ಲೋಕ ವ್ಯಾಪಾರ



ವ್ಯಾಪಾರ  ನನ್ನ ಕಸುಬು ಜೀವನೋಪಾಯಕ್ಕೆ ;
ಮಾರಲಿದೆ ಅನೇಕಾನೇಕ ಮುತ್ತು, ಹವಳಗಳ ಹಾರಗಳ;
ಬಹಳ ವರ್ಷಗಳಿಂದ ನಡೆದಿದೆ ಈ ವ್ಯಾಪಾರ;
ಮುಗಿಸುವುದಕ್ಕೆ ಕುಳಿತಿಹೆನು ಅಂಗಡಿಯ ತೆರೆದು;
ದೇಹದಲ್ಲಿ ಮುಪ್ಪು,ಲೋಕವ್ಯಾಪಾರವ ಮುಗಿಸಲು ತವಕವಿದೆ;
ಕೈಯಲ್ಲಿ ಎಣಿಸುತ್ತಿದ್ದೇನೆ, ಮುಗಿಯುವುದೆಂದಿಗೆ ಈ ವ್ಯಾಪಾರ?
ಹುರುಪಿಲ್ಲ ದೇಹದಲ್ಲಿ ಯೌವ್ವನದಲ್ಲಿದ್ದಂತೆ;
ಜೀವನ ಪ್ರೀತಿಯಿದೆ ಹಿಂದೆಂದಿಗಿಂತಲೂ ಹೆಚ್ಚು;
ಅನುಭವದಿಂದ ತನುಮನಗಳೆರಡೂ ಹಣ್ಣಾಗಿದೆ;
ಈ ಲೌಕಿಕ ವ್ಯಾಪಾರ ಹೊಟ್ಟೆ-ಬಟ್ಟೆಗಷ್ಟೇ! ಲಾಭಕ್ಕಲ್ಲ;
ಗಂಟುಮೂಟೆ ಕಟ್ಟಿಯಾಗಿದೆ, ಅವನ ಕರೆಗೆ ಕಾಯುತಿಹೆನು;
ಬನ್ನಿ,ಬನ್ನಿ ನೀವು ನನ್ನ ಬಳಿ  ವ್ಯಾಪಾರ ಮಾಡಿ;
ಕೊಳ್ಳಿ ,ಕೊಳ್ಳಿ ಅಮೂಲ್ಯ ಹಾರಗಳ ತುಲನೆ ಮಾಡಿ ;
ಹಣದ ಲಾಭದ ಚಿಂತೆಯಿಲ್ಲ, ನಾಳೆಯ ಹಂಗಿಲ್ಲವೆನಗೆ;
ನಾಳೆ ಎನ್ನದಿರಿ! ನಾಳೆಯೆನ್ನವುದರಲ್ಲಿದೆ ನನಗೆ ಅನುಮಾನ;
ಮನದೊಳು ಧ್ಯಾನ, ಒಂದು ದಿನದ  ವ್ಯಾಪಾರ ಮುಗಿಸಲು ;
ಇನ್ನೊಂದು ಲೋಕ ವ್ಯಾಪಾರವ ಮುಗಿಸಲು;
ನಾನು ಕಾಯುತಿಹೆನು; ನಾನು ಕಾಯುತಿಹೆನು;
ಅವನು ಬರುವನೋ? ಇಲ್ಲ, ಇವನು  ಬರುವನೋ?
ಯಾರು ಮೊದಲು ಬರುವರೋ ನಾ ಕಾಣೆ!

ಕರುಣಾ ಸಾಗರ

 ಎಲ್ಲ ನೀನು ಬಲ್ಲೆ ಎಂದು ನನಗೆ ತಿಳಿದಿದೆ
ಎಲ್ಲ ಬಲ್ಲ ನೀನು ಸುಮ್ಮನೆ ನಸುನಗುತಿರುವೆ
ಮನದ ತೊಳಲಾಟ ಹೃದಯಭಾರ ತುಂಬಿದೆ ತಲ್ಲಣ
ಆಸರೆಯ ಬಯಸಿ ಕೈಚಾಚಿ ನಿಂತಿರುವೆ ಬರಲಾರೆಯಾ ತಕ್ಷಣ।।

ಲೋಕವೇ ನಿನ್ನದು , ನೀನು ಅನಂತಶಕ್ತಿಯ ಆಗರ
ತೃಣಮಾತ್ರವು ನಾನು , ಬೇಡುವೆ ನಿನ್ನ ಕರುಣಾ ಸಾಗರ
ನಿನ್ನ ಮಾಯೆಯಾಟ ಬಲ್ಲವರು ಯಾರು?
ನೀನು ಆಡಿಸಿದಂತೆ ನಾವಾಡುವೆವು ನೀ ಸೂತ್ರದಾರ||

ಎಲ್ಲವ ಬಿಟ್ಟು ವೈರಾಗ್ಯವ ತಬ್ಬಲೇ ? ಗುರುವೇ!
ಮನದಲ್ಲಿ ನೂರು ಆಸೆಗಳ ಹುಟ್ಟಿಸಿ ನೀ ನಗುವೇ!
ಬಿಟ್ಟು ಹೋಗೆಂದು ಸವಾಲೆಸೆಯುವೆ ಮೋಹದಲ್ಲಿ ಬಂಧಿಸಿ
ಭವಬಂಧನಗಳಿಗೆ ಬಲಿಯಾಗಿ ತೊಳಲಾಡುವೆ ನಾ ಅನುಭವಿಸಿ|| 

ದಾರಿದೀಪ

ನಿನ್ನ ಮನದೊಳಾಡುವ
ಭಾವದಲೆಗಳು ಕಾಣಲಿಲ್ಲ।
ಮೌನದೊಳಗಣ ಶಬ್ದತರಂಗಗಳು
ಇನಿತು ಕಿವಿಗಳಿಗೆ ಕೇಳಲಿಲ್ಲ।।

ನಿನ್ನ ಭಾವವೇನೋ?
ನಾ ಅರಿಯಲಾರೆನು!।
ಏನೋ ಆಗುತಿಹುದು ಹೃದಯದಲ್ಲಿ
ಅದನ್ನು ಮಾತ್ರ ಅರಿಯಬಲ್ಲೆನು!।।

ನೀನಿಲ್ಲದೆ ನಾನೇನು ಅಲ್ಲ
ನಿಂತಿಹೆನು ಮುಂದೆ ಸಾಕ್ಷಿಯಾಗಿ।
ನೀನಿತ್ತ ಅಭಯದಿಂದಲೇ
ಹೆಜ್ಜೆಯಿಡುತಿಹೆನು ಶಕ್ತಿಯಾಗಿ।।

ನಿನ್ನ ಮಧುರ ಮಾತುಗಳೆ 
ನನ್ನ ದಾರಿಯ ದೀವಿಗೆಗೆಗಳು।
ಸಂಶಯವಿಲ್ಲ ಸನಿಹದಲ್ಲೇ
ತೆವಳುತಿಹುದು ನೀನು ಕಂಡ ಕನಸುಗಳು।। 

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...