Thursday, October 31, 2013

ಮೂದಲಿಕೆ

ರಾತ್ರಿಯ ಕತ್ತಲಲ್ಲಿ ಮಲಗಿದ್ದೆ
ಕಣ್ಣಲ್ಲಿ ನೀರು ಹನಿಯುತ್ತಿತ್ತು
ಮನದಲ್ಲಿ ನೂರು ನೋವು ಕಥೆ ಹೇಳುತ್ತಿತ್ತು
ಆಗಸದಲ್ಲಿ ನೂರು ಹಕ್ಕಿಗಳು ಹಾರುತ್ತಿತ್ತು
ಮೋಡಗಳು ತಂಗಾಳಿಯ ಹೊತ್ತು ಎತ್ತಲೋ ತೇಲಿ ಹೋಗುತ್ತಿತ್ತು
ರಾತ್ರಿ ಕತ್ತಲಲ್ಲಿ ನಕ್ಷತ್ರಗಳಿ ಪಿಳಿಪಿಳಿ ನಗುತ್ತಿತ್ತು
ನಾನು ಎಲ್ಲೋ ಕಳೆದುಹೋಗಿದ್ದೆ
ಕಾಣದ ಕೈಯಾಟಕ್ಕೆ ಜೀವನ ಸೋತಿತ್ತು
ಬಯಸಿದ ಯಾವುದೂ ಫಲಿಸದೆ
ಮನದಲ್ಲಿ ಯಾತನೆ ನರಳುತ್ತಿತ್ತು
ಕಣ್ಣಿಗೆ ನಿದ್ದೆ ಹತ್ತಿತ್ತು
ಆಗಸದಲ್ಲಿ ನಗುಮುಖದ ಚಂದ್ರ ಮೂಡುತ್ತಿದ್ದ
ನೋವು ಮಾತ್ರ ಮೂದಲಿಸುತ್ತಿತ್ತು

ಕಂದ ನೀನಿಲ್ಲದ ಮನೆಯಲ್ಲಿ....

ಕಂದ ನೀನಿಲ್ಲದೆ ಮನೆಯಲ್ಲಿ ಬೇಸರವಾಗಿದೆ ನನಗೆ
ಮನೆಯಲ್ಲಿ ಸ್ಮಶಾನ ಮೌನ ತುಂಬಿ ತುಳುಕಿದೆ ನೀನಿಲ್ಲದೆ
ದಿನವೂ ನಿನ್ನ ಚೈತನ್ಯದ ಚೇಷ್ಟೆ ಕಂಡ ನನಗೆ
ಇಂದು ಮನೆಗೆ ಬಂದೊಡನೆ ವಿಷಾದ ಆವರಿಸಿದೆ ನೀನಿಲ್ಲದೆ||

ಸದಾ ಚಟ-ಪಟ ಮಾತನಾಡುತ್ತಾ ಅಮ್ಮನನ್ನು ಗೋಳು ಹೊಯ್ಕೊಳ್ಳುವ ನಿನ್ನ ಪರಿ
ಇಂದೇಕೆ ಕಾಣದಾಗಿದೆ, ಬಲು ಯೋಚಿಸುತ್ತೇನೆ ನಿನ್ನ ಬಗ್ಗೆ
ರಜೆ ಬಂದಿದೆ ನಿಜವ ಅರಿವಿದೆ, ಆದರೂ ಈ ರೀತಿಯ ಯೋಚನೆ ಸರಿ!
ನಿನ್ನ ಮೇಲಿನ ವ್ಯಾಮೋಹವಿದಲ್ಲ, ಇದು ವಾತ್ಸಲ್ಯದ ಬುಗ್ಗೆ||

ಸದಾ ಯಂತ್ರಗಳ ಯೋಚನೆ ನಿನಗೆ, ನನಗಂತೂ ಆಶ್ಚರ್ಯ!
ಎಲ್ಲಿಂದ ಬಂತು ಈ ಪರಿಯ ಯಂತ್ರಗಳ ಆಸೆ?
ಕಳ್ಳ ಕೃಷ್ಣನಂತೆ ಬಂದು ಮೊಸರು ಕುಡಿಯುವೆ
ಬೇಸರಿಸದೆ ಎಷ್ಟೊಂದು ಆಟ ಆಡುವೆ ನಿರಂತರವಾಗಿ||

ನಿಂತ ಟ್ರೈನ್ ಇಂಜಿನ್,ನಿಂತ ಗಡಿಯಾರ,ದಿಕ್ಸೂಚಿ
ಸೈಕಲ್ ಡೈನಮೋ, ನಿನ್ನ ಸ್ಪರ್ಶಕ್ಕೆ ಕಾಯುತ್ತಿರುವ ಜೈಲೋಪೋನ್
ಕಾರ್ಟೂನ್ ನೆಟ್ ವರ್ಕ್, ಪೋಗೋ ಗಳ ಹಾವಳಿಯಿಲ್ಲ
ನಿನ್ನ ಕೈತಾಕದೆ ರಿಮೋಟ್ ಧೂಳು ಹಿಡಿಯುತ್ತಿವೆ
ಬಂದು ಬಿಡು ಕಂದ ರಜಾ ಮುಗಿಸಿಕೊಂಡು ಬೇಗ||

Wednesday, October 30, 2013

ಬೇಡ ಬೇಡ ಈ ಆವೇಗ

ನಾಗ ನಾಗ ಏಕೋ ಈ ಆವೇಗ
ಸುಮ್ಮನೆ ನೆಮ್ಮದಿಯ ಕಳೆದುಕೊಳ್ಳುವೀ ಏಕೆ ನಾಗ?

