀನೇ ನೆಲೆಸಿರುವೆ
ನೀನಿಲ್ಲದೆ ಈ ಕಂಗಳಿಗೆ ಬೆಳಕೆಲ್ಲಿ?
ಪ್ರತಿಯೊಂದೂ ಭ್ರಮೆಯೋ!ಎಲ್ಲವೂ ಬಂಜರೇ .....
ನನ್ನ ಸುತ್ತಲೂ, ನನ್ನೊಳಗೆ ಹಾಗೂ ಹೊರಗೇ ....
ನಿನ್ನ ಮುರಳಿಯ ಮಧುರಗಾನ ನವಿರೇಳಿಸುವುದು
ನಾನೋ ನೋವುಗಳ ಬದುಕಿನಲ್ಲಿ ಮುಳುಗಿರುವವನು
ಓ ದೇವನೇ! ಓ ಮನ ಮೋಹನನೇ!ಸುಂದರಾಂಗನೆ!
ಜೀವನದಲ್ಲೊಮ್ಮೆ ನಿನ್ನ ಸುಂದರ ಮೊಗವನ್ನು ನೋಡಲಾರನೇ?
ಓ ಮುರಳಿ ಮನೋಹರನೇ ಒಮ್ಮೆಯಾದರೂ ......

ನನ್ನ ಗೆಳೆಯರು


ರಾತ್ರಿ ಮನೋಹರ ಹಾಗು ಸುಂದರ
ನನ್ನ ಗೆಳೆಯರ ಮೊಗದಲ್ಲಿನ ಮಂದಹಾಸದಂತೆ;

ಮಿನುಗುವ ಆ ತಾರೆಗಳೂ ಸುಂದರ
ನನ್ನ ಗೆಳೆಯರ ಮೊಗದಲ್ಲಿನ ಮಿನುಗುವ ಕಂಗಳಂತೆ ;

ಸುಂದರಾಂಗನೂ ಈ ದಿವಾಕರನು
ನನ್ನ ಗೆಳೆಯರ ಚೈತನ್ಯದ ಆತ್ಮಗಳಂತೆ ;

ಪ್ರೇರಣೆ:”My People” by Langston Hughes

ಸೌಂದರ್ಯ

ಸೌಂದರ್ಯ ಸಂತೋಷದ ಒಸಗೆ
ಕ್ಷಣಗಳು ಜಾರುವುದೇ ವಿನಃ
ಬೇಸರವ ತರದು , ಶೂನ್ಯತೆಯ ಕಾಡದು;
ಮೌನವು ಅವರಿಸಿದರೂ ಗಾಢತೆ ಹೆಚ್ಚುವುದು ;
ಮನವೆಂಬ ನವಿಲು ಗರಿಗೆದರಿ ನರ್ತಿಸುವುದು;
ಪ್ರಶಾಂತತೆ,ನೀರವತೆ ಮಾನವನ್ನೆಲ್ಲಾ ಆವರಿಸುವುದು;
ಕಳೆದುಹೋಗುವುದು ಸಾಮಾನ್ಯ ಸಂಗತಿಯೇ ಇಲ್ಲಿ ;
ಸೌಂದರ್ಯದ ಬಲೆಗೆ ಬೀಳದವರಾರು?
ಸೌಂದರ್ಯದ ರಸ ಸಮಯದಲ್ಲಿ ಮಿಂದವರು ಕೆಲವೇ ಕೆಲವರು....

ಮತ್ತೊಮ್ಮೆ

ಓ ಕಾಲವೇ!, ಓ ದೇವರೇ!,ಓ ಜೀವನವೇ
ಯಾವುದು ನನ್ನ ಕೊನೆಯ ಮೆಟ್ಟಿಲು?
ನಿಂತಲ್ಲೇ ಕುಸಿಯುತಿಹೆನು ಗಹಗಹಸಿದ ಸ್ಥಳದಲ್ಲೇ
ಮತ್ತೇ ಆ ಸುಂದರಕ್ಷಣ ಮನದಲ್ಲಿ ಬಾರದೇ!
ಮತ್ತೊಮ್ಮೆ ,ಮತ್ತೊಮ್ಮೆ ಬಾರದೇ ,ಹೇ ವಿಧಿಯೇ ;

