Friday, January 31, 2014

ನಂಬಿಕೆಯ ಬಟ್ಟೆ

ನಾವೆಲ್ಲರೂ ಒಟ್ಟಿಗೆ ಹೆಜ್ಜೆಯಿಟ್ಟವರು;
ಬೀಸುವ ತಂಗಾಳಿಗೆ ಮೈಯ್ಯೊಡ್ಡಿದವರು;
ಹೋಗುವ ದಾರಿ ಒಂದೇ ಆದರೂ,
ಒಬ್ಬೊಬ್ಬರದು ಒಂದೊಂದು  ಗುರಿಯ ಹಾದಿ;
ಕೆಲವರಿಗೆ ಮೋಜು;
ಕೆಲವರಿಗದೇ ಜೀವನ;
ಕೆಲವರಿಗದೇ ಜೀವನ ಸಾಧನ;
ಮುಂದೆ ಮುಂದೆ ಸಾಗುತ್ತಿದ್ದೇವೆ
ಸಂತೋಷದ ಕನಸ ಹೊತ್ತು;
ಗೆಳೆತನದ ನಂಬಿಕೆಗಳು ದೃಢವಾಗಿದ್ದವು
ಮೌನದ ಕಡಲಲ್ಲಿ ತೇಲುವ ಹೊತ್ತು;
ಒಂದೇ ಅಪನಂಬಿಕೆಯ ಚಂಡಮಾರುತ
ಎಲ್ಲವನ್ನೂ ಏರುಪೇರಾಗಿಸಿತು;
ನಂಬಿಕೆಗಳ ದೃಢತೆಯ ಪರೀಕ್ಷಿಸಿತು;
ದೂರ ಜಾರಿದವರೆಷ್ಟೋ?
ಮಾತು ಮುರಿದವರೆಷ್ಟೋ?
ಜೊತೆಯಾದವರು ಯಾರು?
ಹುಡುಕಬೇಕಾಗಿದೆ ನಮ್ಮ ಜೊತೆಯ ಪಥಿಕರನ್ನು
ಇಂದು ನಾನು ಏಕಾಂಗಿ
ಮೌನ ಮುರಿದು,
ಹೃದಯ ತೆರೆದು
ನಂಬಿಕೆಯ ಬಟ್ಟೆಯ ಹರವಿ ನಿಂತಿದ್ದೇನೆ
ನನ್ನವರೆಲ್ಲರೂ ಬರುವರೆಂದು||

Thursday, January 30, 2014

ದುಃಖದ ಮಳೆ

ಓ ಕೋಗಿಲೆಯೇ! ನನ್ನೊಡನೆ ಹಾಡು
ಗೊಂದಲಪುರದ ನೋವುಗಳೆಲ್ಲಾ ಮರೆಯಲಿ;
ಮನದ ಅಂಕದ ಮೇಲೆ ಬರುವ
ಕಾಣದ ತೀರದ,ದೂರದ ಬದುಕು ನನಸಾಗಲಿ||

ನಿನ್ನಯ ಮಧುರ,ಆಪ್ಯಾಯಮಾನ ಆಲಾಪ,
ನೆನಪ ಕಾರ್ಮೋಡ ಮನದಲ್ಲಿ ಇಳಿಸಿದೆ;
ತಿಳಿನೀಲಿ ಆಕಾಶದ,ತೇಲುವ ಚಂದಿರನ
ಕಣ್ಣಿಗೆ ಎಟುಕದ ದೂರ,ದುಃಖದ ಮಳೆ ಇಳೆಗೆ ಜಾರಿದೆ||

ನಿನ್ನಯ ಹಾಡ ಕೇಳುತ್ತಿದ್ದಂತೆ ಮರೆಯುವೆ,
ಕತ್ತಲ ಕರಾಳ ನೆರಳ ಭೀಬಿತ್ಸ ರೂಪ ಕಳಚುವೆ;
ನಿನ್ನಯ ಹಾಡ ಕೇಳುವೆ ಮತ್ತೆ,ಮತ್ತೆ,
ಪುನಃ ಹೊಸ ಅಧ್ಯಾಯ ಪ್ರಾರಂಬಿಸುವೆ||

