Saturday, October 31, 2015

ಕೃಷ್ಣಾ ಕೃಷ್ಣಾ,ಕೃಷ್ಣಾ,ಕೃಷ್ಣಾ

ಕೃಷ್ಣಾ,ಕೃಷ್ಣಾ
ಏನ ಹೇಳಲಿ ಕೃಷ್ಣಾ
ಬೇಡಲಾರೆ ನಿನ್ನ ಕೃಷ್ಣಾ
ಬಿಡಲಾರೆ ನಿನ್ನ ಕೃಷ್ಣಾ
ಮರೆಯಲಾರೆ ನಿನ್ನ ಕೃಷ್ಣಾ
ತೊರೆಯಲಾರೆ ನಿನ್ನ ಕೃಷ್ಣಾ
ಇರಲಾರೆ ನಿನ್ನ ಬಿಟ್ಟು ಕೃಷ್ಣಾ
ಮೋಹ,ವ್ಯಾಮೋಹಗಳಲಿ ಕಟ್ಟಬೇಡ ಕೃಷ್ಣಾ
ಎಲ್ಲವೂ ನಿನ್ನದೇ,ನಿಮಿತ್ತ ನಾ ಬಲ್ಲೆ ಕೃಷ್ಣಾ
ಸಕಲ ನಾಟಕ ಸೂತ್ರದಾರ ನೀ ಕೃಷ್ಣಾ
ಮನದಲಿ ಸದಾ ನಿನ್ನ ನಾಮಸ್ಮರಣ ನೆಲೆವಂತೆ
ಮಾಡು ಕೃಷ್ಣಾ
ಮುಕ್ತಿಯನಲ್ಲದೆ ಬೇರೇನೂ ಬೇಡೆನು ಕೃಷ್ಣಾ
ಶರಣಾಗಿಹೆನು ನಿನಗೆ ಕೃಷ್ಣಾ
ರಕ್ಷಿಸೆನ್ನನು ಕೃಷ್ಣಾ
ಕೃಷ್ಣಾ,ಕೃಷ್ಣಾ,ಕೃಷ್ಣಾ//

Thursday, October 29, 2015

ಕನ್ನಡಿ

ಕನ್ನಡಿಯ ನೋಡು ಬಾ ಗೆಳೆಯ,
ಆಧ್ಯಾತ್ಮದ ಸಕಲ ತತ್ವಗಳೂ ಕಂಡು 
ಕಾಣದ ಹಾಗೆ ನೆಲೆಗೊಂಡಿದೆ,ಮನಸ್ಸಿನ ಪ್ರತಿಬಿಂಬವೇ ಅದು
ಪ್ರತಿದಿನ ಒಮ್ಮೆಯಾದರೂ ಅದರೊಡನೆ
ಮೌನವಾಗಿ ಮಾತನಾಡು,ನಿನ್ನೊಳಗಿನ ಭಾವಗಳೆಲ್ಲಾ
ನಿನ್ನ ವ್ಯಕ್ತಿತ್ವದೊಡನೆ ಹೇಗೆ ಬೆರೆತಿವೆ ನೋಡಲ್ಲಿ
ಅವುಗಳ ಸಮಸ್ಯೆಗಳ ಮನವಿಟ್ಟು ಆಲಿಸು
ನಿನ್ನ ನೀ ಸರಿಪಡಿಸಿಕೊಳ್ಳಲು ಇದೇ ಸರಿಯಾದ ಮಾರ್ಗ
ಆಲಿಸು ನಿನ್ನ ಮನದ ಆಲಾಪನೆಯ,ಧ್ವನಿಗೂಡಿಸು ಅದರೊಟ್ಟಿಗೆ
ಮನದ ಕ್ಲೇಶಗಳೆಲ್ಲಾ ದಿಕ್ಕುಪಾಲಾಗಿ ಓಡುವುವು
ಆತ್ಮ ಧೀ ಶಕ್ತಿ ನಿನ್ನಲ್ಲಿ ಅವತರಿಸುವುದು,
ಸಾಧನೆಯ ಶಿಖರ ಅದೋ ನೋಡಲ್ಲಿ 
ಜಾರಿ ನಿನ್ನ ಕಣ್ಣಮುಂದೆಯೇ  ಪ್ರತ್ಯಕ್ಷವಾಗಿದೆ ಒಳಗಣ್ಣ ತೆರೆ ,ತೇಜಸ್ಸನ್ನು ಅಪ್ಪು
ನಿನ್ನವ್ಯಕ್ತಿತ್ವವ ನೀನೇ ರೂಪಿಸಿಕೋ ಗೆಳೆಯ//

Sunday, October 25, 2015

ಏನು ಗಳಿಸಿದೆ ಇಷ್ಟು ವರುಷಗಳಲಿ?

