ಕೊಳಕು ಮಾತು

ಒಮ್ಮೆ ಬೀದಿಯಲ್ಲಿ ನಡೆವಾಗ,
ಅದೇ ಬಿಳಿಗೌನು ದರಿಸಿದ ಅವನು ಎದುರಾದ;
ಇದೇನು ಮೊದಲ ಭೇಟಿಯಲ್ಲ ನಮ್ಮದು;
ನಮ್ಮಿಬ್ಬರ ಮಾತುಕತೆಗೆ ಬಣ್ಣ ಬಳಿಯುವ ಅಗತ್ಯವಿಲ್ಲ
ಏಕೆಂದರೆ ಎರೆಚಿದ ಬಣ್ಣವೇ ಮಾಸುತ್ತಿದೆ,ಹೊಸತರ ಅಗತ್ಯವಿಲ್ಲ
ಅವನೋ ಸಭ್ಯತೆಯ ಸಾಕಾರ ಮೂರ್ತಿ-ಮುಖವಾಡ;
ನಾನೋ ವ್ಯಭಿಚಾರದ ನಿರ್ಮಲ ಪರಿಮಳ;
ಸಭ್ಯರಿಗೆ ನಮ್ಮ ಮಾತುಗಳು ಕೊಳಕೆನಿಸಬಹುದು
ಕೊಳಕು ಎಲ್ಲಿಲ್ಲ ಹೇಳಿ? ಎನ್ನುವುದೇ ನನ್ನ ಪ್ರಶ್ನೆ ಅವರಿಗೆ;
ನೇರಾನೇರ ಬಿಡುಗತ್ತಿಯ ನುಡಿಗಳು ನಮ್ಮವು
ಆಶ್ಚರ್ಯ, ನೋವಾಗಬಹುದು ಕೇಳುಗರಿಗೆ;
ಕಾಮ ಪಿಶಾಚಿ ಅವನು;
ಬಟ್ಟೆ ಬದಲಿಸಿದಂತೆ ಹೆಣ್ಣುಗಳ ಬದಲಿಸಿದವನು ಅವನು;
ಅವನು ನನ್ನೆದೆಯ ಮೊಲೆಗಳ ಮೇಲೆ ಕಣ್ಣಾಡಿಸಿ ನಕ್ಕು ಹೇಳಿದ
"ನಿನ್ನ ಮೊಲೆಗಳು ಅಂದ ಕಳೆದುಕೊಂಡಿವೆ,ಸೊರಗಿವೆ,ನಿಂತು ನಿಮಿರಲಾರದೆ ಜೋತಿವೆ,
ಆಸರೆ ಬಯಸಿವೆ, ಅವು ಯಾರಿಗೆ ಸುಖ ಕೊಟ್ಟಾವು?;
ಇನ್ನೆಷ್ಟು ದಿನ ರತಿಯ ಮುಖವಾಡ?
ಪೊಗರಿಳಿದ ಮೇಲೆ ಮೂಲೆ ಸೇರಲೇಬೇಕು
ಕೊಳಕು ನೆಲೆಗಳ ಬಿಟ್ಟು ಬಾ
ನನ್ನೊಡನೆ ಬಾ
ದೇವಾಲಯದಲ್ಲಿ ನೆಲೆಗೊಂಡು ನನ್ನೊಡನೆ ಶಾಂತಿಯ ಅರಸು ಬಾ..