ನಿನ್ನ ಮನದ ಕೊಳೆಯನು ತೊಳೆದು ಕೋ
ಪರರ ಮೇಲಿನ ಕೊಳೆಯ ಬಗ್ಗೆ ಏಕೆ ಚಿಂತೆ ||

ನಿನ್ನ ಮನದ ನೆಮ್ಮದಿ ನಿನ್ನ ಕೈಯಲ್ಲೇ ಇದೆ
ನಿನ್ನ ನೆಮ್ಮದಿ ಬೇರೆಯವರು ಕಾರಣರಲ್ಲ ಎಂಬುದ ತಿಳಿಯುವುದರಲ್ಲಿದೆ||

ದ್ವೇಷ ಬೀಜವ ಮನದಲ್ಲಿ ಬಿತ್ತಿರುವೆ ಏಕೆ?
ನಮ್ಮೊಳ ದ್ವೇಷ ಪರರ ಸುಡದೆ ನಮ್ಮನೇ ಸುಡುವುದು ಜೋಕೆ!||

ಕೆಲಸದಲ್ಲಿ ನೀ ಮೊದಲಿಗ
ದ್ವೇಷದ ಜ್ವಾಲಾಗ್ನಿಗೆ ಬಲಿಯಾಗ ಬೇಡ ಮಗ||

ದ್ವೇಷವೇ ಉಸಿರಾಗಿಸಿಕೊಂಡವರು ಯಾರೂ ಉದ್ಧಾರವಾಗಿಲ್ಲ
ಮನಸ್ಸಿನ ನೆಮ್ಮದಿಯಲ್ಲೇ ನಮ್ಮ ಉದ್ಧಾರ ತಿಳಿ ಮಲ್ಲ||

ನಿಲ್ಲು ನಿಲ್ಲು ನಾಗ
ದ್ವೇಷದ ಸಂಗ ಬೇಡ ನಾಗ||

(ನನ್ನ ಆತ್ಮೀಯ ಗೆಳೆಯ ನನ್ನ ಮೇಲಿನ ದ್ವೇಷದಿಂದ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಿಕೊಂಡಿದ್ದಾನೆ. ಅವನ ಮನಸ್ಸಿಗೆ ನೆಮ್ಮದಿ,ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ)

Monday, October 28, 2013

ನೋವೆ ನೋವೆ ಏಕೆ ಬಂದೆ?

ನೋವೆ ನೋವೆ ಏಕೆ ಬಂದೆ?
ಮನದಲಿ ನರಳುತ ಏಕೆ ನಿಂದೆ?||

ಪ್ರೀತಿಯು ಹೋಯಿತು ಅದಕೆ ಬಂದೆ
ಕಣ್ಣೀರ ಹರಿಸಲು ಮನದಲಿ ನಿಂದೆ||

ಪ್ರೀತಿಯು ಎಲ್ಲಿಂದ ಬಂತು?
ಪ್ರೀತಿಯು ಎಲ್ಲಿಗೆ ಹೋಯಿತು?

ಅದು ನಿನ್ನಲ್ಲೇ ಇತ್ತು
ನಿನ್ನಲ್ಲೇ ಕಳೆದು ಹೋಯಿತು||

ಆಗ ಇತ್ತು, ಈಗ ಇಲ್ಲ
ಏನಿದರ ಮರ್ಮ?
ಈ ನರಳಾಟ, ಈ ಹುಡುಕಾಟ
ಏನಿದು ನನ್ನ ಕರ್ಮ?||

Sunday, October 27, 2013

ಸುಮ್ಮನೆ ನೋಡು

ನನ್ನ ಕಣ್ಣುಗಳನ್ನೇ ನೊಡು
ಹೇಳು ನನಗೆ ನಿನಗೆ ಏನು ಕಾಣುಸುವುದೆಂದು
ಅದರಲ್ಲಿ ಸಂತೋಷವಿಲ್ಲ;
ಅದರಲ್ಲಿ ಅಂದವಿಲ್ಲ;

ನನ್ನ ನಟನೆಯಿಂದ
ನೋಡುಗರಿಗೆ ನಾನು ಸಂತೋಷವಾಗಿ ಕಾಣಿಸುತ್ತೇನೆ;
ಅದರಿಂದ ನನ್ನಲ್ಲೇನೂ ತೊಂದರೆಯಿಲ್ಲ
ಆದರೆ ನೋಡು ನನ್ನ ಕಣ್ಣೊಳಗೆ;

ನನ್ನ ಕಣ್ಣೊಳಗೆ ನೋಡು
ಅದರಲ್ಲಿ ಎಲ್ಲವೂ ಕಾಣಿಸುವುದು
ಎಲ್ಲವನ್ನೂ ಅದರೊಳಗೆ ಹಿಡಿದಿರುವೆ
ಅಲ್ಲಿ ನೀನು ನನ್ನನ್ನು ಕಾಣುವೆ;

ಪ್ರೇರಣೆ: "Just Look" By Bryan Rankin.

