Thursday, November 12, 2015

ದೀಪಾವಳಿ

ರಾತ್ರಿಯಾಗಸದಲ್ಲಿ ತಾರೆಗಳ ಎಣಿಸುತ್ತಿದ್ದೇನೆ
ನಾಳೆಗಳ ಭವಿಷ್ಯವ ತಿಳಿಯಲು
ಹಿತ,ಅಹಿತ,ಲಾಭ,ನಷ್ಟಗಳು ಎಣಿಸುತ್ತಿದ್ದೇನೆ
ಒಂದೊಂದೇ ತಾರೆಯ ಮಿಂಚುವ ವೇಗದಿ
ಏನು ಹೇಳುವುದದು?ಕಾಲಹರಣವಲ್ಲದೆ ಮತ್ತೇನು?
ಆದರೂ ಏನೋ ಹಿತವಿದೆ ಅದರಲ್ಲಿ!
ದೀಪಾವಳಿಯ ಬೆಳಕಿನ ಮಿಂಚು ಆಗಸದಲ್ಲಿ
ಏನೋ ಹೊಸತನ ದಾಳಿಯಿಟ್ಟಂತಿದೆ
ಹೊಗೆ,ಶಬ್ದ ಮಾಲಿನ್ಯ ಎಲ್ಲದರ ಹೊರತಾಗಿಯೂ
ಮಕ್ಕಳಲ್ಲಿ,ಹಿರಿಯರಲ್ಲಿ ಏನೋ ಚ್ಯೆತನ್ಯ ತುಂಬಿದೆ
ನಾಳೆಗಳ ಎಣಿಸಿ ಬಳಲಿದವನು ನಾನು
ಹಬ್ಬ,ಆಚರಣೆ ಸಂಭ್ರಮ ಪಟ್ಟವರು ಅವರು
ಮಿನುಗುವ ನಕ್ಷತ್ರಗಳ ನೋಡುತ್ತಾ ಕಳೆದು ಹೋದೆ
ಹಳೆಯದು ಜಾರಿ ಹೊಸದೊಂದು ದಿನ ಕಣ್ಣುಬಿಟ್ಟಿತು//

Wednesday, November 11, 2015

ತಲ್ಲಣಗಳ ಕದನ


ಮುಖ ನೋಡಿ ಮನುಷ್ಯರ ಅಳೆವವನಲ್ಲ ನಾನು
ಆದರೂ ಅರಿಯಬಲ್ಲೆ ಮನದೊಳಗಿನ ಕದನ
ಗೆಳೆಯ ಹೊರಹಾಕು ಮನದೊಳಗಿನ ತಲ್ಲಣಗಳ
ಹಾಗೆ ಮನದೊಳಗೆ ಬಚ್ಚಿಟ್ಟರೆ ಹಾಳು ನೆಮ್ಮದಿ
ಕಣ್ಣೀರ ಸುರಿಸಬೇಡ ಮನದ ಶಾಂತಿ ಹಾಳಾದರೆ
ನಲ್ವತ್ತು ವಸಂತಗಳ ಅನುಭವಿಸಿದ ರಸಿಕ ನೀನು
ಆದರೂ ಮನದೊಳಗೆ ತಲ್ಲಣವೇಕೆ ನೀ ಬಲ್ಲೆಯಾ?
ಅನುಭವಗಳ ಗುಲಾಮನಾದೆಯಾ ನೀನು?
ಏನೇ ಆದರೂ ಹೋರಾಡಬಲ್ಲೆ , ಯೋಧ ನೀನು
ಯುದ್ಧದಲ್ಲಿ ಅರಿಗಳೊಡನೆ ಹೋರಾಡುವುದು ಸುಲಭ
ಮನದ ಮಿತ್ರನೋ ? ವ್ಯೆರಿಯೋ? ಹೋರಾಡು!
ರುಧಿರ ಹರಿಯದೆ ನೀನು ಶವವಾಗುವೆ ಇಲ್ಲಿ
ಜವನ ಕೈವಶ ನೀನು ಹೋರಾಟವಿಲ್ಲದೆ
ಸೌಂದರ್ಯವಶನಾದವನಿಗೆ ಹಸಿವೆಯೆಲ್ಲಿ?
ನಿನ್ನ ಮನದ ಆಟ ಬಲ್ಲೆ ಹೇಳು ನಿರಾಳನಾಗು

