ಕೋಟೆ ಕೊತ್ತಲಗಳೆಂದರೆ ನನಗಿಷ್ಟ!


ಕೋಟೆ ಕೊತ್ತಲಗಳೆಂದರೆ ನನಗಿಷ್ಟ!
ಮನಸು ತುಂಬಿಬರುವುದು;
ಮನಸನೆಳವುದು;
ಭಾವ ಉಕ್ಕುವುದು;
ಏಕೋ ಗೊತ್ತಿಲ್ಲ ನಾ ಕಾಣೆ?

ಹೋರಾಟಗಳ ಸಂಕೇತವೆಂದೋ?
ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?
ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?
ಕೋಟೆ-ಕೊತ್ತಲಗಳೆಂದರೆ
ಮನಸು ತುಂಬಿಬರುವುದು;
ಭಾವ ಉಕ್ಕುವುದು;

ಗತಕಾಲದ ನೆನಪೊಂದು
ಮನದ ಮುಂದೆ ಬಾರಲಾರದೆ
ಪ್ರೀತಿಯ ಭಾವವಾಗಿ ಹೊರಹೊಮ್ಮುತಿಹುದೋ ನಾ ಕಾಣೆ?
ಯಾವ ಯುದ್ಧದಲ್ಲೋ
ನನ್ನ ಭೂಮಿ,ನನ್ನ ಕೋಟೆ,
ನನ್ನವರಿಗಾಗಿ ಹೋರಾಡುತ್ತಾ ಮಡಿದನೇನೋ?
ಈ ಕೋಟೆ-ಕೊತ್ತಲಿನಲ್ಲಿ ನೆನಪು ಬಾರದು
ಭಾವ ಉಕ್ಕುವುದು;

ಕೋಟೆ,ರಾಜ್ಯ ಕೈತಪ್ಪಿಹೋಯಿತೋ?
ವೈರಿ ಪಡೆಯ ನಾಮಾವಶೇಷವಾಗಿ ಗೆಲುವು ನಮಗಾಯಿತೋ?
ಒಂದೂ ನೆನಪಿಲ್ಲ;
ತುಪಾಕಿ-ಪಿರಂಗಿಗಳ ಶಬ್ದ;
ಸಾವು-ನೋವುಗಳ ಚೀರಾಟ;
ರಣಕಹಳೆ ದುಂದುಬಿಯ ಮೊಳಗಾಟ;
ಮನದಲ್ಲಿ ಇನ್ನೂ ಹಸಿರಾಗಿದೆ
ಪೌರುಷವನೆ ತುಂಬುತಿಹುದು;
ಕಣ್ಣ ಮುಂದೆ ಯಾವಚಿತ್ರವೂ ಬಾರದೆ
ಮನದ ಪರದೆಯ ಹಿಂದೆ ಯಾವುದೋ ಶಕ್ತಿ ನರಳುವಂತೆ ಮಾಡುತ್ತಿದೆ
ಕೋಟೆ ಎಂದರೆ ಭಾವ ಉಕ್ಕುವುದು;

ಏನನ್ನೂ ಮಾತನಾಡದೆ ಸುಮ್ಮನೆ ನಿಂತಿರುವ ಕೋಟೆಯ ಗೋಡೆ,
ಮುರಿದು ಬಿದ್ದ ಪಿರಂಗಿ,ಬಾಗಿಲುಗಳೇ ಹೇಳಿ ನಾನಾರೆಂದು?
ಗುಂಡು,ಪಿರಂಗಿಗಳಿಗೆ ಎದೆಯ್ಯೊಡ್ಡಿದರೂ
ಅಚಲರಾಗಿ ಅಜೇಯರಾಗಿದ್ದೀರಿ;
ಗುಂಡೇಟುಗಳಿಂದ ಘಾಸಿಯಾದ ಜಾಗಗಳು;
ಪಿರಂಗಿಗಳ ಹೊಡೆತದಿಂದ ಮುರಿದು ಬಿದ್ದ
ಗೋಡೆ-ಚಾವಣಿಗಳು
ಎಲ್ಲವೂ ನೆನಪಿದೆ
ಆದರೆ ನಾನಾರೆಂದು ಮಾತ್ರ ಮರೆತಿದೆ;
ಕೋಟೆ ಎಂದರೆ ಭಾವ ಉಕ್ಕುವುದು;

ನಿನ್ನ ಮರೆತೆ ನಾನು...