Saturday, October 26, 2013

ನೀ ಕೊಟ್ಟ ಪ್ರೀತಿ ಮಳೆಯಲ್ಲಿ ಕೊಚ್ಚಿಹೋಯಿತು

ನೀ ಕೊಟ್ಟ ಪ್ರೀತಿ ಮಳೆಯಲ್ಲಿ  ಕೊಚ್ಚಿಹೋಯಿತು
ಹೃದಯದಲಿ ತುಂಬಿದ ಪ್ರೀತಿ ನೋವಾಗಿ ಬದಲಾಯಿತು

ಕನ್ನಡಿಯೊಳಗಿನ ನನ್ನ ಮುಖ ನಿನ್ನ ನೆನಪ ತರುವುದು
ಅದೇ ನೀ ನುಡಿದ ಸುಳ್ಳು ನೀ ನಿಜವೆಂದುಲಿದುದು

ನನ್ನ ಕಣ್ಣಾಲಿಗಳಲಿ ತುಂಬಿದ ನೀರು ನೀ ಕಾಣುವೆ ನೋಡು
ನೀ ಕಾಣುವ ಮುಖದ ಮೇಲಿನ ಗೆರೆಗಳು ಮನದ ಆಳುವೆ ನೋಡು

ನೀ ಕೊಟ್ಟ ಪ್ರೀತಿ ಮಳೆಯಲ್ಲಿ  ಕೊಚ್ಚಿಹೋಯಿತು
ಹೃದಯದಲಿ ತುಂಬಿದ ಪ್ರೀತಿ ನೋವಾಗಿ ಬದಲಾಯಿತು

ಪ್ರೇರಣೆ:A Sad Song by Ten Years After

ದುಃಖ

iಬಳಲಿದ ಕಂಗಳು
ಸೊರಗಿದ ಹೃದಯ
ಸಾಗಲಾರದ ದಿನಗಳು
ನೀನು ದೂರವಾದ ಮೇಲೆ||

ಅಳುವ ದಿನ
ನರಳಿಸುವ ನಾಳೆ
ದುಃಖದ ಮಳೆ ಸುರಿಸುವ ರಾತ್ರಿ
ಕಣ್ಣೀರ ನದಿ
ನೀನು ದೂರವಾದ ಮೇಲೆ||

ದುಃಖವೇ ದೂರಾಗು
ದುಃಖವೇ ಅಂತ್ಯವಾಗು
ದುಃಖವೇ ನಾನು
ಎಂದೂ ಮುಗಿಯಲಾರದು
ನೀನು ದೂರವಾದ ಮೇಲೆ||


ಪ್ರೇರಣೆ: "Sad" by Ray Hansell

ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು

ಬಾಸು,ಬಾಸು ನಮ್ಮ ವಾಸು
ಆಗಬೇಡ ನೀನು ರಕ್ತ ಪೀಪಾಸು
ಕೊಡಬೇಡ ಮಳ್ಳಿ ಮಳ್ಳಿಯಂತ ಪೋಸು
ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು

ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು
ದಿನವೂ ನರಳೂತ್ತಿದ್ದೇನೆ ನಿಮ್ಮ ಅಡಿಯಲ್ಲಿ
ಕಣ್ಣೂ ಬತ್ತಿ ಹೋಗಿದೆ ಸುರಿಸಲಾರದೆ ಕಣ್ಣೀರು||

ದಿನವೂ ನಡೆಯುತ್ತಿದೆ ದೌರ್ಜನ್ಯ ತಡೆಯಿಲ್ಲದೆ
ಮನಸು ಮುದುಡುತಿದೆ ಆಸರೆ ಸಿಗಲಾರದೆ
ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು||

ದಿನವೂ ನರಳುತ್ತಿದ್ದೇವೆ ಬೈಗುಳ ಕೇಳಿ ಕೇಳಿ
ಉತ್ಪಾದನೆಯೇ ಪ್ರಗತಿ ನಮ್ಮ ಕಣ್ಣೀರ ನದಿಯ ಮೇಲೆ
ನಿಮ್ಮ ಸವಾರಿ ನಮ ಮೃಧು ಮನಗಳ ಮೇಲೆ
ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು||

ಬೆಳೆಯುತಿದೆ ಕಟ್ಟಡಗಳು ವರ್ಷ ವರ್ಷವೂ
ಮೇಲೇರುವವರು ಏರುತ್ತಲೇ ಇದ್ದಾರೆ
ನಾವೋ ಇದ್ದಲ್ಲಿಯೇ ಇದ್ದೇವೆ
ನಿಂತು ಸೊರಗುತ್ತಿದ್ದೇವೆ ಏಳಿಗೆ ಕಾಣದೆ||

