ಭೀಭತ್ಸವೆಂದರೆ ಇದೇನೇ.....

ಭೀಭತ್ಸವೆಂದರೆ ಇದೇನೇ.....
ಮುಗ್ಧ ಮಕ್ಕಳ ಹತ್ಯಾಕಾಂಡ ಸಮರ್ಥನಿಯವೇ?
ವಾತ್ಸಲ್ಯ,ಪ್ರೀತಿ,ಕರುಣೆಗೆ ಯಾವುದೇ ಧರ್ಮದ ಸೋಂಕಿಲ್ಲ
ಪ್ರಕೃತಿಯ ಶುದ್ಧ ಪ್ರಮಾಣಗಳೆಂದರೆ ಅವೇನೇ....

ಮೂರ್ಖತನಕ್ಕೆ,ಹೇಡಿತನಕ್ಕೆ,ಗುಂಡಿನ ಮೊರೆತಕ್ಕೆ
ಮುಗ್ಧ ಅಮಾಯಕತೆ ಬಲಿಯಾಗಿರಬಹುದು
ಭಯೋತ್ಪಾದನೆ ಕ್ಷಣಿಕ ಗೆಲುವಿನ ನಗೆ ಬೀರಿರಬಹುದು
ಅದು ನಿಜವಾದ ಗೆಲುವಲ್ಲ,ಶಾಶ್ವತವೂ ಅಲ್ಲ;

ಯಾವುದೇ ಧರ್ಮವಿರಲಿ ಮಾನವೀಯತೆಯೇ ಬುನಾದಿ
ಅನಾದಿಯಿಂದಲೂ ದಯವೇ ಧರ್ಮದ ಮೂಲ
ರಕ್ತ ಪೀಪಾಸುಗಳಿಗೆ,ಸ್ವಾರ್ಥಿಗಳಿಗೆ ಕಾಣಿಸದು
ರಕ್ತ ಹರಿದರೆ,ಭಯ ತೋರಿದರೆ ಲೋಕ ತನ್ನದಾಗದು;

ಹಿಂದೂಧರ್ಮ ಬಿಕ್ಕಿತ್ತಿದೆ;
ಇಸ್ಲಾಂ ಧರ್ಮ ಕಣ್ಣೀರಿಡುತ್ತಿದೆ;
ಕ್ರಿಶ್ಚಿಯನ್ ಧರ್ಮ ನರಳುತ್ತಿದೆ;
ಮಾನವೀಯತೆಯ ಮೇಲೆ ಬಿದ್ದ ಕರಿನೆರಳಿಗೆ
ಅಮಾಯಕ ಮಕ್ಕಳ ಮಾರಣಹೋಮಕ್ಕೆ.......

ಮನದ ದ್ವಂದ್ವ

ಏನು ಹೇಳಬೇಕೋ ತೋಚುತ್ತಿಲ್ಲ
ಹೌದೆನ್ನಲೋ? ಇಲ್ಲವೆನ್ನಲೋ?
ಮನದ ದ್ವಂದ್ವ ಕದನವಾಡುತ್ತಿದೆ ಹಿಂಸಿಸುತ್ತಾ
ನನ್ನ ಕಷ್ಟ ನನಗೆ
ಮನದ ಹಿಂಸೆ ದಾರಿತೋರದೆ ಮರುಗಿದೆ
ಯಾವುದ ಅಪ್ಪಲಿ;
ಯಾವುದ ತೊರೆಯಲಿ;
ಕಾಲವೇ ಹೇಳಬೇಕೆಂದು ಬಯಸಲೇ?
ಒತ್ತಡ ಮನದಲ್ಲಿ ನೂರು
ಬತ್ತದ ಭರವಸೆಗೆ ಹೊಸವರಸೆ
ಯಾವುದು ಆರಂಭವೋ?
ಯಾವುದು ಕೊನೆಯೋ?
ಚಿಂತಿಸುವ ಮನಕ್ಕೆ ಎಲ್ಲವೂ ಶೂನ್ಯವೇ!
ಒಂದು ಎರಡಾಗಲಿ;
ನೂರು ಇನ್ನೂರಾಗಲಿ;
ನನ್ನದೇ ದಾರಿಯಲ್ಲಿ ನಡೆವೆ
ಚಿಂತೆಯ ದ್ವಂದ್ವ ಹೊಡೆದೋಡಿಸುವೆ||