ನಾನು ನಕ್ಕೆ ಅವನ ಮಾತುಗಳ ಕೇಳಿ
ನಾನಂದೆ "ಕೆಲಸವಾದ ಮೇಲೆ ಎಲ್ಲವೂ / ಎಲ್ಲರೂ ಸೊರಗಲೇಬೇಕು;
ಅದೇ ಜೀವನ ನಿಯಮ;
ನಿನ್ನದೂ ಅಷ್ಟೆ, ನೀನೇನೂ ಮನ್ಮಥನಲ್ಲ;
ಬೇರೆಯವರ ಅಂಕು-ಡೊಂಕುಗಳ ಮೇಲೇ ನಿನಗೆ ಕಣ್ಣು;
ಲೋಕದ ಜನರಿಗೆ ನಿನ್ನ ಡೊಂಕುಗಳ ಕಾಣುವ ಕಾಲ ಸನ್ನಿಹಿತವಾಗುತ್ತಿದೆ ಎಚ್ಚರ;
ಸಭ್ಯನಂತೆ ಮುಖವಾಡ ಹಾಕಿ ಎಷ್ಟು ದಿನ ನಿನಗೆ ನೀನೇ ಮೋಸ ಮಾಡಿಕೊಳ್ಳುವೆ?
ಕೊಳಕಿನ ನೆಲೆಯಲ್ಲಿ ಸ್ವತಂತ್ರವಾಗಿ ಉಸಿರಾಡಬಹುದು,ನಿರ್ಮಲವಾಗಿ ನರಳಬಹುದು
ಜೀವ ಹೋಗುವವರೆಗೂ.....
ನಾಟಕರಂಗದ ಮೇಲೆ ಬೇರೆಯವರು ಆಡಿಸಿದಂತೆ ಆಡಲು ನನ್ನಿಂದ ಸಾಧ್ಯವಿಲ್ಲ;
ನಿನ್ನ ಸ್ವಾರ್ಥದಲ್ಲಿ ನನ್ನ ಶಾಂತಿ ಅಡಗಿಲ್ಲ;
ಕ್ರೂರಮೃಗ ನೀನು, ನಿನ್ನಿಂದ ಮತ್ತೆ ಚಿತ್ರಹಿಂಸೆಗೆ ಒಳಗಾಗುವ ಆಸೆ ಮತ್ತೊಮ್ಮೆ ನನಗಿಲ್ಲ;
ನಿನ್ನ ರೀತಿ ಶಾಂತಿ ಅರಸುವುದು ಮೂರ್ಖತನ
ಸಭ್ಯತೆಯ ಮುಖವಾಡ ನನಗೆ ಬೇಕಿಲ್ಲ
ಮತ್ತೆ ಬಲಿಪಶುವಾಗಲಾರೆ ನಾ...
ಅವನ ಕಪಾಲಕ್ಕೆ ಹೊಡೆಯಬೇಕೆನಿಸಿತು ಆದರೆ ಮಾಡಲಿಲ್ಲ
ಜೋರಾಗಿ ನಕ್ಕೆ
ಅವನು ನಗಲಿಲ್ಲ
ತುಂತುರು ಮಳೆಯ ಹನಿಗೆ ದೇಹ ಒಡ್ಡುತ್ತಾ
ಹಿತ ಅನುಭವಿಸುತ್ತಾ ಮುನ್ನಡೆದೆ.

ನಿನ್ನ ಚೆಲುವ ಕಂಗಳಿಗೆ

ಎಂಥ ಚೆಲುವು
ಎಂಥ ಚೆಲುವು
ಓ ಹೆಣ್ಣೆ ನಿನ್ನ ಕಂಗಳು
ಮನವ ಸೆಳೆಯುವ ಬೆಳದಿಂಗಳು||

ಆವಲೋಕಕೋ ಸೆಳೆವುದು
ಮೋಡಿಮಾಡಿ ಎಳೆವುದು
ನೆಟ್ಟದೃಷ್ಟಿ ತೆಗೆಯದಂತೆ ಮಾಡುವುದು
ಎಂಥ ಚೆಲುವು ನಿನ್ನ ಕಂಗಳು||

ಆವ ಹೆಸರೋ ಈ ಸೌಂದರ್ಯಕೆ
ಕಾಮಾಕ್ಷಿ ಎನ್ನಲೋ?
ಮೀನಾಕ್ಷಿ ಎನ್ನಲೋ?
ಬೊಗಸೆ ಕಂಗಳೆನ್ನಲೋ?
ಸಾಟಿ ಯಾವುದು ನಿನ್ನ ಚೆಲುವ ಕಂಗಳಿಗೆ?||

