ಓ ಶಾಂತಲೇ!

ಓ ಶಾಂತಲೇ! ಓ ಶಾಂತಲೇ!
ನೀನೇಕೆ ಆತ್ಮಹತ್ಯೆ ಮಾಡಿಕೊಂಡೆ?
ಹೊಯ್ಸಳೇಶ್ವರನ ಪಟ್ಟದರಾಣಿ ನೀನು
ನಿನಗೆ ಕಷ್ಟವದಾವುದು ಕಾಡಿತು?
ಶಿವಗಂಗೆ ರಮಣೀಯ, ಮನೋಹರ
ನಿನಗೆ ಮನಸ್ಸಾದರೂ ಹೇಗೆ ಬಂತು ಸಾವನ್ನು ಅಪ್ಪಲು?
ಬೆಟ್ಟವನ್ನು ಹತ್ತುವುದೇ ಒಂದು ಸವಾಲು!
ಜೀವನವೂ ಒಂದು ಸವಾಲೆಂದು ನಿನಗೆ ಅನಿಸಲಿಲ್ಲವೇ?
ಸಾವೇ ಎಲ್ಲದಕ್ಕೂ ಉತ್ತರವೆಂದು ನೀನೇಕೆ ತಿಳಿದೆ?
ಸತ್ತು ಯಾವ ಸಮಸ್ಯೆಗೆ ಉತ್ತರ ಕಂಡುಕೊಂಡೆ ಹೇಳು?
ನೂರು ಸಮಸ್ಯೆಗಳಿವೆ ಪರಿಹಾರ ಕಾಣಲು
ನಿನ್ನಂತಹ ಧೀರ ವನಿತೆಯರು ಬೇಕು ದಾರಿ ತೋರಲು
ದೇವರು ಕೊಟ್ಟ ಪ್ರಾಣ, ತ್ಯಾಗಮಾಡಲಿ ನಿನಗೇನಿದೆ ಹಕ್ಕು
ಸಾಧಿಸಿ ತೋರಿಸಬೇಕಾದದ್ದು ಬಹಳಷ್ಟಿತ್ತು, ಪೂರ್ಣಗೊಳಿಸದೇ ನೀನೇಕೆ ಹೋದೆ?
ಬೆಟ್ಟದ ಮೇಲೆ ಬಂದವರಿಗೆ ವಿಶಿಷ್ಟ ಅನುಭವವಾಗುತ್ತೆ
ದಣಿದ ದೇಹ,ಮನಸ್ಸಿಗೆ ಮುದನೀಡುತ್ತೆ
ಹೊಸ ಯೋಚನೆಗಳಿಗೆ ಹುಟ್ಟುನೀಡುತ್ತೆ
ಈ ಅನುಭವ ನಿನಗಾಗಲಿಲ್ಲವೇ?
ಜೀವನದಲ್ಲಿ ಮೇಲೇರುವುದು ಬಹಳ ಕಷ್ಟ
ಬೆಟ್ಟವನ್ನು ಹತ್ತಿದರೆ ಸತ್ಯಾಸತ್ಯತೆಯ ಪ್ರತ್ಯಕ್ಷ ದರ್ಶನವಾಗುತ್ತೆ
ನಿನಗೆ ಈ ದರ್ಶನವಾಗಲಿಲ್ಲವೇ?
ನನಗೆ ಈ ಪ್ರಶ್ನೆ ಇಂದಿಗೂ ಕಾಡುತ್ತಿದೆ
ಉತ್ತರ ನಿನ್ನಂದ ಮಾತ್ರ ಸಿಗುವಂತಹುದು
ನಾಟ್ಯವಿಶಾರದೆ ನೀನು
ಹೊಯ್ಸಳೇಶ್ವರನ ಪಟ್ಟದ ರಾಣಿ ನೀನು
ಅನೇಕ ಶಿಲ್ಪಿಗಳಿಗೆ ಸ್ಪೂರ್ತಿ ದೇವತೆ ನೀನು
ನಿನ್ನ ಸಾವು ನಮಗೆ ತುಂಬಲಾರದ ನಷ್ಟ
ನಿನ್ನ ಸಾವು ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ
ನಿನ್ನ ಪೂರ್ಣತೆಗೆ ಯಾವುದು ಸವಾಲಾಗಿತ್ತು, ತಿಳಿಯದಾಗಿದೆ
ಆ ಸ್ಥಳವ ಕಂಡು ಒಮ್ಮೆಲೆ ಮನಸ್ಸು ಕಳೆಗುಂದಿತು
ನೂರು ಪ್ರಶ್ನೆಗಳು ದಾಳಿಮಾಡಿತು
ನಿನಗೆ ನೂರು ನಮನ
ನಿನ್ನ ಆ ಕೋಮಲ ಹೃದಯ ಅದೆಷ್ಟು ಸಂಕಟಪಡುತ್ತಿತ್ತೋ?
ಯಾರೂ ಅರಿಯರು
ಹೆಣ್ಣಿನ ಮನಸ್ಸು’ ಅಂದೂ ಹಾಗೆಯೇ ಇದೆ,ಇಂದೂ ಹಾಗೆಯೇ ಇದೆ’
ಅರಿಯುವ ಮನಸ್ಸುಗಳ ಬೇಡಿಕೆಯಿದೆ
ಹೆಣ್ಣಿನ ಶೋಷಣೆಗೆ ಕೊನೆಯೆಲ್ಲಿ
ಸಾವಿನಲ್ಲಂತೂ ಅಲ್ಲ ಎಂಬ ನಂಬಿಕೆ ನನ್ನದು
ವಿಜ್ಘಾನ, ತಂತ್ರಜ್ಘಾನ ಬೆಳೆದರೆಷ್ಟು?
ಶೋಷಣೆ ಮಾತ್ರ ಮುಗಿಯಲಾರದು
ಶಾಂತಲೇ ನೀನು ಶೋಷಿತರ ಪ್ರತೀಕ
ಸಾವಿರಾರು ಅಭಲೆಯರಿಗೆ ನೀನು ಮಾರ್ಗದರ್ಶಿಯಾಗಬಹುದಿತ್ತು ಗುಣಾತ್ಮಕವಾಗಿ
ಆದರೂ ಈಗಲೂ ಮಾರ್ಗದರ್ಶಿಯಾಗಿರುವೆ ಋಣಾತ್ಮಕವಾಗಿ
ನಿನ್ನಂತೆ ಅಸಹಾಯಕರು,ಶೋಷಣೆಗೆ ಬಲಿಪಶುವಾದವರು ನಿನ್ನಂತೆಯೇ ಆತ್ಮಹತ್ಯೆಯ ದಾರಿಹಿಡಿಯುತ್ತಾರೆ,
ಈಗಲೂ ಹಿಡಿಯುತ್ತಾರೆ,ಮುಂದೆಯೊ.........
ಓ ಶಾಂತಲೇ! ಓ ಶಾಂತಲೇ!

||ಹಕ್ಕಿ ಹಾರುತಿದೆ ನೋಡಿದಿರಾ||


ಹಕ್ಕಿ ಹಾರುತಿದೆ ನೋಡಿದಿರಾ!
ಬಾನಿನಂಗಳದಲಿ ರೆಕ್ಕೆ ಬಿಚ್ಚಿ
ಹಾರುತಿರುವೆ ಹಕ್ಕಿಯ ನೀವು ನೋಡಿದಿರಾ!


ಶ್ವೇತ ಮೋಡಗಳ ಮೇಲಿನ ಪ್ರೀತಿಯಿಂದಲೋ
ಕೃಷ್ಣ ಮೋಡಗಳ ಮೇಲಿನ ವೈರದಿಂದಲೋ
ಗಗನಕೆ ಹಾರುತಿರುವೆ ಹಕ್ಕಿಯ ನೀವು ನೋಡಿದಿರಾ!


ರವಿಯ ಕಿರಣಗಳ ಬೆಂದು ಹಾಹಾ ಕಾರದಿಂದಲೋ
ಚಂದ್ರಮುಖಿಯ ಸೌಂದರ್ಯಕ್ಕೆ ಮಾರುಹೋಗಿಯೋ
ಗಗನಕೆ ಹಾರುತಿರುವ ಹಕ್ಕಿಯ ನೀವು ನೋಡಿದಿರಾ!

||ಚಂದ್ರಮುಖಿ||


ಚಂದ್ರಮುಖಿಯ ಬರುವಿಕೆಗಾಗಿ
ನೈದಿಲೆಯೊಂದು ಕಾತರಿಸುತ್ತಿದೆ
ಪ್ರೇಮದ ತಂಗಾಳಿಯ ಹೊತ್ತು
ಬಾರೆಯಾ ನಿನಗಾಗಿ ಪರಿತಪಿಸುತ್ತಿರುವೆ
ಕಾರ್ಮೋಡಗಳು ಹನಿಹನಿಯ ನೀರು
ಸುರಿಸುವೆಯೆಂದು
ಬಾಯಾರಿದ ಭೂಮಿಯ ಹಾಗೆ
ಕಾತರದಿ ಹೃದಯ ಹಿಗ್ಗುತ್ತಿದೆ
ನಿನ್ನ ಪ್ರೀತಿಯ ಹನಿಜೇನಿಗಾಗಿ.
--------------------------------------

||ದ್ವಂದ್ವ ||

ಕತ್ತಲ್ಲಲೆಲ್ಲೋ ಹುಡುಕುತ್ತಿದ್ದೆ
ನನ್ನ ಕನಸನ್ನ, ಜೀವನವನ್ನ .....
ಅರೆರೆ! ಈ ಮಿಂಚುಹುಳ .......
ಬೆಳಕ ಚಿಮುತ್ತಾ, ಕತ್ತಲ ಸೀಳುತ್ತಾ,....
ಎಲ್ಲೆಲ್ಲೋ ಹೊರಟಿದ್ದು, ನನ್ನ ಏಕೆ ಸೆಳೆದಿದೆ?
ಎಲ್ಲಿ ಹೋದವು ನನ್ನ ಕನಸು, ಜೀವನ?

ಹೇ...! ನನ್ನ ಮನಸ್ಸನ್ನೇಕೆ ಸೆಳೆದ ಎನ್ನುವ
ಹೊತ್ತಿಗಾಗಲೇ ದೃಷ್ಟಿಯಿಂದಲೇ ಪರಾರಿ
ಅನಾಥ ಬೇತಾಳಗಳಾಗಿ ಅದರ ಸೆಳೆತಕ್ಕೆ ಒಳಗಾಗಿದ್ದ
ಕನಸು, ಜೀವನ ಮತ್ತೆ ಕತ್ತಲಲ್ಲಿ ಅಲೆವಂತಾಯಿತು.

ಹೋ...! ಅನೈತಿಕತೆಗೆ ಸೆಳೆತ ಹೆಚ್ಚೇಕೆ?
ಮಧುರತೆಯಿರುವುದು ಶಾಂತತೆಗೆ ಹೊರತು ಸುಳ್ಳಿಗಲ್ಲ.
ಜನರ ಪರೀಕ್ಷೆಲೋಸುಗವೇ ಸರಿ?
ಅನೈತಿಕತೆಯೆಂದರೆ ಸಾವೇ ಅಲ್ಲವೇ?
ಸಾವನ್ನಪ್ಪುವರು ಹೇಡಿ, ಮೂರ್ಖರೇ ಅಲ್ಲವೇ?
ಧೈರ್ಯವೇ ಸಾಧನೆಯ ಮೊದಲ ಹೆಜ್ಜೆ........

||ಬಾಲೆ||

ಏಕೆ ನಿಂತಿಹಳೋ ಬಾಲೆ
ಅನವರತ ಬಾಗಿಲಲಿ
ಯಾರಿಗೋ ಕಾಯುತಿಹಳು
ಪಥಿಕ ನಾ ಕಾಣೆ ೧
ತರುಣ ತಾವರೆಯಂತೆ
ಬಾಗಿಹಳು ಬಾಗಿಲಿಗೆ
ತುಟಿಯಂಚಿನ ನಗುವು
ಬಿರಿದ ತಾವರೆಯಂತೆ ೨

ನೆಟ್ಟ ದೃಷ್ಟಿಯು ಏಕೋ
ಪುಟಿಯುತಿದೆ ಚಿಟ್ಟೆಯಂತೆ
ಇನಿಯನಾ ಕಂಡು ಮೋಡದ
ಹಿಂಬದಿಗೆ ಚಂದ್ರಮುಖಿ
ಜಾರಿದಂತೆ ಜಾರುತಿಹಳು
...ಕವಿಯಾ ಕಂಡು
ಕೋಲ್ಮಿಚಿನಂತೆ ಬಾಗಿಲ
ಹಿಂದೆ ಮರೆಯಾದಳು .....೩

ಧಾತ್ರಿ


ಆದಿಯಲಿ ಪೆಳ್ವೆ ಧಾರುಣೆಯ
ಸಹಜ ಸೊಬಗ
ಹೇಳಿಕೆಯ ಮಾತಲ್ಲ ಆಲಿಸದೆ
ಪರಿತಪಿಸದಿರು ನಿಸರ್ಗಪ್ರಿಯ ೧


ಎನ್ನ ಧಾತ್ರಿಯು ಬಹು
ಸೌಂಧರ್ಯವತಿಯ
ಎಂದು ಪೇಳಿಪರು ಪೂಜಿಪರು ಋಷಿವರ್ಯರು
ಹಿಂದೆ ಈ ಮಾತು ಸುಳ್ಳಲ್ಲ ನಿಸರ್ಗಪ್ರಿಯ೨


