ಮುಕ್ತ ಚೇತನ

ನಾನೆಂದರೆ ವರ್ಣನೆಗೆ ನಿಲುಕದವನು
ನಗು,ನೀಲಾಂಬರ ದಾಚೆ
ವಿವರಣೆಗೆ ಸಿಲುಕದ ಮುಕ್ತ ಚೇತನ,
ಮುಖವಾಡಗಳ ಹಿಂದೆ ಬಚ್ಚಿಡಲಾಗದ ಅನಿಕೇತನ||

ನಾನು ಭಾವೋದ್ದೀಪ್ತ ಪ್ರೇಮಿ
ಕವಿಗಿಂತ ಮಿಗಿಲು
ಅನುಭವದಲ್ಲಿ ಮಾಗಿದ್ದೇನೆ
ಅಕ್ಷರಕ್ಕಿಳಿಸುವ ಮೊದಲು||

ನಾನೇ ಎಲ್ಲವೂ
ಕೊನೆ ಅಣುವೆಂದರೆ ನಾನೇ
ವಿನಮ್ರತೆಯ ಕರುಣೆ
ಕನಸುಗಳ ಕದ್ದೊಯ್ಯುವವನು ನಾನೇ||

ಪ್ರಕೃತಿಯ ಸಣ್ಣ ಸಣ್ಣ ರಹಸ್ಯ
ಅರಿಯುವ ಪ್ರಯತ್ನ ನನ್ನದು
ಸಂಶೋಧನೆಯಲ್ಲಿ ಪ್ರಗತಿ
ಕಾಣುವ,ತಲುಪುವ ತವಕ ನನ್ನದು||

ತಿಳಿದಿದೆ ಪ್ರತಿಭೆ ಕಾಣಬಹುದು
ಕೆಲವೇ ಪದಗಳಿಂದ,ಕಾಯಕಗಳಿಂದ
ಹಲವು ಬಾರಿ ಈ ವಿದ್ವಾಂಸ,ಪಾಮರರು
ಕಂಡರೆ ಅಸಂಬದ್ದವೆನಿಸುವುದು||

ಹೊಸತನವಿದೆ ಮನದಲ್ಲಿ
ಕಲ್ಪನೆ ಮನದಲ್ಲಿ ನರಳುತ್ತಿದೆ
ಈ ಪ್ರಪಂಚವೇ ಹೀಗೆ, ಹುಡುಕಾಟದಲ್ಲಿ
ನಮ್ಮೊಳಗಿನ ಮಗುವನ್ನು ಕಳೆದುಕೊಳ್ಳುತ್ತೇವೆ||

ಕಲೆ ಮನಸೆಳವುದು
ಭಾವನೆ ನಮ್ಮನಾಳುವುದು
ಕಷ್ಟದಲ್ಲಿ ಜೀವಿಸುವವರನ್ನು,
ಬುದ್ದಿ ಇದ್ದೂ ಒದ್ದಾಡುವವರನ್ನು
ಕತ್ತೆಗಳೆಂದೇ ಹೇಳಲಾಗುವುದು||

ನನ್ನ ಸ್ಪರ್ದೆ ಯಾರೊಂದಿಗೂ ಇಲ್ಲ
ಮತ್ತೊಂದು ಆಟ ಆಡುವುದೊಂದೇ ಗುರಿ;
ಆದರೆ ಪ್ರತಿಭೆ ಎನ್ನುವ ಅನನ್ಯತೆ
ನಮಗೆ ಬೇರೆ ದಾರಿಯನ್ನೇ ತೋರುವುದು||

ನಾನು ಕಂಡು ಕೊಳ್ಳುತ್ತಿದ್ದೇನೆ ನನ್ನಲ್ಲಿ
ಕನ್ನಡಿ,ಕುಂಟು ನೆಪ ಬೇಕಿಲ್ಲ;
ನನ್ನೊಳಗಿನ ಚೈತನ್ಯಕ್ಕೆ ನೀರೆರೆದರೆ
ಅದೇ ನನ್ನನ್ನು ದಿಗಂತಕ್ಕೇರಿಸುವುದೆಂದು||

ಪ್ರೇರಣೆ:'I am More" by Dave Wood.

ನನ್ನ ಆವರಿಸಿಹ ಕನಸುಗಳಾವುದು?

