ಬದಲಾವಣೆಗೆ ಪಕ್ಕಾಗು


ಮನದ ನೋವೇ ಗರಿಗೆದರಬೇಡ
ಮನದ ನೆಮ್ಮದಿಯ ಹಾಳುಗೆಡವಬೇಡ
ಮನಕ್ಕೆ ನೋವಾಗಿದೆ ನಿಜ, ಬೇಡ, ಬೇಡ
ಮತ್ತೆ ಮತ್ತೆ ನೆನಪಿಸಿ ಎದೆಗುಂದಿಸಬೇಡ||

ಮನದಲ್ಲಿ ನೋವಿದೆ
ನೋವಿಗೆ ಪರಿಹಾರವಿದೆ
ತುಸು ಕಾಯಬೇಕಿದೆ
ತಾಳ್ಮೆಯ ಅಗತ್ಯವಿದೆ||

ಮನವೇ ಬಲವಾಗು
ನೋವುಗಳ ಪ್ರೀತಿಸಿ ತಲೆಬಾಗು
ನವೋದಯದ ಸ್ಪರ್ಧೆಗೆ ಛಲವಾಗು
ಬದಲಾವಣೆಗೆ ಪಕ್ಕಾಗು||

ಕಾರ್ಖಾನೆಯ ಕೆಲಸ


ದಿನವೂ ಹನ್ನೆರಡು ನಿಮಿಷಗಳ ನಡುಗೆ
ಮನೆಯಿಂದ ಕಾರ್ಖಾನೆಗೆ ಹೊರಡುವ ಗಳಿಗೆ
ಕತ್ತಲು,ಮಳೆ,ಗಾಳಿ ಲೆಕ್ಕವಿಲ್ಲದ ಹೆಜ್ಜೆಗುರುತುಗಳು
ಸಂತೋಷ,ದುಃಖ,ನೋವು,ನಲಿವುಗಳ ಮಾಸದ ನೆನಹುಗಳು\\

ದಿನಕ್ಕೆ ಎಂಟು ಗಂಟೆ ನಮಗಿದೆ ದುಡಿತ
ಸಮಸ್ಯೆಗಳ ಗಂಟು ಬಿಡಿಸುವ ಗಣಿತ
ಲೆಕ್ಕಾಚಾರ,ಪರಿಹಾರ ತಲೆಕೆಳಗಾಗುವುದು ಗಣಕ
ಬಿಡದೇ ತ್ರಿವಿಕ್ರಮನಂತೆ ಪ್ರಯತ್ನಿಸುವುದೇ ನಮ್ಮ ಕಾಯಕ\\

ಸಮಯ ಹೋಗುವುದೇ ತಿಳಿಯುವುದಿಲ್ಲ
ನಗುನಗುತ್ತಾ ಎಲ್ಲಕ್ಕೂ ಸಿದ್ಧರಿದ್ದೇವೆ ಸೈನಿಕರಂತೆ
ಎಲ್ಲರ ಸಮಸ್ಯೆಗಳಿಗೂ ಹುಡುಕುವೆವು ಪರಿಹಾರ
ನಮ್ಮ ಸಮಸ್ಯೆಗಳು ನೂರಾರು ಯಾರೂ ನೀಡರು ಸಹಕಾರ\\

ಜಾಡುಹೊಡಿ,ಎಣ್ಣೆಹಾಕು,ಯಂತ್ರಗಳ ಸಪ್ಪಳ
ಕತ್ತೆಯ ದುಡಿತ, ಯಂತ್ರಗಳೇ ನಮ್ಮ ಜೀವಾಳ
ಓಡಬೇಕು,ಓಡುತ್ತಲ್ಲೇ ಇರಬೇಕು ನಿಲ್ಲದ ಕುದುರೆ
ನಿಂತರೆ ಎಲ್ಲರ ಬೈಗಳೂ,ಕೈಗಳೂ ನಮ್ಮ ಕಡೆಗೆ\\

ಉತ್ಪಾದನೆಯೇ ಪ್ರಗತಿ,ಸಮಯದ ಕೊರತೆಯಿದೆ
ಹಬ್ಬ-ಹರಿದಿನಗಳು ನಡೆಯುವುದು ನಾವಿಲ್ಲದೆ
’ಜನ ಮೊದಲು ಹೃದಯ ಮುಟ್ಟು’ಘೋಷಣೆ
ಬೂಟಾಟಿಕೆಯ ಬೆಣ್ಣೆಮಾತುಗಳ ಶೋಷಣೆ\\

ಇಂದು ನನ್ನ ಜನುಮ ದಿನ


ಇಂದು ನನ್ನ ಜನುಮ ದಿನ
ತಾಯ ಮಡಿಲ ತುಂಬಿದ ದಿನ

ಡಿಸೆಂಬರ್ ಚಳಿಯು ನಡುಗಿಸುವ ದಿನ;
ಆಕಾಶದಲ್ಲಿ ನಕ್ಷತ್ರಗಳು ಹೊಳೆಯಲಿಲ್ಲ;
ಕೋಗಿಲೆಗಳು ಹಾಡಲಿಲ್ಲ;
ನವಿಲುಗಳು ಸಂತೋಷದಿ ಕುಣಿಯಲಿಲ್ಲ;
ತಂಗಾಳಿ ಬೀಸಲಿಲ್ಲ;
ನದಿಗಳು ಉಕ್ಕಿ ಹರಿಯಲಿಲ್ಲ;
ಸಧ್ಯ ಅದೃಷ್ಟವೆಂಬಂತೆ ಭೂಮಿ ನಡುಗಲಿಲ್ಲ;

ಸನ್ಯಾಸಿ ನಾನಲ್ಲ;
ರಾಜಕುಮಾರ ನಾನಾಗಿರಲಿಲ್ಲ;
ದೇವಧೂತನಂತೂ ಅಲ್ಲವೇ ಅಲ್ಲ;
ಸಮಾಜ ಸುಧಾರಕನಂತೂ ಅಲ್ಲ;
ಸಾಮಾನ್ಯರಲ್ಲಿ ಅತಿಸಾಮಾನ್ಯ ನಾನು;
ಅಮ್ಮ ನೋವಿನಿಂದ ನರಳುತ್ತಿದ್ದಳು
ಏನೂ ಅರಿಯದೆ ಭೂಮಿಗೆ ಬಂದದ್ದಕ್ಕೆ ನಾನು ಅಳುತ್ತಿದ್ದೆ;

ಅಳುದಾದರೆ ಅತ್ತು ಬಿಡು


ಅಳುದಾದರೆ ಅತ್ತು ಬಿಡು
ಮನದಲ್ಲಿ ನೋವುಗಳ ಬಚ್ಚಿಡಬೇಡ

ಮನಸ್ಸು ಆಕಾಶದಂತೆ
ಕರಿಮೋಡ ಭಾರವಾದ ನೋವುಗಳಂತೆ
ಆಕಾಶವ ಕರಿಮೋಡ ಬಳಸಿದರೆ
ಆಕಾಶವೂ ಅಳುವುದು ಮಳೆಯ ಸುರಿಸಿ

ಮನಸ್ಸು ಆಕಾಶದಂತೆ
ತಿಳಿಯಾಗಿಡು ಮನದ ಭಾರವ ಹೊರಚೆಲ್ಲಿ
ಜಾಗಕೊಡು ಮುಂದೆ ಬರುವ ನೋವುಗಳಿಗೆ
ಮನವ ತಿಳಿಯಾಗಿಟ್ಟು ಸಹಕರಿಸಿ

ಮನಸ್ಸು ಆಕಾಶದಂತೆ
ಆಕಾಶಕ್ಕೆ ಹಾರಬೇಕು ಮನದ ರೆಕ್ಕೆ ಬಿಚ್ಚಿ
ಮನವು ತೇಲಬೇಕು ನೋವುಗಳ ಬದಿಗಿಟ್ಟು
ಮನವು ಭಾರವಾದರೆ ಹಾರುವುದಾದರೂ ಹೇಗೆ? ಯೋಚಿಸು

ಅಳುವುದಾದರೆ ಅತ್ತು ಬಿಡು
ಮಳೆಯೊಡನೆ ಯಾರಿಗೂ ಅನುಮಾನ ಬರುವುದಿಲ್ಲ
ನಿನ್ನ ನೋವು,ಮೋಡ ಎರಡು ಒಂದಾಗಿ ಕಡಲ ಸೇರಲಿ
ಮತ್ತೆ ಮೋಡ,ನೋವು ಕಟ್ಟಬೇಕಲ್ಲ

ಶುಭಾಷಯ


ಗೆಳೆಯ ನಿನಗೆ ಶುಭಾಷಯ
ಏನೆಂದು ಹರಸಲಿ?ಏನೆಂದು ಕೇಳಿಕೊಳ್ಳಲಿ?
ಗೆಳೆಯಾ ಗೆಳೆಯನಾಗೆಂದು ಕೇಳಿಕೊಳ್ಳಲೇ?
ಸಕಲ ಸೌಭಾಗ್ಯಗಳು ನಿನಗೆ ಸಿಗಲೆಂದು ಪ್ರಾರ್ಥಿಸಲೇ?

ಒಬ್ಬರಿಗೊಬ್ಬರು ಸಿಗುವುದು ಅಪರೂಪ ನಿಜ,
ಆದರೆ ನಿನ್ನ ನೆನಪು ಹೊಸ ಹುಮ್ಮಸ್ಸು ನೀಡುವುದು ಗೆಳೆಯ.

ಮರೆವುದು ಲೋಕ ಸಹಜ ನಿಜ,
ಆದರೆ ನಿನಗಾಗಿ ನನ್ನ ಮನಸು ಮಿಡಿಯುತ್ತದೆ ಗೆಳೆಯ.

ಆಸ್ತಿ,ಅಂತಸ್ತು,ಪ್ರತಿಷ್ಟೆ,ಅಧಿಕಾರ ಎಲ್ಲವೂ ಇದೆ ನಿಜ,
ಆದರೆ ಸ್ನೇಹಕ್ಕೆ ಇವಾವುದೂ ಬೇಡ ಗೆಳೆಯ.

ನಮ್ಮ ಚಿನ್ನದಂತಹ ದಿನಗಳು ಕಳೆದುಹೋಗಿವೆ ನಿಜ,
ಆದರೆ ನಮ್ಮ ನೆನಪುಗಳು ಇನ್ನೂ ಸತ್ತಿಲ್ಲ ಗೆಳೆಯ.

ಗೆಳೆತನ,ಸ್ನೇಹದ ಬಗ್ಗೆ ಹೇಳಿಕೊಳ್ಳುತ್ತೇವೆ ನಿಜ,
ಆದರೆ ಅದೇ ಗೆಳೆಯತನವನ್ನು ನಿಭಾಯಿಸಲು ಕಷ್ಟ ಗೆಳೆಯ.

ನಮ್ಮ ಗೆಳೆತನ ಅಮರವಾಗಲಿ
ನಿನಗೆ ಶುಭವಾಗಲಿ
ಎಂದಷ್ಟೇ ಆಶಿಸುತ್ತೇನೆ ಗೆಳೆಯ.

ಚಂದ್ರನೇ ಶುಭರಾತ್ರಿ


ಪ್ರಿಯನೇ, ಹೇಳು ನನಗೆ-

ಏಕೆ ನೀನು ಬಂದೆ
ನನ್ನೆಲ್ಲಾ ಹೆಬ್ಬಯಕೆಗಳೆನೆಲ್ಲಾ
ಅನಾಥವಾಗಿಸಿದ ಮೇಲೆ?

ನೀನು ಏಕೆ ಮುಖ ತೋರಿಸುವೆ
ನನ್ನೆಲ್ಲಾ ನಂಬಿಕೆಗಳು
ಕೊಚ್ಚಿಹೋದ ಮೇಲೆ?

ಏಕೆ ಜೇನಿನಂತ ಚಂದ್ರನೇ
ನೀನು ನನ್ನನ್ನು ಭೇಟಿಯಾಗುವೆ
ನನ್ನ ಅಂತ್ಯಸಂಸ್ಕಾರದ ಹಾಸಿಗೆಯ ಮೇಲೆ?

ಮತ್ತು ಹೇಳು-
ಏಕೆ ಸತ್ತವರು
ಸತ್ತೇ ಇರುತ್ತಾರೆ?

ಪ್ರೇರಣೆ: "Goodnight Moon" by - Ivan Granger
ಚಿತ್ರ ಕೃಪೆ: Google

ಬೀಗವಿಲ್ಲದ ಬಾಗಿಲು


ಈ ಮನೆಗೆ ಬಂದು ಬಹುದಿನಗಳು ಕಳೆದವು
ಬಂದಾಗಿನಿಂದ ಇಲ್ಲದ ಪ್ರಶ್ನೆ ಈಗೇಕೋ ಮನದಲ್ಲಿ ಮೊಡಿದೆ
ಈ ಮನೆಗೆ ಬಾಗಿಲಿದೆ ಆದರೆ ಬೀಗವಿಲ್ಲ
ಯಾವಾಗ ಬಂದೆನೋ ತಿಳಿದಿಲ್ಲ
ಏಕಾಗಿ ಬಂದೆನೋ ತಿಳಿದಿಲ್ಲ
ಬಂದು ಹೋಗುವ ಸಮಯವೂ ತಿಳಿದಿಲ್ಲ
ಎಲ್ಲವೂ ಆಶ್ಚರ್ಯ ತಂದಿದೆ
ಬಂದ ಉದ್ದೇಶ ಮರೆಯಾಗಿದೆ
ಇಲ್ಲ ಸಲ್ಲದ ನೆವಮಾತ್ರ ಮುಂದಿದೆ
ರಾತ್ರಿ-ಹಗಲು ಕಳೆದಂತೆ
ದಿನಗಳು ಕಳೆದುಹೋಗುತ್ತಿದೆ
ಬಂದ ಕೆಲಸ ಮಾತ್ರ ಮುಗಿದಿಲ್ಲ
ಯಾರು ಯಾವಾಗ ಕರೆವರೋ ತಿಳಿದಿಲ್ಲ
ಬೀಗವಿಲ್ಲದ ಬಾಗಿಲಿನ ಮನೆಯಲ್ಲಿ
ಏಕಾಂಗಿಯಾಗಿದ್ದೇನೆ;
ಯಾರಾದರೂ ಬಾಗಿಲ ತಟ್ಟುವರೆಂದು ಕಾಯುತ್ತಿದ್ದೇನೆ
ಯಾರಾದರೂ ಬಾಗಿಲ ತಟ್ಟಲಿ ಎಂದು ಪ್ರಾರ್ಥಿಸುತ್ತಿದ್ದೇನೆ
ನನ್ನ ಸರತಿಗಾಗಿ ಕಾಯುತ್ತಿದ್ದೇನೆ
ಬೀಗವಿಲ್ಲದ ಬಾಗಿಲ ಮನೆಯಲ್ಲಿ.

ಕಲ್ಲಾಗುವನಾ ಗೌತಮ?


ತ್ರೇತಾಯುಗದ ಪೂರ್ವದಲ್ಲಿ
ಗೌತಮ ಋಷಿ ಸಾಧಕನೆನಿಸಿದ್ದ;
ಸತಿ ಶಿರೋಮಣಿ ಅಹಲ್ಯೆಯ
ಬೇಕು-ಬೇಡಗಳ ಕಡೆಗಣಿಸಿದ್ದ;
ಅಹಲ್ಯೆ ಸುಂದರಿ;
ಮನದ ತಾರುಣ್ಯದ ಬಯಕೆಗಳೆಲ್ಲಾ
ಋಷಿಯ ಹೋಮ-ಹವನಗಳ ಹೊಗೆಯಲ್ಲಿ ಕಾಣೆಯಾಗಿತ್ತು;
ದೇಹದೊಳ ಬಯಕೆಯ ಕೆಂಡದ
ಬೇಗುದಿಗೆ ಬೇಯುತ್ತಿದ್ದಳವಳು;
ಗೌತಮನಲ್ಲಿ ಹೇಳಲಾದಳು;
ಹೆದರಿದಳು ಅವನ ಶಾಪಕ್ಕೆ;
ಅದಕ್ಕೆ ಬಚ್ಚಿಟ್ಟಳು ತನ್ನ ಮನದ ತಾಪ;
ಸೌಂದರ್ಯಕ್ಕೆ ಮಾರುಹೋಗಿದ್ದ ಇಂದ್ರ;
ಹೊಂಚುಹಾಕಿ ಕಾಯುತ್ತಿದ್ದ ಮಂದ್ರ;
ಅವಳ ತಾಪವು ಇವನನ್ನು ತಟ್ಟಿತೇ?
ಅವಳು ಬೇಯುತ್ತಿದ್ದಳು;
ಇವನು ಕಾಯುತ್ತಿದ್ದ;
ಕಾಲ ಗಹಗಹಿಸಿ ನಗುತ್ತಿತ್ತು;
ಆ ಕಾಲ ಬಂದೇ ಬಂತು;
ಗೌತಮನನ್ನು ಇಂದ್ರ ಯಾಮಾರಿಸಿದ;
ಬೆಳಗಿನ ಯಾಮದ ನಿಯತಿಗೆ ಒಳಪಡಿಸಿದ್ದ;
ಗೌತಮ ಸಾಧಕನಂತೆ ಹೆಂಡತಿಯ ಮರೆತ
ಸಾಧನೆಗೆ ಹೊರಟುನಿಂತ;
ಯಾಮಾರಿದ ಗೌತಮ;
ಯಾಮಾರಿಸಿದ್ದ ಇಂದ್ರ;
ವಂಚನೆಗೆ ಸಿಲುಕಿದಳು ಅಹಲ್ಯೆ;
ಎಲ್ಲವೂ ಮುಗಿದಿತ್ತು;
ಇಂದ್ರನ ಆಸೆ;
ಅಹಲ್ಯೆಯ ತಾಪ;
ಇಂದ್ರ ಗೆದ್ದ;
ಅಹಲ್ಯೆ ಸೋತಳು;
ಎಚ್ಚರಗೊಂಡ ಗೌತಮ;
ಎಲ್ಲೋ ತಪ್ಪಾಗಿದೆ;
ಯಾರೋ ಯಾಮಾರಿಸಿದರು;
ಅರಿವಾಯಿತು ಗೌತಮನಿಗೆ;
ಒಳಗಣ್ಣು ತೆರೆಯಿತು;
ನಾಚಿಕೆಯಾಯಿತು ತಪ್ಪಿನ ಅರಿವಾಗಿ;
ಮನವನ್ನು ಕಲ್ಲಾಗಿಸಿಕೊಂಡ
ತನ್ನ ತಪ್ಪನ್ನು ಲೋಕಕ್ಕೆ ಮರೆಯಾಗಿಸಿದ
ಕೊಟ್ಟ ಶಾಪ ಅಹಲ್ಯೆಗೆ ಕಲ್ಲಾಗೆಂದು;
ಎಲ್ಲಿ ಹೇಳಿಬಿಟ್ಟಾಳೋ ನಿಜವನೆಂದು;
ಜವಾಬ್ದಾರಿಯಿಂದ ವರ್ತಿಸಿದ ಗಂಡಂದಿರು
ಇನ್ನು ಏನು ತಾನೇ ಮಾಡಿಯಾರು?
ಗೌತಮ ಲೋಕಕ್ಕೆ ಉದಾಹರಣೆಯಾದ;
ಶತ-ಶತಮಾನಗಳು ಕಳೆದರೂ;
ಯುಗ-ಯುಗಗಳು ಕಳೆದರೂ;
ಇಂದೂ ಇದ್ದಾರೆ ತನ್ನವರ ಆಸೆ-ಆಕಾಂಕ್ಷೆಗಳ ತಿಳಿಯದ ಗೌತಮರು;
ಬೇಕು ಎಂದು ಹೇಳದೆ ಒಳಒಳಗೇ ಬೇಯುವ ಅಹಲ್ಯೆಯರು;
ಹೊಂಚಿಹಾಕಿ ಸಮಯಸಾಧಿಸುವ ಇಂದ್ರರು;
ಅಸಹಾಯರಾಗಿ ಶಾಪ ಕೊಡಲಾರದ ಗೌತಮರಿದ್ದಾರೆ;
ಕಲ್ಲಾಗುವ ಸರದಿ ಇಂದು ಗೌತಮರದ್ದು!
ಕಲ್ಲಾಗುವನಾ ಗೌತಮ?