ಬಳಲಿದ್ದೇವೆ ದಿನವೂ ಹೊತ್ತು ಹೊತ್ತು ನಿಮ್ಮ ಅಡ್ಡಪಲ್ಲಕ್ಕಿ
ಬಳಲಿ ಬೆಂಡಾಗಿದ್ದೇವೆ ತೋರಿ ತೋರಿ ನಮ್ಮ ಅವ್ಯವಸ್ಥೆ
ನಿಮ್ಮ ಎಳಿಗೆಗೆ ನಮ್ಮ ಬಳಸಿದಿರಿ ಈಗ ನಾವು ಬೇಕಿಲ್ಲ ನಿಮಗೆ
ಏಕೆ ಕೇಳಿಸದು ಬಾಸು ನಮ್ಮ ಹೃದಯದ ಮಾತು||

ಹೇಳಿದರೂ ಮನದ ನೋವು
ಕೇಳಿಸದೇ ನಮ್ಮ ಮಾತು
ಏಕೆ ನಮ್ಮನ್ನು ಕಡೆಗಣಿಸುತಿರುವಿರಿ?
ಹೊಟ್ಟೆ ತುಂಬಿದವಗೆ
ಹಸಿದವರ ನೋವು ಅರ್ಥವಾಗದು ಬಾಸು||

Sunday, October 20, 2013

ಮುಖವಾಡ

ಒಮ್ಮೆ ನಾನು ಒಂಟಿಯಾಗಿದ್ದೆ, ದುಃಖ ಜೊತೆಯಾಯಿತು;
ಸಮಾಧಾನ ಪಡಿಸುವ ಯಾವ ಹೃದಯವೂ ಬಳಿ ಸುಳಿಯಲಿಲ್ಲ;
ಯಾವಾಗಲೂ ನಗುವ ಮುಖವಾಡ ತೊಟ್ಟೆ ಸತ್ಯ ಮರೆಮಾಚಲು;
ಹೃದಯ ಭಾವನೆಗಳ ಬಚ್ಚಿಟ್ಟೆ ಸಟೆಯ ತೆರೆಯ ಹಿಂದೆ||

ಬಹು ದಿನಗಳಿಂದ ನನಗೂ ಗೆಳೆಯರಿದ್ದರು
ನಾನೂ ಒಬ್ಬನಾಗಿದ್ದೆ ಮುಖವಾಡದ ಸಹಾಯದಿಂದ;
ಆವರಿಸಿದೆ ಮನದಾಳದಲ್ಲಿ ಶ್ಯೂನತೆಯ ಭಾವ
ನನ್ನತನ ಎಲ್ಲೋ ಕಳೆದುಹೋದ ಶೋಕಭಾವ ||

ಕಗ್ಗತ್ತಲ ರಾತ್ರಿಯಲ್ಲಿ ಅಳುವ ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ
ಅದಕ್ಕಾಗಿಯೇ ಒಂದು ಮುಖವಾಡ ತೊಟ್ಟೆ ಸುಳ್ಳುಗಳ ಮರೆಮಾಚಲು;
ಬೆಳ್ಳಂಬೆಳಗಿನಲ್ಲೂ ನನ್ನ ಮುಖದಲ್ಲಿ, ನನ್ನಲ್ಲಿ ಅಡಗಿದ ನೋವ ಯಾರೂ ನೋಡಲಿಲ್ಲ;
ಅದಕ್ಕಾಗಿಯೇ ಸದಾ ನಗುವ ಮುಖವಾಡ ತೊಟ್ಟೆ ನೋವ ಮರೆಮಾಚಲು;

ನನ್ನೆಲ್ಲಾ ನಗುವ ದೋಣಿಗೆ ನನ್ನ ಕಣ್ಣೀರಿನ ನದಿ ಜೊತೆಯಾಗಿದೆ
ನನ್ನೆಲ್ಲ ಸಕಲ ವೈಭೋಗಗಳ ಹಿಂದೆ ಅವ್ಯಕ್ತ ಭಯವಿದೆ;
ಎಲ್ಲರೂ ನೋಡುವ, ಭಾವಿಸುವ ಹಾಗೆ ನಾನಿಲ್ಲ
ಅದೆಲ್ಲಾ ನಾ ತೊಟ್ಟ ಮುಖವಾಡದ ಪ್ರತಿಫಲ||

ದಿನವೂ ಪ್ರತಿದಿನವೂ
ನಿಧಾನವಾಗಿ ನಾನು ಸಾಯುತ್ತಿದ್ದೇನೆ;
ಮುಂದೆ ಸಾಗಲೂ ನನ್ನಿಂದ ಸಾಧ್ಯವಿಲ್ಲ
ನಾನು ಏನನ್ನೋ ಕಳೆದುಕೊಂಡಿದ್ದೇನೆ||