ಓ ಕೋಗಿಲೆಯೇ! ನನ್ನೊಡನೆ ಹಾಡು
ಗೊಂದಲಪುರದ ನೋವುಗಳೆಲ್ಲಾ ಮರೆಯಲಿ;
ಮನದ ಅಂಕದ ಮೇಲೆ ಬರುವ
ಕಾಣದ ತೀರದ,ದೂರದ ಬದುಕು ನನಸಾಗಲಿ||

Tuesday, January 28, 2014

ಓ ನಿದ್ರೆಯೇ ಬಂದು ಬಿಡು

ಓ ನಿದ್ರೆಯೇ ಬಂದು ಬಿಡು
ತಡಮಾಡದೆ ಹರಿಸು ಹೊನಲು
ಎಲ್ಲಾ ಸುಖವ ಧಾರೆ ಎರೆದು ಬಿಡು
ಬೆಳಗು ಮೂಡುವ ಮೊದಲು||

ಬೆಳಗಾದರೆ ನೂರು ಸಮಸ್ಯೆಗಳು
ವಿರಾಮ ಕಾಣದ ಕದನಗಳು
ಕಾಮ,ಲೋಭ,ಮೋಹಗಳು
ಸ್ವಾರ್ಥ ತುಂಬಿದ ಕೊಡಗಳು||

ನಮ್ಮತನವ ಮರೆತ ಮುಖವಾಡಗಳು
ಬೆಳಕಲ್ಲೇ ಬೆತ್ತಲಾಗುವ ಚಿತ್ರಗಳು
ನೋಡನೋಡುತ್ತಿದ್ದಂತೆ ಬಣ್ಣಬದಲಿಸುವ ಚಿಟ್ಟೆಗಳು
ಹಗಲಲ್ಲೇ ಕಾಡುವ ಕನಸುಗಳು||

ಹೊತ್ತಿನೂಟಕ್ಕೆ ಕಷ್ಟಪಡುವ ಜೀವಗಳು
ಸುಖದ ಸುಪ್ಪತ್ತಿಗೆಯಲ್ಲೇ ಓಲಾಡುವ ಜಂತುಗಳು
ಅವಿರತ ಕತ್ತೆ ದುಡಿತದ ಕಾರ್ಮಿಕರು
ಮನಕಲಕುವ ದೃಶ್ಯಗಳು||

ಎಲ್ಲರೂ ಬಯಸುವುದೊಂದೇ
ಎಲ್ಲರ ಮಂತ್ರವೂ ಒಂದೇ
ನಿದ್ರೆಯೇ ಬಾ,
ಸುಖವ ತೋರು ಬಾ,
ನಾಳೆಯ ಚಿಂತೆಗಳ ಹರಿಸು ಬಾ,
ಸುಖದ ಹೊನಲ ಸುರಿಸು ಬಾ.....

Friday, January 24, 2014

ಕಾಯುತಿಹೆನು ಗೆಳೆಯ

ಕಾಯುತಿಹೆನು ಗೆಳೆಯ,
ನೀ ಬರುವೆಯೆಂದು,
ಹೋದವನು ಮತ್ತೆ ನೀ ಬರುವಿಯೆಂದು
ಕಾಯುತಿಹೆನು ಗೆಳೆಯ||

ನಿನ್ನ ನಗು, ನಿನ್ನ ಮಾತು,
ಆ ನೋಟ,
ಎಲ್ಲವೂ ಈಗಲೂ ಹಸಿರಾಗಿದೆ ಮನದಲ್ಲಿ
ಮರೆತಿಲ್ಲ ನಾನು,
ನೀ ಮರೆತು ಹೋದೆಯಾ ಗೆಳೆಯ||