ಏನು ಗಳಿಸಿದೆ ಇಷ್ಟು ವರುಷಗಳಲಿ?
ವಿದ್ಯೆ,ಕೆಲಸ,ಹಣ,ಹೆಂಡತಿ,ಮಕ್ಕಳು
ಸಂಪತ್ತು,ಗೆಳೆತನ ಏನಿಲ್ಲ? ಹೇಳು ಗೆಳೆಯ!
ಆಸೆ ಪಡುತ್ತಲೇ ಬೇಕು ಬೇಕೆಂದಿದ್ದೆಲ್ಲಾ
ಪಡೆಯುತ್ತಲೇ ಹೋದೆ ಒಂದು ಒಂದಾದನಂತರ
ಮೊದಲು ಪಡೆದದ್ದು ಈಗ ಕಸವಾಗಿದೆ
ನಂತರ ಪಡೆದದ್ದರ ಗತಿಯೇನು? ನೀನೇ ಹೇಳು
ಎಲ್ಲವೂ ಕೈಗೆಟುಕುತ್ತಲೇ ಇದೆ,ಹಾತೊರೆದಿದೆ ಮನ
ನೆಮ್ಮದಿಯ ಹುಡುಕುತ್ತಲೇ ಇದ್ದೇನೆ ವಸ್ತುಗಳಲಿ
ಅದು ಬೇಕು!ಇದು ಬೇಕು! ಬೇಕು ಬೇಕುಗಳ ಭಿಕ್ಷುಕ
ಯಾವ ಸಂಪತ್ತಿನಲಿ,ಯಾವ ವಸ್ತುಗಳಲಿ
ಆ ತೃಪ್ತಿ ಅಡಗಿದೆಯೋ ಹುಡುಕಾಟದಲ್ಲಿ ಅನ್ವೇಷಕ
ಎಲ್ಲೋ ಲೋಕದ ವಸ್ತುಗಳಲಿ,ಸಂಪತ್ತುಗಳು ಹುಡುಕಬೇಡ
ತೃಪ್ತಿ,ಶಾಂತಿ,ನೆಮ್ಮದಿ ಮನದಲ್ಲೇ ಅಡಗಿದೆ ಆಗು ನೀ ಸಂಶೋಧಕ //

Saturday, October 24, 2015

ಕಾಪಾಡು ಗೆಳೆಯಾ...

ಪಾಠ ಕಲಿತೆ ಗೆಳೆಯ ಎಂಥ ಪಾಠ ಅಂತೀಯ
ಉಪಕಾರ ಮಾಡಲೋಸುಗ
ಸಮಸ್ಯೆಯ ಹೆಬ್ಬಾವಿಗೆ ಸಿಲುಕಿದ ಹಾಗೆ
ಅಬ್ಬಾ ಎಂಥ ಪಟ್ಟು ಹೆಬ್ಬಾವಿನದು
ನಮ್ಮ ತೆವಲಿಗೆ ಬೀಳುವ ನಾವು
ಸ್ವಾರ್ಥಸಾಧನೆಗೆ ನಿಂತರೆ ಏನು ಕಥೆ?
ಏನು ಬಯಸಲಿಲ್ಲ?ಸಹಾಯವಾಗಲಿ
ಎಂಬ ಉದ್ದೇಶವಲ್ಲದೆ ಬೇರೆ ವ್ಯಾಮೋಹವಿಲ್ಲ
ನಿಸ್ವಾರ್ಥ ನಿಲುವಿಗೇ ಹೆಬ್ಬಾವಿಗೆ ಸಿಲುಕಿ
ಬಿಡಿಸಿಕೊಳ್ಳುವ ಪರಿ ತ್ರಾಸದಾಯಕ
ಅಬ್ಬಬ್ಬಾ ಸಿಲುಕಿ ಹೈರಾಣಾದೆ
ಸಾಕಪ್ಪಾ ಸಾಕು ಈ ದೊಂಬರಾಟ
ಕೊನೆ ತೋರಿಸಯ್ಯಾ ಬಳಲಿದೆ ಈ ಮನ
ಮತ್ತೊಮ್ಮೆ ಸಿಲುಕಲಾರೆನಯ್ಯಾ ಕಾಪಾಡು ಗೆಳೆಯಾ...

