Sunday, December 29, 2013

ಕಳೆದ ಆ ದಿನಗಳು ಎಷ್ಟು ಮಧುರ

ಕಳೆದ ಆ ದಿನಗಳು ಎಷ್ಟು ಮಧುರ
ನೆನೆದರೆ ಮನದಲ್ಲಿ ಖಂಡಿತ ಹರಿವುದು ಕಣ್ಣೀರು
ಯಾವ ಬೇಲಿಯೂ ಇಲ್ಲದ,
ಯಾವ ಹಂಗೂ ಇಲ್ಲದ
ಅಂದಿನ ದಿನಗಳೇ ಚಂದ
ಅನುಭವಿಸಿದೆವು ಮುಕ್ತ ಗೆಳೆತನವ
ತಂಟೆ,ತರಲೆ,ನೋವು,ನಲಿವು
ಇಂದು ನೆನೆದರೆ ಮನ ನರಳುವುದು
ಮನದಲ್ಲಿ ಮೂಡುವುದು ಹತಾಶಭಾವ
ಅನಿಸುತ್ತೆ ಕಳೆದ ಆ ದಿನಗಳು ಎಷ್ಟು ಮಧುರ||

ಯಾರಿವಳು? ಯಾರಿವಳು?

ಯಾರಿವಳು? ಯಾರಿವಳು?
ಮನವ ಗೆದ್ದ ಮುಗ್ದೆ ಯಾರಿವಳು?

ಯಾರ ನೋವಿನ ಸ್ವರವೋ?
ಯಾರ ಬಾಳಿನ ಚೈತನ್ಯವೋ?
ಮನೆಯ ಬೆಳಕಾಗಿ ಬಂದವಳು||

ಯಾವ ಜನ್ಮದ ಗೆಳತನವೋ?
ಯಾರ ಬದುಕಿನ ಪಥವೋ?
ಇಂದು ಜೊತೆಯಾಗಿ ನಡೆದಿಹಳು||

ಪ್ರಕೃತಿಯ ಸಂಕೇತವಾಗಿ
ಬಾಳ ಬದುಕಿನ ನಲಿವಾಗಿ
ಇಂದು ನನ್ನ ಜೊತೆಯಾದವಳು||

Saturday, December 28, 2013

ಬಿಟ್ಟುಹೋಗದಿರು ದೂರ

ಬಿಟ್ಟುಹೋಗದಿರು ದೂರ
ಓ ನನ್ನ ನಲ್ಲೆ
ನೀ ನಿಲ್ಲದೆ ಜೀವನ ಬಲು ಭಾರ
ನೀ ನನ್ನ ಶಕ್ತಿ ನಾ ಬಲ್ಲೆ||

ಏಕೋ ಭಯ ಆವರಿಸಿದೆ
ನೀನಿದ್ದರೆ ಏನೋ ನೆಮ್ಮದಿ
ಮನಬೆದರಿದೆ,ಮಂಕಾಗಿದೆ
ನಿನ್ನಾಸರೆ ಬೇಕು ಕಳೆಯಲು ಬೇಗುದಿ||

ನಿನ್ನ ತೆರವು ತಾತ್ಕಾಲಿಕ
ತಿಳಿದಿದೆ ಈ ಮನಕೆ
ಮತ್ತೆ ಬರುವೀ ಈ ಮನಕೆ
ಸುತ್ತ ಓಡಾಡುತಿರೆ ನೀ ಮನಕೆ ಪುಳಕ||

ಬಂದು ಬಿಡು ಗೆಳತಿ
ತಾಳಲಾರೆ ಈ ವಿರಹ
ಈ ವಿರಹದ ನೋವಿಗೆ ನೀನೇ ಒಡತಿ
ನರಳಲಾರೆ ಮತ್ತೆ ಈ ತರಹ||

ಎಲ್ಲಾ ನೋವಿಗೆ ನೀನೇ ಮುಲಾಮು
ನಿನ್ನ ನಗುವಿಗೆ ಚೈತನ್ಯವಿದೆ
ಕತ್ತಲ ಬದುಕಿಗೆ ನೀನೇ ಮುಂಜಾವು
ನಿನ್ನ ಸನಿಹಕೆ ಜೀವನ ಪ್ರೀತಿಯಿದೆ||

