Saturday, April 4, 2026

ಅಹಂಕಾರದ ಯುದ್ಧ

ಏಕೆ ಆತ್ಮಗಳೇ ಬುಸುಗುಡುತ್ತಿರುವಿರಿ?,

ದ್ವೇಷದ ಆವೇಗದಲ್ಲಿ ಯುದ್ಧವ ಬೆನ್ನಟ್ಟಿರುವಿರಿ.

ನಂಬಿದ ಜನರ ಭಾವೋದ್ವೇಗ ಒಳ್ಳೆಯದೇ?

ಸಾವು ಜೀವನೋತ್ಸಾಹವಲ್ಲ ತಿಳಿಯಿರಿ.


ನಿಮ್ಮ ದ್ವೇಷಕ್ಕೆ ಬಲಿಯಾಗುತ್ತಿವೆ ಜೀವಗಳು,

ಆದರೂ ಉನ್ಮಾದ ಕಡಿಮೆಯಾಗಿಲ್ಲ.

ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ,

ಬಾಂಬಿಗೆ ಬಾಂಬು ಉತ್ತರ ಶಿಲಾಯುಗಕ್ಕೆ ಪಯಣ.


ವಿನಾಶವ ಆಹ್ವಾನಿಸುತ್ತಿರುವಿರಿ,

ನಾಳಿನ ಪೀಳಿಗೆಗೆ ಏನ ನೀಡುವಿರಿ?.

ದ್ವೇಷವನ್ನೇ ಮುಂದುವರಿಸುವರೇ?

ಇಲ್ಲ, ಶಾಂತಿಯ ಅರಸುವರೇ?.


ಹಳೆಯ ನೆನೆಪಿನ ತೇಪೆ

ಒಂದು ಮೂಲೆಯಲ್ಲಿ ಹಳೆಯ ಕಪಾಟು, 

ಅದರಲ್ಲಿ ಹಳೆಯ ಕಾಗದಗಳ ಕಂತೆ. 

ಊಹೆಗೆ ನಿಲುಕದ ನೋವಿನ ಬೊಂತೆ,

ಮರೆತ ಹೃದಯದ ಕಂಬನಿಯ ಮೊರೆತ.


ತೆರೆದ ಕಿಟಕಿ, ಮುರಿದ ಹೆಂಚು,

ಕಿಲುಬು ಹಿಡಿದ ಬಾಗಿಲ ಬೀಗ.

ಎಂದೋ ಮರೆತ ದಾರಿಯ ಕದನ,

ದೂರಕ್ಕೆ ಓಡಿದ ಹೃದಯದ ಕರೆಗೆ.


ಮಳೆ ಗಾಳಿ ಕಾಲನ ಹೊಡೆತ,

ಸುಳಿಗೆ ಸಿಕ್ಕು ಸೂತ್ರವಿಲ್ಲದಂತೆ.

ಬದುಕ ಪಯಣ ಮೂರಾಬಟ್ಟೆ,

ಬದುಕ ಬೇಕೆಂಬ ಹಪಾಹಪಿತನ.


ಅಳಬೇಕೊ?, ನಗಬೇಕೋ?,

ಎಲ್ಲವೂ ಭ್ರಮೆಯಂತೆ ಕಂಡಿದೆ.

ಇದ್ದು ಸಾಧಿಸಿದ್ದು ಏನು?

ಜೀವನ ಪ್ರೀತಿಯೇ? ಪ್ರಶ್ನೆ ಉಳಿದಿದೆ. 

ಜನನ–ಮರಣ ತೊಳಲಾಟ

ಅವರ ಭೇಟಿ ಅಪರಿಚಿತರಂತೆ, 

ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ.

ಎರಡು ಅಲೆದಾಡುವ ಆತ್ಮಗಳು,

ಎಂದಿಗೂ ಭೇಟಿಯಾಗುವ  ಉದ್ದೇಶವಿಲ್ಲ.


ಅಗಾಧ ಕಂದಕ ನಡುವಿನ ರಸ್ತೆಯಲ್ಲಿ, 

ಎದುರಿಂದ ಅವನ ವಾಹನ ಗುದ್ದಿತು.

ಪರಿಸರ ಎಂದಿಗೂ ಸೌಮ್ಯವಿರಲಿಲ್ಲ, 

ಹಾರಿದ ರಭಸಕ್ಕೆ ಪ್ರಾಣ ಹಾಂ. 


ಬಿಡುಗಡೆಗೆ ಒಂದು ಕಾರಣ,

ಅಲೆದಾಟ ಮತ್ತೆ ಹೊಸ ಪಾತ್ರ.

ಮತ್ತದೇ ಹೊಸ ಆರಂಭ,

ಜನನ, ಮರಣ ತೊಳಲಾಟ.  

ಸಾಧನೆಯ ಹೆಜ್ಜೆಗಳು

ದೂರದ ಗುರಿಯ ಮನದಲ್ಲಿ ಬಿತ್ತು,

ದಾರಿ ತೆರೆವುದು ಹೆಜ್ಜೆಗಳು ಹತ್ತು.

ಏಳು ಬೀಳುಗಳು ಸಾಮಾನ್ಯ ತಿಳಿ,

ಅಡೆತಡೆಗಳು ಎದುರಿಸುತಲಿ ನೀ ಬೆಳಿ.

 

ನಿನ್ನಲ್ಲಿ ನಿನಗೆ ನಂಬಿಕೆ ಇರಲಿ,

ಮನದಲ್ಲಿ ಬಲದ ದೀಪ ಹೆಚ್ಚು.

ಸಣ್ಣ ಹೆಜ್ಜೆಗಳ ಮೇಲಿರಲಿ ಗಮನ,

ನೋವೋ!, ನಲಿವೋ! ನಿಲ್ಲದಿರಲಿ.

 

ಸಹನೆ, ಶ್ರಮ, ಕನಸ ಸೇರಿಸು,

ಅವಸರವೇತಕೆ ತಾಳ್ಮೆ ಇರಲಿ.

ಸಂಭ್ರಮಿಸು ಹೆಜ್ಜೆಗಳ ನೋವ,

ಸಾಧಿಸುವ ಹಂಬಲ ಮನದಿ ಭಾವ.



ಅಹಂಕಾರದ ಯುದ್ಧ

ಏಕೆ ಆತ್ಮಗಳೇ ಬುಸುಗುಡುತ್ತಿರುವಿರಿ?, ದ್ವೇಷದ ಆವೇಗದಲ್ಲಿ ಯುದ್ಧವ ಬೆನ್ನಟ್ಟಿರುವಿರಿ. ನಂಬಿದ ಜನರ ಭಾವೋದ್ವೇಗ ಒಳ್ಳೆಯದೇ? ಸಾವು ಜೀವನೋತ್ಸಾಹವಲ್ಲ ತಿಳಿಯಿರಿ. ನಿಮ್ಮ ...