ಇದುವರೆಗೂ ನಾನು ಹುಡುಕುತ್ತಲೇ ಇದ್ದೇನೆ
ಅದು ಸಿಕ್ಕರೆ ನಾನು ಅಳುವ ನಿಲ್ಲಿಸಬಹುದೆಂದು;
ಯಾರಾದರೂ ಬಂದು ನನ್ನ ಕಣ್ಣೀರನ್ನು ಒರೆಸುವರೆಂದು;
ಯಾರಾದರೂ ಬಂದು ನನ್ನ ಭಯಹೋಗಲಾಡಿಸುವರೆಂದು||

ಅಲ್ಲಿಯವರೆಗೂ ನಾನು ನಗುತ್ತಲೇ ಇರುತ್ತೇನೆ
ನಗುವ ಮುಖವಾಡದ ಹಿಂದೆ ನನ್ನೆಲ್ಲಾ ನೋವುಗಳ ಮರೆಮಾಚಿ;
ಭರವಸೆ ಇದೆ ಒಮ್ಮೆಯಾದರೂ ಸಹಜವಾಗಿ ನಗುತ್ತೇನೆಂದು
ಅಲ್ಲಿಯವರೆಗೂ ನಾನಿಲ್ಲಿ ಇರುತ್ತೇನೆ ಕಾಯುತ್ತಾ.........||

ಪ್ರೇರಣೆ: 'Mask' by Potsim And Pikachu

Saturday, October 19, 2013

ಮಾತು-ಮೌನ

ಪ್ರತಿದಿನವೂ ನಾವಿಲ್ಲಿ ಬದುಕಬೇಕು
ಏಕೆ? ಎಂಬ ಪ್ರಶ್ನೆ ಮನದಲ್ಲಿ ಮೂಡದಹಾಗೆ
ಮನದಲ್ಲಿ ನೂರು ಯೋಚನೆ,ಯಾಚನೆ
ನೋವು,ಸಂತಸ,ಗುರಿ ನಡೆಸುವುದು ಮುಂದಕ್ಕೆ||

ಒಂದು ಮಾತು ಹೆಚ್ಚು,ಒಂದು ಮಾತು ಕಡಿಮೆ
ನೂರು ಭಾವನೆಗಳ ಹುಟ್ಟುಹಾಕುವುದು
ನೋವು ಸಂತಸವನಾಳುವುದೋ?
ಸಂತಸ ನೋವನಾಳುವುದೋ?
ನೋವು-ಸಂತಸ ಬದುಕೆಂಬ ನಾಣ್ಯದ ಎರಡು ಮುಖಗಳು||

ಮಾತು ಮಾತು ಮಾತು ಮನದ ಭಾವಗಳ ಹೊರಹಾಕುವ ಸಾಧನ
ಮೌನ ಮೌನ ಮೌನ ನಮ್ಮೊಳಗಿನ ಭಾವಗಳ ಬಚ್ಚಿಟ್ಟುಕೊಳ್ಳುವ ಸಾಹಸ
ಮಾತು-ಮೌನ ನಮ್ಮ ವ್ಯಕ್ತಿತ್ವದ ಪ್ರಶಸ್ತಿ ಪತ್ರ
ಯಾವುದೂ ಹೆಚ್ಚಾಗಬಾರದು,ಕಡಿಮೆಯಾಗಬಾರದು
ಸಮಭಾವ,ಸಮಚಿತ್ತ,ಸಮಹಿತ ಸಮ್ಮೇಳನ ಬದುಕು ಭಾವಮೇಳ||

Sunday, October 13, 2013

ಏಕೆ ಈ ಮುನಿಸು ಹೇಳು ಗೆಳತಿ?

ಏಕೆ ಈ ಮುನಿಸು  ಹೇಳು ಗೆಳತಿ?
ಹತ್ತಿರ ಸೆಳೆದರೂ ಏಕೆ ದೂರ ಹಾರುತಿ?

ಕಣ್ಣು ಕಣ್ಣು ಬೆರೆತರೂ
ಮನಸು ಮನಸ ಸೆಳೆದರೂ ಗೆಳತಿ
ದೂರ ತಳ್ಳುವೆ ಏಕೆ?
ಈ ಹುಸಿ ಕೋಪ ಇಂದೇಕೋ? ಗೆಳತಿ||

ನಾ ಮೌನ ಮುನಿ ತಿಳಿದಿದೆ
ಅದೇ ನಿನ್ನಲ್ಲಿ ಮುನಿಸು ತಂದಿದೆ ಗೆಳತಿ
ಮನವ ಹಗುರಗೊಳಿಸು,ಸಂತೈಸಿಕೋ
ಮನದಲಿ ಸ್ಪೂರ್ತಿ,ಶಾಂತಿ ನೆಲೆಗೊಳಿಸಿಕೋ ಗೆಳತಿ||

ಇದೇ ಕೊನೆಯಲ್ಲ, ಮೊದಲೂ ಅಲ್ಲ
ಮಧುರ ದಿನಗಳು ಕಾದಿವೆ ಗೆಳತಿ
ಪ್ರೀತಿಯ ಇನಿದನಿಗೆ ಸೋಲೋಣ
ಹೊಸ ಪ್ರೀತಿಯ ಪುಟ ತೆರೆಯೋಣ ಬಾ ಗೆಳತಿ||

ಬಿಡು ಮುನಿಸು
ಕೊಡು ಮನಸು  ಗೆಳತಿ.....