ಮನದ ಕದನ

ಭೂಮಿಯ ಮೇಲೆ ಒಂದೊಂದೇ ಹೆಜ್ಜೆ ಇಡುತ್ತಿದ್ದೇನೆ
ನಡೆದಷ್ಟೂ ದೂರ ಸವೆಯದ ಹಾದಿ;
ಶೂನ್ಯ ತುಂಬಿದ ಮನ;
ತಂತಿ ಹರಿದ ವೀಣೆ;
ಮುರಿದ ಎಲುಬುಗಳ ಗೂಡು;
ದೃಷ್ಟಿಹೀನ ಕಣ್ಣುಗಳು;
ತಪ್ಪುದಾರಿಯಲ್ಲೇ ನಡೆದು,ಸರಿದಾರಿಯ ಇಷ್ಟಪಡುವವನು;
ರಕ್ತನೆರೆತ ಮಣ್ಣು;
ಈ ಮಣ್ಣಿಗೋ ಇಲ್ಲ ಆ ಮನಕ್ಕೋ ದಾಹ ಇನ್ನೆಷ್ಟೋ?
ಸ್ವಾರ್ಥಕ್ಕೋ ಇಲ್ಲ ಬಯಕೆಗೋ?
ಯುದ್ಧ ಭೂಮಿಯಲ್ಲಿ ಸಾಲು ಸಾಲು ಪ್ರಾಣಹಾರಿದ ದೇಹಗಳು;
ಬಿಕ್ಕುತ್ತಿರುವ "ದೇವನಾಂಪ್ರಿಯ ಅಶೋಕ"
ಕೈಯಲ್ಲಿ ನೆತ್ತರು ಸುರಿಸುತ್ತಿರುವ ಕತ್ತಿ-ಬಯಸಿದೆ ಮತ್ತಷ್ಟು ರುಧಿರ;
ರೋಧನ,ಆಕ್ರಂಧನ,ನೋವು,ಹಿಂಸೆ,ಹತಾಶೆ......
ಮತ್ತೆ ಬಾರದ ಜೀವಗಳು-ಸಾಮ್ರಾಜ್ಯದಾಹಿಯ ನರ್ತನ;
ಗಳಿಸಿದ್ದೇ ಗಳಿಸಿದ್ದು-ನಡೆದದ್ದೇ ನಡೆದದ್ದು
ಸಾವು ಅಪ್ಪಿದ ಹೆಣಗಳ ಮೇಲೆ,ಮಾನವೀಯತೆಯ ಸಮ್ರಾಜ್ಯದ ಮೇಲೆ;
ಬೊಬ್ಬೆ ಇಡು ಇಲ್ಲ ಗಹಗಹಸಿ ನಗು,
ಎಲ್ಲವೂ ಶೂನ್ಯ ರಣರಂಗದಲ್ಲಿ;
ಎದುರಿಗೆ ಬರುವವರೆಲ್ಲರೂ ಶತೃಗಳೇ ರುಂಡ ಉರುಳಲೇ ಬೇಕು
ಒಂದೋ ಎದುರಿನವರದು ಇಲ್ಲ ನನ್ನದು.....
ಶಾಂತಿ ಮಂತ್ರ ಪಠಿಸುವ ಬುದ್ದನೂ ಸಂತೈಸಲಾರ
ಶರಣು,ಶರಣು ಹೊಡೆದರೂ ಮರುಗಲಾರ
ಬೋಧಿವೃಕ್ಷದ ಕೆಳಗೆ ಧ್ಯಾನ
ಮುಂದುವರೆಯಲಿ ಮನದ ಕದನ||