ನಾನು ಅತ್ತಾಗ,
ನಾನು ಬಿದ್ದಾಗ,
ನಿನ್ನ ಕೈಗಳು ನನ್ನ ಕಣ್ಣಿರ ಒರೆಸಿತು,
ನಿನ್ನ ಕೈಗಳು ಬೀಳದಂತೆ ಹಿಡಿಯಿತು,
ಬಿದ್ದಾಗ ನಗುವವರೇ ಹೆಚ್ಚು, ನೀ ಎಲ್ಲರಂತಲ್ಲ ಗೆಳೆಯ||

ನಿನಗೆ ಅವಶ್ಯಕತೆ ಇದ್ದಾಗ,
ನಾನು ಅಸಹಾಯಕನಾಗಿದ್ದೆ,
ಮನದಲ್ಲೇ ನರಳಿದೆ ನಿನಗೆ ಸಹಾಯವಾಗಲಿಲ್ಲವೆಂದು,
ಅರಿತೋ,ಅರಿಯದೆಯೋ ನೀ ನನ್ನ ದ್ವೇಷಿಸಿದೆ
ದೂರವಿರಿಸಿದೆ ನನ್ನ ಏಕೆ ಗೆಳೆಯ||

ಹೋಡಿ, ಬಡೀ,
ನನ್ನ ಅಸಹಾಯಕತೆಗೆ,
ಹೊಡೆಯಬೇಡ,ತೊರೆಯಬೇಡ,
ಗೆಳೆತನದ ಮಧುರತೆಯ
ನನ್ನ ಅಸಹಾಯಕತೆಯನ್ನು ಶಪಿಸಿದ್ದೇನೆ,ನರಳಿದ್ದೇನೆ
ನಮ್ಮ ಸೊರಗಿದ ಗೆಳೆತನವ ನೆನೆದು ಗೆಳೆಯ||

ಕೈ ಚಾಚುವೆ,
ಕೈ ಮುಗಿವೆ,
ಸ್ನೇಹ ಹಸ್ತವ ಹಿಡಿಯುವೆಯೋ?
ಹೊಡೆದುರುಳಿಸುವೆಯೋ? ನಿನಗೆ ಬಿಟ್ಟಿದ್ದು......
ಸ್ನೇಹ ಮುರಿದುಬೀಳುವುದಕ್ಕೆ ನಾನೂ ಕಾರಣನಲ್ಲ,
ನೀನು ಕಾರಣನಲ್ಲ
ಎರಡು ಮನಗಳು,ಎರಡು ದೇಹಗಳು ಗೆಳೆಯ||

Thursday, January 23, 2014

ಹೆಸರಲ್ಲೇನಿದೆ ಹೇಳು?

ಹೆಸರಲ್ಲೇನಿದೆ ಹೇಳು? ನಮ್ಮದಲ್ಲದ್ದು!,
ಹುಟ್ಟಿದ ಮೇಲೆ ಜೀವಕ್ಕೊಂದು ಗುರುತು ಪತ್ರದಂತೆ;
ಪ್ರೀತಿಯಿಂದಲೋ? ಯಾರ ನೆನಪಿನಿಂದಲೋ? ಗೊಣಗಿದಂತೆ,
ದೂರದ ಅದಾವುದೋ ಕಾಣದ ತರಂಗಗಳಂತೆ,
ಬೇಸಿಗೆಯ ನೀರವ ರಾತ್ರಿಯ ಪೇಲವ ಉಸಿರಾಟದಂತೆ,
ಬಾಳ ಬಂಡಿಯ ಪಯಣದಲ್ಲಿ ಬದುಕಲು ಟಿಕೇಟು-ಹೆಸರು||