ರಾತ್ರಿ,ಹಗಲು,ಮಳೆ,ಗಾಳಿ
ಸಂತಸ ಕಳೆದುಹೋದ ಸಂಪತ್ತು;
ಕಾಲ ನಿಲ್ಲದೆ ತಿರುಗುತ್ತಿದೆ ,ವಸಂತ ನಗುತ್ತಿಹನು
ಕಣ್ಣರಳಿಸಿ ಬೆಳಕ ದಿಕ್ಕನ್ನೇ ನೋಡುತಿಹೆನು
ಮತ್ತೊಮ್ಮೆ ,ಮತ್ತೊಮ್ಮೆ ಬಾರದೇ ,ಹೇ ವಿಧಿಯೇ ;

ಮರೆತಕ್ಷಣ

ಸಂತಸವದುವೆ ಎಲ್ಲ ಮರೆತ ದಿನ
ನೋವು,ಕಷ್ಟ-ನಷ್ಟಗಳನೆಲ್ಲಾ ಮರೆತಕ್ಷಣ
ಪ್ರತಿಕ್ಷಣವೂ ಚಿಂತಿಸುವೆ ಮರೆಯಲೆತ್ನಿಸುವೆ
ಮನದ ಮೂಲೆಯಲ್ಲಿ ಕಸಪೊರಕೆಯಿಂದೊಟ್ಟುಮಾಡಿ ಸುಡುವೆ ;

ಬಿಸಿಲೋ! ಚಳಿಯೋ! ಮಳೆಯೋ!
ಯಾವ ನೆನಪೂ ಬಾರದೆನಗೆ ನಗುವೊಂದಬಿಟ್ಟು
ಮನದಲ್ಲಿ ಹೆಪ್ಪುಗಟ್ಟಿದೆ ಕೊಳೆಯನ್ನೆಲ್ಲಾ ಜಾಡಿಸಿಬಿಟ್ಟೆ
ಹಗುರವೆನಿಸಿತು ಮಗುವಂತಾಗಿ ನಿದ್ದೆ ಹತ್ತಿತೆನಗೆ;

ಹೃದಯ ತುಂಬಿ ಬಂದಿದೆ

ಹೃದಯ ತುಂಬಿ ಬಂದಿದೆ
ಆಕಾಶದಲ್ಲಿ ಮಳೆಬಿಲ್ಲು ಮೂಡಿದಂತೆ;
ಹೊಸ ಚಿಗುರೊಡೆದಾಗ ಏನೋ ಹರುಷ
ನಮ್ಮ ನಾವು ಅರಿತಾಗಲೂ ಅದೇನೋ ಸುಖ;
ಮುದಿತನದಲ್ಲೂ ಜೀವನಪ್ರೀತಿ ಇರೆ ಅದೇ ಸಾರ್ಥಕವು
ಸಾವಿನಲ್ಲೂ ಇರಲಿ ಸಂಯಮ;
ಮುಗ್ಧತೆ ಮನುಷ್ಯನ ತಂದೆ;
ಹಾತೊರೆಯುತ್ತಿದ್ದೇನೆ ಅದ ಸವಿಯಲು
ಬೆಸೆದುಕೊಳ್ಳ ಬಯಸಿದೆ ಪ್ರಕೃತಿಯ ತೆಕ್ಕೆಯಲಿ;
ಹೃದಯ ತುಂಬಿ ಬಂದಿದೆ
ಇಳೆಯ ಬಾಯಾರಿಕೆಗೆ ಮಳೆ ಬಂದಂತೆ;
ಹೃದಯ ತುಂಬಿದೆ ಹೊನ್ನ ಚಂದಿರನ ಬೆಳಕಂತೆ
ರಸನಿಮಿಷ ಜಾರಿದೆ ಕಾಲ ತೆವಳುತ್ತಾ ಹೊರಳಿದಂತೆ;

ನಾನೇ ಅವನು

ನಾನು ಯಾರು?
ಮನಸ್ಸಲ್ಲ ನಾನು!
ಬುದ್ಧಿಯಲ್ಲ ನಾನು!
ಅಹಂ,ಅನುಭವವಲ್ಲ ನಾನು!
ನಾನು ಅವನು!
ನಾನು ಅವನೇ!
ಅವನಿಂದ ವರವ ಪಡೆದವನು, ನಾನೇ ಅವನು!
ಸಾವಿಲ್ಲದವನು!
ಬದುಕದವನು!
ಜಾತಿ,ಕುಲಗಳಿಲ್ಲದವನು ನಾನು!
ತಂದೆ-ತಾಯಿ,ಬಂಧು-ಬಳಗ ಯಾರಿಲ್ಲದವನು ನಾನು!

