ಕಳೆದ ಆ ದಿನಗಳು ಎಷ್ಟು ಮಧುರ

ಕಳೆದ ಆ ದಿನಗಳು ಎಷ್ಟು ಮಧುರ
ನೆನೆದರೆ ಮನದಲ್ಲಿ ಖಂಡಿತ ಹರಿವುದು ಕಣ್ಣೀರು
ಯಾವ ಬೇಲಿಯೂ ಇಲ್ಲದ,
ಯಾವ ಹಂಗೂ ಇಲ್ಲದ
ಅಂದಿನ ದಿನಗಳೇ ಚಂದ
ಅನುಭವಿಸಿದೆವು ಮುಕ್ತ ಗೆಳೆತನವ
ತಂಟೆ,ತರಲೆ,ನೋವು,ನಲಿವು
ಇಂದು ನೆನೆದರೆ ಮನ ನರಳುವುದು
ಮನದಲ್ಲಿ ಮೂಡುವುದು ಹತಾಶಭಾವ
ಅನಿಸುತ್ತೆ ಕಳೆದ ಆ ದಿನಗಳು ಎಷ್ಟು ಮಧುರ||

ಯಾರಿವಳು? ಯಾರಿವಳು?

ಯಾರಿವಳು? ಯಾರಿವಳು?
ಮನವ ಗೆದ್ದ ಮುಗ್ದೆ ಯಾರಿವಳು?

ಯಾರ ನೋವಿನ ಸ್ವರವೋ?
ಯಾರ ಬಾಳಿನ ಚೈತನ್ಯವೋ?
ಮನೆಯ ಬೆಳಕಾಗಿ ಬಂದವಳು||

ಯಾವ ಜನ್ಮದ ಗೆಳತನವೋ?
ಯಾರ ಬದುಕಿನ ಪಥವೋ?
ಇಂದು ಜೊತೆಯಾಗಿ ನಡೆದಿಹಳು||

ಪ್ರಕೃತಿಯ ಸಂಕೇತವಾಗಿ
ಬಾಳ ಬದುಕಿನ ನಲಿವಾಗಿ
ಇಂದು ನನ್ನ ಜೊತೆಯಾದವಳು||

ಬಿಟ್ಟುಹೋಗದಿರು ದೂರ

ಬಿಟ್ಟುಹೋಗದಿರು ದೂರ
ಓ ನನ್ನ ನಲ್ಲೆ
ನೀ ನಿಲ್ಲದೆ ಜೀವನ ಬಲು ಭಾರ
ನೀ ನನ್ನ ಶಕ್ತಿ ನಾ ಬಲ್ಲೆ||

ಏಕೋ ಭಯ ಆವರಿಸಿದೆ
ನೀನಿದ್ದರೆ ಏನೋ ನೆಮ್ಮದಿ
ಮನಬೆದರಿದೆ,ಮಂಕಾಗಿದೆ
ನಿನ್ನಾಸರೆ ಬೇಕು ಕಳೆಯಲು ಬೇಗುದಿ||

ನಿನ್ನ ತೆರವು ತಾತ್ಕಾಲಿಕ
ತಿಳಿದಿದೆ ಈ ಮನಕೆ
ಮತ್ತೆ ಬರುವೀ ಈ ಮನಕೆ
ಸುತ್ತ ಓಡಾಡುತಿರೆ ನೀ ಮನಕೆ ಪುಳಕ||

ಬಂದು ಬಿಡು ಗೆಳತಿ
ತಾಳಲಾರೆ ಈ ವಿರಹ
ಈ ವಿರಹದ ನೋವಿಗೆ ನೀನೇ ಒಡತಿ
ನರಳಲಾರೆ ಮತ್ತೆ ಈ ತರಹ||

ಎಲ್ಲಾ ನೋವಿಗೆ ನೀನೇ ಮುಲಾಮು
ನಿನ್ನ ನಗುವಿಗೆ ಚೈತನ್ಯವಿದೆ
ಕತ್ತಲ ಬದುಕಿಗೆ ನೀನೇ ಮುಂಜಾವು
ನಿನ್ನ ಸನಿಹಕೆ ಜೀವನ ಪ್ರೀತಿಯಿದೆ||

ನೀ ಬರುವಿಯೆಂದರೆ ಏನೋ ಪುಳಕ
ಆಲಸ್ಯವೆಲ್ಲಾ ಕೊಡವಿ ನಿಲ್ಲುವುದೀ ಮನ
ನೀನೆಂದರೆ ಹಾಗೆ ಪ್ರೀತಿಯ ಚುಂಬಕ
ಚೈತನ್ಯದ ಚಿಲುಮೆಯಾಗುವುದೀ ಮನ||

ಸರತಿ ಸಾಲು

ಸಿದ್ಧರಾಗೇ ಇದ್ದಾರೆ ತಮ್ಮ ತಮ್ಮ ಸರತಿಗಾಗಿ
ಹುಟ್ಟಿನಿಂದಲೇ ಆರಂಭವಾಗಿದೆ ನಿಂತು ನಿಲ್ಲದಂತೆ
ಯಾರ ವಶಕ್ಕೂ ಸಿಗದೆ ಚಲಿಸುತ್ತಿದೆ
ನಿರಂತರ ಚಲನಶೀಲತೆಯ ಆಶಯದಂತೆ
ಹಗಲು-ರಾತ್ರಿ ಹೇಗೋ ಹಾಗೆ;
ವರುಷಗಳು ಉರುಳುತ್ತಿದೆ ಗೊತ್ತೇ ಆಗದೆ;
ಅದೆಷ್ಟು ಕ್ಯಾಲೆಂಡರ್ ಗಳ ಬದಲಿಸಿದೆಯೋ
ಈ ಕೈಗಳು,ಲೆಕ್ಕ ಇಡಬಹುದಾದಷ್ಟು;
ಬದುಕು ಸಹಜ-ಅಸಹಜಗಳ ರಸಾಯನ;
ಆರಂಭವಾಗುವುದು ನಿಜವಾದರೂ,
ಎಂದು? ಹೇಗೆ?ಎಲ್ಲಿ? ಕೊನೆಗೊಳ್ಳುವುದೋ
ಯಾರಿಗೂ ಗೊತ್ತಿಲ್ಲ.ತಿಳಿದಿಲ್ಲ,ರಹಸ್ಯವಾಗೇ ಉಳಿದಿದೆ;
ಅನಿಶ್ಚತತೆ ಸದಾ ನಮ್ಮನ್ನು ಕಾಡುತ್ತದೆ;
ಎಲ್ಲರೂ ಸರತಿಯಲ್ಲಿ ಇರುವವರೇ!
ಅದು ಹೀಗೆ ಎಂದು ಹೇಳಲು ಬಾರದು,
ನನ್ನ ಸರತಿ ಈಗಲ್ಲವೆನ್ನಲೂ ಆಗದು;
ಭರವಸೆ,ನಂಬಿಕೆಯಲ್ಲೇ ಉಸಿರಾಡುತ್ತೇವೆ
ನಾಳೆ ನಾಳೆಗಳ ಸವೆಸಲು
ಎಲ್ಲವೂ ನಮಗೇ ಇರಲಿ ಎಂಬ ಸ್ವಾರ್ಥವೂ
ಜೊತೆಗೆ ಅಮಿತವಾಗಿ ಬೆರೆತಿದೆ;
ಕಾಯುತ್ತಿದ್ದೇವೆ ನಮ್ಮ ಸರತಿಗಾಗಿ
ಹೋಗುವವರಿಗೆ ದಾರಿ,ಹಾದಿ ಬಿಟ್ಟುಕೊಡುತ್ತಾ.....