ಕಾಗದದ ಮೇಲೆ ಬರೆದ ಹೆಸರು ಎಂದೋ ಅಂದಗೆಟ್ಟಿದೆ
ಅಸ್ಪಷ್ಟವಾಗಿ,ನಿಗೂಡವಾಗಿ ಏನನ್ನೂ ಹೇಳುತ್ತಿದೆ,
ಸಮಾದಿಯ ಮೇಲೆ ಕೆತ್ತಿದ ಪದಗಳ ಕುರುಹು,ಸ್ಮಾರಕದಂತೆ,
ಸತ್ತ ಹಾಗು ಗತಕಾಲದ ಕಳೆದುಹೋದ ನಿಧಿಯಂತೆ,
ನಮ್ಮ ಹಿರಿಕರ,ಸಂಸ್ಕೃತಿಯ,ಭಾಷೆಯ ಮೇಲಿನ ಋಣದಂತೆ,
ನಮ್ಮ ಹೆಸರ ಮೇಲೆ ಪ್ರೀತಿ ಹೆಚ್ಚು ನಮಗೆ||

ಏನಿದೆ ಹೇಳು ಹೆಸರಲ್ಲಿ? ಮರೆತು ಹೋಗಿದೆ ಬಹಳ ದಿನಗಳಾಗಿ,
ಬಿರುಗಾಳಿಯ ಆವೇಗ ಹಳತನ್ನು ಅಳಿಸಿಹಾಕಿದೆ,ನೆಟ್ಟು ಹೊಸತನ್ನು,
ಅದರೂ ನನ್ನದೆಂಬ ಭ್ರಮೆ,ಪ್ರೀತಿ ನಮ್ಮನ್ನೆಂದೂ ತೊರೆಯದು
ಹೆಸರಲ್ಲೇನಿದೆ ಎಂಬ ಹುಡುಕಾಟದ ಸಿಹಿಭಾವ ಜೀವ ಹಿಡಿದಿದೆ;
ಯಾರೋ ಹೆಸರು ಕರೆದಾಗ ನಮ್ಮನ್ನೇ ಕರೆದರೆಂಬ ವಾಂಛೆ ಏಕೋ?
ಹೆಸರೇಕೆ ನಮ್ಮನ್ನು ಅಷ್ಟು ಬಲವಾಗಿ ಅಪ್ಪಿಹುದೋ?||

ಜೀವ ತೊರೆವಾಗ ಆ ಕ್ಷಣದ ನರಳಾಟ
ಹೆಸರಿಗಾವ ನರಳಾಟವಿಲ್ಲ,ನಗುವಿಲ್ಲ-ನಿರ್ಲಿಪ್ತ;
ಕಾಗದದ ಮೇಲೆ ನಲಿವುದು ಹೊಸ ಲೇಖನಿಯಿಂದ;
ಆಸ್ಪತ್ರೆಯ ಮಂಚದಲ್ಲಿ ಮಲಗಿರಲಿ ನರಳುತ್ತಾ
ಎಲ್ಲರೂ ಕೇಳುವರು ವೈದ್ಯರ, ಹೆಸರ ಮರೆತು
" ರೋಗಿ ಹೇಗಿದ್ದಾನೆ? ಬದುಕುಳಿವ ಸಾಧ್ಯತೆ ಏನು?"
ಜೀವ ಇರುವವರೆಗೂ ಈ ಹೆಸರಿನ ಅಡ್ಡಪಟ್ಟಿ ನಮಗೆ
ಜೀವ ಹೋದ ಮೇಲೆ ಬರೀ ಶವ,ಬರೀ ಶವವಷ್ಟೆ ನಾವು
ಶವದ ಜೊತೆ ಹೆಸರೂ ಮಣ್ಣಾಗುವುದು.....
ಪಯಣ ಮುಗಿದ ಮೇಲೆ ಟಿಕೇಟನ್ನು ಯಾರೂ ಜೋಪಾನ ಮಾಡರು||

