Saturday, March 29, 2014

ರಾಜಕಾರಣವೆಂದರೆ......

ರಾಜಕಾರಣವೆಂದರೆ
ಹುಸಿ ಘೋಷಣೆಗಳ ಗುಚ್ಛ;
ಗೊತ್ತು ಗುರಿಗಳಿಲ್ಲದ
ಶ್ವಾಸವಿಲ್ಲದ ಆಶ್ವಾಸನೆಗಳ ಗಾಳಿ ಪುಚ್ಛ;
ಸಮಾಜದ ಅವಯವಗಳ
ಘಾಸಿಗೊಳಿಸುವುದು ಚುಚ್ಚಿ;
ಧ್ವೇಷ-ಅಸೂಯೆಗಳ
ರುದ್ರ ನರ್ತನ ಸಾಕಾರಗೊಳ್ಳುವ ವೇದಿಕೆ;
ಎಲ್ಲ ತತ್ವಗಳ ಗಾಳಿತೂರಿ
ಅಧಿಕಾರ ಲಾಲಸೆಯ ಉತ್ಕೃಷ್ಟತೆಯ ಪರಿ;
ಆಚಾರ-ವಿಚಾರಗಳ
ನಿರ್ಧಾಕ್ಷಿಣ್ಯವಾಗಿ ಕಡೆಗಣಿಸಿ
ಭ್ರಷ್ಟಾಚಾರವ ನೆಲೆಗೊಳಿಸುವ ಸಾಧನ
ಈ ರಾಜಕಾರಣ;

ನಿನ್ನ ಕರುಣೆ ನನಗಿರಲಿ

ನನ್ನ ಮನವೂ ನಿನಗೆ
ನನ್ನ ಜೀವನವೂ ನಿನಗೆ
ನನ್ನ ಬದುಕ ಪಯಣವೂ ನಿನ್ನಲ್ಲಿಗೆ
ನನ್ನ ಜೀವನದ ಗುರಿಯೂ ನೀನೇ||

ನಾನು ಅವನ ಭಾಗವಾಗಬೇಕು
ನಾನು ಅವನ ಪಾದ ಸೇವಕನಾಗಬೇಕು
ನಾನು ಅವನ ಆತ್ಮ ಬಂಧುವಾಗಬೇಕು
ನಾನು ಅವನ ಉಸಿರಿನ ಗಾಳಿಯಾಗಬೇಕು||

ನನ್ನೆಲ್ಲಾ ಒಳ್ಳೆಯ ಗುಣಗಳು
ನನ್ನೆಲ್ಲಾ ಕೆಟ್ಟ ಗುಣಗಳು
ಗುಣ,ಅವಗುಣಗಳ ಪರಿಗಣನೆ ಇಲ್ಲದೆ
ಎಲ್ಲವನ್ನೂ ನಿನ್ನ ಪಾದ ಕಮಲಗಳಿಗೆ ಅರ್ಪಿಸಿರುವೆ
ನಿನ್ನ ಕರುಣೆಯ ಹೃನ್ಮನಕ್ಕೆ ಶರಣಾಗಿರುವೆ
ಎಲ್ಲವೂ ನಡೆಯಲ್ಲಿ ನಿನ್ನ ಇಚ್ಛೆಯಂತೆ||

ಬೊಗಸೆಯ್ಯೊಡಿ ಬೇಡುವೆ
ನಿನ್ನ ಕರುಣೆ ನನಗಿರಲಿ
ನಿನ್ನ ಮಮತೆ ನಮಗಿರಲಿ...

ಪ್ರೇರಣೆ: 'I Offer' By V.P Mathur

Saturday, March 15, 2014

ನೆನಪುಗಳ ತಿಥಿ

ಪ್ರತಿ ಹೆಜ್ಜೆಯಲ್ಲೂ ನಮ್ಮ ಕನಸುಗಳ ಕಟ್ಟಿದೆವು
ವರುಷ ಉರುಳುತಿರೆ ಕನಸು ಭ್ರಮೆಯಾಗುತಿದೆ
ಸತ್ತ ಕನಸುಗಳೆಷ್ಟೋ?.....
ನೆನಪುಗಳ ತಿಥಿಯೂ ಮಾಡಲಾಗುತ್ತಿಲ್ಲ,
ಸತ್ತ ಕನಸುಗಳು ಮತ್ತೆ ಜೀವ ಬೇಡುವುದೇ?