ಆವ ಭಯದಲ್ಲೋ? ಆವ ನೆಪದಲ್ಲೋ? //

ಬದಲಾಗಿದೆ ಇಲ್ಲಿ ಎಲ್ಲವೂ, ಒಂದೂ ಬಿಡದೆ
ನಾನು,ನಾವು,ನೀವು,ಅವರು,ಅವಳು,
ಏಕವಚನ,ಬಹುವಚನ,ಲಿಂಗ,ಪುಲ್ಲಿಂಗ,ಸ್ತ್ರೀಲಿಂಗ
ಹೇಳ ಹೆಸರಿಲ್ಲದೆ ಗುರುತು ಸಿಗದಹಾಗೆ
ಬದಲಾಗಿದೆ ಇಲ್ಲಿ ಎಲ್ಲವೂ ಕಾರಣವಿಲ್ಲದೆ
ಎಲ್ಲವೂ ಬದಲಾಗಿದೆ,ಹೊಸ ತುಡಿತದ ಹಾದಿಯಲ್ಲಿ//

ತಥಾಕಥಿತ ಕಥೆಗಳೆಲ್ಲವೂ ಬದಲಾಗಿದೆ
ಹಳೆಯ ರೂಪಗಳೆಲ್ಲಾ ಗೂಡು ಸೇರಿವೆ ಆತಂಕದ ಕರಿಛಾಯೆಯ ತಿಮಿರಕ್ಕೆ ಹೆದರಿ,ಬೆದರಿ ಮೂಲೆಸೇರಿವೆ
ಹೊಸಹೊಸ ವಿರೂಪಗಳೇ ಮೇಳೈಸಿವೆ ಗರಿಗೆದರಿ
ನಾದ,ಸ್ವರ,ಲಯಗಳೆಲ್ಲಾ ಕತ್ತಲು ಮನೆಸೇರಿವೆ
ಆವ ಭಯದಲ್ಲೋ? ಆವ ನೆಪದಲ್ಲೋ? //

ಎಲ್ಲ ಬಲ್ಲವ ನೀನು

ಎಲ್ಲ ಬಲ್ಲವ ನೀನು,ಕಲ್ಪವೃಕ್ಷವು ನೀನು
ಏನ ಬಿನ್ನಹವ ನಿನ್ನ ಮುಂದಿಡಲಿ ದೇವ?
ಎಲ್ಲರೂ ನಿಂತಿಹರು ತಮ್ಮ ಬಿನ್ನಹದ ಪಟ್ಟಿಹಿಡಿದು
ಮೂಕವಿಸ್ಮಿತನಾಗಿಹೆನು ಅವರ ಬಿನ್ನಹಗಳ ಆಲಿಸಿ,
ಮಂದಹಾಸದಿ ನೀನು ಎಲ್ಲರ ಬಿನ್ನಹಗಳ ಆಲಿಸಿ
ಅವರವರ ಬಿನ್ನಹದಂತೆ ವರವ ಕರುಣಿಸುವೆ
ಏನು ಮಾಡಲಿ ದೇವ?,ಮೂಕನಾಗಿಹೆನು ನಿನ್ನ ಮುಂದೆ,
ಕಣ್ಣಲ್ಲಿ,ಹೃದಯದಲ್ಲಿ,ಮನದಲ್ಲಿ,ಉಸಿರಿನಲಿ
ನಿನ್ನ ರೂಪವನೆ  ತುಂಬಿಕೊಂಡಿಹೆನು
ನಿನ್ನ ನಾಮಾಮೃತವೆ ಮನದಲ್ಲಿ ನೆಲೆಸಲಿ
,ನಾ ನಿನ್ನ ಶಿಶುವೆಂದು ಕರುಣೆಯೊಂದಿರೆ ಸಾಕು,
ಎಂಬ ಬಿನ್ನಹವಲ್ಲದೆ ಮತ್ತೇನು ಇಲ್ಲ ದೇವ
ಕೈಹಿಡಿದು ನಡೆಸಲು ನೀನಿರಲು ದೇವ
ಏನ ಬೇಡಿಕೆಯ ನಿನ್ನ ಮುಂದಿಡಲಿ ದೇವ?//

