ಮುಂದೆ ಸಾಗು ನಿಲ್ಲದೆ ಗೆಳೆಯಾ

ಮುಂದೆ ಸಾಗು ನಿಲ್ಲದೆ ಗೆಳೆಯಾ
ಎಲ್ಲವೂ ನಿನ್ನಿಂದ ಸಾಧ್ಯ ನೀ ತಿಳಿಯೆಯಾ||

ಸೋಲೇ ಗೆಲುವಿನ ಸೋಪಾನ
ತಿಳಿದು ನಡೆದರೆ ಜೀವನ ಮಧುಪಾನ||

ಯಶಸ್ಸು-ಗೆಲುವು ವಶವಲ್ಲ ಮಂತ್ರ-ತಂತ್ರಕೆ
ಒಲಿವುದು ಸತತ ಪ್ರಯತ್ನ,ನೋವು ತಾಳ್ಮೆಯ ಕಾರ್ಯತಂತ್ರಕೆ||

ಬೆವರಹನಿಗೆ ಬೆಲೆಯಿದೆ
ಗೆಲುವು ಇಂದಲ್ಲ, ನಾಳೆ ನಿನ್ನದೇ||

ಮುಂದೆ ಸಾಗು ನಿಲ್ಲದೆ ಗೆಳೆಯಾ
ಎಲ್ಲವೂ ನಿನ್ನಂದ ಸಾಧ್ಯ ನೀ ತಿಳಿಯೆಯಾ||

ಹತ್ತು ವರ್ಷಗಳ ಹಿಂದೆ.....

ಹತ್ತು ವರ್ಷಗಳ ಹಿಂದೆ
ಕಂಡೆ ಆ ಬೆಳಕನ್ನ ಮುಂದೆ
ಆಕಸ್ಮಿಕವೋ? ಋಣಾನುಬಂಧವೋ?

ಕಂಡ ಬೆಳಕು ಕೈಹಿಡಿಯಿತೆನ್ನ ಮುದದಿ ಅಂತೆ ಕಂತೆ
ಜಾರಿಬೀಳುವವನಿಗೆ ನಿಲ್ಲಲು ಸಣ್ಣ ಆಸರೆ ಸಿಕ್ಕಂತೆ
ಗುರಿ ಇರದವನ ಬಾಳಿಗೆ ಗುರಿ ಸಿಕ್ಕಂತೆ
ಬಾಳಬಂಡಿಯ ಪಯಣದಲಿ ಜೀವನ ಸಂಗಾತಿ ಸಿಕ್ಕಂತೆ||

ಕೈಹಿಡಿಯಿತು ಪ್ರೀತಿ-ಪ್ರೇಮ
ಹಸನಾಯಿತು ಜೀವನ ಗಾನ
ಏಳು-ಬೀಳುಗಳ ಸಹಜ ಜೀವನ
ಬೇವು-ಬೆಲ್ಲ,ನೋವು-ನಲಿವಿನ ಹೂರಣ||

ಪ್ರೀತಿಯ ಸೊಬಗಿಗೆ ಒಂದು ದಶಕ
ಜೊತೆಯಾಗಿ ಹೊಸ ಹೆಜ್ಜೆ ಇಡಲು ಏನೋ ಪುಳಕ
ಜೀವನ ಪ್ರೀತಿ ತಂದಿದೆ ಒಂದೊಂದು ಹೆಜ್ಜೆಯಲ್ಲೂ ತವಕ
ಕಾಣುವ ತವಕ ಹೆಚ್ಚಿದೆ ಸಂವತ್ಸರಗಳ ಶತಕ||

ಹೊಂಗೆಯ ಚೆಲುವು

ಹೊಂಗೆ,ಹೊಂಗೆ,ಹೊಂಗೆ
ಇಂಥ ಚೆಲುವು ಹೆಂಗೆ?
ದೇವಲೋಕದ ಅಪ್ಸರೆಯ ಚೆಲುವು ನಿಂಗೆ!