Tuesday, November 10, 2015

ಅರಿವಿನ ಹಣತೆ

ದೀಪ ಹೊತ್ತಿಸೋಣ ಗೆಳೆಯ
ಬಾ ದೀಪಾವಳಿಯ ಈ ದಿನ 
ದೀಪ ಹೊತ್ತಿಸೋಣ ,ದೀಪ ಹೊತ್ತಿಸೋಣ
ಮನ ಮನದ ನಡುವೆ ಹೊತ್ತಿರುವ
ಅಪನಂಬಿಕೆಯ ದ್ವೇಷದ ಜ್ವಾಲೆಯ ಆರಿಸೋಣ
ನೋಡಲ್ಲಿ ಆಕಾಶದಲ್ಲಿ ಬಣ್ಣ ಬಣ್ಣಗಳು
ಮಿಂಚುತಿದೆ ಸಂತೋಷದ ಆಕಾಶದ ಬುಟ್ಟಿ
ಹೊಂಚುಹಾಕಿ ಕುಳಿತಿದೆ ವಿಷಬೀಜ ಬಿತ್ತುವ,
ಅವಕಾಶವಾದಿ ದೊಡ್ಡ ದಂಡುಕೂಟ
ಶಾಂತಿ ಕದಡುವ ಹುನ್ನಾರ ನಡೆಸುವವರು
ವ್ಯೆಷಮ್ಯ ಬಿತ್ತುವ ತವಕದವರು
ಮನ ಮನದ ನಡುವೆ ವಿಷದ ಬೀಜ ಬಿತ್ತುವ ಅಕ್ಷರ ಭಯೋತ್ಪಾದಕರಿಹರು ಇಲ್ಲಿ ಬಹಳ
ಮನದ ಹಣತೆಯ ಆರಿಸಲು ಸಂಚು ರೂಪಿಸಿ
ಮೌಢ್ಯದ ಬೆಂಕಿ ಹೊತ್ತಿಸ ಹೊರಟ ದಂಡಿಹುದಿಲ್ಲಿ
ಅರಿವಿನ ಹಣತೆಯ ಉಡುಗೊರೆ ನೀಡೋಣ
ಅರಿವಿನ ಬೆಳಕ ಹೊತ್ತಿಸೋಣ ಗೆಳೆಯ
ಹೊಸ ಮನ್ವಂತರದ ದಿಶೆಗೆ ಮುನ್ನುಡಿ ಬರೆಯೋಣ
ದೀಪಾವಳಿಯ ಈ ದಿನ ಮನಸ್ಸಿನಲ್ಲಿ
ಅರಿವಿನ ಹಣತೆಯ ಹಚ್ಚೋಣ
ಬಾ ಗೆಳೆಯ ಬಾ ದೀಪ ಹಚ್ಚೋಣ//