ನವ ಜವ್ವನದ ತರುಣಿ
ತರುಲತೆಗಳ ಅಂಗಸ್ಮಿತೆ
ಹರೆಯ ಮುಗಿಯದು ಈಕೆಗೆ
ಸತತ ಜವ್ವನೆ ನಿಸರ್ಗಪ್ರಿಯ೩


ಹರಿಯ ಪ್ರೀತಿಯ ಅಂಗನೆಯೀಕೆ
ಧುರುಳ ಹಿರಣ್ಯಕ ಮನಸೋತ
ಧಾತ್ರಿಯ ಸೌಂದರ್ಯಕೆ
ವರಾಹ ರಕ್ಷಿಪ ಧಾತ್ರಿ ನಿಸರ್ಗಪ್ರಿಯ ೪


ಹಗಲು-ಇರುಳು ಕಾಯ್ವರು
ಸೂರ್ಯ-ಚಂದ್ರರು
ಸೃಷ್ಠಿಯ ಜೀವಕೋಟಿಗೆ
ಕಾರಣನು ನೇಸರು ನಿಸರ್ಗಪ್ರಿಯ ೫


ಧಾರುಣಿಯ ಹೃದಯ ವೀ ಹಿಮಾನಿ
ಮನಃ ಕಠಿಣ ವೀ ಪರ್ವತ ವರ್ಷಿಣಿ
ಮಾತೃತ್ವವೇ ಈ ಜಲದಿ ಕಾನನ
ಮಾತೃ ಅಧಿದೇವತೆ ಧಾತ್ರಿ ನಿಸರ್ಗಪ್ರಿಯ ೬


ವನ್ಯಂಗಗಳು ಹಲವು
ಪೋಷಿಸುವುವು
ಕಾಲ ಅಂತ್ಯವೆಡೆಗೆ ಸರಿಯೆ
ನವನವ ವಸಂತಗಳು ಧಾತ್ರಿಗೆ ನಿಸರ್ಗಪ್ರಿಯ೭


ತರುಲತೆಗಳು ತುಂಬಿಹುದು ಕಾನನದಿ
ತಂಪೆರೆಯಲು ಬಳುಕಿಹಳು ಗಂಗೆ ಕಾವೇರಿ
ಪುಟ ಪುಟನೆ ನೆಗೆಯುತ್ತಿಹವು ಪಾತರಗಿತ್ತಿ
ಪುಷ್ಪಗಳ ಚೆಲುವು ಧಾರುಣಿಯ ನಗುವು ನಿಸರ್ಗಪ್ರಿಯ ೮


ನವ ಚೈತ್ರಗಳು ಉರುಳುರುಳಿ ಹೋದವು
ಜೀವಕೋಟಿಗಳು ಬಂದು ಬಂದು ಹೋದವು
ಧಾರುಣಿಯು ಧಾರುಣಿಯೇ
ಕೊರತೆಯಿಲ್ಲ ಜವ್ವನದ ಧಾತ್ರಿಗೆ ನಿಸರ್ಗಪ್ರಿಯ ೯


ಕೋಗಿಲೆಗಳು ಪೇಳುವುವು
ಧಾರುಣಿಯ ಚೆಲವು ಶ್ರೀಗಂಧವು ಪಸರಿಪುದು ಸ್ನೇಹವ
ಮತ್ತೆಲ್ಲೂ ಕಾಣೆ ಈ ಧಾತ್ರಿ ನಿಸರ್ಗಪ್ರಿಯ ೧೦


ಧಾರುಣಿಯ ಸುತರೊಳ್
ಅತಿ ಮತ್ತ ಈ ಮನುಜ
ಪ್ರಾಣಿಗಳೊಳ್ "ಅತಿಪ್ರಾಜ್ನ" ಬಿರುದಾಂಕಿತ
ಸೂರೆಗೊಳ್ಳುತ್ತಿಹನು ಧಾತ್ರಿಯ ಸೊಬಗ ನಿಸರ್ಗಪ್ರಿಯ ೧೧


ಮನವ ಹಿಗ್ಗಿಸಿ ಹಾಡಲಿಲ್ಲ
ಕೋಗಿಲೆಗಳಂತೆ
ಕುಣಿಯಲಿಲ್ಲ ಪುಟ ಪುಟನೆ ಪಾತರಗಿತ್ತಿಯಂತೆ
ಧಾರುಣಿಯ ಕಣ್ಣೀರೆ ಗಂಗಾ ಕಾವೇರಿ ನಿಸರ್ಗಪ್ರಿಯ ೧೨


ಕಾಂಕ್ರೀಟ್ ಕಾಡುಗಳು ತುಂಬಿಹುದು
ಎಲ್ಲೆಲ್ಲೂ ದುರುಳ ಮನುಜ
ಮನುಜವಿದ್ದೆಡೆ ತೃಣವೂ ಬೆಳೆಯಲೊಲ್ಲದು
ಬಿರುದಾಂಕಿತರೀ ನಡೆ ವಿನಾಶದೆಡೆಗೆ ಧಾತ್ರಿ ನಿಸರ್ಗಪ್ರಿಯ ೧೩

ಕಿವಿ ಚಿಟ್ಟೆನ್ನುವ ಸಪ್ಪಳ
ನೊರೆ ಉಕ್ಕುವ ಕಶ್ಮಲ
ಅಲ್ಲೋಲ ಕಲ್ಲೋಲ ವೀ ಧರೆ
ರಕ್ಷಿಪನಾರೀ ಧಾತ್ರಿಯ ನಿಸರ್ಗಪ್ರಿಯ ೧೪

ಸಹಿಸಲೊಲ್ಲರು ತರುವ ಕಂಡು
ಹಿಡಿಯುವರು ಮಚ್ಚು ಕುಡಿಗೊಲು
ಮತಿ ಭ್ರಷ್ಟರೀ ಮನುಜರು
ಇನ್ನೇಲ್ಲಿ ಜವ್ವನ ಧಾತ್ರಿಗೆ ನಿಸರ್ಗಪ್ರಿಯ ೧೫


ನಿಜಸುತನೊಬ್ಬ ಬಿಕ್ಕಳಿಸುತಲೀ
ಪೇಳ್ದ ಧಾರುಣಿಯೂ ಪಾಠಿ
ಹೀಗೇಕೆ ಈ ಪರಿ

ಮಾತೃಜಗೆ ಮತಿಯಿಟ್ಟು ಕಾಯೋ ನಿಸರ್ಗಪ್ರಿಯ ೧೬


ಹೀಗೇಯೇ ಕಾಲವು ಕಳೆಯೆ
ಸವಕಲಾಗುವಳು ಧಾತ್ರಿ
ಪ್ರಳಯವೂ ಖಾತ್ರಿ
ಮನುಜಗೆ ಮತಿ ಬೀಜವ ಬಿತ್ತು ನಿಸರ್ಗಪ್ರಿಯ ೧೭


ಈ ಮಾತು ಸುಳ್ಳಲ್ಲ
ಕಾಗೆಯು ಬಿಳಿಯಲ್ಲ
ಈ ಪರಿ ಕಾಗೆಯು ಬಿಳಿಯಹುದು
ಸತ್ಯವ ಕಾಯೋ ನಿಸರ್ಗಪ್ರಿಯ ೧೮


ಬಳಕುತ್ತಿದ್ದ ಧಾತ್ರಿ
ಕುಂಟುತ್ತಿಹಳೀಗ
ರೋದಿಸುತ್ತಿರುವ ಜೀವಕೋಟಿಯ
ಕೈ ಹಿಡಿದು ಉದ್ಧರಿಸು ನಿಸರ್ಗಪ್ರಿಯ ೧೯


ಮೇಲ್ಮಾತು ಸುಳ್ಳಾಗಲಿ
ಕುಂಟಿಯಲ್ಲ ವೀ ಧಾತ್ರಿ
ಬಳುಕುವ ಜವ್ವನದ ಭಾಲ
ನಿಜವಾಗಲಿ ಮಾತು ಸಜ್ಜನಕೆ ಧಾತ್ರಿ ನಿಸರ್ಗಪ್ರಿಯ ೨೦
--------------------------------------

||ಸಾಧನೆಯ ಹೆಜ್ಜೆ||

ನಾವೇನೋ.......ನಾವು
ನಡೆದಂತೆ ದಿನಂಪ್ರತಿ
ನಾವೇ ನಾವು ಪ್ರತಿಕ್ಷಣ....ಯೋಚಿಸಿದಂತೆ
ಉತ್ತಮತ್ವದ ಶ್ರೇಣಿ
ಹೆಜ್ಜೆ ಹೆಜ್ಜೆ ಇಟ್ಟಂತೆ
ಸಾಧನೆಗೆ ಕೊನೆಯಿಲ್ಲ
ಹವ್ಯಾಸಕ್ಕೆ ಎಣೆಯಿಲ್ಲ
ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಮುಂದೆ ಸಾಗು........
__________________________________

||ಮನಸಿನ ಆಳ||

ಅಲ್ಲೇನು?..... ಇಲ್ಲೇನು?....
ಅದು ದೊಡ್ದದು!
ಇದು ದೊಡ್ದದು!
ಯಾವುದು ದೊಡ್ದದು?...
ಹಿಮಾಲಯದ ಎತ್ತರ!
ಸಮುದ್ರದ ಆಳ!.......
ಯಾವುದು ಚಿಕ್ಕದು?
ಇರುವೆ?.. ರಕ್ತದ ಕಣ?
ಪರಮಾಣುವಿನ ಅಣು.......ಯಾವುದು?
ಅಕಾಶಕ್ಕೂ ಎತ್ತರ..
ಸಮುದ್ರಕ್ಕೂ ಆಳ...
ನಮ್ಮೋಳಗಿನ ಮನದ ಹರವಿನ ಮುಂದೆ ಎಲ್ಲವೂ ಚಿಕ್ಕದು.
ನಿನ್ನೋಳಗಿನ ಅರಿವು ನಿನಗಾಗಲಿ
ಅದೇ ಈ ಜಗತ್ತಿನ ಮಹೋನ್ನತ ಜ್ಜಾನ
_______________

ಚುನಾವಣೆ

ಚುನಾವಣೆ ಬಂತು
ಚಿತಾವಣೆ ಬಂದೇ ಬಂತು
ಹೆಂಡ,ಹಣದ ಹೊಳೆ ಹರಿಯಲು ಶುರುವಾಯಿತು
ಆಕಾಶದಲ್ಲಿ ಕರಿ ಮೋಡಗಳಿಲ್ಲ
ಮಳೆಬರುವ ಲಕ್ಷಣಗಳಿಲ್ಲ
ಮೋಹದ ಬಲೆ ಎಲ್ಲೆಲ್ಲೂ ಹರಡಿದೆ
ಕೈಕಟ್ಟಿ ಕುಳಿತರೆ ಮತ್ತೈದು ವರ್ಷಕಾಯಬೇಕಿದೆ


ರಾಜಕಾರಣೀಗಳು ಸಿದ್ದರಾಗಿದ್ದಾರೆ ಹಣ,ಹೆಂಡ ಹಂಚಲು
ಮತ್ತೊಮ್ಮೆ ಜನ ಸಿದ್ದರಾಗಿದ್ದಾರೆ ಪಂಗನಾಮ ಹಾಕಿಸಿಕೊಳ್ಳಲು
ಮಾತಿಗೆ ತಲೆದೂಗುತ್ತಾರೆ
ಹೆಂಡಕ್ಕೆ ಮೈಮರೆಯುತ್ತಾರೆ
ಮತದ ಹಕ್ಕನ್ನು ಮಾರಾಟ ಮಾಡಿಕೊಳ್ಳುತ್ತಾರೆ
ನಶೆ ಇಳಿದಮೇಲೆ ಕೈ ಕೈ ಹಿಸುಕಿಕೊಳ್ಳುತ್ತಾರೆ
ಮತದಾರ ಪ್ರಭು ಮತ್ತೆ ಮತ್ತೆ ಮೋಸಹೋಗುತ್ತಾನೆ


ಉಪಯೋಗವಿಲ್ಲದ ಪಕ್ಷವೆಂದು
ಅಭ್ಯರ್ಥಿಗಳೆಲ್ಲಾ ಅಯೋಗ್ಯರೆಂದು
ಜನರ ಒಳಿತು ಯಾವ ಪಕ್ಷಕ್ಕೂ ಬೇಡವೆಂದು
ಅರಚುತ್ತಾ, ಕೆಸರೆರಚುತ್ತಾ ನೊಂದುಕೊಳ್ಳುತ್ತಾನೆ ಪ್ರಜೆ
ಕದ್ದು ಮುಚ್ಚಿ ಹಂಚುವ ಪಕ್ಷಗಳು
ಎಲ್ಲವೂ ಸಭ್ಯ ಪಕ್ಷಗಳೇ!
೧೨೫ ವರ್ಷದ ಪಕ್ಷ,ಕೋಮುವಾದಿ, ಜಾತ್ಯಾತೀತ ಪಕ್ಷ
ಹರುಕು ಮುರುಕು ಪಕ್ಷಗಳಿಗೆ ಗೊತ್ತಿದೆ ಜನರನ್ನು ಹೇಗೆ
ಕೊಂಡುಕೊಳ್ಳುವುದೆಂದು

ಸ್ವಾರ್ಥ ಸಾಧನೆ


ಮನದಲಿ ಏನೂ ಇಲ್ಲ
ಎಲ್ಲವೂ ಖಾಲಿ ಖಾಲಿ
ಕಣ್ಣು ಮುಚ್ಚಿದರೆ ಕತ್ತಲು
ಕಟ್ಟಿ ಹಾಕಿದೆ ಮುಂದೆ ಹೋಗದಿರಲು


ನೂರು ದಾರಿಗಳಿವೆ ಮುಂದೆ
ಯಾವುದನ್ನು ಆರಿಸಿಕೊಳ್ಳಲಿ ಪ್ರಶ್ನೆ ಮೊದಲಿದೆ
ನೂರು ಜನರು ಹೋಗುತಿಹರು ಮುಂದೆ
ಯಾರನ್ನು ಕರೆಯಲಿ ಕೈಹಿಡಿದು ನಡೆಸಿರೆಂದು