ದೇವತೆ


ನಾನು ಹುಡುಕುತ್ತಿದ್ದೆ, ಪ್ರೀತಿ ಮತ್ತು ದೊರಕಿತು ನನ್ನ ಆತ್ಮ;
ನಿನ್ನಿಂದಲೇ, ನನ್ನ ಪ್ರೀತಿಯೇ, ನಾನು ಪರಿಪೂರ್ಣ;
ಹಾಗು ದೈವಿಕ ಪ್ರೀತಿ, ನನ್ನ ಹಾಗು ನಿನ್ನನ್ನು ಕಟ್ಟಿಹಾಕಿದೆ
ಹಾಗು ನನ್ನಲ್ಲಿ ಸದಾ ನೆನಪಿಸುತ್ತದೆ ದೈವಿಕತೆಯನ್ನು.

ನಿನ್ನ ಹೃದಯದಲ್ಲಿ ನಾನು ಕಂಡೆ,
ಪ್ರೀತಿ ಅದು ನನ್ನಲ್ಲಿರಲಿಲ್ಲ
ನಿನ್ನ ಸ್ಪರ್ಶ ಹಾಗು ನಿನ್ನ ಪರಿಮಳ
ದೇವಲೋಕದ ಬಾಗಿಲುಗಳನ್ನು ತೆರೆಸಿದೆ.

ನಿನ್ನಿಂದ ನನಗೆ ಅರಿವುಂಟಾಯಿತು
ನನ್ನಲ್ಲಿ ಏನಿಲ್ಲವೆಂದು
ನಾನು ಏನನ್ನು ಹುಡುಕಬೇಕೆಂದು

ನೀನು ಯಾವಾಗ ನನ್ನನ್ನು ನಿನ್ನ ತೋಳುಗಳಲ್ಲಿ ಅಪ್ಪುವೆಯೋ
ಮತ್ತು ಪ್ರೀತಿಯ ಅಮೃತವನ್ನು ಉಣಬಡಿಸುವೆಯೋ
ಆಗ ಅನಿಸುತ್ತದೆ ಸ್ವರ್ಗದಿಂದಲೇ ಅಮೃತವು ಮಳೆಗೆರೆಯುತ್ತಿದೆಯೆಂದು

ನನ್ನ ಆತ್ಮದ ವಾಸನೆ ಸತ್ವವನ್ನು ಕಳೆದುಕೊಂಡಿದೆ
ನಿನ್ನ ಕೀರ್ತಿ ಹಾಗು ಹೂವಿನಂತಹ ಮೃದುವಾದ ಹೃದಯಕಮಲಗಳ ಮುಂದೆ

ನನ್ನನ್ನು ಆಶ್ಚರ್ಯಚಕಿತನನ್ನಾಗಿಸುತ್ತದೆ
ನಿನ್ನ ಪ್ರೀತಿ ನನ್ನನ್ನು ಮುಕ್ತನನ್ನಾಗಿಸಿದೆ
ಹಾಗು ನನ್ನನ್ನು ಕಟ್ಟಿಹಾಕಿಲ್ಲ
ಪ್ರೀತಿಯ ದೇವತೆಯೇ
ನೀನು ಏನು?
ನಿನ್ನ ನಡೆ ನನ್ನ ಮನದ ಪರಿಧಿಯನ್ನು ದಾಟಿದೆ.

ಪ್ರೇರಣೆ:MYSTIC LADY.... by Siddharth Anand

ನನಗೆ ನಿನ್ನನ್ನು ಪ್ರೀತಿಸಿ ಗೊತ್ತಿಲ್ಲ ಆದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ.


ನನಗೆ ನಿನ್ನನ್ನು ಪ್ರೀತಿಸಿ ಗೊತ್ತಿಲ್ಲ ಆದರೂ ನಾನು ನಿನ್ನನ್ನು ಪ್ರೀತಿಸುತ್ತೇನೆ..
ನಾನು ಹೊರಳುತ್ತಿದ್ದೇನೆ ಪ್ರೀತಿಸುವ ಕಡೆಯಿಂದ ಪ್ರೀತಿಸಲಾರದ ಕಡೆಗೆ
ಕಾಯುವ ಕಡೆಯಿಂದ ಕಾಯಲಾರದ ಕಡೆಗೆ
ನನ್ನ ಹೃದಯ ಹೊರಳುತ್ತಿದೆ ಪ್ರೇಮದ ಕಡಲಿಂದ ಬೆಂಕಿಯ ಕೆನ್ನಾಲೆಗೆಯ ಕಡೆಗೆ.

ನಾನು ನಿನ್ನನ್ನು ಪ್ರೀತಿಸುತ್ತೇನೆ ಏಕೆಂದರೆ ನಿನ್ನನ್ನೇ ನಾನು ಪ್ರೀತಿಸುತ್ತೇನೆ;
ನಾನು ನಿನ್ನನ್ನು ದ್ವೇಷಿಸುತ್ತೇನೆ, ಹಾಗು ದ್ವೇಷಿಸುತ್ತಲ್ಲೇ ಇರುತ್ತೇನೆ,
ನಿನ್ನ ಪ್ರೀತಿಗೆ ಬಾಗುತ್ತೇನೆ, ಮತ್ತು ನನ್ನ ಬದಲಾಗುವ ಪ್ರೀತಿಯನ್ನು ಗಮನಿಸುತ್ತೇನೆ
ನಾನು ನಿನ್ನನು ನೋಡಲಾಗುವುದಿಲ್ಲ ಆದರೂ ನಿನ್ನನು ಪ್ರೀತಿಸುತ್ತೇನೆ ಕಣ್ಣುಮುಚ್ಚಿ.

ಬಹುಶ ಜನವರಿಯ ಬೆಳಕು ನನ್ನ ಹೃದಯವನ್ನು
ನುಂಗುವುದೇ ತನ್ನ ಕ್ರೂರ
ಬೆಳಕಿನಿಂದ,ನನ್ನ ಮನದ ನಿಜವಾದ ಶಾಂತಿಯನ್ನು ನಾಶಮಾಡಿ.

ಪ್ರೀತಿ,ಕದನ ಹಾಗು ದ್ವೇಷದ ಹೋರಾಟದ ಕಥೆಯಲ್ಲಿ ನಾನೇ ಸಾಯುವವನು,
ನಾನು ಒಬ್ಬನೇ ಒಬ್ಬ , ಮತ್ತು ಪ್ರೀತಿಗಾಗಿ ಸಾಯುವವನು ಏಕೆಂದರೆ ನಾನು ನಿನ್ನನು ಪ್ರೀತಿಸುತ್ತೇನೆ,
ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ.

ಪ್ರೇರಣೆ:"I Do Not Love You Except Because I Love You" by Pablo Neruda

ಶಿಶುಗೀತೆ- ಮಳೆಯೇ! ಮಳೆಯೇ! ಹೋಗಬೇಡ




ಮಳೆಯೇ! ಮಳೆಯೇ! ಹೋಗಬೇಡ
ನಾಳೆ ಬರುವೆ ಎನಬೇಡ
ನಿನ್ನಿಂದಲೇ ಮರಗಿಡಗಳು;
ನಿನ್ನಿಂದಲೇ ಪ್ರಾಣಿ-ಪಕ್ಷಿಗಳು;
ನಿನ್ನಿಂದಲೇ ನಾವುಗಳು;
ನಿನ್ನಿಂದಲೇ ನಾಳೆಗಳು;
ಮಳೆಯಲ್ಲಿ ಆಡುವುದು ನನಗಾಸೆ
ತಂಪನ್ನು ಸುರಿಸುವೆ
ಎಲ್ಲಿಂದಲೋ ನೀರುತರುವೆ
ಎಲ್ಲಿಗೋ ಹೊತ್ತೊಯ್ಯುವೆ
ಯಾರ ಕೆಲಸ ನೀಮಾಡುತಿರುವೆ?
ನೀ ಎಲ್ಲೂ ಹೋಗಬೇಡ
ನಾಳೆ ಬರುವೆ ಎನಬೇಡ.

ನಕ್ಕು ಬಿಡು


ನಗುತ್ತೇನೆ ಬಹಳಷ್ಟು ಬಾರಿ,
ನಗುವುದಕ್ಕೆ ಕಾರಣಬೇಕೆ?
ಹೌದು! ಕಾರಣಬೇಕು ನಗುವುದಕ್ಕೆ!
ಕಾರಣ ಸಣ್ಣದಿದ್ದರೂ ಸರಿ,
ಸ್ವಾಭಾವಿಕವಾದರೂ ಸರಿ,
ಅಸ್ವಾಭಾವಿಕವಾದರೂ ಸರಿ,
ಬೇರೆಯವರ ತಪ್ಪು ನಮಗೆ ನಗು ಬರಿಸುವುದು,
ಇಂತಹ ನಗು ಬೇರೆಯವರ ಅಪಹಾಸ್ಯ ಎಂಬ ವಿವೇಕ ಇಲ್ಲವಾಗಿದೆ.


ನಗಬೇಕಾದಾಗ ನಕ್ಕುಬಿಡು
ನಮ್ಮಮೊರ್ಖತನಕ್ಕೆ,
ನಮ್ಮ ಮೌಡ್ಯಕ್ಕೆ,
ನಮ್ಮ ದುರಾಸೆಗೆ,
ನಾಳೆ ನಮಗಾಗಿ ಇರುವುದೋ? ಇಲ್ಲವೋ?
ನಗುವುದಕ್ಕೆ ನಮಗೆಲ್ಲಾ ಬಿಡುವು ಬೇಕಿದೆ
ನಮ್ಮ ಆರೋಗ್ಯಕ್ಕೆ ನಗುವು ಬೇಕಿದೆ
"ನಕ್ಕರೆ ಅದೇ ಸ್ವರ್ಗ" ಎಂಬ ಮಾತು ಮರೆತಿದೆ.

ನಗುವುದಕ್ಕೆ ಕಾರಣ



ಕಡಿಮೆ ಜನರಿದ್ದಾರೆ,ತಮ್ಮ ನಗುವಿಗೆ ಕಾರಣ ಕೊಡುವವರು
ಅದೂ ಕ್ಷಣ ಮಾತ್ರವೂ ಅಥವಾ ಸ್ವಲ್ಪ ಸಮಯವೂ ಇರಬಹುದು.
ನಕ್ಕರೆ ಅದು ಸಿಹಿಯಾಗಿಯೊ ಮತ್ತು ಪ್ರಾಮಾಣಿಕವಾಗಿರಬೇಕು,
ಅಥವಾ ಬೇರೆಯವರು ಕ್ಷಣ ಮಾತ್ರ ನಗಲೂ ಇರಬಹುದು.

ನನ್ನ ಕಂಗಳಿಗೆ ಕಣ್ಣೀರು ಸುರಿಸುವ ಹವ್ಯಾಸ,
ಆದರೂ ಹಲವು ಸಂದರ್ಭಗಳಲ್ಲಿ ಅದು ಕೇಳಿಸಿಕೊಳ್ಳುತ್ತದೆ,
ಹೃದಯದಿಂದ ಒಂದು ಸುಮಧುರ ನಗುವಿಗೆ ಕಣ್ಣಲ್ಲಿ ಸುರಿವುದು ಕಣ್ಣೀರು.
ಕಣ್ಣೀರು ಹರಿದರೂ ಯಾರೂ ಇಲ್ಲ ನನ್ನ ಸ್ವಾಂತನ ಮಾಡಲು,
ಏಕೆಂದರೆ ತುಟಿಯಲ್ಲಿನ ಒಂದು ನಗುವು ಕೊಡುವುದು ಉಲ್ಲಾಸ ಪ್ರಿಯಾ.

ಪ್ರೇರಣೆ: " A Reason to Smile" by Rekha Nair

ಆದರ್ಶದ ಸಂಕೋಲೆ



ಅಳುತ್ತಲ್ಲೇ ನಿಂತಿದ್ದೆ,
ಅವನು ಹೋಗುವುದ ನೋಡುತ್ತಾ.
ಕಣ್ಣಲ್ಲಿ ನೀರು;
ಹೃದಯದಲ್ಲಿ ರಕ್ತ ಕಣ್ಣೀರು;
ಅಣ್ಣ-ಅತ್ತಿಗೆಯ ಹಿಂದೆ ಹೆಜ್ಜೆ ಹಾಕುತ್ತಾ
ಆದರ್ಶದ ಬೆನ್ನೇರಿ ನೆಡೆಯುತ್ತಿದ್ದ;
ಅರಮನೆಯ ಮಹಾಜನತೆ ಅವರ ಹಿಂದೆ,
ದುಃಖದ ಕಡಲು ಹರಿವಂತೆ;
ನನ್ನ ಮನದಲ್ಲೂ ಅವನಿಗಾಗಿ ಹರಿಯುತ್ತಿತ್ತು
ಕಣ್ಣೀರು ಕಡಲಾಗಿ ಯಾರಿಗೂ ಕಾಣದೇ;
ಬೇಡ,ಬೇಡ ಒಂಟಿಯಾಗಿ ಹೋಗಬೇಡ,
ನನ್ನ ಕೂಗು, ಆರ್ತನಾದ ಅವನಿಗೆ ಕೇಳಿಸಲೇಯಿಲ್ಲ;
”ಅಣ್ಣ" ನೆಂಬ ಆದರ್ಶಕ್ಕೆ ಕೊರಳ ಅರ್ಪಿಸಿದ್ದ;
ನನ್ನ ಪ್ರೀತಿ,ಪ್ರೇಮ,ಕಾಮ,ಭೋಗಗಳು ಅವನಿಗೆ ಬೇಕಿರಲಿಲ್ಲ;
ಹೊರಡುವ ಮುನ್ನದಿನದ ರಾತ್ರಿ,
ಕಾಡಿ,ಬೇಡಿ ಹೃದಯದಲ್ಲಿ ತುಂಬಿಕೊಂಡರೂ
ಅದು ಅವನಿಗೆ ಬಲವಂತದ ಮಾಘಸ್ನಾನ;
ಏನೇ ಆದರೂ ಅವನು ತನ್ನ ನಿರ್ಧಾರದಿಂದ ಹಿಂಜರಿಯಲಿಲ್ಲ;
ಅವನ ಅಣ್ಣನ ಪ್ರೀತಿ ಗಟ್ಟಿಯಾಗಿತ್ತು;
ಆದರೆ ನನ್ನ-ಅವನ ಪ್ರೀತಿ ಬಿರುಕುಬಿಟ್ಟಿತ್ತು;
ಅವನೋ ನಾರುಮಡಿಯನುಟ್ಟು ಅಣ್ಣನ ಹಿಂದೆ ಹೋದ;
ನಾನೂ ಅಷ್ಟೆ ನಾರುಮಡಿಯನುಟ್ಟು ಇಲ್ಲೇ ಉಳಿದೆ,
ಅತ್ತೆಯ ಸೇವೆಗೈಯುತ್ತಾ;
ಅರಮನೆಯೇ ಕಾಡಾಗಿತ್ತು ನನಗೆ ಅವನಿಲ್ಲದೇ;
ಮವದಲ್ಲಿ ಅವನ್ ಮೇಲೆ ದ್ವೇಷ ಬೀಡು ಬಿಡುತ್ತಿತ್ತು;
ನನಗೆ ಅವನಿಲ್ಲ;
ಅವನಿಗೆ ನಾನಿಲ್ಲ;
ಇದ್ದೂ ಇಲ್ಲದಂತಾಗುವ ಸರದಿ ನಮ್ಮಿಬ್ಬರದೂ;
ಆದರ್ಶಕ್ಕೆ ನಾವಿಬ್ಬರೂ ಬಲಿಪಶುಗಳಾದೆವು;
ಆದರ್ಶದ ಹೊನ್ನಶೂಲಕ್ಕೆ ನಮ್ಮ ದಾಂಪತ್ಯ ಚೂರು ಚೂರಾಗಿತ್ತು.

ಹೇಳದೇ ಓಡಿಹೋದದ್ದೇಕೆ?