ನಿನ್ನ ಕಂಗಳ ಸೌಂದರ್ಯದ ಸೊಬಗಿಗೆ ಏನೆನ್ನಲ್ಲಿ
ಹೆಣ್ಣೆನ್ನಲೋ?
ಭೂರಮೆಯನ್ನಲೋ?
ದೇವಲೋಕದ ಕನ್ನಿಕೆ ಎನ್ನಲೋ?||

ಕಂಗಳಲ್ಲೇ ಮಾತು
ಕಂಗಳಲ್ಲೇ ನೂರು ಸಂದೇಶ
ಭಾವ,ಚೈತನ್ಯ,ಪ್ರೀತಿ-ವಾತ್ಸಲ್ಯದ ಜಲಪಾತ
ಕಂಗಳೆನ್ನಲೋ?
ಸರಸತಿಯೆನ್ನಲೋ?
ಕವಿತೆಯೆನ್ನಲೋ?||

ಅವಳ ಮಾತು ಅರಳು ಹುರಿದಂತೆ

ಅವಳ ಮಾತು ಅರಳು ಹುರಿದಂತೆ
ಏನ ಹೇಳಲಿ ದೊರೆಯೇ?
ಅವಳ ಮಾತಿನಂತೆ ನಡೆಯುವುದು ಹೇಗೆಂದು
ದಿನವೂ ಯೋಚಿಸಿ ಬಳಲಿಹೆನು ಬೆಂಡಾಗಿ
ಹೊಸ ದಾರಿ ಸಿಗದೆ ಅವಳ ಮುನಿಸಿಗೆ ಆಹಾರವಾಗಿಹೆನು||

ನೂರು ಬಾರಿ ಹೇಳಿದೆನು ಬದಲಾಗುವೆನು ನಾನೆಂದು
ಒಮ್ಮೆ ಕೂಡ ಬದಲಾಗದೆ ಹಾಗೇ ಕಾಲ ತಳ್ಳಿದೆನು
ಮುನಿದಾಗ ಅವಳ ಮಾತು ನೆನಪಿಗೆ ಬರುವುದೆನಗೆ
ನಾನು ಬದಲಾಗಬೇಕೆಂದು, ದಾರಿ ಕಾಣದೆ ಮೌನ ಮುನಿಯಾಗುವೆನು||

ಎಷ್ಟು ಸಲ ಹೀಗೆ ನಡೆದಿಹುದೋ ಲೆಕ್ಕವಿಲ್ಲ
ಸಧ್ಯಕ್ಕೆ ಇದಕ್ಕೆ ಪೂರ್ಣವಿರಾಮ ಹಾಕುವ ಕಾಲ ಬಂದಿಲ್ಲ
ಹೀಗೆ ನಡೆಯುತಿಹುದು ನಮ್ಮಯ ಬಾಳ ಪಯಣ
ಅವಳ ಮಾತು ಅರಳು ಹುರಿದಂತೆ,
                ನನ್ನದೋ ಹೂಂ ಗುಟ್ಟುವ ಋಷಿಯಂತೆ||

ನೆನಪಿನ ಗುಟ್ಟು

ಚಿಂತೆಗೆ ಹತ್ತುವುದು ಮನ
ಬಲುಬೇಗ ಏನಿದರ ಗುಟ್ಟು?
ಪಾಠ,ಓಳ್ಳೆಯ ನುಡಿ,ಪ್ರವಚನ
ಬಳಿ ಸುಳಿಯಲಲ್ಲದು ಮನವ ಮುಟ್ಟಿ||