Saturday, January 18, 2014

ವಿಧಾಯ

ಓ! ಅವನನ್ನು ಏನೆಂದು ಕರೆಯಲಿ?
ಗೆಳೆಯನೇ? ಇನಿಯನೇ? ಅಥವಾ
ನೋವನ್ನು ನೀಗುವ ದೇವನೆನ್ನಲೋ?
ಅಲ್ಲಿ ಕುಳಿತಿದ್ದಾನೆ,
ನಿಶಬ್ದವಾದ ನನ್ನ ಮನೆಯ ಬಾಗಿಲಿನ ಮುಂದೆ
ನನ್ನ ಸಾವಿನ ಮನೆಯ ಬಾಗಿಲನ್ನು ತೆರೆದು
ಅಲ್ಲಿಯೇ ಕಾಯುತಿದ್ದಾನೆ,
ಯಾವ ಮುನ್ಸೂಚನೆಯನ್ನು ನೀಡದೆ ಬಂದ ಅತಿಥಿ.
ಅದೇ,ಅದೇ ನನ್ನ ಭರವಸೆಯ ಕಸಿಯುತ್ತಿದೆ.
ನಾನು ಕೊನೆಯಾಗುತ್ತಿದ್ದಂತೆಯೇ...
ನನ್ನೆಲ್ಲಾ ಭವಿಷ್ಯವೆಲ್ಲಾ ಕಣ್ಣಮುಂದೆ ನಾಪತ್ತೆಯಾಗುತ್ತದೆ.
ನನ್ನ ಕಣ್ಣೊಳಗಿನ ಚೈತನ್ಯ ಕಳೆಗುಂದುತಿದೆ
ನೋಡ ನೋಡುತ್ತಿದ್ದಂತೆ ನಾನೂ ಮೈಮರೆಯುತ್ತಿದ್ದೇನೆ.

ಪ್ರಪಂಚದ ತುತ್ತ ತುದಿಯಲ್ಲಿ ನಿಂತು ಒಮ್ಮೆ ನೋಡು
ಮಂಕು ಕವಿದ ಮಂಜು ಜಾರುತ್ತಿದೆ ಪ್ರವಾಹದಂತೆ
ತುತ್ತ ತುದಿಯಲ್ಲಿ ನಿಂತು ಸಾವ ನೆನೆಯುವವನಿಗೆ
ಜೀವನ ಮರೀಚಿಕೆ ಎನಿಸದಿರದು
ಅದಕ್ಕೂ ಗಂಡೆದೆ ಬೇಕೆ ಬೇಕು.
ಒಂದು ಹೆಜ್ಜೆಯ ಅಂತರವಷ್ಟೇ "ಜೀವನ" ಅಥವಾ "ಸಾವು"
ಆರಿಸಿಕೊಳ್ಳುವುದು ಮನಸ್ಸಿನ ನಿರ್ಧಾರ,
ಆದರೂ ಜೀವನ!, ನಾನು ಎಷ್ಟೋಂದು ಪ್ರೀತಿಸುತ್ತಿದ್ದೆ.
ಹೊಸತನದ ಆಕಾಶನೀಲಿಯ ತೆರೆ ತೆರೆದುಕೊಳ್ಳುತ್ತಿದೆ;
ಬೆಟ್ಟ ಪರ್ವತಗಳು ಸೂರ್ಯನ ಕಿರಣಗಳಿಗೆ ಬೆಳಗುತ್ತಿದೆ;
ನದಿ,ತೊರೆಗಳು ಜೋಗುಳ ಹಾಡುತ್ತಾ ನರ್ತಿಸುತ್ತಿವೆ;
ಮೌನ ಕಾಣದ ಕಾರಣಕ್ಕೆ ಶೋಕಿಸುತ್ತಿದೆ;
ಚೈತನ್ಯ ಕಾರಣವಿಲ್ಲದೆ ನರಳುತ್ತಿದೆ;
ಶಾಂತಿಯ ನೆರಳು ವಿಧಾಯ ಹೇಳಬಯಸಿದೆ;

Friday, January 17, 2014

ಪ್ರೀತಿಸುತ್ತಿದ್ದೆ.....

