ಬಿಡುಗಡೆ

ಇದು ಕನಸೋ?
ಇಲ್ಲ ವಾಸ್ತವವೋ?
ಒಂದೂ ತಿಳಿಯದಾಗಿದೆ
ಎಚ್ಚರವಾಯಿತು
ಯಾವಾಗ ನಿದ್ದೆಗೆ ಜಾರಿದೆನೋ?

ಬಹು ಮಂದಿ ಉಪನ್ಯಾಸಕರ ಮಾತಿನ ಮೋಡಿಗೆ ಬಿದ್ದೆ
ಮನದ ಆಲೋಚನೆಗಳೆಲ್ಲಾ ತಲಕೆಳಗಾದವು
ಆದರೂ ಉಸಿರಾಡುತ್ತಿದ್ದೇನೆ ಸಾಯದೆ
ಅರಗಿಸಿಕೊಳ್ಳಲಾಗದ ಮಾತುಗಳ ಮೆಲುಕುಹಾಕುತ್ತಾ....

ಅವರೆಲ್ಲರೂ ಹೊಡೆದ ಗುಂಡು
ಹೃದಯ ತಟ್ಟಿತೋ?
ಬುದ್ದಿಯ ತಟ್ಟಿತೋ?
ಮತ್ತೆ ಯಾರಾದರೂ ಮತ್ತೊಂದು ಗುಂಡು ಹೊಡೆಯಬಹುದೆಂದು

ಗುರಿ ಯಾವುದೋ? ಹೊಡೆದವನ ಕೈಚಳಕದ ಲೀಲೆ
ಹೃದಯ ಹರಡಿಹೆ
ಮೈಯ್ಯೊಡ್ಡಿ ನಿಂತಿಹೆ
ಯಾರ ವಶವಾಗುವೆನೋ ಮೋಹವಿಲ್ಲದ ವಿರಾಗಿ

ಯಾವ ಬೇಟೆಗಾರನ ಬಲೆಗೆ ಬೀಳುವೆನೋ ನಾನರಿಯೆ
ನಾನೊಲ್ಲೆನೆಂದರೂ ಬಿಡುವವರಾರು?
ಬಲೆ ಬೀಸಿ ಕಾದಿಹರು ನೂರು ಮಂದಿ
ಯಾರ ವಶವೋ? ಚಿತ್ತ ಭ್ರಮೆ ಕಣ್ಣುಮುಚ್ಚಿಹೆನು ಮೂಕನಾಗಿ

ಕೊನೆಯ ಗಳಿಗೆಗೆ ಉಸಿರು ಕಟ್ಟಿಹೆ
ನನ್ನ ಯಾರಾದರೂ ಹಿಡಿದೊಯ್ಯಲಿ
ನನ್ನ ಆತ್ಮ ಸ್ವತಂತ್ರವಾಗುವುದು
ಬಿಡುಗಡೆಯ ಸುಖ ನನ್ನದಾಗುವುದು

ಕಾಲ ಬರಲಿ
ಬೇಗ ಬರಲಿ
ಆತ್ಮ ಬಿಡುಗಡೆಯಾಗಲಿ....

ನೆನಪಿರಲಿ

ಜೀವನ ಪಥ ಸವೆಸುತ್ತಾ ಜಾರುತಿರಲು
ಏನೆಲ್ಲಾ ಮಾಡಿದೆನೆಂದು ಹಿಂತಿರುಗಿ ನೋಡಿದೆ
ಗುರಿ ಇಲ್ಲದೆ ಅಂಡಲೆದೆ
ಬೆರಗಾದೆ ಏನಾದೆ ಎಂದು||

ಎಲ್ಲವನ್ನೂ ಬಳಸಿದೆ ಮಿತಿ ಇಲ್ಲದೆ
ವಿಸ್ಮಯಗೊಂಡೆ ಗುರಿ ಸಾಧಿಸಿದೆನೆಂದು
ಪಾಠ ಕಲಿತೆ ಜೀವನದಿಂದ
ದಿಗಿಲುಗೊಂಡೆ ಒತ್ತಡದಿಂದ||