ನಮ್ಮ ಉತ್ಕಟ ವ್ಯಥೆ

ಸಮುದ್ರದ ಮೇಲೆ ಸೂರ್ಯನುದಿಸುವಾಗ
ಹೊರಹೊಮ್ಮುವ ಮಂಜಿನಂತೆ

ನೀರು ಬಿಸಿಯಾಗುತ್ತಿದ್ದಂತೆಯೇ
ಮಾಯವಾಗುವುದು
ನಮ್ಮ ಮಗುವಿನಂತೆ
ನಮ್ಮಯ ಉತ್ಕಟವಾದ ವ್ಯಥೆ

ಪ್ರೇರಣೆ:  'Great our sorrow' by Heather Burns

ಏಕಾಂಗಿ

ಕಗ್ಗತ್ತಲ ರಾತ್ರಿಗಳಲ್ಲಿ ನಡೆದಾಡಿದ್ದೇನೆ ಏಕಾಂಗಿಯಾಗಿ;
ಜೀವನ ಯಾತ್ರೆಯ ಕೊನೆಗೊಳಿಸಿಕೊಳ್ಳಲು ಪ್ರಾರ್ಥಿಸಿದ್ದೇನೆ ಏಕಾಂಗಿಯಾಗಿ;
ನಾನು ಏಕಾಂಗಿ, ಒಂಟಿ ಜೀವ ನನ್ನದು;
ಏಕಾಂಗಿ ಬದುಕು ನನ್ನದು, ಈ ಜೀವನ ಚಕ್ರದಲ್ಲಿ;

ಒಂಟಿಯಾಗಿಯೇ ತಿನ್ನುವೆ;
ಒಂಟಿಯಾಗಿಯೇ ಮಲಗಿವೆ;
ಒಂಟಿಯಾಗಿಯೇ ಓಡಾಡುವೆ;
ಒಂಟಿಯಾಗಿಯೇ ಓಡುವೆ;
ಒಂಟಿಯಾಗಿಯೇ ಅಳುವೆ;
ಒಂಟಿಯಾಗಿಯೇ ಜೋರಾಗಿ ಕಿರುಚುವೆ;

ಸಣ್ಣ ತೂತುಗೂಡಲ್ಲಿ ಬಿದ್ದಿರುವೆ ಏಕಾಂಗಿಯಾಗಿ;
ಏಕಾಂಗಿ ನಾನು, ಪ್ರೀತಿಯಿಲ್ಲ ತೋರ್ಪಡಿಸಲು;
ಮನೆಯಲ್ಲಿ ಒಂಟಿ, ಏಕಾಂಗಿ ಎಲ್ಲೆಡೆಯಲ್ಲೂ;
ಏಕಾಂಗಿ ನಾನು , ಜೀವನದ ಕೊನೆಯವರೆಗೂ.....

ಪ್ರೇರಣೆ:  'Alone' by Arik Fletcher.

Saturday, October 12, 2013

ಮನದ ಹಠ

ದಿನವೂ ಕೈಕಟ್ಟಿ ನಿಲ್ಲುವೆ;
ಮನವಿಟ್ಟು ಕಿವಿಗೊಟ್ಟು ಕೇಳುವೆ;
ಮನದಲ್ಲಿ ನೂರು ಜರಡಿಗಳಿವೆ;
ಪ್ರತಿಬಾರಿ ಕೇಳಿಸಿಕೊಳ್ಳುವಾಗಲೂ
ಮನಕ್ಕೆ ತೆಗೆದುಕೊಳ್ಳುವೆ
ಬೇಡದ ಕಸವನ್ನೆಲ್ಲಾ ದೂರಕ್ಕೆ ತಳ್ಳುವೆ;
ಕಾಲ ಬದಲಾಗುತ್ತದೆಂಬ ಆಶಾಕಿರಣ ಮನದಲ್ಲಿ ನೆಲೆಗೊಂಡಿದೆ;
ಎಲ್ಲವನ್ನೂ ಸಹಿಸಿಕೊಳ್ಳುವೆ;
ಎಲ್ಲಾ ಅವಮಾನಗಳನ್ನೂ ಸಹಿಸುವೆ;
ಕಾಲಕಸದಂತೆ ಕಂಡವರ ಎದುರು ನಿಲ್ಲಬೇಕಿದೆ ತಲೆಯೆತ್ತಿ;
ಮಾತು,ಕುಹಕ ನಗು;
ಹಾಸ್ಯ,ಅಪಹಾಸ್ಯ;
ಠೀಕೆ,ಪಕ್ಷಪಾತ;
ಎಲ್ಲಾ ಮೋಸದಾಟ ನಡೆಯಲಿ ಬಿಡು;
ಎದೆಗುಂದ ಬೇಡ;
ತಾಳ್ಮೆ ಇರಲಿ;
ಪ್ರೀತಿ ಇರಲಿ;
ಜಗದ ಗೆಲುವು ನಮ್ಮದೇ......