ನಾನು ಅವನು!
ಅವನಿಂದ ವರವ ಪಡೆದವನು, ನಾನೇ ಅವನು!
ಭ್ರಮೆಯ ಆವರಣ ದಾಟಿ,ಆಕಾರವಿಲ್ಲದವನು ನಾನು!
ಸಂಬಂಧಗಳಿಗೆ ಭಯಾಪದದವನು!
ನಾನು ಮುಕ್ತನಾದವನು,ನಾನು ಮುಕ್ತನು!
ನಾನು ಅವನೇ!
ಅವನಿಂದ ವರವ ಪಡೆದವನು, ನಾನೇ ಅವನು!

ನಾನು ಯಾರು?

ನಾನು ಯಾರೂ ಅಲ್ಲ! ನಾನು ಯಾರು?
ನೀನು ಕೂಡ ಯಾರೋ?
ಈ ಗೊಂದಲ ಎಲ್ಲೆಡೆಯೂ ಇದೆ , ಎಲ್ಲರಲ್ಲಿಯೂ ಇದೆ!
ಆದರೂ ಎಲ್ಲರಿಗು ಎದೆಗಾರಿಕೆ, ಅಹಂ ಬಹಳವಿದೆ||

ಯಾರೂ ಪ್ರಶ್ನಿಸಿಕೊಳ್ಳುವುದಿಲ್ಲ!
ಬೇರೆಯವರನ್ನು ಪ್ರಶ್ನಿಸುವುದಿಲ್ಲ!
ಇಲ್ಲಿ ಎಲ್ಲರೂ ಪರಿಚಿತರೋ? ಅಪರಿಚಿತರೋ?
ಯಾರ ಮನದಲ್ಲೂ ಪ್ರಶ್ನೆ ಬರುವುದೇ ಇಲ್ಲ।।

ಇವೆಲ್ಲವೂ ಎಲ್ಲರಿಗೂ ಗೊತ್ತು!
ಯಾರು,ಯಾರನ್ನೂ ಪ್ರಶ್ನಿಸುವುದಿಲ್ಲ
ಆದರೆ ನಾನೇಕೆ ಪ್ರಶ್ನಿಸುತ್ತಿದೇನೆ
ನಾನು ಯಾರು? ನಾನು ಯಾರು?

ಸಣ್ಣ ದೀಪ

ಹುಡುಕು ನಿನ್ನೊಳಗೆ
ಕತ್ತಲಿಹುದು ಅದರೊಳಗೆ
ಅಪಾರ ಶಕ್ತಿ ಅಡಗಿಹುದು ಕಾಣದೆ
ಮರೆತಿರುವೆ ನಿನ್ನೊಳ ಅನಂತ ಚೈತನ್ಯ
ಕಣ್ಣು ಮುಚ್ಚು ಪ್ರಯತ್ನಿಸು ಒಳಗಣ್ಣ ತೆರೆಯಲು
ಕತ್ತಲಿಹುದೆಂದು ಎದೆಗುಂದಬೇಡ
ಪ್ರಯತ್ನಿಸು,ಪ್ರಯತ್ನಿಸು ನಿನ್ನದೇ ಇಂದಲ್ಲ ನಾಳೆ
ಗುಡಿಯೊಳು ಸಣ್ಣ ದೀಪ ಹತ್ತಿಸು ಇಂದೇ...

ಸಂತಸ ಬಡು

ಸದಾ ಸಂತಸದ ಹೊನಲು ಧರೆಗಿಳಿಯಲಿ
ಹೋರಾಟ,ಹಾರಾಟ.... ನಕಾರಾತ್ಮಕತೆ ಪಾತಾಳಕ್ಕಿಳಿಯಲಿ
ಅನುಭವಿಸು ಸುಖದ ಅನುರಣವ ಎಲ್ಲೇ ಮೀರದೆ
ಬೆನ್ನು ತಟ್ಟಿಕೊ ನಿನ್ನ ನೀನೇ ....
ಮುನ್ನುಗ್ಗು,ಹಾನಿಮಾಡದಿರು ,ಪರರ ಸಂತಸವ
ನಿಯಂತ್ರಿಸಿಕೊ,ಸಹಿಸಿಕೋ .....
ಇಲ್ಲಿ ಶಾಶ್ವತವಾದುದು ಯಾವುದೂ ಇಲ್ಲ ತಿಳಿ
ಕಾಲ ನಗುವುದು ನಿನ್ನ ತೀರಕೆ ಎಳೆದೊಯ್ಯುವುದು
ನೀನು ಕೈಗೊಂಬೆ ತಿಳಿ
ಸಮಯದ ಪಾತ್ರೆ ಕರಗುತಿಹುದು ಎಚ್ಛೆತ್ತುಕೊ...
ಸಂತಸ ಬಡು ಅನುದಿನ .....

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...