ನೀ ಬರುವಿಯೆಂದರೆ ಏನೋ ಪುಳಕ
ಆಲಸ್ಯವೆಲ್ಲಾ ಕೊಡವಿ ನಿಲ್ಲುವುದೀ ಮನ
ನೀನೆಂದರೆ ಹಾಗೆ ಪ್ರೀತಿಯ ಚುಂಬಕ
ಚೈತನ್ಯದ ಚಿಲುಮೆಯಾಗುವುದೀ ಮನ||

ಸರತಿ ಸಾಲು

ಸಿದ್ಧರಾಗೇ ಇದ್ದಾರೆ ತಮ್ಮ ತಮ್ಮ ಸರತಿಗಾಗಿ
ಹುಟ್ಟಿನಿಂದಲೇ ಆರಂಭವಾಗಿದೆ ನಿಂತು ನಿಲ್ಲದಂತೆ
ಯಾರ ವಶಕ್ಕೂ ಸಿಗದೆ ಚಲಿಸುತ್ತಿದೆ
ನಿರಂತರ ಚಲನಶೀಲತೆಯ ಆಶಯದಂತೆ
ಹಗಲು-ರಾತ್ರಿ ಹೇಗೋ ಹಾಗೆ;
ವರುಷಗಳು ಉರುಳುತ್ತಿದೆ ಗೊತ್ತೇ ಆಗದೆ;
ಅದೆಷ್ಟು ಕ್ಯಾಲೆಂಡರ್ ಗಳ ಬದಲಿಸಿದೆಯೋ
ಈ ಕೈಗಳು,ಲೆಕ್ಕ ಇಡಬಹುದಾದಷ್ಟು;
ಬದುಕು ಸಹಜ-ಅಸಹಜಗಳ ರಸಾಯನ;
ಆರಂಭವಾಗುವುದು ನಿಜವಾದರೂ,
ಎಂದು? ಹೇಗೆ?ಎಲ್ಲಿ? ಕೊನೆಗೊಳ್ಳುವುದೋ
ಯಾರಿಗೂ ಗೊತ್ತಿಲ್ಲ.ತಿಳಿದಿಲ್ಲ,ರಹಸ್ಯವಾಗೇ ಉಳಿದಿದೆ;
ಅನಿಶ್ಚತತೆ ಸದಾ ನಮ್ಮನ್ನು ಕಾಡುತ್ತದೆ;
ಎಲ್ಲರೂ ಸರತಿಯಲ್ಲಿ ಇರುವವರೇ!
ಅದು ಹೀಗೆ ಎಂದು ಹೇಳಲು ಬಾರದು,
ನನ್ನ ಸರತಿ ಈಗಲ್ಲವೆನ್ನಲೂ ಆಗದು;
ಭರವಸೆ,ನಂಬಿಕೆಯಲ್ಲೇ ಉಸಿರಾಡುತ್ತೇವೆ
ನಾಳೆ ನಾಳೆಗಳ ಸವೆಸಲು
ಎಲ್ಲವೂ ನಮಗೇ ಇರಲಿ ಎಂಬ ಸ್ವಾರ್ಥವೂ
ಜೊತೆಗೆ ಅಮಿತವಾಗಿ ಬೆರೆತಿದೆ;
ಕಾಯುತ್ತಿದ್ದೇವೆ ನಮ್ಮ ಸರತಿಗಾಗಿ
ಹೋಗುವವರಿಗೆ ದಾರಿ,ಹಾದಿ ಬಿಟ್ಟುಕೊಡುತ್ತಾ.....

ಚಲುವು ಚಲುವೇ!

ಒಳಗೊಂದು ಚಲುವು;
ಹೊರಗೊಂದು ಚಲುವು;
ಎಲ್ಲಿಯಾದರೂ ಇರಲಿ
ಚಲುವು ಚಲುವೇ!
ಆಸ್ವಾದಿಸುವ ಮನದಲ್ಲಿ ಎಲ್ಲವೂ
ನೋಡುವ ಕಂಗಳಲ್ಲೇನಿದೆ?
ಅದೊಂದು ಕಿಟಕಿಯಷ್ಟೇ!