Wednesday, October 2, 2013

ಕಣ್ಣೀರೆ.ಕಣ್ಣೀರೆ ದೂರ ಹೋಗು

ಕಣ್ಣೀರೆ.ಕಣ್ಣೀರೆ ದೂರ ಹೋಗು
ಏಕೆ ಬರುವೆಯೋ ಪ್ರತಿದಿನವೂ.....?
ನೀ ಬಂದು ನನ್ನ ನೋವುಗಳ ನೆನಪಿಸುವೆ;
ನೀ ಬಂದು ನನ್ನ ಹಳೆಯದೆಲ್ಲವ ತೆರೆದಿಡುವೆ;
ಏಕೆ ನೀನು ದೂರ ಹೋಗಲಾರೆ?
ನಿನ್ನಂದ ಸಂತಸ ಹತ್ತಿರ ಬಾರದು||

ಕಣ್ಣೀರು,ಕಣ್ಣೀರು ನದಿಯಾಗಿ ಹರಿಯುತಿದೆ;
ಹೇಳುತಿರುವೆ ಪುಟ್ಟ ಹೆಣ್ಣು ಮಗುವಿನ ನೋವಿನ ಕಥೆ;
ನೆನಪುಗಳ ಜೇಡರಬಲೆ ಆಕೆಯ ಬಳಸಿದೆ;
ದೇವರಲ್ಲಿ ಮೊರೆಯಿಡುವುದೊಂದೇ ಆಕೆಗಿರುವುದು
ಬಳಲಿ ಬೆಂಡಾಗುವ ಮುಂಚೆ||

ದೇಹಕ್ಕಾದ ಗಾಯ ಮಾಯುವುದು;
ಆದರೆ ಮನಸ್ಸಿಗಾದ ಗಾಯ ಮಾಯುವುದೇ?
ಅವಳು ಬೆಳೆಯುತ್ತಿದ್ದಂತೆ ಭಾವನೆಗಳೂ ಕೆರಳುವುದಿಲ್ಲವೇ?

ಚಿಕ್ಕ ಹುಡುಗಿ;
ಜೀವನದಲ್ಲಿ ಭರವಸೆ ಕಳೆದುಕೊಂಡ ಹುಡುಗಿ;
ಕುಂಟುತ್ತಾ,ಕುಂಟುತ್ತಾ
ಜೀವನ ಪ್ರೀತಿ ಬೆಳೆಸಿಕೊಂಡವಳು||

ಕಣ್ಣೀರೆ,ಕಣ್ಣೀರೆ ಬಾ ಅವಳು ಜಗವ ಬಿಟ್ಟ ಮೇಲೆ
" ಚಿಕ್ಕವಳು, ಸುಖಿ" ಎಲ್ಲವೂ ತಿಳಿದಿದೆ;
ಕುಡುಕ ಅಪ್ಪನಿಂದ ಒದೆ ತಿಂದ ಚಿಕ್ಕ ಮಗು;
ಪ್ರೀತಿಸುವವರು ಯಾರೂ ಇಲ್ಲದವಳು;
ಇನ್ನು ಗೆಳೆಯರೋ ಮಾತನಾಡುವ ಹಾಗಿಲ್ಲ;
ಓ! ನನ್ನ ಜೀವನವೇ, ಏನೆಂದು ಹೇಳಲಿ!

ಪ್ರೇರಣೆ: Tears, Tears go Away by Stephany Manfull

ಕಾಯಕ

ಸಮಸ್ಯೆ ಹುಟ್ಟುಹಾಕುವುದು ಕಷ್ಟವೇನಲ್ಲ
ಸ್ವಾರ್ಥ ಸಾಧನೆಗೆ ಏನು ಬೇಕಾದರೂ ಮಾಡುವರಲ್ಲ
ಆಗುವುದಿಲ್ಲ, ಮಾಡುವುದಿಲ್ಲ ಎಂದೆನ್ನುವುದಕ್ಕೆ
ಕಾರಣಗಳು ಬೇಕಿಲ್ಲ ಏಕೆಂದರೆ ಕುಂಟು ನೆಪ,ಕಳ್ಳ ನೆವ ಇಲ್ಲಿ ನೂರಿವೆ;
ಹೆಜ್ಜೆ ಹೆಜ್ಜೆಗೂ ಸಿಗುವುದು ಕಾರಣ
ಕೆಲಸ ಮುಂದೂಡಲು......
ಇದೇ ನಡತೆ ಮೈಗೂಡಿದೆ ಹಲವರಿಗೆ
ಸೊರಗುತಿಗೆ ಕಾಯಕ,ಕಾಲ
ಕಾಯಕವೇ ಕೈಲಾಸ ವೆಂದವ ಬಿಕ್ಕಳಿಸುತ್ತಿದ್ದಾನೆ
ದುಡಿಮೆಯೇ ದೇವರೆಂದವ ಕಾಣೆಯಾಗಿದ್ದಾನೆ.