Sunday, November 8, 2015

ನೀನಿರುವುದ ಅರಿತಿರಲಿಲ್ಲ

ಎಲ್ಲೋ ಅವಿತಂತೆ ಮಾಡಿ ಕಣ್ಣ ಮುಚ್ಚೆ ಕಾಡೆಗೂಡೆ ಮಾಡಿ ಎಲ್ಲಿರುವೆ ಹುಡುಕು ಎಂಬಂತೆ ಕಣ್ಣು ಕಟ್ಟಿ ಬಿಟ್ಟಿರುವೆ ನೀನು,ಕಟ್ಟಿರುವ ಕಣ್ಣು ಬಿಚ್ಚಿದ್ದರೂ
ಕಣ್ಣ ಮುಂದೆಯೇ ನೀನಿರುವುದ ಅರಿತಿರಲಿಲ್ಲ
ನೀ ಎಲ್ಲೋ ಅಲ್ಲ ನಮ್ಮ ಮುಂದೆಯೇ ಇರುವುದ ಅರಿತಿರಲಿಲ್ಲ
ನಿನ್ನ ಕಾಣಲೆಂದು ಎಲ್ಲಿಂದಲೋ ಬರುವವರ
ನಿಷ್ಥೆಯಲ್ಲಿ ನೀನಿರುವುದ ಅರಿತಿರಲಿಲ್ಲ
ನಿನ್ನ ಕಾಣಲೆಂದು ದೇಹವ ದಂಡಿಸಿ
ಸುರಿಸುವ ಬೆವರಹನಿಯಲ್ಲಿ ನೀನಿರುವುದ ಅರಿತಿರಲಿಲ್ಲ
ಆಚಾರ ,ವಿಚಾರಗಳ ತಿಳಿಯದೆ ಸಂಪೂರ್ಣ ಶರಣಾದವರ ಶರಣಾಗತಿಯಲ್ಲಿ ನೀನಿರುವುದ ಅರಿತಿರಲಿಲ್ಲ
ವಿದ್ಯೆ,ಬುದ್ಧಿ,ಸಂಪತ್ತುಗಳ ಹೊಂದಿದ್ದರೂ ಎಲ್ಲವ ಹೊರತಾಗಿಯೂ  ಭಕ್ತಿ,ವಿವೇಕದಲ್ಲಿ ನೀನಿರುವ ಅರಿವಿರಲಿಲ್ಲ
ಸಾಧಕರ ಸಾಧನೆಯ ದಾರಿಯಲ್ಲಿ ನೀನಿರುವುದ ಅರಿತಿರಲಿಲ್ಲ
ಹೆಜ್ಜೆಯಿಡುವ ಪ್ರತಿ ಹೆಜ್ಜೆಯಲ್ಲಿ ನೀನಿರುವುದ ಅರಿತಿರಲಿಲ್ಲ
ಜೀವನದ ಪ್ರತಿ ಕ್ಷಣದಲ್ಲೂ ನೀ ಅವಿರುವುದ ಅರಿತಿರಲಿಲ್ಲ
ಪ್ರಕೃತಿಯ ಹಸಿರು ಹಾಸಿನಲ್ಲಿ, ಅಲ್ಲೆ ಬೆಟ್ಟದ ಮಡಿಲಲ್ಲಿ ಬಿದ್ದಿರುವ ಕಲ್ಲಿನಲ್ಲಿ ನೀ ಅವಿತಿರುವುದ ಅರಿತಿರಲಿಲ್ಲ
ನಿನ್ನದೇ ಮೂರ್ತಿಯ ಕಂಡು ಭಾವನೆಗಳ ಮನದಲ್ಲಿ ತುಂಬಿಕೊಂಡು ಕಣ್ಣಲ್ಲಿ ಸುರಿಸುವ ಕಣ್ಣೀರಿನಲ್ಲಿ ನೀ ಅವಿತಿರುವುದ ಅರಿತಿರಲಿಲ್ಲ

ಮನದ ಭಾರ

ಮನದ ಮಾತುಗಳ ಹೇಳಿಕೊಳ್ಳೋಣವೆಂದರೆ
ಏನಿದು ಗೆಳೆಯ ನೂರೆಂಟು ಅಡ್ಡಿ ಆತಂಕಗಳು
ಮನಸ್ಸು ಹಗುರವಾಗಿಸೋಣವೆಂದರೆ
ಮನದ ಭಾರ ಹೆಚ್ಚಿತ್ತಿದೆಯೆ ಹೊರತು ಇಳಿಯುತ್ತಿಲ್ಲ
ನೋವಿನ ನಡುವೆ ಹೊರಳಾಡುವುದೇ ಸುಖವೆನಿಸಿದೆ
ಸಂತೋಷವೇನೆಂದು ಮರೆತು ಹೋಗಿದೆ
ಜೀವನಚಕ್ರ ಸಲೀಸಾಗಿ ಹೊರಳದೆ
ತ್ರಾಸದಾಯಕವಾಗಿದೆ ಮೆಲ್ಲಮೆಲ್ಲನೆ
ಏನೋ ಆತಂಕ ! ಏನೋ ಬೇಸರ!ಏನೋ ಹೇವರಿಕೆ!
ಮರಳಿಬಾರದ ದಿನಗಳ ನೆನಹುಗಳು ಅಣಕಿಸುತ್ತಿದೆ
ಅಟ್ಟಹಾಸದಿಂದ ನಗುವ ಕಾಲ
ಅಹಂಮಿನ ಕಾಲು ಮುರಿದಿದೆ ನೋವ ಮರೆಸುತ್ತಾ
ಇದೇ ಜೀವನವೆಂಬ ಸಮಾಧಾನದ ತೆವಲು ನಗೆ
ಬೀರುತ್ತಾ ಎಲ್ಲವನ್ನೂ ಅನುಭವಿಸುತ್ತಾ ತೆವಳಿದೆ//

