ಕವನ ಹುಟ್ಟುವುದೇ?

ಗಿರಿ ಕಾನನಗಳ ಅಲೆದಾಡಿ
ಪ್ರಕೃತಿ ಸೌಂದರ್ಯ ಅನುಭವಿಸಿ
ಹಂಬಲಿಸಿದೆ ಮನ ಕವನ ಹುಟ್ಟುವುದೆಂದು||

ಸೂರ್ಯೋದಯ ಕಂಡೆ,
ಚಂದ್ರೋದಯ ಕಂಡೆ,
ಹಕ್ಕಿಗಳಿಂಚರ ಆಲಿಸಿದೆ
ಮರ ಗಿಡಗಳ ಹೊಸ ಚಿಗುರು ಚಿಗುರಿದಂತೆ
ಮನದಲ್ಲಿ ಕವನ ಹುಟ್ಟುವುದೆಂದು||

ಬಿಸಿಲೋ? ಗಾಳಿಯೋ? ಮಳೆಯೋ?
ಎಲ್ಲವನ್ನೂ ಕಂಡೆ,
ಅನುಭವಿಸಿದೆ ಮಧುರತೆ,ನೋವು,
ಮನದಲ್ಲಿ ಕವನ ಹುಟ್ಟುವುದೆಂದು||

ಕಂಡ ಕನಸುಗಳಿಗಿಂದು ಹತ್ತು ವರುಷ

ಕಂಡ ಕನಸುಗಳಿಗಿಂದು ಹತ್ತು ವರುಷ
ನನಸಾಗದ ಕನಸುಗಳ
ಆಲಾಪನೆಗಳಿಗಿಂದು ಹತ್ತು ವರುಷ||

ಸುಧಾರಿಸದ ಸಂಬಂಧಗಳು
ಹೊರಬರಲಾರದ ಒಳತೋಟಿಗಳ
ಕನವರಿಕೆಗೆ ಹತ್ತು ವರುಷ||

ಬದುಕ ದಾರಿಯಲ್ಲಿ
ಸವೆಸಿದ ಗಳಿಗೆಗಳ
ನೋವುಗಳಿಗೆ ಹತ್ತು ವರುಷ||

ಆರಕ್ಕೇರದ ಮೂರಕ್ಕಿಳಿಯದ
ಬದುಕ ಬಾಳ ಬಂಡಿಯ
ಪಯಣಕ್ಕೆ ಹತ್ತು ವರುಷ||

ನನಸಾಗದ ಕನಸುಗಳ
ಬೆಂಬಿಡದ ಆಕಾಂಕ್ಷೆಗಳ
ಬೆನ್ನು ಹತ್ತಿದ ಬಿಸಿಲ್ಗುದುರೆಗೆ ಹತ್ತು ವರುಷ||

ಅವಮಾನ, ಕಡಗಣನೆಯ ಮೂಕವೇಧನೆ
ಹೋರಾಟಕ್ಕಿಳಿಯದ
ಸಮಾಧಾನದ ತಾಳ್ಮೆಗೆ ಹತ್ತು ವರುಷ||

ಹಾರಲಾರದೆ, ಓಡಲಾರದೆ ತೆವಳುತ್ತಿದ್ದರೂ
ಬತ್ತದೆ ಸದಾ ಹರಿಯುತ್ತಿರುವ
ಜೀವನ ಪ್ರೀತಿಗೆ ಹತ್ತು ವರುಷ||

