ಒಳಗಿಹುದೊಂದು ಬೆಂಕಿ

ಒಳಗಿಹುದೊಂದು ಬೆಂಕಿ
ಇದ್ದೂ ಇಲ್ಲದಂತಿದೆ ಒಳಹೊರಗೆ
ಉರಿಯಲಾರದೇ,ಆರಲಾರದೇ!
ವಿಧಿಯಾಟವೋ ಏನಿದರ ಗುಟ್ಟು?
ಬೆಳಗಬೇಕಿದೆ ಪರರ ಬದುಕ
ಪೋಷಿಸುವವರಿಲ್ಲದೆ ಸೊರಗಿದೆ//

ಒಳಗಿಹುದೊಂದು ಬೆಂಕಿ
ಹೊತ್ತಿ ಉರಿಯುವುದು ಬೇಡ
ಹತ್ತಿ ಬೆಳಕ ನೀಡಿದರೆ ಸಾಕು
ಬಿರುಗಾಳಿಗೆ ಮೈಯ್ಯೊಡ್ಡಿ
ಎದೆಗುಂದದೆ ನಿಂತರದುವೇ ಸಾಕು
ಜೀವನ ಪ್ರೀತಿಸೂಸಿ ಬಾಳ್ಗೆ ಬೆಳಕಾದರೆ ಸಾಕು//

ಸಿಹಿ ಸಮಯವೇ ನನ್ನೊಡನೆಯೇ ಇರು...

ಸಿಹಿ ಸಮಯವೇ ನನ್ನೊಡನೆಯೇ ಇರು...

ದುಗುಡದ ತೊರೆಯಲ್ಲಿ ಕೊಚ್ಚಿಹೋಗಿರಲು
ಮನದ ಕ್ಲೇಶಗಳಲ್ಲೇ ಮೈಮರೆತಿರಲು
ಆತ್ಮವೇ ಆತ್ಮಾವಲೋಕನದಲ್ಲಿ ಮುಳುಗಿರಲು
ಓ! ಸಿಹಿ ಸಮಯವೇ ಬಳಿ ಬಾ,ಸಂತೈಸು ಬಾ//

ಗೊಂದಲ,ನೆನಪುಗಳ ಕದನಗಳಲ್ಲೇ ಕಾಣೆಯಾಗಿರಲು
ಮನದೊಳಗೆ ನೂರು ತೊಳಲಾಟಗಳು ನಡೆದಿರಲು
ನೋವ ನೆನಪುಗಳು ಮತ್ತೆ ಮತ್ತೆ ದಾಳಿಮಾಡಿರಲು
ಓ! ಸಿಹಿ ಸಮಯವೇ ಬಳಿ ಬಾ, ಕೈಹಿಡಿದು ನಡೆಸು ಬಾ//

ಪ್ರೀತಿ,ವಾತ್ಸಲ್ಯದ ಒರತೆಗಿಲ್ಲಿ ಬರವು
ಹೊಸ ದಿನಗಳು ಸರದಿಯಂತೆ ಬಂದು ಹೋಗುತಿರಲು
ಹೊಸದಿನದ ರವಿ ಬೆಳಗಿಗೆ ಕಾಯುತ್ತಿರಲು
ಓ! ಸಿಹಿ ಸಮಯವೇ ಬಳಿ ಬಾ,ಮಳೆಯ ಕರೆದು ತಾ//

ಕನಸುಗಳು......

