ಗುಣ ನಿಷ್ಕರ್ಷೆ (Appraisal)?

ಜೋರಾಗಿ ಕಿರುಚುತ್ತಿದ್ದೆ
"ನಾನು ಬದುಕಿದ್ದೇನೆ,
ನಾನು ಬದುಕಬೇಕು"
ಅವರಾರಿಗೂ ಕೇಳಿಸಲೇ ಇಲ್ಲ;
ಕಿವಿಯಿದ್ದೂ ಅವರು ಕಿವುಡರಾಗಿದ್ದರು.
ಒಬ್ಬರಲ್ಲ, ಹಲವು ಜನ;
ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಇದ್ದರು;
ಮನಸ್ಸಿಗೂ ಮಸಿ ಅಂಟಿಸಿಕೊಂಡಿದ್ದಾರೆ ಎಂದೆನಿಸಿರಲಿಲ್ಲ;
ಆಕಸ್ಮಿಕವಾಗಿ ಶವಪೆಟ್ಟಿಗೆಯಲ್ಲಿ ಬಿದ್ದೆನೋ?
ಅಥವಾ ಬೀಳಿಸಿದರೋ ತಿಳಿಯಲಿಲ್ಲ;
ಆದರೂ ಬಿದ್ದಿದ್ದೆ ಅದರೊಳಗೆ ಅರಿವಿಲ್ಲದೆ;
ಸುತ್ತಲೂ ಇರುವವರ ಮನಸ್ಸು
ಕಲ್ಲಾಗಿದೆ ಎಂದು ತಿಳಿದಿರಲಿಲ್ಲ;
ದ್ವೇಷವೇ ಉಸಿರಾಗಿದೆ ಎಂದು ತಿಳಿಯಲಿಲ್ಲ;
ಮುಖದಲ್ಲಿ ಆವೇಶ, ಆಕ್ರೋಶ ಮಡುಗಟ್ಟಿತ್ತು;
ಮಾತಲ್ಲಿ ಒರಟುತನ ನರ್ತಿಸುತ್ತಿತ್ತು;
ಎಲ್ಲರ ಕೈಯಲ್ಲೂ ಸುತ್ತಿಗೆ ಹಾಗು ಮೊಳೆ
ಶವ ಪೆಟ್ಟಿಗೆಯಲ್ಲಿ ಬಿದ್ದವರನ್ನು
ಮೇಲೆತ್ತುವುದು ಅವರ ಕಾಯಕವಲ್ಲ;
ಅವರದೇನಿದ್ದರೂ ಮುಗಿಸುವುದಷ್ಟೆ!
ಪರೀಕ್ಷಿಸುವುದಕ್ಕೂ ಅವರ ಬಳಿ ಸಮಯವಿಲ್ಲ;
ಬಿದ್ದದ್ದೇ ತಡ ಮೊಳೆ ಹೊಡೆಯುವುದಕ್ಕೆ ಆರಂಭಿಸಿದರು;
ಹೃದಯಕ್ಕೆ ಮೊಳೆ ಬಡಿದರು;
ಮನಸ್ಸಿಗೆ ಮೊಳೆ ಬಡಿದರು;
ಸತ್ತವರಿಗೂ ಬಡಿದರು;
ಬದುಕಿದವರಿಗೂ ಬಡಿದರು;
ಬದುಕಿದವರು ಸಾಯುವವರೆಗೂ ಬಡಿದರು;

ಈ ಕಣ್ಣೀರಿಗೆ ವಿಷಾದ ಪಡಲಾದೀತೇ?