ಏನೇ ಆದರೂ
ನೋವೋ?, ನಲಿವೋ?
ಭರವಸೆಯ ಹೊತ್ತ ಮನಸುಗಳಿಗೆ ಹರೆಯದ ಹತ್ತು ವರುಷ||

ಅತಂತ್ರ

ಮನಸುಗಳ ಹಿಂದೆ
ದೊಡ್ಡ ಸಂಗ್ರಾಮವೇ ನಡೆದಿದೆ
ಮೇಲೇಳದಂತೆ ಮಾಡಲು
ದೊಡ್ಡ ಹುನ್ನಾರವೇ ನಡೆದಿದೆ||

ಬದುಕಿದರೂ ಸತ್ತಂತಿರಬೇಕು
ತಿವಿದರೂ ನೋವಾಗದಂತಿರಬೇಕು
ಒಳಗೆ ಉರಿ ಹೊತ್ತಿ ಸುಟ್ಟರೂ
ತುಟಿಯಂಚಲಿ ನಗು ಸೂಸಬೇಕು||

ಅವಕಾಶಗಳಿಗೆ ಕತ್ತರಿಹಾಕಿ
ಜೀವನದಲ್ಲೇ ಮೇಲೇಳದಂತೆ
ಪೂರ್ಣವಿರಾಮ ಹಾಕಿದರಾಯಿತು
ನಮ್ಮಪ್ಪನ ಗಂಟೇನು ಹೋಗಬೇಕೆ?||

ಒಂದೋ ಇಲ್ಲೇ ಇದ್ದು
ಸತ್ತಂತಿರಬೇಕು!
ಇಲ್ಲವೋ ಒಳಬೇಗೆ
ತಡೆಯಲಾರದೆ ಕಾಲುಕೀಳಬೇಕು||

ಇದೇ ರಣತಂತ್ರ
ಜೀವನ ಕುತಂತ್ರ
ನಮ್ಮ ಮೇಲಿನವರ ವ್ಯವಹಾರ ತಂತ್ರ
ಅವರೋ ಸ್ವತಂತ್ರ
ನಾವು ಅತಂತ್ರ||

ಏಕೆ ಕನಸುಗಳೇ ಕಾಲೆಳೆಯುವಿರಿ?

ನನ್ನನ್ನು ಕಂಡೆ ನನ್ನನ್ನೇ
ಒಂದು ಮೋಹಕ ಕನಸಲ್ಲಿ
ಕಂಡೆ ನನ್ನನ್ನೇ
ಕಾಣುತ್ತಿದೆ ಮನ್ಮಥನಂತೆ;
ತೊಟ್ಟಿದ್ದೆ ಬಂಗಾರದ ಕಿರೀಟ;
ಕಾಣದ ಸಂಪತ್ತಿಗೆ ಅಧಿಪತಿಯಂತೆ;
ನನ್ನನ್ನು ನಾನೇ ಪ್ರೀತಿಸತೊಡಗಿದೆ
ಭ್ರಮೆ ಕ್ಷಣ ಮಾತ್ರದಲ್ಲೇ ಆವರಿಸಿ;
ಹೃದಯ ಮಿಡಿಯಿತು ಸಂತೋಷದ ತುಮುಲದಲ್ಲಿ;
ಹೃದಯ ತಟ್ಟುವ ಹಾಗೆ ಹಾಡಿದೆ,
ಹೃದಯದ ಹಾಡನ್ನು;
ಕನಸುಗಳು ನನ್ನ ತೊರೆಯ ತೊಡಗಿದವು,
ಗೋಗೆರೆದೆ,ಪರಿಪರಿಯಾಗಿ ಬೇಡಿಕೊಂಡೆ
ಕೇಳಿಸಿಕೊಳ್ಳದಂತೆ ನನ್ನ ಆರ್ತನಾದವ ಹಾರಿಹೋದವು;
ಏಕೆ ಕನಸುಗಳೇ ಕಾಲೆಳೆಯುವಿರಿ
ಸಂತೋಷವ ಅನುಭವಿಸುವಾಗ?
ಸೋತೆ ನಾನು, ಕಳೆದುಕೊಂಡೆ ನಾನು
ನನ್ನ ಕನಸಿನ ರಾಜ್ಯವನ್ನು,
ನನ್ನ ಸಂತೋಷದ ಕಾಲವನ್ನು
ಕಲ್ಪನೆಯ ಕಾವ್ಯದಲ್ಲಿ ಕಳೆದುಹೋದೆ....