ನಾಮುಂದು ತಾಮುಂದು ಗೊಡವೆ ಇಲ್ಲಿ ತುಂಬಿದೆ
ಒಬ್ಬರ ಕಾಲು ಒಬ್ಬರು ಹಿಡಿದಿದ್ದಾರೆ ಮೇಲೇರುವನ ಕಾಲೆಳೆಯಲು
ಮತ್ತೇ ಕೆಲವರು ಕೆಸರೆರಚುತ್ತಿದ್ದಾರೆ ಮುಂದೆ ಹೋಗದಂತೆ
ಎಲ್ಲರೂ ನಿಂತಲ್ಲೇ ನಿಂತಿದ್ದೇವೆ ಅಧೋಗತಿಯ ಕಡೆಗೆ ಮುಖಮಾಡಿ


ರುದ್ರನರ್ತನ,ಅಟ್ಟಹಾಸ ಕಣ್ಣಮುಂದೆ ನಲಿದಿದೆ
ಏನು ಮಾಡಬೇಕೆಂದು ತೋಚದಾಗಿದೆ
ಕಾಲೆಳೆಯಬೇಕೆ?,ಕಾಲುಕೀಳಬೇಕೇ? ಮನದಲ್ಲಿ ಶೂನ್ಯ
ಗುಂಪಿನಲ್ಲ್ಲಿ ಗೋವಿಂದ-ಗುಂಪು ಹೋದ ಕಡೆ ನಾವು
-ಕುರಿಗಳು ನಾವು ಕುರಿಗಳು


ಎಲ್ಲವೂ ಸರಿಯಿಲ್ಲ, ಎಲ್ಲರೂ ಸರಿಯಲ್ಲ
ನಮ್ಮ ಮೂಗಿನ ನೇರಕ್ಕೆ
ನಾನು ಸರಿ, ನೀನು ಸರಿಯಿಲ್ಲ
ಎಲ್ಲವೂ ನಮ್ಮ ಸ್ವಾರ್ಥ ಸಾಧನೆಗೆ

ಗರಗಸ

ಗರಗಸ.. .. .. .. ಗರಗಸ
ಇವನು ನಮ್ಮ ಗರಗಸ
ಸನಿದಪ.. ಮಗರಿಸ
ಇವನು ನಮ್ಮ ಗರಗಸ


ಇವನು ನಮ್ಮ ಗರಗಸ
ಇವನ ಕೈಗೆ ನಾವು ಸಿಕ್ಕರೆ ಮಗರಿಸ
ಮಗರಿಸ ಗರಗಸ
ಗರಗಸ ಮಗರಿಸ


ಬಾಯಿಬಿಟ್ಟರೆ ನಮಗೆಲ್ಲಾ ಭಯ ಭಯ
ಎದುರುಗಿದ್ದವ ಹರೋಹರ
ಮೆಧುಳಿಗೇ ಕೈ ಹಾಕುವ
ಮಾತಿನಲ್ಲೇ ಭೋರುಗೊಳಿಸುವ

ಗರಗಸ.. .. ಗರಗಸ
ಇವನು ನಮ್ಮ ಗರಗಸ
ಸನಿದಪ ಮಗರಿಸ
ನಿನ್ನ ಜುಟ್ಟು ಎಗರಿಸ

ಕನಸು


ಕನಸಿಲ್ಲದೆ ಏನೂ ಆಗೋದಿಲ್ಲ್ಲಾ
ಕನಸೇ ಜೀವನದ ಮೊದಲ ಹೆಜ್ಜೆಯೆಲ್ಲಾ
ಕನಸಿಲ್ಲದ ಜೀವಕ್ಕೆ ಎಲ್ಲಿದೆ ಸುಖ?
ಕನಸು ತುಂಬಿದ ಜೀವಕ್ಕೆ ಇಲ್ಲಿಲ್ಲ ದುಃಖ


ಕನಸು ಯಾವುದೆಂದು ಹೇಳು ಗೆಳೆಯ?
ಕತ್ತಲಾದ ಮೇಲೆ ಮಧುರ ನಿದ್ದೆ ತರಿಸುವ ಆ ಭ್ರಮೆಯೇ?!
ನಾಳೆ ನಾಳೆ ಎಂದು ಸಿಗದ ಉತ್ತರವೇನು?
ಕೈಯಲ್ಲಿ ಶಕ್ತಿಯಿದ್ದರೂ ಯಾರೋ ದಯಪಾಲಿಸುವರೆಂದು
ಕಾಯುವುದು ಕನಸೇ?


ನಾಳೆ ನಾನು ಹೀಗಾಗಬೇಕು
ನಾಳೆ ನನ್ನ ಬಳಿ ಮನೆ-ಕಾರು-ಬಂಗಲೆ ಇರಬೇಕೆಂಬುದು ಕನಸೇ?
ರಾತ್ರಿ ಮಲಗಿದರೆ ತಂಪು ನಿದ್ದೆ ತರಿಸುವ ತಂಗಾಳಿಯೇ?
ವಾಸ್ತವತೆಗೆ ಎಟುಕದ ಗಗನ ಕುಸುಮವೇ ಕನಸು?


ಕಾಯುವುದು ಬೇಕೇ ಬೇಕು
ಕಾಯದೇ ಬರುವುದು ಈ ಜಗದಲಿ ಯಾವುದು?
ಕಾಯುವಿಕೆಯ ಕಾತುರತೆಯೇ ಸ್ವರ್ಗ ತಿಳಿದಿದೆಯೇ?
ಕನಸಿಗಾಗಿ ಕಾತರಿಸಬೇಕು, ಕನಸಿಗಾಗಿ ನಿದ್ದೆಗೆಡಬೇಕು

ಕನಸು ಕನಸೆಂದು ಕನಸು ಕಾಣುತ್ತಿದ್ದೇನೆ
ಕನಸು ನನಸಾಗಿಸುವ ನನ್ನ ದುಡಿಮೆಯೇನು?
ಪ್ರಯತ್ನದ ದಾರಿ ಮರೆತುಹೋಗಿದೆ
ದಾರಿ ಕಾಣದೆ ಕನಸು ಕನಸೆಂದು ಪರಿತಪಿಸುತ್ತಿದ್ದೇನೆ!

ಕನಸು ಯಾವುದು?
ಕನಸು ಯಾವುದು?
ನಿದ್ದೆಗೆ ಜಾರದಂತೆ ಮಾಡಿ ಕಾರ್ಯತತ್ಪರನ್ನನ್ನಾಗಿಸುವ
ಆ ಚೈತನ್ಯವೇ ಕನಸು

ನಿರಾಸೆ

ನೂರು ಕನಸಿದೆ
ಒಂದು ಮನಸಿದೆ
ಕನಸು ಒಡೆಯುವುದಕ್ಕೆ ಕಾರಣವಿದೆ
ಚಿಗುರಿದ ಕನಸು ಬೆಳೆಯುವಮುನ್ನವೇ ಮುರುಟಿದೆ


ಆಸೆಯಿದೆ
ಸಾಧಿಸುವ ಛಲವಿದೆ
ಆಸೆಯು ನುಚ್ಚುನೂರಾಗುವುದಕ್ಕೆ ಸಂಚುನಡೆದಿದೆ
ಚಿಗುರಿದ ಆಸೆ ಬತ್ತುವುದಕ್ಕೆ ಮನದಲ್ಲಿ ಗೊಂದಲವಿದೆ


ಹಲವು ದಾರಿಯಿದೆ
ಸರಿಯಾವುದೆಂದು ತಿಳಿದಿದೆ
ಮುಂದೆಹೋಗುವ ಇರಾದೆ ಖಂಡಿತವಾಗಿಯೂ ಉಳಿದಿದೆ
ಮನದಲ್ಲಿ ದ್ವಂದ್ವದ ಘರ್ಷಣೆ ಹೆಚ್ಚಾಗುವ ಸೂಚನೆ ದೊರೆತಿದೆ


ಯೋಚನೆಯಿದೆ
ಮನಸ್ಸಿನ ಶಕ್ತಿ ತಿನ್ನುತ್ತಿದೆ
ಇಂದು-ನಾಳೆ ತೂಗುಯ್ಯಾಲೆಯಲ್ಲಿ ತೊಳಲುತ್ತಿದೆ
ಕಾರ್ಯಪ್ರವೃತ್ತನಾಗದೆ ಕೆಲಸವಾಗದೆಂದು ಅರ್ಥವಾಗಿದೆ


ಇಂದಾಗಬೇಕು
ತೊಂದರೆಯಿಲ್ಲ ನಾಳೆಯಾದರೂ..
ಮರೆತು ನಾಳೆ..ನಾಳೆ ಮುಂದೆ ಮುಂದೆ ಹೋಗಬಾರದು
ಹೋಗುತಲಿರಲು ಸುಮ್ಮನೆ ನೋಡುತ್ತಾ ಕುಳಿತರೆ ಕಾದಿದೆ ನಿರಾಸೆ

ಅವನ ಹೆಸರು


ನಿದ್ದೆ ಆವರಿಸಿದೆ
ನಿದ್ರಾದೇವತೆ ಅವನ ಬಿಟ್ಟು ಹೋಗಳು
ಮುಗ್ದತೆಯೆ ಮೈ ತುಂಬಾ ಹೊಕ್ಕಿದೆ
ಕಣ್ಣು ಬಿಟ್ಟರೆ ನಗುವೇ ಆವರಿಸುತ್ತೆ
ಹಸಿವಾದರೇ ಅಳುವಿನ ಗಣಗಳು ರುದ್ರನರ್ತನ
ಹೊಟ್ಟೆ ತುಂಬಿದರೆ ಯಾವ ಚಿಂತೆಯೂ ಇಲ್ಲ
ಮಾತಿಲ್ಲ ಆದರೇ ಮೌನದಲೇ ಶಬ್ದ ತರಂಗಗಳು
ಸಂಗೀತದ ಅಲೆಗಳು ತೇಲುತ್ತಿವೆ
ಸಾವಿರ ಕಣ್ಣುಗಳ ಗಮನ ಅವನ ಮೇಲೆ
ನಿದ್ದೆಯಿಂದ ಏಳಬಾರದೇ
ಎಲ್ಲ ಮನಗಳ ಆಶಯ
ಅಳುವು ಶುರುವಾದರೆ ಎಲ್ಲರೂ ಮಾಯ
ನಗುವು ತೇಲಿ ಬಂದರೆ ಎಲ್ಲರೂ ಹಾರಿಬರುವರು
ಎಲ್ಲರ ಬಾಯಲ್ಲೂ ಅವನೇ
ಎಲ್ಲರಲ್ಲೂ ಯೋಚನೆ ಅವನ ಹೆಸರೇನೆಂದು?
ಅ-ಅಸಾಮಾನ್ಯ
ನೀ-ನಿಧಾನವೇ ಪ್ರಧಾನವೆನ್ನುವವ
ಶ್-ಶಕ್ತ- ಎಲ್ಲವನ್ನೂ ಸಾಧಿಸುವ ಶಕ್ತಿಯುಳ್ಳವ
ಮುದ್ದು ಮುಖದವ
ನಮ್ಮ ಸುಖವನ್ನು ತನ್ನ ನಗುವಿನಿಂದಲೇ ತರುವವ
ನಮ್ಮ ನಿಮ್ಮವ ಅನೀಶ್.

ಅವಳ ಕಣ್ಣೋಟ

ಬೆಳಿಗ್ಗೆ ಕೆಲಸವಿತ್ತು,
ಬ್ಯಾಂಕಿಗೆ ಹೋದೆ ಹಣ ಕಟ್ಟಲು,ಡಿ.ಡಿ ತರಲು.
ಬ್ಯಾಂಕ್ ಅಂದರೆ ಒಂದು ತರಾ ಅಲರ್ಜಿಯಾಗುತ್ತೆ
ಅಲ್ಲಿನ ಜನ ನಮ್ಮ ಸಮಯವನ್ನು ತಿಂದುಬಿಡುತ್ತಾರೆ
ಕಮೀಷನ್ ಕೊಟ್ಟು ನಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳಬೇಕಲ್ಲಿ
ಜನರೂ ಹಾಗೆಯೇ ಇದ್ದಾರೆ ಬಿಡಿ!
ಅಲ್ಲಿನ Sಟiಠಿ ನಲ್ಲಿ ಎಲ್ಲವನ್ನೂ ಬರೆದು ಡಿ.ಡಿಗೆ ಕಮೀಷನ್
ಕೇಳಲು ಅಲ್ಲಿದ್ದ ವನಿತೆಯನ್ನು ಕೇಳಿದೆ
ಬೊಗಸೆ ಕಂಗಳ ಯುವತೆ ನಗುತ್ತಾ ‘ಏನು ಬೇಕು ಸಾರ್’
ಎಂದಳು ಆಕೆಯ ಕಣ್ಣುಗಳು ಬಲು ಸುಂದರವಾಗಿತ್ತು ಹಾಗೇ ಕಣ್ಣುಗಳ ಮಿಂಚು, ತುಟಿಯಲ್ಲಿ ನಗು ಖುಷಿಕೊಟ್ಟಿತು.
ಸದಾ ಮುಖಗಂಟಿಕ್ಕಿ, ತಮ್ಮ account ನಿಂದಲೇ ದುಡ್ಡು
ಕೊಡುತ್ತಿದ್ದೇವೆಂಬ ನಂಬಿಕೆಯಿಂದ ,ಕೊಡಬೇಕಲ್ಲಾ ಎಂದು
ಕೊಡುತ್ತಾ ದುಡ್ಡು ತೆಗೆದುಕೊಳ್ಳುವವರಲ್ಲೂ ಅದೇ ವಾತಾವರಣವನ್ನು ಬಿತ್ತುತ್ತಿದ್ದರು.
ಇಂದು ವಾತಾವರಣೆವೇ ಬೇರೆ ಎನಿಸಿತು
ಅವಳ ಕಣ್ಣೋಟ, ಮುಗುಳು ನಗು ಅಲ್ಲಿನ ವಾತಾವರಣವೇ ಬದಲಾಯಿಸಿತ್ತು, ಹೆಣ್ಣಿನ ಮುಗುಳು ನಗೆಗೆ ಎಷ್ಟು ಶಕ್ತಿಯಿದೆಯವೇ! ಅದಕ್ಕೆ ಹೇಳುವುದು ‘ಹೆಣ್ಣು ಮನೆಯ ಬೆಳಕು’
ಎಂದು ಸತ್ಯದ ಅರಿವು ನನಗಂತೂ ಅಯಿತು.
ನನ್ನ ಕೆಲಸವೂ ಅಷ್ಟೇ ಸಲೀಸಾಗಿ ಆಯಿತು.
ಆದರೂ ಬ್ಯಾಂಕಿನ ಜನ ‘commission’ ತೆಗೆದುಕೊಂಡು
ನಮ್ಮ ಸಮಯವನ್ನು ತಿನ್ನುತ್ತಾರೆ.
ಅವಳ ಕಣ್ಣೋಟಕ್ಕೆ, ಮುಗುಳು ನಗೆಗೆ ‘ಧನ್ಯವಾದಗಳು’