ನನ್ನ ಕಣ್ಣೀರಿನ ಹನಿಯಲ್ಲಿ
ನಿನ್ನ ಮೇಲಿನ ಪ್ರೀತಿ ಇಮ್ಮಡಿಯಾಗಿದೆ
ನಾನು ಈ ಕೋಣೆಯೊಳಗೆ ಕಳೆದುಹೋಗಿದ್ದೇನೆ
ನಿನ್ನನ್ನು ಪ್ರೀತಿಸುತ್ತಾ ಈ ಎಲ್ಲಾ ವರುಷಗಳು||

ನನ್ನ ಕಣ್ಣೀರು ನೋವ ತುಂಬಿಕೊಂಡಿಲ್ಲ
ಸಂತೋಷವನೆಲ್ಲಾ ವ್ಯಾಪಿಸಿಕೊಂಡಿದೆ
ನನ್ನೊಳಗಿನ ಪುಟ್ಟ ಮಗುವಿಗೆ
ನೀನು ಸಹಾಯ ಮಾಡಿದೆ ಅರಿವು ಮೂಡಲು||

ನನ್ನ ಹೃದಯದೊಳಗಿನ ಗೂಡಿನಲ್ಲಿ
ನನ್ನ ನಿಜವಾದ ಅರಿವು ಹೊರಹೊಮ್ಮಿದೆ
ನನ್ನೊಳಗಿನ ಮನದ ನೋವಿನ ಗಾಯಗಳೆಲ್ಲಾ
ಮಾಯದೇ ಇರುವುದೇ ಈ ದೇವತೆ ಜೊತೆ ಇರುವಾಗ?||

ನಮ್ಮ ನೆನಹುಗಳ ಜೊತೆಯಲ್ಲಿ ಮೈಮರೆಯುವೆ
ಬಯಕೆಯ ಗರಿಯೊಡೆದು ಮತ್ತೊಮ್ಮೆ
ನೀನೇ ಆಕರ ಈ ಸಂತೋಷದ ಕಣ್ಣೀರಿಗೆ
ಈ ಕಣ್ಣೀರಿಗೆ ವಿಷಾದ ಪಡಲಾದೀತೇ?||

ಪ್ರೇರಣೆ: 'My Tears' By Richard Lamoureux.

ಹೇಳಲಾರದ ಮಾತು

ನಾನು ಗೀಚುತ್ತೇನೆ ಮಣ್ಣಿನ ಮೇಲೆ ಅವಾಗವಾಗ
ಪದಗಳನ್ನು ಹುಡುಕಲು ಕಷ್ಟಪಡುತ್ತೇನೆ
ಆಶಿಸುತ್ತೇನೆ ಗಾಳಿ ಬರಲಿ ಇತ್ತಲೇ..
ಬೀಸಿ ಹೊತ್ತು ತರಲಿ ಎಲ್ಲವನ್ನೂ ನಿಮ್ಮ ಬಳಿಗೆ||

ಪ್ರೇರಣೆ: "unspoken words" by Paul Callus.

ಯಾವುದೀ ವಿರಹ?

ಯಾವುದೀ ತಂಗಾಳಿ
ಬೆಂಗದಿರನನ್ನೇ ನಾಚಿಸಿದೆ?
ಮನವು ತೆರೆದು ಹಾಡುವಂತೆ ಮಾಡಿದೆ||

ಯಾವುದೀ ಹೊಸರಾಗ
ಎದೆಯ ಭಾವವನೆ ಕೆಣಕಿದೆ?
ಮನದ ಭಾವ ಹೊನಲಾಗಿ ಹರಿವಂತೆ ಮಾಡಿದೆ||

ಯಾವುದೀ ನಾದ
ಮನವನೆ ಸೆರೆಹಿಡಿದಿದೆ?
ನೂರು ನೆನಹುಗಳು ಮನದಲ್ಲಿ ತೇಲುವಂತೆ ಮಾಡಿದೆ||

ಯಾವುದೀ ವಿರಹ
ಮನವನೆ ನರಳಿಸಿದೆ?
ಮನದ ಬೇಗುದಿಯ ಕಂಗೆಡಿಸಿ ನುಲಿಯುವಂತೆ ಮಾಡಿದೆ||

ಕಳೆದುಕೊಳ್ಳುವುದೇನಿದೆ?