ಕ್ಷಣ, ನಿಮಿಷ;
ಮಮ, ನಿಮಿತ್ತ;
ಆಲೋಚನೆ, ಲೋಚನ
ಭಯದ ಹೃದಯ,
ಬಯಸುವ ಹೃದಯಗಳ
ಹಿಂದೆ ಬಿದ್ದಿರುವ ವಿಲಾಸಿ;
ವಿರಹದಿ ಸಾಯುವ ವಿರಹಿ;
ಕನಸುಗಳ ಕದ್ದೊಯ್ಯುವ ಕಳ್ಳ;
ಸಂತೋಷದ ಒಸಗೆ ನೀಡದ ನೀಚ ಪ್ರೇಮಿ;
ಯಾರು ನಾನು?
ನನ್ನ ಆವರಿಸಿಹ ಕನಸುಗಳಾವುದು?

ನನ್ನ ಬಳಸಿಹ ಮೋಹ ಅದಾವುದು?

ಪ್ರೀತಿಯಲ್ಲಿ ದೇವದಾಸ;
ಕಾವ್ಯರಸ;
ಕಾವ್ಯದರಸ;
ಶೃಂಗಾರ ವಿಲಾಸ;
ಬರವಣಿಗೆಗೆ ಮೊದಲು
ಅನುಭವ ಕೈ ಹಿಡಿದಾಗ ಮನೋಲ್ಲಾಸ!
ಮನಸ್ಸಿಗೆ ಮಹೋಲ್ಲಾಸ,ಉತ್ಸಾಹ!
ಯಾರು ನಾನು?
ನನ್ನ ಬಳಸಿಹ ಮೋಹ ಅದಾವುದು?

ಎಲ್ಲಕ್ಕಿಂತ ಮಿಗಿಲು ಯಾವುದು?

ಮಾತಿಗಿಂತ ಮುಗುಳ್ನಗು,
ನಾಚಿಸುವ ನೀಲಿ ಕಂಗಳು,
ಉತ್ತರಿಸುವ ನೀಲಿ ನಭ;
ಬಿಕ್ಕಳಿಸುವ ಕರಿ ಮೋಡ;
ಮುಖವಾಡದ ಹಿಂದಿನ ಸತ್ಯಗಳು;
ಸತ್ಯವೆನಿಸುವ ಸುಳ್ಳುಗಳು;
ಸೌಂದರ್ಯದ ಹಿಂದಿರುವ ಕರಾಳತೆ;
ಸ್ವಾರ್ಥದ ಮುಖವಾಡ ತೊಟ್ಟ ಮುಗ್ಧತೆ;

ಯಾರ ತೊಳಲಾಟದ ಶಾಪವೋ?

ಸತ್ಯ ಹೇಳಲೇಬೇಕಾಗಿದೆ
ನಿನ್ನ ಅವಶ್ಯಕತೆ ನನಗಿದೆಯೆಂದು
ನಿನ್ನೊಂದಿಗಿನ ಮಾತುಗಳ,
ರಾತ್ರಿಗಳ ಕಳೆದುಕೊಂಡಿದ್ದೇನೆ
ಹಂಚಿಕೊಂಡ ದುಃಖ,ನಗು ಎಲ್ಲಿ ಹೋಯಿತೋ?||

ನಮ್ಮೊಳಡಗಿರುವ ಅನಂತ ಚೈತನ್ಯ
ಭೂಮಿಯ ಒಂದು ತುದಿಯಿಂದ
ಮತ್ತೊಂದು ತುದಿಗೆ ಹೊರಳುವುದೇ?
ನಮ್ಮ ಇರುವಿಕೆಯ ಅನುಭವ ನಮಗಾಗುವುದೇ?
ಏಕೆ ಬಂದೆವೋ? ಈ ಬದುಕ ಗುರಿ ಏನೋ?||

ಒಂದೇ ನಾನು,ನೀನು
ಆದರೂ ತುದಿಗಾಲಲ್ಲಿ ನಿಂತಿದ್ದೇವೆ
ಹೊಡೆದಾಡಲು,ಬೈದಾಡಲು
ಮಮತೆಯ ಮನಸುಗಳ ದ್ವೇಷ
ಯಾರ ತೊಳಲಾಟದ ಶಾಪವೋ?||