ಕಣ್ಣೆರಡು ಸಾಲವು
ನೋಡಲು ನಿನ್ನ ಚೆಲುವು
ನಿನ್ನ ಸೌಂದರ್ಯ ವರ್ಣಿಸಲು
ಪದಗಳು ಸಾಲವು||

ನಾಚಿ ನೀರಾಗಿರುವೆ ಏಕೆ?
ಪಾಲ್ಗುಣ ಬರುವನೆಂದು ನಾಚಿಕೆಯೇ?
ಮೈಯೆಲ್ಲಾ ಹೂ ಮುಡಿದು ವಧುವಾಗಿರುವೆ
ಮಕರಂಧ ಹೀರಲು ದುಂಬಿಗಳ ಅಹ್ವಾನಿಸಿರುವೆ||

ಹೂಗೊಂಚಲು ಗಾಳಿಗೆ ತೊನೆದಾಡುವುದ
ನೋಡುವುದೇ ನಯನ ಮನೋಹರ
ದುಂಬಿಗಳ ಝೇಂಕಾರ,ಹಕ್ಕಿಗಳ ಚಿಲಿಪಿಲಿ ನಿನಾದ
ಕೇಳುಗನ ಕಿವಿಗಳಿಗೆ ರಸಗವಳ ಮನೋಹಾರ||

ಉದಯರವಿ ಮೂಡುವ ಮುನ್ನ
ಹೂ ನೆಲದ ಮೇಲೆ ಹಾಸಿಗೆಯಂತೆ ಹಾಸಿ
ಪರಿಸರದಲ್ಲೆಲ್ಲಾ ಹೂ ಗಂಧ ಪೂಸಿ
ಪ್ರಕೃತಿ ಮಾತೆಗೆ ಪೂಜೆ ಸಲ್ಲಿಸುತ್ತಿರುವೆಯೋ?
ಇಲ್ಲ, ವಸಂತಾಗಮದ ವಿರಹ ಕಾಮನೆಯೋ?
ಇಲ್ಲ, ಹಾಡಿ ಹೊಗಳುವ ಕವಿಗೆ ಆತ್ಮೀಯ ಸ್ವಾಗತವೋ?

ಬಿಸಿಲ ಬೇಗೆಯಲಿ
ಹೊಂಗೆಯ ನೆರಳಲಿ
ಹಾಂ! ಎಂಥ ತಂಪು
ಮರುಕಳಿಸುವುದು
ಮಮತೆ,ವಾತ್ಸಲ್ಯದ ಗಣಿ
ತಾಯಿಯ ಕರುಳ
ಮಧುರ ನೆನಪು

ಹೊಂಗೆ,ಹೊಂಗೆ,ಹೊಂಗೆ
ಭೂಲೋಕದ ಅಪ್ಸರೆ
ಇಂಥ ಅಂದ,ಚೆಂದ,ಚೆಲುವು ಹೆಂಗೆ?

ಪ್ರಾರ್ಥನೆಯೊಂದೇ ನನ್ನದು

ಏನು ಸೊಬಗು ಈ ಪ್ರಕೃತಿ
ಎಷ್ಟು ಸುಂದರ ಇಲ್ಲಿನ ಆಕೃತಿ
ಯಾವ ತತ್ವ ಆಧರಿಸಿ ರಚಿಸಲ್ಪಟ್ಟಿತೋ ಈ ಕೃತಿ
ದೃಷ್ಟಿಕೋನ,ಸಮದೃಷ್ಟಿ ಸಮತೋಲನದ ಮೈತ್ರಿ
ಬೆಕ್ಕಸ ಬೆರಗಾಗಿದ್ದೇನೆ,ಬೇಸರಿಸಿದ್ದೇನೆ ಕಂಡು ಈ ಜನರ ವಿಕೃತಿ,ಚಮತ್ಕೃತಿ
ತುಂಬಿದೆಯಿಲ್ಲಿ ಕ್ರೌರ್ಯ,ಸಾವು-ನೋವು,ನಲಿವುಗಳ ಸಂತತಿ
ಅನುಭವಿಸುವ ನಮ್ಮದೇ ನೆನಪುಗಳ ಕಟ್ಟಬೇಕು ಕೊನೆಗೊಳ್ಳುವ ಮುನ್ನ ನಮ್ಮ ಪಾತ್ರ
ಪ್ರಾರ್ಥನೆಯೊಂದೇ ನನ್ನದು, ಉಸಿರು ನಿಲ್ಲುವವರೆಗೂ ನೀಡು ಬದುಕುವ ಜೀವನ ಪ್ರೀತಿ||