ಕಳ್ಳನಂತೆ ಓಡಿಹೋದ
ಬಿಟ್ಟು ಓಡಿಹೋದ ಕಟ್ಟಿಕೊಂಡ ನನ್ನನು
ಒಂದು ಮಾತು ಹೇಳಲಾಗದೆ ಹೋದದ್ದೇಕೆ?
ನಾನು ಅವನಿಗೆ ತಕ್ಕವಳಲ್ಲವೇ?
ಲೋಕದಲ್ಲಿ ನನ್ನಂತಹವರು ಅನುಭವಿಸೋ ಕಷ್ಟಗಳು...
ಗಂಡಬಿಟ್ಟವಳೆಂದು ಹೀಗೆಳೆಯುವ ಪರಿ
ಸಾಕು ಸಾಕು ಉತ್ತರ ಕೊಡದೇ ಹೋದೆ
ನಾನು ನಿನ್ನ ಕ್ಷಮಿಸಲ್ಲ.

ರಾಜಕುಮಾರ ಅವನು
ಅವನ ಮನದನ್ನೆ ನಾನು
ಅಗಾಧ ರಾಜ್ಯ,ಕೋಶ,ಅಷ್ಟೈಶ್ವರ್ಯಗಳು
ಬಂಧು-ಬಳಗ,ಎರಡು ಮುದ್ದಾದ ಮಕ್ಕಳು
ಕೊರತೆ ಎಂಬುದು ಇರಲಿಲ್ಲ ಅವನಿಗೆ
ಸಾವು ಕಂಡ
ನೋವು ಕಂಡ
ಎದುರಿಸದೇ ನಲುಗಿದ
ಆ ರಾತ್ರಿ ಪಕ್ಕದಲ್ಲೇ ಮಲಗಿದ್ದೆ ನಾನು
ನೂರು ಕನಸುಗಳ ಕಂದಿದ್ದೆ ನವ ತರುಣಿಯಾಗಿ
ಕನಸು ನುಚ್ಚುನೂರಾಗುವುದೆಂದು ಎಣಿಸಿರಲಿಲ್ಲ
ಮೊದಲೇ ಗೊತ್ತಿದ್ದರೆ ನನ್ನ ಸೆರಗಿಗೆ ನಿನ್ನ ಕಟ್ಟಿಕೊಂಡುಬಿಡುತ್ತಿದ್ದೆ
ಹೇಳದೇ ಓಡಿಹೋದದ್ದೇಕೆ?
ಹೇಳು ಇನ್ನಾದರೂ....

ಶ್ರೀಮಂತಿಕೆ,ಸಕಲ ವೈಭೋಗಗಳೆಲ್ಲವೂ ಈ ಅರಮನೆಯಲ್ಲಿದೆ
ನನ್ನ ಜೊತೆ ಇರಬೇಕಾದ ನೀನೇ ಇಲ್ಲವಲ್ಲ!
ಸಕಲೈಶ್ವರ್ಯಗಳು ಕಸದಂತೆ ತೊರುತ್ತಿದೆ ನನಗೆ ನೀನಿಲ್ಲದೆ
ಯೌವ್ವನವಿದೆ ಈ ದೇಹಕ್ಕೆ
ಬಯಕೆಗಳಿವೆ ಯೌವ್ವನಕ್ಕೆ
ತೀರಿಸೋ ಅರಸನೇ ನೀನೇ ಇಲ್ಲ
ಯುದ್ಧದಲ್ಲಿ ಓಡಿಹೋಗೋ ರಣಹೇಡಿಯಂತೆ
ಸಂಸಾರದ ಸುಖ-ದುಃಖಗಳಿಗೆ ಎದೆಗೊಡದೆ ಓಡಿಹೋದೆಯಲ್ಲ
ನಾನು ನಿನ್ನ ಜೊತೆಯಿದ್ದೆ ಎಂಬುದನ್ನು ಏಕೆ ಮರೆತೆ?

ಅರಮನೆಯ ವೈಭೋಗಗಳಲ್ಲಿ ನನ್ನ ಬಿಟ್ಟುಹೋದೆ ಎಂಬ ಸಮಾಧಾನವೇ ನಿನಗೆ
ಅರಮನೆಯ ವೈಭೋಗಗಳಲ್ಲಿಯೊ ಏಕಾಂಗಿಯಾಗಿ ನಲುಗಿರುವೆ
ನಿನ್ನ ದೌರ್ಜನ್ಯಕ್ಕೆ ಸಾಕ್ಷಿಯಾಗಿ ನಿಂತಿರುವೆ
ಶತ-ಶತಮಾನಗಳೂ ಕಳೆದರೂ ದೌರ್ಜನ್ಯ,ಶೋಷಣೆ ತಪ್ಪಿಲ್ಲ
ಹೆಂಡತಿಯನ್ನು ಕಾಡಿಗೆ ಕಳುಹಿಸಿದರೂ....
ಹೆಂಡತಿಯನ್ನು ಅರಮನೆಯಲ್ಲಿ ಬಿಟ್ಟು ಓಡಿಹೋದರೂ.....
ಶೋಷಣೆ ಶೋಷಣೆಯೇ..........................................

ಬಳಸದ ದಾರಿ



ರಸ್ತೆ ಇಬ್ಬಾಗವಾಗಿತ್ತು ಹಣ್ಣೆಲೆಯ ಕಾಡಿನಲ್ಲಿ,
ಕ್ಷಮಿಸಿ ನಾನು ಎರಡೂ ರಸ್ತೆಗಳನ್ನು ಬಳಸಲಿಲ್ಲ
ಏಕಾಂಗಿ ಸಂಚಾರಿಯಾಗಿ,ನಿಂತೆ
ಮತ್ತು ರಸ್ತೆಯನ್ನು ಕಣ್ಣಳತೆಯವರೆಗೂ ನೋಟ ಬೀರಿದೆ;
ರಸ್ತೆಯ ಅಂಕು ಡೊಂಕು ಕಾಣುವವರೆಗೂ;
ಆಮೇಲೆ ಬೇರೆ ರಸ್ತೆಯ ಕಡೆಗೆ ಹೊರಳಿದೆ
ಆ ರಸ್ತೆಯ ಆಯ್ಕೆಯ ನಿರ್ಧಾರ ಸಮಂಜಸವಾಗಿತ್ತು
ರಸ್ತೆಯಲ್ಲಿ ಹುಲ್ಲು ತುಂಬಿತ್ತು ಮತ್ತು ತುಳಿತಕ್ಕೆ ಒಳಗಾಗ ಬೇಕಿತ್ತು
ಆ ರಸ್ತೆಯಲ್ಲಿ ಜನ ಓಡಾಡಿದ್ದೇ ಆದರೆ
ಅದು ಬೇರೆ ರಸ್ತೆಗಳಷ್ಟೇ ತುಳಿತಕ್ಕೆ ಒಳಗಾಗಬೇಕಿತ್ತು.
ಮತ್ತು ಎರಡೂ ರಸ್ತೆಗಳು ಬೆಳಗಿನ ಬೆಳಕಿಗೆ ಸಮಾನವಾಗಿ ತೆರೆದುಕೊಳ್ಳುತ್ತಿತ್ತು
ಬಿದ್ದ ಎಲೆಗಳು ಕಪ್ಪಾಗಿಲ್ಲ , ಅದರ ಮೇಲೆ ಯಾರೂ ನಡೆದಿಲ್ಲ.
ಮತ್ತೆ ಗೊತ್ತಿದ್ದರೂ ರಸ್ತೆಗಳು ಮತ್ತೊಂದು ರಸ್ತೆಗೆ ತೆರೆದುಕೊಳ್ಳುತ್ತದೆ,
ನನಗೆ ಅನುಮಾನ ಕಾಡಿತು ಮತ್ತೆ ನಾನು ವಾಪಸ್ಸಾಗುವೆನೇ?.
ನಾನು ಹೇಳುತ್ತಿದ್ದೇನೆ ನಿಟ್ಟುಸಿರನ್ನು ಬಿಟ್ಟು
ಶತ-ಶತಮಾನಗಳಿಂದ ನಡೆದು ಬಂದಿದ್ದನ್ನು;
ಕಾಡಿನಲ್ಲಿ ರಸ್ತೆಗಳು ಇಬ್ಬಾಗವಾಗಿದ್ದವು, ಮತ್ತು ನಾನು...
ನಾನು ಕಡಿಮೆ ಬಳಸಿದ ದಾರಿಯನ್ನು ಹಿಡಿದೆ.
ಮತ್ತು ಅದು ಎತ್ತಿ ಹಿಡಿದಿತ್ತು ಬೇರೆಯವರಿಗೂ ನನಗೂ ಇರುವ ವ್ಯತ್ಯಾಸವನ್ನು.

ಪ್ರೇರಣೆ: " Road not Taken" by Robert Frost

ಜೀವನ ಒಂದು ಉಡುಗೊರೆ




ಇಂದು ನಿಷ್ಠುರ ಮಾತು ಹೇಳುವ ಮುನ್ನ-
ಯೋಚಿಸು ಮಾತನಾಡಲು ಅಶಕ್ತರಾದವರ ಬಗ್ಗೆ.

ಊಟದ ರುಚಿಯ ಬಗ್ಗೆ ದೂರುವ ಮುನ್ನ-
ಯೋಚಿಸು ಒಂದೊತ್ತಿನ ಊಟಕ್ಕೂ ಇಲ್ಲದವರ.

ಹೆಂಡತಿ ಅಥವಾ ಗಂಡನ ದೂರುವ ಮುನ್ನ-
ಯೋಚಿಸು ಜೊತೆ ಬೇಕೆಂದು ದೇವರಲ್ಲಿ ಮೊರೆಯಿಡುವವರ.

ಇಂದು ಜೀವನದ ಬಗ್ಗೆ ದೂರುವ ಮುನ್ನ-
ಯೋಚಿಸು ಅಕಾಲಿಕವಾಗಿ ನಮ್ಮನ್ನು ಅಗಲಿದವರ.

ಗಾಡಿಯಲ್ಲಿ ದೂರ ಹೋಗಬೇಕೆಂದು ಗೊಣಗುವ ಮುನ್ನ-
ಯೋಚಿಸು ಮತ್ತೆ ಮತ್ತೆ ಬರಿಗಾಲಲ್ಲಿ ನಡೆಯುವವರ.

ಮತ್ತೆ ನಿನಗೆ ದಣಿವಾದಾಗ ಹಾಗು ನಿನ್ನ ಕೆಲಸದ ಬಗ್ಗೆ ದೂರಿದಾಗ-
ಯೋಚಿಸು ಕೆಲಸವಿಲ್ಲದವರ,ವಿಕಲಚೇತನರ ಮತ್ತು ನಿನ್ನ ಜಾಗದಲ್ಲಿರಬೇಕಾದವರ.

ನಿಮ್ಮ ಮನಸ್ಸಿಗೆ ನೋವಾಗಿ ಭಾವನೆಗಳು ನಿಮ್ಮನ್ನು ಕಂಗೆಡಿಸಿದರೆ
ನಿಮ್ಮ ಮುಖದಲ್ಲಿ ನಗು ಹೊಮ್ಮಲಿ ಮತ್ತು ಯೋಚಿಸು
ನೀವಿನ್ನೂ ಜೀವಂತ ಮತ್ತು ಜಂಗಮ.

ಪ್ರೇರಣೆ: ಅರ್ಧ ಮನುಷ್ಯ-ಅರ್ಧ ಬೆಲೆಯ ಅಂಗಡಿ- ’ಪೆಂಗ್ ಶುಲಿನ್’ ನ ನೈಜ ಸತ್ಯಕಥೆ

ಕಾಯುವ ಸುಖ


ದಾರಿ ಕಾಯುತ್ತಾ ಕುಳಿತ್ತಿದ್ದೇನೆ
ದಾರಿಯ ಮಧ್ಯದಲ್ಲಿ ನಿನಗಾಗಿ
ನೀನು ಬರುವೆಯೆಂದು-ಬೇಗ ಬಾರೆಂದು
ಸುತ್ತಲೂ ತಿಳಿನೀಲಿಯಾಕಾಶ
ಮನದಲ್ಲಿ ನೂರು ಯೋಚನೆಗಳು,ಯಾಚನೆಗಳು;
ಈ ಕ್ಷಣದಲ್ಲಿ ನೀನು ನನ್ನ ಮುಂದಿದ್ದರೆ ಎಂಬ ಆಲೋಚನೆ;
ಎಲ್ಲವೂ ಮನದಲ್ಲಿ ಪುಳಕ ನೀನು ಬರುವೆಯೆಂದು
ತಂಗಾಳಿಯ ಸೌರಭ,ಸಂಜೆಯ ಸೂರ್ಯಕಿರಣಗಳು
ಕಾತರತೆಯ ಜೊತೆಗೆ ವಿರಹವನ್ನೂ ಹೆಚ್ಚಿಸಿದೆ
ಕಾತರತೆಯ ವಿರಹದಲ್ಲಿ ಬೇಯುತ್ತಾ ನಿನಗಾಗಿ ಕಾಯುತ್ತಿದ್ದೇನೆ
ಕಾತರತೆಯಲ್ಲಿಯೇ ನನ್ನ ಸುಖವನ್ನು ಕಾಣುತ್ತಿದ್ದೇನೆ
ಜೀವನ ಮೊದಲಿಗಿಂತಲೂ ಆಸಕ್ತಿದಾಯವಾಗಿದೆ-ಕಾತರತೆಯಿಂದ;
ಕಾಯುವ ಮನಸ್ಥಿತಿಯಲ್ಲಿರುವ ಸುಖ ಕಾಯುವವನಿಗೇ ಗೊತ್ತು;

ಬೌದ್ದಿಕ ದಾಸ್ಯದಿಂದ ಸ್ವಾತಂತ್ರದೆಡೆಗೆ........



ಒಂದು ಸಾಮ್ರಾಜ್ಯ ಸ್ಥಾಪನೆಗೆ
ಕಾರಣರು ಮೊರು ಜನ
ಧರ್ಮಗುರು;
ಜನ/ಮೊಲ ನಿವಾಸಿಗಳು/ಎಲ್ಲಿಂದಲೋ ಬಂದವರು/ಭಕ್ಷಕರು;
ಆಡಳಿತಗಾರರು/ರಾಜಕಾರಣಿಗಳು/so called ರಕ್ಷಕರು;
ತಮ್ಮ ಮೊಗಿನ ನೇರಕ್ಕೆ ಎಲ್ಲವನ್ನೂ ಬದಲಾಯಿಸುವರು;
ಅನನ್ಯತೆಯ,ವೈವಿಧತೆಯ ಹೊಸಕುವರು;
ಅದ್ಯಾವುದೋ ಧರ್ಮಗ್ರಂಥ;
ಕೊರಳಲ್ಲಿ ಧರ್ಮಚಿನ್ಹೆ-ತೂಗುಗತ್ತಿ;
ಶುಭ್ರ ಬಿಳಿವಸ್ತ್ರ ಮುಚ್ಚಿದ ದೇಹ;
ಬಟ್ಟೆಯ ಹಿಂದೆ ಕೆರಳಿದ ಕಪ್ಪು ಹೃದಯ;
ಕಾಯುತ್ತಿದೆ ಹೊಸಕಲು;
ರುಧಿರ ಪ್ರಿಯ-ದಾಹ ಹೆಚ್ಚಾಗಿದೆ;
ಸ್ವಂತಿಕೆಯ ಲೇವಡಿ,ಅಪಹಾಸ್ಯ;
ಹೊತ್ತಿಸುವುದು ನಮ್ಮಲ್ಲಿಯೇ ಕೀಳರಿಮೆ;
ನಮ್ಮನ್ನು ನಾವು ಸಾಯಿಸಿಕೊಳ್ಳುವ ಪ್ರಕ್ರಿಯೆಗೆ ತಳ್ಳುವರು;
ನಮ್ಮತನದ ಮೇಲೆ ನಾವೇ ದೌರ್ಜನ್ಯಮಾಡಿಕೊಳ್ಳುವೆವು;
ನಮ್ಮ ಭಾಷೆ;
ನಮ್ಮ ಸಂಸ್ಕೃತಿ;
ನಮ್ಮ ಧರ್ಮ;
ನಮ್ಮ ಆಚರಣೆ;
ನಮ್ಮ ನಂಬಿಕೆ;
ಎಲ್ಲವೂ ಕಸವಾಗುವುದು;
ಒಂದು ಜನರ ಸಂಸ್ಕೃತಿಯ ನಾವೇ ಹೊಸಕುವೆವು
ಯಾರದೋ ಮಾತುಕೇಳಿ;
ನಮ್ಮದಲ್ಲದ ಭಾಷೆ;
ನಮ್ಮದಲ್ಲದ ಸಂಸ್ಕೃತಿ;
ನಮ್ಮದಲ್ಲದ ಧರ್ಮ;
ನಮ್ಮದಲ್ಲದ ಆಚರಣೆ,ನಂಬಿಕೆಗಳಿಗೆ
ನಮ್ಮನ್ನು ನಾವು ಮಾರಿಕೊಳ್ಳುವೆವು
ನಾವೇ ಪರಕೀಯರಿಗೆ ಕೊರಳಪಟ್ಟಿಕೊಡುವೆವು
ನಮ್ಮನು ನಾವೇ ಗುಲಾಮಗಿರಿಗೆ ಒಪ್ಪಿಸಿಕೊಳ್ಳುವೆವು
ನಮ್ಮ ತಾಯಿ ನಮ್ಮ ಈ ಹೀನಾಯ ಸ್ಥಿತಿ ನೋಡಿ ದುಃಖಿಸುವಳು
ನಾವು ಮಾತ್ರ ಅಭಿವೃದ್ಧಿಹೊಂದಿದೆವೆಂದು ನಲಿಯುವೆವು
ನಮ್ಮದಲ್ಲದ ನಾಡಿನಲ್ಲಿ
ನಮ್ಮ ಹಿರಿಕರ ಆತ್ಮಗಳು
ದುಃಖಿಸುತ್ತಿವೆ ನಮ್ಮ ಪರಿಸ್ಥಿತಿಯ ಕಂಡು
ನಾವು ಮಾತ್ರ ನಗುತ್ತಿದ್ದೇವೆ ನಮ್ಮದೆಲ್ಲವನ್ನೂ ಕಳೆದುಕೊಂಡು||

"ಗೂಗಿ ವಾ ಥಿ ಆಂಗೋ" ನನ್ನು ನೆನೆಯುತ್ತಾ .....

"ನಾನು ನಿನ್ನನ್ನು ಪ್ರೀತಿಸುತ್ತೇನೆ..."