ನಾನು ನಿನ್ನ ಪ್ರೀತಿಸುತ್ತಿದ್ದೆ
ಪ್ರಾಯಶಃ ಪ್ರೀತಿಸುತ್ತಲೇ ಇರುತ್ತೇನೆ
ಪ್ರೀತಿಯ ಈ ಭಾವ ಮನದಲ್ಲಿ ಅಳಿಯದೆ ಉಳಿವುದು
ನನ್ನ ಈ ಪ್ರೀತಿಯ ಹಿಂಸೆ
ಇನ್ನೆಂದೂ ನಿನ್ನನ್ನು ಭಾದಿಸದು
ನಾನು ಬಯಸುವುದೂ ಇಲ್ಲ
ನಿನಗೆಂದೂ ನೋವಾಗಲೆಂದು.

ನಾನು ನಿನ್ನ ಪ್ರೀತಿಸುತ್ತಿದ್ದೆ
ನನಗೆ ತಿಳಿದಿದೆ ಅಪನಂಬಿಕೆ,
ಮತ್ಸರ,ನಾಚಿಕೆ ಎಲ್ಲವೂ ಪ್ರೀತಿಗೆ ಬೇಕಾಗಿಲ್ಲ
ಮನಸ್ಸು ಮಾಡಿದೆ ಪ್ರೀತಿಸಲು ಮತ್ತೆ,
ಅದೇ ಹೊಸತನ,ಅದೇ ಹುಮ್ಮಸ್ಸು,
ಆ ಪ್ರೀತಿಯ ದೇವತೆ ಮತ್ತೆ ಕರುಣಿಸಲಿ
ನಿನ್ನನ್ನೇ ಪ್ರೀತಿಸಲು.....

Tuesday, January 14, 2014

ದೂರದ ಪ್ರೀತಿ

ದೂರದೂರಿಗೆ ಹೊರಟಿಹೆನು ನನ್ನ ಮನೆಯದೇ ಎಂದು ತಿಳಿದು
ತೊರೆಯುತ್ತಿದ್ದೇನೆ ನನ್ನದಲ್ಲದ ಈ ಮನೆಯನ್ನು;
ನಿನ್ನ ಕೈಹಿಡಿದು ಕಣ್ಣೀರ ಸುರಿಸಿ ಇನ್ನೂ
ಕ್ಷಣವೂ ಕಳೆದಿಲ್ಲ,ಭಾವನೆಗಳ ಸೋಲಿಸಿತೇ ಕಣ್ಣೀರು?
ಕೈಗಳು ಈಗಲೂ ನಡುಗುತ್ತಲೇ ಇದೆ,
ಮಾತುಗಳು ತೊದಲುತ್ತಿವೆ,
ಮನಸ್ಸು ಹೇಳುತ್ತಿದೆ
" ಈ ನೋವು ಕೊನೆ ಇಲ್ಲವಾಗಲಿ".

ತೊರೆದು ಹೋದೆ ಏಕಾಂತದಲ್ಲಿ
ವಿರಹದಿ ಬೇಯುತ್ತಿದ್ದಾಗ,
ಕಾಣದ ಸುಖವರಸಿ ಸೇರಿದೆವು ಪ್ರೀತಿಯಿಂದಲೇ,
ನೋವಲ್ಲದೆ ಮತ್ತೇನೂ ಕಾಣಲಿಲ್ಲವಾಗ;
ಮತ್ತೆ ಸೇರೋಣ ಮೈಥುನದ ನೆರಳಲ್ಲಿ
ನೀನೆಂದಾಗ, ಸುಖದ ಭ್ರಮೆಯು ತೆರೆದುಕೊಂಡಿತಾಗ;
ನೋವಿಲ್ಲದ ಪ್ರೀತಿಯಲ್ಲಿ ಮೀಯೋಣ
ತಿಳಿನೀಲಿಯಾಕಾಶದ ಅನಂತತೆಯಲ್ಲಿ;