ಅರ್ಥವಾಗಿದೆ ಮನಸ್ಸಿನ ತೊಳಲಾಟ
ಸಂತೈಸದ ಈ ಮನಸ್ಸಿಗೆ ನೋವಿದೆ
ನನ್ನೊಳಗಿನ ನೋವುಗಳು ನಿನ್ನ ಮನದಲ್ಲಿ
ಆತಂಕ ಹೆಚ್ಚಿಸಬಹುದೆಂಬ ಭಯ ಮನದಲ್ಲಿ
ಮೂಡಿ ಮಾತು ಬಾರದಾಗಿದೆಯೇನೋ?||

ಎಲ್ಲಕ್ಕೂ ಕೊನೆಯಿದೆಯಲ್ಲವೇ?
ಇತಿಹಾಸದಲ್ಲಿ ಮೆರೆದವರೆಲ್ಲರೂ
ಏನಾದರೋ ಅಚ್ಚಳಿಯದೆ ಉಳಿದಿದೆ
ಎಲ್ಲವೂ ಬದಲಾಗಲಿದೆ
ನನ್ನೊಳಗಿನ ನೋವುಗಳಿಗೆ ಸಾವು ಬರಲಿದೆ
ಅದುಮಿಟ್ಟುಕೊಂಡಿರುವ ಮಾತುಗಳೆಲ್ಲಾ ಮಧುರವಾಗಿ
ಚಿಗುರೊಡೆಯುವುದೇ ಮತ್ತೆ?||

ನನ್ನೊಡನೆಯೇ ಇರು

ನನ್ನೊಡನೆಯೇ ಇರು,ಬಿಗಿಯಾಗಿ ನನ್ನ ಕೈಗಳ ಹಿಡಿ
ಅವಶ್ಯಕತೆ ಇದೆ ಇಲ್ಲೇ ಬಳಿಯಲ್ಲೇ ನಿಲ್ಲು,
ಮೋಡಗಳು ಕಣ್ಣೀರಿಡುವವರೆಗೂ,
ಈಗೇಕೋ ನೋವೇ ಇಷ್ಟವಾಗುತ್ತಿದೆ;
ನೀ ಜೊತೆ ಇರಲು ಎಲ್ಲವನ್ನೂ ಅನುಭವಿಸುವೆ ಸಂತಸದಿ
ಆದರೆ ಕತ್ತಲೆಂದರೆ ಭಯವೆನಗೆ,ನನ್ನೊಡನೆಯೇ ಇರು||

ನನ್ನೊಡನೆಯೇ ಇರು,ನೀನೊಬ್ಬನೇ ನನಗೆ ಬೇಕಾದವನು
ನಿನ್ನ ಉಸಿರು,ನಿನ್ನ ಗೆಳೆತನ, ಮನವ ಮುದಗೊಳಿಸುವುದು
ಏಕಾಂಗಿತನದ ಧ್ಯೋತಕವಾಗಿರುವ ಈ ಕೋಣೆಯ ಸುಟ್ಟುಬಿಡೋಣ
ಒಡೆದ ಹೃದಯವ ಗೆದ್ದವನು ನೀನು,ನನ್ನೊಡನೆಯೇ ಇರು||

ನನ್ನೊಡನೆಯೇ ಇರು,ಅವಶ್ಯಕತೆ ಇದೆ ಇಲ್ಲೇ ಬಳಿಯಲ್ಲೇ ನಿಲ್ಲು
ನನ್ನ ಕೈಹಿಡಿ,ಮೋಡಗಳು ಕಣ್ಣೀರಿಡುವವರೆಗೂ
ಆದರೆ ಕತ್ತಲೆಂದರೆ ಭಯವೆನಗೆ,
ನೀ ಜೊತೆ ಇರಲು ಏನೋ ಒಂದು ರೀತಿಯ ಸಮಾಧಾನ
ಈ ಒಂದು ರಾತ್ರಿ ಕನಿಕರಿಸು,ನನ್ನೊಡನೆಯೇ ಇರು||