ಇಲ್ಲವೆಂದಾದರೇನು? ಇರಲಿಬಿಡು
ಕಳೆದುಕೊಳ್ಳುವುದೇನಿದೆ?
ನರಕವೇನೂ ಸಿಗದು
ಸ್ವರ್ಗವೇನೂ ಧರೆಗಿಳಿಯದು||

ಹೌದೆಂದಾದರೇನು? ಇರಲಿಬಿಡು
ಸಂತಸಪಡುವುದೇನಿದೆ?
ದುಗುಡವೇನೂ ನರಳದು
ಸಂತಸವೇನೂ ಜೀವನವ ಸಂತೈಸದು||

ಸುಳ್ಳೆಂದಾದರೇನು? ಇರಲಿಬಿಡು
ಆಕಾಶ ಕಳಚಿ ಬೀಳದು!
ಕ್ಷಣ ಕಾಲದ ಸುಖವದು
ಜೀವನವನೇ ಕಾಡುವುದು||

ಸತ್ಯವೆಂದಾದರೇನು? ಇರಲಿಬಿಡು
ಸಿಗುವುದಾದರೂ ಏನು?
ನಿರ್ಮಲ ಮನದ ಗೆಲುವು
ಜೀವನವನೇ ಸಂತೈಸುವುದು||

ಈ ಬೆಳಕ ಹಣತೆಯ ಹಚ್ಚಿದವರಾರು?

ಈ ಬೆಳಕ ಹಣತೆಯ ಹಚ್ಚಿದವರಾರು?
ಯಾರ ಕೇಳಿ ಈ ಹಣತೆಯ ಹಚ್ಚಿದರೋ?
ಬೆಳಕ ಹಣತೆಯ ಹಚ್ಚಿದ್ದು ಏಕೋ?
ಕತ್ತಲನ್ನೇ ಇಷ್ಟಪಡುವವರಿಗೆ ಈ ಬಗೆಯ ಹಿಂಸೆ ಏಕೋ?||

ಬೆಳಕೆಂದರೆ ಬೆಚ್ಚಿ ಬೀಳುವವರು ನಾವು
ಸದಾ ಕೊರಗುತಾ, ಏಳಲಾಗದೆ ಸೊರಗುವವರು ನಾವು
ಯಾರೂ ಕೈಹಿಡಿದು ಮೇಲೆತ್ತಲಿಲ್ಲ,
ನಮ್ಮ ಮನದ ನೋವಿಗೆ ಸ್ಪಂದಿಸಲಿಲ್ಲ||

ಕತ್ತಲ ಪ್ರೀತಿಗೆ ಮನ ಸೋತವರು ನಾವು
ಕತ್ತಲೇ ನಾವಾಗಿ,ನಾವೇ ಕತ್ತಲಾದವರು ನಾವು
ನಮ್ಮ ಏಕತಾನತೆಯ ರಾಗಕ್ಕೆ ಹಚ್ಚುವವರಾರು ಕಿಚ್ಚು?
ಕತ್ತಲ ಕೂಪದಿಂದ ಮೇಲಕ್ಕೆತ್ತುವವರು ಯಾರು ಬೆಳಕ ಹಣತೆಯ ಹಚ್ಚಿ?||

ಕೇಳಿಸದೇ ಅದರ ಆರ್ತನಾದ?

