Sunday, June 28, 2020

ತಂದೆ

ನಾನು ಏನನ್ನು ಮಾತನಾಡುತ್ತಿರಲಿಲ್ಲ,
ಎಲ್ಲವನ್ನು ನೋಡುತ್ತಿದ್ದೆ ಹೃದಯದ ಕಂಗಳಿಂದ;
ಎಲ್ಲವನ್ನು ಕೇಳುತ್ತಿದ್ದೆ ಹೃದಯವ ಅರಳಿಸಿ;
ನೋಡಿದ್ದೇನೆ ನೀವು ನಡೆದ ಹಾದಿಯ;
ನಿಮ್ಮ ಪ್ರತಿಯೊಂದು ನಡೆಯೂ ಜೀವನ ಆದರ್ಶಗಳೇ!
ನೀವು ಕಲಿಸಿದ ಪಾಠ, ಇಂದು ಜೀವನ ದಾರಿಯ ದೀವಿಗೆಗಳು;
ನೀವಿಲ್ಲದೆ ನಾನೇನೂ ಅಲ್ಲ, ಸತ್ಯವ ಮರೆಯಲಾದೀತೆ?
ನಡೆಯುತಿಹೆನು ನೀವು ತೋರಿದ ಹಾದಿಯಲ್ಲೇ!
ಎಲ್ಲವನ್ನೂ ಕೊಟ್ಟಿದ್ದೀರಿ , ಈ ಆಯಸ್ಸಿಗಾಗುವಷ್ಟು
ಏನೂ ಕೊಟ್ಟಿಲ್ಲವೆಂಬ ನಿರ್ಲಿಪ್ತಭಾವ ನಿಮ್ಮದು;
ಎಲ್ಲವನ್ನೂ ನೀಡಿರುವ ನಿಮಗೆ ನಾ ಏನು ಕೊಡಲಿ?
ಪ್ರೀತಿಯೊಂದನ್ನು ಬಿಟ್ಟು ನೀವೇನೂ ಸ್ವೀಕರಿಸುವವರಲ್ಲ!
ಎನ್ನ ಧನ್ಯತೆಯ ಭಾವ ನೀವು;
ಎನ್ನ ಬಾಳ  ಪಯಣದ ಹಾದಿ ನೀವು ।।

ಜೀವನ ಕದನ

ಪ್ರತಿದಿನ ಸಾಯುತ್ತೇನೆ,
ನಾಳೆಗಳ ನೋಡಲು;
ನಾಳೆಗಳ ಅನುಭವಿಸಲು;
ಮುಖವಾಡಗಳು ಕಳಚುವುದು,
ಯಾವುದೇ ಮುನ್ಸೂಚನೆ ನೀಡದೆ,
ಕತ್ತಲ ಮೂಲೆಯ ಹುಡುಕುವುದು,
ಭಯ, ಭೀತಿಯ ಆತಂಕಕೆ;
ಸ್ಥೈರ್ಯ ಧರೆಗುರುಳುವುದು,
ಚಂಡಮಾರುತಕ್ಕೆ ಸಿಕ್ಕಿಬಳಲಿದಂತೆ;
ಕೊಳೆತ ಹೆಣದ ವಾಸನೆ,
ನೆನಪುಗಳ ಗೋರಿ ಕೆದಕುವಾಗ;
ಜೀವಂತ ಶವಗಳ ಮೆರವಣಿಗೆ,
ಕಂಡು ಕಂಡು ಬೇಸರವಾಗಿದೆ;
ಎಂದೋ ಬಾಡಿಹೋದ ಹೂವದು,
ಮತ್ತೆ ಮತ್ತೆ ಬಳಸುತ್ತೇನೆ ಪೂಜೆಗೆ;
ಏಕತಾನತೆಯ ಈ ಜೀವನ
ಪ್ರತಿದಿನ ಸಾಯುತ್ತೇನೆ;
ಬದುಕಲೋಸುಗ ಸಾಯುವುದು ಅನಿವಾರ್ಯ,
ನಾಳೆಗಳ ನೋಡುವ ಭರವಸೆಯೊಂದಿಗೆ ।।

ಕಾಣುವ ತವಕ

ದೇವಾ ನಿನ್ನ ಕಾಣುವುದೆಂತು
ದೇವಾ ನಿನ್ನ ಕಾಣುವುದೆಂತು।।

ದಾರಿ ತೋರೆನಗೆ
    ಮನವು ಬಯಸಿದೆ
          ಹಂಬಲಿಸಿದೆ
             ತೀವ್ರವಾಗಿ ಬೇಯುತ್ತಿದೆ
ದೇವಾ ನಿನ್ನ ಕಾಣುವುದೆಂತು।।