ಕನಸುಗಳು.....
ಕೆಲವು ತುಂಬಾ ದೊಡ್ಡವು
ಮತ್ತೆ ಕಲವು ತುಂಬಾ ಚಿಕ್ಕವು
ಆಯ್ಕೆ ನಮ್ಮದೇ,
ಎಲ್ಲವೂ ನಮ್ಮದಾಗವು//

ಕನಸುಗಳು.....
ಕೆಲವು ನನಸಾದವು
ಮತ್ತೆ ಕೆಲವಿಂದ ಘನಘೋರ ಸೋಲು
ನೆನಪು ಮಾತ್ರ ಒಂದೇ,ಎರಡೋ
ಮಿಕ್ಕವೆಲ್ಲಾ ಮರೆತು ಮೂಲೆ ಸೇರಿದವು//

ಕನಸುಗಳು......
ಕೆಲವು ಮುಖ್ಯವಾದವು
ಮತ್ತೆ ಕೆಲವು ,ಅವಿಲ್ಲದೆ ನಾವಿಲ್ಲ,
ಹೋರಾಡಬೇಕು ಕೆಲವನ್ನು ಗಳಿಸಲು
ಮತ್ತೆ ಕೆಲವು ಅವೇ ನಮ್ಮ ಹಿಂಬಾಲಿಸುವುವು//

ಕನಸುಗಳು......
ಕನಸಿಲ್ಲದೇ ಕಳೆದ ದಿನಗಳೆಷ್ಟೋ!
ಮತ್ತೆ ಕೆಲವನ್ನು ನಮ್ಮದಾಗಿಸಿಕೊಳ್ಳಲು ಜೀವನ ಪೂರ್ತಿ ಶ್ರಮಿಸಬೇಕು
ರಾತ್ರಿಯ ನಿದ್ದೆಯಲ್ಲಿ ಕಾಣುವ ಕನಸು,ಕನಸಲ್ಲ,
ಬೆಳಗಿನಲ್ಲೂ ಸಾಧನೆಯ ಹಾದಿಯಲ್ಲಿ ನಡೆಸುವುದು ಕನಸು//

ಕನಸುಗಳು.......
ಕೆಲವು ಸಾಧ್ಯ
ಮತ್ತೆ ಕೆಲವು ಹುದಿಗಿಹುದು ಕಾಣದ ಕತ್ತಲಿನಲಿ,
ಕನಸುಗಳ ಕಾಣುತ್ತಾ ಮುನ್ನಡೆಯಬೇಕು,
ಸಾಮರ್ಥ್ಯವ ಓರೆ ಹಚ್ಚಲು ಕನಸುಗಳುಬೇಕು//

ವಲ್ಲರಿ

ಅರೆ! ನೋಡಲ್ಲಿ, ಅಲ್ಲೊಂದು ಹೂವು
ಪಂಚಭೂತಗಳೇ ದಳಗಳಾಗಿ
ಸೂರ್ಯರಶ್ಮಿಯೇ ಚೈತನ್ಯ ವಾಗಿ
ಸ್ವ ರ್ಗದಿಂದಲೇ ಜಾರಿ ಭೂಮಿಗೆ ಇಳಿದ
ಇಳೆಯ ಮಗಳು ವಲ್ಲರಿ ಇವಳೇ
ಭೂತಾಯಿಯ ನಗುವಿನ ಹೊನಲಾಗಿ  ಹರಿದು
ಗಿಡವಾಗಿ, ಪ್ರಕೃತಿಯ ಚೆಲುವಾಗಿ ನಿಂತಿದೆ
ಸೌಂದರ್ಯವೆನ್ನಲೋ? ಏನೆನ್ನಲೋ?
ನೀನು ಭದ್ರವಲ್ಲಿ ಅಲ್ಲವೇ!.....
ಪರಿಮಳವ  ಸೂಸಿ ಮನವ ಸೆಳವ
ಬಂಗಾರದ ಬಣ್ಣವ ಮೈಯೆಲ್ಲಾ ಹೊತ್ತು
ಭೂತಾಯಿಯ ಸೇವೆಗೆ ನಿಂತಿದೆ  ಆ ಹೂವು
ವಲ್ಲರಿ ಎನ್ನಲೋ!,ದೇವತೆ ಎನ್ನಲೋ!
ಬೆರಗಾದೆ ಬುಗುಡಿ ಕಂಡು ನಿನ್ನಯ ಬೆಡಗು//

ಕಳ್ಳ ನೋಟ

ಕಳ್ಳನ ಆಟಕೆ ಬಿತ್ತು ಸರಿಯಾದ ಪೆಟ್ಟು
ಹೇಳಿಕೊಳ್ಳಲಾಗದ ಹೊಡೆತದ ಪೆಟ್ಟು
ಬಿಸಿ ತುಪ್ಪ ನುಂಗಲಾರ,ಉಗುಳಲಾರ
ಅವನ ಪರಿಸ್ಥಿತಿ ಅಯೋಮಯ ಪಾಪ||

ಒಂದಲ್ಲ ಎರಡಲ್ಲ ಬರೋಬರಿ
ಎಪ್ಪತ್ತು ವರ್ಷ ಕೂಡಿಟ್ಟಿದ್ದು ಕಳ್ಳತನದಲಿ
ಕೋಟಿ ಕೋಟಿ ಹಣ ಕಾಗದದ ತುಂಡಾದರೆ
ಯಾರಿಗೆ ತಾನೆ ಹೊಟ್ಟೆ ಉರಿಯುದಿಲ್ವಾ ಹೇಳಿ||

ಹೊಟ್ಟೆ ಉರಿ ಹೊರಹಾಕಲೇ ಬೇಕಲ್ಲ
ಅದಕ್ಕೆ ಬಾಯಿ ಬಾಯಿ ಬಡಿದುಕೊಳ್ಳುತ್ತಿರುವುದು
ಕಳ್ಳರೆಲ್ಲರೂ ಇಂದು ಒಂದಾಗಿದ್ದಾರೆ
ಕಳ್ಳ ಹಣವ ಹೇಗಾದರೂ ಸರಿ ಉಳಿಸಿಕೊಳ್ಳಬೇಕೆಂದು||

ಸರದಿ ಸಾಲಿನಲಿ ನಿಂತು ,ಬೆಂದು
ಸಂತಸದಿಂದಲೇ ಅನುಭವಿಸಿದ್ದೇವೆ ಬವಣೆ
ನಮಗೆ ತೊಂದರೆಯಾಗಿದೆಯೆಂದು
ನಿಮ್ಮ ಬಳಿ ಅಹವಾಲಿಟ್ಟವರು ಯಾರು?

ಸಾಕು ಸಾಕುಮಾಡಿ ಎಪ್ಪತ್ತು ವರ್ಷದ
ನಾಟಕ,ಎಂದೊ ಬಯಲಾಗಿದೆ ಬಣ್ಣ
ಸುದ್ದಿ ಬಂದಾಗಿನಿಂದ ಮನಸ್ಸಿಗೆ ಏನೋ
ಸಂತಸ,ಸಂಭ್ರಮ ನಿಮ್ಮ ನಾಟಕಕ್ಕೆ ತೆರೆಬಿದ್ದಿತಲ್ಲಾ||

ಇಷ್ಟೂ ವರ್ಷ ನಮ್ಮ ಹೆಸರು ಹೇಳಿ
ದೇಶವನ್ನು ಲೂಟಿಮಾಡಿದ್ದು ಸಾಕು
ಇದೇ ಮೊದಲ ಬಾರಿಗೆ  ನಮಗೊಬ್ಬ
ಸಮರ್ಥ ನಾಯಕ ಸಿಕ್ಕಿದ್ದಾನೆ ಸಮರ್ಥಿಸೋಣ||