ನನ್ನೊಳ ದನಿಯೊಂದು ಆರನೋ ಕೂಗುತಿದೆ
ಕೇಳಿಸದೇ ಅದರ ಆರ್ತನಾದ?
ನೋವಿನ ಚೀತ್ಕಾರ ಎದೆಯೊಳದಿಂದೆದ್ದು
ನೀಲಿ ನಭಕ್ಕೇರುತ್ತಿದೆ,ಕೇಳಿಸದೆ ಅದರ ಪೂತ್ಕಾರ?
ಕೇಳಿಸದೇ ಅದರ ಮೌನರಾಗ?
ಮನದ ನೋವೆಲ್ಲಾ ಆತ್ಮವೇ ಹೀರಿ
ದನಿಯಡಗಿಸಿ ಕೂಗುತಿದೆ ಯಾರಿಗೂ ಕೇಳದ ಹಾಗೆ;
ಕಿವಿಗಳಿದ್ದೂ ಕಿವುಡರಿಹರು,
ಯಾರಿಗೂ ಕೇಳದು ಈ ನೋವರಾಗ!
ಅವರಿಗೆ ಅವರದೇ ಚಿಂತೆ!
ನೂರಾರಿದೆ ಲೋಕದ ಕಂತೆ!
ಹೇಗೆ ಕೇಳುವುದು ನೋವುಂಡವರ ಆರ್ತನಾದ?
ಲಾಭ-ನಷ್ಟದ ಲೆಕ್ಕವೇ ನೂರಿರಲು
ನೋವಿನ ನಷ್ಟದ ಲೆಕ್ಕಚಾರ ಯಾರಿಗೂ ಬೇಡ;
ದಮನಿತರ ನೋವಿನ ಆತ್ಮನಾದ,
ನೋವುಂಡವರ ನೋವಿನ ಆರ್ತನಾದ
ಯಾರಿಗೂ ಕೇಳುವುದು ಬೇಡ;
ನೋವೆಲ್ಲವೂ ನೋವುಂಡವರಿಗೇ ಇರಲಿ,
ಲೋಕ ಸಂತಸದಿಂದರಲಿ....

ಕನಸು ನನಸಾಗುವುದೇ?

ಇಂದು, ನಾಳೆ ಕಾಯುತಿಹೆವು ನಾವು,
ನಮ್ಮಯ ದಿನ ಬರುವುದೆಂದು;
ಹಗಲು,ಇರುಳು ಕನಸೊಂದ ಕಂಡು,
ಕಂಡದ್ದು ನನಸಾಗುವುದೆಂದು;

ಬಿಸಿಲ ಬೇಗೆಯೆ ಬೇಸಿಗೆಯಲ್ಲಿ
ತಂಗಾಳಿಯ ತಂಪನ್ನು ಅರಸಿದಂತೆ;
ಮೋಡಗಳಿಂದ ತಂಪು ಮಳೆಯ ಬಯಸಿದಂತೆ
ಕಾಯುತಿಹೆವು ನಾವು ನಮ್ಮಯ ದಿನ ಬರುವುದೆಂದು;

ಬಯಸಿದೆವು ಮನಸಿನಿಂದೆ ನನಸಾಗುವುದೆಂದು
ಬಯಸಿ ಬಯಸಿ ಬೆಂಡಾಗಿಹೆವು;
ಕನಸು ನಮ್ಮದಾಗುವುದೆಂದು,ಕನಸು ನನಸಾಗುವುದೆಂದು;
ಕಾಯುತಿಹೆವು ನಾವು ನಮ್ಮಯ ದಿನ ಬರುವುದೆಂದು;

ಏಕಿಂತ ದ್ವೇಷವೋ ನಾನರಿಯೇ?

ಮನುಷ್ಯ-ಮನುಷ್ಯರ ನಡುವೆ
ಮನಸ್ಸು-ಮನಸ್ಸುಗಳ ನಡುವೆ
ಸಂಬಂಧ-ಸಂಬಂಧಗಳ ನಡುವೆ
ಬಿರುಕು ಮೂಡಿಸುವ ಈ ಬಗೆ ಸರಿಯೇ?||

ಪಕ್ಕದ ಗಲ್ಲಿಗೆ ದೂರದೂರಿಂದ ಬರಬಹುದು
ಹತ್ತಿರವೇ ಇರುವ ಮನೆಗೆ ಬರಲಾಗದು
ಕಾಣದ ಸಮಯದ ಅಭಾವದ
ನೆವ ಹೂಡುವುದು ಸುಲಭ ಮಾರ್ಗ||

ಮನದಲ್ಲಿ ದ್ವೇಷ ನೆಲೆಗೊಂಡಿರಲು
ಹಾಲೂ ಹಾಲಾಹಲವಾಗುವುದು
ತೆರೆದ ಹೃದಯವು ಹೇಗೆ ಕಾಣುವುದು,
ದ್ವೇಷದ ಕರಿನೆರಳು ಕಣ್ಣು ಮುಚ್ಚಿರುವಾಗ?||