ಮೊದಲ ಪ್ರಯತ್ನದ ಹಾಯ್ಕುಗಳು -2

ಮನದಲ್ಲಿ ಚೈತನ್ಯ
ಹೃದಯದಲ್ಲಿ ಪ್ರೀತಿಯ ರಂಗೋಲಿ
ಸತ್ತಾಗ ಮಣ್ಣಿನ ಮೇಲೆ ಪ್ರೀತಿ

ಬೆಳಗು ಮೂಡುವುದು
ಹೂವು ಅರಳುವುದು
ಮನಸ್ಸು ಅಳುವುದು

ಕಾಣದ ಸತ್ಯಗಳು ನೂರಾರು
ಕಾಣುವ ಅಸತ್ಯಗಳು ಹಲವಾರು
ಸತ್ಯಹರಿಚ್ಛಂದ್ರ ನಗುತ್ತಿದ್ದಾನೆ

ಬೆಳಕು ಸತ್ಯ
ಕತ್ತಲೂ ಸತ್ಯ
ಹಗಲು-ರಾತ್ರಿಗಳ ಸುಖದ ಹೋರಾಟ

ಅವನು ನಕ್ಕಳು
ಅವಳೂ ನಕ್ಕಳು
ವಿಚ್ಛೇದನಕ್ಕೆ ಇಬ್ಬರೂ ಅರ್ಜಿ ಹಾಕಿದರು.

ಮೊದಲ ಪ್ರಯತ್ನದ ಹಾಯ್ಕುಗಳು -1

ನೋವಿನ ಭಾರ ಮನದಲ್ಲಿ
ಆಗಸದಲ್ಲಿ ಮೋಡ ಕಟ್ಟಿದೆ
ಮನೆಯ ನಲ್ಲಿಯಲ್ಲಿ ನೀರು ಬರುತ್ತಿಲ್ಲ

ನೂರು ಗೊಂದಲ ಮನದಲ್ಲಿ
ಉತ್ತರ ಕಾಣದ ಪ್ರಶ್ನೆಗಳು
ವರ್ಷಕ್ಕೆ ೧೨ ಸಿಲಿಂಡರ್ ಗಳ ಭಿಕ್ಷೆ

ಕಾಣದ ಕನಸುಗಳು
ಕಣ್ಣು ತುಂಬಾ ನಿದ್ದೆ
KRS ನಲ್ಲಿ ನೀರಿಲ್ಲ

ಹತ್ತು ವರ್ಷದ ಕೆಲಸ
ಮೇಲೆಕ್ಕೇರಲಾಗದ ಅಸಹಾಯಕತೆ
ಕಂಪನಿಗೆ ನೂರು ಕೋಟಿ ವ್ಯವಹಾರ ಲಾಭ

ನನಸಾಗದ ಕನಸುಗಳು
ನಲ್ವತ್ತು ವರ್ಷದ ಹರೆಯ
ಬೆಲೆ ಏರಿಕೆಯ ಉಡುಗೊರೆ ಈ ಬೇಸಿಗೆಗೆ

ಅಮೃತದ ಕಡಲು

ಓ ಕರುಣಾಳು, ಕನಿಕರಿಸು
ಮುಂಜಾನೆಯ ಸಂತೋಷವ ಹರಿಸು
ಸದಾ ನೋವಿನ ಕಡಲಲ್ಲಿ ಮೀಯುವವರಿಗೆ
ನಿನ್ನ ಕರುಣೆಯ ಹೊನಲ ಹರಿಸು||

ಉರಿಯುತ್ತಿರುವ ದೀಪ
ಆರುವುದು ಗಾಳಿ ಬೀಸಿದಾಗ
ಬೆಳಕು ಹರಿದು ಕತ್ತಲ ಧೂಪ
ಕನಸುಗಳಿಗೆ ಕಿಚ್ಚು ಹೊತ್ತಿಸಿತಾಗ||