ನೆಮ್ಮದಿ ಕಾಣಿಸದ ಹಣ

ನೆಮ್ಮದಿ ಕೊಡದ ಆಸ್ತಿ ಏಕೆ?
ಎಂದಾದರೂ ಪ್ರಶ್ನಿಸಿಕೊಂಡಿದ್ದೀರ?
ಕೈಗೆಟುಕುವಷ್ಟೇ ನಿಮಗೆ ದಕ್ಕುವುದು
ಅತಿಯಾದದ್ದು ಕಸವೇ ಅಲ್ಲವೇ?


ನೂರು-ಸಾವಿರ ಜನರ ದಂಡು ಹೋಗುತಿದೆ
ಹಣದ ದಾರಿಯಲ್ಲಿ ಹಣದ ಹಿಂದೆ
ಹಣವೆಂಬ ಮೋಹಿನಿ ವೈಯ್ಯಾರದಿ ಬಳುಕುತ್ತಾ ಸಾಗಿದೆ
ಎಲ್ಲರನ್ನೂ ಮರುಳುಗೊಳಿಸಿ


ಮಾತಿಲ್ಲ, ಕತೆಯಿಲ್ಲ ಹಣವಿದ್ದರೆ ಹತ್ತಿರ
ನಿಮ್ಮ ನೀವು ಮರೆತು ದುಡಿದು ಕೂಡಿಡುವಿರಿ ಹಣ
ಚಂಚಲೆ ಹಣ ಇವತ್ತು ನಿಮ್ಮ ಹತ್ತಿರ ನಾಳೆ ಯಾರೋ!
ಗೊತ್ತಿದೆ ಜನಕ್ಕೆ ಹಣ ಇರುವುದಿಲ್ಲ ಹತ್ತಿರ ಆದರೂ ಬೇಕು


ಕೈಕೊಟ್ಟ ಪ್ರೇಯಸಿಯಂತೆ ಹಣ
ಕೈ ಜಾರಿ ಹೋದಾಗ ಆಗುವುದು ಚಿಂತೆ
ಮತ್ತೆ ಹುಡುಕಾಟ ಹಣವ ಪಡೆಯಲು
ಈ ಲೋಕಕ್ಕೆ ಹಣದ ಹುಚ್ಚು ಹಿಡಿದಿದೆ


ಏನೂ ಬೇಡ ಹಣವನ್ನು ಪಡೆದರಷ್ಟೇ ಸಾಕು
ಹಣ ಹಣವೆಂದು ಬಡಿದಾಡಿ ಸಾಯುವರು ಏಕೋ?
ಹಣದ ವ್ಯಾಮೋಹ ಯಾರನೂ ಬಿಟ್ಟಿಲ್ಲ
ಹಣ ಹಣವೆಂದು ಹೆಣವಾಗುವರೆಗೂ ಬಿಡರು

ಅವನ ಪತ್ರ

ಅವನ ಪತ್ರ ನನ್ನ ಮುಂದಿದೆ
ಹೃದಯ ಭಾರವಾಗಿದೆ ಮಾತು ಹೊರಡದೆ\

ಕಣ್ಣಲ್ಲಿ ನೀರು ಸುರಿಯುತಿದೆ
ಅವನ ಧೈರ್ಯವ ಮನದಲ್ಲೇ ನೆನೆಯುತಿದೆ\\

ನಾವು ಇಲ್ಲಿ ಹಬ್ಬ,ರಜೆಯೆಂದು ಕಾಲಕಳೆಯುತ್ತೇವೆ
ನಮ್ಮ ಸ್ವಾತಂತ್ರವೆಂದು ದೇಶವನ್ನು ಜರಿಯುತ್ತೇವೆ
ತೆರಿಗೆ ಕಟ್ಟದೆ ವಂಚಿಸುತ್ತೇವೆ
ದೇಶ ನಮಗೇನು ಮಾಡಿದೆಯೆಂದು ಪ್ರಶ್ನಿಸುತ್ತೇವೆ\\


ನೀನು ಅಲ್ಲಿ ಕೊರೆಯುವ ಚಳಿಯಲ್ಲಿ ಏಕಾಂಗಿ
ರಾತ್ರಿಯ ನಿದ್ದೆಯನ್ನೂ ಲೆಕ್ಕಿಸದೆ ಕಾಯುತ್ತಿದ್ದೀಯ
ಕಣ್ಣ ಮುಂದೆ ಬಿಳಿಯ ಹಿಮಾಲಯ ಪರ್ವತ
ಮನಸಿನಲ್ಲಿ ವಜ್ರದಂತ ಕಠಿಣ ದೇಶಪ್ರೇಮ\\


ಸದಾ ಮೆಟ್ಟಿನಿಲ್ಲು ಎಂದು ಸಾರುವ ಹಿಮಾಲಯ
ಧೈರ್ಯಕ್ಕೆ ಸವಾಲೆಸೆದು ನಮಗೆಲ್ಲರಿಗೂ
ಮಾಹಾಗೊಡೆಯಂತಿರುವ ನಮ್ಮ ಸೈನಿಕರು
ಆದರೆ ನಮಗೆ ಇರುವೆಯಷ್ಟೂ ದೇಶಪ್ರೇಮವಿಲ್ಲವೇಕೋ?\\


ಕೈಲಾಗದವರಿಗೆ ಸಹಾಯಮಾಡಲಾರದವರು
ದೇಶಕ್ಕಾಗಿ ಒಂದು ನಿಮಿಷವೂ ವ್ಯಯಮಾಡದವರು
ಸ್ವಾತಂತ್ರದ ಸ್ವೇಚ್ಛೆಯನ್ನು ಅನುಭವಿಸುತ್ತಿರುವ ಜಡರು
ನಿಮಗಾಗಿ ನಮ್ಮ ಹೃದಯವನ್ನು ಕಲ್ಲಾಗಿಸಿಕೊಂಡವರು\\


ಈಗಲೂ ಹೃದಯ ಜರ್ಝರಿತಗೊಳ್ಳುತ್ತೆ
ಯಾವುದೇ ಯೋಧ ದೇಶಕ್ಕಾಗಿ ಪ್ರಾಣತೆತ್ತರೆ
ನೋವಾಗುತ್ತೆ ನಾನು ಯಾವಾಗ ಹೀಗೆ ತ್ಯಾಗಮಾಡುವುದು
ಹೀನಾಯ ಸಾವುಬೇಡವೆನಗೆ ದೇಶಕ್ಕಾಗಿ ಈ ಪ್ರಾಣ ಮುಡಿಪು\\


ಅವನ ಪತ್ರ ಹೃದಯದಲ್ಲಿ ನಾಟ್ಟಿತ್ತು
ಪ್ರೀತಿ-ಪ್ರೇಮವೆಂದು ನಾವಿಲ್ಲಿ ಹೃದಯ ಶ್ಯೂನರಾಗುತ್ತಿದ್ದೇವೆ
ನಮಗಾಗಿ ಆ ಜೀವಗಳು ಹಗಲು-ರಾತ್ರಿಯೆನ್ನದೆ
ಶತೃಗಳ ಗುಂಡಿಗೆ ಎದೆಗೊಟ್ಟು ನಿಂತಿವೆ ಗಡಿಯಲ್ಲಿ\\


ಎಂಟುಗಂಟೆಯ ಕೆಲಸಕ್ಕೇ ನಮಗೆ ತಲೆನೋವು
ಇಪ್ಪತ್ನಾಕು ಗಂಟೆಯ ನಿನ್ನ ಕೆಲಸಕ್ಕೆ ಏನೆನ್ನಬೇಕು ಗೆಳೆಯ
ಕಿವಿಗೊಂದು ಮೊಬೈಲು,ಬೇಕು ಬೇಕಾದಾಗಲೆಲ್ಲಾ ಕಾಫಿ ನಮಗೆ
ಹೆಗಲಿಗೆ ರೈಫಲ್ಲು,ಬೇಕೆಂದಾಗ ಸಿಗದ ಕಾಫಿ ಎಂಥ ತ್ಯಾಗ ನಿನ್ನದು\\


ಗುಂಡಿನ ಸದ್ದೇ ನಿಮಗೆ ಸುಪ್ರಭಾತ
ಶತೃವಿನ ರಕ್ತವೇ ಮಹಾ ಮಜ್ಜನ
ಆರ್ಭಟವೇ ಗುಡುಗು ಮಿಂಚು
ಎದೆಯೊಳಗೆ ಗುಂಡುಹೊಕ್ಕಾಗಲೇ ವೀರ ಸ್ವರ್ಗ\\


ಪ್ರೀತಿಸಲು ಹೆಂಡತಿ, ಮಕ್ಕಳು, ತಂದೆ-ತಾಯಿ
ಎಲ್ಲರೂ ಇದ್ದರೂ ನೀನು ಅಕ್ಷರಸಹ ಸಂನ್ಯಾಸಿ
ವೀರ ಸಂನ್ಯಾಸಿ ದೇಶ ಸೇವಕ ನೀನು
ನಮಗೆ ದೇಶ ನೆನಪಿಗೆ ಬರುವುದೇ ಅಪರೂಪ\\


ನಮ್ಮ ಮೆರವಣಿಗೆ ಹೆಣಗಳ ನಡುವೆ ನಡೆಯುವುದು
ಮುಂದೆ ನಾವೂ ಹೆಣವಾಗುವರೇ ಅಲ್ಲವೇ!
ಆಕ್ರಂದನವೇ ನಮಗೆ ಇಲ್ಲಿ ಜೋಗುಳ
ದೇಶ ಮೆಟ್ಟುವ ಶತೃವ ಸಿಗಿಯುವ ತೋಳಗಳು\\


ನಿನ್ನ ಪತ್ರ ಎದುರಿಗಿದೆ
ಅಸಹಾಯಕನಾಗಿದ್ದೇನೆ ನಿನ್ನ ಬಿಂಬ ಮನದಲ್ಲಿದೆ
ನೀನು ಗೆಳೆಯನೆಂಬುದೇ ನನ್ನ ಹೆಗ್ಗಳಿಕೆ
ಇಂದೇ ಪ್ರತಿಜ್ಣೆ ಮಾಡಿದ್ದೇನೆ ನಿನಗಾಗಿಯೇ ನಾನಿದ್ದೇನೆ\\


ಹಬ್ಬದ ಸಡಗರ ಇಲ್ಲೆಲ್ಲಾ ತುಂಬಿದೆ
ನೀನು ಮಾತ್ರ ಅದೇ ವಸ್ತ್ರ,ಮಾಸಿದೆ
ನಿದ್ದೆ ಕಾಣದ ಕಣ್ಣುಗಳು
ನಿನಗಾಗಿ ಈ ಪತ್ರ ನನ್ನ ಹೃದಯದಿಂದ\\


ದೇವರ ಮನೆಯಲ್ಲಿ ದೇವರ ಚಿತ್ರವಿಲ್ಲ
ನಿನ್ನದೇ ಚಿತ್ರ ಮನೆಯಲ್ಲಿ, ಮನದಲ್ಲಿ
ನಿನ್ನದೇ ಹೆಸರಿನಲ್ಲಿ ಒಂದು ಆಶ್ರಮ
ಅಸಹಾಯಕರಿಗೆ ಒಂದು ನೆಲೆ ಕಲ್ಪಿಸಿದೆ\\


ನಿನ್ನ ಹುಟ್ಟು ಹಬ್ಬದ ದಿನ ನನಗೆ ಹಬ್ಬ
ರಾಜಕೀಯ ಪುಡಾರಿಗಳು ದೊಡ್ಡದಾಗಿ ಆಚರಿಸಿಕೊಳ್ಳುತ್ತಾರೆ
ದೇಶ ಸೇವೆಯ ಹೆಸರಿನಲ್ಲಿ ದೇಶ ಸೂರೆಗೈಯ್ಯುತ್ತಾರೆ
ಕೇಳುವವರಿಲ್ಲ ಅದೇ ಇಂದಿನ ಆದರ್ಶ\\