ಖುಷಿಯಿಂದ ಅನುಭವಿಸಿದ್ದೇನೆ ಬಿಸಿಕಾಫಿ ತುಟಿಗಪ್ಪುವ ರೀತಿಗೆ

ಮುಂಜಾನೆ ಚಿತ್ತ ಮೂಡಿಹುದು ಕಾಣದ ಚಿತ್ರದ ಕಡೆಗೆ;
ಯೋಚಿಸುತ್ತಾ ನಡೆದೆ ಮನಸೋತ ಬೆಳಗಿನ ಬೆರಗಿಗೆ;
ಹೃನ್ಮದಲಿ ಆ ರಮಣೀಯ ಮನೋಹರ ಅನುಭವ,ಅನುಭಾವದ ಬೆಡಗಿಗೆ;
ಕತ್ತಲ ಓಡಿಸಿ ಬೆಳಗು ಇಳೆಯ ಅಪ್ಪುವ ರಮಣೀಯತೆಗೆ;
ಕಳೆದುಹೋಯಿತು ಮನ ಎಲ್ಲೋ ಹಕ್ಕಿಗಳ ಇನಿದನಿಗೆ;
ಖುಷಿಯಿಂದ ಅನುಭವಿಸಿದ್ದೇನೆ ಬಿಸಿಕಾಫಿ ತುಟಿಗಪ್ಪುವ ರೀತಿಗೆ;

ಮಳೆ ನಿಂತ ಮೇಲೆ ಈ ಮೌನವೇಕೋ?

ಮಳೆ ನಿಂತ ಮೇಲೆ ಈ ಮೌನವೇಕೋ?
ರುದ್ರ ನರ್ತನಗೈದ ಮೇಲೆ ಮತ್ತೇನೋ?
ಯಾರಿಗೆ ಯಾರು ವಿರಾಮ ಕೊಟ್ಟಿದ್ದಾರೆ?
ಯಾರಿಗೆ ಯಾರು ಸ್ವಾಂತನ ನೀಡುತ್ತಿದ್ದಾರೆ?
ಆಕಾಶ ಇಳೆಗೋ?
ನೃತ್ಯ,ಸಂಗೀತ,ವಾದ್ಯಗಳಿಗೋ?
ಇಲ್ಲ ಕೇಳುಗರಿಗೋ? ವೀಕ್ಷಕರಿಗೋ?

ಬೆಲೆ ಏರಿಕೆ- ತೋರಿಕೆ

ಸಾರಿಗೆ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ
ಸಾಮಾನ್ಯ, ಬಡ ಜನತೆಗೆ ತರಿಸಿದೆ ಸರ್ಕಾರದ ನಡತೆಯಿಂದ ವಾಕರಿಕೆ
ಮುಖ್ಯಮಂತ್ರಿ,ಸಾರಿಗೆ ಸಚಿವರ ಗೂಸುಂಬೆತನದ ವಾಸ್ತವಿಕತೆಯ ತೋರಿಕೆ
ಕೈಲಾಗದವರು ಮಾತ್ರ ಹೊರೆಯನ್ನು ಜನತೆಯ ಮೇಲೆ ಹೊರೆಸಿ ತೊಳೆದುಕೊಳ್ಳುವರು ತಮ್ಮ ಕೈ
ಎಂದಾದರೂ ತಮ್ಮ ಬೆವರ ಹನಿಯ ಸಂಪಾದನೆಯಿಂದ ಹಣತೆತ್ತು
ಪ್ರಯಾಣಿಸಿದ್ದರೆ ಗೊತ್ತಾಗುತ್ತಿತ್ತು ಬಡಜನರ ಚಡಪಡಿಕೆ||