ನಿನಗಾಗ ೫ ವರ್ಷ, ನಾನು ನಿನಗೆ ಹೇಳಿದೆ " ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಹೇಳಿದೆ "ಹಾಗೆಂದರೇನು?"

ನಿನಗಾಗ ೧೫ ವರ್ಷ, ನಾನು ನಿನಗೆ ಹೇಳಿದೆ" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಿನ್ನ ಕೆನ್ನೆ ಕೆಂಪೇರಿತು. ನೀನು ನಗುತ್ತಾ ,ಕೆಳಗೆ ನೆಲವನ್ನು ನೋಡುತ್ತಿದೆ ಕಾಲಲ್ಲಿ ಕೆರೆಯುತ್ತಾ...."

ನಿನಗಾಗ ೨೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನಿನ್ನ ತಲೆಯನ್ನ ನನ್ನ ಹೆಗಲ ಮೇಲಿಟ್ಟೆ ಮತ್ತು ನನ್ನ ಕೈಯನ್ನು ಹಿಡಿದೆ.. ನಿನ್ನಲ್ಲಿ ಭಯ ಆವರಿಸಿತ್ತು ನಾನು ಮರೆಯಾಗುವೆನೇನೋ ಎಂದು.

ನಿನಗಾಗ ೨೫ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಬೆಳಗಿನ ತಿಂಡಿ ತಯಾರುಮಾಡಿ ನನಗೆ ಬಡಿಸುತ್ತಾ ನನ್ನ ಹಣೆಗೆ ಮುತ್ತಿಡುತ್ತಾ ಹೇಳಿದೆ" ನೀವು ಬೇಗ ಏಳಿ,ತಡವಾಗುತ್ತಿದೆ..."

ನಿನಗಾಗ ೩೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಹೇಳಿದೆ" ನೀವು ನಿಜವಾಗಿಲೂ ನನ್ನ ಪ್ರೀತಿಸುತ್ತಿದ್ದರೆ, ದಯವಿಟ್ಟು ಆಫೀಸಿನಿಂದ ಮನೆಗೆ ಬೇಗ ಬನ್ನಿ..."

ನಿನಗಾಗ ೪೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ಮನೆಯ ಊಟದ ಟೇಬಲನ್ನು ಸ್ವಚ್ಛಗೊಳಿಸುತ್ತಿದ್ದೆ ಮತ್ತು ಹೇಳಿದೆ " ಆಯಿತು ನನ್ನವರೇ!, ಈಗ ಸಮಯವಾಗಿದೆ ಮಕ್ಕಳಿಗೆ ಓದಿನಲ್ಲಿ ಸಹಾಯ ಮಾಡಲು.."

ನಿನಗಾಗ ೫೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನಿಟ್ಟ್ ಮಾಡುತ್ತಿದ್ದೆ ಹಾಗು ನನ್ನನು ನೋಡಿ ನಕ್ಕೆ....

ನಿನಗಾಗ ೬೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನೀನು ನನ್ನನ್ನು ನೋಡಿ ನಕ್ಕೆ...

ನಿನಗಾಗ ೭೦ ವರ್ಷ, ನಾನು ನಿನಗೆ ಹೇಳಿದೆ"" ನಾನು ನಿನ್ನನ್ನು ಪ್ರೀತಿಸುತ್ತೇನೆ..."
ನಾವು ಕುಳಿತ್ತಿದ್ದೆವು ಕುರ್ಚಿಯ ಮೇಲೆ ನಮ್ಮ ಕನ್ನಡಕಗಳನ್ನು ಧರಿಸಿ. ನಾನು ನೀನು ಬರೆದ ೫೦ ವರ್ಷ ಹಿಂದೆ ಬರೆದ ಪ್ರೇಮ ಪತ್ರವನ್ನು ಓದುತ್ತಿದ್ದೆ, ನಮ್ಮಿಬ್ಬರ ಕೈಗಳು ಜೊತೆಯಾಗಿದ್ದವು...

ನಿನಗಾಗ ೮೦ ವರ್ಷ, ನೀನು ನನಗೆ ಹೇಳಿದೆ"" ನೀನು ನಿನ್ನನ್ನು ಪ್ರೀತಿಸುತ್ತೇನೆ ಎಂದು..."
ನಾನೇನೂ ಹೇಳಲಾಗಲಿಲ್ಲ ಆದರೆ ಅಳುತ್ತಿದ್ದೆ.

ಸೂಚನೆ: Face book ನಲ್ಲಿ ಬಂದಿದ್ದನ್ನು ಕನ್ನಡೀಕರಿಸಿದ್ದೇನೆ.

ಬಾ ನನ್ನ ಕವಿತಾ

ಬಾ ನನ್ನ ಕವಿತಾ
ಎಲ್ಲೂ ಹೋಗದೇ ನನ್ನಲ್ಲೇ ನೆಲೆಗೊಳ್ಳು ನಲಿಯುತಾ
ಬಾ ನನ್ನ ಕವಿತಾ||

ಇಲ್ಲೇ ಇದ್ದವಳು,ಇಲ್ಲೇ ಇರುವವಳು
ಕಣ್ಣು ತೆರೆದರೆ ಮಾಯವಾಗುವವಳು
ನನ್ನ ಪೆದ್ದುತನಕ್ಕೆ ನಸು ನಗುವವಳು
ಬಿಡದೇ ಸತಾಯಿಸುವ ಕಳ್ಳ ಸವಿತಾ||

ಮರೆತು ಹೋದಂತೆ ನಟಿಸಿ
ಯಾವುದನ್ನೂ ಮರೆಯದೆ ಎಲ್ಲವನ್ನೂ ಎಣಿಸಿ
ಯಾವುದಕ್ಕೂ ಜಗ್ಗದೆ ಮನದ ಶಕ್ತಿಯ ಗುಣಿಸಿ
ಸದಾ ಚೈತನ್ಯವ ಕೊಡುವ ಸವಿತಾ||

ಮನವು ನೋವಿಗೆ ಕುಗ್ಗಿದಾಗ
ಯಶಸ್ಸಿಗೆ ತಲೆ ತಿರುಗಿದಾಗ
ನಮ್ಮ ತಪ್ಪುಗಳು ಚಿಂತೆಯ ತಂದಾಗ
ಮನವ ಕುಗ್ಗಿಸದೇ,ಶಕ್ತಿಯ ತುಂಬುವ ಸವಿತಾ||

ಬಾ ನನ್ನ ಕವಿತಾ
ಏರು ಪೇರಿನ ಗಾಯನಾ
ಕೊನೆ ಮೊದಲಿಲ್ಲದ ಜೀವನಾ||

’ಹೆಂಡತಿಯೇ ಪರಮಾಪ್ತ ಗೆಳೆಯ’

ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳು
ಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||

ಮಾತು ಮಾತುಗಳು ಮಧುರಗೊಂಡಿವೆ
ನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||

ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬಿವೆ
ಹಳೆಯ ಅನುಭವ ಜೀವನಕ್ಕೆ ಶಕ್ತಿ,ದಾರಿದೀಪವಾಗಿದೆ||

ಕೊಂಡಿಗಳು ಹಲವು ಕಳಚಿಕೊಂಡಿವೆ
ಗೆಳೆತನಕ್ಕೆ ನಂಜು,ಅಪಾರ್ಥದ ಪರದೆ ಸತ್ಯವ ಮರೆಮಾಚಿದೆ||

ಜೀವನದ ಗಾಡಿ ನಿಲ್ಲದೇ ಸಾಗುತಿದೆ
ಏನೇ ಬರಲಿ ನಮ್ಮ ಸಂಸಾರದ ಗಾಡಿ ನೆಮ್ಮದಿ,ಶಾಂತಿ ಕದಡದೇ ಸಾಗಿದೆ||

ಯಾರೋ ಹೇಳಿದ ಮಾತು ನೆನೆಪಾಗುತ್ತಿದೆ
’ಹೆಂಡತಿಯೇ ಪರಮಾಪ್ತ ಗೆಳೆಯ’ಎಂಬ ಮಾತು ನಿಜವೆನಿಸುತ್ತಿದೆ||

ಕತ್ತಲು-ಬೆಳಕುಗಳ ಓಡಾಟ

ಒಬ್ಬಂಟಿಯಾಗಿ ನಡೆದು ದಣಿವಾರಿಸಿಕೊಳ್ಳಲು
ಮರದ ಕೆಳಗೆ ಕುಳಿತೆ,ಸಂಜೆಯಾಕಾಶವ ದಿಟ್ಟಿಸುತ್ತಾ
ಹಕ್ಕಿಗಳ ಚಿಲಿಪಿಲಿ ಸದ್ದು,
ಜಾರುತ್ತಿರುವ ಸೂರ್ಯನ ಕಿರಣಗಳಿಗೆ ಬೇಡಿಕೆಯಿಡುತ್ತಾ
ಪ್ರಚೋದಿಸು ಪ್ರಚೋದಿಸು
ನನ್ನ ಮನದ ಭಾವಗಳ
ಮನದ ಸಂಕೀರ್ಣತೆಗಳ ಹೊಡೆದುಹಾಕಿ
ಮನದ ದುಗುಡಗಳ ಹೊಸಕಿಹಾಕಿ
ಹೊಸತನಕ್ಕೆ ಓಂಕಾರ ಹಾಕು ಬಾರೆಂದು ಪ್ರಾರ್ಥಿಸುತ್ತೇನೆ
ಕತ್ತಲು ಕವಿಯುತ್ತಿದ್ದಂತೆ
ಹಕ್ಕಿಗಳ ಚಿಲಿಪಿಲಿ ಎಲ್ಲವೂ ಮಂಗಮಾಯ
ಮನದಲ್ಲಿ ಗೊಂದಲ ಇಮ್ಮಡಿಯಾಗಿದೆ
ಮನದಲ್ಲಿ ಪ್ರಾರ್ಥನೆಯ ಗುಂಗು ತಿಳಿಯಾಗುತ್ತಿದೆ
ಮನೋವಿಕಾರ ತೀವ್ರವಾಗತೊಡಗಿದೆ
ನಡೆದ ದಣಿವು ತಣ್ಣಗಾಗಿದ್ದರೂ
ಹಣೆಯ ಮೇಲೆಲ್ಲಾ ಬೆವರಿನ ತೋರಣ
ತುಂತುರು ಮಳೆಯ ಹನಿಯಂತೆ ಜಾರತೊಡಗಿತು
ಎದುರಿಸಲಾಗದೆ,ತಡೆಯಲಾಗದೆ
ಆ ಕತ್ತಲಿನ ಸಂಕೋಲೆಯ ಬಿಡಿಸಿಕೊಳ್ಳಲು
ಬೆಳಕಿನತ್ತ ಓಡುತ್ತಿದ್ದೇನೆ
ಬೆಳಕಿನತ್ತ ಓಡುತ್ತಿದ್ದೇನೆ, ನಿಲ್ಲದೆ,ನಿಲ್ಲದೆ.

ಅಸಹಾಯಕತೆ

ಒಂದು ವರ್ಷದಿಂದ ಎಡಬಿಡದೆ ಹೊಡೆದಾಡುತ್ತಿದ್ದೇನೆ
ನನ್ನ ಸ್ವಾಭಿಮಾನಕ್ಕೆ ಹೊಡೆತ ಬಿದ್ದ ದಿನದಿಂದ ಇಂದಿನವರೆಗೂ
ಸತತವಾಗಿ ಮೌನ ಕದನ ನನ್ನಲ್ಲೇ ನಡೆಯುತ್ತಿದೆ||

ಮಾಡಿದ ಓಳ್ಳೆಯ ಕೆಲಸ ಗೌರವ ತಾರದೆ
ಇದ್ದ ಸ್ವಾಭಿಮಾನವನ್ನೂ ನಾಶಮಾಡಿದೆ
ಮನದ ತುಂಬೆಲ್ಲಾ ಕತ್ತಲು ಆವರಿಸದಂತಿದೆ, ಬೆಳಕು ಕಾಣದೆ||

ಒಂಟಿಯಾಗಿ ಹಿಮದ ಕೊರೆಯುವ ನೆಲದಲ್ಲಿ
ಬೆವೆತು ನಡೆಯುತ್ತಿದ್ದೇನೆ ದಾರಿ ಕಾಣದೆ
ಮುಂದೆ ಹೋದವರು ನಗುತ್ತಿದ್ದಾರೆ ನನ್ನ ಅಸಹಾಯಕತೆಯ ಕಂಡು||

ಕಂಡ ಕಂಡವರ ಮೇಲೆ ಗೂಳಿಯಂತೆ ನುಗ್ಗಬೇಕೆನಿಸುತ್ತದೆ
ಆದರೆ ಆತ್ಮಗೌರವ ಅಡ್ಡ ಬರುತ್ತದೆ
ಎಲ್ಲರನ್ನೂ ಬಿಟ್ಟುಬಿಡಬೇಕೆನಿಸುತ್ತದೆ,ಬಿಡಲಾಗದು ತಿಳಿದಿದೆ||

ಕಾಲ ಬುದ್ದಿ ಕಲಿಸಬೇಕೆಂದು ಬಯಸುತ್ತೇನೆ
ಅದು ನನಗೂ ಹಾಗು ನನ್ನನ್ನು ಹಿಂಸಿಸುವರೆಗೂ
ನನ್ನ ಅಸಹಾಯಕತೆ ನನಗೆ ಪಾಠಕಲಿಸುತ್ತದೆ,ಅದಕ್ಕೆ ಕಾತುರನಾಗಿದ್ದೇನೆ||

ನಿರ್ಣಯ

ಒಮ್ಮೊಮ್ಮೆ ಏನೂ ಕಾಣದಾಗುತ್ತದೆ
ತಲೆಯಲ್ಲಿ ಶೂನ್ಯತೆ ಹೊಕ್ಕು ಖಿನ್ನತೆಗೆ ದೂಡುತ್ತದೆ
ಏಕೆ? ಏನು? ಒಂದೂ ಗೊತ್ತಾಗುವುದಿಲ್ಲ
ಹೊರಬರುವುದು ಕಷ್ಟವಾದರೂ
ಹೊರಬರಲೇ ಬೇಕಲ್ಲ!
ಬಿಡಿಸಿಕೊಳ್ಳಲಾಗದ ಈ ಯಾಂತ್ರಿಕತೆ
ಪ್ರತಿಯೊಂದರಲ್ಲೂ ಬೇಸರ ತರಿಸುತ್ತಿದೆ
ಹೊಸತನ ಬಯಸುತ್ತಿದ್ದೇನೆ
ಕಣ್ಣಿದ್ದೂ ಕುರುಡನಾಗಿದ್ದೇನೆ
ಮುಂದಿನ ದಾರಿ ಮಾತ್ರ ಕಾಣದಾಗಿದೆ
ದೀಪಾವಳಿ ಮುಗಿದಿದೆ
ಮನದಲ್ಲಿ ಮಾತ್ರ ಅರಿವಿನ ದೀಪ ಮೊಡಲಿಲ್ಲ
ಮನಕ್ಕೆ ಸಂತೋಷ ಎಲ್ಲಿಂದ ತರಲಿ
ಪೆಟ್ರೋಲ್,ಅನಿಲಗಳ ನಿತ್ಯಬಳಸುವ ದಿನಸಿಗಳ ಬೆಲೆಗಳು ಗಗನಕ್ಕೇರಿವೆ
ಶಾಸಕ,ಸಂಸದರ ಹಗರಣಗಳು ಅಸಹ್ಯಮೊಡಿಸುತ್ತಿದೆ
ರಾಜಕೀಯ ಬೇಸರಿಕೆ ಮೊಡಿಸುತ್ತಿದೆ
ಸಾಹಿತಿಗಳ ಗುಂಪುಗಾರಿಕೆ ಉಸಿರುಗಟ್ಟಿಸುತ್ತಿದೆ
ಆಫೀಸಿನಲ್ಲೋ ಚಮಚ,ಬಕೆಟುಗಳದ್ದೇ ಸದ್ದು
ಮೇಲಕ್ಕೇರಲಾಗದೆ,
ಕೆಳಗಿಯಲಾಗದೆ,
ಅತಂತ್ರ ಸ್ಥಿತಿಯಲ್ಲಿ ಬಳಲುತ್ತಿದ್ದೇನೆ
ಸಂತೋಷ,ಅಣ್ಣಾ ಮಾತ್ರ ಆಶಾಕಿರಣವಾಗಿದ್ದಾರೆ
ಮುಂದೆ ಹೋಗಲೇಬೇಕು
ಕಣ್ಣುಮುಚ್ಚಾದರೂ ಸರಿ ಕಾಲದೂಡುತ್ತೇನೆ
ಆ ಸರಿಯಾದ ಕಾಲಕ್ಕೆ, ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತೇನೆ

ಪಟಾಕಿಯ ಸದ್ದಡಗಿದ ಮೇಲೆ.....