ಕಾಲಕ್ಕೆ ಶರಣಾದೆ
ಜೀವನ ಎಲ್ಲವನ್ನೂ ಕಲಿಸಿತು
ಜೀವನದಲ್ಲಿ ಪ್ರಯತ್ನದ ಅನುಭವ
ಎಲ್ಲವನ್ನೂ ಗಳಿಸಬಹುದೆಂಬ ಸತ್ಯವ ಹೇಳಿತು||

ಪ್ರತಿ ದಿನದ ಪ್ರಯತ್ನ ನಮ್ಮನೆಳೆವುದು
ನೆನಪಿಸಿಕೋ ನಾವು ಏನು ಕಲಿತೆವೆಂದು
ನೆನಪಿರಲಿ ಪ್ರಾರ್ಥನೆಗೆ ಸಮಯ ಮೀಸಲಿಡು
ಪ್ರತಿದಿನ ಅದರ ಅವಶ್ಯಕತೆ ಇದೆ ತಿಳಿ||

ಜೀವನ ಚಿಕ್ಕದಾಗಿರಬಹುದು
ಅನಿರೀಕ್ಷಿತ ಈ ಜೀವನ
ಹೊಡೆತಗಳನ್ನು ಅನುಭವಿಸುತ್ತೇವೆ
ಘಾಸಿಗೊಳಿಸುವುದಿಲ್ಲವೆಂಬ ಆಶಾವಾದದಿಂದ||

ನೀ ಯಾರೆಂದು ನೆನಪಿಸಿಕೋ
ನೀ ಏನಾಗಬೇಕೆಂದು ಬಯಸಿಹೆಯೋ
ಎಲ್ಲವೂ ಕೈಗೂಡುವುದು ತಿಳಿ
ಕಾಲ ಪರಿಪಕ್ವವಾದೊಡೆ||

ಮರೆಯಬೇಡ ನಾ ನಿನ್ನ ಪ್ರೀತಿಸುವೆ
ಜೀವನದ ಪ್ರತಿ ಅವಕಾಶ ಸಿಕ್ಕಾಗಲೂ
ಸಮಯ ಚಿಕ್ಕದಿರಬಹುದು
ಪಶ್ಚಾತ್ತಾಪ ಪಡಲು ಸಮಯವಿರಲ್ಲ ತಿಳಿ||

ಈ ಜೀವನ ಚೈತನ್ಯವಾದುದು
ನಾವು ಕಂಡುಕೊಂಡಂತೆ ಅದು
ವಿಧ್ಯಮಾನ, ಬಿಡುವಿಲ್ಲದ
ಸಮಯದ ಪಾತ್ರೆ ಖಾಲಿ ಖಾಲಿ||

ನೀ ಯಾರೆಂದು ನೆನಪಿಸಿಕೋ
ನೀ ಏನಾಗಬೇಕೆಂದು ಬಯಸಿಹೆಯೋ
ಸಮಯ ಅಲ್ಪಾಯು ಆಗಬಹುದು
ಯಾವ ಕೆಲಸವನ್ನೂ ಮಾಡದೇ ಇರಬೇಡ ತಿಳಿ||

ನೆನಪಿಸಿಕೋ ನಿನ್ನ ಕುಟುಂಬದವರನ್ನು
ಅವರೇ ನಿನಗಾಗುವವರು ಕೊನೆಯವರೆಗೂ
ನಿನಗೆ ಅಗತ್ಯವಿರುವಾಗ ಆಗುವವರು ಅವರೇ
ಅವರನ್ನೆಂದೂ ಕೊಂಡುಕೊಳ್ಳವಾಗದು ತಿಳಿ||

ನೆನಪಿಸಿಕೋ ಅವರು ನಿನ್ನ ಪ್ರೀತಿಸುವರು
ಇಲ್ಲಿಯಾದರೂ ಅಥವಾ ಅಲ್ಲಿಯಾದರೂ
ಯಾವಾಗಲೂ ಅವರು ನಿನ್ನೊಂದಿಗಿರುವರು
ಸಹಾಯ ಮಾಡುವರು ಕಷ್ಟಗಳನೆದುರಿಸಲು ||