ಹೇಳಲೇ ಪ್ರಿಯೇ ನನ್ನ ಮನದ ಇಂಗಿತ

ಹೇಳಲೇ ಪ್ರಿಯೇ ನನ್ನ ಮನದ ಇಂಗಿತ
ಹಾಕುವೆಯಾ ಹೃದಯದಲಿ ಪ್ರೇಮದ ಅಂಕಿತ
ಪ್ರೀತಿಸಿ,ಪ್ರೀತಿಸಿ ನಾನಾದೆ ಪ್ರೇಮ ಪಂಡಿತ
ನಾ ಮಾಡುವೆ ನಿನ್ನ ಈ ಹೃದಯದರಸಿಯ ಖಂಡಿತ||

ಈ ಹೃದಯ ಪ್ರೀತಿಯ ಹೆಸರಲ್ಲಿ ಅನುಭವಿಸಿದ ಸೋಲಿನ ಹೊಡೆತ
ಕಡಲ ತೀರದಲ್ಲಿ ಅಲೆಗಳು ದಡಕ್ಕೆ ಅಪ್ಪಳಿಸಿವಂತೆ ಕಾಡಿದೆ ನಿನ್ನ ನೆನಪ ಕೊರೆತ
ಕೇಳಿಸದೇ ನಿನಗೆ ನನ್ನ ಹೃದಯದ ಮಿಡಿತ,ಪ್ರೀತಿಯ ಗಲಾಟೆ ಮಾಡುತ
ಹೃದಯ  ಗುನುಗಿದೆ ಪದೇ ಪದೇ ನಿನ್ನ ಹೆಸರ,ನಲಿದಿದೆ ಪಾಡುತ||

ಏಕೆ ಹೀಗೋ ನಾನರಿಯೆ ಈ ಹೃದಯ ನಿನಗಾಗಿ ಪರಿತಪಿಸಿದೆ
ನೀನಂತೂ ಏನೂ ಹೇಳದೆ ನಸುನಗುತ್ತಾ ಮರೆಯಾದೆ
ಕಾಯುತ್ತಾ ಕುಳಿತಿಹೆನು ನಿನ್ನದೇ ನೆನಪ ರಂಗವಲ್ಲಿ ಮನದಲಿ ಮೂಡಿದೆ
ನಿನ್ನದೇ ಧ್ಯಾನ, ನಿನ್ನದೇ ನೆನಪ ಮತ್ತೆ ಮತ್ತೆ ತಳುಕು ಹಾಕಿ ಬೇರೆ ದಾರಿ ಕಾಣದೆ|| 

ನರ್ತಿಸು ತಾಯೆ

ನರ್ತಿಸು ತಾಯೆ ಸರಸತಿಯೇ
ಅಜನ ಪಟ್ಟದ ರಾಣಿಯೇ
ನರ್ತಿಸು ಎನ್ನ ಹೃದಯಕಮಲದಲಿ||

ಮನದೊಳು ವ್ಯಾಪಿಸು
ರಕುತದ ಕಣಕಣದಲಿ ನೆಲೆಸು
ಆನಂದಾಮೃತ ರಸ ಪ್ರಹರಿಸು
ನರ್ತಿಸು ತಾಯೆ ಸರಸತಿಯೇ
ಅಜನ ಪಟ್ಟದ ರಾಣಿಯೇ
ನರ್ತಿಸು ಎನ್ನ ಹೃದಯಕಮಲದಲಿ||

ಪಾದ ಧೂಳಿ ಶಿರವ ಸೋಂಕಿದೊಡೆ ಏಳಿಗೆ
ಮೌಡ್ಯವ ಕಳೆಯೆ
ವಿಜ್ಯಾನದ  ಹೊಸ ಕಾಂತಿಯಿಂದ
ಶಾಂತಿಯು ಪ್ರವಹಸಲಿ
ನರ್ತಿಸು ತಾಯೆ ಸರಸತಿಯೇ
ಅಜನ ಪಟ್ಟದ ರಾಣಿಯೇ
ನರ್ತಿಸು ಎನ್ನ ಹೃದಯಕಮಲದಲಿ||

ಪ್ರೇರಣೆ: "ನರ್ತಿಸು ತಾಯೆ" ಕುವೆಂಪು
ಕುವೆಂಪು ರವರಲ್ಲಿ ಕ್ಷಮೆ ಕೋರುತ್ತಾ....