ದೀಪಾವಳೀ ಎಂದೊಡನೆ ಎಲ್ಲೆಲ್ಲೂ ಬೆಳಕು
ಪಟಾಕಿಯ ಸದ್ದು, ಪಟಾಕಿಯ ಸುಟ್ಟ ಹೊಗೆ ಕೊಳಕು
ನರಕ ಚತುರ್ದಶಿ, ಅಮಾವಾಸ್ಯೆ,ಬಲಿಪಾಡ್ಯಮಿ ಮೊರು ದಿವಸ
ಶಿವಕಾಶಿಯ ಕೊಳೆತ ಕಾಗದವೆಲ್ಲಾ ಬೆಂಕಿಗಾಹುತಿಯ ದಿವಸ||

ದೀಪಾವಳಿ ಮನದ ಕೊಳಕನ್ನು ದೂರಮಾಡುವ ದಿವಸ
ಎಷ್ಟು ಜನ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡರೋ ತಿಳಿಯೆ
ಮನದ ಕತ್ತಲೆ ಪಟಾಕಿಯ ಶಬ್ಡಕ್ಕೆ ಮನದಲ್ಲೇ ಅಡಗಿ ಕುಳಿತಿತು ಹೊರಗೆ ಬರದೆ
ಶಬ್ಡ ಮಾಲಿನ್ಯ,ವಾಯುಮಾಲಿನ್ಯ,ಅಪಘಾತಗಳಲ್ಲಿ ಕಳೆದು ಹೋಯಿತು ದೀಪಾವಳಿ||

ವ್ಯಾಪಾರಿಗಳಿಗೆಲ್ಲಾ ಸುಗ್ಗಿಯ ದಿವಸ
ಕಸವ ಮಾರಿ ಗಳಿಸುವರು ಜೋಬಿನ ತುಂಬಾ ದುಡ್ಡು
ಪಟಾಕಿಯ ಸಿಡಿಸಿ ಪರಿಸರಕ್ಕೆ ಕೊಡುವೆವು ಮಾಲಿನ್ಯದ ಗುದ್ದು
ಪರಿಸರ ಪ್ರೇಮಿಯಾಗಿರದ ಪಟಾಕಿ ಬೇಕೆ? ನಮಗೆ ಚಿಂತಿಸಬೇಕು ಇಂದು||

ರಾತ್ರಿಯಿಡೀ ಶಬ್ದ, ಬೆಳಕು, ಮಾಲಿನ್ಯದ ಹೊಗೆ
ಮನೆಯಿಂದ ಹೊರ ಬರಲೇಯಿಲ್ಲ ನಾನು
ಬೆಳಿಗ್ಗೆ ಹೊರಟೆ ಆಫೀಸಿಗೆ ದಾರಿಯ ತುಂಬೆಲ್ಲಾ ಕಾಗದದ ರಾಶಿ ರಾಶಿ
BBMP ಕರ್ಮಚಾರಿಗಳ ಕೈಯಲ್ಲಿ ಕಸದ ಪೊರಕೆ
ಮುಖದಲ್ಲಿ ಕೋಪ,ಬಾಯಲ್ಲಿ ಬೈಗುಳ ಗೊಣಗಾಟ||

ಏಕೆ ಬರುವುದೋ ಈ ದೀಪಾವಳಿ
ಸಾಕು ಸಾಕು ಈ ಶಿವಕಾಶಿಯ ಕೊಳೆತ ಕಾಗದದ ಕಸದ ರಾಶಿ ರಾಶಿ
ಇನ್ನು ಮೇಲಾದರೂ ತಿಳಿಯೋಣ ಹಬ್ಬದ ಆದರ್ಶವ
ಬರೀ ಹಚ್ಚೋಣ ದೀಪ ಮನ ಮನದಲ್ಲಿ ,ಮನೆಯ ಅಂಗಳದಲ್ಲಿ||

ರಸ್ತೆ ಸೂಚನಾ ಫಲಕ



ನಾನು ದಾರಿ ಸೂಚಕ,ರಸ್ತೆ ಸೂಚನಾ ಫಲಕ
ನನ್ನ ಕೆಲಸ ದಾರಿ ಹೋಕರಿಗೆ,ಪಥಿಕರಿಗೆ
ಅಲೆಮಾರಿಗಳಿಗೆ,ವಿಳಾಸ ಹುಡುಕುವವರಿಗೆ
ಸಹಾಯ ಮಾಡುವ ನಿರ್ಜೀವ ರಸ್ತೆ ಸೂಚಕ;
BBMPಯವರು ನನ್ನನ್ನಿಲ್ಲಿ ನಿಲ್ಲಿಸಿಹರು
ಬಣ್ಣ ಬಣ್ಣಗಳಿಂದ ಸಿಂಗರಿಸಿದರು
ರಸ್ತೆಯ ಬಲ ಭಾಗವೋ? ಎಡ ಭಾಗವೋ?
ಎಲ್ಲೋ ಒಂದು ಕಡೆ ನಿಲ್ಲಿಸಿ,
ಅದಕ್ಕೊಂದು ಹೆಸರ ನೀಡಿ
ನನ್ನ ಸೇವೆಗೆ ನಿಲ್ಲಿಸಿಹರು;
ಹಗಲು,ರಾತ್ರಿ,ಧೂಳು,ಮಳೆ
ಯಾವುದಕ್ಕೋ ಜಗ್ಗದೆ,
ಸದಾ ಜನರ ಸೇವೆಯಲ್ಲಿ ನಿಂತವನು ನಾನು
ಒಂದೊಂದು ರಸ್ತೆಯಲ್ಲಿ ಒಂದೊಂದು ಹೊಸ ಹೊಸ ಹೆಸರು ನನಗೆ
MG ರಸ್ತೆ,ಡಾ|| ರಾಜ್ ಕುಮಾರ್ ರಸ್ತೆ,ಡಾ|| ಮುತ್ತುರಾಜ್ ರಸ್ತೆ,
ಅತ್ತಿಮಬ್ಬೆ ರಸ್ತೆ, Bull temple ರಸ್ತೆ..........
ಹೆಸರೇನೋ ಗಣ್ಯರದ್ದೇ!......
ಆದರೆ ನಾನು ಮಾತ್ರ ನಗಣ್ಯ
ನನಗೋ ಹಿಗ್ಗು
ಅದರಿಂದ ಸ್ವಲ್ಪ ಅಹಂ
ಆ ಅಹಂ ನನ್ನ ಸೌಂದರ್ಯಕ್ಕೆ ದಕ್ಕೆ ತಂದಿದೆ
ಏನು ಹೇಳಲಿ? ಯಾರಿಗೆ ಹೇಳಲಿ? ನನ್ನ ಸಮಸ್ಯೆಯನ್ನ
ನನ್ನ ಸೌಂದರ್ಯ ಹಾಳಾಗಿದೆ;
ಹೊಸ ಬಣ್ಣ ಕಂಡು ವರ್ಷಗಳಾಗಿವೆ;
ಕಾಲು ಮುರಿದಿದೆ;
ಕೆಲವೊಮ್ಮೆ ಕನ್ನಡದ ಕೊಲೆಯೊ ನನ್ನ ಮೇಲೆಯೇ ಆಗುತ್ತದೆ
ತಪ್ಪು ತಪ್ಪಾದ ಕನ್ನಡದ ಪದಗಳನ್ನ ನನ್ನ ಮೇಲೆ ಬರೆದು;
ಈ ಸಣ್ಣ ಸಣ್ಣ ಜಾಹೀರಾತುದಾರರು ತಮ್ಮ ವ್ಯಾಪಾರದ ಜಾಹೀರಾತು
ಚೀಟಿಗಳನ್ನು ನನ್ನ ಮೇಲೇ ಅಂಟಿಸುವರು;
ಎಷ್ಟು ಅಂಟಿಸಿದ್ದಾರೆ ಎಂದರೆ
ನನ್ನ ಮೊಲ ಹೆಸರು ಮರೆಯಾಗಿದೆ;
ನನ್ನಿಂದ ಜನತೆಗೆ ತೊಂದರೆಯಾಗುತ್ತಿದೆ;
ರಸ್ತೆ ಹುಡುಕುವವರಿಗೆ ದಾರಿ ತೋರಲಾಗದೆ ಬಳಲುತ್ತಿದ್ದೇನೆ;
ಅಸಹಾಯಕ ಸ್ಥಿತಿಗೆ ನನ್ನನ್ನು ಈ ಜಾಹೀರಾತುದಾರರು ತಳ್ಳಿದ್ದಾರೆ;
ಮಾಹಿತಿ ಪಸರಿಸುವ ನನ್ನ ಕಾಯಕಕ್ಕೆ ಧಕ್ಕೆಯಾಗಿದೆ;
ನನ್ನ ನಿಲ್ಲಿಸಿದ BBMPಯವರಿಗೂ ನನ್ನ ಬಗ್ಗೆ ಗಮನವಿಲ್ಲ;
ನನ್ನ ಸ್ವಚ್ಛತೆಯ ಬಗ್ಗೆ ತಿರಸ್ಕಾರ;
ನಾನು ಮಾತ್ರ ಸೊರಗಿದ್ದೇನೆ,ನರಳುತ್ತಿದ್ದೇನೆ ಅಸಹಾಯಕನಾಗಿ;
ನನ್ನನ್ನು ರಕ್ಷಿಸಿ;ನನ್ನನ್ನು ರಕ್ಷಿಸಿ.

ನನ್ನ ಗೆಳೆಯರು

ನನ್ನ ಗೆಳೆಯರು;ನನ್ನ ಗೆಳೆಯರು;
ನನ್ನ ಅರ್ಥಮಾಡಿಕೊಳ್ಳಲಾರದ ಗೆಳೆಯರು;
ಅವರವರ ಭಾವಕ್ಕೆ, ನಾನು ಅಸ್ಪೃಷ್ಯನೇ ಸರಿ;
ಎಲ್ಲಕ್ಕೂ ನನ್ನನೇ ದೂರುವರು;
ನಾನು ಅವರಿಗೆ ಫೋನ್ ಮಾಡುವುದಿಲ್ಲವೆಂದು;
ಅವರೆಂದೂ ನನಗೆ ಫೋನ್ ಮಾಡುವುದಿಲ್ಲ ತಿಳಿದಿದೆ;
ಮಾತಿನಲ್ಲಿ ಅಪಹಾಸ್ಯವಿದೆ,ಕುಹಕವಿದೆ;
ಅದಕ್ಕೆ ನಾನು ಅವರಿಂದ ದೂರವಿರುವೆನು
ಅವರೇನೇ ಹೇಳಲಿ;ನಾನು ಮಾತ್ರ ಅವರನ್ನು ಪ್ರೀತಿಸುವೆ;
ನನ್ನ ಭಾವನೆಗಳಿಗೆ ಅವರ ಬಳಿ ಬೆಲೆ ಇಲ್ಲವೆಂದು ನನಗೆ ಗೊತ್ತು;
ಅವರ ಹಣ,ಅಂತಸ್ತು,ಪ್ರತಿಷ್ಟೆ ಎಲ್ಲವೂ ಅವರಿಗೆ;
ನನಗೆ ಮಾತ್ರ ಬೇಕು ಗೆಳೆತನ;
ಅವರ ಮಾತುಗಳಲ್ಲಿ,ಮನಸ್ಸಿನಲ್ಲಿ ಇನ್ನೂ ಹುಡುಕುತ್ತಿದ್ದೇನೆ;
ಹುಡುಕಿ-ಹುಡುಕಿ ಸೋತಿದ್ದೇನೆ;
ನೋವುಂಡಿದ್ದೇನೆ;
ಸೋಲು ಮಾತ್ರ ಒಪ್ಪಿಕೊಳ್ಳುವುದಿಲ್ಲ;
ನನ್ನ ಅವರು ಒಪ್ಪಿಕೊಂಡಿಲ್ಲ ,ಒಪ್ಪಿಕೊಳ್ಳುವುದಿಲ್ಲ ತಿಳಿದಿದ್ದೇನೆ;
ಆದರೂ ನಾನು ಅವರ ಬಲ್ಲೆ;
ನನ್ನ ಮನಸ್ಸು ಆಶಾವಾದಿಯಾಗಿದೆ;
ಅವರು ನನ್ನ ಗೆಳೆಯರು;
ಅವರು ನನ್ನ ಗೆಳೆಯರು;

ಮರೆಯಾದ ಚೇತನ

ಒಂದು ಚೈತನ್ಯದ ಚಿಲುಮೆಯೊಂದು ನಮ್ಮನ್ನು ಅಗಲಿತು
ಮನದ ಮೊಲೆಯಲ್ಲಿ ನೂರು ನೋವಿನ ಜ್ವಾಲೆಯ ಹುಟ್ಟುಹಾಕಿತು
ಏಕೆ ಮರೆಯಾದೆ ಓ ಚೇತನವೇ?
ನಮ್ಮನ್ನು ಅಗಲಿದೆ ಏಕೆ ಚೇತನವೇ?
ಸದಾ ನಗುಮುಖ, ಚೈತನ್ಯದ ಚಿಲುಮೆ
ಹಾಸ್ಯ,ತುಟಿಯಲ್ಲಿ ಸದಾ ನಗುವಿನ ಲಾಸ್ಯ
ಪ್ರೇರಕ ಶಕ್ತಿ,ಮನದಲ್ಲಿ ಪ್ರಶಾಂತತೆ;
ಇಂದು ಮರೆಯಾಯಿತೇಕೆ?
ಓ ಚೇತನವೇ! ಓ ಆತ್ಮಶಕ್ತಿಯೇ!
ನೀನು ನಮ್ಮಲ್ಲಿ ನೆಲೆಗೊಳ್ಳು ಎಂದೆಂದಿಗೂ
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

ಹೊಸತನದ ಹುಡುಕಾಟ

ಬೇಕು ಬೇಕುಗಳ ಸಂತೆ ಈ ಬದುಕು
ಬೇಕು ಸಾಕು ಸಾಕೆನ್ನುವ ಹಣತೆಯ ಬೆಳಕು
ಯಾವುದಕ್ಕೂ ಕೊರತೆಯಿಲ್ಲ ಇಲ್ಲಿ
ಎಲ್ಲವೂ ಕೈಗೆಟುಕುವುದು ಕ್ಷಣಮಾತ್ರದಲ್ಲಿ
ಕಾಂಚಾಣ ಕುಣಿಯುತಿಹುದು ಎಲ್ಲೆಲ್ಲೂ
ಅದರ ಜೊತೆ ತಾಳಕ್ಕೆ ತಕ್ಕಂತೆ ಕುಣಿಯಿತಿರುವವರ ನೋಡಲ್ಲಿ
ಹಿಂದೆ ಸ್ವರ್ಗ,ಮೋಕ್ಷದ ಗುರಿಯಿತ್ತಿಲ್ಲಿ
ಇಂದು ಸ್ವರ್ಗ,ಮೋಕ್ಷಗಳ ಮಾತೆಲ್ಲಿ?
ತ್ಯಾಗ.ಭಕ್ತಿಗಳು ಸ್ವಾರ್ಥ ಸಾಧನೆಯಲ್ಲಿ ನುಲುಗಿದೆಯಿಲ್ಲಿ
ಮುಕ್ತಿ-ಸಾಧನೆಗಳು ದಿಕ್ಕುಪಾಲಾಗಿವೆ ಇಲ್ಲಿ
ಹಾಸಿಗೆಯಿದ್ದಷ್ಟು ಕಾಲುಚಾಚು ಎನ್ನುವುದು ನಗೆಪಾಟಲು ಇಲ್ಲಿ
ಸಿಕ್ಕಿದ್ದು-ಸಿಗದಿದ್ದು ಕೈಗೆಟುಕಿಸಿಕೊಳ್ಳುವ ತಾಕತ್ತು ಎಲ್ಲರಿಗಿದೆ ಇಲ್ಲಿ.
ಬುದ್ಧನ ಆಸೆಯೇ ದುಃಖಕ್ಕೆ ಮೊಲವೆನ್ನುವುದು ಹಳತಾಗಿದೆ
ಆಸೆಯೇ ಹೊಸತನದ ಹುಡುಕಾಟಕ್ಕೆ ದಾರಿಯಾಗಿದೆ ಇಂದಿಲ್ಲಿ.

ಸೆರೆವಾಸ

ಕಡೆಗೂ ಹೊರಟರು ಒಬ್ಬೊಬ್ಬರಾಗಿ
ಸೆರೆಮನೆ ಕಡೆಗೆ ಲಜ್ಜೆ ಬಿಟ್ಟು
ಕೆಲವರಿಗೆ ಸಂತೋಷ, ದುಗುಡ
ಮತ್ತೆ ಕೆಲವರಿಗೆ ಚಿಂತೆ
ಬಚ್ಚಿಟ್ಟ ಕಂತೆ ಕಂತೆ ಹಗರಣಗಳು
ಜನತೆಯ ಮುಂದೆ ಬತ್ತಲಾಗಿವೆ
ಮೊರು ಬಿಟ್ಟವರಿಗೆ ಈಗ ಕಾದಿದೆ
ಸೆರಮನೆಯ ಭಯ
ಹೋದ ಮೇಲೂ ಹೊರಬರಲು
ನಡೆಯುವುದು ಹಲವು ನಾಟಕಗಳು
ಯಾರ ನಾಟಕವೂ ನಡೆಯುವುದಿಲ್ಲ
ಎಲ್ಲರೂ ಸಲ್ಲಬೇಕು ಇಲ್ಲಿಗೆ (ಸೆರೆಮನೆಗೆ)
ಇಂದಲ್ಲ, ನಾಳೆ
ಸಮಯ ಕಾಯುತಿದೆ (ಬಡ ಜನರ ಶಾಪ)
ಎಲ್ಲರ ಮೇಲೂ ಮುಯ್ಯಿತೀರಿಸಿಕೊಳ್ಳಲು
ಬಿಡುವುದಿಲ್ಲ ಯಾರನ್ನೂ
ಸರತಿಯಂತೆ ಎಲ್ಲರೂ ಶರಣಾಗಲೇಬೇಕು.

ಕೋಳಿ ಜಗಳ

ಇಲ್ಲಿ ಎಲ್ಲವೂ ಗೊಂದಲ
ಮಾತನಾಡುವುದು ಒಂದು
ಮಾಡುವುದು ಇನ್ನೊಂದು
ನಮ್ಮ ಕಣ್ಣಿಗೇ ಕಾಮಾಲೆ
ಅವನ ಕಣ್ಣಿಗೆ ಮೇಡ್ರಾಸ್ ಐ

ಅವ ಮಾನವ ದ್ವೇಷಿ
ಇವ ಮಾನವ ಪ್ರೇಮಿ
ಅವನ ಬರಹ ಮಾನವತಾ ವಾದಿ
ಇವನ ಬರಹ ಜೀವ ವಿರೋಧಿ
ಅವನಿಗೆ ಇವನ ಕಂಡರಾಗದು
ಇವನಿಗೆ ಅವನ ಕಂಡರಾಗದು

ಅವನ ಯೋಗ್ಯತೆ ಇವನೇ ನಿರ್ಧರಿಸುತ್ತಾನೆ
ಅವನ ಹಣೆಬರಹ ಬರೆಯುವ ಬ್ರಹ್ಮ ಇವನೇ
ಪ್ರಶಸ್ತಿಗಳಿಗೆ ಇನ್ನಿಲ್ಲದ ಲಾಬಿ
ಎಲ್ಲರೂ ಲಾಬಿಕೋರರೇ,ಲಜ್ಜೆಗೆಟ್ಟವರು

ನಮಗೋ ಅವರಿವರ ಜಗಳ
entratainment ,ಸಮಯ ಕೊಲ್ಲಲು
ಪ್ರತಿದಿನ ಕಾಯುತ್ತೇವೆ ಪತ್ರಿಕೆಗೆ
ಓದಿ ನಲಿಯಲು ಅವರಿವರ ಕೋಳಿ ಜಗಳ
ನಾಳೆಗಾಗಿ ಕಾಯುತ್ತೇವೆ ಹೊಸತನಕ್ಕಾಗಿ
ಹೊಸ ಕೋಳಿ ಜಗಳಕ್ಕಾಗಿ

ಪ್ರಣತಿ

ಮನವ ಎಚ್ಚರಿಸಲು ಘಂಟೆ, ಜಾಗಟೆಗಳು ಬೇಕೇ?
ಲೋಕ ಬೆಳಗಾಗಲು ಕೋಳಿ ಕೂಗಲೇ ಬೇಕೇ?