ಹರಿದ ನಾಲಗೆ

ನೋಡಿದೆಯಾ,ಕೇಳಿದೆಯಾ ಗೆಳೆಯ
ಎತ್ತರದ ಸ್ಥಾನದಲ್ಲಿರುವವರ ಮಾತುಗಳ
ಎಂಥ ಸ್ಥಿತಿ ಬಂತು ನಮ್ಮ ನಾಡಿಗೆ
ಇಷ್ಟೊಂದು ಬರವೇ ಬೌಧ್ದಿಕತೆಗೆ?
ನಾಡಿನ ಸ್ಥಾನಮಾನ, ಗೌರವವೆಲ್ಲಾ
ಮಣ್ಣುಪಾಲಾಗಿಸುತ್ತಿದ್ದಾರೆ ಈ ಮೂಢರು
ನಾಲಗೆಯ ಹರಿಬಿಡುವರು ಎಲ್ಲೆಯಿಲ್ಲದೆ
ಹಣ,ಅಧಿಕಾರ,ಸ್ಥಾನಮಾನದ ಅಹಂಮಿನಿಂದ
ಎಷ್ಟುದಿನ ನಡೆವುದು ಇವರ ಆಟ?
ನಾಗರೀಕತೆ ಬೆಳೆದಂತೆ ಎತ್ತಣದತ್ತ ನಮ್ಮ ಪಯಣ?
ಯಾವುದರ ಅಟ್ಟಹಾಸವಿದು ಬಲ್ಲೆಯೇನು?
ಯಾರು ಈ ನಾಟಕದ ಸೂತ್ರಧಾರ?
ಎಲ್ಲಬಲ್ಲವ ನೀನು ಸುಮ್ಮನೇ ನೋಡುತಿಹೆ
ತಿಳಿದೂ ತಿಳಿಯದವನಂತೆ, ಏನಿದರ ಗುಟ್ಟು?

ನಮ್ಮ ನಾಡು

ಇದು ನಮ್ಮ ನಾಡು
ಇದು ನಮ್ಮ ನಾಡು
ಇದೇ ಕನ್ನಡ ನಾಡು
ಕನ್ನಡಿಗರ ನಾಡು
ಶಿಲ್ಪಕಲೆಗಳ ನಾಡು
ಶ್ರೀಗಂಧದ ಬೀಡು
ಕಬ್ಬಿಗರ ಬೀಡು
ಕಾವ್ಯರಸಿಕರ ಬೀಡು
ಶಾಂತಿಪ್ರಿಯರ ಬೀಡು
ದಾಸ,ಶರಣ,ಗಾನ ಗಂಧರ್ವರ ಬೀಡು
ಇದು ನಮ್ಮ ನಾಡು
ಕನ್ನಡಿಗರ ಬೀಡು//