ನಿನ್ನ ತ್ಯಾಗ ಯಾರಿಗೂ ಬೇಡ ಇಲ್ಲಿ
ಗುಂಡಿನಿಂದ ತುಂಬಿದ ನಿನ್ನ ದೇಹ ಬಂದಾಗ
ನಾಟಕೀಯ ರಂಗವೇ ನೆರೆದಿತ್ತು
ಮರೆಯಾಗಿತ್ತು ದೇಶ ಪ್ರೇಮ ಚಿತೆಯ ಹೊಗೆಯಾರುವ ಮುನ್ನ\\

ಅಮ್ಮಾ ಕಾದಿಹೆನು

ಅಮ್ಮಾ ನಿನ್ನ ಕರುಣೆಗೆ ಕಾದಿಹೆನು
ಕರುಣದಿ ಬಂದು ಸಲಹಬಾರದೆ?
ಕಾಣುವೆ ಕಾಣುವೆನೆಂದು ಶಬರಿಯಂತೆ ಕಾದಿಹೆನು
ಕರುಣೆಯ ತೋರಬಾರದೆ?\\


ನೀನೇ ನನ್ನ ದೈವವೆಂದು
ಮನದಲಿ ನಿನ್ನ ಬಿಂಬವನೇ ನಿಲ್ಲಿಸಿಹೆನು
ನೀ ಬಾರದೆ, ಮನ ಕತ್ತಲಲ್ಲಿ ನಿಂದಿದೆ
ನಿನಗಾಗಿ ಕಾಯುತಿಹೆನು ಪೂಜೆಗೆ ಸಿದ್ದಗೊಳಿಸಿ\\


ನಿನ್ನ ಆಜ್ಣೆಗೆ ಕಾಯುತಿಹೆನು
ಸೇವೆಯ ಮಾಡುವ ತೆರದಲಿ
ಎಷ್ಟು ದಿವಸ ಕಾಯಬೇಕು ತಾಯೇ!
ವಯಸು ಮಾಗುತಿದೆ, ಶಕ್ತಿ ಕ್ಷೀಣಿಸುತಿದೆ\\


ನನ್ನ ಕೈಲಾಗುವ ಸೇವೆಗೆ ಸಿದ್ದನಿದ್ದೇನೆ
ಯೋಗ್ಯತೆಯಿಲ್ಲವೆಂದು ಕಾಲದೂಡುತ್ತಿರುವೆಯೋ?
ಮನವನ್ನು, ದೇಹವನ್ನು ಜಡತ್ವ ತಿನ್ನುವಮುನ್ನ
ನಿನಗರ್ಪಿಸುವೆ ಈ ಜೀವವ ಕಾಯದೆ ಮತ್ತೆ!\\


ನಿನ್ನ ಪ್ರೀತಿ,ಆಶೀರ್ವಾದ ಏಳಿಗೆಗೆ ಬೇಕಮ್ಮ
ನಿನಗಾಗಿಯೇ ಈ ಜೀವ ಕಾದಿದೆ
ನೀ ಕೊಟ್ಟ ಈ ಪ್ರಾಣ,ನಿನಗೇ ಮುಡಿಪಮ್ಮ
ಅಮ್ಮಾ ನನ್ನ ಬೆಳಕು ನೀನೇ, ಅಮ್ಮಾ ನಿನಗಾಗಿ ಕಾದಿಹೆನು\\

ಯಾರಲೂ ಹೇಳಿಲ್ಲ

ಯಾರಲೂ ಹೇಳಿಲ್ಲ ಮನದ ನೋವನು
ನೋವು ಯಾಕೋ ತಿಳಿದಿಲ್ಲ
ಪ್ರಶ್ನೆಗೆ ಉತ್ತರವಿನ್ನೂ ಸಿಕ್ಕಿಲ್ಲ\\


ಹಕ್ಕಿ ಹಾರುವಾಗ ಕುತೂಹಲ ಏನೋ!
ಹಾರಲಾರೆನೆಂದು ಮನಸಿನಲ್ಲಿ ಖಿನ್ನತೆ ಏಕೋ?
ನಾನು ಅವರಂತಲ್ಲವೆಂಬ ಬಿನ್ನತೆ ಏಕೋ?\\


ಹೃದಯದಲ್ಲಿ ನೋವಿದೆ ಏನೋ?
ಏನೆಂದು ತಿಳಿಯೆನು ಏಕೋ?
ಏನನ್ನೋ ಹುಡುಕುವ ತವಕವಿಂದೇಕೋ?\\


ನಾನು ಏನೆಂದು ಅರಿವಿಲ್ಲವೇಕೋ?
ಕಾಣದ ಶಕ್ತಿಯು ಸತಾಯಿಸುತಿದೇಕೋ?
ನಾನು ಕಾಣದ ಚೈತನ್ಯವೆಲ್ಲೋ?\\


ಮನಸು ದುಃಖಿಸುತಿದೆ ಕಾರಣ ತಿಳಿಯದೆ
ಉತ್ತರ ಸಿಗದೆ ದಾರಿ ಕಾಣದಾಗಿದೆ
ಪ್ರಶ್ನೆಗಳು ಕಾಡಿದೆ ನಿದ್ದೆಮಾಡದೆ\\


ಇಂದು ನಾಳೆ ವರುಷಗಳು ಉರುಳಿದೆ
ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ
ಮನಸಿನ ನೋವು ಉತ್ತರ ಕಾಣದೆ ಬತ್ತಿದೆ\\

ಬಯಕೆಯೆಂಬ ತೊರೆ

ನಾನಿಲ್ಲದೆ ಜಗವಿಲ್ಲ
ನಾನಿಲ್ಲದೆ ಚೈತನ್ಯವಿಲ್ಲ
ಎಲ್ಲರಲ್ಲೂ ಹರಿವೆ ಕಣ್ಣಿಗೆ ಕಾಣದೆ
ನನ್ನದೇ ಮಸಲತ್ತು ಯಾರನ್ನೂ ಬಿಡದೆ\\


ನನ್ನ ಅಣತಿಯಂತೆ ಎಲ್ಲವೂ
ನಾನೇ ಕಾರಣ ಎಲ್ಲಕೂ
ನಿದ್ದೆಯಲ್ಲಾ, ಎಚ್ಚರದಲ್ಲೂ
ಕಾಡುವೆ ಗುರಿಯ ತಲುಪುವರೆಗೂ\\


ಸಣ್ಣ ಸಣ್ಣ ತೊರೆಯು ನಾ
ಭೋರ್ಗರೆಯುವ ನದಿಯು ನಾ
ಕಣ್ಣ ಬೆಳಕು ನಾ
ನಡೆದಾಡಿಸುವ ಶಕ್ತಿಯು ನಾ\\


ನಾನಿಲ್ಲದೆ ನೀನಿಲ್ಲ
ನಿನ್ನೊಳು ಹರಿವ ಪ್ರೇಮಧಾರೆಯು ನಾ
ನಿನ್ನೊಳು ಹರಿವ ಕರುಣೆಯು ನಾ
ಜಂಗಮ ನಾನು\\


ಕಣ್ಣಲಿ ಹರಿಯುವ ನೀರು ನಾ
ನರನರಗಳಲಿ ಹರಿಯುವ ಚೈತನ್ಯ ನಾ
ನಿನ್ನಲಿ ಕಾಣುವ ಅರಿವು ನಾ
ನಿನ್ನಲಿರುವ ಆಶಾಕಿರಣ ನಾ\\

ಬತ್ತದ ತೊರೆಯು ನಾ
ಕಾಣದೆ ಹರಿಯುವ ಬಯಕೆಯು ನಾ
ಮೋಡವಾಗಿಸುವ ಶಕ್ತಿಯು ನಾ
ಮಳೆಯಾಗಿ ಹರಿಯುವ ತೊರೆಯು ನಾ\\


ಚಿಗುರೊಡೆಯುವ ಮೊಳಕೆಯು ನಾ
ಹೂವಾಗಿ ಹಣ್ಣಾಗುವ ಬಯಕೆಯು ನಾ
ಹೃದಯ ಹೃದಯಗಳಲಿ ಹರಿಯುವ ಪ್ರೇಮರಾಗವು ನಾ
ಕಾಲವ ಓಡಿಸುವ ಚಕ್ರವು ನಾ\\

ಪಾರ್ಕಿನ ಮರ

ನಾನು ಬೆಂಗಳೂರಿನ ಮೂಲೆಯೊಂದರ ಬಡಾವಣೆಯ
ಬಡ ಮರ, ನನ್ನ ಹೆಸರು ಅಶೋಕ
ಉದ್ದುದ್ದಕ್ಕೆ ಬೆಳೆದು ಮುಗಿಲಿಗೇರಿ ಮೋಡಗಳೊಡನೆ
ಸರಸವಾಡಿ ಮಳೆಯ ತರುವುದು ನನ್ನ ಕಾಯಕ
ಸದಾ ಜನರ ಸೇವಕ
ನಾನು ಹೆಚ್ಚಾಗಿ ಕಾಣಿಸಿಕೊಳ್ಳುವುದು ನಗರದ
ಸರ್ಕಾರಿ ಕಟ್ಟಡಗಳ ಬಳಿ ಇಲ್ಲವೇ ಇಂತಹ ಪಾರ್ಕಿನಲ್ಲಿ,
ಬಡಾವಣೆಯ ರಸ್ತೆ ಪಕ್ಕಗಳಲ್ಲಿ ಬೆಳೆಯುವುದಕ್ಕೂ ಜಾಗ
ಕೊಟ್ಟಿದ್ದಾರೆ ಬಿ.ಬಿ.ಎಂ.ಪಾಲಿಕೆಯವರು.
ನನ್ನದು ಅದೃಷ್ಟವೋ, ದುರಾದೃಷ್ಟವೋ ತಿಳಿಯೆ!
ನನಗೆ ವಯಸ್ಸು ಇಷ್ಟೇ ಎಂದು ಹೇಳಲು ಬರದು
ಏಕೆಂದರೆ ಬೆಳೆಸಿದವರೇ ಯಾವಾಗ ಕೊಡಲಿ ಪೆಟ್ಟು ನೀಡುತ್ತಾರೋ ತಿಳಿಯೆ? ಅಭಿವೃದ್ದಿಯ ನೆಪ ಸಾಕು ನನ್ನ ಕೊಲ್ಲಲು.
ನನಗೆ ಹಲವಾರು ಶತೃಗಳಿದ್ದಾರೆ,
ಕೆ.ಪಿ.ಟಿ.ಸಿ.ಎಲ್ ನವರು ನನಗೆ ಬಹು ತೊಂದರೆ ಕೊಡುತ್ತಾರೆ
ಎತ್ತರಕ್ಕೆ ಬೆಳೆದು ಮೋಡಗಳ ನಡುವೆ ಸರಸವಾಡುವದರೊಳಗೆ
ಬಂದು ನನ್ನನ್ನು ಕತ್ತರಿಸುತ್ತಾರೆ, ಅವರಿಂದ ನಾನಾಗಿಹೆನು ವಿರಹಿ.
ಈ ಪಾಲಿಕೆಯವರಿಗೆ ನಾನೇನು ಮಾಡಿರುವೆನೋ ತಿಳಿಯೆ ನನ್ನನ್ನು ವಿಧ್ಯುತ್ ತಂತಿಯ ಕೆಳಗೇ ಬೆಳೆಸುತ್ತಾರೆ. ಅವರ ಅವರ ದ್ವೇಷಕ್ಕೆ ಬಲಿಯಾಗುವವನು
ನಾನು ಹೇಗಿದೆ ವಿಚಿತ್ರ ನೋಡಿ!
ಮತ್ತೊಬ್ಬ ಶತೃವೆಂದರೆ ಬಡಾವಣೆಯ ಜನ ಹಾಗೂ ಬೀದಿ ನಾಯಿಗಳು
ನನ್ನ ಕಷ್ಟ ಯಾರಬಳಿ ಹೇಳಬೇಕು ನೀವೇ ಹೇಳಿ?
ಜನ ತಾವು ತಿಂದು ರಾತ್ರಿ ಕತ್ತಲಾದ ಮೇಲೆ ತಿಂದ ಕಸವೆಲ್ಲವನ್ನೂ ನನ್ನ ಮಡಿಲಿಗೆ ತಂದು ಸುರಿಯುತ್ತಾರೆ ಗಬ್ಬು ವಾಸನೆ ರಾತ್ರಿಯೆಲ್ಲಾ ನನಗೆ ನಿದ್ದೇ ಬರುವುದೇ ಇಲ್ಲ. ಇನ್ನೂ ಬೀದಿ ನಾಯಿಗಳ ಹಾವಳಿ ಅಪಾರ- ಅದೆಷ್ಟು ನಾಯಿಗಳು ಇಲ್ಲಿ ಜನರಿಗಿಂತ ನಾಯಿಗಳೇ ಹೆಚ್ಚು, ಪಾಲಿಕೆಯವರು ಕ್ಷಮಿಸಿ
ಇನ್ಫೋಸಿಸ್ ನವರು ನಿರ್ಮಲ ಬೆಂಗಳೂರು ಶೌಚಾಲಯವನ್ನು ಇಲ್ಲಿ ಕಟ್ಟಿಸಿಲ್ಲ ಹೀಗಾಗಿ ಜನ, ಬೀದಿ ನಾಯಿಗಳಿಗೆ ನನ್ನ ಬುಡವೇ ಶೌಚಾಲಯವಾಗಿದೆ.
ಇನ್ನು ಸರ್ಕಾರಿ ಕಟ್ಟಡಗಳ ಬಳಿಯ ನನ್ನ ಗೋಳು ಅಪಾರ, ಸ್ವಾಮಿ ಅಲ್ಲಿಗೆ ಬರುವರೆಲ್ಲಾ ಅಲ್ಲಿನ ಅಧಿಕಾರಿಗಳಿಗೆ ಬಯ್ಯಲಾಗದೆ, ಅವರಿಗೆ ಇವರು ಲಂಚಕೊಟ್ಟು ನನಗೆ ಉಗಿದು ಹೋಗುತ್ತಾರೆ ನೋಡಿ ಹೇಗಿದ್ದಾರೆ? ಈ ಜನ!. ಆ ಸರ್ಕಾರಿ ಜನಗಳನ್ನು, ರಾಜಕಾರಣಿಗಳನ್ನು ನೋಡಿದರೆ ನನಗೆ ಮಯ್ಯೆಲ್ಲಾ ಉರಿಯುತ್ತೆ, ಪಕ್ಕದಲ್ಲಿ ಬಂದು ನಿಂತಾಗ ಹಾಗೆ ಮುರಿದು ಅವರ ಮೇಲೆ ಬಿದ್ದು ಘಾಸಿಗೊಳಿಸ ಬೇಕೆಂಬ ಹಂಬಲವಿದೆ. ಈ ದೇಶಕ್ಕೆ ಎರಡು ಬಗೆಯುವುದನ್ನು ನೋಡಿದರೆ ಭಯೋತ್ಪಾದಕರಂತೆ ಸುಟ್ಟು ಬಿಡೋಣವೆನಿಸುತ್ತೆ- ಇಂತಹ ಜನರ ನಡುವೆ ನೀವೆಲ್ಲಾ ಅದು ಹೇಗೆ ಜೀವನ ಮಾಡುತ್ತಿರುವಿರೋ ನನಗಂತೂ ಆಶ್ಚರ್ಯವಾಗುತ್ತಿದೆ.
ಇನ್ನು ಪಾರ್ಕಿಗೆ ಬರುವ ಜನರ ಬಗ್ಗೆ ಹೇಳುತ್ತೇನೆ ಅವರ ಪರಿಸ್ಥಿತಿ ಕಂಡು ಮರುಗಿದ್ದೇನೆ, ಕಷ್ಟಕ್ಕೆ ಸ್ಪಂದಿಸುವಂತೆ ತಣ್ಣನೆ ಗಾಳಿ ಬೀಸಿ ಸಂತೈಸಿದ್ದೇನೆ.
ಯಾಂತ್ರಿಕ ಬಧುಕಿನ ಜನಗಳ ನೋಡಿ ಅಯ್ಯೋ ಎನಿಸುತ್ತದೆ. ದಡೂತಿ ದೇಹ,
ಮಧುಮೇಹ ರೋಗ ಅದ್ಯಾವ ರೋಗಗಳೊ ತಿಳಿಯೇ? ಬರುವ ಶೇ.೮೫ ರಷ್ಟು ಮಂದಿ ರೋಗಿಗಳೇ, ನಾನು ಹಾಗು ನನ್ನ ಇತರ ಮರಗಳು ಅವರನ್ನು ಸಾಧ್ಯವಾದಷ್ಟು ನೆಮ್ಮದಿ ಕೊಡುವ ಪ್ರಯತ್ನವನ್ನು ಮುಂದುವರಿಸಿದ್ದೇವೆ.
ಧ್ಯಾನ ಮಾಡುವವರು, ವೇಗವಾಗಿ ನಡೆದಾಡುವವರು, ಮನೆಯಲ್ಲಿ ನಿದ್ದೆ ಮಾಡಲಾಗದವರು, ಸೌಂದರ್ಯ ಪ್ರಜ್ನೆಯಿರುವವರು, ಹದಿಹರೆಯದ ಹಕ್ಕಿಗಳು,
ವಿಚಿತ್ರವಾಗಿ ನಗುವವರು. ಚಿತ್ರ ವಿಚಿತ್ರ ಕಪಿಚೇಷ್ಟೆ, ಅಂಗಚೇಷ್ಟೆ ಮಾಡುವವರು,
ಮಾತಾನಾಡುವುದಕ್ಕೇ ಬರುವವರು ಪಟ್ಟಿ ಇನ್ನೂ ಉದ್ದ ಬೆಳೆಯುತ್ತೆ.
ಎಲ್ಲರೂ ನಮ್ಮಿಂದ ದಿನಕ್ಕಾಗುವ ಹೊಸ ಚೈತನ್ಯವನ್ನು ಪಡೆದುಹೋಗುತ್ತಾರೆ.
ನಾವು ಚೈತನ್ಯದ ATM ಎಂದರೆ ತಪ್ಪಲ್ಲ. ನೀವೂ ಬನ್ನಿ, ನಿಮ್ಮ ಸ್ನೇಹಿತ,ಬಂಧು-ಬಾಂಧವರನ್ನೂ ಕರೆ ತನ್ನಿ ಚೈತನ್ಯದ ಕಲ್ಪವೃಕ್ಷವೆಂದರೆ ನಾವುಗಳೇ! ಬನ್ನಿ ಬನ್ನಿ....