ಕಣ್ಣಲ್ಲೇ ತುಂಬಿದೆ ನಿನ್ನ ರೂಪ

ಕಣ್ಣಲ್ಲೇ ತುಂಬಿದೆ ನಿನ್ನ ರೂಪ
ತೊಳಲಾಡಿದೆ ಈ ಮನಸ್ಸು,ಬೇಸರಿಸಿಕೊಂಡಿದೆ ಪಾಪ
ಇದೊಂತರ ವಿಚಿತ್ರವಾಗಿದೆ ಹಾಗು ಆಗಿದೆ ಅಪರೂಪ
ಪ್ರೀತಿಯ ಸೆಳೆತಕ್ಕೆ ಸಿಲುಕಿ ಹೊರಟಿದೆ ಪ್ರೇಮ ಆಲಾಪ||

ಹೊರಟಿದೆ ಅಲೆಯುತ್ತಾ ನಿನ್ನ ಸಂಗವ ಬಯಸಿ
ಕಾಡು-ಮೇಡು,ಗಿರಿ-ಕಂದರ,ಮರ-ಗಿಡಗಳ ಬಳಸಿ
ಪ್ರೀತಿಯ ಉತ್ಕಟತೆಯ ಅನುಭವದಮೃತವ ಸೇವಿಸಿ
ಒಮ್ಮೆಯಾದರೂ ಕಾಣಿಸಿಕೋ ಸಾಯಿಸಬೇಡ ವಿರಹದಿ ಕಾಡಿಸಿ||

ಬಲು ಬಂಡವಾಗಿದೆ ಈ ದೇಹ,ಮನಸ್ಸು ಸತಾಯಿಸಿ
ನೀ ಸಿಗದಿದ್ದರೂ ಸರಿಯೇ,ನಿನ್ನ ನೆನಪಲ್ಲೇ ಉಳಿವೆ
ಮೋಹ,ವ್ಯಾಮೋಹಗಳ ಪರಿಧಿ ದಾಟಿ ಮನ ಪರಿಪಕ್ವವಾಗಿದೆ
ಈ ನೋವು,ನಲಿವಿನಲ್ಲೇ ಈ ಬದುಕು ಸಾರ್ಥಕವಾಗಿದೆ||

ನೆನಪ ರಥ

ಮನದ ಬೀದಿಯಲ್ಲಿ
ಎಳೆವೆ ನೆನಪ ರಥವ
ವರುಷಕ್ಕೊಮ್ಮೆ ನಡೆವ
ಜಾತ್ರೆಯಂತೆ ತೆವಳಿ ತೆವಳಿ ಪಥವ||

ಸುಖ-ದುಃಖ,ಕೊರತೆ-ಒರತೆ
ಜಾಡುಬಿದ್ದ ಜೇಡರ ಬಲೆಯ ಕವಿತೆ
ಒಂಟಿ ಸಲಗದಂತೆ ಎಳೆಯುವೆ
ಕಿರಿ-ಕಿರಿ,ಅಪಹಾಸ್ಯ ಮಾಡಿದರೂ ಸೆಳೆವೆ||

ಎಲ್ಲವೂ ನನ್ನದೇ ಒಪ್ಪ-ಓರಣವಿಲ್ಲದ
ನನಗೆ ಬೇಡದ ವಸ್ತು,ವಿಚಾರಗಳೇ!
ಜಾರಿಬಿದ್ದೆ ಎಳೆಯಲಾಗದೆ ಕಡಿಮೆಯಾಗಿ ಕೆಚ್ಚು
ನೆರೆದಿದ್ದವರೆಲ್ಲಾ ಕೈಚಾಚದೆ, ನಕ್ಕು ಅಪಹಾಸ್ಯಮಾಡುವವರೇ ಹೆಚ್ಚು||

ಮನದ ಬೀದಿಯಲ್ಲಿ ನೆನಪ ರಥವ ಎಳೆಯಲೇಬೇಕು
ಕಾಲಚಕ್ರ ಮುಂದೆ ಹೋಗುವಂತೆ, ನನ್ನದೂ ನಡೆಯಬೇಕು
ಇದು ನನ್ನೊಬ್ಬನ ಕಥೆ-ವ್ಯಥೆಯಲ್ಲ
ಹುಟ್ಟಿ-ಬದುಕು ಸವೆಸುವ ಎಲ್ಲರದೂ; ಇಂದಿನಂತೆ ನಾಳೆ ಇರಲ್ಲ||

ಏಕೆ ತವಕವೋ ಏನೋ?