ಇಲ್ಲಸಲ್ಲದ ನೆವವೊಡ್ಡಿ ದೂರುವುದು
ಸಲ್ಲದ ಮನಗಳ ಕಡೆಗಣನೆ ಸರಿಯೇ?
ಕೇಳಿಕೊಳ್ಳಲಿ ಮನವ ದ್ವೇಷಸುವುದು ಯಾಕಾಗಿ?
ದ್ವೇಷದಿಂದೇನು ಅವರಿಗೆ ಲಾಭ?||

ಇಂಥ ನಡುವಳಿಕೆಗಳ ಕಡೆಗಣಿಸಬೇಕು
ದ್ವೇಷವ ಗೆಲ್ಲುವ ಮಾರ್ಗವ ಹುಡುಕಬೇಕು
ಸಾಗಿ ಬಂದಿಹೆವು ಬಲುದೂರ ಸಾಕಾಗಿದೆ,
ಇನ್ನೇಷ್ಟು ದಿನ, ದೂರ ಸಾಗಬಲ್ಲೆವು ನಾವು?||

ಇದ್ದಾಗ ದ್ವೇಷದಿಂದಲೆ ಕಾಲಕಳೆದು
ಮುಗಿದು ಹೋದ ಮೇಲೆ ಅಳುವುದೇಕೆ?
ದ್ವೇಷ ಸಾಧಿಸಿದ್ದಕ್ಕಲ್ಲ ಅಳುವುದು,
ಸೊರಗಿದ ಗೆಳೆತನದ ನೆಳಲಿಗೆ ಮನ ಬಿಕ್ಕುವುದು||

ನನ್ನ ದನಿಯ ಗುರುತಿಸುವುದೆಂತೋ?

ನನ್ನ ದನಿ ಆವುದೆಂದು ಹುಡುಕಿ ಹುಡುಕಿ ಬಳಲಿದೆ;
ನನ್ನದಲ್ಲದ ದನಿಯ ಮೋಹಿಸಿ ಪರವಶನಾದೆ;
ನನ್ನದಲ್ಲದ ದನಿಗೆ ನಾ ಕಂಠವಾದೆ;
ನನ್ನ ದನಿಯಲ್ಲವೆಂಬ ಭ್ರಮೆ ಕಳಚಿರಲು,
ಮತ್ತೆ ಅದೇ ಹುಡುಕಾಟ;
ನನ್ನ ದನಿಯಾವುದೆಂದು?
ಹುಡುಕಾಟ ನಡೆಯುತ್ತಿದೆ ಕೊನೆ ಮೊದಲಿಲ್ಲದೆ
ಆವ ದನಿ ನನ್ನದೋ?
ಆವ ದನಿ ಹೃದಯವ ತಟ್ಟುವುದೋ?
ನನ್ನ ದನಿಯ ಗುರುತಿಸುವುದೆಂತೋ?
ಅಳತೆಗೋಲಿಲ್ಲದೆ ತಳಮಳ ಹೆಚ್ಚಾಗಿದೆ;
ಹುಡುಕಾಟ ನಡೆಯುತ್ತಿದೆ ನಿಲ್ಲದೆ,ವಿಧಿಯಿಲ್ಲದೆ....

ಏಕೆ ಗೆಳೆಯ ಹೀಗೆ ಮಾಡಿದೆ?