ಅಂತ್ಯಕಾಣದ ಕನಸು

ಹರಡಿಕೊಂಡಿದ್ದೇನೆ ಸುತ್ತಲೂ
ನನ್ನದೇ ಅಂತ್ಯಕಾಣದ ಕನಸುಗಳ
ಬಳಲಿವೆ,ಬಾಯಾರಿವೆ ಅಸಡ್ಡೆಗೆ
ಮುೂಲೆಗುಂಪಾಗಿವೆ ನನ್ನದೇ ಕನಸುಗಳು
ಮುಜುಗರ,ಭಯ ತುಂಬಿದೆ
ಹೊರಬರಲಾರದೆ ಚಡಪಡಿಸಿವೆ ಒಳಗೊಳಗೆ
ಆದರೂ ಏನೋ ಹಿತವಿದೆ ಕತ್ತಲಲ್ಲಿ....
ಯಾವ ಕನಸ ಆಯ್ದುಕೊಳ್ಳಲಿ
ಯಕ್ಷಪ್ರಶ್ನೆ ಮನೆಮಾಡಿದೆ ಮನದಲ್ಲಿ
ಆಯ್ಕೆಯಲ್ಲೇ ಸೋಲುತ್ತಿದ್ದೇನೆ
ಇದು ಮೊದಲಲ್ಲ,ಕೊನೆಯೂ ಅಲ್ಲ
ಆಟ ಮುಗಿದ ಮಗುವಿನಂತೆ
ಕನಸಕಂತೆಯ ಮುೂಟೆ ಕಟ್ಟಿರುವೆ
ಆಡಿಸಿದಾತ ಬೇಸರ ಮುೂಡಿ ಆಟ ಮುಗಿಸಿದ....

ಭ್ರಮೆಯ ಬದುಕು

ಎಲ್ಲವೂ ಇದೆ ಎಂದುಕೊಂಡಿದ್ದೆ
'ಮನವೂ ಖಾಲಿ'ಎಂದು ಇಂದೇ ತಿಳಿಯಿತು
ಏಕಾಂಗಿಯಾದಾಗ ನಮ್ಮತನ ಬೆತ್ತಲಾಗುವುದೆಂದು ಜ್ಙಾನೋದಯವಾಯಿತು//

ಎಲ್ಲವೂ ಇದೆ ಎಂಬ ತೋರಿಕೆ ಏಕೇ?
ಅಂಟಿಕೊಂಡಿಹ ಈ ಮೋಹ ಎಷ್ಟು ದಿವಸವೋ?
ಎಲ್ಲವೂ ನನ್ನ ಕೈಯಲ್ಲಿದೆ ಎಂಬ ಭ್ರಮೆ
ಕಳಚುವುದು ಎಷ್ಟು ಹೊತ್ತು ಅವನಿಗೆ?

ಭ್ರಮೆಯ  ಈ ಬದುಕು ಎಷ್ಟು ದಿವಸ?
ನನ್ನಿ ಅರಿತ ಮೇಲೆ ಬದುಕು ಭಾರವಾಯಿತು
ಇಂದಲ್ಲ ನಾಳೆ ಭ್ರಮೆ ಕಳಚಲೇಬೇಕಿತ್ತು
ಭ್ರಮೆ ಕಳಚಿದ ಮೇಲೆ ಆಸರೆಬೇಕು,ಮತ್ತೆ ಗೂಡು ಕಟ್ಟಲು//

ಒಳಗಿನ ಶತ್ರು ನನ್ನನ್ನೇ ರಣರಂಗದಲ್ಲಿ ಕೆಡವಿದ
ಅರಿಯುವ ವೇಳೆಗೆ ಮಣ್ಣಿಗೆ ಬಿದ್ದಾಗಿತ್ತು
ಈಗ ಯಾವ ಮಾರ್ಗ ತೆರೆದಿದೆ ,ಸೋಲು ಅನುಭವಿಸುವುದ ಬಿಟ್ಟು
ಇಂದು ಅವನ ದಿನ,ನಾಳೆಯ ನನ್ನ ದಿನಕ್ಕೆ ಕಾಯಲೇಬೇಕು//

ವಾರದ ಮೊದಲ ದಿನ

ವಾರದ ಮೊದಲ ದಿನ ಸೋಮವಾರ
ಹೊರಟೆ ಕೆಲಸಕ್ಕೆ ಹೊಸ ಉತ್ಸಾಹದ ವರ
ನೂರು ಸಮಸ್ಯೆಗಳ ರಹದಾರಿ ತೆವಳಬೇಕಿದೆ
ಪ್ರಶ್ನೆಗಳ ಸರಮಾಲೆಗೆ ತಡವರಿಸಬೇಕಿದೆ