ಏಕೆ ತವಕವೋ ಏನೋ?
ಮುಂಜಾನೆ ಕಾಡುವುದು ಮನ
ಜಾರುವ ಮನವ ಹಿಡಿಯುವುದೆಂತೋ?

ಸೆಳೆವ ಪಾರಿಜಾತಾ ಗಂಧ
ಮನದ ಹಿಡಿತ ಸಡಿಲಿಸಿದೆ
ಕಳೆವ ವ್ಯಾಮೋಹಾ ಬಂಧ
ಜೀವನ ಸರಳಗೊಳಿಸಿದೆ||

ಮುಂಜಾನೆ ಆಗಸದಲಿ
ತೇಲುವಾ ಚಂದ್ರ
ಮನದಲಿ ಭಾವನೆಗಳ
ಏರಿಳಿತಗಳಾ ಮಂದ್ರ||

ಚಿಲಿಪಿಲಿ ಹಕ್ಕಿಗಳ
ಮಧುರಾ ಇಂಚರ
ಉದಯರವಿಗೆ ಮುಂಜಾನೆಯ
ಶುಭೋದಯದಾ ಮಂಗಲ|| 

ಮಳೆಯ ಗಾನ

ಓ ಮಳೆಯೇ!
ಓ ಮಳೆಯೇ!
ಏಕೆ ಬಂದಿರುವೆ ಇಲ್ಲಿಗೆ?
ಯಾರು ಕಳುಹಿದರು ಇಳೆಗೆ?||

ದೇವಲೋಕದಿಂದೇನೋ ತಂದಿರುವೆ
ಸಂತಸವೋ?,ದುಃಖದ ಕರಿಛಾಯೆಯೋ?
ನೀ ಬಂದ ಮೇಲೆ ಇಲ್ಲಿ ಹೊಸ ಮನ್ವಂತರ
ಹೊಸ ಭರವಸೆ,ಹೊಸ ಆಸೆ ನೀ ಬಂದ ನಂತರ||

ಇಳೆಯ ಸೊಬಗು ಇಮ್ಮಡಿಸಿದೆ
ತಂಗಾಳಿಗೆ ಚೈತನ್ಯ ತುಂಬಿದೆ
ನವ ಜೀವಜಾತಕೆ ತಾಯಿಯಾಗಿಹೆ
ಜೀವನ ಪ್ರೀತಿ ನೂರ್ಮಡಿಯಾಗಿದೆ||

ಚಿಟ-ಪಟ ಮಳೆಯ ನಾದಲೀಲೆ
ಎಲ್ಲೆಲ್ಲೂ ಆವರಿಸಿದೆ ಮಾಯೆ
ಮರ-ಗಿಡಗಳು,ಹಕ್ಕಿಗಳು ಮನಸೋತು
ಆಲಿಸಿವೆ ನಿನ್ನೆಯ ಗಾನಸುಧೆ||

ಇಳೆಯ ತುಂಬೆಲ್ಲಾ ಹರಿದಿದೆ
ಕೆರೆ-ತೊರೆ,ನದಿಗಳ ಸಂತಸದ ಹೊಳೆ
ಜಗದ ತುಂಬೆಲ್ಲಾ ಮೊಳಗಿದೆ
ಪ್ರಕೃತಿಮಾತೆಯ ಸೌಂದರ್ಯ ಗೀತೆ||

ಕಾನನದ ದೇವಧೂತರೆಲ್ಲಾ
ನಿನ್ನ ಅರೈಕೆ,ಮಮತೆಗೆ ತನ್ಮಯ
ಜಗದ ಅಮೃತಪುತ್ರರೆಲ್ಲಾ
ಆಗಿಹರು ನಿನ್ನ ಮಾಯೆಗೆ ವಿಸ್ಮಯ||

