ಬೆಂಕಿ

ನಾನೇ ಬೆಂಕಿಯಾಗಿದ್ದೆ
ನನ್ನ ಮನೆಯಲ್ಲಿ ಕತ್ತಲು,ನಿರಾಸೆ ತುಂಬಿತ್ತು
ನೆಮ್ಮದಿ ಹಾಗು ನಿರ್ಮಲವಾಗಿ ನಿದ್ದೆ ಹತ್ತಿತ್ತು||

ಶಬ್ದ,ನೀರವತೆಗೆ ಭಂಗ ತಂದಿತ್ತು
ಶಬ್ದ,ಹಾವಳಿ ಜಾಸ್ತಿಯಾಯಿತು
ಆದರೂ ನನ್ನ ಜೀವ ಉಳಿಯಿತು||

ಎಚ್ಚರಿಕೆಯಾಯಿತು
ಮನದಲ್ಲಿ ಗಾಬರಿ,ದ್ವಂದ್ವ,ನೋವು
ತಿಳಿಯಿತು ಏನಾಗಿದೆಯೆಂದು||

ಮನೆ ಹೊತ್ತಿ ಉರಿಯುತ್ತಿತ್ತು
ನನ್ನ ಅರಮನೆ,ಕೋಟೆ ಉರುಳುತ್ತಿತ್ತು ಕಣ್ಣಮುಂದೆ
ನನಗಾಗ ನಾಲ್ಕು ವರ್ಷ ವಯಸ್ಸು||

ಎಂದೂ ಮರೆಯಲಾರೆ
ತಾಯಿಯ ಮುಖದಲ್ಲಿನ ನೋವಿನ ಭಾವ
ಕಾಣುತ್ತಿತ್ತು ಶುದ್ಧ ಭಯ||

ಅವಳ ಉಟ್ಟ ಬಟ್ಟೆಗಳು
ಮಲಗೆದ್ದು ಕೆದರಿದ ತಲೆಗೂದಲು
ಬೇಗನೆ ಎಚ್ಚರಿಸಿದಳು ನನ್ನನ್ನು||

ನನ್ನ ವಿರಾಮದ ಜೊತೆಗೆ
ನನ್ನ ತಂಗಿ,ಅಣ್ಣ, ಹಾಗು ಅಪ್ಪ
ಅಮ್ಮನ ಪ್ರೀತಿ ಬೆಂಕಿಯ ಕೆನ್ನಾಲಿಗೆಯಿಂದ ರಕ್ಷಿಸಿತು||

ನನ್ನ ಸಾಕು ಪ್ರಾಣಿಗಳ ಬಿಟ್ಟೆವು
ಅಸಹಾಯಕತೆ ಗಹಗಹಿಸಿತು
ನಮ್ಮನೆಲ್ಲಾ ತೊರೆದವು,ನೋವಿನಿಂದಲೇ||

ಎಲ್ಲವನ್ನೂ ಕಳೆದುಕೊಂಡೆವು
ಚಳಿಯ ಬಯಲಲ್ಲಿ ಬೆತ್ತಲಾದೆವು
ನಡುಗುತ್ತಾ ನಿಂತೆವು ಅಸಹಾಯರಾಗಿ||

ಪಕ್ಕದ ಮನೆಯವರನ್ನು ಕಂಡೆವು
ನಿರ್ಮಲತೆ,ಶಾಂತತೆ ವಿಶ್ರಮಿಸುತ್ತಿತ್ತು
ನಮ್ಮ ಮನದ ಬೇಗುದಿ ನರಳುತ್ತಿತ್ತು||

ಎಲ್ಲವೂ ನಮ್ಮನ್ನು ತೊರೆದವು
ನಮ್ಮ ನೆಲೆದಿಂದಲೇ ದೂರ ತಳಲ್ಪಟ್ಟೆವು
ಪ್ರೀತಿ ನರಳಿತು, ಬಾಳು ಕಾಯುತ್ತಿತ್ತು ಇನ್ನೂ ಹಲವು ವರುಷ|| 