Tuesday, October 1, 2013

ನಿರಂತರ

ಹೇಳುವುದಕ್ಕೆ ನೂರು ಆದರ್ಶಗಳಿವೆ
ನೂರು ಆದರ್ಶ ಪುರುಷರಿದ್ದಾರೆ
ಕಥೆಗಳು ನೂರಿವೆ;
ಪುರಾಣ,ಸ್ಮೃತಿಗಳು ಹತ್ತು ಹಲವು
ಸರಿದಾರಿ ಎನಿಸಿಕೊಂಡವು ಇಲ್ಲಿ ನೂರು;
ಸಂಘರ್ಷ ಎಲ್ಲಿದೆ ದಿನವೂ
ಸಮತೋಲನ ಕಾಯ್ದುಕೊಳ್ಳಬೇಕು ಎಲ್ಲವೂ
ಸತ್ಯ-ಅಸತ್ಯ;
ಧರ್ಮ-ಅಧರ್ಮ;
ಒಳ್ಳೆಯದು-ಕೆಟ್ಟದು;
ಏಕತ್ವ ಸಾಧಿಸಲು ಹೆಣಗಾಟ ನಿರಂತರ;
ಏಕಮೇವಾದ್ವಿತೀಯವಲ್ಲದು ಎಲ್ಲಿದೆ?
ಒಂದೇ ಆಗಿಹೋದರೆ ಅದಕ್ಕೆ ಬೆಲೆ ಎಲ್ಲಿದೆ?
ಹಳೇ ಆದರ್ಶಗಳು ಸಾಯಲೇಬೇಕು;
ಹೊಸ ಆದರ್ಶಗಳು ಹುಟ್ಟಲೇಬೇಕು;
ಹುಟ್ಟು-ಸಾವು ನಿರಂತರ;

ವಿನಿಮಯ

ಸುಂದರವಾದುದನ್ನು ಈ ಬದುಕು ಮಾರಾಟಕಿಟ್ಟಿದೆ
ಭವ್ಯ,ಸುಂದರ ಹಾಗು ಆಪ್ಯಾಯಮಾನವಾದವುಗಳೆಲ್ಲವನ್ನೂ
ಹಿಮಾಲಯದ ತುತ್ತತುದಿಯಲ್ಲಿ ತೇಲುವ ನೀಲಿ ತರಂಗಗಳನ್ನು
ಸಿಡಿದೇಳುವ ಬೆಂಕಿಯ ಕಿಡಿಗಳ ಸಂಗೀತವನ್ನು
ಮುಗ್ಧ ಮಕ್ಕಳ ಮುಖದಲ್ಲಿ ಹೊಮ್ಮುವ ಮಂದಹಾಸ ಹಾಗು
ತಮ್ಮಲ್ಲೇ ಅಡಗಿಸಿಕೊಂಡಿರುವ ಆಶ್ಚರ್ಯದ ಪಾತ್ರೆಯನ್ನು||

ಸುಂದರವಾದುದನ್ನು ಈ ಬದುಕು ಮಾರಾಟಕಿಟ್ಟಿದೆ
ಸಂಗೀತದಂತ ಮೊನೆಯ ಬಂಗಾರವನ್ನು
ಮಳೆಯ ತಂಗಾಳಿಯ ಜೊತೆಗೆ ಶ್ರೀಗಂಧದ ಪರಿಮಳವನ್ನು
ಪ್ರೀತಿಸುವ ಆ ಕಂಗಳು ಹಾಗು ಹಿಡಿದಿರುವ ಆ ಕರಗಳನ್ನು
ನಮ್ಮೊಳಗೆ ಅಡಗಿ ಹೊಮ್ಮುವ ಚೈತನ್ಯದ ಬೆರಗನ್ನು
ರಾತ್ರಿಯ ನಕ್ಷತ್ರದಂತೆ ಹೊಳೆಯುವ ಮಹೋನ್ನತ ಚಿಂತನೆಗಳನ್ನು||

ಸುಂದರತೆಗಾಗಿ ನಿನ್ನದೆಲ್ಲವನ್ನೂ ಖರ್ಚುಮಾಡು
ಕೊಂಡುಕೋ ಮನಸಾರೆ ಎಂದೂ ಬೆಲೆ ಎಣಿಸದೆ
ಹಾಲ್ಗಡಲ ಶಾಂತಿಯ ಸಮಯಕ್ಕೆ
ಎಣಿಸು ಕಲಹದಿಂದ ಕಳೆದುಕೊಂಡದ್ದನ್ನು
ಉಸಿರಾಡು ಬ್ರಹ್ಮಾನಂದವ
ಕೊಡು ನಿನ್ನದೆಲ್ಲವನ್ನೂ.........ಸಾಧ್ಯವಾದರೆ.......

ಪ್ರೇರಣೆ: Barter by Sara Teasdale.

ದಾರಿದೀಪ

  ಆಳವಿಲ್ಲದ ಭಾವ , ಮುಗಿಲೆತ್ತರದ ಭಾವ , ನಗುವೊಮ್ಮೆ , ಅಳುವೊಮ್ಮೆ , ಬಳಲುವೆನು , ಬದಲಾಗುವೆನು , ಪ್ರೀತಿಸುವೆನು , ದೂರ ತಳ್ಳುವೆನು , ಸವಿಯುವೆನು , ದ...