ಪ್ರೇರಣೆ: "Remember" by Dawn Jenson 

ಹೇಳಲಾಗದ ಮಾತುಗಳು

ಮಾತು ಬಾರದಾಗಿದೆ
ಕಣ್ಣೀರೇ ಮಾತಾಗಿದೆ
ಅರ್ಥವಾಗದ ಭಾವ ಲಹರಿ
ಮನದ ಶಾಂತ ಕಡಲ ಕದಡಿದೆ||

ಎದುರಲ್ಲೇ ಓಡಾಡುವಾಗ
ಹೇಳಲಾಗದ ಮಾತುಗಳು
ಮನದೊಳಗಿನ ಪ್ರೀತಿ
ಹೊರಬರಲಾರದೆ ನರಳಿತು||

ಎನಿತು ಪ್ರೇಮವೋ?
ಎನಿತು ವಾತ್ಸಲ್ಯವೋ?
ಕಾತರದ ಕಿವಿಗಳಿಗೆ
ರಸದೌತಣದ ಗಳಿಗೆ ಮರೀಚಿಕೆಯಾಯ್ತು||

ಕಾತರದ ಕಿವಿಗಳು
ಕಾಣದ ಕೈವಶವಾಗಿರೆ
ಮನದ ಮಾತುಗಳ ಉಲಿದರೆ
ಸಂತೋಷಪಡುವವರಾರು?||

ಏಳು!,ಎದ್ದೇಳು!
ಹೇಳುವೆನು ಮನದ ಮಾತೆಲ್ಲಾ
ಕೇಳಿಸಿಕೊಳ್ಳದೆ ಮಲಗಿರುವೆಯೇಕೆ?
ಹರಿವ ನದಿಗೆ ಅಡ್ಡಗೋಡೆಯಾಗಿಹೆಯೇಕೆ?||

ಧೋ,,, ಎನ್ನುವ
ಮಳೆಯ ಸದ್ದಿಗೆ
ಮನದ ಕೊರಗು
ಯಾರಿಗೂ ಕೇಳಿಸದೆ ಮರೆಯಾಯ್ತು||

ಮುದುಡಿದೆ ಮನ
ಮಾತು ಬಾರದಾಗಿದೆ
ಕಣ್ಣೀರೇ ಮಾತಾಗಿದೆ
ಕಟ್ಟೆಯೊಡೆದ ತೊರೆಯಾಗಿದೆ||

ಬೇಡದ ವಿರಸ

ಸರಿ ಬಾರದ ಮಾತುಗಳು
ತಂದವು ಗೊತ್ತಾಗದ ಕಲಹ
ಮನ-ಮನಗಳ ನಡುವೆ
ಹುಟ್ಟುಹಾಕಿತು ಬೇಡದ ವಿರಸ||

ಮನವ ನೋಯಿಸುವುದು ಬೇಕಿರಲಿಲ್ಲ
ವಿಷಯ ಹೇಳುವಾಗ ನಾಲಗೆ ಜಾರಿತು
ಆಮೇಲೆ ಎಲ್ಲವೂ ಇತಿಹಾಸ
ಬೇಡದ,ಬಯಸದ ಗುರುತುಗಳ ಹಾವಳಿ ||

ಮತ್ತೊಮ್ಮೆ ಇತಿಹಾಸ ಬರೆಯುವ
ಬಯಸುವೆ ಮಾತನಾಡಲು
ಪ್ರೀತಿಯ ಮಾತನಾಡಲು
ಜಾರುವ ನಾಲಗೆಯ ಪದಗಳ ಜಾಲಾಡುವ||

ಪ್ರೀತಿಯ ಮಳೆ

ಆ ಮೊದಲ ಗಳಿಗೆಗಳಲ್ಲಿ
ಗೊಂದಲ ತುಂಬಿದ ಮನದಲ್ಲಿ
ಬಯಕೆ ಹೊತ್ತ ಹೃದಯದಲ್ಲಿ
ಮೊದಲ ಪ್ರೀತಿಯ ಹನಿ ಜಾರುವ ಹೊತ್ತಲ್ಲಿ||

ಎದೆಯ ಬಡಿತ ಏರುತಿರೆ
ಆವೇಗದ ವೇಗ ಕೈಗೆ ಸಿಗದೆ
ಹುಚ್ಚು ಮನಸ್ಸಿನ ಬಯಕೆಯ
ತೊರೆ  ರಾಕೆಟ್ಟಿನಂತೆ ಹಾರಿದೆ||