ಉರು ಹೊಡೆಯ ಬೇಕು ಮತ್ತೆ ಮತ್ತೆ
ವಿಜ್ಯಾನ ಸೂತ್ರ,ಇತಿಹಾಸದ ಇಸವಿ,ಹೆಸರುಗಳು ನೆನಪಿಗೆ ಬಾರವು
ನೂರು ಹುಡುಗೀರ ಹೆಸರುಗಳು ಮಾಸದೇ ನಿಂತಿಹುದು
ಕಷ್ಟವಿಲ್ಲದೇ ಬರುವುದು ನೆನಪಿಗೆ ಸುಲಭವಾಗಿ||

ಏನಿದರ ಮರ್ಮವೋ ಕಾಣೆ
ಪ್ರೀತಿ,ಆಕರ್ಷಣೆಯೇ ರಹದಾರಿ
ಪ್ರೀತಿ-ಒಲುಮೆ ಹರಡಿರಲು
ಎಲ್ಲವೂ ಮನಕೆ ಹಿಡಿಸುವುದು||

ಪ್ರೀತಿಯೇ ಅದರ ಗುಟ್ಟು
ಮಾಡಿದೆ ಅರಿತು ಅದರ ರಟ್ಟು||

ನಂಬಿ ಕೆಟ್ಟೆವೇ?

ನಂಬಿ ಕೆಟ್ಟೆವೇ ಇವರನ್ನು
ದೊಡ್ಡವರು ಏಳಿಗೆ ಬಯಸುವರೆಂದು
ನಂಬಿದ್ದೇ ದೊಡ್ಡ ತಪ್ಪಾಯಿತೇನೋ?
ಅವಕಾಶಗಳನ್ನು ತಿಂದುಂಡವರು
ಹೊಟ್ಟೆಯ ತುಂಬಾ ತುಂಬಿಕೊಂಡವರು
ಹಸಿವ ಅಗ್ನಿಯಲ್ಲಿ ಬಳಲುವವರ ಕಷ್ಟ ಅರ್ಥವಾದೀತೇ?

ಮೌನವಹಿಸಿದ್ದೇವೆ ಎಲ್ಲವೂ ನೋಡುತ್ತಾ
ಪ್ರಶ್ನೆ ಕೇಳಿದರೆ ಬಾಯಿ ಬಡಿಯುವರು
ಇದೆಂಥಾ ಶೋಷಣೆಯೋ? ಇಲ್ಲ ಗುಲಾಮಗಿರಿಯ ಪೋಷಣೆಯೋ?
ಸ್ವಾತಂತ್ರ ಕಳೆದುಕೊಂಡ ಸ್ಥಿತಿ ನಮ್ಮೆಲ್ಲರದೂ
ಪ್ರತಿಭಟಿಸುವುದೆಂತೋ ತಿಳಿಯುತ್ತಿಲ್ಲ ಯಾರಿಗೂ
ಒಳಒಳಗೇ ಕುದಿಯುತ್ತಾ
ಎಂದು ಅಗ್ನಿಪರ್ವತದಂತೆ ಒಳಕುದಿ ಸ್ಪೋಟಿಸುವುದೋ?

ಬುದ್ಧ ನಕ್ಕ

ಬೋಧಗಯಾ ಭಯಭೀತವಾಗಿದೆ
ಭಯೋತ್ಪಾದಕರ ದಾಳಿಗೆ ತುತ್ತಾಗಿದೆ
ಸಾವು-ನೋವುಗಳಿಗೆ ಸಾಕ್ಷಿಯಾಗಿದೆ
ದ್ವೇಷದ ಕೆನ್ನಾಲಿಗೆಗೆ ಬಲಿಯಾಗಿದೆ||

ಆಸೆಯೇ ದುಃಖಕ್ಕೆ ಮೂಲವೆಂದವನ ಮುಂದೆ
ಭಯದ ಬೀಜ ಮನದಲ್ಲಿ ಬಿತ್ತುವ ಯತ್ನ ಬೆನ್ನ ಹಿಂದೆ
ನೆಲ ನಡುಗಿದೆ,ಮನ ಕಂಪಿಸಿದೆ
ಜೀವಗಳು ಭಯದ ನೆರಳಲ್ಲಿ ಕಾಲ ಕಳೆದಿದೆ||