ಹೃದಯವ ನಿರ್ಮಲಗೊಳಿಸಿಹೆನು
      ಮನದ ಓರೆ ಕೋರೆಗಳ ತಿದ್ದಿಹೆನು
             ಕಸ ಕೊಳೆಗಳ ಗೂಡಿಸಿಹೆನು
                 ಹದಮಾಡಿ ತೊಳೆದು ನಿಂತಿಹೆನು
ದೇವಾ ನಿನ್ನ ಕಾಣುವುದೆಂತು।। 

ಲೋಕಲೀಲೆ

ಕತ್ತಲ ಪರದೆ ನೇಯ್ದಿದೆ
ಬೆಳಕು ಲೋಕಲೀಲೆಗಳು ವಿಶ್ರಾಂತ
ಕತ್ತಲ ಪರದೆ  ಕಳಚುವುದೆಂದಿಗೆ?
ದಿವದ ಬೆಳಕಿನ ಕಿಡಿ ಬೆರಳು
ಕತ್ತಲ ಪರದೆಯ ಸರಿಸಬೇಕು!
ಹೊಂಬೆಳಕು ಆಗಸದಿಂದ ತುಳುಕುವಂತೆ
ಲೋಕದ ಬಾಹ್ಯ ತಿಮಿರವ  ಕಳೆವುದು
ಲೀಲೆ ನಿರಂತರವಾಗುವುದು ।।

Wednesday, June 17, 2020

ಬೆಲೆ ಕಟ್ಟಿದವರು ?

ಯುದ್ಧ ಕೊನೆಗೊಳ್ಳುವುದು;
ನಾಯಕರು ಕೈ ಕುಲುಕುವರು;
ಆ ಮುದುಕಿ ಕಾಯುತ್ತಿರುತ್ತಾಳೆ
ಹುತಾತ್ಮನಾದ ಮಗ ಬರುವನೆಂದು;
ಆ ಯುವತಿಯೋ ಕಾಯುತ್ತಿರುತ್ತಾಳೆ
ಪ್ರೀತಿಯ ಗಂಡ ಮರಳಿ ಬರುವನೆಂದು;
ಓಹ್ ! ಆ ಮಕ್ಕಳೋ ಕಾಯುತ್ತಿರುತ್ತಾರೆ ;
ತಮ್ಮ ಜೀವನದ ನಾಯಕ ತಂದೆ ಬರುವನೆಂದು;
ನಮ್ಮ ತಾಯ್ನಾಡನ್ನು ಯಾರು ಒತ್ತೆಯಿಟ್ಟರೋ ಗೊತ್ತಿಲ್ಲ;
ಆದರೆ, ಯಾರು ಬೆಲೆ ಕಟ್ಟಿದರೆಂದು ನಾ ಬಲ್ಲೆ;

- ಅನಾಮಿಕ
ಅನುವಾದ: ನಾಗೇಂದ್ರ ಕುಮಾರ್ ಕೆ.ಎಸ್

Sunday, June 7, 2020

ಶಕ್ತಿ

ತವಕವಿದೆ ನಯನದಲಿ,
ತವಕವಿದೆ ಕಿವಿಗಳಿಗೆ,
ಒಳಗು ಇರುವ ಹೊರಗೂ ಇರುವ
'ಶಕ್ತಿ' ಎಂಬೆಳಕಿನ ದರುಶನಕೆ;
ಮನದೊಳೇನನು ಚಿಂತಿಸಿಹೆನೋ!
ಅದೇ ಅದು!, ಅದೇ ಅದು!
ಜ್ಯೋತಿಗೆ ತಾನ್ ಮಹಾಜ್ಯೋತಿ
ಅಗ್ನಿಗೆ ತಾನ್ ಮಹಾಗ್ನಿ
ಸೂರ್ಯಂಗೆ ತಾನ್ ಮಹಾಸೂರ್ಯನೇ ಆಗಿ
ಅವತರಿಸಿರುವ ಶಕ್ತಿಯೇ ಅದು
ಈ ಜಗದ ಆದಿಶಕ್ತಿಯೇ ಅದು
ಈ ಜಗದ ಸೃಷ್ಟಿಯ ಮೂಲವೇ ಅದು।।

ಮತ್ತೆ ಅದೇ ತವಕ!

