Saturday, December 9, 2017

ಸೂರ್ಯನುದಿಪುದ ನೋಡಲ್ಲಿ

ಸೂರ್ಯನುದಿಪುದ ನೋಡಲ್ಲಿ
ಕಣ್ಮುಚ್ಚಿ ಅಂತರಂಗದೊಳಗಿಳಿ
ಮನದ ಕಶ್ಮಲವನೆಲ್ಲಾ ತೊಳಿ
ನಿಯತಿಯಿಂದಲಿ ಕಾಯಕಕ್ಕಿಳಿ

ಅರಿವು ಮೂಡಿಸುವ  ಬೆಳಕದು
ಜಡತ್ವವ ಓಡಿಸುವ ಚೃೆತನ್ಯವದು
ಆಂತರ್ಯದೊಳು ನೆಲೆಗೊಳಿಸು
ಲೋಕದ ಜಂಜಡಗಳಿಂದ ಮುಕ್ತಿಗೊಳಿಸು

Friday, December 8, 2017

ಹಗಲುವೇಷ

ಎನ್ನ ಮನದ ದುಗುಡವ ನಿನಗೆ ಹೇಳಲೇ
ಏಕೆ ಹೀಗೆಲ್ಲಾ ಆಗುತಿದೆ ನಾನರಿಯೆ?
ಮನವು ಹೀಗೆಳೆಯುತಿದೆ ನನ್ನದಲ್ಲದ ತಪ್ಪಿಗೆ:

ಎಲ್ಲರೂ ನಗುವವರೆ ಒಳಗೊಳಗೆ
ಮುಖವು ಹರಳೆಣ್ಣೆ ಕುಡಿದವರ ಹಾಗೆ
ನನಗೆ ನನ್ನದೇ ಚಿಂತೆ ನನ್ನದೇನು ತಪ್ಪೆಂದು?:

ರಾಜಕೀಯ, ಮಸಲತ್ತು
ನೋವಾಗುವುದು ಮನಸ್ಸಿಗೆ
ಈ ನಾಟಕ,ಮುಖವಾಡ  ತಿಳಿದೂ
ಜೊತೆಜೊತೆಯಾಗೆ ನಡೆಯಬೇಕಿದೆ:

ಇಂದೋ,ನಾಳೆಯೋ
ಬೇಗನೆ ಮುಗಿಯಲಿ ಇವರ ನಾಟಕ
ಮೊದಲಿನಂತಾಗಲಿ ಅವರ ನಡುವಳಿಕೆ
ನಾನು ಅವರಿಗೆ ತೊಡರುಗಲ್ಲಲ್ಲ:

ನಿರ್ಮಲಚಿತ್ತ ನನ್ನದು,
ಹರಿವ ನದಿಯ ತೊರೆಯು ನಾನು
ನಾ ನಿಲ್ಲಲಾರೆ, 
ಗುರಿಯ ಹಾದಿಯ ಬಿಡಲಾರೆ:

ಗೆಲ್ಲಲೇಬೇಕು ಒಳ್ಳೆತನ

ಗೊತ್ತಾಗಬಾರದೆಂದು ಎಷ್ಟೇ 
ಮುಚ್ಚಿಟ್ಟರೂ ಅರ್ಥವಾಗುವುದೆನಗೆ
ಬದಲಾಗುವ ನಡುವಳಿಕೆಗಳು,
ಮಾತುಗಳು,ನಗುವಿಗಿಂತ ಬೇರೆ ಸಾಕ್ಷಿ ಬೇಕೆ?

ಒಳಗೊಳಗೆ ನಡೆಸುವ ಮಸಲತ್ತು
ಕಡೆಗಣಿಸುವ ಪರಿ ಅರಿಯಲಾರದ
ವಯಸ್ಸು ನನ್ನದಲ್ಲ:
ನಗೆಯು ಬರುವುದು ಇವರಾಡುವ ನಾಟಕಗಳಿಗೆ

ಎಷ್ಟುದಿನ ಈ ನಾಟಕ?
ಕೊನೆಯೆಂಬುದಿದೆ
ನಾನಾದರೋ ನಿರ್ಲಿಪ್ತ
ಇಂದಲ್ಲ ನಾಳೆ ಗೆಲ್ಲಲೇಬೇಕು ಒಳ್ಳೆತನ

Thursday, December 7, 2017

ಇದೆಂಥ ಬೆಳಗು ನೋಡು

ಇದೆಂಥ ಬೆಳಗು ನೋಡು

ಮಂಜಿನ ತೆರೆ ಮೇಲೇಳುತಿರೆ
ಮೆೃ-ಮನ ನವಿರೇಳುವುದು
ಪೂರ್ವದ ದಿಗಂತದ ಸೂರ್ಯೋದಯ
ರಕ್ತವರ್ಣ ಮನದಿ ಚೆೃತನ್ಯವ ಬಿತ್ತಿಹುದು

