Monday, January 26, 2015

ಭರವಸೆಯ ಕಿರಣ

ಎಲ್ಲವೂ ಹೋದ ಮೇಲೆ
ನೆನಪ ನೋವ ಅರೆದ ಮೇಲೆ
ಉಳಿವುದೇನಿದೆ?
ಅವನು ಅವಳು
ಅವಳು ಅವನು
ಕಾರಣಗಳು ನೂರಿರಲಿ
ಎಲ್ಲವೂ ಮುಗಿದ ಮೇಲೆ
ಹೇಳುವುದೇನಿದೆ?
ಕಾರಿರುಳು ತುಂಬಿದ ಮನದಲ್ಲಿ
ಬಯಕೆ ಚಿಗುರು ಹೊಮ್ಮಲೆಂದು
ಭರವಸೆಯ ಕಿರಣ ಬಿತ್ತಬಹುದೆ?

Saturday, January 24, 2015

ಏಕೆ ರಾಧೆ!ಮೌನಿಯಾದೆ?

ಏಕೆ ರಾಧೆ!
ಮೌನಿಯಾದೆ?
ಏಕೆ ಹೀಗೆ
ಏಕಾಂಗಿಯಾದೆ?
ಎಲ್ಲಿ ಹೋದೆ
ಏಕೆ ಮರೆಯಾದೆ?
ಕೃಷ್ಣನ ಜೀವವಾದೆ
ಕೊಳಲ ದನಿಯಾದೆ
ಬೃಂದಾವನದ ಮಾತಾದೆ
ಪ್ರೀತಿಯ ಪ್ರತಿಮೆಯಾದೆ
ತ್ಯಾಗದ ಧ್ಯೋತಕವಾದೆ
ಏಕೆ ರಾಧೇ
ಮೌನಿಯಾದೆ?

ವೈರಾಗ್ಯ ಘನನಿಧಿ

ವಿರಾಗಿ ಈತ
ಸುಂದರ,ಸದೃಡ
ಅಜಾನುಬಾಹು
ಮಂದಸ್ಮಿತ
ಸುಂದರ ಮನ್ಮಥ ರೂಪ
ಪರಮಾನಂದ ಸ್ವರೂಪ
ದಿಗಂತವೇ ಎಲ್ಲೆ
ಎಲ್ಲವನ್ನೂ ತೊರೆದ
ವೈರಾಗ್ಯ ಘನನಿಧಿ
ಮಹಾಮೂರ್ತಿ
ಗೊಮ್ಮಟಮೂರ್ತಿ||

Friday, January 9, 2015

ಹೊಸ ವರುಷದ ಆಶಯ

ಹೊಸ ವರುಷ ಈ ಲೋಕಕ್ಕೆ
ಹರುಷವಿದೆ ಮನದಲ್ಲಿ
ಏನನ್ನು ನಿರೀಕ್ಷಿಸೋಣ ಹೇಳಿ
ನೂರೆಂಟು ನಿರೀಕ್ಷೆಗಳು ಹೊಸ ವರುಷಕ್ಕೆ
ಹಳೆಯ ವರುಷದ ನಿರೀಕ್ಷೆಗಳೇ ಗಹಗಹಸಿ ನಗುತ್ತಿದೆ,
ನೋಡಿ ಕುಚೋಧ್ಯ ಮಾಡುತ್ತಿವೆ ಹೆಳವನೆಂದು.
ಸಾಧಿಸಿದ್ದಾದರೂ ಏನು? ಬರೀ ಶೂನ್ಯ.....
ಕನಸ ಕಾಣುವುದರಲ್ಲೇ ಕಾಲ ಕಳೆದಿದ್ದೇವೆ
ಇನ್ನು ನನಸಾಗುವ ಮಾರು ದೂರವೇ ಸರಿ;
ವರುಷಗಳುರುಳಲಿ ಬಿಡಿ
ನಾವು ಬದಲಾಗುತ್ತೇವೋ? ಇಲ್ಲವೋ?
ಕಾಲ ಬದಲಾಗುತ್ತಿದೆ
ಮನೆಯ ಕ್ಯಾಲೆಂಡರ್ ಬದಲಾಗುತ್ತಿದೆ
ಹೊಸತನಕ್ಕೆ ಹರುಷಪಡೋಣ;
ಹೊಸತನ ಸ್ವಾಗತಿಸೋಣ;
ನಾವು ಕಾಲನ ಜೊತೆ ನಡೆಯಲಾಗದಿದ್ದರೂ
ಸಾಧ್ಯವಾದಷ್ಟು ತೆವಳೋಣ
ಎಷ್ಟಾದರೂ ಸವೆಸುವ ದಾರಿ ನಮಗಾಗಿಯೇ ಇದೆಯಲ್ಲವೇ!
ಏನೇ ಆದರೂ ಆಶಿಸೋಣ
ನಿಂತ ನೀರಾಗಿರದೆ, ನಿಲ್ಲದೆ ತೆವಳುತ್ತಾ ಬದಲಾವಣೆಗೆ ಮೈ ಒಡ್ಡುವ;
ಹೊಸತನದ ಹಿತಗಾಳಿ ಮನವ ಸಂತೈಸಲು ಅವಕಾಶ ನೀಡೋಣ;
ಹೊಸ ವರುಷ ಬರಲಿ
ಹರುಷ ತರಲಿ;