 ಪ್ರೇರಣೆ: "The Fire" In Haiku by Mancinelli 

ತೆವಳುವ ಹಾದಿ

ಬೆಳಕು ಮೂಡುವುದು ಪ್ರತಿದಿನ
ಕತ್ತಲೆ ತೆರೆ ಎಳೆವುದು ಕನಸಿನಂತೆ
ನಿದಿರೆಯ ಕದಡುವುದು ಕನಸು
ಹೊರಟ ದಾರಿಯಲ್ಲಿ ಮುಂದೆ ಹೋಗಲಾರೆನು
ಬೆನ್ನ ತಿರುಗಿಸಿ ಓಡಿ ಹೋಗಲಾರೆನು
ಇದ್ದಲ್ಲೇ ಇದ್ದು ನರಳುವುದು ಹಿತವೆನಿಸಿದೆ
ಕತ್ತಲು-ಬೆಳಕು ಚಿತ್ರದಂತೆ ಬದಲಾಗುತ್ತಿದೆ
ಹೊಸ ಹುರುಪು ಬರಲಿ ಮುಂದೆ ತೆವಳುವ ಹಾದಿಗೆ
ಚೈತನ್ಯ ಮೂಡಲಿ ಮನದಲ್ಲಿ ಗತಿಸುವ ಬಾಳಿಗೆ||

ಪ್ರೇಮರಾಗ

ನಿನ್ನ ಪ್ರೀತಿಯ ಬಂಧನ
ಕಟ್ಟಿ ಹಾಕಿದೆ ನನ್ನ ಹೃದಯ
ವಿರಹದ ಮನಕೆ ನೀ ಬಾರೆಯ||

ಹಿಡಿದಿದೆ ನಿನ್ನ ನೆನಪ
ಶೃತಿ ಹಿಡಿದ ವಿರಹ
ನೋವಾಗದ ಹಾಗೆ ಈ ಹೃದಯ||

ಕೊರಳಲ್ಲಿ ಬಂಗಾರದ,
ಕರಿಮಣಿಯ ಮಂಗಲ ಸೂತ್ರ ಕಟ್ಟಿ
ಈ ಬಾಳಿಗೆ ನೀ ನಾದೆ ಸೂತ್ರದಾರ||

ಬೆಸೆಯುತಿದೆ ನಿನ್ನ ಪ್ರೀತಿ
ಹೃದಯದ ಕಣಕಣದಲಿ
ಮಿಡಿಯುತಿದೆ ಪ್ರೇಮಗಾನ||

ಬೆಸುಗೆ ಹಾಕಿ ಕೊಂಡಿದೆ
ಕೊರಳ ಸರ ಕಳಚಿದರೂ
ಬಿಟ್ಟೂ ಬಿಡದ ಪ್ರೇಮರಾಗ||

ಭರವಸೆ

ಭರವಸೆಯೆಂಬ ಹಕ್ಕಿ
ಎಲ್ಲರ ಮನದಲ್ಲೂ ಹಾರಾಡುವ ಹಕ್ಕಿ
ಆತ್ಮದ ಟೊಂಗೆಯ ಮೇಲೆ ಕುಳಿತಿಹ ಹಕ್ಕಿ
ಜೀವಂತಿಕೆಯ ಹಾಡ ಹಾಡುವ ಹಕ್ಕಿ||

ಕನಸು ಮುರಿದಾಗ ಹಾಡುವ ಹಕ್ಕಿ
ಕಣ್ಣಲ್ಲಿ ಕಂಬನಿ ಹರಿವಾಗ ಹಾಡುವ ಹಕ್ಕಿ
ಆತ್ಮಸ್ಥೈರ್ಯದ ರೆಕ್ಕೆ ಮುರಿದಾಗ ಹಾಡುವ ಹಕ್ಕಿ
ಭರವಸೆಯ ನೈತಿಕ ಶಕ್ತಿಯ ತುಂಬುವ ಹಕ್ಕಿ||