ಹೊಸ ಹೊಸ ಆಸೆಯ ಬಿತ್ತಿ
ತೆರೆಯ ಮರೆಯಲ್ಲಿ ಅವಿತಿಹ
ಉದಯ ರವಿ ಏನು ಅರಿಯದ
ಬಾಲಕನಂತೆ ಆಟವನ್ನಾಡುತಿಹನು

ಸೋಲಿನ ಭಾವದಲೇ  ಒದ್ದಾಡುವ ನಮಗೆ
ಸೂರ್ಯೋದಯ ಪ್ರತಿ ದಿನದ ಗೋಳಿನ  ವ್ಯಥೆ
ಏನಾದರೂ ಸಾಧಿಸೋ ಅವಕಾಶದ ಹೆದ್ದಾರಿಯಾಗಿರದೆ
ಕಾಲ ಕಳೆದು ನೋವ ಮೆಲುಕು ಹಾಕುವ ಇಳಿ ಸಂಜೆಯಾಗಿದೆ

ಒಂದಕ್ಕೂಂದು ತಾಳೆಯಾಗದ
ಬೇಡದ ಸಮಸ್ಯೆಗಳನ್ನೇ ಉಸಿರಾಗಿಸಿ
ಎಲ್ಲೋ ಏನನ್ನೋ ಹುಡುಕುತಾ
ನಮ್ಮ ನಾವೇ ಹಳಿಯುವ ಸಂತೆಯಾಗಿದೆ

ಇದೆಂಥ ಬೆಳಗು ನೋಡು
"ಸುಪ್ರಭಾತ" ಮನವ ಮುದಗೊಳಿಪ ಹಾಡು
"ಸ್ವರ್ಗ" ಅನುಭವಿಪಗೇ ಗೊತ್ತು
ಸಾವಿರ ಸಂದೇಶಗಳ  ಅರಿವ ಹೊತ್ತು

Wednesday, December 6, 2017

ಕಣ್ಣೀರೆ,ಓ ಕಣ್ಣೀರೆ

ಕಣ್ಣೀರೆ,ಓ ಕಣ್ಣೀರೆ ನೀ ಬಾರದಿರು
ಬಂದು ನೀ ಸಮಯ ಹಾಳುಮಾಡದಿರು
ನೋವಿಲ್ಲಿ ಸಹಜ, ಮರುಗದಿರು
ನೋವ ಕೊಡುವವರಿಲ್ಲಿ ಬಹಳ
ಕೊರಗದಿರು

ಕನಸೇ,ಓ ಕನಸೇ ಎಲ್ಲಿ ಹೋದೆ ನೀ
ಬಾ ಈ ಮನಕ್ಕೆ,ಮುದಗೊಳಿಸು ಬಾ
ನಿನಗಾಗಿ ಕಾಯುತ್ತಲೇ ರಾತ್ರಿ ಕಳೆದೆ
ನೀ ಬರುವ ದಾರಿ ಕಾಯುತ್ತಲೇ ಇರುವೆ

ಮನಸೇ,ಓ ಮನಸೇ ಎಲ್ಲಿರುವೆ
ದುಗುಡದಿ ನೊಂದು ಅವಿತಿರುವೆಯಾ
ನೋವು ಹಂಚುವವರೇ ಇಲ್ಲಿ ಹೆಚ್ಚು
ನಲುಗದಿರು ಪುಟಿದೇಳು ಆಗಸಕೆ

ಗೆಲುವೇ,ಓ ಗೆಲುವೇ ನೀ ಬಾರದಿರು
ಬಂದು ನೀ ಸಮಯ ಹಾಳುಮಾಡದಿರು
ನೀ ಬಂದು ನಿಂತಾಗ ತಲೆಯೇ ನಿಲ್ಲದು
ನಿನ್ನ ಅಮಲು ಹೆಚ್ಚಾಗಿ ಗುರಿಯ ದಾರಿ ತಪ್ಪುವುದು

Tuesday, December 5, 2017

ನಾನು ನಾನಾಗಿಯೇ..