ಏಕೆ ಗೆಳೆಯ ಹೀಗೆ ಮಾಡಿದೆ?
ಈ ನಿನ್ನ ನಿರ್ಧಾರ ಆಶ್ಚರ್ಯ ತಂದಿದೆ
ಮನದಲ್ಲೆಂದೂ ಎಣಿಸಿರಲಿಲ್ಲ ನೀ ಹೇಡಿಯಾಗುವೆಯೆಂದು||

ಎಲ್ಲವನ್ನೂ ಗೆದ್ದವನೆಂದು ತಿಳಿದಿದ್ದೆ;
ಪರಿಶ್ರಮದ ಪ್ರತೀಕವಾಗಿದ್ದೆ;
ನೋಡನೋಡುತ್ತಿದ್ದಂತೆ ಎಷ್ಟು ಎತ್ತರ ಏರಿದ್ದೆ;
ನನ್ನ ಜೀವನದ ನಾಯಕ ಆಗಿಹೋಗಿದ್ದೆ;
ಎಷ್ಟು ಹೆಮ್ಮೆ ಇತ್ತು ನಿನ್ನ ಬಗ್ಗೆ;
ನಿನ್ನ ಸಾವು ನನ್ನಲ್ಲಿ ಒಂದು ಭಯವನ್ನೇ ತಂದಿದೆ
ಎಲ್ಲವೂ ಮರೀಚಿಕೆ ಎನಿಸುತ್ತಿದೆ||

ಎಲ್ಲವೂ ನಿನ್ನಲ್ಲಿ ಇತ್ತೆಂದು ನಂಬಿದ್ದೆ;
ಎಲ್ಲವನ್ನೂ ಜಯಿಸುವ ಶಕ್ತಿ ನಿನ್ನಲ್ಲಿ ಇತ್ತು;
ನಿನ್ನ ಆತ್ಮಹತ್ಯೆಯಿಂದ ತಿಳಿದಿದ್ದು,
ನಿನ್ನಲ್ಲಿ ಜೀವನ ಪ್ರೀತಿ ಇರಲಿಲ್ಲವೆಂದು;
ಹೇಡಿಗಳೇ ಸಾವಿನ ಬಗ್ಗೆ ಯೋಚಿಸುವರು
ನೀನೂ ಅವರುಗಳ ಸಾಲಿನಲ್ಲಿ ಸೇರಿಹೋದೆ
ಅದೇ ನನ್ನ ಮನದಲ್ಲಿ ಬೇಸರ ತಂದಿದೆ||

ಆದರೂ ಆದರೂ....
ಸಾವಿನ ನಿರ್ಧಾರ ತೆಗೆದುಕೊಳ್ಳುವಾಗ
ನಿನ್ನ ಮನದಲ್ಲಿ ಅದೆಷ್ಟು ನೋವಿತ್ತೋ
ಅದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ...
ಒಂದು ಕ್ಷಣ ಯೋಚಿಸಬಹುದಿತ್ತು;
ಯಾವ ನೋವಿದೆ ಈ ಪ್ರಪಂಚದಲ್ಲಿ ಸಂತೈಸಲಾಗದ್ದು?
ಶಾಂತಿ,ಸಮಾಧಾನ,ಪ್ರೀತಿ,ಆತ್ಮೀಯತೆ,ಮಮತೆ,
ಆರೈಕೆ,ವೈರಾಗ್ಯ ಗಳಿಂದೆಲ್ಲಾ ಸಾಧ್ಯವೆಂಬ ಅರಿವಿರಬೇಕಿತ್ತು;
ನಾ ತಿಳಿಯೇ? ಏನು ಹೇಳಲಿ?
ಆದರೂ ಗೆಳೆಯ,
ನೋವಿನಿಂದಲೇ ಪ್ರಾರ್ಥಿಸುವೆ
"ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ"