ನನ್ನೊಡನೆಯೇ ಇರು
ಈ ಜೀವನ ಹಿಂದೆ ಹೀಗಿರಲಿಲ್ಲ
ನಿನ್ನ ಭೇಟಿಯಾದೆ, ಎಲ್ಲಾ ಕಟ್ಟಳೆಗಳ ಮುರಿದೆ;
ಬಿಡುಗಡೆ ದೊರೆಯಿತು,ಬೆಳಕ ಕಂಡೆ
ಕನಿಕರಿಸು, ಈ ರಾತ್ರಿ ನನ್ನೊಡನೆಯೇ ಇರು||

ನನ್ನೊಡನೆಯೇ ಇರು, ಸಮಯ ಕ್ಷೀಣಿಸುತ್ತಿದೆ
ದೂರ ಹೋಗದಿರು,ಬಾಗಿಲು ತೆರೆದಿದೆಯೆಂದು
ದೂರ ಹೋಗದಿರು, ಹಿಂಸೆ ಇವನಿಂದ ಎಂದು
ಜೊತೆಯೆಲ್ಲೇ ಇರು ಕಣ್ಣ ಮುಂದೆ, ಕಣ್ಣು ಮುಚ್ಚುವವರೆಗೂ
ನಿನ್ನ ನೋಡುತ್ತಾ ಕಣ್ಣು ಮುಚ್ಚಿದರೆ ನಿನ್ನ ಬಿಂಬ ಮಾಸದೆ
ಮನದಲ್ಲಿ ಅಚ್ಚೊತ್ತುವುದು ಮತ್ತೆ ಏಳುವವರೆಗೂ....

ಪ್ರೇರಣೆ:'Stay with me" by AiyaH De Torres

ಸಣ್ಣ ಸಣ್ಣ ಹಾರೈಕೆಗಳು


ಸಣ್ಣ ಹಾರೈಕೆಗಳು ಮುದ್ದಾದ ಸುಗಂಧ ಸೂಸುವ ಹೂವಿಗೆ,
ಮಗುವೇ, ನಾನು ನಿನಗೆ ಹಾರೈಸುವೆ;
ಎಂದೆಂದಿಗೂ ಹೂವಿನಂತೆ ನಗುತ್ತಲೇ ಇರು ಹಾಗು ಬೆಳೆಯುತ್ತಲೇ ಇರು,
ಪ್ರೀತಿಯಿಂದ  ಎಲ್ಲಕ್ಕೂ ನಾನು ನಿನ್ನ ಬೆನ್ನೆಲುಬಾಗಿ ನಿಲ್ಲುವೆ ||

ಸಣ್ಣ ಕನಸುಗಳ ಕಾಯುವವನು, ದೊಡ್ಡದಾಗಿ ಹಾರೈಸುವೆ,
ಈ ಪ್ರಪಂಚವೇ ನಿನ್ನ ರಂಗ ಮಂದಿರ, ತೋರು ನಿನ್ನ ಚಮತ್ಕಾರ,ಚಾಕಚಕ್ಯತೆ;
ನೀನು ಇಲ್ಲಿ ಇಂಪಾಗಿ ಹಾಡು ಮತ್ತು ನರ್ತಿಸು,
ನಿನ್ನ ದಾರಿಯಲ್ಲಿ ಬರುವುದೆಲ್ಲವನ್ನೂ ಸಂತೋಷದಿಂದಲೇ ಅನುಭವಿಸು||

ಸಣ್ಣ ಭರವಸೆ ಈ ದೊಡ್ಡ ಪ್ರಪಂಚದಲ್ಲಿ,
ಹೊರಗಿನ ಯಾವ ಶಕ್ತಿಯೂ ನಿನ್ನೊಳಗಿನ ಚೈತನ್ಯವನ್ನು ತಡೆಹಿಡಿಯಲಾಗದು;
ಬೆವರ ಸುರಿಸು, ಸಪ್ಪಳ ಮಾಡು, ಕೊಳಲ ನುಡಿಸು,
ಆ ಸಂಗೀತವನ್ನು ಸಂತೋಷದಿಂದಲೇ ಆಸ್ವಾದಿಸುವೆ||