Saturday, October 31, 2015

ಕೃಷ್ಣಾ ಕೃಷ್ಣಾ,ಕೃಷ್ಣಾ,ಕೃಷ್ಣಾ

ಕೃಷ್ಣಾ,ಕೃಷ್ಣಾ
ಏನ ಹೇಳಲಿ ಕೃಷ್ಣಾ
ಬೇಡಲಾರೆ ನಿನ್ನ ಕೃಷ್ಣಾ
ಬಿಡಲಾರೆ ನಿನ್ನ ಕೃಷ್ಣಾ
ಮರೆಯಲಾರೆ ನಿನ್ನ ಕೃಷ್ಣಾ
ತೊರೆಯಲಾರೆ ನಿನ್ನ ಕೃಷ್ಣಾ
ಇರಲಾರೆ ನಿನ್ನ ಬಿಟ್ಟು ಕೃಷ್ಣಾ
ಮೋಹ,ವ್ಯಾಮೋಹಗಳಲಿ ಕಟ್ಟಬೇಡ ಕೃಷ್ಣಾ
ಎಲ್ಲವೂ ನಿನ್ನದೇ,ನಿಮಿತ್ತ ನಾ ಬಲ್ಲೆ ಕೃಷ್ಣಾ
ಸಕಲ ನಾಟಕ ಸೂತ್ರದಾರ ನೀ ಕೃಷ್ಣಾ
ಮನದಲಿ ಸದಾ ನಿನ್ನ ನಾಮಸ್ಮರಣ ನೆಲೆವಂತೆ
ಮಾಡು ಕೃಷ್ಣಾ
ಮುಕ್ತಿಯನಲ್ಲದೆ ಬೇರೇನೂ ಬೇಡೆನು ಕೃಷ್ಣಾ
ಶರಣಾಗಿಹೆನು ನಿನಗೆ ಕೃಷ್ಣಾ
ರಕ್ಷಿಸೆನ್ನನು ಕೃಷ್ಣಾ
ಕೃಷ್ಣಾ,ಕೃಷ್ಣಾ,ಕೃಷ್ಣಾ//

Thursday, October 29, 2015

ಕನ್ನಡಿ

ಕನ್ನಡಿಯ ನೋಡು ಬಾ ಗೆಳೆಯ,
ಆಧ್ಯಾತ್ಮದ ಸಕಲ ತತ್ವಗಳೂ ಕಂಡು 
ಕಾಣದ ಹಾಗೆ ನೆಲೆಗೊಂಡಿದೆ,ಮನಸ್ಸಿನ ಪ್ರತಿಬಿಂಬವೇ ಅದು
ಪ್ರತಿದಿನ ಒಮ್ಮೆಯಾದರೂ ಅದರೊಡನೆ
ಮೌನವಾಗಿ ಮಾತನಾಡು,ನಿನ್ನೊಳಗಿನ ಭಾವಗಳೆಲ್ಲಾ
ನಿನ್ನ ವ್ಯಕ್ತಿತ್ವದೊಡನೆ ಹೇಗೆ ಬೆರೆತಿವೆ ನೋಡಲ್ಲಿ
ಅವುಗಳ ಸಮಸ್ಯೆಗಳ ಮನವಿಟ್ಟು ಆಲಿಸು
ನಿನ್ನ ನೀ ಸರಿಪಡಿಸಿಕೊಳ್ಳಲು ಇದೇ ಸರಿಯಾದ ಮಾರ್ಗ
ಆಲಿಸು ನಿನ್ನ ಮನದ ಆಲಾಪನೆಯ,ಧ್ವನಿಗೂಡಿಸು ಅದರೊಟ್ಟಿಗೆ
ಮನದ ಕ್ಲೇಶಗಳೆಲ್ಲಾ ದಿಕ್ಕುಪಾಲಾಗಿ ಓಡುವುವು
ಆತ್ಮ ಧೀ ಶಕ್ತಿ ನಿನ್ನಲ್ಲಿ ಅವತರಿಸುವುದು,
ಸಾಧನೆಯ ಶಿಖರ ಅದೋ ನೋಡಲ್ಲಿ 
ಜಾರಿ ನಿನ್ನ ಕಣ್ಣಮುಂದೆಯೇ  ಪ್ರತ್ಯಕ್ಷವಾಗಿದೆ ಒಳಗಣ್ಣ ತೆರೆ ,ತೇಜಸ್ಸನ್ನು ಅಪ್ಪು
ನಿನ್ನವ್ಯಕ್ತಿತ್ವವ ನೀನೇ ರೂಪಿಸಿಕೋ ಗೆಳೆಯ//

Sunday, October 25, 2015

ಏನು ಗಳಿಸಿದೆ ಇಷ್ಟು ವರುಷಗಳಲಿ?