ಚಲುವು ಚಲುವೇ!

ಒಳಗೊಂದು ಚಲುವು;
ಹೊರಗೊಂದು ಚಲುವು;
ಎಲ್ಲಿಯಾದರೂ ಇರಲಿ
ಚಲುವು ಚಲುವೇ!
ಆಸ್ವಾದಿಸುವ ಮನದಲ್ಲಿ ಎಲ್ಲವೂ
ನೋಡುವ ಕಂಗಳಲ್ಲೇನಿದೆ?
ಅದೊಂದು ಕಿಟಕಿಯಷ್ಟೇ!

ಇಷ್ಟದ ಬೀಜವೋ?
ಕಷ್ಟದ ಬೀಜವೋ?
ಬಿತ್ತಿ,ಬೆಳೆದು ಹೆಮ್ಮರವಾಗುವುದು
ಮನದ ಈ ಬಯಲಲ್ಲೇ!

ಇಲ್ಲಿ ಎಲ್ಲವೂ ಚಲುವೇ;
ಕುರೂಪವೂ ಚಲುವೇ;
ಅಸಹ್ಯ ಮನೋವಿಕಾರವಷ್ಟೆ.
ಮನದಲ್ಲಿ ಬಿತ್ತಿಹ ಬೀಜ
ಸಿಹಿಯಾದೊಡೆ ಚಲುವು;
ಮನದಲ್ಲಿ ಬಿತ್ತಿಹ ಬೀಜ
ಕಹಿಯಾದೊಡೆ ಕುರೂಪವು;
ಮನದ ಭಾವನೆಯಲ್ಲಡಗಿದೆ ಎಲ್ಲವೂ||

ಕಾರಿರುಳ ರಾತ್ರಿಗಳ ನಿದ್ದೆ

ಕಾರಿರುಳ ರಾತ್ರಿಯಲ್ಲಿ ಏಕಾಂತದಲ್ಲಿ ಕುಳಿತಿರಲು
ಮನದ ಚಿತ್ರದಲೆಲ್ಲಾ ಕಳೆದು ಹೋದ ಆ ದಿನಗಳ
ನೆನಪಿನ ಕಪ್ಪು-ಬಿಳುಪಿನ ಚಲನಚಿತ್ರ;
ಕಳೆದುಹೋಯಿತೆನ್ನಲೋ?
ಇಲ್ಲ,
ಕಳೆದುಕೊಂಡೆನೆನ್ನಲೋ?
ಎರಡೂ ಒಂದೇ ಅರ್ಥ ನೀಡುವುದೆನಗೆ;
ಇದ್ದದ್ದಾದರೂ ಏನು ಎಂಬ ಪ್ರಶ್ನೆಗೆ
ಇದ್ದರೆ ತಾನೆ ಕಳೆದುಕೊಳ್ಳಲು ಎಂಬ ಉತ್ತರ,
ದರ್ಶಿನಿಯ ಊಟದಂತೆ ಸಿದ್ಧವಾಗಿದೆ;
ಏನೇ ಆಗಲಿ,
ಕಳೆದುಕೊಂಡಾಗಿನ ಸುಖ,
ಪಡೆಯುವುದರಲ್ಲಿ ಇಲ್ಲ
ಎಂಬ ಸತ್ಯದ ದರ್ಶನವಾಗಿದ್ದು
ಅದೇ ಕಾರಿರುಳ ರಾತ್ರಿಗಳ ನಿದ್ದೆಯಿಲ್ಲದ
ಪಿಶಾಚಿಯಂತೆ ನರಳುವಾಗ......

ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ

ದೇಶದ ಶಕ್ತಿಯ ಪ್ರತಿರೂಪವೇ
ಮಿಂಚಿನಂತ ಮಾತಿನ ಗಣಿಯೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಮಾತಿನ ಲಯದಲ್ಲೇ ಮೋಡಿಮಾಡುವ ಮಾಂತ್ರಿಕನೇ
ಜಗದ ಕಣ್ಣನ್ನೆಲ್ಲಾ ಸೂರೆಗೊಂಡ ಮೋಡಿಗಾರನೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಭಾರತದ ಆತ್ಮಸ್ಥೈರ್ಯದ ಸಂಕೇತವೇ
ಶತೃಗಳ ಸಿಂಹಸ್ವಪ್ನವಾದ ಕಾರ್ಗಿಲ್ಲಿನ ವೀರಾವೇಶವೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಪೋಖ್ರಾನಿನ ಅಣುಶಕ್ತಿಯ ಶಕ್ತಿಯೇ
ಭಾರತೀಯತೆಯ ಬೆಳಗಿದ ಪ್ರದೀಪವೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಎಷ್ಟು ಹಾಡಿ ಹೊಗಳಿದರೂ ಸಾಲದು ದೊರೆಯೇ
ನೂರು ವರುಷ ಬಾಳೆಂದು ಪ್ರಾರ್ಥಿಸುವೆವು ಓ ದೇವರೇ
ಭಾರತಮಾತೆಯ ಹೆಮ್ಮೆಯ ಪುತ್ರ ನೀ ಅಟಲ್
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

(ನಮ್ಮ ನೆಚ್ಚಿನ ನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬದ
ದಿನಕ್ಕಾಗಿ ಈ ಕವನ ರಚಿಸಿದ್ದು.)