ನಿನ್ನ ಮರೆತೆನೆಂದುಕೊಂಡಿದ್ದೆ ಎಷ್ಟು ವರುಷಗಳಾದವು ನಿನ್ನ ಮರೆತು; ಅದೆಷ್ಟು ಕಷ್ಟಪಟ್ಟೆ ಮರೆಯಲು; ಕನಸಿನಲ್ಲೂ; ದಿನಂಪ್ರತಿ ನಿನಗಾಗಿ ನರಳಿದೆ; ನನ್ನವರನ್ನೂ ನರಳಿಸಿದೆ; ಇಂದು,ನಾಳೆಗಳ ಕೊಲೆಗೈದು ಬೇಸರಿಸಿದೆ: ನೀನಿಲ್ಲದೆ ಈ ಜಗವಿಲ್ಲವೆಂದುಕೊಂಡಿದ್ದೆ; ಭ್ರಮೆಯಲ್ಲೇ ಜೀವನ ಸಾಗಿಸುತ್ತಿದ್ದೆ; ಕಾಲ ಎಲ್ಲ ಪಾಠವನ್ನೂ ಕಲಿಸಿತು; ಭ್ರಮೆಯ ಪರಧೆ ಕಳಚಿತು; ನೀನಿಲ್ಲದೇ ಎಲ್ಲವನ್ನೂ ಕಂಡೆ; ಅನುಭವಿಸಿದೆ; ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟೆ; ಇಂದು ಮನದಲ್ಲಿ ನಿರ್ಲಿಪ್ತತೆ ಮನೆ ಮಾಡಿದೆ; ನಿನ್ನ ಮರೆಯುವ ಅವಶ್ಯಕತೆ ಎನಗಿಲ್ಲ; ನಿನ್ನ ಮರೆತ ನಾನು, ಇಂದು ಮೊದಲಿಗಿಂತಲೂ ಶಕ್ತನಾಗಿದ್ದೇನೆ;

ನಾವು ಚಿಕ್ಕವರು ನಿನ್ನ ಮುಂದೆ...


ಇಲ್ಲೊಬ್ಬನು ನಿಂತಿಹನು ಶತಶತಮಾನಗಳಿಂದ
ವೈರಾಗ್ಯದ ಮುಕುಟದಂತೆ;
ತಾಳ್ಮೆಯೇ ತಾನಾದಂತೆ:
ಎಲ್ಲವನ್ನೂ ಮೀರಿದಾತನವನು:
ಪ್ರೀತಿಯ ದಾಟಿದಾತನವನು:
ದ್ವೇಷವ ನುಂಗಿದಾತನವನು:
ರಾಜ್ಯ-ಕೋಶಗಳನ್ನೆಲ್ಲಾ ತೊರೆದಾತನವನು:
ವೈರಾಗ್ಯದ ಹಾದಿಹಿಡಿದು
ಸ್ವಾರ್ಥವನ್ನೆಲ್ಲಾ ತುಳಿದು
ದಿಕ್ಕುಗಳನ್ನೇ ಅಂಬರವಾಗಿಸಿ ಬೆತ್ತಲೆ ನಿಂತನವನು:

ನಾವು ನಾಚಿಕೆ ಪಡಬೇಕು
ಸ್ವಾರ್ಥವನ್ನೇ ವಸ್ತ್ರ-ಅಸ್ತ್ರವನ್ನಾಗಿಸಿಕೊಂಡವರು:
ಅವಮಾನಗಳನ್ನೂ ಲೆಕ್ಕಿಸದೇ
ನಮಗೆ-ನಮ್ಮವರಿಗೆ ದ್ರೋಹಬಗೆದುಕೊಳ್ಳುವವರು;
ನಮ್ಮೊಡನೆ ನೀನು ಎತ್ತರಕೆ ನಿಂತಿರುವೆ
ನಾವು ಕಣ್ಣಿದ್ದೂ ಕುರುಡರಾಗಿದ್ದೇವೆ;
ನಿನ್ನನ್ನು ಹೊಗಳಿಂದ ಪೂಜಿಸುವುದಷ್ಟಕ್ಕೇ ಸೀಮಿತಗೊಳಿಸಿದ್ದೇವೆ;
ನಿನ್ನ ಆದರ್ಶಗಳನ್ನು ಗಾಳಿಗೆ ತೂರಿದ್ದೇವೆ;
ನಿನ್ನ ಮುಂದೆ ನಾವು ಚಿಕ್ಕವರಾಗಿದ್ದೇವೆ ಪಾಠ ಕಲಿಯದೆ.