ಕತ್ತಲಾವರಸಿ ತಿಳಿನೀಲಿ ಬಾನು ಮೈತೆರೆದುಕೊಂಡಾಗ
ಮನಸ್ಸು ಭಾರವಾಗಿ ವಿರಹದಿ ನಿನ್ನ ನೆನೆದು ನರಳಿತು,
ಸುಖದ ನೆರಳ ಭ್ರಮೆ ಮೈಮನನೆಲ್ಲಾ ಆವರಿಸಿತು,
ನೋವೆಲ್ಲಾ ಸುಖವಾಗತೊಡಗಿತು,
ರಕ್ತದೋಕುಳಿಯೂ ನಿರ್ಮಲ ನದಿಯಂತೆ ತೋರಿತು,
ನನ್ನ ನರಳಾಟವೂ ಸ್ವರ್ಗಸುಖವಾಗಿ ಅಪ್ಯಾಯಮಾನವಾಯಿತು,
ನಮ್ಮೊಡನೆಯ ಪ್ರೀತಿ ಹಾಲ್ತೊರೆಯಾಗುವುದೋ?
ಇಲ್ಲ, ಹಾಲೋಗರವಾಗಿ ಕಾಡುವುದೋ?
ನಿನ್ನ ಹುಡುಕುತ್ತಾ ಹೊರಟಿಹೆನು
ಮತ್ತೆ ನೀನು ಸಿಗುವ ಭರವಸೆಯಿಂದೆ.....

Monday, January 6, 2014

ಬಿಡುಗಡೆ

ಕಾಣದ ಮನದಾಳದ ಮೂಲೆಯಲ್ಲಿ
ಬೀಡುಬಿಟ್ಟಿರುವ ನೋವುಗಳ ಕಂತೆಗಳು;
ವಸಂತಾಗಮನದ ಸಂತಸದಲ್ಲಿ
ನೋವಿನ ಕಂತೆಗಳ ಬಿಡುಗಡೆಯ ಆಲಾಪಗಳು;

ನನ್ನ ಮನಸ್ಸು ಈಗ ನಿರಾಳವಾಗಿದೆ
ನನ್ನನಾಳುವ ಆ ದೇವಗೆ ನೂರು ನಮಸ್ಕಾರ;
ನನ್ನೊಳ ಭಾದಿಸುವ ಭಾವಗಳ ತೊಳಲುವಿಕೆಗೆ
ಬಿಡುಗಡೆ,ಮುಕ್ತಿಯನ್ನಿತ್ತಿದ್ದೇನೆ ಸಂತಸದಿಂದೆ;

Saturday, January 4, 2014

ನಿನ್ನ ಹೆಸರು

ಎಂಥ ವಿಚಿತ್ರ ನೋಡು ಗೆಳತಿ,
ಪ್ರೀತಿಯ ಉನ್ಮಾದದಲ್ಲಿ,
ಪ್ರೀತಿಯ ಉತ್ಕಟತೆಯಲ್ಲಿ,
ಬರೆದೆ ನಿನ್ನ ಹೆಸರ ಆಗಸದ ಮೋಡಗಳ ಮೇಲೆ
ಹೊತ್ತೊಯ್ದವು ಗಾಳಿ ಚದುರಿ ಮೇಲೆ ಮೇಲೆ;

ವಸಂತಾಗಮನದ ಮುಂಚೆ ಮರಗಳ ಮೇಲೆಲ್ಲಾ ಬರೆದೆ
ಹಸಿರೆಲೆಗಳೆಲ್ಲಾ ಮಾಗಿ ಬಿದ್ದುಹೋದವು ಕಳಚಿ;