ಇಷ್ಟದ ಬೀಜವೋ?
ಕಷ್ಟದ ಬೀಜವೋ?
ಬಿತ್ತಿ,ಬೆಳೆದು ಹೆಮ್ಮರವಾಗುವುದು
ಮನದ ಈ ಬಯಲಲ್ಲೇ!

ಇಲ್ಲಿ ಎಲ್ಲವೂ ಚಲುವೇ;
ಕುರೂಪವೂ ಚಲುವೇ;
ಅಸಹ್ಯ ಮನೋವಿಕಾರವಷ್ಟೆ.
ಮನದಲ್ಲಿ ಬಿತ್ತಿಹ ಬೀಜ
ಸಿಹಿಯಾದೊಡೆ ಚಲುವು;
ಮನದಲ್ಲಿ ಬಿತ್ತಿಹ ಬೀಜ
ಕಹಿಯಾದೊಡೆ ಕುರೂಪವು;
ಮನದ ಭಾವನೆಯಲ್ಲಡಗಿದೆ ಎಲ್ಲವೂ||

Friday, December 27, 2013

ಕಾರಿರುಳ ರಾತ್ರಿಗಳ ನಿದ್ದೆ

ಕಾರಿರುಳ ರಾತ್ರಿಯಲ್ಲಿ ಏಕಾಂತದಲ್ಲಿ ಕುಳಿತಿರಲು
ಮನದ ಚಿತ್ರದಲೆಲ್ಲಾ ಕಳೆದು ಹೋದ ಆ ದಿನಗಳ
ನೆನಪಿನ ಕಪ್ಪು-ಬಿಳುಪಿನ ಚಲನಚಿತ್ರ;
ಕಳೆದುಹೋಯಿತೆನ್ನಲೋ?
ಇಲ್ಲ,
ಕಳೆದುಕೊಂಡೆನೆನ್ನಲೋ?
ಎರಡೂ ಒಂದೇ ಅರ್ಥ ನೀಡುವುದೆನಗೆ;
ಇದ್ದದ್ದಾದರೂ ಏನು ಎಂಬ ಪ್ರಶ್ನೆಗೆ
ಇದ್ದರೆ ತಾನೆ ಕಳೆದುಕೊಳ್ಳಲು ಎಂಬ ಉತ್ತರ,
ದರ್ಶಿನಿಯ ಊಟದಂತೆ ಸಿದ್ಧವಾಗಿದೆ;
ಏನೇ ಆಗಲಿ,
ಕಳೆದುಕೊಂಡಾಗಿನ ಸುಖ,
ಪಡೆಯುವುದರಲ್ಲಿ ಇಲ್ಲ
ಎಂಬ ಸತ್ಯದ ದರ್ಶನವಾಗಿದ್ದು
ಅದೇ ಕಾರಿರುಳ ರಾತ್ರಿಗಳ ನಿದ್ದೆಯಿಲ್ಲದ
ಪಿಶಾಚಿಯಂತೆ ನರಳುವಾಗ......

Thursday, December 26, 2013

ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ

ದೇಶದ ಶಕ್ತಿಯ ಪ್ರತಿರೂಪವೇ
ಮಿಂಚಿನಂತ ಮಾತಿನ ಗಣಿಯೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಮಾತಿನ ಲಯದಲ್ಲೇ ಮೋಡಿಮಾಡುವ ಮಾಂತ್ರಿಕನೇ
ಜಗದ ಕಣ್ಣನ್ನೆಲ್ಲಾ ಸೂರೆಗೊಂಡ ಮೋಡಿಗಾರನೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಭಾರತದ ಆತ್ಮಸ್ಥೈರ್ಯದ ಸಂಕೇತವೇ
ಶತೃಗಳ ಸಿಂಹಸ್ವಪ್ನವಾದ ಕಾರ್ಗಿಲ್ಲಿನ ವೀರಾವೇಶವೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಪೋಖ್ರಾನಿನ ಅಣುಶಕ್ತಿಯ ಶಕ್ತಿಯೇ
ಭಾರತೀಯತೆಯ ಬೆಳಗಿದ ಪ್ರದೀಪವೇ
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