ನಾನು ನಾನಾಗಿಯೇ ಇದ್ದೇನೆ
ಬದಲಾವಣೆಗೆ ಮನವ ತೆರೆದು:
ಹಾರಲಾಗದಿದ್ದರೂ
ಪುಟ್ಟ-ಪುಟ್ಟ ಹೆಜ್ಜೆಗಳನಂತೂ
ಇಡುತ್ತಿದ್ದೇನೆ ಬೇಸರಿಸದೆ:
ಮನದ ಕೊಳೆಯ ಜಾಡಿಸಿ
ತುಕ್ಕುಹಿಡಿಯದ ಹಾಗೆ ನೋಡಿಕೊಳ್ಳುತ್ತಿದ್ದೇನೆ:
ಹಲವು ಏರಿಳಿತಗಳಿದ್ದರೂ
ಸಮಸ್ಯೆಗಳೆದುರಿಸಲು ಸಿದ್ದವಾಗಿದ್ದೇನೆ:
ತನು-ಮನಗಳವನಿಗೆ ಅರ್ಪಿಸಿ
ಗುರಿಯ ಕಡೆಗೆ ಹೊರಳುತ್ತಿದ್ದೇನೆ:

ಗಹಗಹಸಿ ನಗುತಿದೆ

ಇದು ಹೊಸತಲ್ಲವೆನಗೆ
ಹೃದಯ ಮರುಗುವುದು
ಇವರ ಮನಸ್ಥಿತಿಯ ಕಂಡು
ಬಯಸುವುದಿಲ್ಲ ಪರರ ಏಳಿಗೆ
"ಸರಿ" ಕಾಣದಿವರ ಕಣ್ಣಿಗೆ
"ತಪ್ಪೇ" ಕಾಣುವುದೆಲ್ಲೆಡೆ
ಪರರ ಮಾತುಗಳಿಗೆ ಕಿವುಡಿವರ ಕಿವಿ
ಬಾಯಿಮುಚ್ಚಿ ಮೖೆಯೆಲ್ಲಾ ಕಿವಿಯಾಗಬೇಕಿವರ ಮಾತಿಗೆ
ಸವಿಯಾದ ಮಾತಿಲ್ಲ,
ಮೊನಚು ಮಾತಿನ ಚುಚ್ಚು ನುಡಿ
ಕುಟುಕುವುದಿವರ ಕಾಯಕ
ತಾವು ಮೇಲು, ನಾವು ಕೀಳು
ಬೇರೆಲ್ಲರಿವರ ಸೇವಕರು
ಕಾಲಲ್ಲಿ ತೋರುವುದ ಶಿರಸ್ತ್ರಾಣವಾಗಿಸಬೇಕು 
ಇವರಾಜ್ಞೆಗೆ ಕಾಯುವುದು
ಸದಾ" ಜಿ ಹುಜೂರ್" ಎನ್ನಬೇಕು
ಇವರ ಸಿಟ್ಟಿಗೆ ಬಲಿಯಾಗಬೇಕು
ಇವರ ಅಸಡ್ಡೆಗೆ,
ಕಾಲ ಕಸವಾಗಬೇಕು
ದೌರ್ಜನ್ಯವೇ ಉಸಿರು
ಅಂಧಕಾರ ಇವರಲ್ಲಿ ಸದಾ ಹಸಿರು
ತಿಮಿರವನೇ ನುಂಗಿಹರು
ಪರರಿಗೆ ಕತ್ತಲೇ ಆಗಿಹರು
ನೋವೆನಗೆ ಇವರ ಕಂಡು
ಕಸವಾಗುತಿಹರು ಕಾಲವುರುಳುತಿರಲು
ಕಾಲಚಕ್ರ ಉರುಳುತಿಹುದು
ಬೆಳಗು,ಸಂಜೆ,ರಾತ್ರಿ ಬದಲಾಗುತಿದೆ
ಬದಲಾಗದಿವರ ಅಜ್ಞಾನಕೆ
ಗಹಗಹಸಿ ನಗುತಿದೆ ಇವರ ಕಂಡು

ಸೂರ್ಯನುದಿಪುದ ನೋಡಲ್ಲಿ

ಸೂರ್ಯನುದಿಪುದ ನೋಡಲ್ಲಿ ಕಣ್ಮುಚ್ಚಿ ಅಂತರಂಗದೊಳಗಿಳಿ ಮನದ ಕಶ್ಮಲವನೆಲ್ಲಾ ತೊಳಿ ನಿಯತಿಯಿಂದಲಿ ಕಾಯಕಕ್ಕಿಳಿ ಅರಿವು ಮೂಡಿಸುವ  ಬೆಳಕದು ಜಡತ್ವವ ಓಡಿಸುವ ...