ಬುದ್ಧಿಜೀವಿಗಳ ಬಾಯಿಗೆ ಬೀಗ ಬಿದ್ದಿದೆ
ಪ್ರಗತಿಪರರು ನಾಪತ್ತೆಯಾಗಿದ್ದಾರೆ
ರಾಜಕಾರಣಿಗಳು ಎಂದಿನಂತೆ ಮೊಸಳೆ ಕಣ್ಣೀರಿಡುತ್ತಿದ್ದಾರೆ
ಪತ್ರಿಕೆಗಳು ಬೊಬ್ಬೆಹೊಡೆಯದೆ ನಿದ್ರಿಸುತ್ತಿವೆ||

ಕಾಣದ ಹೋಮಕುಂಡಕ್ಕೆ
ಹವಿಸ್ಸನರ್ಪಿಸಿದಂತೆ
ಹೃದಯಗಳ ಬೆಸೆಯುವ
ಕೊಂಡಿಯ ಕಳಚಿದಂತೆ||

ಕಚ್ಚಾಡಿ ಸಾಯುವ ಪಕ್ಷಗಳಿಗೆ
ಒಂದು ದಿನದ ಆಹಾರವಾಯಿತು ಈ ಘಟನೆ
ಧೃಡ ನಿರ್ಧಾರ,ಬದ್ಧತೆ ಪ್ರದರ್ಶಿಸದ
ಗೃಹಖಾತೆ,ಬಟ್ಟಿಂಗಿ ರಾಜಕಾರಣಿ,ಸರ್ಕಾರಕ್ಕಿದುವೆ ಪ್ರತಿಭಟನೆ||

ಸೋತವರಾರೋ? ನರಳಿದವರಾರೋ?
ಯಾರ ಹಿತ ನರಳಿಹುದೋ ಮೌನವಾಗಿ
ಕಾಲ ತೆವಳಿದ ನೋವು-ಸಾವುಗಳೊಡನೆ
ಬುದ್ಧ ಮಾತ್ರ ನಸುನಗುತ್ತಿದ್ದಾನೆ ಎಲ್ಲವನ್ನೂ ಕಂಡೂ ಕಾಣದವನಂತೆ||

ಉಡುಗೊರೆ

ಎಷ್ಟು ಬೇಗ ಹರಿವುದೀ ಮುಂಜಾನೆ
ಏಳುವಾಗ ಕತ್ತಲು ತಬ್ಬಿದ ಇಳೆ
ಶೌಚ ಕಳೆದು;
ಕಾಫಿ ಕುಡಿದು;
ಕವಿತೆ ಓದಿ ಕಣ್ಣು ಬಿಟ್ಟೊಡೆ
ಬೆಳಗ ತೇರು ಕಣ್ಣು ತೆರೆದು
ಜಾರಿ ಬಂದಿದೆ ಮೌನವಾಗಿ ಇಳೆಗೆ
ಸ್ವಾಗತ ಕೋರುವ ಮುನ್ನ ಉಷೆಗೆ
ಚಿಲಿಪಿಲಿ ಗಾನ ಹೊಮ್ಮಿದ ಸುಪ್ರಭಾತ
ಕತ್ತಲು ಜಾರಿದೆ;
ಬೆಳಗು ಮೂಡಿದೆ;
ಹೊಸ ದಿನವ ಹೊತ್ತ ದಿನಕರ
ನಗುತಿಹನು ಮೂಡಣದಲಿ
ಹೊಸದಿನದ ಉಡುಗೊರೆಯೊಂದಿಗೆ....