ಎಷ್ಟು ಹಾಡಿ ಹೊಗಳಿದರೂ ಸಾಲದು ದೊರೆಯೇ
ನೂರು ವರುಷ ಬಾಳೆಂದು ಪ್ರಾರ್ಥಿಸುವೆವು ಓ ದೇವರೇ
ಭಾರತಮಾತೆಯ ಹೆಮ್ಮೆಯ ಪುತ್ರ ನೀ ಅಟಲ್
ಹಾರೈಸುವೆವು ನಿನಗೆ ಜನ್ಮದಿನದ ಶುಭಾಷಯ||

(ನಮ್ಮ ನೆಚ್ಚಿನ ನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬದ
ದಿನಕ್ಕಾಗಿ ಈ ಕವನ ರಚಿಸಿದ್ದು.)

Tuesday, December 24, 2013

ಏಕೆ ಹುಟ್ಟಿದೆ ಜೀವವೇ?

ಏಕೆ ಹುಟ್ಟಿದೆ ಜೀವವೇ?
ಏಕೆ ಈ ನೆಲಕ್ಕೆ ಬಂದೆ?
ಕಾರಣವಿಲ್ಲದೆ ಈ ಜನ್ಮವೇತಕ್ಕೆ ಜೀವವೇ?

ಬಂದ ಕಾರಣವೇ ಬೇರೆ
ಮೋಹ ಮಾಯೆಗಳ ಬಂಧಿಯಾಗಿ
ಕಾರಣವನೇ ಮರೆತು ಬದುಕುವುದ್ಯಾತಕೋ?

ಬಂಧು ಬಳಗದ ನಿಮಿತ್ತ ಪ್ರೇಮ ಬಂಧನವೋ
ಹೆಂಡತಿ ಮಕ್ಕಳ ತೀರದ ವ್ಯಾಮೋಹವೋ
ಕೊನೆಯಿಲ್ಲದ ಮೋಹಕ್ಕೆ ಬೇಯುತಿರುವೆ ಏಕೆ ಜೀವವೇ?

ಬಿಡಿಸಿಕೊಳ್ಳಲಾರದ ಬಂಧನವೋ
ಕ್ಷಣಮಾತ್ರದಲ್ಲೇ ಕಳಚುವ ನಿನ್ನ ಪರಿಯೋ
ಯಾವುದು ಸತ್ಯವೋ? ಯಾವುದು ಮಿಥ್ಯವೋ?

ಬಂದ ಕಾರಣವನೇ ಮರೆಯುವ ನಾವು
ಎಷ್ಟು ವರುಷ ಜೀವ ಸವೆಸಿದರೆ ಏನು
ನಿನ್ನ ಅಣತಿಯಂತೆ ನಡೆವ ನಾವು ನಿನ್ನ ಕೈಗೊಂಬೆಗಳೇ!

ಸಲಹೆಂದು ಬೇಡಿಕೊಂಬೆವು
ಬೆಳಕನಿತ್ತು ದಡವ ಸೇರಿಸೋ
ಎಂಬ ಅರಿಕೆ ನಿನ್ನಲ್ಲಿ ಓ ಜೀವದ ಒಡೆಯನೇ!

Monday, December 23, 2013

ಮತ್ತೆ ಬಾರದ ದಿನಗಳೇ......

ಮತ್ತೆ ಬಾರದ ದಿನಗಳೇ
ಎತ್ತ ಹೋದಿರಿ ಬಾರದೇ
ನೆನೆಯುತ ಕಾದಿಹೆನು
ಕಣ್ಣೀರ ಹರಿಸಿ ಬೇಡಿಹೆನು||

ಮತ್ತೆ ಮತ್ತೆ ನೆನೆಯುತ
ನಿದ್ದೆ ಜಾರಿತು ಬೆದರುತಾ
ಹೋದರೆಲ್ಲಿಗೆ ಮತ್ತೆ ಬಾರದೆ
ಯೋಚನೆ ಹತ್ತಿದೆ ಈ ಬಾಳಿಗೆ||