ಮನದ ಭಯವೆಲ್ಲಾ ಕರಗಲಿ
ನಿನ್ನ ಕರುಣೆಯ ಕಡಲಲ್ಲಿ
ನಿನ್ನ ಕರುಣಾಮೃತವ ಸವಿಯುವೆ
ಬದುಕಿನ ಬವಣೆಯ ಪಾತ್ರೆಯಲ್ಲಿ||

ನಿನ್ನ ಪ್ರೀತಿಯ ಅಮೃತದ ಕಡಲಲಿ
ಎಲ್ಲಾ ನೋವ ಮರೆಯುವೆ
ಮನವ ಬಿಚ್ಚಿ, ಹೃದಯ ಹಗುರಗೊಳಿಸುವೆ
ಈ ಬದುಕ ಪುಷ್ಪವ ನಿನಗರ್ಪಿಸುವೆ||

ಹಾಯ್ಕುಗಳು

ಸಾಯುತ್ತಿರುವ ಕೆರೆ
ಹೊಲಸು ವಾಸನೆ ಜೀವಂತಿಕೆಯ
ಕಳೆದುಕೊಳ್ಳುತ್ತಾ....

ನಾನು ಇಂದು ಮಾತನಾಡಿದೆ
ನೆನಪು ಮಾಸುತ್ತಿದೆ
ಮನದಲ್ಲಿ ಭರವಸೆ ನಿಂತಿದೆ

ನಿನ್ನ ನೋವು ಅನುಭವಿಸಿದೆ
ನೀನು ನನ್ನ ಬಿಟ್ಟಿರಲಾರೆ
ಆದರೂ ನಮ್ಮ ದಾರಿ ಬೇರೆ ಬೇರೆ

ಕಣ್ಣೊಳಗಿನ ಕಂಬನಿ ಅವಿತಿದೆ
ನೀನು ದೂರ ಮರೆಯಾಗುವವರೆಗೂ
ನಿನ್ನನ್ನು ಬಿಟ್ಟಿರಲಾರೆ ಓ ಪ್ರೇಮವೇ...

ಬೆತ್ತಲೆ

ಒಳಗಣ್ಣ ತೆರೆದೊಡೆ
ಹೊಸ ಪ್ರಪಂಚಕ್ಕೆ ಪಾದಾರ್ಪಣೆ

ಕತ್ತಲು ಕಳೆದೊಡೆ
ಬೆಳಕ ಹೊಸತನಕ್ಕೆ ಅಂಕುರಾರ್ಪಣೆ

ಆಹಂನ ಮುರಿದೊಡೆ
ನಮ್ಮೊಳ ಶಕ್ತಿ ಹೊರಹೊಮ್ಮುವುದು

ಮನಸ್ಸು ಬೆತ್ತಲಾದೊಡೆ
ಹೊಸ ಮನ್ವಂತರಕ್ಕೆ ಹಾದಿ ತೆರೆಯುವುದು

ನಾನು ಯಾರು?

ನಾನು ಯಾರು?
ಪ್ರಶ್ನೆಯೊಂದಿತ್ತು ಮನದಲ್ಲಿ;
ಸರಿಯಾದ ಉತ್ತರ
ಯಾವುದು?
ಪ್ರಶ್ನೆಗೆ ಮತ್ತೊಂದು ಪ್ರಶ್ನೆ!
ಉತ್ತರ ನಗಣ್ಯ;
ನನ್ನ ಮನಸ್ಸಿಗೆ
ಬಂದದ್ದು ನಾನು;
ಎಲ್ಲವೂ ನಾನು;
ಏನೆಲ್ಲಾ ನಾನು;
ಕಂಡದ್ದು;
ಕಾಣದ್ದು;
ಹಿತವಾದದ್ದು;
ಕಷ್ಟವಾದದ್ದು;
ಏನಲ್ಲ ನಾನು?
ಎಲ್ಲವೂ ನಾನೇ
ನಾನು ನಾನೇ!

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...