ನಿನ್ನಿಂದ ಸಾಧ್ಯ

ನಿನ್ನಿಂದ ಸಾಧ್ಯ ಅರಿ
ಸೋತವರಲ್ಲಿ ನೀ ಮೊದಲನೆಯವನಲ್ಲ್ ತಿಳಿ
ಜೀವನದಲ್ಲಿ ಯಶಸ್ವಿಯಾದವರೆಲ್ಲಾ
ಅನುಭವಿಸಿದ್ದಾರೆ ಸೋಲು,ನೋವು,ನಿರಾಸೆ||

ನಮ್ಮ ಕನಸಿನ ರಸ್ತೆ
ಸುಲಭವಾದುದಲ್ಲ,ಬಂಗಾರದಿಂದ ಮಾಡಿಲ್ಲ
ಸೋತವರಿಗೂ,ಗೆದ್ದವರಿಗೂ
ಕೆಲವೇ ಕೆಲವು ಗುಣಗಳಷ್ಟೇ ವ್ಯತ್ಯಾಸ ತಿಳಿ||

ಗೆದ್ದವರು ತುಂಬಾ ಬುದ್ಧಿವಂತರಲ್ಲ
ಪ್ರತಿಭಾಸಂಪನ್ನರಂತೂ ಅಲ್ಲವೇ ಅಲ್ಲ
ಅವರಿಗೆ ಅಚಲವಾದ ನಂಬಿಕೆಯಿದೆ
ಮುಂದೆ ಮಹತ್ತರವಾದದ್ದು ಇದೆ ಎಂದು||

ಸಹನೆಯ ಕಟ್ಟೆಯೊಡೆದಾಗ
ಅವರು ತಾಳ್ಮೆಯ ಕೈಹಿಡಿಯುತ್ತಾರೆ
ತಿಳಿದಿದೆ ಚಂಡಮಾರುತವೂ ಹೆಚ್ಚು
ಸಮಯ ಆರ್ಭಟಿಸಲಾರದೆಂದು||

ಅವರು ತಮ್ಮ ಕನಸುಗಳ ಕಾಯುವರು
ಕಷ್ಟಗಳ ಮಳೆಯ ಹೊಡೆತಕ್ಕೆ
ತಮ್ಮತನವು ಕರಗದಂತೆ ಕಾಯ್ವರು||

ಬಿಡಬೇಡ,ಕೈಚಲ್ಲಬೇಡ
ನಿನ್ನಿಂದ ಸಾಧ್ಯ
ನಿಲ್ಲದಿರು ಗುರಿಮುಟ್ಟುವವರೆಗೂ.......

ಪ್ರೇರಣೆ: "you can do it" unknown author.

ರಂಗೋಲಿ

ಚುಕ್ಕಿ ಚುಕ್ಕಿ ಆಗಸದಿ ಹೊಳೆವ ಬೆಳಕಿನ ಚುಕ್ಕಿ
ಕಣ್ಣ ಮಿಣುಕಿಸುತ ಮನವ ಗೆಲ್ಲುವ ಚುಕ್ಕಿ
ಉದಯರವಿ ಮೂಡುತ್ತಿದ್ದಂತೆ ಆಗಸದಿ
ಹಾರಿ ಬಂದು ಅಮ್ಮನ ಕೈಸೇರಿ ಆಗುವುದು
ಮನೆಯ ಅಂಗಳದ ಚಿತ್ತಾರದ ರಂಗವಲ್ಲಿ
ಅಮ್ಮನ ಮನದ ಹೇಳದ ಕವಿತೆಯದು
ಮನದಲಿ ತುಂಬಿದ ಜೀವನ ಪ್ರೀತಿಯದು
ಜೀವನ ರೂಪಿಸಿದ ರಸ ಕಲಾವಂತಿಕೆಯದು
ಅಮ್ಮನ ಕೈಯಲ್ಲಿ ಅರಳುವ ತಾಯಿ ಸರಸತಿಯ ಸೊಬಗದು
ಮನೆಯ,ಮನದ ಅಂಗಳದಿ ಅರಳುವ ಹೂವದು