ಕನಸ ಕಾಣಲೂ ಮನದಲ್ಲಿ ಭಯವಿದೆ
ಮತ್ತೆ ಮತ್ತೆ ಕನಸುಗಳಿಗೆ ಚಟ್ಟ ಕಟ್ಟಬೇಕಲ್ಲ!,
ಎಲ್ಲವನ್ನೂ ಸಿದ್ಧವಾಗೆ ಇಟ್ಟುಕೊಂಡಿದ್ದಾರೆ
ನಮ್ಮ ಕನಸುಗಳಿಗೆ ಮಸಣದ ಹಾದಿ ತೋರಿಸಲು

Monday, March 10, 2014

ಯಾಚನೆ

ಬಿಟ್ಟು ಹೋಗದಿರು ಏಕಾಂಗಿಯಾಗಿ
ನಾನು ಬಡವ,ಅಸಹಾಯಕ...
ನನ್ನ ಶಕ್ತಿ,ನನ್ನ ಸಂಪತ್ತು,
ನನ್ನ ಅದೃಷ್ಟದ ಕೊಡ ಖಾಲಿಯಾಗಿದೆ.
ನೀನೋ ಪ್ರೀತಿಯ ಸಮುದ್ರ
ತುಂಬಿಕೊಳ್ಳಲೇ ನನ್ನ ಖಾಲಿ ಕೊಡದಲ್ಲಿ;
ಖಾಲಿಯಾದ ಈ ಹೃದಯದಲ್ಲಿ
ಯಾವ ಸಂಗೀತ ತಾನೆ ಹೊಮ್ಮುವುದು?

ಸಹಾಯ ಮಾಡು,
ಕರುಣೆ ತೋರು,
ನಿನ್ನ ಮುರಲಿಯ ಗಾನವ ತುಂಬು ಎದೆಯಲ್ಲಿ;
ಪ್ರೀತಿಯ ನಾದ ಹೊಮ್ಮಿಸು;
ಎಲ್ಲೇ ಹೋದರೂ ನೀನೇ ಕಾಪಾಡು
ಶರಣಾಗಿದ್ದೇನೆ ನೀನೇ ಪರಿಪೂರ್ಣನೆಂದು
ನೀನಿಲ್ಲದೆ ಮತ್ಯಾರೂ ನನಗಿಲ್ಲ
ಕರುಣಿಸು,ಕರುಣೆ ತೋರು
ಹೃದಯದಲ್ಲಿ ಪ್ರೀತಿಯ ನಾದವ ಮೀಟು.... 

Monday, March 3, 2014

ಮನವ ಮುರಿಯ ಬೇಡ .....

ಒಮ್ಮೆಯಾದರೂ ನಗುತ್ತಾ ಮಾತನಾಡು ಸಿಡುಕದೆ,
ದಿನವೂ ನಿನ್ನ ಹರಳೆಣ್ಣೆ ಮುಖವ ನೋಡಿ,ನೋಡಿ
ಮನಸ್ಸು ರೋಸಿ ಹೋಗಿದೆ.....

ಒಮ್ಮೆ ಕೂಡ ನೀನು ನಮ್ಮನ್ನು ಹೊಗಳುವುದು ಬೇಡ
ಆದರೆ ಮನಸ್ಸು ಅರ್ಥಮಾಡಿಕೊಳ್ಳುವ ಮನಸ್ಸು ನಿನಗಿಲ್ಲವೇ?

ಇಂದು ನೀನು ಹೊಗಳಿದರೂ
ನಮಗದು ಬೈಗಳಂತೆಯೇ ತೋರುತ್ತಿದೆ
ಮಾತೊಂದಿದೆ

"ಹೃದಯಕ್ಕೆ ಸ್ಪಂದಿಸು,
ಜನರು ಮೊದಲು"

ಆದರೆ ನಿನ್ನ ನಡುವಳಿಕೆ

"ಹೃದಯ ಕತ್ತರಿಸು,
ಜನರು ನಿನ್ನ ಕಾಲ ಕಸ"
ಎಂಬಂತಿದೆ.

ಬೇಡ,ಬೇಡ
ಈ ದುರಹಂಕಾರ.
ಬದಲಿಸಿಕೋ ನಿನ್ನ ನಡತೆ...
ಮನವ ಮುರಿಯ ಬೇಡ
ಈ ಹೃದ್ಯ ಪರಿಸರವ ಹಾಳುಮಾಡಬೇಡ||

ದಾರಿದೀಪ

  ಆಳವಿಲ್ಲದ ಭಾವ , ಮುಗಿಲೆತ್ತರದ ಭಾವ , ನಗುವೊಮ್ಮೆ , ಅಳುವೊಮ್ಮೆ , ಬಳಲುವೆನು , ಬದಲಾಗುವೆನು , ಪ್ರೀತಿಸುವೆನು , ದೂರ ತಳ್ಳುವೆನು , ಸವಿಯುವೆನು , ದ...