Tuesday, October 20, 2015

ಕನ್ನಡಿಯ ನೋಡು ಗೆಳೆಯ! ನೀನಾಗುವೇ ಅನಿಕೇತನ

ಕನ್ನಡಿಯ ನೋಡು ಗೆಳೆಯ,ನೋಡು
ಬ್ರಹ್ಮಾಂಡವೇ ಅಡಗಿದೆ ಅದರಲ್ಲೇ ಪ್ರಳಯ
ಬೆಚ್ಚಬೇಡ ಅದರ ಹರವು ಕಂಡು
ಲೋಕ ನಾಚುವುದು ಅದನು ಕಂಡು
ನಮ್ಮ ಮುಖವಾಡಗಳೆಲ್ಲಾ ಕಳಚುವುದು
ಬಟ್ಟೆ ಧರಿಸಿದ್ದರೂ ಅದರ ಮುಂದೆ ನಾವು ಬೆತ್ತಲೆ
ಅದರ ಮುಂದೆ ನಮಗೆ ನಾವೇ ಗೆಳೆಯರು
ಪರದೆ ಕಳಚಿದೊಡೆ ನಮಗೆ ನಾವೇ ಶತೃಗಳು
ಜಿಪುಣರಾಗುವುದು ಬೇಡ ಅದರ ಮುಂದೆ
ಮುಕ್ತ ಮನಸ್ಸಿನಿಂದ ಎಲ್ಲವನ್ನೂ ತೆರೆಯೋಣ
ಹೊಸ ಗಾಳಿ,ಹೊಸ ನೋಟ,ನಮ್ಮೊಳಗಿನ ವಿಸ್ತಾರ
ಎಲ್ಲವೂ ಕಾಣುವುದು ಕನ್ನಡಿಯ ಮುಂದೆ
ತೆರೆದು ಕೋ ನಿನ್ನ ಆಂತರ್ಯದ ಮುಂದೆ
ನಾಚಿಕೆಯ ಸುಡು ನೀನಾಗುವೇ ಅನಿಕೇತನ//

ಹಠಯೋಗಿ

ಮನದಲೆಲ್ಲಾ ಸೂತಕದ ಛಾಯೆ
ತಲೆಬೇನೆ,ಆತಂಕದ ಕರಿಛಾಯೆ
ಬೇಡಬೇಡವೆಂದರೂ ಸುಳಿಯುವ ಮಾಯೆ
ಆಸೆ,ಕಪಟ ನಾಟಕವಾಡಿ ಗಹಗಹಿಸಿದೆ
ನೀ ಬಿಟ್ಟರೂ ನಾ ಬಿಡನೆಂಬ ಹಠಯೋಗಿ
ಆಹುತಿಯೋ,ಬಲಿಪಶುವೇ ಬೇಕೆಂಬ ಹಠ
ಸಿದ್ಧ ವಾಗೆ ನಿಂತಿದೆ ಈಗಲೇ ಬೇಕೆಂದು
ತಲೆಯೊಡ್ಡಲೋ,ಸಿಡಿದೇಳಲೋ
ದ್ವಂದ್ವ ಕದನ ಮನದಲ್ಲಿ ಸಂಚು ಹೂಡಿದೆ
ಯಾವುದು ಸರಿ?ಯಾವುದು ತಪ್ಪು?
ವಿವೇಕ ನರಳುತ್ತದೆ ಅಂಧಕಾರದಲ್ಲಿ 
ಆತಂಕ ಮನದಲ್ಲಿ ಸೋತುಬಿಟ್ಟರೆ?
ಗುರುವೇ ನಿನ್ನ ಕರುಣೆಯ ಬಲನೀಡು
ಎಲ್ಲಾ ದ್ವಂದ್ವಗಳ ಕಟ್ಟಿ ತಿಮಿರವ ಗೆಲ್ಲುವೆ

ನಿಜರೂಪ...