ಗಳಿಕೆ ಕ್ಷಣಿಕ

ಇಂದು ಏನಾಗುವುದೋ ಆಗಲಿ
ಎಲ್ಲಕ್ಕೂ ಸಿದ್ಧವಾಗೇ ಇದ್ದೇನೆ
"ಮಾಡು ಇಲ್ಲವೇ ಮಡಿ" ಎನ್ನುವುದಿಲ್ಲ
ಮಾಡುವ ಇರಾದೆ ಇದೆಯೆ ಹೊರತು
ಮಡಿಯುವ ಚಿಂತೆಯಿಲ್ಲ
ಮಾಡೇ ಮಡಿಯುವ
ನೋವು ಅನುಭವಿಸುವುದಕ್ಕೆ ಸಿದ್ಧ
ಏನನ್ನಾದರೂ ಗಳಿಸಲು ಸ್ವಲ್ಪ ಏನನ್ನಾದರೂ ಕಳೆದುಕೊಳ್ಳಲೂ ಸಿದ್ಧ
ಕಳೆದುಕೊಳ್ಳುವುದರಲ್ಲಿಯೇ ಸುಖ ಅಡಗಿದೆ ಗಳಿಸುವುದರಲಿಲ್ಲ||

ಮನದ ತುಳಿತ

ತುಳಿತದ ಅನುಭವ ಪ್ರತಿದಿನ
ಮೇಲೇಳಲಾರದ ಚೈತನ್ಯ ಮುರುಟಿದೆ
"ಹೊರಟು ಹೋಗು" ಕೂಗಿಕೊಳ್ಳುವೆ ಕತ್ತಲೆಯ ಕೋಣೆಯೊಳಗೆ
ಕಾಣದ ಕತ್ತಲಲ್ಲಿ ಯಾರೋ ಕತ್ತು ಹಿಸುಕಿದ ಅನುಭವ
ಪಂಜರದ ಗಿಳಿಗೆ ರೆಕ್ಕೆ ಕತ್ತರಿಸಿದ ಹಾಗೆ
ಮೂಕ ರೋಧನ ಮನೆ ಮಾಡಿದೆ ಎದೆಯ ಗೂಡಿನೊಳಗೆ
ಯಾರು ಸಲಹುವರು ನನ್ನ?
ಯಾರು ಸಲಹುವರು ನನ್ನ?
ಮೂಕವೇಧನೆಗೆ ಸಾಂತ್ವನದ ಭ್ರಮೆ!
ಯಾರೋ ಹತ್ತಿರ ಬರುವರೆಂದು,ಸಲಹುವರೆಂದು....
ಮನದಲ್ಲಿ ಕಾಣದ ಭರವಸೆ ಎನ್ನಲೋ?
ಇಲ್ಲ ಕನವರಿಕೆ ಎನ್ನಲೋ?
ಕತ್ತಲ ನೆರಳನ್ನೇ ನಿಜವೆಂದು ಭ್ರಮಿಸಿದೆನೇನೋ?
ಬದುಕುವ ತುಡಿತ ಇದೆ,ಇನ್ನೂ ಇದೆ.....
ನೋವು ಸವೆಯುತ್ತಿದೆ ಕಾಲನ ಮಹಿಮೆಯಿಂದೆ
ಭಯವ ನೆನೆದರೆ ನೋವು ಅಪ್ಪುವುದು
ಹೋಗು ಹೋಗೆಂದರೂ ಬರಸೆಳೆವುದು ಇನ್ನೂ......