ಏನು ಗಳಿಸಿದೆ ಇಷ್ಟು ವರುಷಗಳಲಿ?
ವಿದ್ಯೆ,ಕೆಲಸ,ಹಣ,ಹೆಂಡತಿ,ಮಕ್ಕಳು
ಸಂಪತ್ತು,ಗೆಳೆತನ ಏನಿಲ್ಲ? ಹೇಳು ಗೆಳೆಯ!
ಆಸೆ ಪಡುತ್ತಲೇ ಬೇಕು ಬೇಕೆಂದಿದ್ದೆಲ್ಲಾ
ಪಡೆಯುತ್ತಲೇ ಹೋದೆ ಒಂದು ಒಂದಾದನಂತರ
ಮೊದಲು ಪಡೆದದ್ದು ಈಗ ಕಸವಾಗಿದೆ
ನಂತರ ಪಡೆದದ್ದರ ಗತಿಯೇನು? ನೀನೇ ಹೇಳು
ಎಲ್ಲವೂ ಕೈಗೆಟುಕುತ್ತಲೇ ಇದೆ,ಹಾತೊರೆದಿದೆ ಮನ
ನೆಮ್ಮದಿಯ ಹುಡುಕುತ್ತಲೇ ಇದ್ದೇನೆ ವಸ್ತುಗಳಲಿ
ಅದು ಬೇಕು!ಇದು ಬೇಕು! ಬೇಕು ಬೇಕುಗಳ ಭಿಕ್ಷುಕ
ಯಾವ ಸಂಪತ್ತಿನಲಿ,ಯಾವ ವಸ್ತುಗಳಲಿ
ಆ ತೃಪ್ತಿ ಅಡಗಿದೆಯೋ ಹುಡುಕಾಟದಲ್ಲಿ ಅನ್ವೇಷಕ
ಎಲ್ಲೋ ಲೋಕದ ವಸ್ತುಗಳಲಿ,ಸಂಪತ್ತುಗಳು ಹುಡುಕಬೇಡ
ತೃಪ್ತಿ,ಶಾಂತಿ,ನೆಮ್ಮದಿ ಮನದಲ್ಲೇ ಅಡಗಿದೆ ಆಗು ನೀ ಸಂಶೋಧಕ //

Saturday, October 24, 2015

ಕಾಪಾಡು ಗೆಳೆಯಾ...

ಪಾಠ ಕಲಿತೆ ಗೆಳೆಯ ಎಂಥ ಪಾಠ ಅಂತೀಯ
ಉಪಕಾರ ಮಾಡಲೋಸುಗ
ಸಮಸ್ಯೆಯ ಹೆಬ್ಬಾವಿಗೆ ಸಿಲುಕಿದ ಹಾಗೆ
ಅಬ್ಬಾ ಎಂಥ ಪಟ್ಟು ಹೆಬ್ಬಾವಿನದು
ನಮ್ಮ ತೆವಲಿಗೆ ಬೀಳುವ ನಾವು
ಸ್ವಾರ್ಥಸಾಧನೆಗೆ ನಿಂತರೆ ಏನು ಕಥೆ?
ಏನು ಬಯಸಲಿಲ್ಲ?ಸಹಾಯವಾಗಲಿ
ಎಂಬ ಉದ್ದೇಶವಲ್ಲದೆ ಬೇರೆ ವ್ಯಾಮೋಹವಿಲ್ಲ
ನಿಸ್ವಾರ್ಥ ನಿಲುವಿಗೇ ಹೆಬ್ಬಾವಿಗೆ ಸಿಲುಕಿ
ಬಿಡಿಸಿಕೊಳ್ಳುವ ಪರಿ ತ್ರಾಸದಾಯಕ
ಅಬ್ಬಬ್ಬಾ ಸಿಲುಕಿ ಹೈರಾಣಾದೆ
ಸಾಕಪ್ಪಾ ಸಾಕು ಈ ದೊಂಬರಾಟ
ಕೊನೆ ತೋರಿಸಯ್ಯಾ ಬಳಲಿದೆ ಈ ಮನ
ಮತ್ತೊಮ್ಮೆ ಸಿಲುಕಲಾರೆನಯ್ಯಾ ಕಾಪಾಡು ಗೆಳೆಯಾ...

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...