ಏಕೆ ಹುಟ್ಟಿದೆ ಜೀವವೇ?

ಏಕೆ ಹುಟ್ಟಿದೆ ಜೀವವೇ?
ಏಕೆ ಈ ನೆಲಕ್ಕೆ ಬಂದೆ?
ಕಾರಣವಿಲ್ಲದೆ ಈ ಜನ್ಮವೇತಕ್ಕೆ ಜೀವವೇ?

ಬಂದ ಕಾರಣವೇ ಬೇರೆ
ಮೋಹ ಮಾಯೆಗಳ ಬಂಧಿಯಾಗಿ
ಕಾರಣವನೇ ಮರೆತು ಬದುಕುವುದ್ಯಾತಕೋ?

ಬಂಧು ಬಳಗದ ನಿಮಿತ್ತ ಪ್ರೇಮ ಬಂಧನವೋ
ಹೆಂಡತಿ ಮಕ್ಕಳ ತೀರದ ವ್ಯಾಮೋಹವೋ
ಕೊನೆಯಿಲ್ಲದ ಮೋಹಕ್ಕೆ ಬೇಯುತಿರುವೆ ಏಕೆ ಜೀವವೇ?

ಬಿಡಿಸಿಕೊಳ್ಳಲಾರದ ಬಂಧನವೋ
ಕ್ಷಣಮಾತ್ರದಲ್ಲೇ ಕಳಚುವ ನಿನ್ನ ಪರಿಯೋ
ಯಾವುದು ಸತ್ಯವೋ? ಯಾವುದು ಮಿಥ್ಯವೋ?

ಬಂದ ಕಾರಣವನೇ ಮರೆಯುವ ನಾವು
ಎಷ್ಟು ವರುಷ ಜೀವ ಸವೆಸಿದರೆ ಏನು
ನಿನ್ನ ಅಣತಿಯಂತೆ ನಡೆವ ನಾವು ನಿನ್ನ ಕೈಗೊಂಬೆಗಳೇ!

ಸಲಹೆಂದು ಬೇಡಿಕೊಂಬೆವು
ಬೆಳಕನಿತ್ತು ದಡವ ಸೇರಿಸೋ
ಎಂಬ ಅರಿಕೆ ನಿನ್ನಲ್ಲಿ ಓ ಜೀವದ ಒಡೆಯನೇ!

ಮತ್ತೆ ಬಾರದ ದಿನಗಳೇ......

ಮತ್ತೆ ಬಾರದ ದಿನಗಳೇ
ಎತ್ತ ಹೋದಿರಿ ಬಾರದೇ
ನೆನೆಯುತ ಕಾದಿಹೆನು
ಕಣ್ಣೀರ ಹರಿಸಿ ಬೇಡಿಹೆನು||

ಮತ್ತೆ ಮತ್ತೆ ನೆನೆಯುತ
ನಿದ್ದೆ ಜಾರಿತು ಬೆದರುತಾ
ಹೋದರೆಲ್ಲಿಗೆ ಮತ್ತೆ ಬಾರದೆ
ಯೋಚನೆ ಹತ್ತಿದೆ ಈ ಬಾಳಿಗೆ||

ಕಳೆದು ಹೋಯಿತು,ಕಳೆದು ಹೋಯಿತು
ಎಷ್ಟು ಹುಡುಕಿದರೂ ಸಿಗದೆ ಹೊರಳಿತು
ಮನದ ಕತ್ತಲಲ್ಲಿ ಪ್ರಶ್ನೆತೋರಿ
ಮಿಂಚಿನಂತೆ ಬೆಳಕತೋರಿ ಮಾಯವಾಯಿತು||

ಗೆಳೆತನ

ಕೆಲವು ಸಲ ನಾವು ಶಕ್ತಿ ಮೀರಿ ಹೊಡೆದಾಡುತ್ತೇವೆ
ಎಲ್ಲಾ ಬಾಗಿಲುಗಳನ್ನು ಮುಚ್ಚುತ್ತೇವೆ
ಏನೇ ಆದರೂ ಕೊನೆಗೆ ನಾವು ಗೆಳೆಯರೇ.....
ಅದೇ ಕೊನೆಯವರೆಗೂ ಬೆಲೆ ಇರುವಂತಹುದು
ಅದಕ್ಕೆ ಬೆಲೆ ಕಟ್ಟಲಾಗದೆಂದು
ಲೋಕದಲ್ಲಿ ಅದಕ್ಕೆ ಗೆಳೆತನವೆನ್ನುವರು ಗೆಳೆಯ;

ಹಲವು ಸಲ ನಮ್ಮ ಗೆಳೆತನವ
ಪರೀಕ್ಷಿಸುವ ಪರೀಕ್ಷೆಗಳು ನಡೆದುಹೋಗುತ್ತವೆ
ಆ ಪರೀಕ್ಷೆಗಳಿಗೆ ಕೊನೆಯಿದೆ
ಆದರೆ ನಮ್ಮ ಗೆಳೆತನಕ್ಕೆ ಕೊನೆಯಿಲ್ಲ ಗೆಳೆಯ;

ನಾವು ದೊಡ್ಡವರಾಗುತ್ತೇವೆ;
ನಾವು ಹಳಬರಾಗುತ್ತೇವೆ;
ನಾವು ಮುದುಕರಾಗುತ್ತೇವೆ;
ಮಾಂತ್ರಿಕತೆ ಏನು ಗೊತ್ತಾ ಗೆಳೆಯ
ಈ ನಮ್ಮ ಗೆಳೆತನಕ್ಕೆ ಮುಪ್ಪೆಂಬುದಿಲ್ಲ ಗೆಳೆಯ;