ಸಣ್ಣ ಸಣ್ಣ ಮುತ್ತುಗಳು ಪ್ರೀತಿಯ ಮಗುವೇ,
ಎಷ್ಟು ಬೇಗ ಬೆಳೆಯುತ್ತಿದ್ದೀ, ಗೊತ್ತೇ ಆಗದೆ;
ನಿನ್ನ ಕಾಲ ಮೇಲೆ ನಿಲ್ಲುವ ಕಾಲ ದೂರ ಉಳಿದಿಲ್ಲ,
ನಿನ್ನದೇ ಕನಸುಗಳ ಬೆನ್ನತ್ತುವ ಶಕ್ತಿಯೂ ಬಂದಾಯ್ತು||

ಪ್ರೀತಿಯ ಮಗುವೇ, ನಾ ನಿನ್ನ ಪ್ರಿತಿಸುವೆ,
ನೀನೇ ನನ್ನ ಕನಸುಗಳ ಕನಸು;
ನೀನೇ ನನ್ನ ಹಾರೈಕೆಗಳ ಹಾರೈಕೆ;
ಅದಕ್ಕಾಗಿಯೇ ನಿನ್ನನ್ನು ಹೆಚ್ಚು ಪ್ರೀತಿಸುವೆ ಇಂದೂ ಎಂದೆಂದಿಗೂ.....||

ಪ್ರೇರಣೆ: "Little Wishes" by Casarah Nance

ನಿತ್ಯತೆಯ ಅಂಚನ್ನು ತಲುಪುವ

ಮೌನ ಕರೆಯುತ್ತಿದೆ
ಹುಣ್ಣಿಮೆಯ ಬೆಳಕು ಜಾರುತ್ತಿದೆ
ತಂಗಾಳಿಯ ಸಪ್ಪಳ ಮೌನಕ್ಕೆ ಶರಣಾಗುತ್ತಿದೆ
ಖಾಲಿಯಾದ ಮನಸ್ಸು ಹಾಗು ನಗುವಿನ
ಚೈತನ್ಯ ಕಾತರತೆಯಿಂದ ನಿರ್ಮಲ
ಪ್ರಕೃತಿಯ ಸೌಂದರ್ಯವ ಆಸ್ವಾದಿಸುತ್ತಿದೆ
ಭರವಸೆಯ ಹೊಸ ಲೋಕವ ತೆರೆಯುವ||

ಕತ್ತಲೆಯ ಕರಿ ಪರದೆ ತೆರೆದುಕೊಳ್ಳುತ್ತಿದೆ
ಬೆಳಗಿನ ಕಣ್ಣು ತೆರೆಯುತ್ತಿದೆ
ಚಿಕ್ಕ ಗರಿಕೆಯ ಹುಲ್ಲು ನಿಧಾನವಾಗಿ ಕಣ್ತೆರೆಯುತ್ತಿದೆ
ಖಾಲಿಯಾದ ಮನಸ್ಸು ಹಾಗು ನಗುವಿನ
ಚೈತನ್ಯ ಕಾತರತೆಯಿಂದ ನಿರ್ಮಲ
ಪ್ರಕೃತಿಯ ಸೌಂದರ್ಯವ ಆಸ್ವಾದಿಸುತ್ತಿದೆ
ಭರವಸೆಯ ಹೊಸ ಲೋಕವ ತೆರೆಯುವ||

ನಿನ್ನನ್ನು ಅಲ್ಲಿಗೆ ಕರೆದೊಯ್ಯುವೆ
ನೀನು ನೆಮ್ಮದಿಯ ನಂಬಿಕೆಯ
ಉಸಿರನ್ನು ಆಸ್ವಾದಿಸುವೆ
ಪರಿತಪಿಸುವ ಕನಸುಗಳ ಮೇಲೆ
ಸವಾರಿ ಹೊರಡುವ,ವಾಸ್ತವದಿಂದ ದೂರ ಸಾಗುವ||

ನಿನ್ನನ್ನು ಅಲ್ಲಿಗೆ ಕರೆದೊಯ್ಯುವೆ
ಭರವಸೆ ಹಾಗು ಭ್ರಮೆಯ ನಾಡಿಗೆ
ಇಬ್ಬನಿಯ ಕಾಲವನ್ನು ಬಳಸುತ್ತಾ
ನಿಧಾನವಾಗಿ ಹೆಜ್ಜೆಯಿಡುತ್ತಾ ನಿತ್ಯತೆಯ ಅಂಚನ್ನು ತಲುಪುವ||

ಪ್ರೇರಣೆ: 'Let me take you there' by Paul Callus

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...