ಕಳೆದು ಹೋಯಿತು,ಕಳೆದು ಹೋಯಿತು
ಎಷ್ಟು ಹುಡುಕಿದರೂ ಸಿಗದೆ ಹೊರಳಿತು
ಮನದ ಕತ್ತಲಲ್ಲಿ ಪ್ರಶ್ನೆತೋರಿ
ಮಿಂಚಿನಂತೆ ಬೆಳಕತೋರಿ ಮಾಯವಾಯಿತು||

Wednesday, December 18, 2013

ಗೆಳೆತನ

ಕೆಲವು ಸಲ ನಾವು ಶಕ್ತಿ ಮೀರಿ ಹೊಡೆದಾಡುತ್ತೇವೆ
ಎಲ್ಲಾ ಬಾಗಿಲುಗಳನ್ನು ಮುಚ್ಚುತ್ತೇವೆ
ಏನೇ ಆದರೂ ಕೊನೆಗೆ ನಾವು ಗೆಳೆಯರೇ.....
ಅದೇ ಕೊನೆಯವರೆಗೂ ಬೆಲೆ ಇರುವಂತಹುದು
ಅದಕ್ಕೆ ಬೆಲೆ ಕಟ್ಟಲಾಗದೆಂದು
ಲೋಕದಲ್ಲಿ ಅದಕ್ಕೆ ಗೆಳೆತನವೆನ್ನುವರು ಗೆಳೆಯ;

ಹಲವು ಸಲ ನಮ್ಮ ಗೆಳೆತನವ
ಪರೀಕ್ಷಿಸುವ ಪರೀಕ್ಷೆಗಳು ನಡೆದುಹೋಗುತ್ತವೆ
ಆ ಪರೀಕ್ಷೆಗಳಿಗೆ ಕೊನೆಯಿದೆ
ಆದರೆ ನಮ್ಮ ಗೆಳೆತನಕ್ಕೆ ಕೊನೆಯಿಲ್ಲ ಗೆಳೆಯ;

ನಾವು ದೊಡ್ಡವರಾಗುತ್ತೇವೆ;
ನಾವು ಹಳಬರಾಗುತ್ತೇವೆ;
ನಾವು ಮುದುಕರಾಗುತ್ತೇವೆ;
ಮಾಂತ್ರಿಕತೆ ಏನು ಗೊತ್ತಾ ಗೆಳೆಯ
ಈ ನಮ್ಮ ಗೆಳೆತನಕ್ಕೆ ಮುಪ್ಪೆಂಬುದಿಲ್ಲ ಗೆಳೆಯ;

Tuesday, December 17, 2013

ಪ್ರಾರ್ಥನೆ

ಒಮ್ಮೆ ಆ ದೇವರ ಪ್ರಾರ್ಥಿಸಿದೆ
ಓ ದೇವರೇ ಹೂವೊಂದನ್ನು ನೀಡೆಂದು
ಆತ ಕರುಣಿಸಿದ ಹೂವಿನ ಬೊಕ್ಕೆಯನ್ನೇ ನೀಡಿದ
ಮತ್ತೆ ಕೇಳಿದೆ ಒಂದು ನಿಮಿಷ ಕಾಲ ನೀಡು
ನಿನ್ನ ಕಣ್ಣುತುಂಬ ತುಂಬಿಕೊಳ್ಳಬೇಕೆಂದೆ
ಆತ ಕರುಣಿಸಿದ ಒಂದು ದಿನವನ್ನೇ ನೀಡಿದ
ಅವನ ಕರುಣೆ ಅಪಾರ
ನಾನೋ ದುರಾಸೆಯ ಮುದ್ದೆ
ಮತ್ತೆ ಬೇಡಿಕೆಯಿಟ್ಟೆ, ಪ್ರೀತಿಯ ಬೇಡಿದೆ
ಅದನ್ನೂ ಮುಗುಳ್ನಗುತ್ತಾ ನೀಡಿದ
ಮತ್ತೆ ಅತಿಶಯದಿ ಬೇಡಿದೆ
ದೇವ ಪ್ರೀತಿಯ ದೇವತೆಯ ಕರುಣಿಸೆಂದೆ
ಕರುಣಾಳು ಕನಿಕರಿಸಿ ನಿನ್ನನ್ನೇ ನನಗೆ ನೀಡಿದ.

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...