ಹೆಣ್ಮನದ ನೋವಿನ ದನಿ

ಎಷ್ಟೊಂದು ಕೈ ಗುರುತು
ಬಣ್ಣ ಬಣ್ಣದ ಕೈ ಗುರುತು
ಗೋಡೆಯ ಮೇಲೆ ಚಿತ್ತಾರದ ಭಾವಗಳು ಕಲೆತು
ಹೆಣ್ಮನದ ಭಾವನೆಗಳೆಲ್ಲಾ ಬಣ್ಣದಲ್ಲಿ ಬೆರೆತು
ಆವುದರ ಹೆಗ್ಗುರುತಾಗಿ ಮೂಡಿಹುದೋ?

ಕರಗಿಹೋದ ಅಬಲೆಯರ ಚಿತ್ರವೋ?
ಎದುರಿಸುವ ಸಬಲೆಯರ ಸಂಕೇತವೋ?
ಬಾಡಿಹೋದ ಹೂಗಳ ನೆನಹೋ?
ಆತ್ಮವಿಶ್ವಾಸದ ಮಾನಿನಿಯರ ಚೈತನ್ಯವೋ?
ಚಿತ್ತಾಕರ್ಷಕ ಕಲಾಕೃತಿಯಾಗಿ ಒಡಮೂಡಿದೆ!

ಬಣ್ಣಬಣ್ಣದ ಹೆಗ್ಗುರುತು ಹೇಳುತಿದೆ
ನೂರು ನೋವಿನ ಕಥೆಗಳ ಮೌನವಾಗಿ
ಶಾಂತಿ ಸಂದೇಶದ ಸಂಕೆತವಾಗಿ ಮೂಡಿದೆ
ಆತ್ಮಸ್ಥೈರ್ಯದ ಕುರುಹಾಗಿ ಅಭಿವ್ಯಕ್ತಿಗೊಂಡಿದೆ
ಮೌನವಾಗಿ ನರಳಿದ ಹೃದಯಗಳಿಗೆ ಸಮಾಧಾನ ತಂದಿದೆ||

ನೋವುಂಡವರ ದನಿಯಾಗಿ
ನಾವಿದ್ದೇವೆ ನಿಮಗಾಗಿ
ಹೆದರದಿರಿ,ಬೆದರದಿರಿ;
ಸಮರ್ಥವಾಗಿ ಎದುರಿಸಿ ಶೋಷಣೆಯ
ಅಸಮಾನತೆ,ದೃಷ್ಟಿಕೋನ ಬದಲಾಗಬೇಕೆಂಬ ಧೋರಣೆ
ಮೌನವಾಗಿ ಚಿತ್ತಾರದ ಕಲಾಕೃತಿಯಾಗಿ ಮೂಡಿದೆ||

ದೀವಟಿಗೆಗಳು

ನೆನಪಿಗೊಂದು ನೆವಬೇಕು
ಪರಂಪರೆಯ ಮೌಲ್ಯಮಾಪನವಾಗಬೇಕು
ಕೊಡುಗೆ.ವಿಚಾರ,ಆಲೋಚನೆ
ಜೀವಂತಿಕೆ ಮುಂದಿನ ಪೀಳಿಗೆಗೆ ಆರೋಹಣೆ||

ಧೀಮಂತರ ಜೀವನ ಚರಿತ್ರೆ
ಬದುಕಿದ ರೀತಿ-ನೀತಿ
ಪ್ರತಿಪಾದಿಸಿದ ಮೌಲ್ಯ,ಆಯಾಮ
ನಡೆ-ನುಡಿ,ವ್ಯಕ್ತಿತ್ವ,ಚಾರಿತ್ರ್ಯ ಓರೆಹಚ್ಚಬೇಕು||