ಉಳಿದಿರುವುದು ಪ್ರಾರ್ಥನೆಯೊಂದೇ,

ಹತ್ತು ವರುಷಗಳ ನಂತರವೂ ಹುಡುಕುತ್ತಿದ್ದೇನೆ
ನನ್ನ ಮನದಾಳದ ನೂರು ಪ್ರಶ್ನೆಗಳಿಗೆ ಉತ್ತರ!
ನನ್ನ ಪ್ರಶ್ನೆಗಳು ದೊಡ್ಡವೇನಲ್ಲ;
ಉತ್ತರವೂ ದೊಡ್ಡದು ಬೇಕಾಗಿಲ್ಲ;
ಕಾಲೇಜಿನ ಪರೀಕ್ಷೆಯಲ್ಲಿ ಪುಟ ಪುಟಗಳು ಗೀಚಿದ ನೆನಪು;
ಇರುವ ಹತ್ತು ಪ್ರಶ್ನೆಗಳಿಗೆ, ಉತ್ತರವೂ ಹತ್ತೇ ಸಾಲುಗಳು ಸಾಕು;
ಪರೀಕ್ಷೆ ಬರೆಯುತ್ತಿರುವವನು ನಾನೇ,
ಪರೀಕ್ಷೆ ಆರಂಭವಾಗಿ ಹತ್ತು ವರುಷಗಳೇ ಕಳೆದಿವೆ
ಪರೀಕ್ಷೆಯ ಸಮಯವೂ ಇನ್ನೂ ಮುಗಿದಿಲ್ಲ;
ಸಧ್ಯಕ್ಕೆ ಮುಗಿಯುವ ಲಕ್ಷಣವೂ ಕಾಣುತ್ತಿಲ್ಲ;
ನನ್ನ ಉತ್ತರ ಬರೆಯುವುದೂ ಇನ್ನೂ ಆರಂಭವಾಗಿಲ್ಲ;
ಉತ್ತರವೂ ಸರಿಯಾಗಿ ಹೊಳೆಯುತ್ತಿಲ್ಲ;
ಭಯ ಮಾತ್ರ ಮನವ ಆವರಿಸಿದೆ
ಕನಸುಗಳು ಸಾಯುವುದೆಂದು;
ಉಳಿದಿರುವುದು ಪ್ರಾರ್ಥನೆಯೊಂದೇ,
ಪ್ರಾಮಾಣಿಕತೆಯ ಪ್ರಮಾಣವೊಂದೇ.....
ಬರೆಯುವೆನೇ ನನ್ನ ಉತ್ತರ?

ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ
ನೂರು ಚಿಂತೆಗಳು ಮನದಲ್ಲಿ
ನಿಂದು ಚೈತನ್ಯ ಹರಣಗೈದಿವೆ
ನೂರು ಕನಸುಗಳು ಮನದಲ್ಲಿ
ಮೂಡಿ ನಿದಿರೆಯ ಹರಣಗೈದಿವೆ
ಹೊಸ ಆಸೆ ಮೂಡಿ;
ಹೊಸ ಕನಸ ಕಂಡು;
ಹೊಸ ಚೈತನ್ಯದ ನವಪಲ್ಲವ ಹಾಡಿ
ಹೊಸ ಹಾದಿ ತೆರೆದಿದೆ ನೋಡಲ್ಲಿ;
ವಸಂತನಲ್ಲಿ ಚೈತ್ರೆಯು ಜೊತೆಗೂಡಿ
"ಜಯ"ವನ್ನೇ ನಮಗಾಗಿ ತಂದಿಹರು;
ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ಜೀವನದಲ್ಲಿ ಪೂರ್ತಿಸಿಹಿಯೂ ಬೇಡ;
ಜೀವನದಲ್ಲಿ ಪೂರ್ತಿ ಕಹಿಯೂ ಬೇಡ;
ಬೇವು-ಬೆಲ್ಲ ಸಮರಸ ಜೀವನದ ಸಂಕೇತ
ನಾಳೆಯ ಜಯ ಇಂದೇ ನಮಗಾಗಿ ಬಂದಿದೆ
ಹೃದಯ ತೆರೆದು ನಗುವ ತೋರಣವ ಕಟ್ಟಿ
ಅಶಾಂತಿ,ರಾಗ-ದ್ವೇಷ, ಅಸಮಾನತೆ
ಬಡತನ,ಸ್ವಾರ್ಥ ಎಲ್ಲವನ್ನೂ ಹೆಡೆಮುರಿ ಕಟ್ಟಿ
ಚಿಂತೆಯ ಕಸವನ್ನೆಲ್ಲಾ ಗೂಡಿಸಿ ಸ್ವಾಗತಿಸೋಣ ಬನ್ನಿ
ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...