ಇಂದು ಪ್ರೀತಿಯ ದಿನವಂತೆ

ಇಂದು ಪ್ರೀತಿಯ ದಿನವಂತೆ
ನಿನಗಾಗಿ ಕಾಯುತ್ತಿದ್ದೆ;
ಎಂದಿನಂತೆ ಇಂದೂ ನಿನ್ನ ಬರುವಿಲ್ಲ
ವಿರಹಿ ನಾನು ನೀ ಬಲ್ಲೆ;

ನಿನ್ನ ನೆನಪು ಕಾಲ ಕಳೆಯಲು ಸಾಕು
ನಿನ್ನ ಪ್ರೀತಿ ಸದಾ ನನಗೆ ಬೇಕು;
ವಿರಹಿಯಾಗಿ ಕಾಲಕಳೆಯುತಿಹೆನು
ವಿರಹದಲ್ಲೇ ಏನೋ ಸುಖವೆನಿಸಿದೆ ನಿಜವೇ?;

ನೀ ಬರಲಿ ಎಂದು ಮನ ಬಯಸದು
ನೀ ಎಲ್ಲೇ ಇರು ಸುಖವಾಗಿರೆಂದು ಮನ ಬಯಸಿದೆ;
ಇಂದು ಪ್ರೀತಿಯ ದಿನವಂತೆ ಕೆಲವರಿಗೆ
ನನಗಾದರೂ ಪ್ರತಿದಿನವೂ ಪ್ರೀತಿಯ ದಿನವೇ ಸರಿ!

ಸಂಕೇತ


ನೂರಾರು ಸಂಕೇತಗಳು,ಸಂಜ್ಞೆಗಳು
ಅರ್ಥವಾಗದ ಭಾಷೆಗಳು
ಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;
ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆ
ಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;
ನಮ್ಮ ಅರಿವೇ ಶ್ರೇಷ್ಠ;
ನಾವೇ ಶ್ರೇಷ್ಠ;
ಅಹಂಮಿನ ಸಾರೋಟದಲ್ಲಿ
ತಪ್ಪು ಭಾವನೆಗಳು ಮೇಳೈಸಿವೆ ದಿಗಂತದೆತ್ತರಕ್ಕೆ
ಹೊಸ ಹೊಸ ವಿಮರ್ಶೆಗಳ ದಾರಿ ತೆರೆದುಕೊಂಡಿದೆ;
ಸ್ಥಿತಿ-ಪರಿಸ್ಥಿತಿಗಳು ಬದಲಾಗುತ್ತಿದೆ ಗೋಚರಿಸದೇ...
ಮನಸ್ಸುಗಳೂ ಕೂಡ ಅರ್ಥವಾಗದ ಹಾಗೆ
ನಮಗೆ ಗೊತ್ತು ಬರೀ ಬಾಹ್ಯ ಬೇಕು-ಬೇಡಗಳು ಮಾತ್ರ
ಅಂತರಂಗದ ಬೇಕು-ಬೇಡಗಳು ಯಾರಿಗೆ ಗೊತ್ತು?
ಅದು ಯಾರಿಗೂ ಬೇಡ!;
ಪ್ರೀತಿ ಬೆತ್ತಲಾಗಿದೆ ಕತ್ತಲಲ್ಲಿ;
ದ್ವೇಷ ಮೇಳೈಸಿದೆ ಬೆಳಕು-ಕತ್ತಲೆನ್ನದೆ;
ಮನಸ್ಸು ಸಂಕುಚಿತಗೊಂಡಿದೆ ವ್ಯಾಮೋಹಗಳಿಂದ;
ನಿರ್ಲಿಪ್ತತೆ ಅರ್ಥಕಳೆದುಕೊಂಡಿದೆ;
ಪ್ರಕೃತಿ ತನ್ನ ಪಾಡಿಗೆ ತಾನು ಸಂಕೇತಗಳನ್ನು ಕೊಡುತ್ತಲೇ ಇದೆ;
ನಾವು ಮಾತ್ರ ಅರ್ಥಮಾಡಿಕೊಂದಿದ್ದೇವೆ ಬೇರೆಯದೇ ರೀತಿಯಲ್ಲಿ;
ಪ್ರಕೃತಿ ಸೊರಗುತ್ತಿದೆ ಸಂಕೇತ,ಸಂಜ್ಞೆಗಳನ್ನು ತೋರಿಸುತ್ತಾ.......

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...