ಆತ್ಮದ ಕರೆಯ ಕೂಗುವ ಶಕ್ತಿ
ಮನದ ನೋವ ನೀಗುವ ಶಕ್ತಿ
ಹೊಸ ಭರವಸೆಯ ಬೆಳಕ ನೀಡುವ ಹಕ್ಕಿ
ಬಾಳ ಬಂಡಿಯ ಬದುಕು ಹಸನಾಗಿಸುವ ಹಕ್ಕಿ||

ಜೀವನ ಪ್ರೀತಿಸು ಎಂದು ಬೋಧಿಸುವ ಹಕ್ಕಿ
ಪ್ರಕೃತಿ ಮಾತೆಯ ಸ್ತುತಿಸುವ ಹಕ್ಕಿ
ಧ್ವೇಷ ಅಳಿಸಿ, ಪ್ರೀತಿ-ಶಾಂತಿಯ ಹಂಚುವ ಹಕ್ಕಿ
ಜೀವನ-ಮರಣಗಳಿಂದ ಮುಕ್ತಿ ಕೊಡುವ ಹಕ್ಕಿ||

ಪ್ರಾರ್ಥನೆ

ಎಲ್ಲವ ಕೊಡುವ ನಮಗೆ ದೇವ
ಏನಾದರೂ ಕೊಡುವ ತಿಳುವಳಿಕೆ ನಮಗೆ ನೀಡು ದೇವ||

ಬೆಳಕು ಕೊಡುವನು ಸೂರ್ಯ,
ತ್ರಾಣವ ನೀಡುವುದು ಗಾಳಿ,
ಹಸಿವ ಅಡಗಿಸುವ ಶಕ್ತಿಯ ನೀಡುವುದು ಭೂಮಿ,
ದಾಹವ ಕಳೆವುದು ನೀರು,
ವಾತ್ಸಲ್ಯವೆರೆಯುವ ಮಾತೆಯ ತೆರದಿ
ಏನಾದರೂ ಕೊಡುವ ತಿಳುವಳಿಕೆ ನಮಗೆ ನೀಡು ದೇವ||

ಬಿಸಿಲ ಬೇಗೆಗೆ ನೆರಳ ನೀಡಿ ತಣಿಸುವುದು ಮರಗಳು,
ಚೈತನ್ಯದ ಸುಗಂಧ ಸೂಸಿ ಹೂವಿನ ಉಡುಗೊರೆ ನೀಡುವುದು ಗಿಡಗಳು,
ಅಮೃತ ಸಮಾನವಾದ ಹಾಲಿತ್ತು ಸಲಹುವುದು ಆಕಳು,
ತ್ಯಾಗವೇ ಉಸಿರಾಗಿರುವ ತರು-ಲತೆಗಳ ತೆರದಿ
ಪರರ ಹಿತವ ಕಾಯುವ ತಿಳುವಳಿಕೆ ನಮಗೆ ನೀಡು ದೇವ||

ವಿದ್ಯೆ ಇಲ್ಲದವರಿಗೆ ಅಕ್ಷರವ ಧಾರೆ ಎರೆಯೋಣ,
ಮಾತಿಲ್ಲದವರಿಗೆ ವಾಣಿಯ ದನಿಯ ನೀಡೋಣ,
ಅನಾಥರಿಗೆ ಆಶ್ರಯ ನೀಡಿ ಸಲಹೋಣ,
ಏಳಿಗೆ  ಕಾಣದೆ ಬಿದ್ದವರ ನೋಡಿ ನಗದೆ ಕೈಹಿಡಿದು ಮೇಲೆತ್ತೋಣ,
ಧ್ವೇಷ ಕಾರುವವರ ಹೃದಯವ ಮಥಿಸಿ ಸಾಮರಸ್ಯದ ಭಾವ ಬಿತ್ತೋಣ,
ಕಾಯಕ ಜ್ಯೋತಿಯ ಬೆಳಗಿ ಹೊಸ ಆಲೋಚನೆಯ ವಿಧಾನ ಕಲಿಯುವ ತೆರದಿ
ವಿಶ್ವ ಶಾಂತಿಯ ಕಾಯುವ ತಿಳುವಳಿಕೆ ನಮಗೆ ನೀಡು ದೇವ||

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...