ಭವಿಗಳು ಆಚರಿಸುವ ಡಂಭಗಳ ನೀನೇ ನೋಡುತ್ತಿರುವೆ
ದೇವ ನಿನ್ನ ಎಚ್ಚರಿಸಲು ಶಂಖ,ಘಂಟೆ,ಜಾಗಟೆಗಳು ಬೇಕೇ?

ಜ್ಯ್ನಾನದ ದೀಪ ಮನದಲ್ಲಿ ಬೆಳಗಲು ನೀ ಬಾರೆಯಾ?
ಭಕ್ತಿಯ ,ಪ್ರೀತಿಯ ಕೂಗಿಗೆ ನೀ ಓಗೋಡೆಯಾ ತಂದೆ?

ಲಾಲಸೆ

ನೀನೇ ಮನದಲ್ಲಿ ನಿಲ್ಲು
ನಿನಗಲ್ಲದೇ ಇಲ್ಲಿ ಬೇರೆಯವರಿಗೆ ಜಾಗವಿಲ್ಲಿಲ್ಲ
ನಿನ್ನನ್ನೇ ನಂಬಿಹೆನು ಇಲ್ಲಿ ಅನವರತ
ನೂರಾರು ಕನಸುಗಳ ಹೊತ್ತು ಭಿನ್ನತೆಯ ರಾಗದಲ್ಲಿ\\

ಯಾವ ಭಾವವೋ! ಯಾವ ತಾಳವೋ?
ಒಂದೂ ಅರಿಯದೆ ನಿನ್ನದೇ ಧ್ಯಾನದಲ್ಲಿಹೆನು
ಕರುಣೆಯ ದಾರಿ ತೋರದೆ,ನಸುನಗುತ್ತಾ ಕುಳಿತು
ಎಲ್ಲವನ್ನೂ ತಿಳಿದೂ ತಿಳಿಯದಂತೆ ಈ ಮೌನವೇಕೋ ತಿಳಿಯೆ\\

ನಿಮ್ಮ ತ್ಯಾಗ, ನಮ್ಮ ಭೋಗ ಲಾಲಸೆಗೆ ಈ ಪ್ರಾರ್ಥನೆ
ಎಷ್ಟು ಸಮಂಜಸವೋ! ನಾ ತಿಳಿಯೆ
ಪ್ರಾರ್ಥನೆಯಂತೂ ನಿಲ್ಲದೇ ಸಾಗಿದೆ
ನಿನ್ನ ಸೆಳೆಯುವ ಯತ್ನವೂ ಮುಂದುವರೆದಿದೆ\\

ತುಳಿತ

ಅವನು ಬೆಳೆಯುತ್ತಲೇ ಇದ್ದಾನೆ;

ನನ್ನನ್ನು, ನನ್ನ ಗೆಳೆಯರೆಲ್ಲರನ್ನೂ ತುಳಿದು;

ತುಳಿದು ತುಳಿದು ಬಸವಳಿಯದೆ ಮೇಲೇರುತ್ತಿದ್ದಾನೆ;

ನಮಗೋ ಏಳಲಾಗದೆ
ಕೊರಗಿ ಕೊರಗಿ ಹಿಡಿ ಶಾಪಹಾಕ್ಕುತ್ತಾ
ನಮ್ಮ ಸಮಯಕ್ಕೆ ಕಾಯುತ್ತಿದ್ದೇವೆ;

ಒಂದೋ ಅವನು ಇಲ್ಲವಾಗಬೇಕು;

ಇಲ್ಲ ನಾವುಗಳು ಬದಲಿಸಬೇಕು ಅವನ ದಾರಿಯಿಂದ;

ಯಾವುದು ಸುಲಭವೋ ತಿಳಿಯೆವು?
ಬೆನ್ನು, ಕೈಕಾಲುಗಳು ನಿತ್ರಾಣವಾಗಿದೆ;

ನಾಳೆ ಏನು? ಎಂಬ ಪ್ರಶ್ನೆ
ಉತ್ತರವಿಲ್ಲದೆ ಸೊರಗಿದೆ;

ಎಲ್ಲೆಡೆಯಲ್ಲೂ ಕತ್ತಲು ಕವಿದಿದೆ;

ನಾಳೆಗೆ ನಾನು,ನಾವು ಕಾದಿದ್ದೇವೆ;

ಹೊಸತನಕ್ಕೆ, ಹೊಸತಾಗಿ ತುಳಿತವನ್ನು ಅನುಭವಿಸಲು\\

ಸಿಹಿ ದಿನ

ದಿನವೂ ನಡೆಯುತ್ತೇನೆ ದಣಿಯಾಗುವವರೆಗೆ
ಕಾಲು ಕರೆದಲ್ಲಿಗೆ ತಡಮಾಡದೆ
ಈ ಲೋಕ ವ್ಯವಹಾರ ತಿಳಿಯುತ್ತಿಲ್ಲ
ಆದರೂ ನಡೆದಿದೆ ತೊಂದರೆ ಇಲ್ಲದೆ\\

ನನ್ನಿಂದ ಏನಾಗಬೇಕೋ ತಿಳಿದಿಲ್ಲ
ಮನವು ಮಾತ್ರ ಕಾಣದ ಗುರಿಯ ಕಡೆಗೆ ತಿರುಗಿದೆ
ಮನದಲ್ಲಿ ಮಾತ್ರ ಶಾಂತಿ ಇನ್ನೂ ನೆಲಸಿಲ್ಲ
ಒಂದಾದ ಮೇಲೆ ಒಂದು ಚಿಂತೆ ಮನದ ಮೇಲೆರಗಿದೆ\\

ದಿನವೂ ಬೆಳಕು ಮೊಡಿ
ಮನದಲ್ಲಿ ಹೊಸ ಚೈತನ್ಯ ಹಾಡಿದೆ
ಅದೇ ಹಾಡು, ಅದೇ ರಾಗ
ಭಾವ ಮಾತ್ರ ಬೇರೆ ಬೇರೆ\\

ನಿನ್ನೆಯ ಕಹಿ ನೆನಪ ಮರೆಸಿ
ನಾಳೆಯ ಸಿಹಿ ಅನುಭವವ ತಂದಿದೆ\\

ಭರವಸೆಯ ಹಾದಿ

ನನಗನಿಸಿ ಬಹು ದಿನಗಳಾದವು
ಉತ್ತರ,ಸಮಾಧಾನ ಮಾತ್ರ ಪ್ರಶ್ನೆಯಾಗೇ ಉಳಿದಿದೆ

ಎಲ್ಲೇ ಹೋದರೂ,ಏನೇ ಮಾಡಿದರೂ
ನನ್ನಲ್ಲೇನೋ ಕೊರತೆ ಇದೆ ಎಂಬ ಭಾವ ಮನದಲ್ಲಿ ಕಾಡಿದೆ
ಏಕೆ ಹೀಗೆ ಒಂದೂ ತಿಳಿದಿಲ್ಲ
ಮನದಲ್ಲಿ ಮಾತ್ರ ನೋವಿನ ಗಂಟು ಭಾರವಾಗುತ್ತಿದೆ ಎನಿಸಿದೆ

ಏಳಿಗೆ ಕಾಣುತ್ತಿಲ್ಲ,
ನಿರ್ವಹಣೆಗೇನೂ ತೊಂದರೆಯಿಲ್ಲ
ಮನಸ್ಸು ಮಾತ್ರ ತೊಳಲಿದೆ
ಕಾಣದ ಗುರಿಯ ಕಡೆಗೆ ಹೊರಳಿದೆ

ನಾಳೆಯೆಂಬ ಭರವಸೆಯ ಹೊಂಗನಸು
ದಿನದಿನವೂ ಮುಂದೆ ಜೀವನವ ನಡೆಸಿದೆ
ಮಾಗಿದಂತೆ ಹೊಸ ಹೊಸ ಉತ್ಸಾಹ
ಮತ್ತೆ ಮತ್ತೆ ಮನದಲ್ಲಿ ಮೊಡಿಸಿದೆ

ನಾಳೆಯು ನನ್ನದೇ
ನನ್ನ ಕಾಲವೂ ಬರುವುದಿದೆ
ಸೋಲುವ ಮಾತಿಲ್ಲ
ಪ್ರಯತ್ನ ಮಾತ್ರ ಬಿಡೋದಿಲ್ಲ

Nepotism

ಇಲ್ಲಿ ನರಕ ಯಾತನೆ
ಎಲ್ಲಕ್ಕೂ ಬೇಕು ಯಾಚನೆ
ನಮ್ಮತನಕ್ಕೆ ಬೆಂಕಿ ಹಚ್ಚಿ ಖುಷಿ ಪಡುವವರು ಇಲ್ಲಿ ಬಹಳ
ನಮ್ಮ ಹೃದಯದಲ್ಲಿ ಬೆಂಕಿ ಹಚ್ಚಿಕೊಂಡು ಪಡಬೇಕು ಯಾತನೆ
ಅತ್ತ ಹೋಗಲಾರದೆ
ಇತ್ತ ಇರಲಾರದೆ
ಕ್ಷಣ-ಕ್ಷಣವೂ ಹೆಣಗಾಡಬೇಕು
ಪ್ರತಿದಿನವೂ ಶವವಾಗಬೇಕು
ಸಲಾಮು ಹೊಡೆಯಲಾಗದೆ
ಗುಲಾಮಗಿರಿ ಮಾಡಲಾಗದೆ
ನಮ್ಮನ್ನು ನಾವು ಹಿಂಸಿಸಿಕೊಳ್ಳಬೇಕು
ಇದಕ್ಕೆಲ್ಲಾ ಬೇಕು ಸ್ವಾತಂತ್ರ
ಅದಕ್ಕೆ ಮಾಡಬೇಕು ಉಪವಾಸ ಸತ್ಯಾಗ್ರಹ
ಮನದೊಳಗೆ ಧೈರ್ಯತುಂಬಲು ಬೇಕು ಗಾಂಧಿ,ಅಣ್ಣ ಹಜಾರೆ
ಅವರು ಬರುವವರೆಗೂ ಪಡಬೇಕು ನರಕಯಾತನೆ

ಒಸಾಮಾಸುರನ ಹತ್ಯೆ

ಅವನೊಬ್ಬ ಮಾನವೀಯತೆಯ ಶತೃ
ರಕ್ತಪೀಪಾಸು,
ಧರ್ಮಾಂದ,
ಅವನಿಗೋ ನೂರಾರು ಭಟ್ಟಿಂಗಿಗಳ ಸಹಾಯ ಬೇರೆ
ಯಾವುದೋ ಧರ್ಮರಕ್ಷಕನಂತೆ
ತನ್ನನ್ನೇ ತಾನು ರಕ್ಷಿಸಿಕೊಳ್ಳದವನು
ನಗೆ ಬರಲಾರದೆ ಅದೇನು ಬಾಬಾ ನೀಡುವ ವಿಭೂತಿಯ ಭೂದಿಯೇ
ತಲೆಕೆಟ್ಟವರನ್ನು ತಯಾರುಮಾಡುವ ಕಾರ್ಖಾನೆ ನಡೆಸುವನಂತೆ
ಕೈಗೆ ಎಕೆ ೪೭ ಮೆಷಿನ್ ಗನ್ನು ನೀಡಿ ಯಾರುಯಾರನ್ನು ಸಾಯಿಸಬೇಕೆಂದು ನಿರ್ದೇಶಿಸುವನಂತೆ
ನಮ್ಮ ಕನ್ನಡ ಚಿತ್ರ ನಿರ್ದೇಶಕರು ರೌಡಿಗಳನ್ನು ಸಾಯಿಸುವಂತೆ
ದೊಡ್ಡ ದೊಡ್ಡ ಕಟ್ಟಡಗಳಿಗೆ ವಿಮಾನಗಳ ಡಿಕ್ಕಿ ಹೊಡೆಸುವನಂತೆ
ಅಮಾಯಕರು ಸಾಯುವದ ಕಂಡು ಗಹಗಹಿಸಿ ನಗುವನಂತೆ
ಎಷ್ಟು ದಿವಸ ನಕ್ಕಿಯಾನು ನೀವೇ ಹೇಳಿ ನಾಳೆ ಸಾವು ನನಗಾಗೇ ಕಾದಿದೆ ಎಂಬುದ ಮರೆತು
ಅಮೆರಿಕೆಯ ಜನ ಏನು ಭಾರತೀಯರೇ ಎಲ್ಲವನ್ನೂ ಸಹಿಸಿಕೊಳ್ಳಲು/ಮರೆತುಹೋಗಲು
ಹತ್ತು ನೂರಾಗಲಿ ನೋವ ಮರೆಯಲಾದೀತೇ?
ಆತ್ಮೀಯರ ಶವ ಜೀವಂತಿಗೆಯಿಂದ ನಡೆಯುವುದೇ?
ಶಾಂತಿ ಶಾಂತಿ ಎಂದರೆ ನೆಮ್ಮದಿ ಸಿಗುವುದೇ?
ಉತ್ತರಿಸುವರು ಯಾರು? ಅಫಜಲ್ ಗುರುವೋ? ಇಲ್ಲ ಕಸಬನೋ? ನಾ ತಿಳಿಯೆ
ತತ್ವಕ್ಕೆ ಅಂಟಿಕೊಂಡವರ ನಡೆ ಮೆಚ್ಚಲೇಬೇಕು ಅದನ್ನು ದ್ವೇಷ ಎನ್ನಲಾದೀತೆ?
ಅಧಿಕಾರಕ್ಕೆ ಅಂಟಿಕೊಂಡವರು ನಮ್ಮಲ್ಲಿ ಬಹಳ ಯಾವ ಸೇಡೂ ಇಲ್ಲ ,ಬರೀ ಒಗ್ಗರಣೆ ಮಾತ್ರ
ನಡೆಯನ್ನು ಸಮರ್ಥಿಸಿಕೊಳ್ಳಲೂ ನಮ್ಮವರಿಗೆ ನಾಲಿಗೆ ಕಡಿಯುತ್ತಿದೆ, ಕೇಳಿಸಿದ್ದು ಬರೀ ಕೆಮ್ಮು ಮಾತ್ರ
ಒಸಾಮ ಸತ್ತ
ಜವಾಹಿರಿ ಬಂದ
ಅಮೆರಿಯಲ್ಲಿ ಬಾರೀ ಹಬ್ಬ ಆಚರಣೆ
ನಮ್ಮ ಮುತಾಲಿಕ ಬಾಯಿಬಡಿದುಕೊಂಡ ಪ್ರೀಡಂ ಪಾರ್ಕಿನಲ್ಲಿ
ನಮ್ಮ ಕುಮಾರ ಬಾಯಿಮುಚ್ಚಿಕೊಂಡ ಓಟುಬ್ಯಾಂಕಿಗಾಗಿ.

ವಿಫಲ

ಏಕೆ ನೆನಪಾಗುವೆ ನೀನು?
ಮನವ ಕಲಕಿ
ರಾತ್ರಿ ನಿದ್ದೆ ಮಾಡಗೊಡದೆ ಹೋಗುವೆ ನೀನು
ಏಕೆ ನೆನಪಾಗುವೆ ನೀನು?\\

ಎಂದೋ ಆದ ಸ್ನೇಹದ ಕುರುಹಾಗಿ
ಮನದ ತುಂಬೆಲ್ಲಾ ನಿನ್ನದೇ ಸವಿಗನಸ ಕಂಡು
ಆ ಕುರುಹೇ ಇಂದು ಹೃದಯದಿ ಮಾಗದ ಗಾಯವಾಗಿಸಿದೆ
ಮತ್ತೆ ಮತ್ತೆ ನೆನಪಾಗಿ ಕತ್ತು ಹಿಸುಕುತಿದೆ ಯಾಕೋ?\\

ನಾನೆಂದೂ ಬಯಸಲಿಲ್ಲ ನಿನ್ನ ನೆನಪಾಗಲೆಂದು
ಆದರೂ ನೀನೇಕೆ ನನ್ನ ನೆನೆಯುವೆ ನಾ ಕಾಣೆ?
ಕಣ್ಣು ಮುಚ್ಚುವುದು ಬೇಡವೆನಿಸಿದೆ
ಈ ಜೀವನ ಸಾಕು ಸಾಕಾಗಿದೆ ಏಕೋ ಕಾಣೆ?\\

ನೀನೇ ಕಾರಣ ಎಲ್ಲಕೂ
ನಾನೇ ಅನುಭವಿಸುತಿಹೆ ಎಲ್ಲವೂ
ನೀನು ದೂರ ಎಲ್ಲೋ ಇದ್ದು
ನನ್ನ ನೋಡಿ ಗಹಗಹಿಸುತಿರುವೆ ನನ್ನ ವ್ಯಥೆಯ ಕಂಡು\\

.|| ಶ್ರೀರಂಗಪಟ್ಟಣದ ರಂಗನಾಥ||


ಮಂದಹಾಸದಿ ಮಲಗಿಹನು ರಂಗನಾಥ


ಸುತ್ತಲೂ ತಂಪು ಮಾಡಿ


ಪಾದ ಸೇವೆಗೆ ಕಾಯುತಿಹಳು ಕಾವೇರಿ


ರಂಗನಾಥ ಗುಡಿಯಲ್ಲಿ ಬಂಧಿ


ಕಾವೇರಿ ಹೊರಗಡೆ ಮುಕ್ತಳು


ಯಾರೇ ಬಂದರೂ


ಯಾರೇ ಹೋದರೂ


ಮೊದಲು ಕಾವೇರಿ


ಆನಂತರ ರಂಗನಾಥ ನ ದರುಷನ


ಜುಳ.ಜುಳನೇ ಸದ್ದು ಮಾಡಿ ಕೇಳುವಳು


" ರಂಗನಾಥ ಕುಶಲವೇ?"