ನಿರ್ಜೀವ ಜಂತು

"Life sucks"
ಜೀವ ಹೀರುತ್ತೆ-ಯಾಂತ್ರಿಕ ಬದುಕು
ಜನರ ಜೀವ ಹಿಂಡುತ್ತೆ,
ನಾವು ನಾವಾಗದೆ
ನಾವು ಬೇರೆಯಾಗಬೇಕೆಂಬ ಹಂಬಲ ಇದಕ್ಕೆ ಕಾರಣ
ನಮ್ಮದು, ನಮ್ಮವರು ಮರೆತು ಹೋದರೆ ಹೀಗಾಗುತ್ತೆ
ಬದಲಾಗಬೇಕು ನಿಜ!
ನಮ್ಮನ್ನು ಮರೆಯುವಂತಹ ಬದಲಾವಣೆಯಲ್ಲ
ನಾವು ಬಂದ ದಾರಿ ಮರೆಯುವುದಲ್ಲ
ನಮ್ಮ ಭಾಷೆ, ದೇಶ, ಸಂಬಂಧಗಳನ್ನು ತೊರೆಯುವುದಲ್ಲ
ನಾವು ನಾವಾಗಬೇಕು ಅನುಕರಣೆಯಿಂದಲ್ಲ
ನಾವು ಬದಲಾಗಬೇಕು ಸೃಜನಶೀಲತೆಯಲ್ಲಿ
ನಾವು ಬದಲಾಗಬೇಕು ಕ್ರೀಯಾಶೀಲತೆಯಲ್ಲಿ
ನಾವು ಬದಲಾಗಬೇಕು ಮಾನವೀಯತೆಯಲ್ಲಿ
ನಾವು ಬದಲಾಗಬೇಕು ದೇಶಕಟ್ಟುವಿಕೆಯಲ್ಲಿ
ದೇಶವೆಂದರೆ ಬರಿ ಕಲ್ಲು,ಮಣ್ಣು, ಬಂಡೆಯಲ್ಲ
ದೇಶವೆಂದರೆ ಜೀವಂತ ಬದುಕು
ಅದು ಜೀವ ರಾಶಿಯ ಬಲಿತೆಗೆಯುವ ಜ್ವಾಲೆಯಲ್ಲ
ಅದು ಬೆಳಕು ಕೊಟ್ಟು ದಾರಿ ತೋರುವ ದೀಪ
ಅದು ಜೀವವಿರುವ ಚೈತನ್ಯದ ಚಿಲುಮೆ
ಅದು ಜಡತ್ವದ ನಿರ್ಜೀವ ಜಂತುವಲ್ಲ

ಕಾಡಿದ ನೆನಪು

ನೀನಿರದ ಸಮಯದಲ್ಲಿ
ನಿನ್ನ ನೆನಪು ಕಾಡಿದೆ ಹೃದಯದಲ್ಲಿ
ಮನಸ್ಸಿಗೆ ಕಾಣದ ನೋವು ಆವರಿಸಿದೆ
ಹೃದಯ ಭಾರವಾಗಿ ನನ್ನ ಮಾತು ಕೇಳದಾಗಿದೆ\\


ಈ ಸಂಜೆ ನಿನ್ನ ನೆನೆಪು ಕಾಡಿತು
ಹಳೆಯ ಮಧುರ ಕ್ಷಣಗಳು ಕಣ್ಣ ಮುಂದೆ ಹಾಯಿತು
ಹಾಂ! ಎಂಥ ಮಧುರ ಎಂಥ ಮಧುರ
ಮತ್ತೆ ಮತ್ತೆ ಬರಲಿ ಎಂದು ಚಿತ್ತ ಬೇಡಿತು\\


ಆ ಸಂಜೆ ಏಕಾಂಗಿಯಾಗಿ ಚಿತ್ತ ನೆಟ್ಟಿತ್ತು ಆಕಾಶದತ್ತ
ಹಾದು ಹೋಗುವ ಪ್ರತಿ ಹಕ್ಕಿಯೂ ಪ್ರಶ್ನೆ ಹಾಕಿತು
ಗೆಳತಿ ಎಲ್ಲಿ? ಏಕೆ ಒಂಟಿಯಾಗಿಹೆ?
ಕಪ್ಪು ಮೋಡಗಳು ದುಃಖದ ಮಡುಗಟ್ಟಿ ಕಣ್ಣೀರು ಸುರಿಸಿತು\\


ನಿನ್ನ ಸ್ಮರಿಸಲು ಅದೆಷ್ಟು ಖುಷಿ ಮನಸಿಗೆ
ಆದರೂ ನಿನ್ನ ಚಿಂತೆ ಮನಸಿಗೆ ಕಾಡಿದೆ
ನೀನೆಂಬ ಚಿಂತೆ ಗುಣವಾಗದ ಖಾಯಿಲೆಯಾಗಿದೆ
ನೀನೇ ಚುಚ್ಚುಮದ್ದು ಜೀವನದ ಹಾದಿಗೆ\\

ಉಷಾ

ಇಲ್ಲಿ ನನ್ನದೊಂದು ಜೀವ ನರಳುತಿದೆ
ಬಿಡುಗಡೆಯ ಬಯಸಿ
ಸುಖ-ಸಂತೋಷ ಕಾಣದೆ
ಹೊರಟಿದೆ ಕಾಣದ ಸುಖವ ಅರಸಿ\\


ಹಲವು ವರುಷಗಳ ಹಿಂದೆ
ಹುಟ್ಟು ಬಯಸದೆ ಧರೆಗಿಳಿದು ಬಂದೆ
ತಾಯಿ-ತಂದೆಯರ ಸಂತೋಷಗೊಳಿಸಿ
ಕಾಡಿದ ಮನೋವ್ಯಥೆ ಅಭಿವೃದ್ದಿಯ ಕಡೆಗಣಿಸಿ\\


ನೋವೇ ಜೀವನದ ಪ್ರತಿ ಕ್ಷಣಗಳು
ನೋವನ್ನು ಅನುಭವಿಸಲೇ ಬಂದವಳು
ಯಾರನ್ನು ಜರಿದು ಫಲವೇನು?
ನಾನು ಪಡೆದ ಭಾಗ್ಯವಲ್ಲದೆ ಮತ್ತೇನು?\\


ರೋಗ-ರುಜಿನಗಳು ಬಂದು ಮುಗಿಬೀಳಲು
ಶಕ್ತಿ ಯುಕ್ತಿಗಳೆಲ್ಲಾ ಮೂಲೆ ಸೇರಲು
ಅನುಭವಿಸದೇ ವಿಧಿಯಿಲ್ಲ
ಅನಾಮಿಕಳಾಗಿ ನೊಂದೆನಲ್ಲಾ\\


ಜೀವದ ಗೆಳೆಯನಲ್ಲಿ ಗೆಲುವಿಲ್ಲ
ಕಟ್ಟಿಕೊಂಡ ಕರ್ಮಕ್ಕೆ ಅನುಭವಿಸಬೇಕಿದೆಲ್ಲಾ
ಕೂಡಿಟ್ಟ ಹಣವೆಲ್ಲಾ ಗುಡಿಸಿದ್ದಾಯಿತು
ನನ್ನೇ ನಾನು ನಕ್ಕೆ ಇಂದು ನಾನು ಮುಕ್ತ
ಆಯಿತು ಲೆಕ್ಕಾ ಚುಕ್ತ\\

ಹೃದಯ ಚಿತ್ರ

ಎಲ್ಲಿ ಬರೆಯಲಿ ಹೇಳು
ನನ್ನ ಹೃದಯದ ಮಾತನ್ನು
ನಿನ್ನ ಹೃದಯದ ಪುಟಗಳಲ್ಲೋ
ಆಕಾಶದ ಬೆಳ್ಳಿ ತಾರೆಯರ ನಡುವೆಯೋ\\


ಬರೆಯದಿರಲಾರೆ ಹೊಮ್ಮಿಬರುತ್ತಿದೆ ಕೇಳು
ಹೃದಯದ ಪಿಸುಮಾತು ಕೇಳಿಸಿಕೋ
ತಂಗಾಳಿಯ ಕಲರವದಲ್ಲಿ
ಹರಿಯುವ ನದಿಯ ಮಂಜುಳನಾದದಲ್ಲಿ
ಹಕ್ಕಿಗಳ ಚಿಲಿಪಿಲಿಗಾನದಲ್ಲಿ
ನನ್ನ ಒಲವ ಸುಧೆಯು ಹರಿಯುತಿದೆ ನೋಡು\\


ತೋರಿಸಿ ತೋರಿಸಿರೆಂದು ಕೇಳಬೇಡ
ಕಣ್ಣನೋಟದಲ್ಲೇ ಕಂಡುಕೊಳ್ಳಬೇಕು
ತುಟಿಯ ಮೇಲೆ ಹೊಮ್ಮುತಿದೆ
ಕೆನ್ನೆಯಲ್ಲಾ ಕೆಂಪಗಾಗಿದೆ
ಕಣ್ಣು ನಾಚುತಿದೆ
ಏಕೆಂದು ಹೃದಯವನ್ನೇ ಕೇಳು\\