ಗೆಳೆಯ ನಿನ್ನ ಮುಖವ ಕನ್ನಡಿಯಲ್ಲಿ ನೋಡಿಕೊಂಡಿರುವೆಯಾ?
ಖಚಿತಪಡಿಸಿಕೋ ನಿನ್ನ ನಿಜ ರೂಪವ
ನಕ್ಕು ಬಿಡಬೇಡ ನಿನಗಿರುವುದೊಂದೇ ರೂಪವೆಂದು
ಕಂಡ ರಾವಣನಿಗೊಂದೇ ರೂಪ
ಬಯಲಾಯಿತಲ್ಲ ರಾಮಯಣದ ರಾಮ-ರಾವಣರ ಯುದ್ಧದಲ್ಲಿ
ರಾವಣನೊಗೊಬ್ಬನಿಗೇ ತಿಳಿದಿತ್ತು ಅವನ ಹತ್ತು ತಲೆಗಳ ನಿಜಮುಖ
ಸಂದಿಗ್ಧ ಪರಿಸ್ಥಿತಿ ಯಲ್ಲಷ್ಟೇ ನಮ್ಮ ನಿಜರೂಪ ಬೇರೆಯವರಿಗೆ ತಿಳಿಯುವುದು
ನಮ್ಮ ನಿಜರೂಪ ಕನ್ನಡಿಯ ಮುಂದೆ ನಮಗಷ್ಟೇ ತಿಳಿವುದು
ಪರೀಕ್ಷಿಸಿಕೋ ನಿನ್ನ ನೀ..
ತಿಳಿದು ಕೋ ನಿನ್ನ ನಿಜರೂಪವ....

Sunday, October 18, 2015

ಮನದ ಒಳಕುದಿ

ಮನದ ಹುತ್ತದಲ್ಲಿ ನೂರಾರು ಹಾವುಗಳ ಸಂತೆ
ಒಂದಕ್ಕೊಂದು ಬೆಸೆದುಕೊಂಡಿವೆ ಬುಸುಗುಡುತ್ತಾ
ಒಳಕುದಿ ಹೆಚ್ಚಾಗಿ ನೆಲೆನಿಂತ ಜಾಗದಲ್ಲಿ ಇರಲಾಗದೆ
ಮೇಲು ಮುಖಮಾಡಲು ಇರುವುದೊಂದೇ ಕಿಟಕಿ
ಹೊರಬರಬೇಕಾದವರು ನೂರು,ಸಾವಿರ,ಲಕ್ಷದಷ್ಟು
ನಾ ಮೊದಲು,ತಾ ಮೊದಲು ಪೈಪೋಟಿಗೆ ಬಿದ್ದಿವೆ
"ಶಕ್ತಿ ಇದ್ದವ ಉಳಿವ " ಬೆಳಕಿಂಡಿಗೆ ಮುಖಹಾಕೆ
ಏನೋ ಉತ್ಸಾಹ ಬದುಕಿದೆಯಾ ಬಡಜೀವವೇ ಎಂದು
ಕ್ಷಣಿಕ ಸುಖ ಅದು,ಕೆಳಗೆ ಕಾಲೆಳೆವರು ಬಹಳ ಮಂದಿ
ಹೇಗೆ ಹತ್ತುವೆಯೋ ಹಾಗೆ ಕ್ಷಣದಲ್ಲೇ ಪಾತಾಳ ನಗ್ನಸತ್ಯ
ಈ ರಂಗ ನಾಟಕ ಇಂದು ನಿನ್ನೆಯದಲ್ಲ
ಶತಮಾನಗಳ ಚರಿತ್ರೆ
ನಡೆಯುತ್ತಲೇ ಇದೆ
ಒಬ್ಬೊಬ್ಬರ ಮನದಲ್ಲಿ ನಿರಂತರ.