ತಂದೆ-ತಾಯಿ-ಬರಹ

ಆಧ್ಯಾತ್ಮವೇ ಚೈತನ್ಯ;
ಆತ್ಮಸ್ಥೈರ್ಯವೇ ರಹದಾರಿ;
ಅನುಭವವೇ ತಾಯಿ;
ಅನುಭಾವವೇ ತಂದೆ;
ಅಧ್ಯಯನವೇ ಗುರು;
ಕ್ರೀಯಾಶೀಲತೆಯೇ ಗೆಳೆಯ;
ಉಪಮಾನ,ಉಪಮೇಯಗಳೇ ಬಂಧು-ಬಳಗ;
ವಸುದೈವ ಕುಟುಂಬವೇ ಗುರಿ;
ಇವೆಲ್ಲವುಗಳ ಕೈಗೂಸೇ ಬರಹ,ಚಿಂತನೆ;

ಮುಗ್ಧತೆಯ ಅರಿಮೆ

ನೋಡು ಪ್ರಕೃತಿಯ ಸೊಬಗ ತೆರೆದ ಕಂಗಳಿಂದ
ಕಣ್ಣು ಮುಚ್ಚಿ ಧ್ಯಾನಿಸು,ಆರಾಧಿಸು ತೆರೆದ ಒಳ ಕಂಗಳಿಂದ
ಮುಗ್ಧತೆಯ ನೋಟ ನಶ್ವರ ತಿಳಿ
ಅರಿಮೆಯ ನೋಟ ಶಾಶ್ವತ ಕಲಿ||

ಮುಗ್ಧತೆಯಿಂದ ಈ ಜಗದ ಸೊಬಗ ನೋಡಬೇಡ
ಮುಗ್ಧತೆಯ ಅನುಭವ ಆ ಕ್ಷಣದ ಭಾವ ಕ್ಷಣಿಕ
ಅರಿಮೆಯಿಂದಲಿ ಅನುಭವಿಸುವ ಆ ಕ್ಷಣದ ಭಾವ ಸಾರ್ಥಕ
ತೆರೆದಿಡುವುದು ಮುಂದಿನ ಜೀವನದ ಹೊಸ ಪಥ||

ಕತ್ತಲು,ಮೌನ ಏನನ್ನೋ ಹೇಳಹೊರಟಿದೆ
ಮುಗ್ಧತೆಯ ಸೆಳೆತಕ್ಕೆ ಭಾವ ನರಳಿದೆ
ಜಾಗೃತನಾಗು ಕಣ್ತೆರೆದು ನೋಡು
ಮನದ ಹರವು ತೆರೆದುಕೊಳ್ಳುವಂತೆ ಮಾಡು||

ಇಲ್ಲೊಂದು ಜೀವ,ಅಲ್ಲೊಂದು ಹೂವು ಹವಣಿಸಿದೆ
ಜಗದ ಸೌಂದರ್ಯವ ನೋಡಲು ಕಣ್ತೆರೆಯುತ್ತಿದೆ
ಅಲ್ಲೊಂದು ಜೀವ ನರಳಿದೆ ನೋವು ಅನುಭವಿಸಿದೆ
ಇಲ್ಲೊಂದು ನಲಿವು ಹೂ ಅರಳಿದೆ ಸುಗಂಧ ಪಸರಿಸಿದೆ||

ಸಂಜೀವಿನಿ ನೀನು!

ಯಾವ ತತ್ವವ ಸಾರುತಿಹೆ
ನಿಂತಲ್ಲೇ ನಿಂತು
ಎಲ್ಲವನ್ನೂ ಸಹಿಸಿ
ಎಲ್ಲರಿಗೂ ಉಪಯೋಗವನ್ನೇ ಬಯಸುವ
ದೇವಧೂತನೇ ಸರಿ ನೀನು!

ನಿಂತಲ್ಲೇ ನಿಂತು
ಬಾನೆತ್ತರಕೆ ಬೆಳೆದು
ಆವುದೋ ತತ್ವಾದರ್ಶಕ್ಕೆ
ಸಂಕೇತವಾಗಿಹೆ ನೀನು!