ಹೃದಯ ಡಬ್ ಡಬ್ ಎಂದು ಮಿಡಿಯುತಿದೆ
ಅದು ಬರಿಯ ಶಬ್ದವಲ್ಲ ಕೇಳು ಗೆಳತಿ
ಅದು ನಿನ್ನಯ ಧ್ಯಾನ
ಎಂದು ನಿನ್ನ ಕಾಣುವೆಯೆಂಬ ಹಂಬಲದ ಬಡಿತವದು
ಬಂದು ಬಿಡು ಗೆಳತಿ ನಿನಗಾಗಿ ಕಾಯುತಿಹೆ
ಈ ಜೀವ ಹಿಡಿದುಕೊಂಡು ಕಾಯುತಿಹೆ ನನ್ನ ಹೃದಯದಲಿ
ನಿನ್ನದೆ ಚಿತ್ರವ ಬಿಡಿಸಿ\\

ಕೊಳಲ ದನಿ

ಕಾಡಿನ ಮೊಲೆ ಬೆಳೆದ ಬಿದಿರು ನಾನು
ಕಿಚ್ಚು ಹಚ್ಚುವವನೆಂದು ಜರೆಯುವರು ನನ್ನನು
ಬೇಸಿಗೆ ಬಂತೆಂದರೆ ಪ್ರಾಣಕ್ಕೆ ಸಂಚಕಾರ
ಚರ್ಮ ಸುಲಿದ ನೋವಿನ ಹಾಡು ಹಾಡುವ ಹಾಡುಗಾರ\\


ಯಾರ ದನಿಯೋ ನಾನು ತಿಳಿಯೆ
ನನ್ನ ಕೊರಳ ದನಿಯು ಯಾರೋ ಅರಿಯೆ
ಸುಯ್ ಗುಡುವ ಗಾಳಿಯಲ್ಲೂ ಗಾನಸುಧೆ
ಬಿಸಿಲಿನ ಬೇಗೆಯಲ್ಲಿ ಎಂದಾಗುವುದೋ ನನ್ನ ವಧೆ\\


ಅವನಾರೋ ಗೊಲ್ಲನಂತೆ
ನನ್ನ ಮಧುರದಿ ಬಳಸುವನಂತೆ
ಹಿತವಾದ ಗಾನ ತೇಲಿಬಂದು
ಎದೆಯಲ್ಲಿ ಪ್ರೀತಿ ಚಿಗುರಿಬಂತು\\


ಬಿದಿರು ಹೋಗಿ ಕೊಳಲಾದೆ
ಅವರ ಕೊರಳ ಕೊಳಲ ದನಿಯಾದೆ
ಹೃದಯ ಹಿಗ್ಗಿಸಿ, ಗಾನ ಹೊಮ್ಮಿಸಿ
ನನ್ನೆ ನಾನು ಹಾಡಿದಂತೆ ಅವರ ಹಾಡ ಹಾಡುವೆ\\

ಅವಳಿಲ್ಲದ ಮನೆ




ಎಲ್ಲಿ ನೋಡಿದರಲ್ಲಿ ಕಸವಿದೆ

ಧೂಳು-ಕಸ ಸ್ವಾಗತಕ್ಕೆ ನಿಂತಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ಪಾತ್ರೆ ಪಡಿಗಗಳು ನಿದ್ದೆ ಮಾಡುತ್ತಿವೆ

ಬಿಸಿಯಾಗದ ಒಲೆ ಕಣ್ಣೀರಿಡುತ್ತಿದೆ

ಅಕ್ಕಿಯ ಕಾಳುಗಳು ನಿನ್ನ ಬೆರಳುಗಳ ಸ್ಪರ್ಶಕ್ಕೆ ಹಾತೊರೆಯುತ್ತಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ದೇವರಿಲ್ಲದ ಮನೆ ಬೆಳಕಿಲ್ಲದ ಗೂಡಾಗಿದೆ

ಕಂಡಾಗಲೆಲ್ಲಾ ದೀಪ ಕೇಳುವುದು ನಿನ್ನನು

ಪುಸ್ತಕಗಳ ರಾಶಿ ರಾಶಿ ನಿನ್ನ ಅಂಜಿಕೆಯಿಲ್ಲದೆ ಹೊರಬಂದಿವೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ಲಂಗು ಲಗಾಮಿಲ್ಲದೆ ಬಟ್ಟೆಗಳು ಹರಡಿಕೊಂಡಿವೆ

ಕನ್ನಡಿಯಂತಿದ್ದ ನೆಲ ನಿನ್ನ ನೆನಪಲ್ಲಿ ಕಪ್ಪುಗಟ್ಟಿದೆ

ಕನ್ನಡಿ ನಿನ್ನ ಕಾಣದೆ ಮೌನವಾಗಿದೆ

ನೀನಿಲ್ಲದಾ ಮನೆ ಹೀಗಿದೆ ನೋಡು\\

ಆಸ್ಪತ್ರೆಯ ಗೋಡೆ

ಮುವತ್ತು ವರ್ಷದ ನಿರ್ಜೀವ ಗೋಡೆ ನಾನು

ಹುಟ್ಟು,ಸಾವು,ಬದುಕು,ನೋವು ಕಂಡವ ನಾನು\\

ವೇಳೆಯ ಪರಿವೇ ಇಲ್ಲ

ಕ್ಷಣಕ್ಕೊಂದು ಹುಟ್ಟು-ಸಾವು

ಸಂತೋಷದ ಗಳಿಗೆಗಳು ಕ್ಷಣಿಕ

ನೋವಿನ ಚೀರಾಟ ಇಲ್ಲಿ ಅಮರ\\

ಎಷ್ಟು ಜನ ಇಲ್ಲಿ ನಕ್ಕವರಿದ್ದಾರೆ?

ನಾ ಬಲ್ಲೆ -ನೆಮ್ಮದಿಯ ಉಸಿರು ಬಿಟ್ಟವರು ಕೆಲವರೇ!

ಹುಟ್ಟು-ಸಾವು ಎರಡರಲ್ಲೂ ನೋವಿದೆ

ಜೀವನ ಅಳುವಿನಿಂದ ಆರಂಭಗೊಂಡು ಅಳುವಿನಿಂದ ಕೊನೆಗೊಳುವುದಿದೆ\\

ನೋವು -ಅಳುವನ್ನು ಮೀರಿದ್ದು ಯಾವುದಿದೆ?

ತಪ್ಪು ಯಾರದ್ದೋ ಏನೋ?

ನಾ ಮಾತ್ರ ನೋವಿನ ಹೃದಯಕ್ಕೆ ಮಿಡಿಯಲಾರದೆ

ಕ್ಷಣ ಕ್ಷಣವೂ ನೋವಿನ ನಲಿವಿನಲ್ಲಿ ಪಕ್ವಗೊಳುತ್ತಿದ್ದೇನೆ \\

ರಾಧೇ-ಕೃಷ್ಣ

ಅವನೇ ಕೃಷ್ಣ!
ಅವಳೇ ರಾಧೇ!
ಪ್ರೀತಿ-ಪ್ರೇಮವೆಂದರೆ ಅವರೇನೇ\\

ಹಾರಿಬರುತಿರುವ ಕರಿ ಮೋಡವೇ ಕೃಷ್ಣ
ಕ್ಷಣ ಮಾತ್ರದಲಿ ಮಿಂಚಿ ಮರೆಯಾದ ಕಣ್ಣ ಮಿಂಚು ರಾಧೇ
ಧರೆಗಿಳಿಯುತಿರುವ ಹೊನ್ನ ಮಳೆ -ಪ್ರಣಯ\\

ಬಳುಕುತ್ತಾ ಹರಿದಾಡುವ ನದಿ ರಾಧೇ
ಕಡಲ ಕಡೆಗೆ ಓಡಿಸುವ ಚೈತನ್ಯ ಕೃಷ್ಣ
ಒಳುಮೆಯಿಂದಲಿ ಬಳುಕುತ ಕಡಲಸೇರುವುದು- ಮಿಲನ\\

ಪ್ರೇಮದ ಒಡಲು ಕಡಲು ರಾಧೇ
ಹನಿ-ಹನಿ ನೀರು ಅವಿಯಾಗಿಸುವ ಶಕ್ತಿ ಕೃಷ್ಣ
ಗಗನಕ್ಕೇರಿ ಮುಗಿಲುಗಳಾಗುವುದೇ-ಪ್ರೀತಿ\\

ಹೂ ಮನಸ್ಸು ರಾಧೇ
ಭಾವನೆಗಳ ತುಡಿತ ಕೃಷ್ಣ
ಮನಸು -ಭಾವನೆ ಕ್ರೀಯಾಶೀಲತೆಯೇ-ಅನುರಾಗ\\

ವರ್ಷದ ಕೊಳೆ

ಮನವನ್ನೊಮ್ಮೆ ಜಾಡಿಸಿಬಿಡು
ವರ್ಷ ಕುಳಿತ ಮೋಹ -ತಾಪವೆಲ್ಲಾ ತೊಳೆದುಬಿಡು
ಒಮ್ಮೆ ಯೋಚಿಸಿ ನೋಡು
ಜಾರಿಬಿದ್ದ ಕನಸಿನ ಆಗಸಕ್ಕೆ ವ್ಯಥೆಯ ಬಿಟ್ಟುಬಿಡು\\

ನೆನಪಿಡು ನಾಳೆ ನಮಗಾಗಿಯೇ ಇದೆ
ಮನಸ್ಸನ್ನು ಬೇಸರಿಸಬೇಡ-ಗೆಲುವು ನಮಗಾಗಿಯೇ ಕಾದಿದೆ
ಗೆಲುವು ನಿನ್ನದಾಗದಿದ್ದರೇನಂತೆ
ನೀನು ಏಕಾಂಗಿಯಲ್ಲ ಸೋಲಂತೂ ನಿನ್ನಜೊತೆಗೆ ಇದ್ದೇ ಇದೆ\\

ಗೆಲುವನೆಂದು ಪ್ರೀತಿಸಬೇಡ ತಿಳಿ
ಪ್ರೀತಿಸು ಸೋಲನ್ನು
ಏಕೆಂದರೆ ಗಾದೆಯಿದೆ
ಸೋಲೇ ಗೆಲುವಿನ ಮೆಟ್ಟಿಲು\\

ಕಹಿ ಆರೋಗ್ಯಕ್ಕೆ ಒಳ್ಳೆಯದಂತೆ
ತಿಳಿ ಸೋಲು ಬದುಕಿಗೆ ಒಳ್ಳೆಯದು
ನೆನೆಪಿರಲಿ ಕ್ಷಣಿಕ ಸಿಹಿಗಿಂತ
ದೀರ್ಘ ಕಹಿಯೇ ಮೇಲು \\





ನನ್ನವ ಚೆಲುವ

ಎಂಥ ಚೆಲುವ
ಎಂಥ ಚೆಲುವ
ನನ್ನ ಮನವ ಸೆಳೆದವ\\

ಎಂಥ ರೂಪ
ಎಂಥ ಭೂಪ
ನನ್ನ ಕನಸಲ್ಲಿ ಬರುವ\\

ಎಂಥ ಮಾತು
ಎಂಥ ಗತ್ತು
ನನ್ನ ಹೃದಯದಲ್ಲಿ ನಿಂದವ\\

ಎಂಥ ಬಣ್ಣ
ಎಂಥ ಕಣ್ಣು
ನನ್ನ ಬದುಕ ಬಾಂಧವ\\

ಯಾರು ಏನೇ ಹೇಳಿದರೂ
ಎಂದೆಂದಿಗೂ ಅವನು ನನ್ನವ
ಎಂದೆಂದಿಗೂ ಅವನು ನನ್ನವ\\

ವಿರಹ

ಹೊರಟು ನಿಂತೆ ಬರುವೆನೆಂದು
ಅವಳ ಕಣ್ಣಲ್ಲಿ ಕಂಬನಿ
ಮಾತು ಕ್ಷೀಣಿಸಿತ್ತು
ಮೌನ ಆವರಿಸಿತ್ತು
ಕೈ ಹಿಡಿದೆ
ತಲೆಯ ಸವರಿದೆ
ಒಂದು ಕ್ಷಣ ಕಣ್ಣು-ಕಣ್ಣು ಸೇರಿತು
"ಅಳ ಬಾರದು ಹುಚ್ಚು ಹುಡುಗಿ" ಎಂದಿತು ಹೃದಯ
ಮುಂದಿನ ವಾರ ಬರುವೆನೆಂದಿತು ಮನಸ್ಸು
ಕಣ್ಣಲ್ಲಿ ಕಂಬನಿ ಮರೆಯಾದರೂ
ಮಾತು ಹೊರಡದೆ
ಮೊಕ ಭಾಷೆ ಕೈ ಮೇಲಾಯಿತು
ಬಸ್ಸಿನಲ್ಲಿ ಕುಳಿತರೂ ಅವಳದೇ ಯೋಚನೆ
ಮೌನವಾದ ಹೃದಯ ಯಾಚನೆ
ಮನದಲೇನೋ ಕಾಣದ ಯಾತನೆ\\

ಕೆಣಕು

ಏನು ಹೇಳಲಿ ಹೇಳು?
ಸುಮ್ಮನೆ ನಗುವೆ ಏಕೆ?
ನಗುವು ಉತ್ತರವಲ್ಲ
ಕಣ್ಣು-ಕಣ್ಣು ಬಿಡುವುದು ತರವಲ್ಲ\\

ನಿನಗೇನೋ ಬೇಕು?
ಸುಮ್ಮನೇ ನನ್ನ ಪರೀಕ್ಷಿಸಬೇಕು
ನನ್ನ ತಳಮಳ ನಿನಗೆ ಖುಷಿ
ನಿನ್ನ ಮುಂದೆ ನಾನಾಗಬೇಕು ಮೌನ ಋಷಿ\\