ರಂಗನಾಥ ಮುಗುಳುನಗೆಯಲ್ಲೇ ಉತ್ತರ


ಪಾಪ ತೊಳೆಯುವ ಕಾವೇರಿ


ಮುಕ್ತಿಕೊಡುವ ರಂಗನಾಥ


ಲೋಕಸೇವೆಗೈಯ್ಯುತಿಹರು ಮೌನವಾಗಿ


ಎಂಥ ಜೋಡಿ


ಏನೋ ಮೋಡಿ


ಮತ್ತೆ ಮತ್ತೆ ನೋಡುವ ಸೆಳೆತವಿದೆ


ಇಂಥ ಜೋಡಿಯ ನೋಡದ ಕಂಗಳೇತಕೆ ನೀವೇ ಹೇಳಿ?


 

- ಅಂಧರು-

ಮನಸ್ಸಿನಲ್ಲಿ ಯೋಚಿಸುತ್ತೇನೆ
ಹತ್ತು ಹಲವು ಬಾರಿ
ಏಕೆ ಇವರು ಹೀಗೆ?
ಮನಸ್ಸು ಅರ್ಥಮಾಡಿಕ್ಕೊಳ್ಳುವುದಿಲ್ಲವೇಕೆ?
ನೋವಾಗುತ್ತೆ ನನಗೆ
ನಾನು ಅರ್ಥಮಾಡಿಕೊಳ್ಳಬಲ್ಲೆ
ಅವರ ಮನಸ್ಸಿನಲ್ಲೇನು ಕೋಲಾಹಲವಿದೆಯೆಂದು
ಆದರೆ ಅವರಿಗೇ ನನ್ನ ಮೇಲೆ ನಂಬಿಕೆಯಿಲ್ಲವೇಕೋ ತಿಳಿಯೆ!
ಅವರ ಸುತ್ತಲೂ ಇರುವವರು ಸರಿಯಿಲ್ಲವೆಂದು ಕಿಡಿಕಾರಿದ್ದಾಗಿದೆ
ಕೋಪಗೊಂಡು ಕಿರಿಚಾಡಿದ್ದಾಗಿದೆ
ಅರ್ಥಮಾಡಿಕೊಳ್ಳದ ಮನಸ್ಸುಗಳು
ಅತೃಪ್ತಿಯ ಪ್ರೇತಾತ್ಮಗಳು
ದಹಿಸಿಕೊಳ್ಳುತ್ತಿದ್ದಾರೆ ಮನಸ್ಸನ್ನು ಮತ್ಸರದ ದಾವಾಗ್ನಿಯಲ್ಲಿ
ಕೈಯಲ್ಲಿ ಹಣವಿದೆ
ತಲೆಗೊಂದು ಸೂರಿದೆ
ಅರ್ಥಮಾಡಿಕೊಳ್ಳುವ ಮಕ್ಕಳಿದ್ದಾರೆ
ಶಾಂತಿಯಿಂದಿರಲು ಮನಸ್ಸಿಲ್ಲವೇಕೋ ತಿಳಿಯೆ?
ಮನಸ್ಸಿನಲ್ಲಿ ಶಾಂತಿ ದೇವರು ಕೊಡಲಿಲ್ಲವೇಕೆ?
ಅದೂ ಸರಿ ಶಾಂತಿ ನಮ್ಮಲಿಯೇಯಿದೆ, ಹುಡುಕಲಿ ಎಲ್ಲಿ?
ದೇವರು ಜ್ನಾನ ಕೊಟ್ಟಿದ್ದಾನೆ
ಬುದ್ದಿ ಕೊಟ್ಟಿದ್ದಾನೆ
ಶಾಂತಿ ನೆಮ್ಮದಿಯ ಹುಡುಕಲಾಗದ ಅಂಧರು ನಾವೆಲ್ಲಾ
ಸಂತೋಷ ಕೈಯ ಮುಂದಿದ್ದರೂ ದಕ್ಕಿಸಿಕೊಳ್ಳಲಾಗದ ಹೆಳವರು ನಾವೆಲ್ಲಾ

-ಹುಟ್ಟು-

ಅಂದು ೧೮.೦೧.೨೦೦೮ ರ ಶುಕ್ರವಾರ ಗ್ರೀಷ್ಮ ಋತು, ದಕ್ಷಿಣಾಯಣ, ಹುಣ್ಣಿಮೆ
ಮಟ ಮಟ ಮಧ್ಯಾಹ್ನ
ನೆತ್ತಿಯ ಮೇಲೆ ಬಿಸಿಲ ಝಳ
ಹೆರಿಗೆಯ ನೋವಿಲ್ಲ
ಆತಂಕದ ಛಾಯೆ ಯಾರಲ್ಲೂ ಇರಲಿಲ್ಲ
ವೈದ್ಯೆಯ ಅಪ್ಪಣೆಯಾಗಿತ್ತು
"ಸಿದ್ದರಾಗಿರಿ ಆಪರೇಷನ್ಗೆ.......
ಕಾಯುವುದು ಎಲ್ಲಿಲ್ಲ ಹೇಳಿ
ಎಲ್ಲವೂ ಓಳ್ಳೆಯದೇ ಆಗಲಿದೆ
ಅವಳಲ್ಲಿ ಭಯದ ಭಾವ
ಹಣೆಯ ಮೇಲೆ ಬೆವರಿನ ಲೇಪ
ಆಸ್ಪತ್ರೆಯ ಬಿಸ್ಕತ್ ಬಣ್ಣದ ಗೌನು
ಗಾಲಿ ಖುರ್ಚಿಯಲ್ಲಿ ವಿಶೇಷ ಕೋಣೆಯಿಂದ ಆಪರೇಷನ್ ಕೊಠಡಿಗೆ ಪಯಣ
ಹೋದ ಸಮಯ ೧ ಗಂಟೆ ೫೦ ನಿಮಿಷ
ಹಸಿರು ಬಣ್ಣದ ಗೌನಿನ ನರ್ಸ್
ಕೈಯಲ್ಲಿ ಮಗು
ಸಮಯ ಆಗ ೨ ಗಂಟೆ ೨೦ ನಿಮಿಷ ಮೊದಲ ಅಳು
ಲೋಕಕ್ಕೆ ಪಾದಾರ್ಪಣೆ ಮಾಡಿದ ಮೇಲೆ
ಮೊದಲ ಮಜ್ಜನ ಜಾನ್ಸನ್ ಸೋಪಿನಿಂದ
ಹಾಗೂ ಮೈಗೆಲ್ಲಾ ಜಾನ್ಸನ್ ಬೇಬಿ ಸಾಫ್ಟ್ ಪೌಡರಿನಿಂದ ಲೇಪ
ಕಣ್ಣು ಮುಚ್ಚಿ ನಿದ್ದೆ- ಮೌನ ಧ್ಯಾನಕ್ಕೆ ಕುಳಿತ ಮುನಿಯಂತೆ
ಮೂರು ದಿನ ಉಪವಾಸ, ಗಾಂಧಿ ತತ್ವದಿಂದಲೇ ಪಾದಾರ್ಪಣೆ.

|| ಹಬ್ಬ||

ಮೈಕೊರೆಯುವ ಚಳಿ
ಏನಿದೆ ಹೇಳಿ ನಮ್ಮ ಬಳಿ
ನಾಳೆ ಹಬ್ಬ, ಎಳ್ಳು-ಬೆಲ್ಲ-ಕಬ್ಬು ಅದೇ- ಸಂಕ್ರಾಂತಿ\\
ಮೈ ಸುಡುವ ಬಿಸಿಲು
ಇರಲಾರೆವು- ಮರಗಳಲ್ಲಿ ಕಾಣುತ್ತಿದೆ ಬರೀ ಬಿಳಲು
ಚಿನ್ನದ ಚಿಗುರಿಗೆ ಕಾತರ ಎಲ್ಲೆಲ್ಲೂ ಹೊಸತನ ಅದೇ- ಯುಗಾದಿ\\
ಜಿಟಿ ಜಿಟಿ ಮಳೆ
ತಂಪಾಗಿತಿದೆ- ಹಸುರು ಹೊದ್ದಳು ಇಳೆ
ಹಬ್ಬ ಹಬ್ಬಗಳ ಸಾಲು- ಮುಂದೆ ಶ್ರಾವಣ-ಭಾದ್ರಪದ\\
ಹುಟ್ಟು-ಸಾವು-ಬಧುಕು
ನಾವೇಕಿಲ್ಲಿ?- ಗೊತ್ತಾಗಬೇಕು
ಮನದ ಕತ್ತಲು ಜಾರಬೇಕು- ಬೆಳೆಕಿನ ಅರಿವು-ದೀಪಾವಳಿ\\
ದುಷ್ಟ ಶಕ್ತಿ-ಶಿಷ್ಟ ಶಕ್ತಿ
ಅಹ೦ಮಿನದೇ ಕಾರುಬಾರು- ಮೂಲೆಗುಂಪಾಗಿದೆ ಭಕ್ತಿ
ತಾಯಿ ತಿದ್ದಬೇಕು-ಶಿಕ್ಷಿಸಬೇಕು-ಬಾ ದಸರೇ\\

|| ನಡೆದ ದಾರಿ||

ಕಣ್ಣ ಮುಂದೆ ಕಪ್ಪು ಕತ್ತಲು
ಮನದಲಿ ಸುಳಿದಿದೆ ಸಮಸ್ಯೆಗಳ ಸಾಲು ಸಾಲು
ಎದ್ದು ಹೊರಡಬೇಕು ನಾಳೆ
ಮೂಡಿಬರಲಿ ಆಶಾಕಿರಣದ ಹೊಂಬಿಸಿಲು\\

ಅದ್ಬುತ! , ಕತ್ತಲು ಕಳೆದಿದೆ
ಅಲ್ಲಿ ನೋಡು ಬಂಗಾರದ ಕಿರಣಗಳ ಬೆಳಕು
ಸಮಸ್ಯೆಗಳು ಕಳೇಯಬೇಕಿದೆ ಇಂದು
ನಾಳೆ ಬರಲಿ ಸಮಸ್ಯೆಗಳು ಸಾಧಿಸುವ ಛಲವಿದೆ\\

ಸಾಧನೆಯ ಮೆಟ್ಟಿಲುಗಳಿಗೆ ಕೊನೆಯೆಲ್ಲಿದೆ?
ಹಣ-ಪ್ರತಿಷ್ಟೆ ಬೇಕು ಬೇಕುಗಳಿಗೆ ಎಣೆಯೆಲ್ಲಿದೆ?
ನಡೆದು ಬಂದ ದಾರಿ ಮರೆತು ಹೋಗಿದೆ
ಸಂಬಂದಗಳು ಅರ್ಥಕಳೆದುಕೊಂಡು ಮೂಲೆಗುಂಪಾಗಿದೆ\\

"ಅಹಂ ಬ್ರಹ್ಮಾಸ್ಮಿ" ಒಂದೇ ಮಂತ್ರ
ಪ್ರಪಂಚ ಗೆಲ್ಲುವೆವೆಂದು ಹೊಸೆದಿರುವೆವು ತಂತ್ರ
ಮನದ ನಡುವೆ ಕಟ್ಟಿದ್ದೇವೆ ಬೇದಿಸಲಾಗದ ಕೋಟೆ
ಮನ-ಮನಗಳನ್ನು ಪ್ರೀತಿಯಿಂದ ಹಿಡಿಯಲಾಗದ ಬೇಟೆ\\

ನಾವೇ ಸೃಷ್ಟಿಸಿದ ಸಮಸ್ಯೆಗಳ ಸುಳಿಯಲ್ಲಿ ಹೊಡೆದಾಡುತ್ತಿದ್ದೇವೆ
ಏಕಾಂಗಿಯಾಗಿ ಭೇದಿಸುವೆವೆಂಬ ಛಲ ಮಣ್ಣಾಗಿಹೋಗಿದೆ
ನಾವೇ ಬೆಳೆಸಿದ ಸ್ವಾರ್ಥದ ಭೂತ ಕಣ್ಣಮುಂದೆ ರುದ್ರ ನರ್ತನಗೈಯುತ್ತಿದೆ
ಹುಟ್ಟು ಆಕಸ್ಮಿಕ ತಿಳಿದಿದೆಯಾದರೂ ಸಾವೇ ನಮ್ಮ ಬಾಳಪುಟದ ಪೂರ್ಣವಿರಾಮ ಗೊತ್ತಿದೆ\\

ಸಂಘರ್ಷದ ಬದುಕಿಗೆ
ಪೂರ್ಣವಿದಾಯ ಹೇಳಬೇಕಿದೆ
ಪ್ರಾಣಚಂಚು ಕಳೆದ ಮೇಲೆ ಬಿಟ್ಟು ಹೋಗುವುದಾದರೂ ಏನು?
ಕಳೆ ಕಳೆದುಕೊಂಡ ಶವ ಪ್ರೀತಿಪಾತ್ರರೂ-ಆಗದವರೂ ಭಾವಪರವಶ\\

ಎಲ್ಲರಿಗೂ ತಿಳಿದಿದೆ
ನಾವು ಸರತಿಯಲ್ಲಿ ನಿಂತೆದ್ದೇವೆಂದು
ಮುಂದೆ ಆಗುವೆವು ನಾವು ಕಳೆಬರ
ಕಣ್ಣೀರು ಹಾಕಬೇಡಿ ಸಾರ್ಥಕವಿಲ್ಲದ ಜೀವಕ್ಕೆ\\

ಸೋತ ಮನ

ಮನಸ್ಸು ತುಂಬಾ ನೊಂದಿದೆ
ದಾರಿ ಕಾಣದೆ ಚಡಪಡಿಸಿದೆ
ಕಾಣದ ಗುರಿಯತ್ತ ಕೈ ಚಾಚಿದೆ
ನಿಂತ ನೆಲದಲ್ಲಿ ನಿಲ್ಲಲಾಗದೆ ಬಸವಳಿದಿದೆ
ಸಮಾಧಾನದ ಮಾತಿನ ಅವಶ್ಯಕತೆಯಿದೆ
ಹೃದಯದಲ್ಲಿ,ಮನದಲ್ಲಿ ಚೈತನ್ಯ ತುಂಬುವ ಶಕ್ತಿ ಬೇಕಾಗಿದೆ
ಶಕ್ತಿ ಬತ್ತುವ ಮುನ್ನ
ಓ ಆಶಾಕಿರಣವೇ ಮನದಲ್ಲಿ ಬಾ....
ಅವಕಾಶದ ಹೆದ್ದಾರಿಯೇ ತೆರೆದುಕೋ ಬಾ...
ನನ್ನಲ್ಲಿ ಹೊಸ ಚೈತನ್ಯ ತುಂಬು ಬಾ...
ಬೇಗ ಬಾ ತಡಮಾಡದೆ....

|| ಯಾಂತ್ರಿಕ ಯುಗ||

ಇಲ್ಲಿ ಎಲ್ಲವೂ ಹತ್ತಿರ
ಎಲ್ಲಕ್ಕೂ ಬೇಗ ಸಿಗುತ್ತೆ ಉತ್ತರ\\

ಮಾಹಿತಿ ತಂತ್ರಜ್ನಾನದಿಂದಾಯಿತು ಕ್ರಾಂತಿ
ಜ್ಣಾನ-ವಿಜ್ಣಾನಗಳಿಂದ ಕಳೆಯುತಿದೆ ಭ್ರಾಂತಿ
ಇಂದು ನಾಳೆಗೆ ಕಡಿಮೆಯಾಗಿದೆ ಅಂತರ
ದೇಶ ದೇಶಗಳು ಕಾಣುತಿದೆ ಹತ್ತಿರ\\

ಹೆಚ್ಚಾಗಿದೆ ವೈಚಾರಿಕ ಸ್ವಾತಂತ್ರ
ಆದರಿಂದಲೇ ಜನರು ಅತಂತ್ರ
ಯಾವುದು ಸರಿ? ಯಾವುದು ತಪ್ಪು?
ವಿವೇಚಿಸದ ಮನ ಮಾಡಿದ್ದೆಲ್ಲವೂ ತಮಗೆ ಒಪ್ಪು!\\

ದೇಶ ಭಾಷೆ ಸಂಸ್ಕ್ರತಿಗಳು ಗೌಣ
ದುರಭಿಮಾನದ ಗುಂಪಿಗೆ ಹೆಚ್ಚೇ ಹಣ
ನೈತಿಕತೆಯಿಲ್ಲದ ನಡತೆ
ಜವಾಬ್ದಾರಿಯಿಲ್ಲದ ಜನತೆ\\

ಯುವ ಜನತೆಗೆ ಬೇಕು ಬೇಗ ಸುಖ
ಕಷ್ಟಪಡುವ ತಾಳ್ಮೆ ಬೇಕಿಲ್ಲ
ಕಷ್ಟ ಪಡುವುದಕ್ಕೆ ಅಡ್ಡದಾರಿಯಿಲ್ಲ
ವಾಮಮಾರ್ಗಕ್ಕೆ ಹತ್ತು ರಹದಾರಿಯಿದೆಯಲ್ಲ\\