ನನ್ನ ದಾರಿ ನನಗೆ

ಯಾವುದೋ ಚಿಂತನೆಗಳು ಬಿಡದೆ ಕಾಡಿವೆ ಮನವ
ಪ್ರೀತಿಸಲೊಪ್ಪದ ಚೆಲುವೆಯ ಮನವ ಒಪ್ಪಿಸುವಂತೆ
ಬೇಡ,ಬೇಡವೆಂದರೂ ಮತ್ತೆ ಮತ್ತೆ ಅದೇ ವರಸೆ
ಸಾಕು ಸಾಕಾಗಿದೆ ಇವುಗಳ ಸಹವಾಸ//

ನನ್ನದೇ ಚಿಂತೆಗಳು ನೂರಿವೆ
ಚೋಧ್ಯ ಮಾಡಿ ಕಾಯುತ್ತಿವೆ ಪರಿಹಾರಕ್ಕಾಗಿ ಕತ್ತಲಲ್ಲಿ
ಇಷ್ಟು ಸಾಕಲ್ಲವೇ! ಮತ್ತೆ ನೀವೇಕೆ ಹಿಂಸಿಸುವಿರಿ
ನಿಮ್ಮತ್ತ ಗಮನಕೊಡಲು ಸಮಯವಿಲ್ಲ//

ನಾಳೆ ಬಾ ಎನ್ನಲೇ?,ಇಲ್ಲ ಬರಬೇಡಿರೆನ್ನಲೇ?
ಕರೆದಾಗ ಬನ್ನಿರೆಂದು ಮೌನವಹಿಸಲೇ? ಧರ್ಮಸಂಕಟ
ಹೊಸಹೊಸ ಸಮಸ್ಯೆಗಳು ಮಾರುಕಟ್ಟೆಗೆ ಬಂದಿಳಿವ ಮೊಬೈಲುಗಳಂತೆ
ಎಲ್ಲವನ್ನೂ ನಾ ನೋಡಲಾರೆ,ನನ್ನ ದಾರಿ ನನಗೆ ಬಿಟ್ಟುಬಿಡು//

ಬಂದೇ ಬರುವೆ ನಾ ಬಲ್ಲೆ!

ನನ್ನ ಎದೆಗೂಡು ಖಾಲಿಯಾಗಿದೆಯೆಂದು
ಹೇಳಿದರಾರು? ನಿನಗೆ ಓ ನನ್ನ ಚೆಲುವೆ!
ಜೊತೆಗಿದ್ದರೂ ಎಂದೂ ಕಾಣದಿದ್ದ ಈ ಚೆಲುವು,ಒಲವು
ಇಂದೇಕೆ ಕಣ್ಣ ಮುಂದೆಯೇ ಬಂದು ಎದೆಯ ಬಡಿದಿದೆ//

ನೀ ರಜೆಗೆ ದೂರ ಹೋದೆಯೆಂದೇ?

ಎಷ್ಟು ಜನರು  ಬಂದರೂ,ಹೋದರೂ
ಹಾಕಿದ ಕದ ಕದಲದೆ ನಿಂತಿತ್ತು ಗರುಡಗಂಬದ ಹಾಗೆ
ಕೋಲ್ಮಿಂಚಂತೆ ಬಂದುಹೋದ ನೀನು
ಶತಮಾನದ ಕದವ ತೆರೆದು ಹೋದೆ//

ಇಷ್ಟು ದಿನ  ಕೃಪೆದೋರಲಿಲ್ಲವೇಕೆ?

ಹೊರಟು ಹೋದೆ!,ಮತ್ತೆ ಎಂದು ಆಗಮನ?
ಜೀವನದ ಏಕತಾನತೆಯ ಸುಳಿಗೆ ಸಿಕ್ಕ ನಾನು
ಮರೆತ ಜೀವನ ಪ್ರೀತಿಯ ಮತ್ತೆ ನೆನಪಿಸಿ ಹೋದೆ
ಕಾಯುತಿರುವೆ ಹೃದಯವ ತೆರೆದು ಮತ್ತೆ ಬರುವೆಯೆಂದು//

ರಜೆ ಮುಗಿದ ತಕ್ಷಣ ಬಂದೇ ಬರುವೆ ನಾ ಬಲ್ಲೆ!

Monday, October 12, 2015

ನಾನೇ ಕೊನೆ, ನಾನೇ ಮೊದಲು.