Thursday, January 1, 2015

ಮಾತು ಗೌಣ

ನಾವು ಎತ್ತ ಸಾಗುತ್ತಿದ್ದೇವೋ ಸ್ಪಷ್ಟತೆಯಿಲ್ಲ
ಸ್ವಾತಂತ್ರದಿಂದ ಗುಲಾಮಗಿರಿಯತ್ತಲೋ?
ಅನುಮಾನವಿದೆ,ಇಂದಲ್ಲದಿದ್ದರೂ ಮುಂದೊಂದು ದಿನ....
ನಮ್ಮದೇ ಅಸ್ಥಿತ್ವಕ್ಕೆ ಹೋರಾಡುತ್ತಿದ್ದೇವೆ
ಎಲ್ಲರೂ ನಮ್ಮವರೇ
ಮೈ ಬಣ್ಣ,ಹರಿಯುತ್ತಿರುವ ರಕ್ತ,ಉಸಿರಾಡುವ ಗಾಳಿ
ನಮ್ಮವರೆಂದುಕೊಂಡೆವು
ಆದರೇನಾಯಿತು?
ನಮ್ಮವರು ನಮಗೇ ಶತೃಗಳು
ನಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುತ್ತಾರೆ;
ನಮ್ಮ ಮಾತಿಗೆ ಕಿಮ್ಮತಿಲ್ಲ;
ನಮ್ಮ ಕೈಗಳನ್ನೇ ಕಟ್ಟಿಹಾಕಿದ್ದಾರೆ;
ಕಣ್ಣುಗಳನ್ನೂ ಮುಚ್ಚಿದ್ದಾರೆ;
ಯಾವ ಬಟ್ಟೆಯಿಂದಲೋ?
ಮೃದುವಾಗಿದೆಯಾದರೂ ಕಠೋರವಾಗಿದೆ;
ಯಾರ ಕೈವಶವಾಗಿಹೆವೋ?
ಮಾತು ಗೌಣ;ಮೂಕ ರೋಧನ;
ಅಸಹಾಯಕರಾಗಿದ್ದೇವೆ;
ಮನದ ನೋವು ನಿಶಬ್ದವಾಗಿದೆ.

ಆಯ್ಕೆಯ ನೆರಳು

  ಆಯ್ಕೆಯೇ ಬದುಕಿನಲಿ ತರುವುದು ವ್ಯತ್ಯಾಸ , ಜೀವನದ ಹಾದಿಯಾಗುವುದು ಅದೊಂದು ರೂಪಕ . ಗೊಂದಲ , ಕವಲು ದಾರಿಯಲ್ಲಿರುವುದು ಆಯ್ಕೆ , ನಾವು ಏನೋ !, ಆಯ್ಕೆ...