ಪ್ರಾರ್ಥನೆ

ಒಮ್ಮೆ ಆ ದೇವರ ಪ್ರಾರ್ಥಿಸಿದೆ
ಓ ದೇವರೇ ಹೂವೊಂದನ್ನು ನೀಡೆಂದು
ಆತ ಕರುಣಿಸಿದ ಹೂವಿನ ಬೊಕ್ಕೆಯನ್ನೇ ನೀಡಿದ
ಮತ್ತೆ ಕೇಳಿದೆ ಒಂದು ನಿಮಿಷ ಕಾಲ ನೀಡು
ನಿನ್ನ ಕಣ್ಣುತುಂಬ ತುಂಬಿಕೊಳ್ಳಬೇಕೆಂದೆ
ಆತ ಕರುಣಿಸಿದ ಒಂದು ದಿನವನ್ನೇ ನೀಡಿದ
ಅವನ ಕರುಣೆ ಅಪಾರ
ನಾನೋ ದುರಾಸೆಯ ಮುದ್ದೆ
ಮತ್ತೆ ಬೇಡಿಕೆಯಿಟ್ಟೆ, ಪ್ರೀತಿಯ ಬೇಡಿದೆ
ಅದನ್ನೂ ಮುಗುಳ್ನಗುತ್ತಾ ನೀಡಿದ
ಮತ್ತೆ ಅತಿಶಯದಿ ಬೇಡಿದೆ
ದೇವ ಪ್ರೀತಿಯ ದೇವತೆಯ ಕರುಣಿಸೆಂದೆ
ಕರುಣಾಳು ಕನಿಕರಿಸಿ ನಿನ್ನನ್ನೇ ನನಗೆ ನೀಡಿದ.

ಹೊಸಭಾವ-ಹೊಸಬಗೆ

ಮೋಡಗಳಿಲ್ಲದ ದಿನ,ಬರಡಾದ ಆಕಾಶ
ಕಣ್ಣು ಹಾಯಿಸಿದಷ್ಟೂ ತಿಳಿನೀಲಿ ಆಕಾಶ
ಸುಪ್ರಭಾತದ ದಿನಕರನು ಕಣ್ತೆರೆಯಲು
ಹೊಸತನ ಹೊಮ್ಮುತ್ತಿದೆ ಇದು ಹೊಸಭಾವ||

ತುಟಿಯಂಚಲಿ ನಗುವ ಹೊತ್ತು ನಡೆಯುತಿರಲು
ಸುತ್ತ ಎದುರು ಬರುವವರೆಲ್ಲರಲ್ಲೂ ನಗುವ ಹೊನಲೇ
ಎಲ್ಲರೂ ಈಗ ತಾನೆ ಅರಳಿರುವ ಕುಸುಮದಂತೆ
ಎಲ್ಲರಲ್ಲೂ ಜೀವನ ಪ್ರೀತಿಯಿದೆ ಇದು ಹೊಸಬಗೆ||

ಜೀವನದ ಗುರಿ

ಪ್ರತಿದಿನವೂ ಜೀವಿಸೋಣ
ನಮ್ಮ ಪಾಲಿನ ಕರ್ತವ್ಯವನ್ನು ತಪ್ಪದೇ ಮಾಡೋಣ
ಹೊಸತನ ತುಂಬೋಣ
ನೋವುಂಡವರ ಸಂತೈಸೋಣ
ತುಟಿಯಂಚಲಿ ನಗುವ ತರಿಸೋಣ
ಧನ್ಯತೆಯ ಭಾವ ಹೃದಯದಲ್ಲಿ ಬಿತ್ತೋಣ
ಇದನ್ನೇ ನಮ್ಮ ಜೀವನದ ಗುರಿಯಾಗಿಸೋಣ 

ನಾ ನಿನಗೆ ಇನ್ನೂ ಏನೂ ಹೇಳಿಲ್ಲವೆ?

ನಾ ನಿನಗೆ ಇನ್ನೂ ಏನೂ ಹೇಳಿಲ್ಲವೆ?
ನೀನು ನನಗೇನಾಗಬೇಕೆಂದು.....
ನಾ ನಿನಗೆ ಇನ್ನೂ ಏನೂ ಹೇಳಿಲ್ಲವೆ?
ನೀ ತರುವ ಸಂತೋಷದ ಹೊನಲ ಬಗೆಯನ್ನು...
ನಾ ನಿನಗೆ ಇನ್ನೂ ಏನೂ ಹೇಳಿಲ್ಲವೆ?
ನೀ ನನಗೆ ಈ ಪ್ರಪಂಚವೆಂದು...
ಹೀಗೆ ಏನೂ ಹೇಳಿಲ್ಲವಾದರೆ
ನನ್ನಂತರಂಗದ ಭಾವನೆಯನ್ನು ಹೇಳಬಯಸುತ್ತೇನೆ
ನೀನೇ ನನ್ನ ಸರ್ವಸ್ವವೆಂದು
ಈ ಜೀವದ ಜೀವವೆಂದು
ನನ್ನ ಬದುಕಿನ ದೀಪವೆಂದು
ಈ ದೇಹದ ಚೈತನ್ಯವೆಂದು
ನನ್ನ ಹೃದಯದ ಮಿಡಿತವೆಂದು.....

ನೆಂಟಸ್ತಿಕೆ

ನಿನ್ನ ಪ್ರೀತಿಯ ನೆಂಟಸ್ತಿಕೆ
ನನ್ನ ಹೃದಯವ ಬೆಸೆದಿದೆ
ಹಿಡಿದಿದೆ ಭದ್ರವಾಗಿ ಕರಗಳಲ್ಲಿ
ಬಂಗಾರ,ಬೆಳ್ಳಿಯ ದಾರಗಳಿಂದ ಕಟ್ಟಿದೆ ಗೂಡು
ನನ್ನೆದೆಯ ಪ್ರೀತಿಯ ತಂತಿಗಳನ್ನು ಜೋಡಿಸಿದೆ
ಬಿಡಲು ನಿರಾಕರಿಸಿ,
ಹೃದಯವ ಬೆಸೆದಿದೆ ಪ್ರೀತಿಯ ನೆಂಟಸ್ತಿಕೆ.