ಕೇಳು ಕೇಳು ನನ್ನ ಮಾತು
ನಾನು ನಿನ್ನೊಳಗಿನ ದನಿ
ನನ್ನ ಮಾತು ಜೇನು
ನಡೆಯುವ ಹಾದಿ ಕಲ್ಲು ಮುಳ್ಳು
ನಾನು ಸತ್ಯ,ನಾನೇ ನಿತ್ಯ
ಎಲ್ಲರೊಳಗೂ ನಾನಿರುವೆ
ಇದ್ದರೂ ಇಲ್ಲದ ಹಾಗಿರುವೆ
ನನ್ನ ಮಾತು ಯಾರಿಗೂ ಬೇಡ
ಎಲ್ಲ ದಾರಿಗಳು ಕೊನೆಯಾದಾಗ
ನಾನೇ ಮುನ್ನಡೆಸುವವ,
ನಾನೇ ಕೊನೆ,
ನಾನೇ ಮೊದಲು.

Tuesday, October 6, 2015

ನನ್ನ ಒಡನಾಡಿ

ಬಾಯಿಲ್ಲ ಮಾತಿಗೇನೂ ಕಮ್ಮಿಯಿಲ್ಲ
ಸಾವಿರ ಮಾತು ಸಾಲದು ಬಣ್ಣಿಸಲು:
ಕಣ್ಣಿಲ್ಲ ಆದರೆ ಕುರುಡಲ್ಲ
ಕನಸ ಬಿತ್ತುತ್ತಿದೆ ನೂರು ಮನದಲ್ಲಿ:
ಕಿವಿಯಿಲ್ಲ ಆದರೆ ಕಿವುಡಲ್ಲ
ನನ್ನ ಮನದ ನೋವೆಲ್ಲಾ ಬಲ್ಲ ಜಾಣೆ :
ಕೈಗಳಿಲ್ಲ ಆದರೆ ವಿಕಲಚೇತನಳಲ್ಲ
ಹೃದಯದ ಕಣ್ಣೀರು ಒರೆಸಿದಳು ಕರುಣೆ:
ಕಾಲುಗಳಿಲ್ಲ ಆದರೆ ಕುಂಟಿಯಲ್ಲ
ನಾ ಏಕಾಂಗಿಯಾಗಿ ನಡೆವಾಗ ಜೊತೆಯಾಗಿ ಹೆಜ್ಜೆಹಾಕುವ ಚದುರೆ:
ಹೂವಷ್ಟೇ ಮೃದು
ಪರಿಮಳ ಮೈಲಿಗಳಾಚೆ
ಮನವ ಮುದಗೊಳಿಸುವ ಗೆಳತಿ
ನನ್ನ ಒಡನಾಡಿ:

Saturday, October 3, 2015

ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು

ಅಣು ಅಣುವಿನಲಿ,ಕಣಕಣದಲಿ
ಬಿಂದುವಿನಲಿ,ಸಿಂಧುವಿನಲಿ
ತೆರೆಯಲು,ಮರೆಯಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು//

ಸೂಜಿಯ ಮೊನೆಯಲಿ,
ಅನಂತ ಆಗಸದಲಿ,
ಪರ್ವತದ ತುತ್ತ ತುದಿಯಲಿ,
ಪಾತಾಳದ ಆಳದಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು//

ಒಳಿತಿನಲಿ,ಕೆಡುಕಿನಲಿ
ನೋವಿನಲಿ,ನಲಿವಿನಲಿ
ಅಮಿತತೆಯಲಿ,ಅನಂತತೆಯಲಿ
ಚ್ಯೆತನ್ಯ ರೂಪಿಯಾಗಿಹ ನಿನಗೆ ಶರಣು//

ಸಂತೋಷದ ಋಣ

ನೀ ಯಾರಾದರೇನು ? ನಿನ್ನಲ್ಲಿ ಏನಿದ್ದರೇನು ? ಮನದೊಳ ಭಾವಗುಣದಂತೆ ,   ದಕ್ಕುವುದು ನಿನಗೆ ಸಂತೋಷದ ಋಣ .   ಮನದ ರಂಗಮಂಚದಲಿ ನಡೆದಿದೆ ತಾಲೀಮು , ...