ಮತ್ತೆ ಮತ್ತೆ ಕೆದಕುವುದು
ನನ್ನ ಬಾಯ ಬಿಡಿಸುವುದು
ನಿಜ ತಿಳಿದ ಮೇಲೆ ಹುಸಿ ಕೋಪ
ಲಲ್ಲೆಗೆರೆಯಬೇಕು ಇಳಿಯುವ ತನಕ ತಾಪ\\

ಕಾಡಿಸುವುದು ನಿನಗೆ ಗೊತ್ತು
ಕಾಯಿಸುವುದು ನನಗೆ ಗೊತ್ತು
ಕಾಡಿಸಿ,ಕಾಯಿಸುವ ಈ ಪರಿ
ಪ್ರೀತಿ-ಪ್ರಣಯ ಲೋಕದಲ್ಲಿ ಎಲ್ಲವೂ ಸರಿ\\

ಬಂಧನ

ಕನಸಿದೆ ಸೆಳೆತವಿದೆ
ಪ್ರೀತಿ ಹೃದಯಗಳೆರಡರ ಸೇತುವೆಯಾಗಿದೆ
ಯೌವ್ವನವಿದೆ,ಚಲುವಿದೆ
ಪ್ರಣಯ ಪಕ್ಷಿಗಳಾಗಲು ಮದುವೆಯಾಗಿದೆ\\

ಪಾರ್ಕು,ಬೀದಿ ಬೀದಿ ಸುತ್ತಿದ್ದಾಗಿದೆ
ಕಂಡ ಕಂಡದೆಲ್ಲವೂ ಕೈಗೆಟುಕಿಸಿಕೊಂಡದ್ದಾಗಿದೆ
ಕಣ್ಣು ಕಣ್ಣುಗಳಲ್ಲೇ ಮಾತನಾಡುತ್ತಾ,ಮಾತಿಗೆ ನಾಚುತ್ತಾ
ಮೈ ಕೈ ಸೋಕಿಸುತ್ತಾ ರೋಮಾಂಚನಗೊಂಡಿದ್ದಾಗಿದೆ\\

ಯಾರಾದರೂ ನೋಡಿಯಾರೇನೋ!
ಭಯದಲ್ಲಿ ಕಳ್ಳ ಬೆಕ್ಕಿನಂತೆ ಸವಿಯುಂಡಿದ್ದಾಗಿದೆ
ಲೋಕಕ್ಕೆಲ್ಲಾ ತಿಳಿದಿದೆ ನಡುವೆ ಏನೋ ನಡೆದಿದೆಯೆಂದು
ಆದರೂ ಭಿಗುಮಾನ ಏನೂ ಆಗಿಲ್ಲವೆಂಬ ತೋರಿಕೆ ಏಕೋ?\\

ಕಾಮದ ಸೊಕ್ಕು ಮುರಿದಿದ್ದಾಗಿದೆ
ಪ್ರೇಮಕ್ಕೆ ಮಣಿದಿದ್ದಾಗಿದೆ
ಪ್ರೀತಿಗೆ ಶರಣೆಂದು ಬಂದಿಯಾಗಿದ್ದಾಗಿದೆ
ವಾತ್ಸಲ್ಯದ ಚಿಗುರಿಗೆ ನೀರೆರೆದದ್ದಾಗಿದೆ\\

ಬಾಯಾರಿದೆ!

ರವಿ ಜಾರಿದ ಕೆಲಸವಾಯ್ತೆಂದು
ಲೋಕರೂಡಿ ಹಕ್ಕಿಗಳು ಗೂಡು ಸೇರಿದವು
ಕತ್ತಲಾವರಿಸಿ,ನೀರವತೆ ಪಸರಿಸಿ
ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ.....
ಹೊನ್ನ ಚಂದ್ರಿಕೆಗೆ ಈಗ ಬೆಳಕಾಯಿತು
ಹಾಲಿ ಚೆಲ್ಲಿ ತಾರಾಲೋಕದಲ್ಲಿ ಒಂದು ಪಯಣ
ಕಾಮದ ರಥವನೇರಿ ಹೊರಡುವನು
ರತಿಯ ಸೊಕ್ಕಡಗಿಸಲು
ಸ್ಪರ್ಶ, ಪಿಸುಮಾತು, ಬಾಹುಬಂದನ, ಚುಂಬನ, ಮರ್ಧನ, ಸಿಹಿಮುತ್ತು, ಬಿಸಿಯುಸಿರು....ಕಾಲ ಕಳೆಯಿತು
ಕಾಮದ ಹುಟ್ಟಡಗಿಸಿ ದಣಿವಾಯಿತು ದೇಹಕ್ಕೆ
ಕ್ಷಣಮಾತ್ರದಲ್ಲಿ ನಿದ್ದೆಗೆ ಪರವಶ
ಚಂದ್ರಿಕೆಯ ಪಯಣ ಮುಗಿದಿಲ್ಲ
ವಿರಹಿಗಳ ವಿಹ್ವಲ ಪ್ರೇಮಜ್ವರ
ಮಗ್ಗುಲು ಮಲಗಿದರೂ ಹತ್ತದ ನಿದ್ದೆ
ಕೊನೆಗೆ ಶಪಿಸಬೇಕು
" ಏಕೆ ಬರುವೆ ಚಂದ್ರಿಕೆ?
ಸುಡಬೇಡ ತೊಲಗು ಸಾಕಾಗಿದೆ ವಿರಹ,
ಇಲ್ಲಾ ಹೆಣ್ಣಾಗಿ ಬಾ ಮಧುಮಂಚಕ್ಕೆ
ಜೊನ್ನ ಜೇನಿಗೆ ಬಾಯಾರಿದೆ ತಣಿಸು ಬಾ"

ಅಮೃತ

ಏಕೆ ನಿಂತೆ ನಾನು?
ಯಾವ ಪ್ರೀತಿಯ ಹೊಂಗನಸ ಬಯಸಿದೆ ನಾನು?
ಕಣ್ಣು ತವಕಿಸುತ್ತಿದೆ
ಹೃದಯ ತಲ್ಲಣಗೊಂಡಿದೆ
ಈ ಹೃದಯದ ಲಹರಿಗೆ ಸ್ಪಂದಿಸುವ
ಹೆಣ್ಣು ಹೃದಯಕ್ಕೆ ಕಾಯುತಿಹೆನು\\

ಕೆಂಪು ಗುಲಾಬಿ ಕೈಯಲ್ಲಿ
ನಡೆಯದ ದಾರಿ ಯಾವುದೂ ಇಲ್ಲ ಇಲ್ಲಿ
ಕಂಡ ಕಂಡ ದೇವರಿಗೆ ಕಟ್ಟು ಬಿದ್ದು
ಮುಡಿಪು ಕಟ್ಟಿಟ್ಟು ಸಾಕಾಗಿದೆ ಜಿದ್ದಿಗೆ ಬಿದ್ದು
ಈ ಹುಡುಗಿ,ಆ ಹುಡುಗಿ ಬಂದವರೆಲ್ಲಾ ತಿರಸ್ಕರಿಸಿದವರೇ!
ಕಣ್ಣೆತ್ತಿ ನೋಡದೇ ಹೋದರಲ್ಲಾ
ಸಾಕಾಗಿದೆ ಈ ಜೀವನ ಜೊತೆಗಾತಿ ಇಲ್ಲದೆ\\

ಕಣ್ಣ ಮುಂದೆ ಎಷ್ಟೋ ಅಪ್ಸರೆಯರ ಚಿತ್ರ
ಜೊತೆಯಾಗಿ ಕೈಹಿಡಿಯುವರು ಯಾರೂ ಇಲ್ಲ
ಕಂಡ ಕನಸೆಲ್ಲವೂ ನೀರ ಮೇಲಿನ ಬರಹದಂತೆ
ಜಾರಿ ಹೋಗುತ್ತಿದೆ-ಕಳಚಿ ಹೋಗುತ್ತಿದೆ\\

ತವಕಿಸುವ ಹೃದಯಕ್ಕೆ ಕಾದು ಸಾಕಾಗಿದೆ
ಇಂದು ಬದುಕಿಹೆನು ನಾನು ನಾನಾಗಿಲ್ಲದೆ
ಪ್ರೀತಿಯ ಅಮೃತ ಹನಿಗಾಗಿ ಹೃದಯ ಬಾಯಾರಿದೆ\\

ನನ್ನ ಕವಿತೆಗಳು

ನನ್ನ ಕವಿತೆಗಳು
ನನ್ನ ಮನದ ಮಾತುಗಳು
ಯಾರಿಗೂ ಕಾಣದ
ಯಾರೊಂದಿಗೂ ಮಾತನಾಡದ
ನನ್ನೊಳು ಸದಾ ಹರಿವ ಚೈತನ್ಯ
ನನ್ನ ಶಕ್ತಿ
ನನ್ನ ದಾರಿ
ಮುನ್ನಡೆಸುವ ಸಾಧನ
ಯಾರು ಏನು ಹೇಳಿದರೇನು?
ನನ್ನ ಹಾಡು ನನ್ನದು!
ನನ್ನ ದಾರಿ ನನ್ನದು!

ಮುಂಜಾನೆ ರಾಗ

ಒಂದು ಮುಂಜಾನೆಯಲ್ಲಿ ರವಿ ಕಣ್ಣ ಬಿಡುವ ಮುನ್ನ
ಕೋಗಿಲೆ ಮರಿಯೊಂದು ಮಾವಿನ ಮರದಲ್ಲಿ ಕುಳಿತಿತ್ತು
ಮಧುರ ಕಂಠದಿ ಹಾಡ ಹಾಡುತಿತ್ತು
ಕುಹೂ....ಕುಹೂ... ಗಾನ ಮುಂಜಾನೆಯ ಆವರಿಸಿತ್ತು\\

ಆಹಾ! ಎಂಥ ಮಾಧುರತೆ
ನೀರವತೆಯ ಮರಗಳಲ್ಲಿ ಮಾಧುರ್ಯದ ಮರ್ಮರ
ಗಂಧರ್ವ ಗಾನದ ಲಹರಿಯೇ ಹೊಮ್ಮುತಿತ್ತು
ಬಾನೆತ್ತರಕೆ ಹಾರಿತು ಇಳೆಯ ಗಾನ\\

ಮೈಮನಗಳಲ್ಲಿ ಎಬ್ಬಿಸಿತು ಚೈತನ್ಯದ ಗಾನ
ತೇಲಿ ತೇಲಿ ದೇವಲೋಕದ ರವಿಯ ಸ್ತುತಿಸುತ್ತಿತ್ತು
ಕೋಗಿಲೆಯ ಗಾನಕೆ ಮನಸೋತ ಮುಗಿಲುಗಳು
ಭಾವುಕತೆಯ ಪನ್ನೀರ ಸುರಿಸುತ್ತಿತ್ತು\\

ಕಣ್ಣ ಹೊರಳಿಸಿ ರವಿಯು ಜಗದ ಕಡೆಗೆ ಬಣ್ಣವೆರಚಿ ಬಾನಿಗೆ
ಓಕುಳಿಯಾಟಕ್ಕೆ ಮುನ್ನುಡಿಯ ಬರೆಯುತ್ತಿತ್ತು
ಸುಯ್! ಗಾಳಿ ಆನಂದದಿ ನಲಿದಾಡಿ ಮರಗಿಡಗಂಟಿಗಳಲ್ಲಿ
ದೇವಲೋಕದ ಗಾನವ ಇಳೆಗೆ ಪರಿಚಯಿಸುತ್ತಿತ್ತು\\

ಕೊಳಲ ದನಿ

ಕಾಡಿನ ಮೊಲೆಯಲ್ಲಿ ಬೆಳೆದ ಬಿದಿರು ನಾನು
ಕಿಚ್ಚು ಹಚ್ಚುವವನೆಂದು ಜರೆಯುವರು ನನ್ನನ್ನು
ಬೇಸಿಗೆ ಬಂತೆಂದರೆ ಪ್ರಾಣಕ್ಕೇ ಸಂಚಕಾರ
ಚರ್ಮ ಸುಲಿದ ನೋವಿನ ಹಾಡು ಹಾಡುವ ಹಾಡುಗಾರ\\

ಯಾರ ದನಿಯೋ ನಾನು ತಿಳಿಯೆ?
ನನ್ನ ಕೊರಳ ದನಿಯು ಯಾರದೋ ಅರಿಯೆ?
ಸುಯ್! ಗುಡುವ ಗಾಳಿಯಲ್ಲೂ ಗಾನಸುಧೆ
ಬಿಸಿಲಿನ ಬೇಗೆಯಲ್ಲಿ ಎಂದಾಗುವುದೋ ನನ್ನ ವಧೆ\\

ಅವನಾರೋ ಗೊಲ್ಲನಂತೆ
ನನ್ನ ಮಧುರದಿ ಬಳಸುವನಂತೆ
ಹಿತವಾದ ಗಾನ ತೇಲಿಬಂದು
ಎದೆಯಲ್ಲಿ ಪ್ರೀತಿ ಚಿಗುರಿ ಬಂತು\\

ಬಿದಿರು ಹೋಗಿ ಕೊಳಲಾದೆ
ಅವರ ಕೊರಳ ಕೊಳಲ ದನಿಯಾದೆ
ಹೃದಯ ಹಿಗ್ಗಿಸಿ,ಗಾನ ಹೊಮ್ಮಿಸಿ
ನನ್ನೇ ನಾನು ಹಾಡಿದಂತೆ ಅವರ ಹಾಡ ಹಾಡುವೆ\\

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...