ಇಂದು ವಾರದ ಮೊದಲ ದಿನ

ಹಿಂದಿನ ವಾರದ ಎಂಜಲು ಕರಗದೆ ನಾರುತ್ತಿದೆ
ಪರಿಹಾರಗಳ ರಸಾಯನ ಮನದಲ್ಲಿ ಖಾಲಿಖಾಲಿ
ತಲೆಯಮೇಲೆ ಕುಳಿತ್ತಿದ್ದಾರೆ ಏನಾಯಿತೆಂದು
ಪರಿಹಾರ ಸಿಗಲ್ಲಿಲ್ವೆ ಹಾಗಾದರೆ ನೀ ನಾಲಾಯಕ್ಕು

ಇಂದು ವಾರದ ಮೊದಲ ದಿನ

ಮೋಹದ ಹೊಸ ಉತ್ಸಾಹವೆಲ್ಲಾ ಇಳಿಯುತಿರೆ
ಮತ್ತೆ ನೂರು ಸಮಸ್ಯೆಗಳ ಸರಮಾಲೆ ಕೊರಳಿಗೆ
ಎಲ್ಲರೂ ನಗುವವರೇ!ಹಸ್ತಚಾಚುವರಾರೂ ಇಲ್ಲಿಲ್ಲ
ಒಳ ಒಳಗೇ ಹಚ್ಚುವರು ಬೆಂಕಿಯ ಕಿಡಿ ಮೇಲಿನವರ ಒಲೆಗೆ

ಇಂದು ವಾರದ ಮೊದಲ ದಿನ

ಅವರೇನೋ ಹೇಳುವರು ಅರ್ಥವಾಗದೆನಗೆ
ಅರ್ಥವಾಯಿತೇ ಎನಲು ಆಯಿತೆಂದ್ದಲ್ಲಾಡುವುದು ಕೊರಳು
ನಾಳೆ ಕಾದಿದೆ ಹಬ್ಬ ಆಗದಿದ್ದರೆ ಕೆಲಸ
ಅರ್ಚನೆ,ಮಹಾಮಂಗಳಾರತಿ ಹೊಸೆದಿಹೆನು ಹೊಸಬತ್ತಿ

ನನ್ನ ವಿಳಾಸ ಹುಡುಕಿಕೊಡಿ

ಹತ್ತು ನಿಮಿಷದ ಹಿಂದೆ ಇಲ್ಲೆ ತಟಸ್ಥವಾಗಿತ್ತು
ನೂರಾರು ವರ್ಷಗಳ ಕಲರವ
ನಾಲ್ಕೈದು ತಲೆಮಾರುಗಳ ಒಡನಾಟ
ಪ್ರೀತಿ-ದ್ವೇಷ, ಸುಖ-ದುಃಖ 
ಉಕ್ಕುಕ್ಕಿ ಹರಿದ ಜೀವನಪ್ರೀತಿ
ಎಲ್ಲವೂ ಮಂಗಮಾಯ ಕ್ಷಣದ ಕಂಪನಕ್ಕೆ
ಒಡಹುಟ್ಟಿದವರ ನುಂಗಿತ್ತು ಭೂಮಿ
ಸೌಂಧರ್ಯದ ಗಣಿ ಈಗ ಸುಡುಗಾಡು
ಅವರವರಿಗೆ ಅವರ ಚಿಂತೆ
ನನ್ನ ಚಿಂತೆ ನನಗೆ
ಸುಡುಗಾಡಿನಲ್ಲಿ ಒಂಟಿ ಪಿಶಾಚಿ
ಹುಡುಕಾಡುತ್ತಿದ್ದೇನೆ ನನ್ನ ವಿಳಾಸ
ಪ್ಲೀಸ್ ಹುಡುಕಿಕೊಡಿ//

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...