ಏಕಾಂತ

ಮರದ ಕೆಳಗೆ ಏಕಾಂತ ,ಒಂಟಿತನದ ಭಾವ
ದೂರದಲ್ಲಿ ಹಾರಿಬರುವ ಕಪ್ಪು ಮೋಡಗಳ ನೋಟ
ಅಳುಕುವ ಮನ,ರೋಧಿಸುವ ಭಾವ
ಏನನ್ನೋ ಕಳೆದುಕೊಂಡ ಶೂನ್ಯಭಾವ-ವೈರಾಗ್ಯವೆನ್ನಲೇ?
ಕತ್ತುಹಿಸುಕುವ ಚಳಿ
ಬೆಚ್ಚಿಬೀಳಿಸುವ ಗುಡುಗಿನ ಆರ್ಭಟ
ಕೊಚ್ಚಿಹೋಗುವ ಮಳೆಯಲ್ಲಿ ಸಿಲುಕಿದೆ ಜೀವ
ಸಾವು,ಬದುಕು ಮಗ್ಗುಲು ಮಲಗಿದೆ ಭರವಸೆ
ಕೊಚ್ಚಿ ಹೋಗಲಿ ನೋವುಗಳೆಲ್ಲಾ ಮಳೆಯ ನರ್ತನದಲ್ಲಿ
ಸೇರುವ ತವಕ ಹೆಚ್ಚಾಗಿದೆ ಹೊಸತನದ ಭಾವ ಅಳುಕುತ್ತಲೇ....

ಸುಂದರ ಜೀವನ

ಬಣ್ಣ ನೋಡಿ ಮರುಳಾಗಬೇಡ
ದ್ವೇಷಕ್ಕಿಂತ ಪ್ರೀತಿಯೇ ಚಂದ
ಇಂದು ಬದುಕು, ನಾಳೆ ಸಾವು
ತಲೆ ಎತ್ತಿ ನಡೆ ತುಟಿಯಂಚಲಿ ನಗುವಿನೊಡನೆ
ಅವಕಾಶಗಳ ಕೈಚಲ್ಲಬೇಡ
ಜೀವನ ತುಂಬಾ ಚಿಕ್ಕದು ಹಾಗು ಸುಂದರ||

ಬೆಂಕಿ

ಕೆಂಪು ಕೆನ್ನಾಲಿಗೆ, ಸೆಳೆಯುವ ಬಿಸಿಯಾದ ಕೈಗಳು
ಧಗಧಗಿಸುವುದೋ ಇಲ್ಲ ನರಳುವುದೋ ಹಸಿವೆಯಿಂದ
ಆರಂಭ ಚಿಕ್ಕದಾದರೂ ಅಂತ್ಯ ಅನಂತ...
ಎಲ್ಲವನ್ನೂ ತೆಕ್ಕೆಗೆ ಹಾಕಿಕೊಳ್ಳುವ ತರಾತುರಿ
ಕಷ್ಟ ಹಾಗು ಕಠಿಣ ತೆರೆದ ಸಾವಿನ ಕದ ಮುಚ್ಚಲು
ಹಸಿವು ಹೆಚ್ಚಾದರೆ ಆಹುತಿ ಅನಿವಾರ್ಯವೆಂಬ ಸಂಕೇತ||

ಸುಡುವ ಪ್ರೀತಿ

ಪ್ರೀತಿ ಸುಡುವ ಮೇಣದ ದೀಪ
ನಿಭಾಯಿಸುವುದು ಸುಲಭವಲ್ಲ
ಸುಡುತ್ತೆ, ಆದರೂ ಅದರಲ್ಲೇನೋ ಹಿತವಿದೆ
ಜೀವನವೆನ್ನುವ ಉತ್ಸವಕ್ಕೆ ಅರ್ಥ ತುಂಬಿದೆ||

ಅದು ಸೂರ್ಯಾಸ್ತ,
ಸುಡುವ,ಸತಾಯಿಸುವ ರಸಿಕತೆ
ಅದೊಂದು ಪ್ರಣಯ ಗೀತೆ
ಕೇಳಿದರೆ ಕುಣಿಯುವಂತೆ ಪ್ರೇರೇಪಿಸುತ್ತದೆ||

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...