ಪ್ರೇರಣೆ:  'Your Love knot' by Heather Burns

ಪ್ರೀತಿ

ಓ ಪ್ರೀತಿಯೇ ನಾನಿನ್ನ ಪ್ರೀತಿಸುವೆ
ಪ್ರೀತಿಯೇ ಪ್ರೀತಿಯನ್ನು ಪ್ರೀತಿಸು
ನೀನು ಎಂದೂ ಪ್ರೀತಿಯನ್ನು ಪ್ರೀತಿಸಲಿಲ್ಲವೇಕೆ?
ನನ್ನ ಪ್ರೀತಿ ನನ್ನ ಪ್ರೀತಿಸಬೇಕು||

ನಿನಗಿದೆ ಬಣ್ಣದ ರೆಕ್ಕೆಗಳು
ಆಕಾಶದಲ್ಲಿ ಸ್ವಚ್ಚಂದವಾಗಿ ಹಾರಲು
ನೀನೆಂದೂ ನನ್ನ ಸ್ವಾಗತಿಸಲಿಲ್ಲವೇಕೆ?
ಬಿಟ್ಟು ಹೋದೆ ಈ ಹೂವನ್ನು ಚಿಟ್ಟೆಯಂತೆ||

ನೀನು ಭರವಸೆ;
ನೀನು ಬಯಕೆ;
ಎಲ್ಲರೂ ಬಯಸುವರು ನಿನ್ನ ತುಂಬಿಕೊಳ್ಳಲು
ನನ್ನ ಹೃದಯವೂ ಮಿಡಿಯುತಿದೆ ಬೆಸುಗೆಗೆ||

ನನ್ನ ಕಣ್ಣು ಮುಚ್ಚಿದರೂ,ಹೃದಯ ನಿಂತರೂ
ಈ ಹೃದಯಕ್ಕೆ ತಿಳಿದಿದೆ ನೀ ಮಳೆಯಂತೆ ಬರುವೆಯೆಂದು
ಜನರ ಹೃದಯದಲ್ಲಿ ನೀ ನೆಲೆಸಿರುವೆ
ನೋವಿನ ಮರಳುಗಾಡಿನ ಬಿಸಿಗಾಳಿಯಂತೆ||

ಪ್ರೇರಣೆ:  'Love' by Abdul Wahab

ಸ್ತಬ್ದ

ಕಾಗೆ ಹಾರಿತು,
ಜನರು ಸತ್ತರು,
ಆತ್ಮಗಳು ಕಣ್ಮರೆಯಾದವು.
ಕಣ್ಣೀರು ಬತ್ತಿತು,
ಪ್ರೀತಿ ಬಾಡಿತು,
ರಕ್ತ ತೊಟ್ಟಿಕ್ಕುವುದು ನಿಂತಿತು,
ಸೂರ್ಯ ಮುಳುಗಿತು,
ಹೂಗಳು ಭೂದಿಯಾದವು,
ಜನರು ಕಲ್ಲುಗಳಾದರು,
ಕಾಗೆಗಳು ಹೆಪ್ಪುಗಟ್ಟಿದವು,
ಜೀವನ ಸ್ತಬ್ದವಾಯಿತು.

ಪ್ರೇರಣೆ:'Still' by Amber

ಬದುಕೇ ಯುದ್ಧ

ಕದನ ಬೇಡವೇ?
ಆದರೂ ನೀನೇ ಆರಂಭಿಸಿರುವೆ ಈ ಯುದ್ಧ.
ನೀನು ಕೊಡುವ ಪ್ರತಿಯೊಂದು
ಆಘಾತಕ್ಕೆ ನಾನು ಎಂದಿಗಿಂತ ಬಲಶಾಲಿಯಾಗುತ್ತಿರುವೆ
ನಾನು ಬಿಡುವುದಿಲ್ಲ,
ನಾನು ತೊರೆಯುವುದಿಲ್ಲ,
ನೀನು ನನ್ನನ್ನು ಬೀಳಿಸಲಾರೆ,
ನಾನು ನಿನ್ನ ಗೆಲ್ಲಲು ಬಿಡುವುದಿಲ್ಲ.

ಪ್ರೇರಣೆ: 'Life's own battle' by Emma Jackson

ನೀನೇ ಭರವಸೆ

ನೀ ಬೆಳಗಿದೆ ನನ್ನ ಪ್ರಪಂಚವನ್ನು
ನಿನ್ನಿಂದಲೇ ನನ್ನ ದುಗುಡಗಳನ್ನೆಲ್ಲಾ ಮರೆತೆ
ನಿನ್ನ ನಗುವು ನನ್ನ ದಿನಗಳನ್ನು ಬೆಳಗಿದವು
ನನ್ನ ಕಣ್ಣಿರನ್ನೆಲ್ಲ ಓಡಿಸಿದವು ಚೆನ್ನ ಚೆಲುವ||

ನೀನೇ ನನ್ನೆಲ್ಲಾ ಕನಸುಗಳು
ನಿನ್ನಿಂದಲೇ ಅವೆಲ್ಲಾ ನನಸಾದವು ಗೆಳೆಯ
ಮತ್ಯಾರು ಮಾಡ ಮಾಂತ್ರಿಕತೆ ನೀ ಮಾಡಿದೆ
ಅದರಿಂದಲ್ಲೇ ನಾನು ಪೂರ್ಣಳಾದೆ ಚೆನ್ನ ಚೆಲುವ||

ನನ್ನ ಹೃದಯ ಮಿಡಿಯುತ್ತಿದೆ ನಿನಗಾಗಿ ಅವಿರತ
ನೀ ಮನದೊಳಗೆ ಮಿಡಿಯುತಿಹೆ ಪ್ರೇಮ ಒರೆತ
ನಿನ್ನ ಕರುಣೆಗೆ ಏನೆನ್ನಲಿ?
ನಿನ್ನ ಮಮತೆ ಹೀಗೇ ಇರಲಿ ಚೆನ್ನ ಚೆಲುವ||

ಕಪ್ಪು ಚೈತನ್ಯ

ಅವನೆಂದರೆ ಆಕರ್ಷಣೆ;
ಅವನ ಮಾತೆಂದರೆ ಕೊಳಲ ಗಾನ;
ಅವನ ವ್ಯಕ್ತಿತ್ವ ಒಂದು ಸುಂದರ ಕಾವ್ಯ;
ಕಣ್ಣನೋಟದಲ್ಲೇ ಮೋಡಿಮಾಡುವ ಚತುರ;
ಪ್ರೀತಿಯ ಉಪಮಾನವೆಂದರೆ ಅವನೇ;
ಎಲ್ಲವನ್ನೂ ಬಲ್ಲ ಬಲ್ಲಿದ;
ಅವನೊಂದು ಸೋಜಿಗವೆಂದರೆ ತಪ್ಪಲ್ಲ;
ಚೈತನ್ಯವೆಂದರೆ ಒಪ್ಪಲೇಬೇಕಲ್ಲ;

ಚಿಕ್ಕ ಪ್ರೀತಿಯ ಪದ್ಯಗಳು ೬

ನಾನೆಂದೂ ಯೋಚಿಸಿರಲಿಲ್ಲ ಹೀಗೆ ಭಾಸವಾಗುವುದೆಂದು,
ನನ್ನೆಲ್ಲಾ ಚಿಂತೆಗಳನ್ನು ಬಿಟ್ಟು,
ಜೀವನ ಗಾನ ಸೆಳೆವುದೆಂದು,
ನೀನು ಕಲಿಸಿದೆ ಜೀವಿಸುವುದನ್ನು,
ನನ್ನ ಜೀವನಗಾನಕ್ಕೆ ಹೊಸ ಅರ್ಥ ನೀಡಿದೆ,
ನೀನು ಪ್ರಚೋದಿಸಿದೆ ನನ್ನತನವ ತೋರಿ,
ಕತ್ತಲಕೋಣೆಯಲ್ಲಿ ಅವಿತ್ತಿದ್ದ ನನ್ನನ್ನು ಹೊರಗೆಳೆದೆ,
ರೆಕ್ಕೆಬಿಚ್ಚಿ ವಿಶಾಲ ಪ್ರಪಂಚವ ತೋರಿದೆ,
ನೀನು ನನ್ನನ್ನು ಹೊಸ ಮನುಷ್ಯನನ್ನಾಗಿಸಿದೆ,
ಅದೇ ಎಂದೋ ನಾನಾಗಬಯಸಿದ್ದೆ,
ಓ ಒಲವೇ!, ನೀನೇ ನನ್ನ ನಾಯಕ,
ನಾ ಬಯಸುವೆ ನೀನು ಯಾವಾಗಲೂ ನನ್ನ ಬಳಿಯೇ ಇರಲೆಂದು.

ಪ್ರೇರಣೆ:~Roger Inquisitor.

ನಮಗೆ ತಿಳಿದಿಲ್ಲ ನಾವು ಎಲ್ಲಿಂದ ಈ ಭೂಮಿಗೆ ಬಂದವೆಂದು,
ಏಕೆ ನಮ್ಮೀ ಹೃದಯಗಳು ಮಿಡಿಯುತ್ತಿವೆ ಎಂದೂ ತಿಳಿದಿಲ್ಲ,
ಈ ಜೀವನ ಯಾಕಾಗಿ ಎಂದೂ ತಿಳಿದಿಲ್ಲ,
ನೀ ಯಾರೋ? ನಾ ಯಾರೋ? ಅರಿಯದೇ ಬಂದೆವಿಲ್ಲಿ,
ಪ್ರೀತಿಯ ತಂಗಾಳಿಗೆ ಸೋತವರು ನಾವು,
ಏಕೆ ನಾವು ಜೊತೆಯಾದೆವೋ ಇಬ್ಬರಿಗೂ ತಿಳಿದಿಲ್ಲ,
ಆದರೆ ನಾವಿಬ್ಬರೂ ಪ್ರೀತಿಯಿಂದ ಜೊತೆಗೂಡಿ ಜೀವನ ನಡೆಸಬೇಕು,
ಆಗ ಮಾತ್ರ ನಮ್ಮ ಗುರಿ,ನಮ್ಮ ಜೀವನ ಪರಿಪೂರ್ಣವಾಗುತ್ತದೆ ಎಂದು ತಿಳಿದುಕೊಂಡಿದ್ದೇವೆ.

ಚಿಕ್ಕ ಪ್ರೀತಿಯ ಪದ್ಯಗಳು ೫

ನಿನ್ನ ಸ್ಪರ್ಶವನ್ನು ಪ್ರೀತಿಸುತ್ತೇನೆ,
ನಿನ್ನ ಇರುವಿಕೆಯನ್ನು ತಪ್ಪಿಸಿಕೊಳ್ಳುತ್ತಿದ್ದೇನೆ
ನೀನು ಬಹುದೂರವಿರುವುದರಿಂದ,
ನಾನು ಸುರಕ್ಷಿತವಾಗಿಯೂ,ಪ್ರೀತಿಸಲ್ಪಡುವಳಾಗಿಯೂ
ಇರುವೆ ಎಲ್ಲಾ ಆತಂಕಗಳಿಂದ,
ನಿನ್ನ ತೋಳುಗಳಿಂದ ಚುಂಬಿಸಲ್ಪಟ್ಟಾಗ,
ನನ್ನ ಮನೆಯ ತಲುಪಿದೆ ಎನ್ನುವ ಭಾವ ಬರುತ್ತದೆ,
ನಾನು ಬಯಸುತ್ತೇನೆ ನೀನು ಇಲ್ಲೇ ಇರಬೇಕೆಂದು,
ನಿನ್ನನು ಎಂದೂ ಬಿಡಲಾರೆನೆಂದೂ,
ನನ್ನ ಹೃದಯದ ಮಿಡಿತ ಜಾಸ್ತಿಯಾಗುತ್ತಿದೆ,
ನಾನು ಶಾಂತಚಿತ್ತನಾಗಿದ್ದರೂ....

ಪ್ರೇರಣೆ: ~Garmin Jacobs

ನಿನ್ನ ಭೇಟಿಯಾದ ಮೇಲೆ ಭಾಸವಾಗುತ್ತಿದೆ ಪರಿಪೂರ್ಣತೆ,
ನಾನು ಪ್ರೀತಿಯಲ್ಲಿದ್ದೇನೆ, ಈ ಭಾವನೆಯಿಂದ ಹೊರಬರಲಾಗುತ್ತಿಲ್ಲ,
ನಿನ್ನ ಮುಗುಳ್ನಗೆ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ,
ಆ ಮುಗುಳ್ನಗೆಯನ್ನು ನೋಡಲು ಎಷ್ಟು ದೂರ ಬೇಕಾದರೂ ಕ್ರಮಿಸಬಲ್ಲೆ,
ನಾನು ಬಯಸುತ್ತೇನೆ ನಿನಗೆ ಅನಾಯಾಸವಾಗಿ ಎಲ್ಲಾ ಸಂತೋಷ ಸಿಗಲಿ ಎಂದು,
ನನ್ನ ಉಳಿದ ಜೀವನವನ್ನು ನಿನ್ನ ಹಿತವಾಗಿರಿಸಲು ವಿನಿಯೋಗಿಸುವೆ.

ಪ್ರೇರಣೆ:~Ronny Bills.

ಚಿಕ್ಕ ಪ್ರೀತಿಯ ಪದ್ಯಗಳು ೪

ನಾ ನಿನ್ನ ಗೆಳೆಯನಾಗಿ ಭೇಟಿಯಾದೆ,
ಈಗ ಇಬ್ಬರೂ ಪ್ರೀತಿಸುತ್ತಿದ್ದೇವೆ,
ನೀನು ಎಷ್ಟು ಮೃದುವೆಂದರೆ ವಿಮಲ ಕಪೋಲದಂತೆ,
ನನಗೆ ಗೊತ್ತಿಲ್ಲದೆ ನಿನ್ನ ಪ್ರೀತಿಯಲ್ಲಿ ಬಿದ್ದೆ,
ನಿರ್ಮಲ ಅಥವಾ ಚಂಡಮಾರುತದ ಹವಾಮಾನದಲ್ಲೂ,
ನನಗೆ ತಿಳಿದಿದೆ ನೀನು ನನ್ನೊಂದಿಗೇ ಇರುವಿಯೆಂದು,
ನಮ್ಮ ಜೀವನದ ಹಾದಿಯ ಹಾಡು,ಪ್ರಾಸ ತಪ್ಪಿದರೂ,
ನಮ್ಮ ಪ್ರೀತಿ ಗಟ್ಟಿಯಾಗಿ ನಿಲ್ಲುವುದು ಇತಿಹಾಸದಲ್ಲಿ.

ಪ್ರೇರಣೆ:~Bean Startship.

ಹಿಂದೆ ಹೀಗೆ ಎಂದೂ ಭಾಸವಾಗಿರಲಿಲ್ಲ ನನಗೆ,
ನೀನು ತಂದೆ ಸಂತೋಷ ನನ್ನ ಬಾಳಿಗೆ,
ನೋವ ಕಳೆದು ತುಟಿಯಂಚಲ್ಲಿ ನಗುವ ತಂದೆ,
ಓ ಒಲವೇ ನಿನ್ನಿಂದ ನನ್ನ ಜೀವನ ಸಾರ್ಥಕವಾಗಿದೆ.

ಪ್ರೇರಣೆ: ~Jordan Mice.

ಚಿಕ್ಕ ಪ್ರೀತಿಯ ಪದ್ಯಗಳು-೩

ಓ ನನ್ನ ಒಲವೇ ನೋಯಿಸಬೇಡ,
ನಾನು ತುಂಬಾ ಪ್ರೀತಿಸುತ್ತೇನೆ ನಿನ್ನಿಂದಾಗುವ ನೋವನ್ನು ಸಹಿಸಲು,
ನನಗಾಗಿ ಆಕಾಶದಿಂದಿಳಿದ ದೇವತೆ ನೀನು,
ಯಾವಾಗಲೂ ನನ್ನಂತರಂಗವನ್ನು ಅರಿತವಳಾಗು,
ನೀನೇ ನನ್ನ ಅತ್ಯುತ್ತಮ ಪ್ರಿಯತಮೆ ಎಂದೆಂದಿಗೂ,
ಓ ನನ್ನ ಪ್ರಿಯತಮೇ ನೀನೇ ನನಗೆಲ್ಲಾ ಈ ಜಗದಲ್ಲಿ.

ಪ್ರೇರಣೆ: ~Aston Affable

ನಾವು ಜೊತೆಯಾಗಿ ಕಳೆದ ಆ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ,
ಒಬ್ಬರಿಗೊಬ್ಬರು ಪರಿಚಯವಿರದ ದಿನಗಳಲ್ಲಿ ಎಲ್ಲರನ್ನೂ ಕಡೆಗಣಿಸಿದ್ದೆವು,
ನೀನು ಮುತ್ತಿಟ್ಟ ಆ ಗಳಿಗೆಯಿಂದಲೇ ಮಾಂತ್ರಿಕತೆ ನನ್ನಾವರಿಸಿತು,
ಹೊಸತನ ಮೊದಲುಗೊಂಡಿತು,
ನಮ್ಮ ಸುತ್ತಲೂ ಪ್ರೀತಿಯೆಂಬ ಗೂಡು ನೇಯಲ್ಪಟ್ಟಿತು,
ಈ ನಮ್ಮ ಸಂಬಂದ ಅವಿನಾಭಾವ, ಯಾವ ಶಕ್ತಿಯೂ ಬೇರ್ಪಡಿಸದು,
ನಮ್ಮ ಹೃದಯದಲ್ಲಿರುವ  ಭಾವನೆಗಳನ್ನು ಯಾವುದೂ ಅಲ್ಲಾಡಿಸಲಾರದು.

ಪ್ರೇರಣೆ:~Moragan Tarts

ಚಿಕ್ಕ ಪ್ರೀತಿಯ ಪದ್ಯಗಳು-೨

ನಾನು ಬಯಸುತ್ತೇನೆ ಈ ಕ್ಷಣದಲ್ಲೇ ನಿನ್ನೊಂದಿಗಿರಲು,
ನಿನ್ನ ಪ್ರೀತಿಯ ಬಲೆಗೆ ನಾ ಬಿದ್ದೆ,
ಆದರೆ ಅದು ಹೇಗೆ ನನ್ನ ಅರಿವಿಗೆ ಬರಲೇಯಿಲ್ಲ,
ನೀನು ನನ್ನ ಹೃದಯದ ಭಾಗವಾಗಿಹೆ,
ನಾನು ಬಯಸುತ್ತೇನೆ ನೀನು ಸದಾ ನನ್ನೊಡೆನೆಯೇ ಇರು ಎಂದು.
ನೀನು ನನ್ನನ್ನು ಬಿಟ್ಟುಹೋಗುವುದಕ್ಕೆ ನಾನು ಬಿಡುವುದಿಲ್ಲ,
ನನ್ನ ಪ್ರೀತಿ ನಿನಗಾಗಿಯೇ ಎಂದೆಂದಿಗೂ,
ನಾನು ನಿನ್ನ ಬಿಟ್ಟಿರಲಾರೆನೆ? ನನ್ನ ಉತ್ತರ ಅಸಾಧ್ಯವೆಂದು....