ನರನರಗಳಲ್ಲಿ ರಕುತ ಧುಮ್ಮಿಕ್ಕುತ್ತಿದೆ
ನಿನ್ನ ಮನದಲ್ಲಿ ನೆನೆದು ನೆನೆದು
ಸಾವರಿಸಿ ಕೊಂಡು ಏಳಲಾಗದೆ
ನರಳುತಿಹೆನು ಹಿತವಾಗಿ ನಿನ್ನ ನೆನೆದು||

ಮತ್ತೆ ಬಾ ಮನದ ಅಂಗಳಕ್ಕೆ
ಬೇಡಿಕೊಳ್ಳುವೆ ನರಳಿಸು ಹಿತವಾಗಿ
ಪ್ರೀತಿಯ ಮಳೆಯಲ್ಲಿ ನೆನೆಸು,ವಿರಹದಿ ಬೇಯಿಸು
ಪ್ರೀತಿಯ ಒಲೆಯ ಮೇಲೆ ಮಿತವಾಗಿ||

ಅಮಿತ,ಅನಂತ,ಅನನ್ಯ

ಬೆಲೆಗಳೇರುತ್ತಿವೆ ನಾಗಾಲೋಟದ
ಸ್ಪರ್ಧೆಯ ಈ ಜಗದಲ್ಲಿ
ನಾವಂತೂ ಬೆಲೆಯ ಹಗ್ಗವ ಜಗ್ಗಿ ಹಿಡಿದಿದ್ದೇವೆ
ಈ ಸಂಸಾರದ ಜಂಜಾಟದಲ್ಲಿ||

ಕುತ್ತಿಗೆಗೆ ಸುತ್ತಿಕೊಂಡಿದೆ  ಹಗ್ಗ,
ಕೈಬಿಟ್ಟರೆ ಸಾವು ಖಂಡಿತ
ಬಿಡಲಾರೆವು,
ಹಾಗೆ ಹಿಡಿಯಲಾರೆವು
ಎಂಥ ಪರಿಸ್ಥಿತಿ ನಮ್ಮದು!

ಬದಲಾಗಬೇಕು ನಾವು
ಪರಿಸ್ಥಿತಿಗೆ ಹೊಂದಿಕೊಳ್ಳಬೇಕು
ಕಾಲನ ನಡೆಯ ಮುಂದೆ
ನಮಗೆ ಗೆಲುವಾಗಬೇಕು||

ಕಾರು,ಮನೆ,ಫ್ಲಾಟ್
ಪೆಟ್ರೋಲ್,ಡೀಸಲ್,ಗ್ಯಾಸ್
ಎಲ್ಲಕೂ ಬೆಲೆಯಿದೆ
ಎಲ್ಲವೂ ಏರುತ್ತಿದೆ||

ಪ್ರೀತಿ,ವಿಶ್ವಾಸ,ವಾತ್ಸಲ್ಯ
ಸಂಬಂಧ, ಗೆಳೆತನ
ಎಲ್ಲಕ್ಕೂ ಬೆಲೆಯಿದೆ
ಬೆಲೆ ಕಟ್ಟಲಾಗದ ಸಂಪತ್ತು
ಅಮಿತ,ಅನಂತ,ಅನನ್ಯ||

ಹೊಸತನದ ಪುಳಕ

ಕನಸ ಕಂಡಿರಲೇ ಇಲ್ಲ
ಆದರೂ ನಿಜವಾಯಿತೊಂದು ಭ್ರಮೆ
ಈಗ ಅದು ಭ್ರಮೆಯಲ್ಲ
ಸತ್ಯದ ನೆಲೆಯಲ್ಲಿ ಹೊಳೆಯುತ್ತಿರುವ ವಾಸ್ತವ||

ನಮ್ಮ ಶೂನಲ್ಲೇ ಕಾಲಿಟ್ಟು
ಆಗಿದ್ದೆವು ಕೂಪ ಮಂಡೂಕ
ಬಂತೊಂದು ಆಶಾಕಿರಣ
ಬಿಡುಗಡೆಯ ಹೊಸತನದ ಪುಳಕ||

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...