ಇತಿಹಾಸದುದ್ದಕ್ಕೂ ನೂರು ದೀಪಗಳು
ಯಾರೂ ಮೇಲಲ್ಲ,
ಯಾರೂ ಕೀಳಲ್ಲ ಇಲ್ಲಿ
ಸಮಾನತೆಯ,ಮಾನವೀಯತೆಯ ದೀವಟಿಗೆಗಳು
ಮುಂದಿನ ಪೀಳಿಗೆಗೆ ದಾರಿದೀಪಗಳು||

ಹತ್ತು ವರ್ಷಗಳ ಹಾದಿ

ಹತ್ತು ವರ್ಷಗಳ ಹಿಂದೆ ಹೊರಟೆ
ಹೊಸತನ್ನು ಬಯಸಿ ಹಿಡಿದೊಂದು ಹಾದಿ
ಏಕತಾನತೆಯ ತ್ಯಜಿಸಿ;
ಹೊಸತನದ ಭ್ರಮೆಯ ಭಜಿಸಿ;
ನೋವು,ಕಹಿ ಮಾತುಗಳ ಭುಂಜಿಸಿ
ಹೊಸ ಚೈತನ್ಯದ ದಿಕ್ಕಿಗೆ ಹೆಜ್ಜೆ ಹಾಕಿದೆ
ಹೊಸ ಬೆಳಕಿಗೆ,ಹೊಸ ಮನ್ವಂತರಕೆ ಸ್ವಾಗತ ಕೋರಿದೆ;

ಹೊಸ ಕೆಲಸ;
ಹೊಸ ಪರಿಸರ;
ಹೊಸ ಗೆಳೆತನ;
ಹೊಸ ಗುರು;
ಹೊಸ ಗುರಿ;
ಹೊಸತು ಹೊಸತು ಮನದಲೆಲ್ಲಾ ಹೊಸ ಹುರುಪು;
ಹತ್ತು ವರುಷ ಅಂಕದ ಚಿತ್ರದಂತೆ ಜಾರಿದೆ;
ನೂರು ಚಿಂತೆ,ಅಸಮಧಾನಕ್ಕೆ ಕೊನೆ ಎಲ್ಲಿದೆ?
ದುಃಖ,ದುಮ್ಮಾನ ಏನೇ ಇರಲಿ,
ಮನದೊಳು ಸಮಾಧಾನವಿದೆ;
ಆತ್ಮತೃಪ್ತಿ ಇದೆ;

ಬೆವರು ಹರಿಸಿ ಮುಗುಳ್ನಕ್ಕಿದ್ದೇನೆ
ಎಲ್ಲವೂ ಸಿಗದೇಯಿದ್ದರೂ ನಗುತ್ತಿದ್ದೇನೆ
ಕಾಯಕವೇ ನಿನಗರ್ಪಿಸಿಕೊಂಡಿದ್ದೇನೆ
ಇಂದು,ಮುಂದೆ,ಎಂದೆಂದಿಗೂ
ನಿನಗೆ ನ್ಯಾಯ ಒದಗಿಸುತ್ತೇನೆ
ಹೊಸತು ಬರಲಿ
ಸತ್ವ ಇಲ್ಲದ್ದು ಮುಳುಗಲಿ
ಹೊಸ ಮನ್ವಂತರದ ಹಾದಿ ತೆರೆದುಕೊಳ್ಳಲಿ
ಮನದ ನೂರು ಚಿಂತೆಯ ಕಳೆದು ಚೈತನ್ಯ ತುಂಬಲಿ
ಅನುಭವದ ಕೊಡ ತುಂಬಿ ಜೀವನ ಹಸನಾಗಲಿ;

ನನ್ನ ಕನಸು

  ಕನಸು ಕಾಣಬೇಕು ನನ್ನ ಕನಸು ಕಾಣಬೇಕು ನಾ ಬಾನಲ್ಲಿ ಹಾರಾಡಬೇಕು ಅದಕ್ಕೆ ನನಗೆ ರೆಕ್ಕೆಗಳು ಬೇಕು ಬಾನಲ್ಲಿ ತೇಲಾಡಬೇಕು ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗ...