Sunday, August 17, 2025

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ;

ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ;

ಕಣ್ಣ ತೆರೆದರೂ ಅದೇ!

ಕಣ್ಣು ಮುಚ್ಚಿದರೂ ಅದೇ!

ರುದ್ರ ನರ್ತನಗೈದು ಭಯವನೇ ಬಿತ್ತುತ್ತಿದೆ;

ನೂರು ಆಲೋಚನೆಗಳ ಹುಟ್ಟು ಹಾಕಿದೆ;

ಮನದಲ್ಲಿ ನೂರು ಭಾವಗಳ ಬಿತ್ತಿದೆ;

ಎದುರಿಸಲೋ! ಇಲ್ಲ ಶರಣಾಗಲೋ!

ಭಾವಗಳ ಹೊಡೆತಕ್ಕೆ ತಲೆಬಾಗಲೋ!

ಇಕ್ಕಟ್ಟಿಗೆ ಸಿಲುಕಿ ಹೊರಟುಹೋದೆ ನೀನು;

ಕಣ್ಣ ತೆರೆದರೂ ನೀನೇ!

ಕಣ್ಣು ಮುಚ್ಚಿದರೂ ನೀನೇ!

ಬೆದರಿ ಬೆವತಿಹೆನು ಮನದಲ್ಲೇ!

ಮುಕ್ತನಾಗ ಬಯಸಿಹೆನು ಇಲ್ಲೇ!

ಭಾವದಲೆಗಳ ನುಂಗಿ, ಆಲೋಚನೆಗಳ ಬದಿಗೊತ್ತಿ,

ಶಾಂತತೆಯ ಕಡಲಾಗ ಬಯಸಿಹೆನು ನಿಲ್ಲೇ!।।

Saturday, August 16, 2025

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ! ಕಡಲ ಸೇರುವಾಗ

ಹೃದಯ ಭಯದಿಂದ ಚಡಪಡಿಸುವುದು!


ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ,

ಪರ್ವತಗಳ ಶಿಖರದ ತುದಿಯಿಂದ ಮೊದಲುಗೊಂಡು

ಕಣಿವೆ, ಕಾನನ, ಕಲ್ಲು, ಮಣ್ಣು ಹಳ್ಳಿಗಳ ದಾಟಿ ಬರುವೆ;


ಮುಂದೆ ಕಾಣುತಿಹುದು,

ಕಣ್ಣು ಹಾಯಿಸಿದಷ್ಟೂ ಹಾಯುವ ಅಗಾಧ ಕಡಲು;

ಕಡಲ ಸೇರಲು ಹಾತೊರೆಯುತ್ತಾ ಹರಿದು ಬಂದವಳು;

ಕಡಲ ಕಂಡೊಡನೆಯೇ ನನ್ನತನವ ಕಳೆದುಕೊಂಡು

ಕಡಲೊಳಗೆ ಒಂದಾಗಿಬಿಡುವೆನೆಂದು ಭೀತಿ ತುಂಬಿದೆ;

 

ಹಿಂದೆ ಸರಿಯುವ ಮಾತೆಲ್ಲಿ?

ಬಂದ ದಾರಿಗೆ ಸುಂಕವಿಲ್ಲ;

ಮುಂದೆ ಹರಿಯುವುದ ಬಿಟ್ಟು ಬೇರೆ ದಾರಿಯಿಲ್ಲ;

 

ನಾವೆಲ್ಲರೂ ಅಷ್ಟೇ!, ಹೆಜ್ಜೆ ಇಟ್ಟವರು,

ಜೀವನ ಸಾಗರದಲ್ಲಿ ಮುಂದೆ ಅಡಿಯಿಟ್ಟವರು;

ಯಾರೂ ಹಿಂದೆ ಹೋಗಲಾರರು!, ಹೆಜ್ಜೆ ಮುಂದಿಟ್ಟಾಗಿದೆ;

ಕಡಲ ಸೇರುವುದು ಖಂಡಿತ, ಭಯ ಭೀತಿಯ ತೊರೆಯಬೇಕಷ್ಟೇ;

ಕಡಲ ಸೇರುವುದರಿಂದಲೇ ಭಯವ ನೀಗಿಸಬೇಕಿದೆ;

ಇರುವ ದಾರಿ ಒಂದೇ, ಅದೇ ಅಚಲ, ಅನಿವಾರ್ಯ;

ನಾನು ನಾನಾಗುವುದು, ಸಂಕುಚಿತತೆಯ ತೊರೆದು,

ಅನಂತನೊಳಗೆ ಅನಂತವಾಗುವುದೊಂದೇ ಮಾರ್ಗ;

ಅಣುವಿನ ಭಾವ ತೊರೆದು, ಅನಂತವಾಗುವುದೇ ಗುರಿ, ಹಂಬಲ;||

Thursday, August 14, 2025

ಅಪರಿಚಿತ ಅತಿಥಿ

 ಬಾ,   ಅಪರಿಚಿತ ಅತಿಥಿ

ಭಯಬೇಡ ಅಪಾಯವಿಲ್ಲಿಲ್ಲ,

ಸಂತಸವೆನೆಗೆ ನಿನ್ನನ್ನಿಲ್ಲಿ ಕಂಡು

ಬಾ, ಹಾಡು ಬಾ ವಸಂತಗೀತೆ ।।

 

ಚಳಿಗಾಳಿ ಹೆದರಿ ಓಡಿಹೋಗಿದೆ

ಸುಮಗಳರಳಿ  ಸುವಾಸನೆ ಬೀರಿದೆ,

ಬಾ ಅತಿಥಿಯೇ! ನೀನಿಲ್ಲಿಯೆ ನೆಲೆಸು,

ಬಾ, ಹಾಡು ಬಾ ಭಾವಗೀತೆ ।।

Sunday, August 10, 2025

ಅವನು, ನಾನು – ಸಂಗೀತ

 ನಾನು ವೀಣೆ,

ಅವನು ವೈಣಿಕ,

ಸಂಗೀತವೇ ನಮ್ಮ ಜೀವನ||

 

ನಾನು ಜೀವ,

ಅವನು ದೈವ,

ಹೊಮ್ಮಲಿ ಗಂಧರ್ವ ಗಾನ।।

 

ನಾನು ದಾರಿ,

ಅವನೇ ಗುರಿ,

ನಡೆವ ಹಾದಿಯೇ ಸ್ವರ್ಗ||

 

ನಾನು ನಿಮಿತ್ತ,

ಅವನು ಅನಂತ,

ಅವನೇ  ಅಂತಿಮ ಗುರಿ||

 

ನಾನು ಅವನ ಇರುವಿಕೆಗೆ ಅಕ್ಷಿ,

ಅವನು ನನ್ನ ಇರುವಿಕೆಗೆ ಸಾಕ್ಷಿ||

Saturday, August 9, 2025

ಮೌನದೊಳಗಿನ ಕವಿತೆ

 ಏಕೆ ಗೊಂದಲವೋ?

ಮೌನವಾಗಿರುವಾಗ!

ಕವಿತೆ ಬರೆವಾಗಲೂ!

ಯೋಚಿಸಿದೆ ಸತತವಾಗಿ

ಎಲ್ಲಾ ಕೋನ, ಕೊನರುಗಳಿಂದ

ಸ್ಪಷ್ಟಚಿತ್ರ ಮನದಲ್ಲಿ ಮೂಡಲೆಂದು.

ದಾರಿ ಸ್ಪಷ್ಟವಾಗಿದೆಯೆಂದು

ಹೆಜ್ಜೆಯಿಟ್ಟೆ ಗುರಿಯ ಕಡೆಗೆ

ಆದರೆ ದಾರಿ ನನ್ನದಾಗಿರಲಿಲ್ಲ.

ಏನೋ ಅಂದುಕೊಂಡೆ, ಆದದ್ದೇನೋ!

ಗೊಂದಲದ ಗೂಡಾಗಿದೆ

ತಿಮಿರದ ಮನೆಯಾಗಿದೆ

ಮನ ಅಸ್ಪಷ್ಟ ಚಿತ್ರ ಕೂಟ

ಕವಿತೆಯಾಗಿದೆ ಮನದ ಭಾವವೆಲ್ಲಾ

ಬಿಡಲಾರೆ, ತೊರೆಯಲಾರೆ

ಜೊತೆಗೆ ನಡೆಯುವೆ,

ಮೌನವಾಗಿರುವಾಗಲೂ .......

ಕವಿತೆ ಬರೆವಾಗಲೂ ......

Friday, August 8, 2025

ಅವ್ಯಕ್ತ

 ಬೆಳಕನು ನುಂಗುತ್ತಾ,

ಕತ್ತಲೆಯು  ಎಲ್ಲೆ ಮೀರಿತ್ತು!,

ಕಾಡು ನಾಡೆನ್ನದೆ,

ಎಲ್ಲವ  ಬಳಸಿ ಆವರಿಸಿತ್ತು,

ಮೌನವು ಎಲ್ಲೆಡೆ

ಸಂತಸದಿ ತಾ ಮಾತನಾಡಿತ್ತು,

ಕತ್ತಲೊಳು ಎಲ್ಲವೂ  ಲಯವಾದುವು,

ಇಹ ಪರಗಳು ಎರಡೂ ಒಂದಾದುವು,

ಮನದೊಳು ಎದ್ದ ಭಾವದಲೆಗಳು,

ಧ್ಯಾನದಿ ಅವುಗಳ ನುಂಗಿತ್ತು.||  

ಛಲದ ಹೆಜ್ಜೆಗಳು

 ಏಳು, ಎದ್ದೇಳು!

ಆಗಸವ ನೋಡು,

ಕೊನೆಯಿಲ್ಲದ ಅನಂತನೆಡೆಗೆ ನೋಡು,

ಚೈತನ್ಯದ ಸೊಬಗ ತರುತ್ತಿರುವ ಆಕಾಶದೆಡೆಗೆ ನೋಡು,

ಜಗದ ನೋವುಗಳ ದಾಟಿ ನಡೆ,

ಮೌನ ಸಾಗರವನೇ ಹೊತ್ತು,

ನಿಲ್ಲದೇ ನಡೆಯುವುದ ಕಲಿ,

ಗುರಿ ಮುಟ್ಟುವವರೆಗೂ ಇರಲಿ ಛಲ,

ನಡೆದಷ್ಟೂ ಸಂತೋಷದ  ಭಾವಗಳು ಉಕ್ಕಲಿ,

ನಡೆಯಬೇಕು  ಮೈಲುಗಳ ಧಣಿವರಿಯದೆ,

ಜೊತೆಗೆ ತುಟಿಯ ಮೇಲೆ ನಗುವಿರಲು,

ಎಲ್ಲ ಗೆಲುವುಗಳು, ಎಲ್ಲ ಕದನಗಳು ನನ್ನದೇ!||

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...