ಮತ್ತೆ ಅದೇ ತವಕ, ಬೇಸರದ ಕಾತರ
ಮೊದಲು ನೋಡಬೇಕೆಂಬ ತೀವ್ರ ಹಂಬಲ ;
ಕಿಟಕಿಯ ಬಳಿ ಓಡಿ ಬಂದೆ, ಕಾತರದ ಕಂಗಳೊಂದಿಗೆ;
ಮನದಲ್ಲೇನೋ ಕಳವಳ ದೂರದೂರ ದಿಟ್ಟಿಸುತ್ತಿದ್ದೇನೆ
ಕಾಣಿಸಲಿಲ್ಲ ಮನದಲಿ ನೆಲೆಸಿಹ ಆ ಸುಂದರ ಬಿಂಬ;
ಬೆಳ್ಳಿ ಬೆಳಕಿನ ಮಂಜಿನ ತೆರೆ ಎಳೆಯುತಿದೆ ಪ್ರಕೃತಿ;
ದೇವಶಿಲ್ಪದ ದರುಶನವಿಲ್ಲವಾಯಿತೆನಗಿಂದು;
ಮನವು ಬಾಡಿದೆ,ಬೇಗುದಿಯಲಿ ನರಳಿದೆ ಮನ;
ಧ್ಯಾನಮೂರ್ತಿಯ ಗೋಚರತೆ ಇಂದೆನಗೆ ಕನಸಾಗಿದೆ;
ಹಬ್ಬುತಲಿರುವ ತಿಮಿರದ ಆವೇಗಕೆ ಸಂಜೆಯ ದೀಪ ಆರಿತು;
ಮನದೊಳು ದುಃಖ ಉಮ್ಮಳಿಸಿತು ಕಾಣದೆ ದೇವಶಿಲೆಯ;
ಹಂಬಲದ,ಕಾತರದ,ದರುಶನವಿಲ್ಲವಾಯಿತೆನೆಗಿಂದು.....
ನಾಳೇ ..ಏನೋ? ತಿಳಿದವರಾರು! ಮತ್ತೆ ಅದೇ ತವಕ।।

ಆರಂಭ

ಮನದೊಳು ವಿಚಾರದ ಬೀಜವ ಬಿತ್ತು
ಕ್ರಿಯೆಯೊಂದು ಮೊಳೆವುದು;
ಕ್ರಿಯೆಯ ಬೀಜವ ಬಿತ್ತು
ಹವ್ಯಾಸವೊಂದು ಮೊಳೆವುದು;
ಹವ್ಯಾಸದ ಬೀಜವ ಬಿತ್ತು
ನಡತೆಯೊಂದು ಮೊಳೆವುದು;
ನಡೆತೆಯ ಬೀಜವ ಬಿತ್ತು
ಗುರಿಯೊಂದು ಮೊಳೆವುದು;
ಒಳ್ಳೆಯ ಆಲೋಚನೆಯಿಂದ
ಎಲ್ಲವೂ ಆರಂಭವಾಗುವುದು||

ಮನದ ಪ್ರಾರ್ಥನೆ

ಹೆಮ್ಮೆಯಿಂದ ನರ್ತಿಸು ಆತ್ಮವಿಶ್ವಾಸದಲಿ
ಪೂರ್ಣ ಅರಳದ ಹೂಗಳ ಅರ್ಪಿಸು
ಮನದ ಪ್ರಾರ್ಥನೆ ಮಂಜಿನಂತೆ ಮೇಲೇರಲಿ
ತಂದೆಯಾತ್ಮ ಹರಸುವುದು ಮನದೊಳಗೆ ।।

ಹೃದಯದ ಕಂಗಳ ತೆರೆ ಹಾಡು ಹೃದಯಗೀತೆ
ತೆರೆ ಮನವ ಸಂತೋಷದಿಂದ ಎಲ್ಲರನೂ ಸತ್ಕರಿಸು
ಎಲ್ಲರ ತುಟಿಯಂಚಲೂ ನಗುವ ಗಮನಿಸು
ತಂದೆಯಾತ್ಮ ಹರಸುವುದು ಮನದೊಳಗೆ ।।

ರೋಮ ರೋಮಗಳಲ್ಲೂ ಮನವಿಟ್ಟು ಕೇಳಿಸಿಕೋ
ಅಂತರಾತ್ಮದ ಅನಂತ ಅನಾದಿಗಾಯನವ
ಹಂಬಲಿಸಿದೆ ಮನ ತಿಮಿರವ ನುಂಗುವ ಬೆಳಕಿಗೆ
ತಂದೆಯಾತ್ಮ ಹರಸುವುದು ಮನದೊಳಗೆ ।।

ಪ್ರೇರಣೆ: "The Mountain Tomb"
by William Butler Yeats

ದಾರಿದೀಪ

  ಆಳವಿಲ್ಲದ ಭಾವ , ಮುಗಿಲೆತ್ತರದ ಭಾವ , ನಗುವೊಮ್ಮೆ , ಅಳುವೊಮ್ಮೆ , ಬಳಲುವೆನು , ಬದಲಾಗುವೆನು , ಪ್ರೀತಿಸುವೆನು , ದೂರ ತಳ್ಳುವೆನು , ಸವಿಯುವೆನು , ದ...