ಮಧು ಗಂಟಲೊಳಗಿಳಿದರೆ ಸ್ವರ್ಗ ಮೂರೇ ಗೇಣು
ಇದುವೇ ಇಂದಿನ ಸತ್ಯ ಮಾಣು
ಸ್ವರ್ಗವೂ ಹತ್ತಿರ
ಸಾವು ಇನ್ನೂ ಹತ್ತಿರ\\

||ಸೋಗಲಾಡಿತನ||

"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಕೂಗಿಟ್ಟರೈ ಕವಿ ಪುಂಗವ
ಬನ್ನಿ ಬನ್ನಿ ವಿಶ್ವಪಥಕ್ಕೆ
ಬನ್ನಿ ಬನ್ನಿ ಸರ್ವೋದಯದ ಪಂಥಾಹ್ವಾನಕ್ಕೆ
ಮೂಗು ಹಿಡಿದು ಮುಸ್ಸಂಜೆಯ ಸಂಧ್ಯಾವಂದನೆಗೈಯುತ್ತಿದ್ದ ಅನಂತು
ಕೂಗು ಕೇಳಿದೊಡನೆಯೇ ಎದ್ದು ನಿಂತ
ಅತ್ತಿತ್ತ ನೋಡಿದ- ಪಕ್ಕದಲ್ಲೇ ಅಪ್ಪ ಮೂಗುಹಿಡಿದು ಕೂತಿದ್ದ
ಚಂಗನೆ ಮಾಯವಾಗಿ ಓಡುತ್ತಾ ಜನಜಂಗುಳಿಯಲಿ ಒಂದಾದ
ನೆಗೆದ ಒತ್ತಡಕ್ಕೆ ಹಾರಿದ ಜನಿವಾರ ಗೇಟಿನ ತುದಿಗೆ ಸಿಕ್ಕಿಹಾಕಿಕೊಂಡಿತ್ತು
ಅದಾವುದರ ಗಮನವೊ ಅನಂತುಗೆ ಆಗಲಿಲ್ಲ
ಅನಂತುವಿನ ಅಪ್ಪ ಕಣ್ಣು ಮುಚ್ಚಿ ಕುಳಿತೇಯಿದ್ದ
ದಾರಿತೋರುವ ದಿಸೆಯಲ್ಲಿ ನಡೆದಿದೆ
ಹಾದಿಬದಿಯೆನ್ನದೆ ಸಾವಿರ ಜನ ಸಾಗರದಂತೆ
ಇರುವೆ ಸಾಲುಗಳೋ-ಕುರಿಯ ಮಂದೆಯೋ ಸಾಗಿತಿದೆ ವಿಷಯ ಗೊತ್ತಿಲ್ಲದೆ
ಕುತೂಹಲದಿಂದ ಜನ ಸೇರುತ್ತಿದ್ದಾರೆ
ಧೂಳು- ಗದ್ದಲ ಮುಗಿಲಿಗೇರುತ್ತಿದೆ
ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಜನರೋಜನ
ಅರಮನೆಯ ಜನಕ್ಕೂ ಕುತೂಹಲ
ಇದೇನು ಇಂದೇ ದಸರೆಯೇ?-ಪ್ರಶ್ನೆಯ ಛಾಯೆ ಮುಖಗಳಲ್ಲಿ
ಪೋಲಿಸಿನವರಿಗೆ ಬಲುಭಯ ಟಿಪ್ಪುವಿನ ಸೈನ್ಯ ಅರಮನೆಗೆ ಮುತ್ತಿಗೆಹಾಕುತ್ತಿದೆಯೇ?
ಚರ್ಚಿನ ಮುಂದೆ ಅದೇ ಸಂತ ಫಿಲೋಮಿನಾ ಮುಂದೆ ಜನಸಾಗರ
ಜನರ ಕೂಗು"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
"ಗಲಭೆ" ಎಂದುಕೊಂಡು ಚರ್ಚಿನ ಜನ ಕದವ ಮುಂದಿಕ್ಕಿದರು
ಕದದ ಮೇಲಿನ ಶಿಲುಬೇ ಅಣಕಿಸುತ್ತಿತ್ತು
"ನನ್ನವರು ಯಾರೂ ಬರರು- ಅವರೆಲ್ಲರೂ ಶಿಲುಬೆಗೆ ಶರಣರು"
"ವಿಶ್ವಪಥ- ಮನುಜ ಮತ ನಮಗೆ ಗೊತ್ತಿಲ್ಲ
ನಮಗೆ ಗೊತ್ತಿರುವುದು ಕ್ರಿಸ್ತ ಮತ-ಕ್ರಿಸ್ತ ಪಥ"
"ಬಂದ ದಾರಿಗೆ ಸುಂಕವಿಲ್ಲ ಮುಂದೆ ಹೋಗಿ
ಹಿಂದುಗಳಂತೆ ನಾವೆಂದೂ ಧರ್ಮ ಭ್ರಷ್ಟರಲ್ಲ ಇಲ್ಲಿಂದ ಕಾಲುತೆಗೆಯಿರಿ" ಎಂದು
ಜನರಿಗೆ ತಿಳಿಯಲ್ಲ ಅದರ ಕುಹಕ- ಅಲ್ಪಸಂಖ್ಯಾತರು- ಏನೆಂದರೂ ತಪ್ಪಿಲ್ಲ ಬಿಡಿ
ಜನರಿಗೆ ಎತ್ತ ಹೊರಟಿದೆ ಈ ಗುಂಪು
ತಿಳಿಯದಾಯಿತು- ಓ ಮರತೆ ನನ್ನ ಕೆಲಸ
ಮನೆಗೆ ಅಡುಗೆ ಸಾಮಾನು ತರಬೇಕಿತ್ತು
ಈ ಗೊಡವೆಯಲ್ಲಿ ಎಲ್ಲವೂ ಎಲ್ಲರಿಗೂ ತಮ್ಮ-ತಮ್ಮ ಕೆಲಸ ಮರೆತಿತ್ತು
ಆಕರ್ಷಣೆ ಕಡಿಮೆಯಾಯಿತು- ಗುಂಪು ಚದುರಿತು
ಇದ್ದವರು ಹತ್ತು-ಹಲವು ಮಂದಿ- ಮುಂದೆ ಹೋಯಿತು ಗುಂಪು
ಕೂಗು ನಿಂತಿರಲ್ಲಿಲ್ಲ"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಜನ ಹೋಗುವವರು ಹೆಚ್ಚು- ನಿಂತು ಮುನ್ನಡೆಯುವವರು ಹತ್ತು-ಇಪ್ಪತ್ತು
ಮುಂದೆ ಜಾಮೀಯಾ ಮಸೀದಿ
ಅಲ್ಲಿಂದಲಾದರೂ ಜನರು ಬರುವರೆಂಬ ಆಸೆ
ಘೋಷಣೆ ಕೂಗಿ ಒಳಗಿಂದ ಜನ ಬಂದು ಸೇರುವರೆಂದು
ಕೂಗು ಹಾಕುವ ಮುಂಚೆಯೇ ಮಸೀದಿಯಿಂದ ಹೊರಟಿತು
ಅಲ್ಲಾ..... ಅಲ್ಲಾಹು ಅಕ್ಬರ್...
ಮೈಕಾಸುರನ ದಾಳಿಗೆ ಮಂದಿ ನಲುಗಿತು
ಗುಂಪು ಮಾತ್ರ ಮುಂದೆ ಹೊರಟು ಹೋಯಿತು
ಇದ್ದವರು ಕೆಲವೇ ಕೆಲವರು
ವೆಂಕ-ಶೀನ- ಅನಂತು
ಹಿಂತಿರುಗಿ ನೋಡಿದರೆ ಸಾಗಿ ಬಂದ ದಾರಿ ಬಹಳ
ಮುಂದೆ ಮನುಜ ಪಥದ ದಾರಿ ಕಾಣದಾಗಿತ್ತು
ಹೋಗುವುದಾದರೂ ಎಲ್ಲಿಗೆ?
ಹೊಟ್ಟೆ ಚುರುಗುಟ್ಟುತುದೆ ಬೇರೆ!
ಬೇರೆ ದಾರಿ ಕಾಣುತ್ತಿಲ್ಲ- ಮರಳಿ ಗೂಡಿಗೆ ಪಯಣ
ಭುಜದಲ್ಲಿ ಜನಿವಾರ ಕಾಣಿಸಲಿಲ್ಲ ಅನಂತೂಗೆ
ಕಸಿವಿಗೊಳ್ಳುತ್ತಾ ಹೊರಟೇಬಿಟ್ಟ ಹುಡುಕಲು
ಸಿಗದಿದ್ದರೆ ಮೂರು ಎಳೆಯದಾರಕ್ಕೆ ಬರವೇನಿಲ್ಲವೆಂದುಕೊಂಡ
ಎದುರಿಸುರು ಬಿಡುತ್ತಾ ಓಡೋಡಿ ಬಂದ ಮನೆಗೆ
ಗೇಟಿನ ತುದಿಯೊಂದಕ್ಕೆ ಸಿಕ್ಕಿ ಹಾರಾಡುತ್ತಿದ್ದ ಜನಿವಾರವ ಕಂಡು ಸಂತೋಷಗೊಂಡ
ಮತ್ತೆ ಕೂಗಬೇಕೆನಿಸಿತು ಅನಂತೂಗೆ
"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಅನಂತೂಗೆ ಅನಿಸಿತು
"ಗುಡಿಯ ಬಿಟ್ಟು ಹೋಗುವರುಂಟು
ಮಸೀದಿ-ಚರ್ಚುಗಳ ಬಿಟ್ಟು ಬಂದವರುಂಟೇ!"
ಎಲ್ಲವೂ ಸರಿ ನಾವೆಲ್ಲರೂ ಸರಿ
ಹಿಂದೂಗಳು ಮಾತ್ರ ವಿಚಿತ್ರ-ಗಾಳಿ ಬಂದಾಗ ತೂರಿಕೊಳ್ಳುವವರು
ತಮ್ಮ ತನವ ಕಳೆದುಕೊಳ್ಳುವವರು
ಹೊಟ್ಟೆಯ ಸುಖಕ್ಕೆ ಏನು ಬೇಕಾದರೂ ಮಾರಿಕೊಳ್ಳುವವರು
ಮತ್ತೆ ಕೊಗಬೇಕೆನಿಸಿತು
"ಗುಡಿ-ಮಸೀದಿ-ಚರ್ಚುಗಳ ಬಿಟ್ಟು ಬನ್ನಿ ಮನುಜರೇ"
ಅಡುಗೆ ಮನೆಯ ದಾರಿ ಚೆನ್ನಾಗಿ ಕಾಣುತ್ತಿತ್ತು.

|| ಮೂಲೆಗುಂಪಾದವರು||

ಬಿಸಿಗಾಳಿ ಎಲ್ಲೆಡೆ ತಣ್ಣನೆ ಗಾಳಿ ಎಲ್ಲಿ ಹುಡುಕಲಿ?
ಬೆಟ್ಟಗುಡ್ಡ ನದಿತೋರೆಗಳಿಲ್ಲಿಲ್ಲ
ಬಿಸಿಲಬೇಗೆಯ ಮಕ್ಕಳು ನಾವು
ಬಿಸಿಲಬೇಗೆಯ ಮಕ್ಕಳು ನಾವು

ಬಾಯಿ ಬಿಟ್ಟು ನಿನಗಾಗಿ ಕಾಯುತಿಹೆ
ಬಾರೆ ಕರಿಮೋಡಗಳೆ ನೀರತನ್ನಿ
ನನ್ನ ಮಕ್ಕಳ ದಾಹ ತೀರಿಸ ಬನ್ನಿ
ಬಿಸಿಲಬೇಗೆಯ ಮಕ್ಕಳ ತಣಿಸಬನ್ನಿ

ಮರಗಿಡ ಕೋಗಿಲೆಗಳು ಇಲ್ಲಿವೆ
ಮಲೆನಾಡ ಗಾನಕೋಗಿಲೆಗಳಂತೆ
ಬಿಸಿಲಕೋಗಿಲೆಗಳು ಹಾಡಬಲ್ಲವು
ತನ್ನ ತಾಯ ಸೌಂದರ್ಯವ ಹೊಗಳಬಲ್ಲವು

ನಾವು ನಾವು ಬಲಿಷ್ಟರೇ?
ಇತಿಹಾಸದಲ್ಲಿ ಇಲ್ಲಿಯವರ ನೆರಳಿಲ್ಲ
ಬಲ್ಲವರೇ ಎಲ್ಲಾ! ಮೊಲೆಗೆತಳ್ಳಿ ನಕ್ಕವರೇ!
ಕಾಲಕಸದಂತೆ ಕಂಡವರೇ! ಆಟಕುಂಟು ಲೆಕ್ಕಕ್ಕಿಲ್ಲ

ದೇಶಕ್ಕೆ ಸ್ವಾತಂತ್ರ ಬಂತು!
ಯಾರಿಗೆ ಬಂತೋ ಸ್ವಾತಂತ್ರ? ನರಿ ರಾಜಕಾರಣಿಗಳಿಗೆ
ಹಬ್ಬ ಆಳುವವರಿಗೆ ನರಕ ಇಲ್ಲಿ ಬದುಕಿದವರಿಗೆ
ಪ್ರಜಾಪ್ರಭುತ್ವ ಗುಲಾಮಗಿರಿಯ ಇನ್ನೊಂದು ಹೆಸರು

||ಕೃಷ್ಣನೆಂದರೆ ನಂಬಿಕೆ||

ಕೃಷ್ಣಾ ನಿನ್ನ ಕಂಡರದೇಕೋ
ಮನಸ್ಸಿಗೆ ತುಂಬಾ ಸಂತಸ

ಕೃಷ್ಣನೆಂದರೆ ಕಪ್ಪಂತೆ
ನಂಬಿದವರ ಜ್ಯೋತಿಯಂತೆ

ಕೃಷ್ಣನೆಂದರೆ ಒಲವಂತೆ
ಗೋಪಿಯರ ಪ್ರಾಣದೇವನಂತೆ

ಕೃಷ್ಣನೆಂದರೆ ಸ್ನೇಹವಂತೆ
ಸುಧಾಮನ ಪಾದ ಸೇವಕನಂತೆ

ಕೃಷ್ಣನೆಂದರೆ ಗೌರವವಂತೆ
ಭೀಷ್ಮರ ಗುರುವಂತೆ

ಕೃಷ್ಣನೆಂದರೆ ಶಕ್ತಿಯಂತೆ
ನಮ್ಮೊಳಗಿನ ಮನದ ಬಿಂಬವಂತೆ

||ವಾದ-ಪಥ-ಮತ||

ಆ ವಾದ ಈ ವಾದ
ಈ ಮತ ಆ ಮತ ಕೇಳಿರಿ
ಮನಸು ಗಟ್ಟಿ ಮಾಡಿ
ದೂರಕೆ ಅದನು ತಳ್ಳಿರಿ

ಕೋಮುವಾದ ಜಾತಿವಾದ
ಏಕೆ ಬೇಕು ಜೀವಕೆ?
ನಕ್ಸಲ್ ವಾದ ಮನುವಾದ
ತಳ್ಳಬೇಕು ಮಸಣಕೆ

ವಿಶ್ವ ಪಥ-ಮನುಜ ಮತ
ಕಾಣುವಿರೇಕೆ ಕನಸು-ಹಳತು
ರಾಜಕೀಯ ಪಥ-ದುಡ್ಡಿನ ಮತ
ಇಂದು ಮುಂದೆ ಜನಕೆ ಹಸುರು-ಹೊಸತು

ಸ್ವಾರ್ಥ ಪಥ-ದುಡ್ಡಿನ ಮತ
ಇದುವೆ ಕಾರಣ ಸರ್ವಕೂ
ಆ ಪಥ ಈ ಮತ
ಭ್ರಾಂತಿ ತೊಂದರೆ ಎಲ್ಲಕೂ

|| ಜ್ಣಾನದ ತೀರ||

ಬದುಕು ಬಾರವಾಗಬಾರದು
ಬಾಳಬಂಡಿಯ ಚಕ್ರ ಮುರಿಯಬಾರದು\
ಬದುಕು ಸಾಗಲಿ
ಕಾಲಚಕ್ರ ಉರುಳಲಿ\\

ಮತ್ತೆ ವಸಂತ ಬರುವ
ಪ್ರಕೃತಿಯಲಿ ಚೈತನ್ಯ ತುಂಬುವ\
ಮರಳಿ ತಂದ ಜೀವಕೆ ಹರುಷ
ನಮಗಂದೇ ಹೊಸ ವರುಷ\\

ಮುಪ್ಪು ನಮಗೆ
ಎಲ್ಲಿಂದಲೋ ಬಂದವರು ಇಲ್ಲಿಗೆ\
ನೂರು ದಾರಿ ಹರಿವ ನೀರು
ಸೇರುವ ಗುರಿ ಒಂದೇ\\

ನಾವು-ನೀವು ಭೇದ ಹೆಚ್ಚು
ನಮ್ಮ ನಿಲುವು ದೇವರಿಗೇ ಮೆಚ್ಚು\
ಅರಿವು ಮಾತ್ರ ದೂರ
ಎಂದು ಸೇರುವೆವೋ ಜ್ಣಾನದ ತೀರ\\

||ಗುರು||

ಲೋಕದೊಳು ಬಹುಮಂದಿ
ಜೀವನದಲಿ ಬೆಂದು
ಹದವಾಗಿ ಬೆಳೆದು
ಮಿತವಾಗಿ ಮಣಿದು
ಶ್ರೀವಾಣಿ ಸಂಗದಲಿ ಬಲುಬಂಧಿ

ನಿತ್ಯವೂ ಸಾಧನೆಯ ತಪವು
ಚೈತನ್ಯದ ಒಲವು
ಬರಲೆಮಗೆ ಎದುರಿಸುವ ಬಲವು
ಸಾಧಿಸುವ ಛಲವು
ದಾರಿತೋರು ಜಗದೊಳಗೆ ಪರಮ ಗುರುವೇ

ಬಾಳಿನಲಿ ಜ್ಜಾನ ಜ್ಯೋತಿಯ ಹಚ್ಚಿ
ಯೋಗ ಜ್ಜಾನದ ರೆಕ್ಕೆಯ ಬಿಚ್ಚಿ
ಕನಿಕರಿಸು ಕಾರುಣ್ಯವಾ ಚುಚ್ಚಿ
ಕ್ರಾಂತಿಯ ಕಹಳೆಯ ಊದು ಬಾ ಸಚ್ಚಿ-
ದಾನಂದ ಸ್ವರೂಪನೇ ಎಚ್ಚ-
ರಿಸು ಬಾ ಪರಮ ಗುರುವೇ

ಹುಟ್ಟಿದಾ ಜೀವ
ಎತ್ತ ಹೋಗದು ಇಲ್ಲಿ
ಬೆಳೆಬೆಳೆದು ಏರುವುದು ದಿಗಂತಕ್ಕೆ
ನಿಮ್ಮ ಯೋಗದಾ ಫಲವ
ಜೀವದಾ ಮೇಲಿಟ್ಟು ಹರಸಿ
ಜೀವನವ ಉದ್ಧರಿಸೋ ಪರಮಗುರುವೇ

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...