ಸಮುದ್ರದ ಮಳಲ ಮೇಲೆ ಬರೆದೆ
ಅಲೆಗಳು ಕೊಚ್ಚೊಯ್ದವು ಬಿಡದೆ;

ಬಾಳ ಪುಟದ ಹೃದಯಲ್ಲಿ ಬರೆದೆ
ಜೀವ ಇರುವವರೆಗೂ ಅಳಿಸಲಾಗದೆ ಬೆಸೆದಿದೆ;

Thursday, January 2, 2014

ಕರುಣದಿ ಕಾಯೇ ಸರಸತಿಯೇ

ಕರವ ಪಿಡಿದು ನಮಿಸುವೆ
ತಾಯಿ ಸರಸತಿಯೆ
ನಿನ್ನೊಲ ಬೇಡುವೆ
ಕರುಣದಿ ಸಲಹೇ ಭಾರತಿಯೇ||

ನಿನ್ನ ಮುದದಿ ಬೇಡುವೆ
ನಿರ್ಮಲ ಶ್ವೇತಾಂಬರಿಯೆ
ನೀಡು ನಿರ್ಮಲ ಮನವ
ಅಜನ ಪಿತನ ರಾಣಿಯೆ||

ಹಾಡಿ ಹೊಗಳಲು
ನೀಡು ಅಕ್ಷರಗಳ ಕರುಣದಿ
ಮನವ ನೀಡು
ಎಲ್ಲೆಲ್ಲೂ ನಿನ್ನ ಕಾಣುವ ತೆರದಿ||

ಹೊಸ ವರುಷ ಬರುತಿರಲು.....

ಹೊಸ ವರುಷ ಬರುತಿರಲು
ಹೊಸ ಬಯಕೆಯು ಚಿಗುರೊಡೆಯುತಿದೆ;
ಮುಂಬರುವ ಹೊಸ ದಿನಗಳು
ಹೊಸ ಭರವಸೆಯ ಹೊಮ್ಮಿಸಲಿ;
ಸಮೃದ್ಧಿಯ ನೆರೆ ಹರಿಯಲಿ;
ಸುಖ-ಸಂತೋಷಗಳ ಹೊತ್ತು ತರಲಿ;
ಹೊಸ ಯೋಚನೆಗಳಿಗೆ ದಾರಿ ತೋರಲಿ;
ಹೊಸ ಆಲೋಚನೆಗಳು ಒಡಮೂಡಲಿ;
ಹೊಸ ದಿನ,ಪ್ರತಿ ದಿನ ಶಕ್ತಿ ಹರಿದುಬರಲಿ;
ಹೊಸ ಯೋಜನೆಗಳಿಗೆ ತೇಜಸ್ಸು ಭೋರ್ಗರೆಯಲಿ;
ಹೊಸತನದ ಗೊಂಚಲಿನ ಹೂವಿನಂತೆ,
ಸಾಕಾರಗೊಳಿಸುವ ಪ್ರಾರ್ಥನೆಯಂತೆ,
ಆಗಸದಿಂದ ಈ ಭೂಮಿಗೆ ಚೈತನ್ಯದ ಬೆಳಕು ಹರಿದುಬರಲಿ;
ಎಲ್ಲ ಜೀವಿಗಳ ಪುಳಕಗೊಳಿಸಲಿ;
ಪ್ರೀತಿಯ ಹೊನಲು ನಿರಂತರ ಹರಿದುಬರಲಿ;

ಸಂತೋಷದ ಋಣ

ನೀ ಯಾರಾದರೇನು ? ನಿನ್ನಲ್ಲಿ ಏನಿದ್ದರೇನು ? ಮನದೊಳ ಭಾವಗುಣದಂತೆ ,   ದಕ್ಕುವುದು ನಿನಗೆ ಸಂತೋಷದ ಋಣ .   ಮನದ ರಂಗಮಂಚದಲಿ ನಡೆದಿದೆ ತಾಲೀಮು , ...