ಹಕ್ಕಿಗಳಿಗೆ ಆಶ್ರಯ ತಾಣ
ಗಾನ ಕೋಗಿಲೆಗಳಿಗೆ ಸಾಧನೆಯ ಧ್ಯಾನತಾಣ
ಮನುಜನ ಜೀವಂತಿಕೆಯ ಪ್ರಾಣ
ಜೀವವಾಯು ನೀಡುವ ಸಂಜೀವಿನಿ ನೀನು!

ಶಾಂತತೆಯ ಕಡಲು

ಈ ನಿಶಬ್ದತೆಯ ನೀರವತೆಗೆ ಏನೆನ್ನಲಿ?
ಮೌನವೆನ್ನಲೋ?
ಧ್ಯಾನವೆನ್ನಲೋ?
ನಿದ್ರಾಪರವಶತೆಯೆನ್ನಲೋ?
ಪ್ರಕೃತಿಯ ಈ ಶಾಂತತೆಯ ಕಡಲಿಗೆ
ಏನ ಹೆಸರಿಡಲಿ?
ಉದಯರವಿ ಆಗಮಿಸುವ ಮುನ್ನ
ನೀರವತೆಯ ಹೊನಲು ಹಾಂ!.......
ಅನುಭವಿಸುವವಗೇ ಗೊತ್ತು!
ಆರಾಧಿಸುವವಗೇ ಗೊತ್ತು!
ಧ್ಯಾನಿಸುವವಗೇ ಗೊತ್ತು!
ಪದ ಕಟ್ಟಿ ಹಾಡುವವಗೇ ಗೊತ್ತು!
ಶಾಂತತೆಯ ಕಡಲಿನ ಅಮೃತದನುಭವಕೆ
ಏನೆಂದು ಕರೆಯಲಿ?
ಸಮಾಧಿ,ಸ್ವರ್ಗ,ಪ್ರಕೃತಿ!

ಉದಯ ರವಿಗೆ ಸ್ವಾಗತ

ಆಗಸದಲ್ಲಿ ಕತ್ತಲು ಕವಿಯುತ್ತಿದ್ದಂತೆ ಕಪ್ಪು ಮೋಡಗಳು ಆಕ್ರಮಿಸಿದವು
ದಾಳಿಮಾಡಲು ಇಳೆಯ ಮೇಲೆ
ಬೇಸಿಗೆಯ ಬಿಸಿಲಿಗೆ ತತ್ತರಿಸಿದ ಇಳೆಯ ಹಸನುಮಾಡಲು
ಎಡೆಬಿಡದೆ ಸುರುಸಿದವು ಮುತ್ತಿನ ಹನಿಗಳನ್ನು
ಚಿಟಪಟ,ಚಿಟಪಟ ತದೇಕ ಚಿತ್ತದಿಂದ ಹೊಮ್ಮಿದ ನಾದಸ್ವರ
ಸಂಗೀತ ಕಛೇರಿ ಮುಗಿದದ್ದು ಯಾವಾಗಲೋ!

ಬೆಳಗಿನ ಹಕ್ಕಿಗಳ ಚಿಲಿಪಿಲಿ ದನಿ ಕೇಳಿಸಲಿಲ್ಲ
ಮೌನ ಆಕ್ರಮಿಸಿತ್ತು ಮುಂಜಾನೆಯ ಸಮಯದಲ್ಲಿ
ರಸ್ತೆ ಬದಿಯಲ್ಲೇ ನಿಂತ ದೇವದೂತರು ನಿದ್ರಾಪರವಶರಾಗಿದ್ದರು
ಆಕಾಶ ಕಳೆಗಟ್ಟಿತು
ಬೇಸರಿಸಿತು ಮನ
ಏಕಾಂಗಿ ಸಂಚಾರಿ ನಾನು
ಸಮಯ ಹೊರಳಿತು,ತಂಗಾಳಿ ಬೀಸಿತು
ಮರಗಿಡಗಳ ಮರ್ಮರ ಸಂಗೀತ ಹಬ್ಬಿತು
ಹೊಸ ಚೈತನ್ಯ ಹರಡಿತು
ಕೋಗಿಲೆ,ಕಾಗೆ.ಗೊರವಂಕ ಹಕ್ಕಿಗಳು
ಉದಯ ರವಿಗೆ ಸುಪ್ರಭಾತದ ಸ್ವಾಗತ ಕೋರಿದವು

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...