ಪ್ರೇರಣೆ:~Bob cash

ನಮ್ಮ ಮೊದಲ ಮುತ್ತು, ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ,
ಹೃದಯ ಮಿಡಿತ ಹಾದಿ ತಪ್ಪಿದ್ದು ಈಗಲೂ ನೆನಪಿದೆ,
ಬೆಚ್ಚಗಿನ ನಿನ್ನ ತೋಳುಗಳ ಆ ಸಿಹಿ ಚುಂಬನ
ಅದೊಂದು ಸ್ವರ್ಗಾನುಭವ ನನಗೆ ಅಂದು ನೀಡಿತ್ತು.
ನನ್ನ ಹೃದಯವನ್ನು ಸೂರೆಗೊಂಡೆ,ಬೇರೆ ಯಾರೂ ಮಾಡದ ಹಾಗೆ
ನೀನು ದೃಡಪಡಿಸಿದೆ ನೀನೆ ನನ್ನ ಪ್ರೀತಿಯ ದೇವತೆಯೆಂದು
ನನಗೆ ತಿಳಿದಿದೆ ನೀನು ನನ್ನ ಜೀವನ ಪ್ರವೇಶಿಸಿದ ವಿಶೇಷ ಅತಿಥಿ ಎಂದು
ನಾನೆಂದೂ ಯೋಚಿಸಿರಲಿಲ್ಲ ನೀನು ನನ್ನ ಹೃದಯ ಗೆಲ್ಲುವಿಯೆಂದು.

ಪ್ರೇರಣೆ:~Farrell Jenkins.

ಚಿಕ್ಕ ಪ್ರೀತಿಯ ಪದ್ಯಗಳು-೧

೧. ನಾನು ಪ್ರೀತಿಯ ಬಗ್ಗೆ ಯೋಚಿಸುತ್ತೇನೆ
    ನೀನೇ ನೆನಪಾಗುವೆ ಪ್ರೀತಿಯೆಂದರೆ ಗೆಳೆತಿ
    ಪದಗಳಲ್ಲಿ ಬಣ್ಣಿಸಲಾರೆ ಪ್ರೀತಿಯೇನೆಂದು
    ನೀನೇ ಕಲಿಸಿದೆ ಹುಚ್ಚನಂತೆ ಪ್ರೀತಿಸುವುದ
    ನೀನೇ ನನ್ನ ಈ ಜೀವನದ ಬಹುದೊಡ್ಡ ಉಡುಗೊರೆ ಗೆಳತಿ

ಪ್ರೇರಣೆ:~ Shiraz Milton

೨. ನಿನ್ನನ್ನು ಕಂಡಾಗ,ನನಗನಿಸಿತು ನೀನೆ ನನ್ನ ಆತ್ಮಸಾಕ್ಷಾತ್ಕಾರ
    ನಿನ್ನ ಆ ಜಾಗವನ್ನು ಮತ್ತಾರೂ ತುಂಬಲಾರರು
    ಏಕೆಂದರೆ ನನ್ನ ಹೃದಯದಲ್ಲಿ ಪ್ರೀತಿಯೆಂಬ ಅಮೃತವ ಮಥಿಸಿದವಳು ನೀನು
     ಪ್ರಪಂಚದ ಎಲ್ಲಾ ವಸ್ತುಗಳಿಗಿಂತ ಮೌಲ್ಯವಾದವಳು ನೀನು
     ನನ್ನೊಳ ಪ್ರೀತಿ ಆಪ್ಯಾಯಮಾನವಾದುದು,
     ನನಗೆ ತಿಳಿದಿದೆ ನೀನು ಎಂದೆಂದೂ ನನ್ನವಳೆಂದು.

ಪ್ರೇರಣೆ:~ Shenzhen Roll

ನನ್ನತನದ ತೊಳಲಾಟ

ಕಳೆದು ಹೋಗುತ್ತೇನೆ ಬೆಳಗಾದರೆ
ಚಿಂತೆಗಳ ನಡುವೆ;
ಕೆಲಸಗಳ ನಡುವೆ;
ಮಾತುಗಳ ನಡುವೆ;
ಮಾಡುವುದ ಬಿಟ್ಟು,
ಬೇಡದೇ ಇರುವುದೆಲ್ಲವನ್ನೂ ಮಾಡಿ
ಕಳೆದು ಹೋಗಿರುತ್ತೇನೆ ಕಾಣದ ಕತ್ತಲಲ್ಲಿ;
ದಿನದ ಕೊನೆಯಲ್ಲಿ ಚಿಂತಿಸುತ್ತೇನೆ,
ಇಂದೇನು ಮಾಡಿದೆ?
ಏನು ಓಳ್ಳೆಯದು ಮಾಡಿದೆ?
ಓಳ್ಳೆಯದು!,ಕೆಟ್ಟದ್ದು!
ಚಿಂತನೆಗೆ ಜಾಗ ಎಲ್ಲಿದೆ ಹೇಳಿ?
ಓಳ್ಳೆಯದನ್ನೇ ಯೋಚಿಸಿದರೂ
ಓಳ್ಳೇಯದನ್ನೇ ಮಾಡಿದರೂ
ಅನುಕೂಲವಾಗುವವರಿಗೆ ಮಾತ್ರ ಓಳ್ಳೆಯದು
ಅನುಕೂಲವಾಗದವರಿಗೆ ಅದು ಕೆಟ್ಟದ್ದೇ......
ಸ್ವಾರ್ಥದ ಪೊರೆ ಯಾರೂ ಕಳಚರು ಇಲ್ಲಿ
ಸ್ವಾರ್ಥದ ಹೊಳೆಯಲ್ಲಿ ಎಲ್ಲರೂ ಕೊಚ್ಚಿಹೋಗಿದ್ದಾರೆ
ಸತ್ಯ-ಮಿಥ್ಯಗಳ ದ್ವಂದ್ವಗಳ ನಡುವೆ ನಾನು ಕಳೆದುಹೋಗುತ್ತೇನೆ
ಕತ್ತಲಾದರೂ ಕಷ್ಟ;
ಬೆಳಕಾದರೂ ಕಷ್ಟ;
ನನ್ನತನ ಕಂಡುಕೊಳ್ಳಲಾರದೆ ಮಿಥ್ಯೆಯಲ್ಲಿ ಕಳೆದುಹೋಗಿದ್ದೇನೆ
ಈ ಬೇಗೆ ಸಾಗುತ್ತಲೇ ಇದೆ ಕೊನೆಯಿಲ್ಲದೆ
ದಿನವೂ ಕಳೆದುಹೋಗುತ್ತಲೇ ಇದ್ದೇನೆ
ದಿನವೂ ಸಾಯುತ್ತಲೇ ಹೋಗುತ್ತಿದೆ ಕೊನೆಯಿಲ್ಲದೆ......

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...